ಬೆಲೆ ಏರಿಕೆ ನಿಯಂತ್ರಿಸಿ

Janamata
Published on

ಅಕಾಲಿಕ ಮಳೆಯಿಂದಾಗಿ ದೇಶದ ಅನೇಕ ಕಡೆ ಸರಿಯಾಗಿ ಫಸಲು ಬರದೆ ಇರುವ ಕಾರಣ ಉಳ್ಳಾಗಡ್ಡಿ, ಬೆಳ್ಳುಳ್ಳಿ, ತರಕಾರಿ, ಬೇಳೆಕಾಳುಗಳು, ಖಾದ್ಯತೈಲ ಮತ್ತು ಪೆಟ್ರೋಲ್, ಡೀಸೆಲ್ ಬೆಲೆ ಗಗನಮುಖಿಯಾಗುತ್ತಿರುವುದು ಜನಸಾಮಾನ್ಯರ ಜೇಬಿಗೆ ಭಾರವಾಗಿ ಗೌರವಯುತ ದೈನಂದಿನ ಬದುಕಿಗಾಗಿ ಪರದಾಡುವುದೇ ಶ್ರೀಸಾಮಾನ್ಯ ನಾಗರಿಕರ ಹಣೆಬರಹ ಎನ್ನುವಂತಾಗಿದೆ.

ಸದ್ಯ ಏರುತ್ತಿರುವ ದಿನಸಿ ವಸ್ತುಗಳ ಬೆಲೆಯನ್ನು ತಡೆಗಟ್ಟಲು ಎಲ್ಲ ಅವಶ್ಯ ಕ್ರಮಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾಲಕಾಲಕ್ಕೆ ಕೈಗೊಳ್ಳಬೇಕು. ಧಾನ್ಯಗಳ ಸೂಕ್ತಮಟ್ಟದ ಸಂಗ್ರಹ, ವಿದೇಶದಿಂದ ಆಮದು, ಅಕಾಲಿಕ ಮಳೆಯ ಮುನ್ಸೂಚನೆ ಅಥವಾ ತಡೆಗಟ್ಟುವ ದಿಶೆಯಲ್ಲಿ ವೈಜ್ಞಾನಿಕ ಪ್ರಯತ್ನಗಳು, ಬೇಳೆಕಾಳುಗಳ ಅಕ್ರಮ ದಾಸ್ತಾನು ತಡೆಗಟ್ಟಲು ಸೂಕ್ತ ಕ್ರಮ ಜರುಗಿಸುವುದು ಮುಂತಾದ ಅವಶ್ಯಕ ಹೆಜ್ಜೆಗಳನ್ನು ಇರಿಸುವ ಮೂಲಕ ಜನತೆಗೆ ಕಠಿಣ ಪ್ರಸಂಗಗಳಲ್ಲೂ ಬೆಲೆಏರಿಕೆಯ ಬಿಸಿ ತಪ್ಪಿಸಿದರೆ ಅದೇ ಮಹಾಭಾಗ್ಯ. ಪೆಟ್ರೋಲ್, ಡೀಸೆಲ್ ಬೆಲೆಏರಿಕೆ ಎದುರಿಸಲು ನಾವು ಭವಿಷ್ಯದಲ್ಲಿ ಪೆಟ್ರೋಲ್, ಡೀಸೆಲಿನ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಂಡು ನವೀಕರಿಸಬಹುದಾದಂಥ ಇಂಧನ ಬಳಕೆಗೆ ಒತ್ತು ನೀಡಬೇಕು.

| ಉದಯ ಯಂಡಿಗೇರಿ ಧಾರವಾಡ

ಯುಪಿಎಸ್​ಸಿ ಪರೀಕ್ಷೆಗಳೆಂಬ ಮಾಯಾಜಿಂಕೆ

ಕೇಂದ್ರ ಸರ್ಕಾರ ಪ್ರತಿ ವರ್ಷ ಯುಪಿಎಸ್​ಸಿ ಪರೀಕ್ಷೆಗಳ ಮೂಲಕ ಐಎಎಸ್, ಐಪಿಎಸ್ ಮೊದಲಾದ ಹುದ್ದೆಗಳನ್ನು ತುಂಬಿಕೊಳ್ಳುವುದು ಸರಿಯಷ್ಟೆ. ಈ ಪರೀಕ್ಷೆಗಳು ಪ್ರಾಥಮಿಕ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನಗಳೆಂಬ ಮೂರು ಹಂತಗಳಲ್ಲಿ ನಡೆಯುತ್ತವೆ. ಮುಖ್ಯ ಪರೀಕ್ಷೆಗಳನ್ನು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಮಾನ್ಯ ಮಾಡಿರುವ ಕನ್ನಡವೂ ಸೇರಿ ಉಳಿದ ಭಾಷೆಗಳಲ್ಲಿಯೂ ಬರೆಯಬಹುದು. ಆದರೆ ಪ್ರಾಥಮಿಕ ಪರೀಕ್ಷೆಗಳು ಇಂಗ್ಲಿಷ್ ಜೊತೆಗೆ ಹಿಂದಿ ಮಾಧ್ಯಮದಲ್ಲಷ್ಟೇ ನಡೆಯುತ್ತವೆ. ‘ಪ್ರಾಥಮಿಕ ಪರೀಕ್ಷೆ ಕೊಡುವುದಿಲ್ಲ. ಮುಖ್ಯ ಪರೀಕ್ಷೆಯನ್ನು ಕೊಡುತ್ತೇವೆ’-ಈ ಬಗೆಯ ಕೇಂದ್ರ ಸರ್ಕಾರದ ಕಣ್ಕಟ್ಟು ವಿದ್ಯೆಯಿಂದ ಯುಪಿಎಸ್​ಸಿ ಕನ್ನಡ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ರಾಜ್ಯ ಸರ್ಕಾರ ನಡೆಸುವ ಕೆಎಎಸ್ ಪ್ರಾಥಮಿಕ ಪರೀಕ್ಷೆಗಳು ಹಾಗೂ ಕೇಂದ್ರ ಸರ್ಕಾರ ನಡೆಸುವ ಐಎಎಸ್, ಐಪಿಎಸ್ ಮೊದಲಾದ ಯುಪಿಎಸ್​ಸಿ ಪ್ರಾಥಮಿಕ ಪರೀಕ್ಷೆಗಳ ಪಠ್ಯಕ್ರಮ ಬಹುತೇಕ ಒಂದೇ ಆಗಿರುತ್ತದೆ. ಹಿಂದಿ ಮಾತೃಭಾಷಿಕರು ಈ ಪರೀಕ್ಷೆಗಳನ್ನು ತಮ್ಮ ತಾಯ್ನುಡಿಯಲ್ಲಿಯೇ ತೆಗೆದುಕೊಳ್ಳಲು ಅವಕಾಶವಿದೆ. ಆದರೆ ಹಿಂದಿಯೇತರ ಭಾರತೀಯ ಭಾಷಿಕರಿಗೆ ಈ ಅನುಕೂಲ ಇಲ್ಲ. ಈ ಕೊರತೆಯನ್ನು ನೀಗಿಸಲು ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು.

| ಗಿರೀಶ್ ಮತ್ತೇರ ಯರಗಟ್ಟಿಹಳ್ಳಿ

ಬೇಡಿಕೆ ಈಡೇರಿಸಿ

ರಾಜ್ಯದ ಆರೋಗ್ಯ ಸೇವೆಯಲ್ಲಿ ಹಗಲಿರುಳು ಸೇವೆಸಲ್ಲಿಸುತ್ತಿರುವ ಆಶಾ ಕಾರ್ಯಕರ್ತರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು. ಹಲವು ತಿಂಗಳುಗಳಿಂದ ವೇತನ ಪಾವತಿಯಾಗಿಲ್ಲ. ಹೀಗಾದರೆ ಅವರು ಕುಟುಂಬ ನಿರ್ವಹಣೆ ಮಾಡುವುದಾದರೂ ಹೇಗೆ? ಮೊದಲೇ ಕಡಿಮೆ ವೇತನ, ಆದರೂ ಕಾರ್ಯ ನಿರ್ವಹಿಸುತ್ತಿದ್ದಾರೆ. ವೇತನ ಕೊಡದೆ ಇದ್ದರೆ ಹೇಗೆ? ವೇತನ ಪಡೆಯಬೇಕಾದರೆ ಹೋರಾಟಕ್ಕೆ ಇಳಿಯುವಂಥ ವ್ಯವಸ್ಥೆ ನಿರ್ವಣವಾಗಿದೆ. ಇದು ನಿಜಕ್ಕೂ ದುರ್ದೈವದ ಸಂಗತಿ. ಕನಿಷ್ಠ ವೇತನ ಸೇರಿ ಅವರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು.

| ಶೇಖರಾಜ ರಾಮಪ್ಪ ಧುತ್ತರಗಿ ಸೂಳೇಭಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net