

ಇನ್ನು ನಮ್ಮ ತಲೆಮಾರಿಗೇ ಬರುವುದಾದರೆ ಮೂರು ದಶಕಗಳ ಹಿಂದೆ ಘಟಿಸಿದ ಶೀತಲ ಸಮರದ ಅಂತ್ಯ ಒಂದು ಮಹತ್ತರ ಸಂಕ್ರಮಣ ಕಾಲ. ಜಗತ್ತನ್ನು ಒಂದಕ್ಕಿಂತ ಹೆಚ್ಚು ಬಾರಿ ನಾಶಮಾಡಬಲ್ಲ ಮಾರಕಾಸ್ತ್ರಗಳನ್ನು ಪೇರಿಸಿಟ್ಟುಕೊಂಡ ಎರಡು ಸೇನಾಕೂಟಗಳು ಇಡೀ ಮಾನವಕುಲವನ್ನು ಪೂರ್ಣ ವಿನಾಶದ ಅಂಚಿನಲ್ಲಿ ನಿಲ್ಲಿಸಿಬಿಟ್ಟಿದ್ದವು. ನಾಳೆಯೇ ಇಲ್ಲವೇನೋ ಎನ್ನುವ ಭೀತಿಯಲ್ಲಿ ನಲವತ್ತು ವರ್ಷಗಳನ್ನು ಕಳೆದ ಜಗತ್ತು 1991ರಲ್ಲಿ ಶೀತಲ ಸಮರ ಅಂತ್ಯವಾದೊಡನೇ ಬಣ್ಣಿಸಲಾಗದ ನೆಮ್ಮದಿಯ ಉಸಿರು ಹಾಕಿತು. ಕೆಲವರು ಚಿಂತಕರು ಕಾಣದ ‘ನಾಳೆ’ಯ ಬಗ್ಗೆ ತಲೆಕೆಡಿಸಿಕೊಳ್ಳತೊಡಗಿದರು.
ಸೋವಿಯತ್ ಯೂನಿಯನ್ ಮತ್ತು ಪೂರ್ವ ಯುರೋಪಿನಲ್ಲಿ ಕಮ್ಯೂನಿಸ್ಟ್ ಆಡಳಿತಗಳ ಪತನ ಮತ್ತು ಅದರೊಂದಿಗೆ ಅಂತ್ಯವಾದ ಶೀತಲ ಸಮರ ಜಾಗತಿಕ ಬೌದ್ಧಿಕ ಸಮುದಾಯದ ಮುಂದಿಟ್ಟ ಪ್ರಶ್ನೆಗಳೆಂದರೆ ಜಾಗತಿಕ ರಂಗದಲ್ಲಿ ಸಂಘರ್ಷ ಯುಗ ಅಂತ್ಯವಾಯಿತೇ ಅಥವಾ ಹೊಸದೊಂದು ಸಂಘರ್ಷಕ್ಕೆ ಜಗತ್ತು ಅಣಿಯಾಗುತ್ತಿದೆಯೇ, ಹಾಗಿದ್ದರೆ ಈ ಸಂಘರ್ಷದ ಸ್ವರೂಪಗಳೇನು ಎಂಬುದಾಗಿದ್ದವು. ಈ ಪ್ರಶ್ನೆಗಳಿಗೆ ಉದಾರವಾದಿ ಹಾಗೂ ವಾಸ್ತವವಾದಿ ಚಿಂತಕ ಸಮುದಾಯಗಳೆರಡರಿಂದಲೂ ಉತ್ತರಗಳು ಬರತೊಡಗಿದವು. ಸ್ವಾರಸ್ಯವೆಂದರೆ ಎರಡೂ ಸಮುದಾಯಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಂಡವರು, ಒಂದರ್ಥದಲ್ಲಿ ತಂತಮ್ಮ ಸಮುದಾಯಗಳ ಮುಂಚೂಣಿಯಲ್ಲಿ ನಿಂತವರು ಗುರುಶಿಷ್ಯರಾದ ಸ್ಯಾಮ್ಯುಯೆಲ್ ಫಿಲಿಪ್ಸ್ ಹಂಟಿಂಗ್ಟನ್ ಮತ್ತು ಯೋಶುಹಿರೋ ಫ್ರಾನ್ಸಿಸ್ ಫುಕುಯಾಮಾ. ಮೊದಲಿಗೆ ಶಿಷ್ಯನ ಚಿಂತನೆಯತ್ತಲೇ ಗಮನ ಹರಿಸೋಣ. ಶೀತಲ ಸಮರ ಅಧಿಕೃತವಾಗಿ ಅಂತ್ಯಗೊಳ್ಳುವುದಕ್ಕೂ ಮೊದಲೇ ಭವಿಷ್ಯದ ಬಗ್ಗೆ ಸೂಕ್ಷ್ಮ ಒಳನೋಟ ನೀಡಲು ಪ್ರಯತ್ನಿಸಿದ ಫ್ರಾನ್ಸಿಸ್ ಫುಕುಯಾಮಾ 1999ರಲ್ಲಿ National Interest ತ್ರೈಮಾಸಿಕದಲ್ಲಿ ಲೇಖನವೊಂದನ್ನು ಪ್ರಕಟಿಸಿದರು. The End of History ಶೀರ್ಷಿಕೆಯ ಆ ಲೇಖನದಲ್ಲಿ, ಸಮತಾವಾದ ಮತ್ತು ಬಂಡವಾಳಶಾಹಿ ಸಿದ್ಧಾಂತಗಳ ನಡುವಿನ ಸಂಘರ್ಷ ಸಮತಾವಾದದ ಸೋಲಿನೊಂದಿಗೆ ಅಂತ್ಯವಾಗಿದೆಯೆಂದೂ, ಪರಿಣಾಮವಾಗಿ ಪಶ್ಚಿಮದ ಉದಾರವಾದಿ ಪ್ರಜಾಪ್ರಭುತ್ವ ಜಗತ್ತಿಗೆ ಮಾದರಿಯಾಗುತ್ತದೆಯೆಂದೂ, ಅದರಿಂದಾಗಿ ಜಾಗತೀಕರಣ ಪ್ರಕ್ರಿಯೆ ವೇಗ ಪಡೆದುಕೊಂಡು ಜಗತ್ತಿನ ರಾಷ್ಟ್ರಗಳು ಪರಸ್ಪರ ಅವಲಂಬನೆಯ ಹಾದಿ ಹಿಡಿಯುತ್ತವೆಂದೂ, ಆ ಕಾರಣದಿಂದಾಗಿಯೇ ಯಾವುದೇ ಸೈದ್ಧಾಂತಿಕ ಅಥವಾ ಇನ್ನಾವುದೇ ಬಗೆಯ ಸಂಘರ್ಷದಿಂದ ಜಗತ್ತು ಮುಕ್ತವಾಗಿರುತ್ತದೆಂದೂ ಫುಕುಯಾಮಾ ವಾದಿಸಿದರು. ಅವೇ ಚಿಂತನೆಗಳನ್ನು ವಿಸõತವಾಗಿ ಒಳಗೊಂಡ ಅವರ ಕೃತಿ The End of History and the Last Man 1992ರಲ್ಲಿ ಪ್ರಕಟವಾಯಿತು.
ಫುಕುಯಾಮಾರ ವಿಚಾರ ಮತ್ತು ಸಿದ್ಧಾಂತಗಳು ಆ ಕ್ಷಣಕ್ಕೆ ಸರಿಯೆನಿಸಿದರೂ ಜಗತ್ತು ಸಂಘರ್ಷಮುಕ್ತವಾಗಲಿದೆಯೆಂಬ ಆಶಾಭಾವನೆಗೆ ಇತಿಹಾಸದಿಂದ ಮಾನ್ಯತೆ ಸಿಗುವುದಿಲ್ಲ. ಇತಿಹಾಸದ ಆರಂಭಕಾಲದಿಂದಲೂ ಎರಡು ಪ್ರಮುಖ ದೇಶಗಳ ಅಥವಾ ಬಣಗಳ ನಡುವಿನ ಸಂಘರ್ಷಗಳನ್ನು ಜಗತ್ತು ಮತ್ತೆಮತ್ತೆ ಕಂಡಿದೆ ಹಾಗೂ ಈ ಸಂಘರ್ಷಗಳಿಗೆ ಹೆಚ್ಚಿನ ಸಂದರ್ಭಗಳಲ್ಲಿ ಸೈದ್ಧಾಂತಿಕ ಆಯಾಮವಿತ್ತು.
ಪ್ರಾಚೀನ ಗ್ರೀಸ್ನಲ್ಲಿ ಪ್ರಜಾಕಲ್ಯಾಣವೇ ಮುಖ್ಯವೆಂದ ಪ್ರಜಾಪ್ರಭುತ್ವವಾದಿ ಅಥೆನ್ಸ್ ಮತ್ತು ವ್ಯಕ್ತಿಹಿತಕ್ಕಿಂತ ರಾಷ್ಟ್ರಹಿತವೇ ಮುಖ್ಯವೆಂದ ಸ್ಪಾರ್ಟಾಗಳ ನಡುವಿನ ಸೈದ್ಧಾಂತಿಕ ಸಮರ ಅಂತಿಮವಾಗಿ ಕ್ರಿ. ಪೂ. 431-404ರಲ್ಲಿ ಪೆಲಪೊನೇಶಿಯನ್ ಯುದ್ಧಕ್ಕೆ, ಅಥೆನ್ಸ್ನ ಸೋಲಿಗೆ ಕಾರಣವಾದದ್ದರಿಂದ ಹಿಡಿದು ನಮ್ಮದೇ ತಲೆಮಾರಿನಲ್ಲಿ ಅಮೆರಿಕ ನೇತೃತ್ವದ ಬಂಡವಾಳಶಾಹಿ-ಪ್ರಜಾಪ್ರಭುತ್ವವಾದಿ ಮೌಲ್ಯಗಳು ಮತ್ತು ಸೋವಿಯತ್ ನೇತೃತ್ವದ ಸಮತಾವಾದಿ-ಸರ್ವಾಧಿಕಾರಿ ಮೌಲ್ಯಗಳ ನಡುವಿನ ಶೀತಲ ಸಂಘರ್ಷದ ನಡುವಿನ ಈ ಎರಡೂವರೆ ಸಹಸ್ರಮಾನಗಳಲ್ಲಿ ಅಂತಹ ಅನೇಕ ಸಂಘರ್ಷಗಳನ್ನು ಜಗತ್ತು ಅನುಭವಿಸಿದೆ. ಅಲ್ಲದೆ, ಶೀತಲಸಮರ ಮುಗಿಯುತ್ತಿದ್ದಂತೆ ಮತ್ತು ಸಮತಾವಾದ ರಾಜಕೀಯವಾಗಿ ಮರೆಯಾಗುತ್ತಿದ್ದಂತೆ ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ಕಿಡಿ ಹೊತ್ತಿಕೊಂಡಿತು. ಅದಿನ್ನೂ ಶಮನವಾಗಿಲ್ಲ ಮತ್ತದು ಹೊಸಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ ಎನ್ನುವುದು ನಮ್ಮೆದುರೇ ಘಟಿಸುತ್ತಿರುವ ವಾಸ್ತವ. ಇದು ಎತ್ತಿತೋರುವುದು ಇತಿಹಾಸ ‘ಮುಂದೆ ಅವರು ಬಹುಕಾಲ ಸುಖವಾಗಿ ಬಾಳಿದರು...’ ಎಂದು ಮುಕ್ತಾಯಗೊಳ್ಳುವ ಮಕ್ಕಳ ಕಥೆಯಲ್ಲ ಎಂದು.
ಉದಾರವಾದಿ ಫುಕುಯಾಮಾರ ಚಿಂತನೆಗಳಿಗೆ ಬೌದ್ಧಿಕ ನೆಲೆಗಟ್ಟಿನಲ್ಲೇ ಪ್ರತಿಕ್ರಿಯೆ ಬಂದದ್ದು ಅವರ ಗುರು, ವಾಸ್ತವವಾದಿ ಚಿಂತಕ ಸ್ಯಾಮ್ಯುಯೆಲ್ ಹಂಟಿಂಗ್ಟನ್ರಿಂದ. ಶಿಷ್ಯನ ಕೃತಿ ಪ್ರಕಟವಾದ 1992ರಲ್ಲೇ ಅಮೆರಿಕನ್ ಎಂಟರ್ಪ್ರೈಸಸ್ ಇನ್ಸ್ಟಿಟ್ಯೂಟ್ನಲ್ಲಿ ನೀಡಿದ The Clash of Civilizations ಎಂಬ ಉಪನ್ಯಾಸದಲ್ಲಿ ‘ಜಗತ್ತು ಮುಂದೆಯೂ ಸಂಘರ್ಷಮಯವಾಗಿರುತ್ತದೆ ಮತ್ತು ಆ ಸಂಘರ್ಷ ನಾಗರಿಕತೆಗಳ ನಡುವಿನ ಸಂಘರ್ಷವಾಗಿರುತ್ತದೆ’ ಎಂದು ಹಂಟಿಂಗ್ಟನ್ ಪ್ರತಿಪಾದಿಸಿದರು. ಅವರ ಚಿಂತನೆಗಳು ಮರುವರ್ಷ ಅದೇ ಶೀರ್ಷಿಕೆಯಲ್ಲಿ ಅಂತಾರಾಷ್ಟ್ರೀಯ ರಾಜಕಾರಣದ ಬಗೆಗಿನ ಬರಹಗಳಿಗೆ ವಿಶ್ವಮಾನ್ಯವಾಗಿರುವ Foreign Affairs ತ್ರೈಮಾಸಿಕದಲ್ಲಿ ಲೇಖನರೂಪದಲ್ಲಿ ಪ್ರಕಟವಾದವು. ಆ ಲೇಖನದ ವಿಸ್ತೃರೂಪ The Clash of Civilization and the Remaking of World Order ಎಂಬ ಹೆಸರಿನ ಪುಸ್ತಕವಾಗಿ 1996ರಲ್ಲಿ ಹೊರಬಂತು.
1992ರ ಉಪನ್ಯಾಸ, 1993ರ ಲೇಖನ ಮತ್ತು 1996ರ ಪುಸ್ತಕದಲ್ಲಿ, ಶೀತಲ ಸಮರೋತ್ತರ ಕಾಲದಲ್ಲಿ ಜಾಗತಿಕ ಇತಿಹಾಸ ಯಾವ ದಾರಿ ಹಿಡಿಯಬಹುದೆಂಬುದರ ಬಗ್ಗೆ ಹಾರ್ವರ್ಡ್ ವಿಶ್ವವಿದ್ಯಾಲಯದ ಈ ಪ್ರಾಧ್ಯಾಪಕರು ಮಂಡಿಸಿರುವ ಸಿದ್ಧಾಂತ ಮತ್ತು ಅದಕ್ಕೆ ಪೂರಕವಾಗಿ ಒದಗಿಸಿದ ಆಧಾರಗಳು-ವಿಶ್ಲೇಷಣೆಗಳು ಇತಿಹಾಸದ ಆ ಸಂಕ್ರಮಣ ಕಾಲದಲ್ಲಿ ಹೊಸ ಚಿಂತನೆಗಳಿಗಾಗಿ ತಹತಹಿಸುತ್ತಿದ್ದ ಅಂತಾರಾಷ್ಟ್ರೀಯ ರಾಜಕಾರಣದ ವಿಶ್ಲೇಷಕರ ಹಾಗೂ ವಿದ್ಯಾರ್ಥಿಗಳ ಗಮನವನ್ನು ಛಕ್ಕನೆ ಸೆಳೆದುಕೊಂಡವು. ಅಲ್ಲಿಂದೀಚೆಗೆ ನಾಗರಿಕತೆಗಳ ಸಂಘರ್ಷ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ಮತ್ತು ವಾದವಿವಾದಗಳಿಗೆ ವಸ್ತುವಿಷಯವಾಗಿದೆ ಹಾಗೂ ಹೊಸ ಹೊಳಹು, ದೃಷ್ಟಿಕೋನಗಳಿಗೆ ಪ್ರೇರಕವಾಗಿದೆ. ಇದರ ಉಲ್ಲೇಖವಿಲ್ಲದೆ ಪ್ರಸಕ್ತ ಜಾಗತಿಕ ರಾಜಕಾರಣದ ವಿಶ್ಲೇಷಣೆ ಅಪೂರ್ಣ. ಶೀತಲ ಸಮರೋತ್ತರ ಕಾಲದಲ್ಲಿ ಜಗತ್ತು ಕಾಣುವುದು ಧರ್ವಧಾರಿತ ನಾಗರಿಕತೆಗಳ ನಡುವಿನ ಸಂಘರ್ಷ ಎಂದು ಹೇಳುವ ನಾಗರಿಕತೆಗಳ ನಡುವಿನ ಸಂಘರ್ಷ ಸಿದ್ಧಾಂತದ ಪರಿಚಯಕ್ಕೆ ಪೂರ್ವಭಾವಿಯಾಗಿ ನಮಗೆ ಸ್ವಲ್ಪ ಭೂಗೋಳಶಾಸ್ತ್ರದ ಪರಿಚಯ ಅಗತ್ಯವಾಗುತ್ತದೆ. ತಮ್ಮ ಚಿಂತನೆಗಳಿಗೆ ಹಂಟಿಂಗ್ಟನ್ ಉಪಯೋಗಿಸಿಕೊಳ್ಳುವುದು ಭೂಗೋಳಶಾಸ್ತ್ರದಲ್ಲಿ ಪ್ರಚಲಿತವಿರುವ ಪ್ಲೇಟ್ ಟೆಕ್ಟೋನಿಕ್ ಸಿದ್ಧಾಂತವನ್ನು. ಈ ಸಿದ್ಧಾಂತ ಹೇಳುವುದು ಭೂಮಿಯ ಪದರ ಇಡಿಯಾಗಿ ಒಂದೇ ಅಲ್ಲ, ಬದಲಾಗಿ ಅದು ಏಳು ಅಥವಾ ಎಂಟು ಪ್ರತ್ಯೇಕ ಭಾಗಗಳಾಗಿದೆ ಎಂದು. ಈ ಭಾಗಗಳನ್ನು ಟೆಕ್ಟೋನಿಕ್ ಪ್ಲೇಟ್ಸ್ ಎಂದು ಕರೆಯಲಾಗುತ್ತದೆ. ಈ ತಟ್ಟೆಗಳು ಒಂದೆಡೆ ಸ್ಥಿರವಾಗಿ ನಿಲ್ಲದೆ ನಿರಂತರವಾಗಿ ಆದರೆ ಅತೀ ಮೆಲ್ಲಗೆ ಚಲಿಸುತ್ತಿರುತ್ತವೆ. ಈ ಚಲನೆಯಲ್ಲಿ ಅವು ಒಂದನ್ನೊಂದು ಘರ್ಷಿಸುತ್ತಿರುತ್ತವೆ, ಒತ್ತುತ್ತಿರುತ್ತವೆ, ತಳ್ಳುತ್ತಿರುತ್ತವೆ. ಎಲ್ಲ ತಟ್ಟೆಗಳ ಚಲಿಸುವ ವೇಗ ಏಕಪ್ರಕಾರವಾಗಿರುವುದಿಲ್ಲವಾದ ಕಾರಣ ವೇಗವಾಗಿ ಚಲಿಸುವ ತಟ್ಟೆ ಮೆಲ್ಲಗೆ ಚಲಿಸುವ ತಟ್ಟೆಯನ್ನು ಬಲವಾಗಿ ಉಜ್ಜುತ್ತಿರುತ್ತದೆ. ಹೀಗಾಗಿ ಇಂತಹ ಕಡೆ ಭೂಕಂಪಗಳು ಸರ್ವೆಸಾಮಾನ್ಯ. ಇಂಡಿಯನ್ ತಟ್ಟೆ ಯೂರೇಷಿಯನ್ ತಟ್ಟೆಯನ್ನು ಉಜ್ಜುತ್ತ ಉತ್ತರಕ್ಕೆ ಮುಂದೊತ್ತುತ್ತಿರುವ ಕಾರಣದಿಂದಾಗಿ ಹಿಮಾಲಯ ಪರ್ವತಗಳು ಮೇಲೆದ್ದಿವೆ ಮತ್ತು ಅವುಗಳ ಉದ್ದಗಲಕ್ಕೂ ಭೂಕಂಪಗಳು ಸಾಮಾನ್ಯ. ಹಾಗೆಯೇ, ಉತ್ತರ ಅಮೆರಿಕ ತಟ್ಟೆ ಪೆಸಿಫಿಕ್ ತಟ್ಟೆಯನ್ನು ಉಜ್ಜುತ್ತಿರುವ ಕ್ಯಾಲಿಫೋರ್ನಿಯಾದ ಸ್ಯಾಂಡ್ ಆಂಡ್ರಿಯನ್ ಫಾಲ್ಟ್ನಲ್ಲಿ, ಪೆಸಿಫಿಕ್ ತಟ್ಟೆ ಯೂರೇಶಿಯಾ ಮತ್ತು ಫಿಲಿಪ್ಪೀನ್ಸ್ ತಟ್ಟೆಗಳನ್ನು ಉಜ್ಜುತ್ತಿರುವ ಪೂರ್ವ ಏಷ್ಯಾದಲ್ಲಿ ಭೂಕಂಪಗಳು ಮತ್ತು ಜ್ವಾಲಾಮುಖಿಗಳು ಸಹಜ. ತಟ್ಟೆಗಳ ನಡುವಿನ ಪ್ರದೇಶಗಳನ್ನು ‘ಫಾಲ್ಟ್ ಲೈನ್ಸ್’ ಎಂದು ಕರೆಯಲಾಗುತ್ತದೆ. ಭೂಮಿಯ ಮೇಲೆ ವಿವಿಧ ಧರ್ಮಗಳು ಪ್ರಚಲಿತವಿರುವ ಪ್ರದೇಶಗಳು ಟೆಕ್ಟೋನಿಕ್ ಪ್ಲೇಟ್ಗಳಂತೆಯೇ ಪ್ರತ್ಯೇಕವಾಗಿವೆ ಮತ್ತು ಧರ್ಮಗಳ ಪ್ರಸರಣಾವೇಗ ಏಕಪ್ರಕಾರವಾಗಿಲ್ಲ. ಹೀಗಾಗಿ ಒಂದು ಧರ್ಮ ಮತ್ತೊಂದು ಧರ್ಮದ ಮೇಲೆ ಒತ್ತಡ ಹೇರಿ ತಿಕ್ಕಾಟಕ್ಕೆ ಎಡೆಮಾಡುವುದು ಸಹಜ. ಪ್ರತಿಯೊಂದು ಧರ್ಮವೂ ತನ್ನದೇ ಆದ ಪ್ರತ್ಯೇಕ ಹಾಗೂ ವಿಶಿಷ್ಟ ನಾಗರಿಕತೆಗೆ ಜನ್ಮನೀಡಿದೆ. ಹೀಗೆ ಎರಡು ಧರ್ವಧಾರಿತ ನಾಗರಿಕತೆಗಳನ್ನು ಪ್ರತ್ಯೇಕಿಸುವ ಪ್ರದೇಶವನ್ನು ‘ಸಿವಿಲಿಜೇಶನಲ್ ಫಾಲ್ಟ್ಲೈನ್ಸ್’ ಎಂದು ಕರೆಯಬಹುದು. ಮುಂದಿನ ಜಾಗತಿಕ ಸಂಘರ್ಷಗಳು ನಾಗರಿಕತೆಗಳ ನಡುವೆ ಘಟಿಸುತ್ತವೆ ಮತ್ತು ಈ ಸಂಘರ್ಷಗಳು ಭುಗಿಲೇಳುವುದು ಸಿವಿಲಿಜೇಷನಲ್ ಫಾಲ್ಟ್ಲೈನ್ಗಳಲ್ಲಿ. ಇದು ಹಂಟಿಂಗ್ಟನ್ರ ನಾಗರಿಕತೆಗಳ ಸಂಘರ್ಷ ಸಿದ್ಧಾಂತದ ಸರಳ ತಿರುಳು.
ಈ ಜಗತ್ತಿನಲ್ಲಿ ಎಂಟು ಧರ್ವಧಾರಿತ ನಾಗರಿಕತೆಗಳನ್ನು ಮತ್ತು ಅವುಗಳು ಪ್ರಚಲಿತವಿರುವ ಪ್ರದೇಶಗಳನ್ನು ಹಂಟಿಂಗ್ಟನ್ ಗುರುತಿಸುತ್ತಾರೆ. 1993ರಲ್ಲಿ ಪ್ರಕಟವಾದ ಲೇಖನ ಮತ್ತು ಮೂರು ವರ್ಷಗಳ ನಂತರ ಪ್ರಕಟವಾದ ಪುಸ್ತಕದಲ್ಲಿ ಈ ಬಗ್ಗೆ ಕೆಲವು ವ್ಯತ್ಯಾಸಗಳಿದ್ದರೂ ಪುಸ್ತಕದಲ್ಲಿ ನಮೂದಿತವಾಗಿರುವುದು ಅಂತಿಮವೆಂದು ತೀರ್ಮಾನಿಸಿ ಮುಂದುವರಿದರೆ ನಮಗೆ ದೊರೆಯುವ ವಿಶ್ವದ ಎಂಟು ಧರ್ಮಾಧಾರಿತ ನಾಗರಿಕತೆಗಳು ಹೀಗಿವೆ-
1. ವೆಸ್ಟರ್ನ್ (ಪಾಶ್ಚಿಮಾತ್ಯ) ನಾಗರಿಕತೆ (ಕ್ರಿಶ್ಚಿಯನ್ ಧರ್ವನುಯಾಯಿ ಅಮೆರಿಕ, ಕೆನಡಾ, ಮತ್ತು ಪಶ್ಚಿಮ ಯುರೋಪಿಯನ್ ದೇಶಗಳು.) 2. ಆಫ್ರಿಕನ್ ನಾಗರಿಕತೆ (ಮಧ್ಯ ಮತ್ತು ದಾಕ್ಷಿಣಾತ್ಯ ಆಫ್ರಿಕಾದ ಮುಸ್ಲಿಮೇತರ ದೇಶಗಳು. ಇಲ್ಲಿ ಕ್ರಿಶ್ಚಿಯಾನಿಟಿ ಪ್ರಧಾನವಾಗಿದ್ದರೂ ಅಸಂಖ್ಯ ಬುಡಕಟ್ಟು ನಂಬಿಕೆಗಳೂ ಅಷ್ಟೇ ಪ್ರಧಾನವಾಗಿವೆ.) 3. ಸಿನಿಕ್ ನಾಗರಿಕತೆ (ಚೀನಾ, ತೈವಾನ್, ವಿಯೆಟ್ನಾಂ) 4. ಹಿಂದೂ ನಾಗರಿಕತೆ (ಭಾರತ, ನೇಪಾಳ, ಭೂತಾನ್) 5. ಇಸ್ಲಾಮಿಕ್ ನಾಗರಿಕತೆ (ಮೊರಾಕ್ಕೋದಿಂದ ಹಿಡಿದು ಇಂಡೋನೇಷ್ಯಾದವರೆಗೆ ಹರಡಿರುವ ಮುಸ್ಲಿಂ ದೇಶಗಳು) 6. ಜಪಾನೀಸ್ ನಾಗರಿಕತೆ (ಜಪಾನ್) 7. ಲ್ಯಾಟಿನ್ ಅಮೆರಿಕನ್ ನಾಗರಿಕತೆ (ಮಧ್ಯ ಮತ್ತು ದಕ್ಷಿಣ ಅಮೆರಿಕದ ಕ್ರಿಶ್ಚಿಯನ್ ದೇಶಗಳು) 8. ಆರ್ಥೊಡಾಕ್ಸ್ (ಸಂಪ್ರದಾಯಸ್ಥ) ನಾಗರಿಕತೆ (ಗ್ರೀಕ್ ಆರ್ಥೊಡಾಕ್ಸ್ ಚರ್ಚ್ನ ಅನುಯಾಯಿಗಳಿರುವ ಪೂರ್ವ ಯುರೋಪ್ ಮತ್ತು ರಷ್ಯಾ) ಬೌದ್ಧಧರ್ವಿುಯ ದೇಶಗಳು ಹಲವಾರಿದ್ದರೂ ವಿಶ್ವರಾಜಕಾರಣದಲ್ಲಿ ಅವುಗಳ ಪಾತ್ರ ನಗಣ್ಯವಾದ್ದರಿಂದ ಅವುಗಳಿಗೆ ಪ್ರತ್ಯೇಕ ಸ್ಥಾನವನ್ನು ಹಂಟಿಂಗ್ಟನ್ ನೀಡುವುದಿಲ್ಲ. ಯೆಹೂದಿ ಧರ್ವಧಾರಿತ ಇಸ್ರೇಲನ್ನು ಅವರು ಪಾಶ್ಚಿಮಾತ್ಯ ನಾಗರಿಕತೆಯ ಭಾಗವಾಗಿಸುತ್ತಾರೆ. ಪಾಶ್ಚಿಮಾತ್ಯ, ಲ್ಯಾಟಿನ್ ಅಮೆರಿಕ ಮತ್ತು ಸಂಪ್ರದಾಯಸ್ಥ ನಾಗರಿಕತೆಗಳ ನಡುವೆ ಕ್ರಿಶ್ಚಿಯಾನಿಟಿಯ ಕಾರಣದಿಂದಾಗಿ ಮೈತ್ರಿ ಏರ್ಪಡಬಹುದು ಮತ್ತು ಈ ಮೈತ್ರಿ ಅವುಗಳನ್ನು ಸಶಕ್ತಗೊಳಿಸಬಹುದು ಎಂದು ಹಂಟಿಂಗ್ಟನ್ ಅಭಿಪ್ರಾಯಪಡುತ್ತಾರೆ. ಹಂಟಿಂಗ್ಟನ್ ಪ್ರಕಾರ ಈ ನಾಗರಿಕತೆಗಳ ನಡುವಿನ ಸಂಘರ್ಷಗಳಿಗೆ ಕಾರಣವಾಗುವುದು ಏನು ಮತ್ತು ಕಳೆದ ಮೂವತ್ತು ವರ್ಷಗಳಲ್ಲಿ ಅವರ ಸಿದ್ಧಾಂತ ಕಾಲದ ಪರೀಕ್ಷೆಯನ್ನು ಹೇಗೆ ಎದುರಿಸಿದೆ ಎನ್ನುವುದನ್ನು ಎರಡನೆಯ ಭಾಗದಲ್ಲಿ ನೋಡೋಣ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)