ಭೂಮಿ ಮಾರಿದ ರೈತ ನಿವೃತ್ತಿ ಹೊಂದಿದಂತೆ...ಪಿಂಚಣಿ ನೀಡಿ

janamata
Published on

ಸರ್ಕಾರಿ ನೌಕರರಿಗೆ (ಇದರಲ್ಲಿ ಐಎಎಸ್​ಗಳೂ ಸೇರಿದ್ದಾರೆ) ನಿವೃತ್ತಿಯ ದಿನ ಬೇರೆ ಬೇರೆ ಹೆಸರಲ್ಲಿ ದೊಡ್ಡ ಮೊತ್ತ ಕೊಟ್ಟು ಜೀವನಪರ್ಯಂತ ಮತ್ತು ಅವರ ಕಾಲವಾದ ನಂತರ ಅವರ ಕುಟುಂಬವೂ ಹಣಕಾಸಿನ ತೊಂದರೆಗೆ ಸಿಲುಕದೆ ಮರ್ಯಾದೆಯಿಂದ ಬದುಕಬೇಕೆಂಬ ಉದ್ದೇಶದಿಂದ ಸರ್ಕಾರ ಪಿಂಚಣಿ ವ್ಯವಸ್ಥೆ ಮಾಡಿದೆ. ಸರ್ಕಾರ ತನ್ನ ನೌಕರರ ಯೋಗಕ್ಷೇಮದ ಬಗ್ಗೆ ತೋರುವ ಕಾಳಜಿ ಅಭಿನಂದನಾರ್ಹ. ಸುಶಿಕ್ಷಿತರೂ ವ್ಯವಹಾರ ಬಲ್ಲವರೂ ಆದ ನೌಕರರೂ ನಿವೃತ್ತಿ ಸಂದರ್ಭದಲ್ಲಿ ಒಂದೇ ಸಲ ಹಣ ಸಿಕ್ಕರೆ ಅಪವ್ಯಯ ಮಾಡಿ ಮುಂದೆ ಕಷ್ಟಕ್ಕೆ ಸಿಲುಕಬಹುದು ಎಂಬುದೇ ಪಿಂಚಣಿ ಉದ್ದೇಶ.

ರಾಜ್ಯದ ಅಭಿವೃದ್ಧಿಗೆ ಕೈಗಾರಿಕೆ ಸ್ಥಾಪನೆ ಅಗತ್ಯ. ವಿದ್ಯುತ್ ಉತ್ಪಾದನೆಗೂ ಅಣೆಕಟ್ಟು ಕಟ್ಟಬೇಕು. ಆಗ ಸಾವಿರಾರು ಎಕರೆ ಹೊಲ, ಗದ್ದೆ ಮುಳುಗಡೆ ಯಾಗಬೇಕು. ಇದಕ್ಕೆಲ್ಲ ರೈತರ ಉಳುವ ಭೂಮಿ ಬೇಕೆ ಬೇಕು. ಅದನ್ನು ವಶಪಡಿಸಿಕೊಂಡ ನಂತರ ರೈತ ನಿವೃತ್ತ ನೌಕರ ನಂತಾಗುತ್ತಾನೆ. ಆಗಿನ ದರದಲ್ಲಿ ಹೊಲಗದ್ದೆಯ ಹಣವನ್ನೇನೋ ಪಡೆಯುತ್ತಾನೆ. ನಂತರ ಪಿಂಚಣಿ ಇರುವುದಿಲ್ಲ.

ಬೆಲೆ ಏರಿಕೆಯ ನಾಗಾಲೋಟದಲ್ಲಿ ನಾಳೆ ಭೂಮಿಯ ಬೆಲೆ ಇಂದಿನ ಹತ್ತರಷ್ಟಾಗುವುದರಿಂದ ಪರಿಹಾರಕ್ಕೆ ಕಾಸಿನ ಬೆಲೆಯೂ ಇರುವುದಿಲ್ಲ. ಭೂಮಿಯನ್ನು ಉತ್ತು ಗೊತ್ತೇ ವಿನಃ ಅದನ್ನು ಸುರಕ್ಷಿತವಾಗಿ ಮುಂದಿನ ದಿನಗಳಲ್ಲಿ ಇಟ್ಟುಕೊಳ್ಳುವುದು ರೈತಾಪಿ ಜನಕ್ಕೆ ಗೊತ್ತಿಲ್ಲ. ಪರಿಹಾರದ ಹಣ ಬಂದರೂ ಅದರ ಸದ್ಬಳಕೆ ತಿಳಿಯದು. ಹಿಂದೆ ಕೃಷಿಕರಲ್ಲದವರು ಭೂಮಿ ಕೊಳ್ಳುತ್ತಿದ್ದಿಲ್ಲ. ಉದ್ಯಮಿಗಳು ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯಾಗಿ ಮಾರ್ಪಡಿಸಿಕೊಳ್ಳಬೇಕಾಗಿತ್ತು. ಆದರೆ ಇತ್ತೀಚಿನ ಕಾನೂನಿನ ಪ್ರಕಾರ ಕೃಷಿಕನಲ್ಲದವನೂ ಕೃಷಿ ಭೂಮಿ ಕೊಳ್ಳಲು ಆಸ್ಪದವಿದೆ. ಈಗ ಕೃಷಿ ಮಾಡುವಲ್ಲಿ ಬದಲಾವಣೆಯಾಗಿ ಎತ್ತು ಬಂಡಿ ನೇಗಿಲು ಹಳ್ಳಿಗಳಲ್ಲಿ ಕಡಿಮೆಯಾಗಿದೆ. ಟ್ರಾ್ಯಕ್ಟರ್, ಬಿತ್ತುವ ಯಂತ್ರ, ಉಳುವ ಯಂತ್ರ ಬಂದು ಶ್ರೀಮಂತ ರೈತರು ಮಾತ್ರ ಕೃಷಿ ಮಾಡಲು ಸಾಧ್ಯ ಎಂಬಂತಾಗಿದೆ. ಸಣ್ಣಪುಟ್ಟ ರೈತರು ವ್ಯವಸಾಯ ಮಾಡುವಂತೆಯೇ ಇಲ್ಲ. ಇದರಿಂದ ಭೂಮಿ ಮಾರಿಕೊಂಡರೆ ಮುಂದೆ ಅವರ ಗತಿ ಅಧೋಗತಿ. ಹೀಗಾಗಿ, ಭೂಮಿ ಮಾರಿ ಭೂರಹಿತನಾಗುವ ಚಿಕ್ಕ ರೈತನನ್ನು ‘ನಿವೃತ್ತಿ ಹೊಂದಿದ ರೈತ’ ಎಂದು ಪರಿಗಣಿಸಿ ಅವನಿಗೂ ಪಿಂಚಣಿ ಕೊಡುವ ವ್ಯವಸ್ಥೆಯಾದರೆ ನಿವೃತ್ತ ಸರ್ಕಾರಿ ನೌಕರನಂತೆ ಅವನೂ ಸುಖ ಸಂಸಾರ ನಡೆಸಲು ಸಾಧ್ಯ. ಇದರ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಬೇಕು. ರೈತ ಸಂಘಗಳೂ ಸಣ್ಣ ರೈತರ ಭದ್ರತೆಗಾಗಿ ಪಿಂಚಣಿ ಯೋಜನೆ ಜಾರಿಗೆ ತರುವತ್ತ ಸರ್ಕಾರಕ್ಕೆ ಒತ್ತಾಯ ಮಾಡಲಿ.

-ಸತ್ಯಬೋಧ ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net