ವಿಜಯವಾಣಿ ಜನಮತ: ತಪ್ಪಿತಸ್ಥರನ್ನು ಶಿಕ್ಷಿಸಿ

CAA Protest
Published on

ಗೃಹಮಂತ್ರಿಗಳಿಗೊಂದು ಬಹಿರಂಗಪತ್ರ,

ತಮಗೆ ಸಂಬಂಧಪಡದ ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ಧ ರಾಜ್ಯದ ಮುಸಲ್ಮಾನರು ಸಿಡಿದೆದ್ದಿದ್ದಾರೆ. ಅವರ ಬೆಂಬಲಕ್ಕೆ ಕೆಲ ರಾಜಕೀಯ ಪಕ್ಷಗಳು, ಹೆಸರಾಂತ(?) ವ್ಯಕ್ತಿಗಳು ನಿಂತು ಅನಾಚಾರ, ದುರಾಚಾರ, ಬೈಗುಳಕ್ಕೆ ಆಸ್ಪದ ಮಾಡಿಕೊಡುತ್ತಿರುವುದೂ ನಡೆಯುತ್ತಿದೆ. ಕೆಲ ವಿದ್ಯಾರ್ಥಿ(?)ಗಳೂ ಇದಕ್ಕೆ ತಮ್ಮ ಪಾಲಿನ ಪೆಟ್ರೋಲ್ ಸುರಿದು ಬೆಂಕಿ ಭುಗಿಲೇಳಿಸುವಂಥ ಕಾಯಕದಲ್ಲಿ ತೊಡಗಿದ್ದಾರೆ. ದೇಶದ್ರೋಹಿ ಹೇಳಿಕೆಗಳು, ಕೃತ್ಯಗಳು ರಾಜಾರೋಷವಾಗಿ ನಡೆಯುತ್ತಿವೆ. ಯಾರ ಮೇಲೆ ಏನು ಕ್ರಮ ಕೈಗೊಂಡಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಮೂಲ್ಯಾಳಂಥ ವಿದ್ಯಾರ್ಥಿಗಳಿಗೆ ಎಚ್.ಎಸ್.ದೊರೆಸ್ವಾಮಿ ಹಾಗೂ ಅವರ ಜತೆಯಿರುವ ಕಾಕ(ಕಾಂಗ್ರೆಸ್ ಕಮ್ಯುನಿಸ್ಟ)ಗಳೂ ಬೆಂಬಲ ನೀಡಿವೆ.

ದೊರೆಸ್ವಾಮಿ ಈ ಹಿಂದೆ ‘ಮೋದಿಯನ್ನು ರಾಜ್ಯಕ್ಕೆ ಬರಲು ಬಿಡಬಾರದು’ ಎಂದ ಪ್ರಕಾಶ್ ರಾಜ್​ರನ್ನು ಬೆಂಬಲಿಸಿದ್ದರು. ಅಷ್ಟೇ ಅಲ್ಲ, ಪ್ರಧಾನಿಯನ್ನು ಹೀಯಾಳಿಸುವ, ಪ್ರಧಾನಿಯ ಸಭೆಗಳಲ್ಲಿ ಕುರ್ಚಿಗಳನ್ನು ಹಾರಾಡಿಸಿ ಗಲಭೆ ಮಾಡಿ ಎಂದು ಕರ್ನಾಟಕಕ್ಕೆ ಬಂದಾಗ ಇಲ್ಲಿಯವರಿಗೆ ಅಪ್ಪಣೆ ಕೊಡಿಸಿದ ಜಿಗ್ನೇಶ್ ಮೇವಾನಿ ಮೇಲೆ, ಪೊಲೀಸರು ಹಾಕಿರುವ ಎಫ್​ಐಆರ್ ಗಳನ್ನು ಕೈಬಿಡಬೇಕೆಂದು ಸರ್ಕಾರಕ್ಕೆ ಅಹವಾಲು ಸಲ್ಲಿಸಿದ್ದರು. ಪಾಕಿಸ್ತಾನಕ್ಕೆ ಜೈಕಾರ ಹಾಕುವ ಅಮೂಲ್ಯ, ಭವ್ಯ, ಆರ್ದ್ರಾ ಮುಂತಾದವರನ್ನು ಮಮತೆಯ ಮೊಮ್ಮಕ್ಕಳೆಂದು ಪಕ್ಕದಲ್ಲಿ ನಿಲ್ಲಿಸಿಕೊಂಡು ಹೆಮ್ಮೆಯಿಂದ ಚಿತ್ರ ತೆಗೆಸಿಕೊಳ್ಳುತ್ತಾರೆ. ಈದ್ಗಾ ಮೈದಾನದಲ್ಲಿ ಸಿಎಎ ವಿರೋಧಿಗಳ ಜೊತೆ ಕುಳಿತು ಪ್ರಧಾನಿ, ಗೃಹಮಂತ್ರಿಗಳಿಗೆ ಬಾಯಿ ತುಂಬ ಬೈದು ಚಪ್ಪಾಳೆ ಗಿಟ್ಟಿಸುತ್ತಾರೆ.

‘ದೇಶದ್ರೋಹಿಗಳ ವಿರುದ್ಧ ನಿಷ್ಪಕ್ಷವಾಗಿ ಕ್ರಮ ಜರುಗಿಸುತ್ತೇನೆ’ ಎಂದು ಹೇಳಿದ್ದೀರಿ. ಆದರೆ, ಅಪ್ರಾಪ್ತರೆಂದು, ವಿದ್ಯಾರ್ಥಿಗಳೆಂದು, ಹುಡುಗಿಯರೆಂದು, ವಯಸ್ಸಾದವರೆಂದು, ಅಲ್ಪಸಂಖ್ಯಾತರೆಂದು ವಿನಾಯತಿ ಕೊಡುವುದೇ ನಮ್ಮ ದೇಶದ ನ್ಯಾಯ ವಿತರಣೆಯ ಹೆಗ್ಗುರುತು ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದ್ದರಿಂದ ಅಮೂಲ್ಯ ಹಿಂದೆ ಯಾರಿದ್ದಾರೆ? ತಿಳಿದಿದೆ. ನಿಜಾಮನ ಆಡಳಿತದಲ್ಲಿ ಅಮಾಯಕ ಹಿಂದೂಗಳ ಮೇಲೆ ಕತ್ತಿಮಸೆದು ಮಾಡಿದ್ದ ದಾಂಧಲೆ, ಅತ್ಯಾಚಾರ, ಅನಾಚಾರ, ಕೊಲೆ, ಸುಲಿಗೆ, ಲೂಟಿ ಮರೆತು ಬಿಟ್ಟಿದ್ದೀರಾ? ಉತ್ತರ ಕರ್ನಾಟಕಕ್ಕೆ ಸೇರಿದ ನೀವು ಈ ಎಲ್ಲರನ್ನೂ ವಯಸ್ಸು, ಪದವಿ, ಸ್ಥಾನಗಳನ್ನು ನೋಡದೆ ಹಿಡಿದು ಶಿಕ್ಷಿಸಬೇಕು.

ವಾರಿಸ್ ಪಠಾಣ ಹಿಂದೂಗಳನ್ನು ಇಲ್ಲವಾಗಿಸುವ ಮಾತನಾಡಿದ್ದಾನೆ. ಇವನ ಪಕ್ಷದವನೇ ಆದ ಓವೈಸಿ ಕೂಡ ಹಿಂದೆ ಇಂಥದೇ ಮಾತನ್ನಾಡಿದ್ದ. ಇವರು ಈ ಚಾಳಿಯನ್ನು ಬಿಡುವುದಿಲ. ಆದರೆ ತೆಲಂಗಾಣ ಮುಖ್ಯಮಂತ್ರಿ ಅವನನ್ನೇ ಮಂತ್ರಿಮಂಡಲಕ್ಕೆ ಸೇರಿಸಿಕೊಂಡಿದ್ದಾರೆ. ದೇಶದ್ರೋಹಕೃತ್ಯಗಳಲ್ಲಿ ನೇರ ಭಾಗಿಯಾಗುವವರು ಎಷ್ಟು ಕ್ರಿಮಿನಲ್​ಗಳೋ, ಅವರಿಗೆ ಕುಮ್ಮಕ್ಕು ಕೊಡುವವರೂ ಅಷ್ಟೇ ಕ್ರಿಮಿನಲ್​ಗಳು! ಇದು ನ್ಯಾಯದ ನಿಯಮ. ನ್ಯಾಯ, ನೀತಿ, ನಿಯಮಗಳನ್ನು ಪಾಲಿಸುವ ಸಾಮಾನ್ಯ ಹಿಂದೂಗಳು ಈ ಪೀಡೆಗಳ ಬೆದರಿಕೆಗಳನ್ನು ಕೇಳಿ ನೊಂದು-ಬೆಂದು ಹೋಗುತ್ತಿದ್ದಾರೆ. ಅವರಿಗೆ ಯಾವ ನ್ಯಾಯ ದೊರಕುತ್ತಿದೆ?

ತಪ್ಪಿತಸ್ಥರನ್ನು ಶಿಕ್ಷಿಸುವುದು ಸರ್ಕಾರಗಳ ಆದ್ಯಕರ್ತವ್ಯವೆಂದು ಯಾರೂ ಹೊಸದಾಗಿ ಹೇಳಬೇಕಾಗಿಲ್ಲ. ಆದ್ದರಿಂದ ಗೃಹಮಂತ್ರಿಗಳೆ, ನೊಂದವರಿಗೆ ಸಾಂತ್ವನ ನೀಡುವ ಬದ್ಧತೆಯನ್ನು ತಾವು ತೋರಬೇಕೆಂದು ಕಳಕಳಿಯ ಪ್ರಾರ್ಥನೆ. ಈ ಪ್ರಾರ್ಥನೆ ಮಾಡುತ್ತಿರುವವರು ಅಪಾರವಾಗಿ ನೊಂದ ಹಿಂದೂ ಜನತೆ.

| ಡಾ. ಎಸ್. ಆರ್. ಲೀಲಾ ವಿಧಾನ ಪರಿಷತ್ ಮಾಜಿ ಸದಸ್ಯರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net