ಹೊರಬಂದ ಷಿ, ಒಳಹೋದ ಟ್ರಂಪ್ ಜಗಕ್ಕೇನು ಕಾದಿದೆ?

America China
Published on

ಇಂದು ಜಗತ್ತಿನ ಎರಡು ಅತಿ ದೊಡ್ಡ ಅರ್ಥವ್ಯವಸ್ಥೆಗಳಾದ ಅಮೆರಿಕ ಮತ್ತು ಚೀನಾಗಳಲ್ಲಿ ಕುತೂಹಲಕರ ಬೆಳವಣಿಗೆಗಳನ್ನು ಕಾಣುತ್ತಿದ್ದೇವೆ. ಅಮೆರಿಕದಲ್ಲಿನ ಘಟನಾವಳಿಗಳು ಅನಪೇಕ್ಷಣೀಯವೆನಿಸಿದರೆ ಚೀನಾದಲ್ಲಿನ ಬೆಳವಣಿಗೆಗಳು ಗೊಂದಲಮಯವೆನಿಸುತ್ತಿವೆ ಹಾಗೂ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಮೂಡಿಸುತ್ತವೆ. ಮೊದಲಿಗೆ ಅಮೆರಿಕದತ್ತಲೇ ನೋಡುವುದಾದರೆ ಅಲ್ಲಿ ಏಕಾಏಕಿ ಭುಗಿಲೆದ್ದ ಜನಾಂಗೀಯ ಅಶಾಂತಿ ಅಲ್ಲಿನ ಸಮಾಜದ ಆಳ ಬಿರುಕೊಂದನ್ನು ಜಗತ್ತಿನ ಮುಂದೆ ಮತ್ತೆ ತೆರೆದಿಟ್ಟಿದೆ. ಬಿಳಿಯ ಅಮೆರಿಕನ್ನರು ಆಫ್ರಿಕನ್-ಅಮೆರಿಕನ್ ಜನಾಂಗದವರನ್ನು ಕೊಲ್ಲುವುದು ಘಟಿಸುತ್ತಲೇ ಇದೆ. ಪ್ರತೀಸಲ ಪ್ರತಿಭಟನೆಗಳಾಗುತ್ತವೆ, ಒಂದಷ್ಟು ದಿನ ಅಶಾಂತ ಪರಿಸ್ಥಿತಿಯುಂಟಾಗುತ್ತದೆ, ಆಮೇಲೆ ಎಲ್ಲವೂ ಶಾಂತ.

ಆದರೆ ಈಗಿನ ಜಾರ್ಜ್ ಫ್ಲಾಯ್ಡ್ ಹತ್ಯೆಯ ಪರಿಣಾಮ ಸ್ವಲ್ಪ ಬೇರೆಯೇ ಆಗಿರುವಂತಿದೆ. ಮೇ 25ರಂದು

ಮಿನಿಯಾಪೊಲೀಸ್ ನಗರದಲ್ಲಿ ನಕಲಿ ನೋಟುಗಳನ್ನು ನೀಡಿ ಸಿಗರೇಟ್ ಖರೀದಿಸಿದನೆಂಬ ಆಪಾದನೆಯ ಮೇಲೆ ಬಂಧಿತನಾದ ಫ್ಲಾಯ್ಡ್ನ ಕೊನೆಯ ಗಳಿಗೆಗಳ ವಿಡಿಯೋ ವೈರಲ್ ಆಗಿದೆ. ಫ್ಲಾಯ್ಡ್ನನ್ನು ನೆಲಕ್ಕೆ ಕೆಡವಿ ಅವನ ಕೊರಳಿನ ಮೇಲೆ ತನ್ನ ಮಂಡಿಯನ್ನಿಟ್ಟು ಒತ್ತಿದ ಪೊಲೀಸ್ ಅಧಿಕಾರಿ ಡೆರೆಕ್ ಚಾವಿನ್, ‘ನನಗೆ ಉಸಿರಾಡಲಾಗುತ್ತಿಲ್ಲ’ ಎಂದು ಅತೀವ ಕಷ್ಟದಲ್ಲಿ ದನಿ ಹೊರಡಿಸಿದ ಫ್ಲಾಯ್ಡ್- ಈ ದೃಶ್ಯಗಳು ಮನುಷ್ಯರಾದವರ ಹೃದಯಗಳನ್ನು ಕಲಕದಿರಲು ಸಾಧ್ಯವೇ ಇಲ್ಲ. ಪರಿಣಾಮವಾಗಿ ಪ್ರತಿಭಟನೆಗಳು ರಾಜಧಾನಿ ವಾಷಿಂಗ್​ಟನ್ ಡಿಸಿಗೆ ಹಬ್ಬುವಷ್ಟು ವ್ಯಾಪಕವಾಗಿವೆ. ಆದಾಗ್ಯೂ, ಎರಡೇ ತಿಂಗಳ ಹಿಂದೆ ತನ್ನದೇ ಮನೆಯಲ್ಲಿ ಪೊಲೀಸರಿಂದ ಹತ್ಯೆಗೀಡಾದ ಅಮಾಯಕ ಕಪ್ಪು ಮಹಿಳೆ ಬ್ರಿಯಾನಾ ಟೇಲರ್ ಪರವಾಗಿ ಎದ್ದ ದನಿಗಳಿಗಿಂತಲೂ ಉಗ್ರವಾಗಿ ಇಂದು ಆಪಾದಿತ ಫ್ಲಾಯ್ಡ್ ಪರವಾಗಿ ಎದ್ದಿರುವ ಪ್ರತಿಭಟನೆಯಲ್ಲಿ ಎಡಪಂಥೀಯರ ಪಾತ್ರವನ್ನೂ, ಅವರ ಹಿಂದೆ ಚೀನಾ ಇರುವುದನ್ನೂ ನಾವು ಗುರುತಿಸಲೇಬೇಕು. ಕರೊನಾ ಸೋಂಕಿನ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ವಿದೇಶಾಂಗ ಕಾರ್ಯದರ್ಶಿ ಮೈಕೇಲ್ ಪಾಂಪಿಯೋ ದಿನಬೆಳಗಾದರೆ ಚೀನಾವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದುದಕ್ಕೆ ಪ್ರತಿಯಾಗಿ ಅಮೆರಿಕವನ್ನು ಇಕ್ಕಟ್ಟಿಗೆ ಸಿಲುಕಿಸಲು, ಹಾಂಕಾಂಗ್ ಬೆಳವಣಿಗೆಗಳನ್ನು ಕುರಿತಂತೆ ಅಮೆರಿಕದ ಮಾತಿನ ಬಾಣಗಳಿಗೆ ಪ್ರತಿಬಾಣ ಪ್ರಯೋಗಿಸಲು ಚೀನೀ ಕಮ್ಯೂನಿಸ್ಟ್ ಪಾರ್ಟಿಗೆ ಸಿಕ್ಕಿದ ಅಸ್ತ್ರ ಈ ಫ್ಲಾಯ್ಡ್ ಪ್ರಕರಣ. ಕಮ್ಯೂನಿಸ್ಟ್ ಪಾರ್ಟಿಯ ತುತ್ತೂರಿ ‘ಗ್ಲೋಬಲ್ ಟೈಮ್ಸ್’ಗೆ ಈಗ ಹಬ್ಬ. ‘ಹಾಂಕಾಂಗ್​ನ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಎಂದು ನಮಗೆ ಉಪದೇಶ ನೀಡುತ್ತಿದ್ದಿರಲ್ಲ, ಈಗ ನೀವು ಶ್ವೇತಭವನದಿಂದ ಹೊರಬಂದು ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಿ’ ಎಂದು ಆ ಪತ್ರಿಕೆ ಅಧ್ಯಕ್ಷ ಟ್ರಂಪ್​ರಿಗೆ ಪ್ರತಿಉಪದೇಶ ನೀಡಿದೆ. ‘ಬಂಕರ್​ನಲ್ಲೇಕೆ ಅಡಗಿ ಕೂತಿದ್ದೀರಿ? ಹೊರಗೆ ಬನ್ನಿ’ ಎಂದೂ ಪತ್ರಿಕೆ ಟ್ರಂಪ್​ರನ್ನು ಕೆಣಕಿದೆ. ಇಲ್ಲಿಗೆ ಎರಡೂ ದೈತ್ಯಶಕ್ತಿಗಳ ಮಾತಿನ ಸಮರ ಮತ್ತೊಂದು ಮಜಲಿಗೇರಿದಂತಾಗಿದೆ, ಜತೆಗೆ ಈ ವಾಗ್ವಾದ ವಿಪರೀತಕ್ಕೆ ಹೋಗಬಹುದೇ, ಅಂದರೆ ಪರಸ್ಪರರಿಂದ ಅಚಾನಕ್ ಶಸ್ತ್ರಾಸ್ತ್ರ ದಾಳಿಯನ್ನು ವಾಷಿಂಗ್​ಟನ್ ಮತ್ತು ಬೀಜಿಂಗ್ ಎದುರುನೋಡುತ್ತಿರಬಹುದೇ, ಅದಕ್ಕಾಗಿ ಸೂಕ್ತ ತಯಾರಿಗಳನ್ನು ಮಾಡಿಕೊಳ್ಳುತ್ತಿರಬಹುದೇ ಎಂಬ ಅನುಮಾನಗಳನ್ನೂ ಉಂಟುಮಾಡುತ್ತವೆ. ಈ ಅನುಮಾನಗಳ ಮೂಲವನ್ನು ಟ್ರಂಪ್ ಬಂಕರ್​ನೊಳಗೆ ಅಡಗಿ ಕೂತ ವದಂತಿಯಿಂದಲೇ ಪ್ರಾರಂಭಿಸೋಣ.

ಎರಡನೆಯ ಮಹಾಯುದ್ಧದ ದಿನಗಳಲ್ಲಿ ಅಮೆರಿಕ ಮೇಲೆ ಜಪಾನ್ ವೈಮಾನಿಕ ದಾಳಿ ಎಸಗಬಹುದೆಂಬ ಆತಂಕವಿತ್ತು. ಅಂತಹ ಸನ್ನಿವೇಶದಲ್ಲಿ ಸೂಕ್ತ ಪ್ರತಿದಾಳಿ ಎಸಗಲು ಅಗತ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ಅಧ್ಯಕ್ಷರು ಮತ್ತಿತರ ಪ್ರಮುಖ ರಾಷ್ಟ್ರನಾಯಕರನ್ನು ಕಾಪಾಡಿ ಉಳಿಸಿಕೊಳ್ಳುವ ಉದ್ದೇಶದಿಂದ ಬಾಂಬ್-ನಿರೋಧಕ ಬಂಕರ್​ನ ನಿರ್ವಣವನ್ನು ಅಧ್ಯಕ್ಷ ಫ್ರಾಂಕ್ಲಿನ್ ರೂಸ್​ವೆಲ್ಟ್ ರೂಪಿಸಿದರು. ಆಗ ಶ್ವೇತಭವನದ ಆವರಣದಲ್ಲಿ ಹಲವಾರು ಬಂಕರ್​ಗಳು ನಿರ್ವಣಗೊಂಡವು. ಶೀತಲಸಮರದ ದಿನಗಳಲ್ಲಿ ಅಣ್ವಸ್ತ್ರ ದಾಳಿಯನ್ನೂ ತಾಳಿಕೊಳ್ಳಬಲ್ಲ ಬಂಕರ್​ಗಳು ನಿರ್ವಣಗೊಂಡವು. ಕೆಲವಂತೂ ನೆಲದೊಳಗೆ ಐದು ಮಹಡಿಗಳಷ್ಟು ವಿಸ್ತಾರವಾಗಿವೆ ಮತ್ತು ಅವುಗಳಲ್ಲಿ ಆರು ತಿಂಗಳಷ್ಟು ಕಾಲಕ್ಕೆ ಅಗತ್ಯವಿರುವಷ್ಟು ಆಮ್ಲಜನಕ ಮತ್ತು ಆಹಾರಪದಾರ್ಥಗಳ ದಾಸ್ತಾನು ಯಾವಾಗಲೂ ಇರುವಂತೆ ವ್ಯವಸ್ಥೆ ಮಾಡಲಾಗಿದೆ. ಇವುಗಳಲ್ಲಿ ಪ್ರಮುಖವಾದುದು 'Presidential Emergency Operations Center' (PEOC). ಹೊರಜಗತ್ತಿಗೆ ತಿಳಿದಿರುವ ಪ್ರಕಾರ ಈ ಬಂಕರ್ ಕೊನೆಯ ಬಾರಿಗೆ ಉಪಯೋಗಿಸ ಲ್ಪಟ್ಟದ್ದು 2001ರ ಸೆಪ್ಟೆಂಬರ್ 11ರಂದು, ಅಲ್-ಖಯೀದಾ ದಾಳಿಯಾದಾಗ.

ಫ್ಲಾಯ್ಡ್ ಪ್ರಕರಣದ ಕುರಿತಾದ ಪ್ರತಿಭಟನೆಗಳು ಕಳೆದವಾರ ಉತ್ತುಂಗದಲ್ಲಿದ್ದಾಗ 500-600 ಪ್ರತಿಭಟನಾಕಾರರು ಶ್ವೇತಭವನದ ಮುಂದೆ ಜಮಾಯಿಸಿದ್ದರು. ಅವರಲ್ಲಿ ಕೆಲವರಾದರೂ ಶ್ವೇತಭವನಕ್ಕೆ ಪ್ರವೇಶಿಸಿಬಿಟ್ಟರೆ ಅಧ್ಯಕ್ಷರ ಸುರಕ್ಷೆಗೆ ಅಪಾಯವೊದಗುತ್ತದೆಂದು ಹೆದರಿದ ಸುರಕ್ಷಾ ಪಡೆಗಳು ಟ್ರಂಪ್​ರನ್ನು PEOC ಬಂಕರ್​ನೊಳಗೆ ಕಳುಹಿಸಿದವೆಂದೂ, ಅವರು ಒಂದು ತಾಸು ಅಲ್ಲಿ ಅಡಗಿ ಕುಳಿತರೆಂದೂ ವದಂತಿಗಳು ದಟ್ಟವಾಗಿ ಹರಿದಾಡಿದವು. ತಾವು ಬಂಕರ್​ನೊಳಗೆ ಹೋದದ್ದನ್ನು ಅಧ್ಯಕ್ಷ ಟ್ರಂಪ್ ಅಲ್ಲಗಳೆಯಲಿಲ್ಲ. ಆದರೆ ಅವರು ಹೇಳುವುದು ಬಂಕರ್​ನೊಳಗಿರುವ ವ್ಯವಸ್ಥೆಗಳನ್ನು ಪರಿಶೀಲಿಸುವ ಉದ್ದೇಶದಿಂದಷ್ಟೇ ತಾವು ಅಲ್ಲಿಗೆ ಹೋಗಿದ್ದು ಎಂದು. ಪ್ರಶ್ನೆ ಇಷ್ಟೇ- ಹಾಗೆ ಹೇಳುವ ಮೂಲಕ ಟ್ರಂಪ್ ಅಮೆರಿಕ ಸರ್ಕಾರದ ಈ ಕ್ಷಣದ ಅತ್ಯಂತ ದೊಡ್ಡ ಆತಂಕವೊಂದರ ಸುಳಿವನ್ನು ಜಗತ್ತಿಗೆ ನೀಡಿಬಿಟ್ಟರೇ?

ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ, ಪ್ರತಿಭಟಿಸುವ ಹಕ್ಕನ್ನೂ ಜತನದಿಂದ ಪೋಷಿಸುವ ಅಮೆರಿಕನ್ ವ್ಯವಸ್ಥೆಯಲ್ಲಿ ಶ್ವೇತಭವನದ ಮುಂದೆ ನೂರಾರು ಪ್ರದರ್ಶನಕಾರರು ಜಮಾಯಿಸುವುದು ಅಪರೂಪವೇನಲ್ಲ ಮತ್ತು ಅವರೆಲ್ಲರನ್ನೂ ಕಟ್ಟಡದಿಂದ ಸಾಕಷ್ಟು ದೂರದಲ್ಲಿಡಲು ಅಲ್ಲಿನ ಸುರಕ್ಷಾಪಡೆ ಯಾವಾಗಲೂ ಸಿದ್ಧವಾಗಿಯೇ ಇರುತ್ತದೆ. ಪ್ರದರ್ಶನಕಾರರಿಗೆ ಹೆದರಿ ಅಧ್ಯಕ್ಷರು ಬಂಕರ್​ನತ್ತ ಓಡುವ ಅಗತ್ಯವೇ ಬರುವುದಿಲ್ಲ. ಹಾಗೇನಾದರೂ ಆದರೆ ಅದು ಅಮೆರಿಕದ ಇಡೀ ರಕ್ಷಣಾವ್ಯವಸ್ಥೆಗೇ ಅವಮಾನ. ಹೀಗಾಗಿ ಬಂಕರ್​ನೊಳಗೆ ಹೋದದ್ದು ಅದನ್ನು ಪರಿಶೀಲಿಸುವ ಉದ್ದೇಶದಿಂದ ಎಂದು ಅಧ್ಯಕ್ಷ ಟ್ರಂಪ್ ಹೇಳಿದ್ದು ಸತ್ಯಕ್ಕೆ ಹತ್ತಿರ ಎಂದು ಊಹಿಸಬಹುದು. ಈ ಪರಿಶೀಲನೆಯ ಅಗತ್ಯ ಅವರಿಗೆ ಬಂದದ್ದು ಹೇಗೆ?

ಈಗ ಚೀನಾದತ್ತ ಹೊರಳೋಣ. ರಹಸ್ಯವೇ ಸಾಕಾರವಾಗಿರುವ ಚೀನಾದಲ್ಲಿ ಯಾವ ಬಗೆಯ ಸುರಕ್ಷಾವ್ಯವಸ್ಥೆಗಳಿವೆ ಎನ್ನುವುದು ಕಮ್ಯೂನಿಸ್ಟ್ ಪಾರ್ಟಿಯ ಅತ್ಯುಚ್ಚ ನಾಯಕವರ್ಗದ ಹೊರತಾಗಿ ಮತ್ತಾರಿಗೂ ತಿಳಿಯುವ ಸಾಧ್ಯತೆಯೇ ಇಲ್ಲ. ಆದಾಗ್ಯೂ, ಅದು ಅಮೆರಿಕದಲ್ಲಿ ಇರುವುದಕ್ಕಿಂತಲೂ ಹೆಚ್ಚು ಸಕ್ಷಮವಾದದ್ದು ಮತ್ತು ವ್ಯಾಪಕವಾದದ್ದು ಎಂದು ಧಾರಾಳವಾಗಿ ಊಹಿಸಬಹುದು. ನಮ್ಮ ಸದ್ಯದ ವಿಶ್ಲೇಷಣೆಗೆಗೆ ಅದು ಮುಖ್ಯವಲ್ಲ, ಜಗತ್ತಿಗೆ ಮುಖ್ಯವಾಗಿ ಕ್ರಿಶ್ಚಿಯನ್ ರಾಷ್ಟ್ರಗಳಿಗೆ ಕರೊನಾ ಸೋಂಕು ಹರಡಿ ಚೀನಾ ಈಗಾಗಲೇ ‘ವೈರಸ್ ಯುದ್ಧ’ವನ್ನು ಆರಂಭಿಸಿದೆ. ಅದನ್ನು ಶಸ್ತ್ರಾಸ್ತ್ರ ಸಮರವನ್ನಾಗಿ ಬೆಳೆಸುವ ಉದ್ದೇಶ ಚೀನೀ ಸರ್ಕಾರಕ್ಕಿದೆಯೇ? ಇದಕ್ಕೆ ನಿಖರ ಉತ್ತರವಿಲ್ಲ. ಆದರೆ ಇತ್ತೀಚಿನ ಕೆಲ ಬೆಳವಣಿಗೆಗಳನ್ನು ಗಮನಿಸೋಣ.

ಜನವರಿಯಲ್ಲಿ ಕರೊನಾ ಮಾರಿ ಚೀನಾವನ್ನು ದಾಟಿ ಹೊರಜಗತ್ತಿಗೆ ಅಮರಿಕೊಂಡಾಗ ಅಧ್ಯಕ್ಷ ಷಿ ಜಿನ್​ಪಿಂಗ್ ಏಕಾಏಕಿ ಮರೆಯಾಗಿಹೋದರು. ಅಮೆರಿಕ, ಆಸ್ಟ್ರೇಲಿಯಾದ ವಾಗ್ದಾಳಿಗಳಿಗೆ ಪ್ರತಿಯಾಗಿ ಚೀನಾದ ಪರವಾಗಿ, ಅದರ ಅಧ್ಯಕ್ಷನ ಪರವಾಗಿ ಹೇಳಿಕೆಗಳನ್ನು ನೀಡತೊಡಗಿದ್ದು ಗ್ಲೋಬಲ್ ಟೈಮ್ಸ್ ಪತ್ರಿಕೆಯ ಹರಕುಬಾಯಿಯ ಪ್ರಧಾನ ಸಂಪಾದಕ ಹು ಷಿಜಿನ್, ವಿದೇಶಾಂಗ ಇಲಾಖೆಯ ವಕ್ತಾರ ಝಾವೋ ಲಿಜಿಯಾಂಗ್ ಮತ್ತು ವಿವಿಧ ದೇಶಗಳಲ್ಲಿನ ಚೀನೀ ರಾಯಭಾರಿಗಳು. ಇವರ ಹೇಳಿಕೆಗಳು ಅಸಹ್ಯಕರ, ಅರಾಜತಾಂತ್ರಿಕ ಭಾಷೆ ಮತ್ತು ಬೆದರಿಕೆಗಳಿಂದ ಕೂಡಿರುತ್ತಿದ್ದವು. ಚೀನೀಯರ ರಾಜತಂತ್ರದಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಈ ಬದಲಾವಣೆಯನ್ನು ‘ವೂಲ್ಪ್ ವಾರಿಯರ್ಸ್ ಡಿಪ್ಲೊಮೆಸಿ’ ಎಂದು ಹೊರಜಗತ್ತು ಹೆಸರಿಸಿದೆ. ಏನೀ ರಾಜತಂತ್ರ?

ನಾಲ್ಕು ದಶಕಗಳ ಹಿಂದೆ ಚೀನಾವನ್ನು ಆಧುನಿಕತೆಗೆ ಮುಖಾಮುಖಿಯಾಗಿಸಿ ಅದರ ಆರ್ಥಿಕ ಅಭ್ಯುದಯಕ್ಕೆ ನಾಂದಿ ಹಾಡಿದ ಡೆಂಗ್ ಷಿಯಾವೋಪಿಂಗ್ ಕಮ್ಯೂನಿಸ್ಟ್ ಪಾರ್ಟಿಗೆ ಕೊಟ್ಟ ಮಂತ್ರ-Hide your strength, Bide your time. ಅದರ ಪ್ರಕಾರ ಚೀನೀ ರಾಜತಂತ್ರಜ್ಞರು ತಮ್ಮ ದೇಶದ ಶಕ್ತಿಯ ಬಗ್ಗೆ ಕಡಿಮೆ ಮಾತಾಡುವುದನ್ನೂ, ಯಾವುದೇ ಕೃತ್ಯಕ್ಕೆ ಸೂಕ್ತ ಸಮಯಕ್ಕಾಗಿ ಕಾಯುವುದನ್ನೂ ಅಭ್ಯಾಸ ಮಾಡಿಕೊಂಡರು. ಡೆಂಗ್​ರ ಉತ್ತರಾಧಿಕಾರಿಗಳಾದ ಜಿಯಾಂಗ್ ಝೆಮಿನ್ (1992-2002) ಮತ್ತು ಹು ಜಿಂಟಾವೋ (2002-2012) ಇದೇ ನೀತಿ ಅನುಸರಿಸಿ ದರು. ಆ ಪ್ರಕಾರ ಆ ಎರಡು ದಶಕಗಳಲ್ಲಿ ಚೀನಾದ ಆರ್ಥಿಕ ಮತ್ತು ಸೇನಾ ಶಕ್ತಿಗಳು ಅಗಾಧವಾಗಿ ಏರಿದರೂ ಅವುಗಳ ಪ್ರದರ್ಶನಕ್ಕೆ ಚೀನಾ ಮುಂದಾಗಲಿಲ್ಲ. ಹೀಗಾಗಿ, ಅಂತಾರಾಷ್ಟ್ರಿಯ ರಂಗದಲ್ಲಿ ಚೀನಾದ್ದು ‘ಶಾಂತಿಯುತ ಉತ್ಕರ್ಷ’ ಅಂದರೆ ಜಾಗತಿಕ ಮಹಾಶಕ್ತಿಯಾಗಿ ಚೀನಾದ ಉದಯ ಇತರರಿಗೆ ಅಪಾಯಕಾರಿಯಲ್ಲ ಎಂಬ ಅಭಿಪ್ರಾಯಕ್ಕೆ ಹೊರಜಗತ್ತು ಬಂತು. 2012ರ ಅಂತ್ಯದಲ್ಲಿ ಷಿ ಜಿನ್​ಪಿಂಗ್ ಅಧ್ಯಕ್ಷರಾದ ಮೇಲೆ ತಮ್ಮ ನವವಸಾಹತುಶಾಹಿ ಯೋಜನೆ ‘ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್’ ಅನ್ನು ಹೆಚ್ಚು ಸದ್ದುಗದ್ದಲವಿಲ್ಲದೇ ತಣ್ಣಗೆ ಕಾರ್ಯರೂಪಕ್ಕಿಳಿಸಿದರು. ಆಗಲೂ ಚೀನೀ ರಾಜತಂತ್ರಜ್ಞರು ಹೊರಜಗತ್ತಿನ ಜತೆಗಿನ ವ್ಯವಹಾರಗಳಲ್ಲಿ ಸಂಯಮ ಕಾಪಾಡಿಕೊಂಡರು. ಅದೆಲ್ಲವೂ ಬದಲಾದದ್ದು 2015-17ರಲ್ಲಿ.

ಚೀನೀ ಸರ್ಕಾರಿ ಚಲನಚಿತ್ರ ನಿರ್ಮಾಣ ಸಂಸ್ಥೆ 2015ರಲ್ಲಿ ‘ವೂಲ್ಪ್ ವಾರಿಯರ್ಸ್-1’ ಮತ್ತು 2017ರಲ್ಲಿ ‘ವೂಲ್ಪ್ ವಾರಿಯರ್ಸ್-2’ ಎಂಬ ಚಲನಚಿತ್ರಗಳನ್ನು ನಿರ್ವಿುಸಿತು. ‘ಚೀನಾಗೆ ಕೇಡು ಬಯಸುವವರು ನಮ್ಮ ಗಡಿಯಿಂದಾಚೆಗೆ ಎಷ್ಟು ದೂರದಲ್ಲಿದ್ದರೂ ಅವರನ್ನು ಹುಡುಕಿ ಶಿಕ್ಷಿಸುತ್ತೇವೆ’ ಎಂಬ ಚಾರಿತ್ರಿಕ ಹಾನ್ ರಾಜವಂಶದ ಸಂದೇಶವನ್ನು ಈ ಚಿತ್ರಗಳ ಪಾತ್ರಗಳು ತಮ್ಮ ಆಕ್ರಮಣಕಾರಿ ಭಾಷೆ ಮತ್ತು ನಿರ್ಭೀತ ಕೃತ್ಯಗಳ ಮೂಲಕ ಪ್ರದರ್ಶಿಸುತ್ತವೆ. 1980ರ ದಶಕದಲ್ಲಿ ಹಾಲಿವುಡ್ ನಿರ್ವಿುಸಿದ್ದ Rambo – 1, Rambo – 2

ಚಿತ್ರಗಳಂಥಿದ್ದ ಇವು ಚೀನಾದಲ್ಲಿ ಅಪಾರ ಜನಪ್ರಿಯವಾಗಿ ಗಲ್ಲಾಪೆಟ್ಟಿಗೆಯಲ್ಲಿ ಹಿಂದಿನ ಎಲ್ಲ ದಾಖಲೆಗಳನ್ನೂ ಮುರಿದುಹಾಕಿದವು. ಕೆಲವೇ ದಿನಗಳಲ್ಲಿ ಚೀನೀ ರಾಜತಂತ್ರಜ್ಞರು ತಮ್ಮ ನಡೆನುಡಿಯಲ್ಲಿ ‘ವೂಲ್ಪ್ ವಾರಿಯರ್ಸ್’ ಪಾತ್ರಗಳನ್ನು ಅನುಕರಿಸತೊಡಗಿದರು. ಹೀಗಾಗಿ ಅವರ ಈ ಬದಲಾದ ಸ್ವಭಾವವನ್ನು ಪಶ್ಚಿಮದ ಸುದ್ದಿಮಾಧ್ಯಮಗಳು ‘ವೂಲ್ಪ್ ವಾರಿಯರ್ಸ್ ಡಿಪ್ಲೊಮೆಸಿ’ ಎಂದು ಬಣ್ಣಿಸಿದವು ಮತ್ತು ಆ ಸ್ವಭಾವವನ್ನು ಅತ್ಯುಗ್ರವಾಗಿ ಪ್ರದರ್ಶಿಸುತ್ತಿರುವ ವಿದೇಶಾಂಗ ಇಲಾಖೆಯ ವಕ್ತಾರ ಝಾವೋ ಲಿಜಿಯಾಂಗ್​ನನ್ನು ‘ವೂಲ್ಪ್ ವಾರಿಯರ್ಸ್ ಗ್ಯಾಂಗ್’ನ ನಾಯಕ ಎಂದು ಬಣ್ಣಿಸುತ್ತಿವೆ.

ಹೀಗೆ ವೂಲ್ಪ್ ವಾರಿಯರ್ಸ್ ಗ್ಯಾಂಗ್ ಜಗತ್ತನ್ನು ಬೆದರಿಸುತ್ತಿದ್ದಂತೇ ಅಧ್ಯಕ್ಷ ಷಿ ಮೇ ಮೊದಲವಾರದಲ್ಲಿ ಅಜ್ಞಾತವಾಸದಿಂದ ಹೊರಬಂದರು, ಶಾನ್ಷಿ ಪ್ರಾಂತ್ಯದ ಬೌದ್ಧ ಮಂದಿರಕ್ಕೆ ಭೇಟಿ ನೀಡಿದರು, ಅಲ್ಲಲ್ಲಿ ಸಾಮಾನ್ಯ ಜನರೊಂದಿಗೆ ಮಾತಾಡಿದರು. ಮೇ 10ರಂದು ವಿಶ್ವ ತಾಯಂದಿರ ದಿನದಂದು ಷಿ ಅವರ ತಾಯಿ ಹತ್ತೊಂಬತ್ತು ವರ್ಷಗಳ ಹಿಂದೆ ಮಗನಿಗೆ ಮಾಡಿದ್ದ ಟೆಲಿಫೋನ್ ಕರೆಯೊಂದನ್ನು ಚೀನೀ ದೂರದರ್ಶನ ಮತ್ತೆಮತ್ತೆ ಪ್ರದರ್ಶಿಸಿತು. ಇದೆಲ್ಲವೂ ಅಧ್ಯಕ್ಷರನ್ನು ಜನರಿಗೆ ಹತ್ತಿರವಾಗಿಸಿ, ಅವರ ಮುಂದಿನ ಯಾವುದೋ ದೊಡ್ಡ ಕ್ರಮಕ್ಕೆ ಚೀನೀಯರ ಬೆಂಬಲ ಪಡೆದುಕೊಳ್ಳುವ ಸಾರ್ವಜನಿಕ ಸಂಪರ್ಕದ ಕಸರತ್ತಿನಂತೆ ಕಂಡವು.

ಅದಾದ ಕೆಲವೇ ದಿನಗಳಲ್ಲಿ ಭಾರತದ ಗಡಿಯಲ್ಲಿ ಚೀನೀ ಸೇನೆ ಯುದ್ಧ ತಯಾರಿ ಆರಂಭಿಸಿತು, ಚೀನೀ ಸೇನಾಧಿಕಾರಿಯೊಬ್ಬ ತೈವಾನ್ ಮೇಲೆ ಆಕ್ರಮಣ ಎಸಗುವ ಧಮಕಿ ಹಾಕಿದ, ಮೇ 27ರಂದು ಸ್ವತಃ ಅಧ್ಯಕ್ಷ ಷಿ ಯುದ್ಧಕ್ಕೆ ತಯಾರಾಗುವಂತೆ ಸೇನೆಗೆ ಕರೆನೀಡಿದರು, ಮೊನ್ನೆ ಜೂನ್ 7ರಂದು ಚೀನೀ ಸೇನೆ ಹುಬೈ ಪ್ರಾಂತ್ಯದಲ್ಲಿ ಭಾರಿ ಸೇನಾಕಸರತ್ತು ನಡೆಸಿದೆ. ಅದರಲ್ಲಿ ಮುಖ್ಯವಾಗಿದ್ದದ್ದು ಎತ್ತರದ ಪ್ರದೇಶಗಳಿಗೆ ತ್ವರಿತಗತಿಯಲ್ಲಿ ಭಾರಿ ಯುದ್ಧೋಪಕರಣಗಳನ್ನು ಸಾಗಿಸುವ ಸಾಮರ್ಥ್ಯವನ್ನು ಪರೀಕ್ಷಿಸುವುದಾಗಿತ್ತು!

ಕೊನೆಯ ಮಾತು: ಮೇ 22ರಂದು ಚೀನೀ ಸಂಸತ್ತಿನ ವಾರ್ಷಿಕ ಅಧಿವೇಶನ ಪ್ರಾರಂಭವಾದ ಕೆಲವೇ ತಾಸುಗಳಲ್ಲಿ ರಾಜಧಾನಿ ಬೀಜಿಂಗ್​ನ ಆಕಾಶ ಮುಗಿಲುಗಳಿಂದ ಕಪ್ಪುಗಟ್ಟತೊಡಗಿತು. ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ರಾತ್ರಿಯಾದಷ್ಟು ಕತ್ತಲು ರಾಜಧಾನಿಯಲ್ಲಿ ಮುಸುಕಿಕೊಂಡಿತು.

ನಮ್ಮಂತೆಯೇ ಶಕುನಗಳನ್ನು ನಂಬುವ ಚೀನೀಯರು ಹೇಳುವುದು ‘ಈ ಮಧ್ಯಾಹ್ನದ ಕತ್ತಲು’ ದೇಶಕ್ಕೆ ಮುಂಬರಲಿರುವ ಕೇಡುಗಾಲದ ಸೂಚನೆ ಎಂದು.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net