

ಚೀನೀ ಆದಾಯವನ್ನು ಕುಗ್ಗಿಸಲು ಟ್ರಂಪ್ ಕ್ರಮ ತೆಗೆದುಕೊಳ್ಳದೆ ಇದ್ದಲ್ಲಿ ಇಂದು ಕರೊನಾ ಸಂದರ್ಭದಲ್ಲಿ ಚೀನೀ ಶಾಂತಿಕಂಟಕ ಯೋಜನೆಗಳು ಇನ್ನೆಷ್ಟು ಘಾತಕವಾಗಿರುತ್ತಿದ್ದವು! ಚೀನೀ ಸೇನೆ ತನ್ನ ಗಡಿಯನ್ನೇ ದಾಟಿ ಹೊರಬರದಂತಹ ಸ್ಥಿತಿಯನ್ನು ಅಮೆರಿಕ ನಿರ್ವಿುಸಿಬಿಟ್ಟಿದೆ. ಇಷ್ಟರ ಮಟ್ಟಿಗೆ ಟ್ರಂಪ್ ಚೀನೀ ಕಮ್ಯೂನಿಸ್ಟರ ಜಗತ್ಕಂಟಕ ಯೋಜನೆಗಳನ್ನು ಮಣ್ಣುಗೂಡಿಸಿದ್ದಾರೆ.
ಹಾಗೆ ನೋಡಿದರೆ ಅಗತ್ಯವಾದ ಪೂರ್ವಭಾವಿ ತಯಾರಿಗಳನ್ನೆಲ್ಲ ಮಾಡಿಕೊಂಡೇ ಜಿನ್ಪಿಂಗ್ ಅಂತಹದೊಂದು ಯುಗಪರಿವರ್ತಕ ಹೇಳಿಕೆಯನ್ನು ನೀಡಿದ್ದು. 1978ರಲ್ಲಿ ಆರ್ಥಿಕ ಉದಾರೀಕರಣವನ್ನು ಆರಂಭಿಸಿದ ಚೀನಾ 2010ರ ಹೊತ್ತಿಗೇ ವಿಶ್ವದ ಎರಡನೆಯ ದೊಡ್ಡ ಅರ್ಥವ್ಯವಸ್ಥೆಯಾಗಿ ಬೆಳೆದು ನಿಂತಿತು, 2012ರಲ್ಲಿ ಜಿನ್ಪಿಂಗ್ ಅಧಿಕಾರಕ್ಕೆ ಬಂದ ನಂತರ ಚೀನೀ ಅರ್ಥವ್ಯವಸ್ಥೆ ಮತ್ತಷ್ಟು ವೃದ್ಧಿಗೊಂಡು ಟ್ರಂಪ್ ಶ್ವೇತಭವನ ಪ್ರವೇಶಿಸುವ ಹೊತ್ತಿಗೆ ಚೀನಾದ ವಾರ್ಷಿಕ ನಿವ್ವಳ ರಾಷ್ಟ್ರೀಯ ಉತ್ಪಾದನೆ 11 ಟ್ರಿಲಿಯನ್ ಡಾಲರ್ಗಳನ್ನು ದಾಟಿ 3 ಟ್ರಿಲಿಯನ್ ಡಾಲರ್ಗಳ ವಿದೇಶೀ ವಿನಿಮಯ ಬೆಟ್ಟದ ಮೇಲೇರಿ ಕುಳಿತಾಗಿತ್ತು. ಆ ಅಗಾಧ ಆರ್ಥಿಕ ಸಾಮರ್ಥ್ಯವನ್ನು ರಾಜಕೀಯ-ಸೇನಾ ಶಕ್ತಿಯನ್ನಾಗಿಯೂ ಜಿನ್ಪಿಂಗ್ ಬದಲಾಯಿಸಹೊರಟಿದ್ದರು.
18ನೇ ಶತಮಾನದಲ್ಲಿ ಬ್ರಿಟನ್, 20ನೇ ಶತಮಾನದಲ್ಲಿ ಅಮೆರಿಕ ಮಾಡಿದ್ದು ಇದನ್ನೇ. ಜಾಗತಿಕ ರಾಜಕೀಯ-ಸೇನಾ ಶಕ್ತಿಯಾಗಿ ಬೆಳೆಯಲು ಅಗಾಧ ಆರ್ಥಿಕ ಸಾಮರ್ಥ್ಯ ಅಗತ್ಯ, ರಾಜಕೀಯ-ಸೇನಾ ಸಾಮರ್ಥ್ಯವನ್ನು ಕಾಪಾಡಿಕೊಳ್ಳುತ್ತ ಹೋಗಲು ನಿರಂತರ ಆರ್ಥಿಕ ಅಭಿವೃದ್ಧಿ ಅತ್ಯಗತ್ಯ ಎಂಬ ಸ್ವರ್ಣ ಸೂತ್ರವನ್ನು ಜಿನ್ಪಿಂಗ್ ಅರಿತೇ ಇದ್ದರು. ಬೃಹತ್ ಸೇನಾ ಶಕ್ತಿಯಾಗಿದ್ದರೂ ಪೂರಕ ಆರ್ಥಿಕ ಬೆಳವಣಿಗೆಗಳಿಲ್ಲದ ಕಾರಣ ಕುಸಿದು ಇತಿಹಾಸ ಸೇರಿಹೋದ ಸೋವಿಯತ್ ಯೂನಿಯನ್ನ ಉದಾಹರಣೆ ಕಣ್ಣಮುಂದೆಯೇ ಇತ್ತು. ಹೀಗಾಗಿಯೇ ಅವರು 2030ರ ಹೊತ್ತಿಗೆ ಚೀನೀ ವಾರ್ಷಿಕ ರಾಷ್ಟ್ರೀಯ ನಿವ್ವಳ ಉತ್ಪಾದನೆಯನ್ನು ದ್ವಿಗುಣಗೊಳಿಸಲು ಣ್ಞಛಿ ್ಕಚಛ ಣ್ಞಛಿ ಆಛ್ಝಿಠಿ ಎಂಬ ಮಹತ್ವಾಕಾಂಕ್ಷಿ ಯೋಜನೆ ರೂಪಿಸಿ ಸಮರೋಪಾದಿಯಲ್ಲಿ ಅನುಷ್ಠಾನಕ್ಕೆ ತಂದೂ ಆಗಿತ್ತು. ಉತ್ತರ ಅಮೆರಿಕ ಮತ್ತು ಪಶ್ಚಿಮ ಯುರೋಪ್ಗಳ ಹೊರತಾಗಿ ಉಳಿದೆಲ್ಲ ಜಗತ್ತನ್ನು ರಸ್ತೆಗಳು, ರೈಲುಹಾದಿಗಳು ಮತ್ತು ಬಂದರುಗಳ ಮೂಲಕ ಚೀನಾಗೆ ಜೋಡಿಸುವ ಉದ್ದೇಶವನ್ನೊಳಗೊಂಡ ಈ ಯೋಜನೆಯ ಮಹತ್ವ ಆರ್ಥಿಕ ಕ್ಷೇತ್ರಕ್ಕಷ್ಟೇ ಸೀಮಿತವಲ್ಲ, ಬೇಕೆಂದಾಗ ಬೇಕಾದೆಡೆ ತ್ವರಿತವಾಗಿ ಚೀನೀ ಸೇನೆಯನ್ನೂ ಕಳುಹಿಸಲೂ ಅದು ಬಳಕೆಯಾಗಲಿತ್ತು. ಇದನ್ನೇನೂ ಜಿನ್ಪಿಂಗ್ ರಹಸ್ಯವಾಗಿಟ್ಟಿರಲಿಲ್ಲ. ಇತ್ತ ಪೂರ್ವದಲ್ಲಿ ಫಿಲಿಪೀನ್ಸ್ ಅನ್ನು ಅಮೆರಿಕದ ತೆಕ್ಕೆಯಿಂದ ಹೊರಗೆಳೆದು ತನ್ನ ಬಂಟನನ್ನಾಗಿ ಮಾಡಿಕೊಳ್ಳುವುದರ ಮೂಲಕ ಪಶ್ಚಿಮ ಪೆಸಿಫಿಕ್ ವಲಯದಿಂದ ಅಮೆರಿಕವನ್ನು ಎತ್ತಂಗಡಿ ಮಾಡುವುದು ತಮ್ಮ ಅಂತಿಮ ಗುರಿ ಎಂದು ತೋರಿಸಿಯೇ ಇದ್ದರು. ಅತ್ತ ಪಶ್ಚಿಮದಲ್ಲಿ ಇರಾನ್ ಜತೆ ಸೇರಿಕೊಂಡು ಮಧ್ಯಪ್ರಾಚ್ಯದ ಆರ್ಥಿಕ-ಸೇನಾ ವಾತಾವರಣವನ್ನೇ ಅಲ್ಲೋಲಕಲ್ಲೋಲ ಮಾಡಲೂ, ಆ ಮೂಲಕ ಕದಡಿದ ನೀರಿನಲ್ಲಿ ಮೀನು ಹಿಡಿಯಲೂ ಹೊಂಚುಹಾಕಿದ್ದರು. ಇವೆರಡರ ನಡುವೆ ಆಫ್ರಿಕಾದ ಪಶ್ಚಿಮ ತಟದಿಂದ ಹಿಡಿದು ಏಷ್ಯಾದ ಪಶ್ಚಿಮ ತಟದವರೆಗಿನ ಹಲವಾರು ಸಣ್ಣಪುಟ್ಟ ರಾಷ್ಟ್ರಗಳನ್ನು ಸಾಲಸಂಕೋಲೆಯಲ್ಲಿ ಸಿಲುಕಿಸಿಕೊಂಡು, ಅವುಗಳ ನೆಲವನ್ನು ಕಬಳಿಸಿ, ಅಲ್ಲೆಲ್ಲ ಸೇನಾನೆಲೆಗಳನ್ನು ಸ್ಥಾಪಿಸಿ ಇಡೀ ವಲಯವನ್ನು ಚೀನೀ ಸೇನಾ ಹಿಡಿತಕ್ಕೆ ಒಳಪಡಿಸಿಕೊಳ್ಳುವ ಅವರ ಘಾತಕ ಯೋಜನೆ ಎಲ್ಲರಿಗೂ ಕಾಣುವಂತೇ ಇತ್ತು.
2016ರ ಚುನಾವಣೆಗಳಲ್ಲಿ ಟ್ರಂಪ್ ವಿಜಯಿಯಾಗುತ್ತಿದ್ದಂತೇ ಕಾರ್ಯಪ್ರವೃತ್ತರಾದ ರಿಪಬ್ಲಿಕನ್ ಮುತ್ಸದ್ದಿಗಳು ಚೀನೀ ಅಧ್ಯಕ್ಷರ ಆ ಎಲ್ಲ ಯೋಜನೆಗಳು ಯಶಸ್ವಿಯಾದರೆ ಅದರಿಂದ ಜಾಗತಿಕ ಶಾಂತಿ ಯಾವ ಪ್ರಮಾಣದಲ್ಲಿ ಹಾಳಾಗಬಹುದೆಂಬ ಸರಿಯಾದ ಚಿತ್ರಣವನ್ನೇ ಗ್ರಹಿಸಿ ಮುಂದೆ ಎದುರಾಗಲಿರುವ ಗಂಡಾಂತರವನ್ನು ನಿಭಾಯಿಸಲು ಹೊಸ ಆಡಳಿತವನ್ನು ಸಿದ್ಧಗೊಳಿಸತೊಡಗಿದರು. ಅವರೆಲ್ಲರ ಯೋಜನೆಗಳ ಬಹಿರಂಗ ಮುಖವಾದ ಟ್ರಂಪ್ ತಮ್ಮ ಸ್ವಭಾವವನ್ನೂ ಕ್ಷಿಪ್ರವಾಗಿ ಬದಲಾಯಿಸಿಕೊಂಡರು. ಮುಂದೆ ಘಟಿಸಿದ್ದು ಇತಿಹಾಸ.
ಚೀನೀ ಕಮ್ಯೂನಿಸ್ಟ್ ಪಕ್ಷ 1949ರಲ್ಲಿ ಅಧಿಕಾರ ಕೈವಶ ಮಾಡಿಕೊಳ್ಳುತ್ತಿದ್ದಂತೆ, ಮುಂದಿನ 100 ವರ್ಷಗಳಲ್ಲಿ ಚೀನಾವನ್ನು ಜಾಗತಿಕ ನಾಯಕನ ಪಟ್ಟಕ್ಕೇರಿಸಲು ರಹಸ್ಯವಾಗಿ ಹೂಡಿದ ಯೋಜನೆಯ ಬಗ್ಗೆ ಅಲ್ಲಲ್ಲಿ ತುಣುಕು ವಿವರಗಳು ಹಲವರ್ಷಗಳಿಂದಲೂ ಹರಿದಾಡುತ್ತಿವೆ. 3 ಹಂತಗಳ ಆ ಯೋಜನೆ ಪ್ರಕಾರ ಸೋವಿಯತ್ ಯೂನಿಯನ್ ಅನ್ನು ಮೊದಲು ನಿರ್ವೀರ್ಯಗೊಳಿಸಿ ಚೀನೀ ಗಡಿಗಳನ್ನು ಸುಭದ್ರಗೊಳಿಸಿಕೊಳ್ಳುವುದು, ಎರಡನೆಯ ಹಂತದಲ್ಲಿ ಯುರೋಪಿನ ಕ್ರಿಶ್ಚಿಯನ್ ರಾಷ್ಟ್ರಗಳ ಅರ್ಥವ್ಯವಸ್ಥೆಗಳನ್ನು ಚೀನೀ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು, ಮೂರನೆಯ ಹಂತದಲ್ಲಿ, ಸಮಯ ನೋಡಿ ಕ್ರಿಶ್ಚಿಯನ್ ರಾಷ್ಟ್ರಗಳ ಆರ್ಥಿಕ ಕೊರಳು ಹಿಚುಕಿ ಅವುಗಳನ್ನು ಧರಾಶಾಯಿಯಾಗಿಸಿ ನಂತರ ಏಕಾಂಗಿಯಾಗುಳಿದ ಅಮೆರಿಕವನ್ನು ಮಣಿಸುವುದು. ಆ ಪ್ರಕಾರ ಪಶ್ಚಿಮ ಯುರೋಪಿಯನ್ ರಾಷ್ಟ್ರಗಳು ಮತ್ತು ಅವುಗಳ ಆರ್ಥಿಕ ಸಹಯೋಗಿಗಳಾದ ಜಪಾನ್, ದಕ್ಷಿಣ ಕೊರಿಯಾ ಮತ್ತು ಆಸ್ಟ್ರೇಲಿಯಾಗಳ ಉದ್ದಿಮೆದಾರರನ್ನು ಆಕರ್ಷಿಸಿ ಅವರೆಲ್ಲ ತಂತಮ್ಮ ದೇಶಗಳನ್ನು ತೊರೆದು ಚೀನಾದಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸುವಂತೆ ಮಾಡುವುದರಲ್ಲಿ ಯಶಸ್ವಿಯಾದ ಚೀನಾ ಆ ದೇಶಗಳ ಆರ್ಥಿಕ ಕೊರಳನ್ನು ಹಿಚುಕುವ ಸಾಮರ್ಥ್ಯವನ್ನು ಎಂದೋ ಗಳಿಸಿಕೊಂಡಾಗಿತ್ತು. ಇದನ್ನು ಟ್ರಂಪ್ ಮತ್ತವರ ಸಹಯೋಗಿ-ಸಲಹೆಗಾರರು ಗುರುತಿಸಿ ಪರಿಹಾರಾತ್ಮಕ ಕಾರ್ಯಯೋಜನೆಗಳನ್ನು ರೂಪಿಸಿದರು.
2018ರ ಮಧ್ಯಭಾಗದಲ್ಲಿ ಆರಂಭವಾದ ಅವರ ಯೋಜನೆಗಳ ಪ್ರಕಾರ ಚೀನೀ ಉತ್ಪಾದನೆಗಳ ಮೇಲೆ ಆಮದು ಶುಲ್ಕವನ್ನು ಅಧಿಕಗೊಳಿಸುವುದರ ಮೂಲಕ ಕೇವಲ 3 ತಿಂಗಳುಗಳ ಅವಧಿಯಲ್ಲಿ ಚೀನೀ ರಫ್ತುಗಳು 350 ಬಿಲಿಯನ್ ಡಾಲರ್ಗಳಷ್ಟು ಕುಸಿಯುವಂತೆ, ಆ ಮೂಲಕ ಚೀನೀ ಆದಾಯ ತಗ್ಗುವಂತೆ ಮಾಡಿದರು. ಆದರೆ ಟ್ರಂಪ್ರ ಯೋಜನೆಗಳಿಗೆ ಯುರೋಪಿಯನ್ ರಾಷ್ಟ್ರಗಳಿಂದ ಸೂಕ್ತ ಸಹಕಾರ ಒದಗಿಬರಲಿಲ್ಲ. ತಮ್ಮ ಅರ್ಥವ್ಯವಸ್ಥೆಗಳನ್ನು ಚೀನೀಯರ ಹಿಡಿತಕ್ಕೆ ಒಡ್ಡಿ ಆ ಆತ್ಮಹತ್ಯೀಯ ಕೃತ್ಯದಲ್ಲೇ ಸಂತೋಷ ಕಾಣುತ್ತಿದ್ದ ಆ ದೇಶಗಳ, ಮುಖ್ಯವಾಗಿ ಜರ್ಮನಿಯ ಕಣ್ಣು ತೆರೆಸಿದ್ದು ಕರೊನಾ ವೈರಸ್.
ಕರೊನಾ ವೈರಸ್ ಮೂಲವನ್ನು ಮರೆಯಾಗಿಡಲು ಚೀನಾ ಅದೆಷ್ಟೇ ನಾಟಕವಾಡಿದರೂ ಈಗ ಸತ್ಯ ಜಗತ್ತಿನ ಮುಂದಿದೆ. ಈ ಶತಮಾನದಲ್ಲೇ ಸಾರ್ಸ್ ವೈರಸ್ ಸೇರಿ ಹಲವಾರು ಮಾರಕ ವೈರಸ್ಗಳು ಹೊರಬಂದಿರುವುದು ಚೀನೀ ಲ್ಯಾಬ್ಗಳಿಂದ. ಹಾಗೆಯೇ, ಕರೊನಾ ವೈರಸ್ ಹೊರಬಂದಿರುವುದೂ ವೂಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಿಂದ. ಇದನ್ನು ಅಲ್ಲಿನ ಪಿ-4 ಲ್ಯಾಬ್ನಲ್ಲಿ ಸಂಶೋಧಕಿಯಾಗಿದ್ದ ಚೆನ್ ಕ್ವಾಂಜಿಯಾವೋ ಮಾರ್ಚ್ ತಿಂಗಳಲ್ಲೇ ಹೊರಜಗತ್ತಿಗೆ ಸಾರಿಬಿಟ್ಟಿದ್ದಾರೆ. ಆಕೆ ಪ್ರಕಾರ ವೈರಸ್ ಹೊರಬಂದದ್ದರ ಹಿಂದಿರುವುದು ಇನ್ಸ್ಟಿಟ್ಯೂಟ್ನ ನಿರ್ದೇಶಕ ವಾಂಗ್ ಯಾನ್ಯಿು. ಅಲ್ಲದೆ, ಕರೊನಾವೈರಸ್ನ ಇತಿವೃತ್ತವನ್ನೆಲ್ಲ ಅಮೆರಿಕ, ಕೆನಡಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ಗಳ ಶಿಷ್ಟ ಬೇಹುಗಾರಿಕಾ ಒಕ್ಕೂಟವಾದ ಫೈವ್ ಐಸ್ ನೆಟ್ವರ್ಕ್ ವಿವರವಾಗಿ ಹೆಕ್ಕಿ ದಾಖಲಿಸಿದೆ.
ತನ್ನ ಜಗನ್ನಾಯಕನ ಕನಸನ್ನು ಸಾಕಾರಗೊಳಿಸಿಕೊಳ್ಳುವ ಹಾದಿಯಲ್ಲಿ ಮುಂದೆಂದೋ ಉಪಯೋಗಿಸಲೆಂದು ಚೀನಾ ಬಾವಲಿ ಕರೊನಾವೈರಸ್ ತಜ್ಞೆ, ‘ಬ್ಯಾಟ್ವುಮನ್’ ಬಿರುದಾಂಕಿತೆ ಡಾ.ಶಿ ಝೆಂಗ್ಲಿ ನೇತೃತ್ವದ ವಿಜ್ಞಾನಿಗಳ ತಂಡದ ಸಹಾಯದಿಂದ ರಹಸ್ಯವಾಗಿ ಸೃಷ್ಟಿಸಿಟ್ಟಿದ್ದ ಕರೊನಾವೈರಸ್ ಯಾರದೋ ಅಚಾತುರ್ಯದಿಂದ ಸಮಯಕ್ಕೂ ಮೊದಲೇ ಲ್ಯಾಬ್ನಿಂದ ಹೊರಬಿತ್ತು. ಅದಾದದ್ದು ಕಳೆದ ವರ್ಷದ ಅಕ್ಟೋಬರ್ 6ರಂದು. ವೈರಸ್ ಹೊರಬಿದ್ದು ವೂಹಾನ್ ನಗರದಲ್ಲಿ ಹರಡತೊಡಗಿದಂತೆ ಅದನ್ನು ತನ್ನ ಉದ್ದೇಶಕ್ಕೆ ಬಳಸಿಕೊಳ್ಳಲು ಚೀನಾ ತರಾತುರಿಯ ಯೋಜನೆ ರೂಪಿಸಿತು. ವೂಹಾನ್ ನಗರದ ಜತೆಗಿನ ಇತರ ಚೀನೀ ನಗರಗಳ ಎಲ್ಲ ಸಂಪರ್ಕವನ್ನು ಕತ್ತರಿಸಿ, ಅದೇ ವೂಹಾನ್ ಹೊರಜಗತ್ತಿನೊಡನೆ ವಿಮಾನಸಂಪರ್ಕವನ್ನು ಜಾರಿಯಲ್ಲಿಟ್ಟುಕೊಳ್ಳುವಂತೆ ನೋಡಿಕೊಂಡಿತು. ಹೀಗೆ ವೈರಸ್ ಅನ್ನು ಹೊರಜಗತ್ತಿಗೆ ಹರಡುತ್ತಲೇ ತನ್ನ ಎಲ್ಲೆಯೊಳಗೆ ಅದನ್ನು ತಡೆಯಲು ಕ್ರಮಗಳನ್ನೂ ರಹಸ್ಯವಾಗಿ ತೆಗೆದುಕೊಂಡಿತು.
ಕರೊನಾ ವೈರಸ್ ಮನುಷ್ಯನಿಂದ ಮನುಷ್ಯನಿಗೆ ಹರಡುವುದಿಲ್ಲ ಎಂದು ಹೇಳುತ್ತಲೇ ಜನವರಿ ತಿಂಗಳ ಮೊದಲ ಮೂರುವಾರಗಳಲ್ಲಿ 200 ಕೋಟಿ ಮಾಸ್ಕ್ಗಳನ್ನು ಹೊರಗಿನಿಂದ ಆಮದು ಮಾಡಿಕೊಂಡಿದ್ದಲ್ಲದೆ 40 ಲಕ್ಷ ಪಿಪಿಇ ಕಿಟ್ಗಳನ್ನು ತಯಾರಿಸಿಟ್ಟುಕೊಂಡಿತು. ಚೀನೀ ದುರಾಲೋಚನೆಯಂತೆ ಯುರೋಪಿಯನ್ ಕ್ರಿಶ್ಚಿಯನ್ ರಾಷ್ಟ್ರಗಳು ಕರೊನಾ ದಳ್ಳುರಿಗೆ ಸಿಲುಕಿಹೋದಾಗ ಅದನ್ನು ನಿಭಾಯಿಸುವಲ್ಲಿ ಅವು ವಿಫಲವಾಗಲಿ ಎಂದೇ ಚೀನಾ ಅವುಗಳಿಗೆ ಕಳಪೆ ಮತ್ತು ಸೋಂಕುಪೂರಿತ ಪಿಪಿಇ ಕಿಟ್ ಮತ್ತಿತರ ವೈದ್ಯಕೀಯ ಸಲಕರಣೆಗಳನ್ನು ರಫ್ತು ಮಾಡಿತು! ಅಮೆರಿಕದ ಕಂಪನಿಗಳು ಚೀನಾದಲ್ಲಿ ಸ್ಥಾಪಿಸಿದ್ದ ಕಾರ್ಖಾನೆಗಳಲ್ಲಿ ಉತ್ಪಾದನೆಯಾದ ಮಾಸ್ಕ್ ಮತ್ತಿತರ ವೈದ್ಯಕೀಯ ಸಾಮಗ್ರಿಗಳು ಅಮೆರಿಕಕ್ಕೆ ತಲುಪದಂತೆ ಚೀನೀ ಸರ್ಕಾರ ತಡೆಹಿಡಿಯಿತು. ಇಷ್ಟೆಲ್ಲವನ್ನೂ ಚೀನಾ ಮಾಡಿದ್ದು ಅಮೆರಿಕ ಸೇರಿ ಹೊರಜಗತ್ತು ಕರೊನಾ ವೈರಸ್ನಿಂದ ನಲುಗಿಹೋಗಲಿ, ಆ ಮೂಲಕ ಜಾಗತಿಕ ನಾಯಕನ ಪಟ್ಟ ತನಗೆ ಅವಧಿಗೂ ಮುನ್ನವೇ ದೊರೆಯಲಿ ಎಂದು!
ಟ್ರಂಪ್ ಚೀನಾ ವಿರುದ್ಧ ಒಂದೂವರೆ ವರ್ಷದ ಹಿಂದೆಯೇ ಜಾರಿಗೆ ತಂದಿದ್ದ ಕ್ರಮಗಳ ಮಹತ್ವ ನಮಗರಿವಾಗುವುದು ಇಲ್ಲಿ. ಚೀನೀ ಆದಾಯವನ್ನು ಹಂತಹಂತವಾಗಿ ಕುಗ್ಗಿಸಲು ಅವರು ಕ್ರಮ ತೆಗೆದುಕೊಳ್ಳದೆ ಇದ್ದಲ್ಲಿ ಇಂದು ಕರೊನಾ ಸಂದರ್ಭದಲ್ಲಿ ಚೀನೀ ಶಾಂತಿಕಂಟಕ ಯೋಜನೆಗಳು ಇನ್ನೆಷ್ಟು ಘಾತಕವಾಗಿರುತ್ತಿದ್ದವು! ಚೀನೀ ಸೇನೆ ತನ್ನ ಗಡಿಯನ್ನೇ ದಾಟಿ ಹೊರಬರದಂತಹ ಸ್ಥಿತಿಯನ್ನು ಟ್ರಂಪ್ರ ಅಮೆರಿಕ ತನ್ನ ನೌಕಾದಳ ಮತ್ತು ವಾಯುದಳಗಳನ್ನು ಉಪಯೋಗಿಸಿ ನಿರ್ವಿುಸಿಬಿಟ್ಟಿದೆ. ಇಷ್ಟರ ಮಟ್ಟಿಗೆ ಟ್ರಂಪ್ ಚೀನೀ ಕಮ್ಯೂನಿಸ್ಟರ ಜಗತ್ಕಂಟಕ ಯೋಜನೆಗಳನ್ನು ಮಣ್ಣುಗೂಡಿಸಿದ್ದಾರೆ, ಜಾಗತಿಕ ಶಾಂತಿಯನ್ನು ಕಾಪಾಡಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ಇಸ್ರೇಲ್ ಜತೆಗೆ ಶಾಂತಿ ಒಪ್ಪಂದಗಳನ್ನು ಮಾಡಿಕೊಳ್ಳುವಂತೆ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಬಹರೈನ್ಗಳ ಮನವೊಲಿಸುವುದರಲ್ಲಿ ಟ್ರಂಪ್ ಯಶಸ್ವಿಯಾಗಿದ್ದಾರೆ. ಅವರ ಮಧ್ಯಸ್ಥಿಕೆಯಲ್ಲಿ ಆ ಮೂರೂ ಅರಬ್ ರಾಷ್ಟ್ರಗಳು ಇದೇ ಸೆ.15ರಂದು ಐತಿಹಾಸಿಕ ಒಪ್ಪಂದಕ್ಕೆ ಸಹಿಹಾಕಿ ಯಹೂದೀಯರು ಮತ್ತು ಮುಸ್ಲಿಮರ ನಡುವಿನ ವೈರವನ್ನು ತಹಬಂದಿಗೆ ತಂದಿದ್ದಾರೆ. ಅಬ್ರಹಾಂನ ಎರಡು ಸಂತಾನಗಳಾದ ಯಹೂದೀಯರು, ಮುಸ್ಲಿಮರು ಮತ್ತೊಂದು ಸಂತಾನವಾದ ಕ್ರಿಶ್ಚಿಯನ್ನರ ಸಹಕಾರದಿಂದ ಸಹಿಹಾಕಿದ ಕಾರಣದಿಂದಾಗಿ ‘ಅಬ್ರಹಾಂ ಒಪ್ಪಂದ’ ಎಂದು ಹೆಸರಾಗಿರುವ ಈ ಒಪ್ಪಂದ ಪಶ್ಚಿಮ ಏಷ್ಯಾವಷ್ಟೇ ಅಲ್ಲ, ಜಾಗತಿಕ ಶಾಂತಿಯಲ್ಲೂ ಮಹತ್ತರ ಬೆಳವಣಿಗೆ. ಅರಬ್-ಇಸ್ರೇಲ್ ವೈಮನಸ್ಯದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ನೋಡಿದ್ದ ಚೀನಾ ಮತ್ತು ಇರಾನ್ ಕುಟಿಲ ಯೋಜನೆಗಳಿಗೂ ಈ ಒಪ್ಪಂದ ತಣ್ಣೀರೆರಚಿದೆ.
ಹೀಗೆ, 4 ವರ್ಷಗಳ ಹಿಂದೆ ಊಹಿಸಿಯೂ ಇರದ ಮಟ್ಟದಲ್ಲಿ ವಿಶ್ವಶಾಂತಿಗೆ ಟ್ರಂಪ್ ಕಾಣಿಕೆ ನೀಡಿದ್ದಾರೆ. ಅಷ್ಟೇ ಅಲ್ಲ, ಸ್ಥಾನಕ್ಕನುಗುಣವಾಗಿ ಹೇಗೆ ಬದಲಾಗಬೇಕೆನ್ನುವುದಕ್ಕೆ ಅದ್ಭುತ ಉದಾಹರಣೆಯೂ ಆಗಿದ್ದಾರೆ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)