

| ಜಯಪ್ರಕಾಶ ಪುತ್ತೂರು
ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ‘ಸಿಂಗಾಪುರ ಏರ್ ಷೋ’ (ಮಹಾ ವೈಮಾನಿಕ ಪ್ರದರ್ಶನ) ಈ ಬಾರಿ ಕರೊನಾ ವೈರಸ್ ಪಿಡುಗಿನ ನೆರಳಲ್ಲಿ ಫೆಬ್ರವರಿ 11ರಿಂದ 16ರವರೆಗೆ ಯಶಸ್ವಿಯಾಗಿಯೇ ನಡೆಯಿತು. ಇದನ್ನು ಫಲಪ್ರದವಾಗಿ ಏರ್ಪಡಿಸುವ ಮೂಲಕ ಸಿಂಗಾಪುರ ಮತ್ತೊಮ್ಮೆ ಜಗತ್ತಿನ ಗಮನ ಸೆಳೆದಿದೆ. ಸಣ್ಣ ರಾಷ್ಟ್ರವಾಗಿದ್ದರೂ, ತನ್ನ ನಾಗರಿಕ ನಡವಳಿಕೆ ಮತ್ತು ಶಿಸ್ತು ಪಾಲನೆಗೆ ಮಾದರಿಯಾಗಿದೆ. ಕರೊನಾ ವೈರಸ್ ದಾಳಿಯ ವಿರುದ್ಧವೂ ಎಚ್ಚರಿಕೆಯ ಅಭಿಯಾನ ನಡೆಸಿದ ರೀತಿಯನ್ನು ನಾನು ಓರ್ವ ಪ್ರತ್ಯಕ್ಷದರ್ಶಿಯಾಗಿ ಕಂಡು ಬೆರಗಾಗಿದ್ದೇನೆ. ಚೀನಾದೊಂದಿಗೆ ಕರುಳಬಳ್ಳಿಯ ಸಂಬಂಧ ಹೊಂದಿರುವ ಈ ದೇಶದಲ್ಲಿ ಪ್ರಸ್ತುತ ಎಲ್ಲ ರಾಷ್ಟ್ರದ ತಂತ್ರಜ್ಞಾನ ಮುತ್ಸದ್ದಿಗಳು, ತಂತ್ರಜ್ಞರುಗಳು ಬದುಕುತ್ತಿದ್ದರೂ ಚೀನಿಯರ ಪ್ರಾಬಲ್ಯ ಕಡಿಮೆ ಏನಿಲ್ಲ.
ಇಲ್ಲಿನ ಚೀನಾ ದೇಶದ ಸಂಜಾತರು ಹೊಸವರ್ಷದ ಆಚರಣೆಗಾಗಿ ಹೋದವರು ಹಿಂದಕ್ಕೆ ಬರುತ್ತಿದ್ದಂತೆಯೇ, ಕರೊನಾ ವೈರಸ್ ಲಕ್ಷಣಗಳು ಸಿಂಗಾಪುರದಲ್ಲಿ ಕಂಡುಬಂದವು. ಕೂಡಲೇ ಅದು ಎಚ್ಚರಿಕೆಯ ಕ್ರಮಗಳನ್ನು ಘೋಷಿಸಿತು. ‘ಸಿಂಗಾಪುರ ಏರ್ ಷೋ ನಿಗದಿಯಾದಂತೆ ನಡೆಯಲಿದೆ. ಆದರೆ, ಮುನ್ನೆಚ್ಚರಿಕೆಯ ಕಾರ್ಯತಂತ್ರಗಳಿಗೆ ಸಹಕರಿಸಿ’ ಎಂದು ಸರ್ಕಾರ ಮನವಿ ಮಾಡಿತು. ಮೊದಲಿಗೆ ವೀಸಾ ನೀಡಿಕೆಯ ಪ್ರಕ್ರಿಯೆಯನ್ನು ಎಚ್ಚರಿಕೆಯಿಂದ ಗಮನಿಸಿತು. ಒಂದು ತಿಂಗಳ ಅವಧಿ ಬಳಿಕ ‘ನಿಮ್ಮೆಲ್ಲ ಹಳೆಯ ಪಾಸ್ಪೋರ್ಟ್ ಗಳನ್ನು ಕೂಡಲೇ ಹಾಜರು ಪಡಿಸಿ’ ಎಂದು ಷರತ್ತು ವಿಧಿಸಿತು. ಎಲ್ಲ ಗಡಿಪ್ರದೇಶ, ಬಂದರು, ವಿಮಾನ, ರೈಲು ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಿ ಮಕ್ಕಳು ಶಾಲೆಗಳಲ್ಲಿ ಗುಂಪು ಸೇರುವುದನ್ನು ನಿಷೇಧಿಸಿತು. ಪರಿಣಾಮವಾಗಿ, ಬಲಾಢ್ಯ ರಾಷ್ಟ್ರಗಳು ಏರ್ ಷೋನಲ್ಲಿ ಪಾಲ್ಗೊಳ್ಳಲಿವೆ ಎಂಬುದನ್ನು ಖಾತ್ರಿ ಪಡಿಸಿ, ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿತು.
ಇದು ಯಶಸ್ವಿಯಾಗಿದ್ದಕ್ಕೆ ಮತ್ತು ಅಧಿಕೃತವಾಗಿ ಪಾಲ್ಗೊಂಡವರಿಗೆ ಇತ್ತೀಚೆಗೆ ‘ಥ್ಯಾಂಕ್ಸ್’ ಹೇಳಿದ ಸಿಂಗಾಪುರ ಸರ್ಕಾರ ಕೆಲ ಅಂಕಿಅಂಶಗಳನ್ನು ಬಿಡುಗಡೆ ಮಾಡಿತು. 110 ರಾಷ್ಟ್ರಗಳಿಂದ 3 ಸಾವಿರ ವಾಣಿಜ್ಯ ಸಂದರ್ಶಕರು ಮೊದಲ ದಿನವೇ ಏರ್ ಷೋನಲ್ಲಿ ಪಾಲ್ಗೊಂಡರು. ಸಾರ್ವಜನಿಕರಿಗೆ ಪ್ರವೇಶವಿದ್ದ ದಿನಗಳಲ್ಲಿ 20 ಸಾವಿರಕ್ಕೂ ಹೆಚ್ಚು ಸಂದರ್ಶಕರು ಭೇಟಿ ನೀಡಿದ್ದರು. ವೈಮಾನಿಕ ಕ್ಷೇತ್ರಕ್ಕೆ ಸಂಬಂಧಪಟ್ಟ 45 ಕಂಪನಿಗಳ 930 ಅಧಿಕೃತ ಪಾಲುದಾರರು, 70 ರಾಷ್ಟ್ರಗಳ ಸಾವಿರಾರು ಕಂಪನಿಗಳು ವಾಣಿಜ್ಯ ವಿಚಾರಗಳಿಗಾಗಿ ಭಾಗವಹಿಸಿದ್ದವು.
ಇಂಥ ಸಂಕಷ್ಟದಲ್ಲೂ, ಜೆ.ಟಿ.ಎನ್ ಇಂಟರ್ನ್ಯಾಷನಲ್ 500 ಮಿಲಿಯನ್ ಸಿಂಗಾಪುರ ಡಾಲರ್ನಷ್ಟು ವಹಿವಾಟು ನಡೆಸಿತು ಎಂಬುದು ಸಣ್ಣ ವಿಚಾರವಲ್ಲ. ಏರ್ ಷೋ ನಡೆಯುತ್ತಿರುವಾಗ ಸಿಂಗಾಪುರದ ಜನತೆ ಮತ್ತು ಅಧಿಕೃತ ಸಂದರ್ಶಕರಿಗೆ ನಿಯಮಿತ ಆರೋಗ್ಯ ತಪಾಸಣೆ ನಡೆಯಿತು. ಪ್ರತಿಯೊಂದು ಹೋಟೆಲ್, ರೆಸ್ಟೋರೆಂಟ್, ವಾಣಿಜ್ಯ ಕೇಂದ್ರ... ಹೀಗೆ ಎಲ್ಲಿ ಹತ್ತಕ್ಕಿಂತ ಹೆಚ್ಚು ಜನ ಸೇರುತ್ತಾರೋ ಅಲ್ಲಿ ಉಷ್ಣತೆ ತಪಾಸಣೆ ಹಾಗೂ ಸ್ಕ್ರೀನಿಂಗ್ ನಡೆಸಿತು. ಆರೋಗ್ಯ ತಪಾಸಣೆ ಕೇಂದ್ರಗಳು ಮೆಟ್ರೋ ರೈಲು, ಬಸ್ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸಿದವು. ವಿಮಾನ ನಿಲ್ದಾಣದಲ್ಲಿ ತೋರಿದಷ್ಟೇ ಎಚ್ಚರವನ್ನು ಈ ಎಲ್ಲ ಪ್ರದೇಶಗಳಲ್ಲೂ ವಹಿಸಲಾಗುತ್ತಿತ್ತು. ಏರ್ ಷೋ ನಡೆಯುವ ಸ್ಥಳದಲ್ಲಂತೂ ಮತ್ತಷ್ಟು ಬಿಗು. ಈ ಪರಿಸ್ಥಿತಿಯಲ್ಲೇ, ಹಲವಾರು ರಾಷ್ಟ್ರಗಳ ವಿಮಾನಗಳ ಪ್ರದರ್ಶನ ಗಮನ ಸೆಳೆದು, ನೆರೆದ ಸಾವಿರಾರು ಜನರನ್ನು ರೋಮಾಂಚನ ಗೊಳಿಸಿದವು. ಚೀನಾದ 15 ವಿಮಾನಗಳು ಮತ್ತು ಸಿಂಗಾಪುರದ ಪಾಲ್ಗೊಳ್ಳುವಿಕೆ ನಡೆದದ್ದು ವಿಶೇಷವೇ ಸರಿ. ರಸ್ತೆ, ಮಾಲ್, ಅಂಗಡಿ, ಹೋಟೆಲ್ಗಳಲ್ಲಿ ಜನಸಂದಣಿಯು, ಮಾಸ್ಕ್ಧಾರಣೆಯೊಂದಿಗೆ ಕಂಡುಬಂದರೂ ಹೆಚ್ಚೇನೂ ಭಯದ ವಾತಾವರಣ ಕಂಡುಬರಲಿಲ್ಲ. ಆದರೆ, ಫೆಬ್ರವರಿ 16ರ ನಂತರ ಚೀನಾ, ಸಿಂಗಾಪುರ ಸೇರಿ ಹಲವು ರಾಷ್ಟ್ರಗಳಲ್ಲಿ ಮತ್ತೆ ಕರೊನಾ ವೈರಸ್ ಭೀತಿ ಮರುಕಳಿಸಿದ್ದು ಸತ್ಯ. ಅದೇನಿದ್ದರೂ, ಬಂದ ಸಂದರ್ಭವನ್ನು ಧೃತಿಗೆಡದೆ ಎದುರಿಸುವ ವಿಶ್ವಾಸವನ್ನು ಸರ್ಕಾರ ಮತ್ತು ಜನರು ಒಟ್ಟಾಗಿ ತೋರುವುದು ಮುಖ್ಯ. ಈ ನಿಟ್ಟಿನಲ್ಲಿ ಸಿಂಗಾಪುರ ತೋರಿದ ಸ್ಪೂರ್ತಿ ಮಾದರಿಯೇ ಸರಿ.
(ಲೇಖಕರು ಹವ್ಯಾಸಿ ಬರಹಗಾರರು)