ವಿಜಯವಾಣಿ ಜನಮತ: ಅಖಂಡತೆ ಕಾಪಾಡೋಣ

241219 Ballari CAA Opposit Protest
Published on

ಇತ್ತಿಚೀನ ದಿನಗಳಲ್ಲಿ ಪೌರತ್ವ ಕಾಯ್ದೆಯಿಂದಾಗಿ ನಡೆಯುತ್ತಿರುವ ಹೋರಾಟ, ಪ್ರತಿಭಟನೆಗಳು, ದೇಶದ್ರೋಹಿ ಘೊಷಣೆಗಳು, ವಿಚಾರಗಳು, ಚರ್ಚೆಗಳು ಅಖಂಡ ಭಾರತೀಯ ಸಮಾಜದಲ್ಲಿ ಅನಾರೋಗ್ಯಕರ ವಾತಾವರಣವನ್ನು ನಿರ್ಮಾಣ ಮಾಡುತ್ತಿದೆ. ದೇಶದ ಅಖಂಡತೆಗೆ ಧಕ್ಕೆ ತರುತ್ತಿವೆ. ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಸಂವಿಧಾನದ ಅನುಗುಣವಾಗಿ ಭಾರತೀಯರಾದ ನಾವು ಹೇಗೆ ಜೀವಿಸುತ್ತಿದ್ದೇವೆ ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕಾಗಿದೆ. ‘ವಿಷಯವೊಂದು ಹೇಳಲ್ಪಟ್ಟಿದೆ ಎಂದಾಗಲೀ, ಕೇವಲ ಸಂಪ್ರದಾಯ ಅಥವಾ ಸ್ವಕಲ್ಪಿತ ಎಂದಾಗಲೀ ಆ ವಿಷಯವನ್ನು ನಂಬಬೇಡ. ಗುರುವು ಆದರಣೀಯ ಎಂಬ ಕಾರಣದಿಂದ ಆತನ ಹೇಳಿಕೆಯನ್ನು ನಂಬಬೇಡ, ಯಾವುದೇ ವಿಚಾರವನ್ನು ಸ್ವತಃ ಪರೀಕ್ಷಿಸಿ, ಪ್ರಮಾಣಿಸಿ, ವಿಶ್ಲೇಷಿಸಿದ ನಂತರ ಯಾವುದು ಸರ್ವಜನರ ಏಳ್ಗೆಗೆ, ಒಳತಿಗೆ, ಶ್ರೇಯಸ್ಸಿಗೆ ಕಾರಣೀಭೂತವಾಗುವುದೋ ಆ ತತ್ತ್ವದಲ್ಲಿ ನಂಬಿಕೆ ಇಡು. ಅದು ನಿನಗೆ ಅನುಸರಣೀಯ ಮಾರ್ಗದರ್ಶಿ’.

ತಪ್ತ ಜಗತ್ತಿಗೆ ಶಾಂತಿ ಸಂದೇಶ ಸಾರಿದ ಮಾನವತಾವಾದಿ ಬುದ್ಧನ ಈ ನುಡಿಗಳು ಇಂದು ನಮ್ಮ ದೇಶದಲ್ಲಿ ಧರ್ಮ, ಜಾತಿ, ಪಂಥ, ಜನಾಂಗಗಳ ಹಿನ್ನೆಲೆಯಲ್ಲಿ ಹಬ್ಬಿರುವ ಅಸಹಿಷ್ಣುತೆಯ ವಾತಾವರಣವನ್ನು ತಿಳಿಗೊಳಿಸಲು ಮಾರ್ಗದರ್ಶಿಯಾಗಿವೆ. ಯಾವುದೋ ಧರ್ಮ, ಜಾತಿ, ಜನಾಂಗದ ಕುರಿತು ಯಾರೋ ಒಬ್ಬ ಮಂತ್ರಿ, ಮುಖಂಡ, ವಿಚಾರವಾದಿ, ಸಾಹಿತಿ, ಸ್ವಾಮಿಗಳು ತಪ್ಪು ಮಾತನ್ನಾಡಿದ್ದಾರೆ, ಅವಮಾನ ಮಾಡಿದ್ದಾರೆ ಎಂಬ ಕಾರಣಕ್ಕೆ ಅದನ್ನು ನೆಪ ಮಾಡಿಕೊಂಡು ಪರಸ್ಪರರಲ್ಲಿ ದ್ವೇಷ ಹುಟ್ಟಿಸಿ ಸಂಘರ್ಷಗಳಿಗೆ, ಪ್ರತಿಭಟನೆಗಳಿಗೆ ಕಾರಣವಾಗಿ ರಕ್ತಪಾತಗಳಿಗೆ ನಾಂದಿಯಾಗಿ ಅಂತ್ಯವಾಗುತ್ತಿರುವುದು ವಿಷಾದಕರ ಸಂಗತಿ. ದೇಶದ ಏಕತೆ ಮತ್ತು ಪ್ರಜಾಸತ್ತಾತ್ಮಕ ವ್ಯವಸ್ಥೆ ವಿಶ್ವದಲ್ಲಿಯೇ ತನ್ನದೆ ಆದ ಖ್ಯಾತಿಯನ್ನು ಪಡೆದುಕೊಂಡಿದೆ. ವಿವಿಧ ಜಾತಿ, ಧರ್ಮ, ಜನಾಂಗ, ವಿವಿಧ ನಂಬಿಕೆ, ಭಾಷೆ, ಸಂಪ್ರದಾಯ ಮುಂತಾದವುಗಳನ್ನು ಒಳಗೊಂಡು ಸಹಸ್ರಾರು ವರ್ಷಗಳಿಂದ ಭಾರತದ ಜನಸಮುದಾಯ ಐಕ್ಯತೆ ಹಾಗೂ ಅಖಂಡತೆಯ ಸೂತ್ರದಲ್ಲಿ ಜೀವಿಸುತ್ತ ಬಂದಿರುವುದು ಮರೆಯಬಾರದು. ಧಾರ್ವಿುಕ ಸಹಿಷ್ಣುತೆ, ಕೋಮು ಸೌಹಾರ್ದತೆ, ಸಾಮಾಜಿಕ ಒಗ್ಗಟ್ಟು ನಮ್ಮ ಏಕತೆಯ ಮೂಲಾಧಾರವಾಗಿದೆ. ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಹಬ್ಬಿರುವ ಮತ್ತು ಹಬ್ಬುತ್ತಿರುವ ಅಸಹಿಷ್ಣುತೆ, ಕೋಮುವಾದ, ಮತಾಂಧತೆ, ಪ್ರಾಂತೀಯತೆ, ಭಯೋತ್ಪಾದನೆ ಮೊದಲಾದವು ರಾಷ್ಟ್ರೀಯ ಏಕತೆಗೆ ಭಂಗ ತರುತ್ತಿವೆ. ಮತ್ತು ಇವು ದೇಶದ ಅಭಿವೃದ್ಧಿಗೆ

ಮಾರಕವಾಗಿ ಪರಿಣಮಿಸುತ್ತಿವೆ. ಪರಸ್ಪರರಲ್ಲಿ ಭೇದ ಹುಟ್ಟಿಸುವ, ಐಕ್ಯತೆಯ ಸುಖಮಯ ಜೀವನ ಹಾಳು ಮಾಡುತ್ತಲಿರುವ ಇಂಥ ಘಟನೆಗಳಿಂದ ಸಮಾಜದಲ್ಲಿ ಅನಾರೋಗ್ಯಕರ ಹಾಗೂ ಭಯದ ವಾತಾವರಣ ನಿರ್ವಣವಾಗುತ್ತಿದೆ.

ಸಾಮಾಜಿಕ, ಧಾರ್ವಿುಕ, ನೈತಿಕ ಮೌಲ್ಯಗಳ ಅಧಃಪತನ, ದುರ್ಬೇಧನೆ ಮತ್ತು ಮತಾಂಧ ಪ್ರಣಾಳಿಕೆಗಳು ಜನಸಾಮಾನ್ಯರನ್ನು ದಾರಿ ತಪ್ಪಿಸುತ್ತಿವೆ. ಇಂಥವುಗಳಿಂದ ಸಾಮಾಜಿಕ ಉದ್ವಿಗ್ನತೆ ಹೆಚ್ಚುತ್ತದೆ. ಇಂಥ ಸಂದರ್ಭದಲ್ಲಿ ಪಾರಂಪರಿಕ ಸಹನಾಶೀಲ ಗುಣವನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ಶ್ರಮಿಸಬೇಕು. ಅದು ನಮ್ಮ ಸಂಸ್ಕೃತಿ ಮತ್ತು ನಾಗರಿಕತೆಯ ಆತ್ಮ. ಸಂವಿಧಾನದ ಮೂಲ ಆಶಯವೂ ಹೌದು. ಸಹನೆ, ಸಹಿಷ್ಣುತೆ ಹಾಗೂ ಸಹಬಾಳ್ವೆ ಮೂಲಕ ಭಾರತದ ಸಮಗ್ರತೆ ಹಾಗೂ ಸಾರ್ವಭೌಮತೆಯ ಸಂರಕ್ಷಣೆ ಸಾಧ್ಯ.

| ರಾಘವೇಂದ್ರ ಹಾರಣಗೇರಾ ಸಮಾಜಶಾಸ್ತ್ರ ಉಪನ್ಯಾಸಕರು, ಶಹಾಪುರ (ಯಾದಗಿರಿ ಜಿಲ್ಲೆ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net