

ಪಾಕಿಸ್ತಾನೀಯರಿಗೆ ಗೊತ್ತಿಲ್ಲದಿದ್ದ ವಿಷಯವೆಂದರೆ ಚೀನೀ ಕೆಲಸಗಾರರು, ಅಧಿಕಾರಿಗಳು, ಇಂಜಿನಿಯರ್ಗಳು ಎಲ್ಲರೂ ಚೀನೀ ಸೇನೆಗೆ ಸೇರಿದವರು ಮತ್ತವರು ಶಸ್ತ್ರಾಸ್ತ್ರ ಬಳಕೆ ಹಾಗೂ ಮಾರ್ಷಲ್ ಆರ್ಟ್ನಲ್ಲಿ ತರಬೇತಿ ಪಡೆದವರು! ಇದರ ಅನುಭವ ಪಾಕಿಸ್ತಾನೀ ಪೊಲೀಸರಿಗೇ ಆಯಿತು.
ಜಗತ್ತಿನಾದ್ಯಂತ, ಮುಖ್ಯವಾಗಿ ಏಷ್ಯಾ ಹಾಗೂ ಆಫ್ರಿಕಾಗಳಲ್ಲಿ ತನ್ನ ಆರ್ಥಿಕ ಹಿತಾಸಕ್ತಿಗಳನ್ನು ಗಣನೀಯವಾಗಿ
‘ಡಾನ್’ ಲೇಖನ ಪ್ರಮುಖವಾಗಿ ಉಲ್ಲೇಖಿಸಿದ್ದು 2014ರಲ್ಲಿ ಆರಂಭವಾದ ‘ಪಾಕಿಸ್ತಾನ ಇಕನಾಮಿಕ್ ಕಾರಿಡಾರ್’ ಅಥವಾ ‘ಸಿ-ಪೆಕ್’ ಯೋಜನೆ. ಪಶ್ಚಿಮ ಚೀನಾದ ಕಾಶ್ಗರ್ನಿಂದ ಪಾಕ್ ಆಕ್ರಮಿತ ಗಿಲ್ಗಿಟ್-ಬಾಲ್ಟಿಸ್ತಾನ್, ಪಾಕಿಸ್ತಾನದ ಖೈಬರ್-ಪಖ್ತೂನ್ವಾ, ಪಂಜಾಬ್ ಮತ್ತು ಬಲೂಚಿಸ್ತಾನ್ ಪ್ರಾಂತ್ಯಗಳಲ್ಲಿ ಹಾದು ಅರಬ್ಬೀ ಸಮುದ್ರ ತೀರದ ಗ್ವಾದಾರ್ ಬಂದರಿನವರೆಗೆ ರಸ್ತೆ-ರೈಲು ಮಾರ್ಗಗಳ ನಿರ್ವಣ, ಜತೆಗೆ ಲಾಹೋರ್, ಕರಾಚಿ ಸೇರಿ ಪಾಕಿಸ್ತಾನದ ಪ್ರಮುಖ ನಗರಗಳನ್ನು ಜೋಡಿಸುವ ಸುವ್ಯವಸ್ಥಿತ ರಸ್ತೆಮಾರ್ಗಗಳು, ಆ ಎಲ್ಲ ಮಾರ್ಗಗಳ ಉದ್ದಕ್ಕೂ ಹಲವಾರು ಅಣೆಕಟ್ಟೆಗಳು, ವಿದ್ಯುತ್ ಉತ್ಪಾದನಾ ಸಂಯಂತ್ರಗಳು ಹಾಗೂ ಕೈಗಾರಿಕಾ ಸಮುಚ್ಛಯಗಳ ನಿರ್ವಣಗಳನ್ನು ಒಳಗೊಂಡ ಸಿ-ಪೆಕ್ ಯೋಜನೆ ಇಡೀ ಪಾಕಿಸ್ತಾನದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಅಭೂತಪೂರ್ವ ಮಟ್ಟಕ್ಕೇರಿಸುವ, ಕೋಟ್ಯಂತರ ಪಾಕಿಸ್ತಾನೀಯರಿಗೆ ಪ್ರತ್ಯಕ್ಷ-ಪರೋಕ್ಷ ಉದ್ಯೋಗ ನೀಡುವ, ಆ ಮೂಲಕ ಪಾಕಿಸ್ತಾನದ ಭಾಗ್ಯದ ಬಾಗಿಲನ್ನೇ ತೆರೆಯುವ ಆಶಯವನ್ನೊಳಗೊಂಡ ಈ ಯೊಜನೆಯ ಅಂದಾಜು ವೆಚ್ಚ 46 ಬಿಲಿಯನ್ ಡಾಲರ್ಗಳೆಂದು ಪ್ರಾರಂಭದಲ್ಲಿ ಲೆಕ್ಕಹಾಕಲಾಗಿತ್ತು. ಮೂರು ವರ್ಷಗಳ ನಂತರ, ‘ಡಾನ್’ ಲೇಖನ ಪ್ರಕಟವಾಗುವ ಹೊತ್ತಿಗೆ, ಅದು 62 ಬಿಲಿಯನ್ ಡಾಲರ್ಗಳಾಯಿತು. (ಈಗಂತೂ ಅದು 87 ಬಿಲಿಯನ್ ಡಾಲರ್ಗಳಿಗೇರಿದೆಯಂತೆ!)
ಆದರೆ, 2014-17ರ ಅವಧಿಯಲ್ಲಿ ಆದದ್ದೇನು? ಯೋಜನೆ ವೆಚ್ಚದ ಪೂರ್ತಿ ಮೊತ್ತ ಚೀನಾದಿಂದ ಬರುತ್ತಿದೆ, ಶೇಕಡ 90 ಸಾಲದ ರೂಪದಲ್ಲಿ, ಶೇ.10 ನೆರವಿನ ರೂಪದಲ್ಲಿ. ಸಾಲದ ಬಡ್ಡಿದರ ವೈಶ್ವಿಕ ಹಣಕಾಸು ಸಂಸ್ಥೆಗಳು ವಿಧಿಸುವ ಬಡ್ಡಿದರಕ್ಕಿಂತ ಹೆಚ್ಚು. ಯೋಜನೆಯ ಎಲ್ಲ ಕೆಲಸಗಳನ್ನೂ ಗುತ್ತಿಗೆಯಾಗಿ ಪಡೆದಿರುವುದು ಚೀನೀ ಕಂಪನಿಗಳು; ಎಲ್ಲ ಇಂಜಿನಿಯರ್ಗಳು, ಅಧಿಕಾರಿಗಳು, ಕೆಲಸಗಾರರೂ ಚೀನೀಯರೇ. ಅಂದರೆ ಪಾಕಿಸ್ತಾನೀಯರಿಗೆ ಇಲ್ಲೇನೂ ಕೆಲಸವಿಲ್ಲ! ಅವರ ಭಾಗ್ಯದ ಬಾಗಿಲು ತೆರೆಯುವುದಂತೂ ಅತ್ತಲೇ ಉಳಿಯಿತು. ಹಾಗಿದ್ದರೆ ಇದಕ್ಕೆ ಆಗಿನ ಪ್ರಧಾನಿ ನವಾಜ್ ಶರೀಫ್ ಒಪ್ಪಿಕೊಂಡದ್ದು ಹೇಗೆ? ಅದೇನೂ ರಹಸ್ಯವಲ್ಲ ಬಿಡಿ. ಶರೀಫ್ ಅಷ್ಟೇ ಅಲ್ಲ, ಅವರ ಹೆಣ್ಣುಮಕ್ಕಳಾದ ಮರಿಯಮ್ ಮತ್ತು ಆಸ್ಮಾರ ಕೈಗಳನ್ನೂ ಜಿನ್ಪಿಂಗ್ ಸಾಕು ಎನ್ನುವಷ್ಟು ಬೆಚ್ಚಗೆ ಮಾಡಿದ್ದಾರೆ. ಅವರನ್ನು ಚೀನಾಗೆ ಕರೆಸಿಕೊಂಡು ಸಖತ್ತಾಗಿ ಸತ್ಕರಿಸಿದ್ದಾರೆ. ಅಂದರೆ ಶರೀಫ್, ಮರಿಯಮ್ ಆಸ್ಮಾ ತಮ್ಮನ್ನಷ್ಟೇ ಅಲ್ಲ, ದೇಶದ ಹಿತವನ್ನೂ ಚೀನಿಯರಿಗೆ ಮಾರಿಕೊಂಡರು. ಆ ‘ಮಾರಾಟ’ದಿಂದಾಗಿ ಚೀನಾ-ಪಾಕಿಸ್ತಾನಗಳ ನಡುವಿನ ಸಂಬಂಧಗಳು ಯಾರ ರೂಪ ಪಡೆದುಕೊಂಡವು?
2015 ಏಪ್ರಿಲ್ನಲ್ಲಿ ಪಾಕಿಸ್ತಾನಕ್ಕೆ ಅಧಿಕೃತ ಭೇಟಿ ನೀಡಲು ಇಸ್ಲಾಮಾಬಾದ್ಗೆ ಹಾರುವ ಮೊದಲು ಅಧ್ಯಕ್ಷ ಜಿನ್ಪಿಂಗ್ ಘೊಷಿಸಿದ್ದು ಹೀಗೆ: ‘ನನ್ನ ಸ್ವಂತ ಸಹೋದರನ ಮನೆಗೆ ಹೋಗುತ್ತಿರುವಂತೆ ನನಗನಿಸುತ್ತಿದೆ’. ಭೇಟಿ ಮುಕ್ತಾಯವಾಗುತ್ತಿದ್ದಂತೆ ತಮ್ಮೀ ಭೇಟಿ ಉಭಯ ದೇಶಗಳ ನಡುವಿನ ‘ಸರ್ವಋತು ಸಾಮರಿಕ ಸಹಕಾರೀ ಸಹಭಾಗಿತ್ವ’ವನ್ನು ಮತ್ತಷ್ಟು ಬಲಪಡಿಸಲು ಸಹಕಾರಿಯಾಯಿತು ಎಂದವರು ಇಸ್ಲಾಮಾಬಾದ್ನಲ್ಲಿ ಘೊಷಿಸಿದರು. ‘ಸಂತೃಪ್ತಿ’ಯಿಂದ ಬೀಗುತ್ತಿದ್ದ ನವಾಜ್ ಶರೀಫ್ ‘ಚೀನಾ ಜತೆಗಿನ ಸ್ನೇಹ ಪಾಕಿಸ್ತಾನದ ವಿದೇಶನೀತಿಯ ಅಸ್ತಿಭಾರ ಶಿಲೆ’ ಎಂದು ಬಣ್ಣಿಸಿದರು.
ನಂತರದ ಎರಡೇ ವರ್ಷಗಳಲ್ಲಿ ಸಿಂಧೂನದಿಯಲ್ಲಿ ಸಾಕಷ್ಟು ನೀರು ಹರಿದುಹೋಯಿತು. ಸುಪ್ರೀಂ ಕೋರ್ಟ್ ನಿಂದ ಭ್ರಷ್ಟಾಚಾರದ ಆರೋಪ ಸಾಬೀತುಪಡಿಸಿಕೊಂಡು ಶರೀಫ್ ಗದ್ದುಗೆಯಿಂದಿಳಿದು ಜೈಲು ಸೇರಿದರು. ಅವರ ಉತ್ತರಾಧಿಕಾರಿ ಶಾಹಿದ್ ಕಾಖರ್ ಚೀನಾ ಬಗ್ಗೆ ಖಡಕ್ ನಿಲುವು ತಳೆದರು. ಸಿ-ಪೆಕ್ ಯೋಜನೆ ಪಾಕಿಸ್ತಾನಕ್ಕೆ ಲಾಭಕರವಲ್ಲ ಎಂದರಿತ ಅವರ ಸರ್ಕಾರ ಯಾವುದೇ ಹೊಸ ಯೋಜನೆಗಳಿಗೆ ಅವಕಾಶ ನೀಡಬಾರದೆಂದು 2017 ನವೆಂಬರ್ನಲ್ಲಿ ನಿರ್ಣಯ ತೆಗೆದುಕೊಂಡಿತು. ಆದರೆ ಅದೇನೂ ಚೀನಾದ ಮೇಲೆ ಯಾವ ಪ್ರಭಾವವನ್ನೂ ಬೀರಲಿಲ್ಲ. ಅಲ್ಲಿಯವರೆಗೆ ಆರಂಭವಾಗಿದ್ದ ಯೋಜನೆಗಳನ್ನು ನಿರಾತಂಕವಾಗಿ ಸಾಗಿಸುವಂಥ ಅವಕಾಶವನ್ನು ಮೂಲಒಪ್ಪಂದಗಳಲ್ಲೇ ಸೇರಿಸಿತ್ತು ಕುಟಿಲ ಚೀನಾ! ಆ ಮೂಲಕ ಪಾಕಿಸ್ತಾನದಲ್ಲಿ 60 ಸಾವಿರ ಚೀನೀ ಕೆಲಸಗಾರರಿದ್ದರು. ಇವರ ಬಗ್ಗೆ ಸಾಮಾನ್ಯ ಪಾಕಿಸ್ತಾನೀಯರಿಗೆ ಗೊತ್ತಿಲ್ಲದಿದ್ದ ವಿಷಯವೆಂದರೆ ಚೀನೀ ಕೆಲಸಗಾರರು, ಅಧಿಕಾರಿಗಳು, ಇಂಜಿನಿಯರ್ಗಳು ಎಲ್ಲರೂ ಚೀನೀ ಸೇನೆಗೆ ಸೇರಿದವರು ಮತ್ತವರು ಶಸ್ತ್ರಾಸ್ತ್ರ ಬಳಕೆ ಹಾಗೂ ಮಾರ್ಷಲ್ ಆರ್ಟ್ನಲ್ಲಿ ತರಬೇತಿ ಪಡೆದವರು! ಇದರ ಅನುಭವ ಪಾಕಿಸ್ತಾನೀ ಪೊಲೀಸರಿಗೇ ಆಯಿತು. ಖಾನೇವಾಲ್ ಎಂಬಲ್ಲಿ ತಮಗೆ ರಕ್ಷಣೆ ನೀಡಿದ್ದ ಪಾಕಿಸ್ತಾನೀ ಭದ್ರತಾಪಡೆಯ ಸಿಬ್ಬಂದಿಯೊಡನೆ ಹೊಡೆದಾಟಕ್ಕಿಳಿದ ಚೀನೀಯರು ಪಾಕ್ ಪೊಲೀಸರನ್ನು ಥಳಿಸಿದರು. ಒಬ್ಬ ಚೀನೀಯನಂತೂ ಪೊಲೀಸ್ ಜೀಪಿನ ಬಾನೆಟ್ ಮೇಲೇ ಹತ್ತಿ ನಿಂತ. ಆ ಬಾನೆಟ್ ಮೇಲೆ ಪಾಕ್ಧ್ವಜ ಚಿತ್ರಿತವಾಗಿತ್ತು ಮತ್ತು ಚೀನೀಯ ಅದರ ಮೇಲೇ ಕುಣಿದಾಡಿದ!
ಚೀನೀಯರ ಈ ವರ್ತನೆ ಬಗ್ಗೆ ಪಾಕಿಸ್ತಾನೀ ಪೊಲೀಸ್ ಸಿಬ್ಬಂದಿ ಮೇಲಧಿಕಾರಿಗಳಿಗೆ ದೂರು ಸಲ್ಲಿಸಿದಾಗ ಅಲ್ಲಿಂದ ಬಂದ ಉತ್ತರ, ‘ಚೀನೀಯರನ್ನು ಯಾವ ವಿಧದಲ್ಲೂ ಪ್ರಚೋದಿಸಬೇಡಿ’ ಎಂದು! ಇದರರ್ಥ ಹೊರಗೆ ಚೀನೀಯರ ವಿರುದ್ಧದ ನಿಲುವು ತಳೆದಿದ್ದ ಅಬ್ಬಾಸಿ ಸರ್ಕಾರ ಒಳಗೊಳಗೇ ಚೀನೀಯರಿಗೆ ಮಣಿದಿತ್ತು, ತನ್ನ ಕೈಗಳನ್ನು ಕಟ್ಟಿಹಾಕಿಸಿಕೊಂಡು ಅವಮಾನವನ್ನು ನುಂಗಿಕೊಂಡಿತ್ತು. ಅಷ್ಟೇ ಅಲ್ಲ, ಬಲೂಚಿ ಸ್ವಾತಂತ್ರ್ಯ ಹೋರಾಟಗಾರರು ಪಾಕಿಸ್ತಾನದಲ್ಲಿ ಕಾರ್ಯನಿರತರಾಗಿರುವ ಚೀನೀಯರ ಮೇಲೆ ದಾಳಿ ಎಸಗುವುದು, ಕೊಲ್ಲುವುದು ಇತ್ತೀಚೆಗೆ ಹೆಚ್ಚಾದ ಕಾರಣ, ಚೀನೀ ಸರ್ಕಾರದ ತಾಕೀತಿಗೆ ಅನುಗುಣವಾಗಿ ಚೀನೀಯರಿಗೆ ಹೆಚ್ಚಿನ ಸುರಕ್ಷೆಯನ್ನೂ ಒದಗಿಸತೊಡಗಿತು.
ಇದೆಲ್ಲ ಬೆಳವಣಿಗೆಗಳನ್ನು ನೋಡುತ್ತ ಬಂದಿದ್ದ ಇಮ್ರಾನ್ ಖಾನ್ ಚೀನೀಯರ ಬಗ್ಗೆ, ತನ್ನ ದೇಶದಲ್ಲಿ ಚೀನೀ ಸಾಲಸಂಕೋಲೆ ಯೋಜನೆಗಳ ಬಗ್ಗೆ ತೀವ್ರ ಅಸಂತೋಷ, ಅಸಮಾಧಾನ ಬೆಳಸಿಕೊಂಡಿದ್ದರು. ಮನಸ್ಸಿನಲ್ಲಿದುದನ್ನು ವಿವಿಧ ಸಂದರ್ಭಗಳಲ್ಲಿ ಹೊರಹಾಕಿದ್ದರೂ ಸಹಾ. 2 ವರ್ಷಗಳ ಹಿಂದೆ ಚುನಾವಣೆಗಳಲ್ಲಿ ಜಯಗಳಿಸಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಒಂದೇ ತಿಂಗಳೊಳಗೆ ಮಹತ್ವದ ನಿರ್ಧಾರಕ್ಕೆ ಖಾನ್ ಮುಂದಾದರು. ಇಡೀ ಸಿ-ಪೆಕ್ ಯೋಜನೆಯನ್ನೇ ಪರಿಷ್ಕರಿಸುವ ತೀರ್ವನವನ್ನು ಅವರ ಮಂತ್ರಿಮಂಡಲ 2018 ಸೆಪ್ಟೆಂಬರ್ 10ರಂದು ತೆಗೆದುಕೊಂಡಿತು. ಅದಾಗಿ ಎರಡು ವರ್ಷಗಳಾಗುತ್ತಿವೆ. ಇಂದಿನ ವಾಸ್ತವ ಏನು?
ಬಹವಾಲ್ಪುರದಲ್ಲಿ ಇರುವ ಪಾಕ್ ಸೇನೆಯ ಸ್ಪೆಷಲ್ ಸೆಕ್ಯೂರಿಟಿ ಡಿವಿಜನ್ನ 27ನೇ ಯೂನಿಟ್ನ ನಾಯಕ ಲೆಫ್ಟಿನೆಂಟ್ ಕರ್ನಲ್ ಇಮ್ರಾನ್ ಖಾಸಿಂ ತನ್ನ ಮೇಲಧಿಕಾರಿಗಳಿಗೆ ಇದೇ ಆಗಸ್ಟ್ ಮೊದಲವಾರದಲ್ಲಿ ಒಂದು ಪತ್ರ ಬರೆದರು. ಆ ಪತ್ರದಲ್ಲವರು ಜುಲೈ 21ರಂದು ಕರಾಚಿ-ಪೇಶಾವರ್ ಹೆದ್ದಾರಿಯ ಒಂದು ನಿರ್ದಿಷ್ಟ ಸ್ಥಳದಲ್ಲಿ ನಿರ್ಮಾಣ ಕಾರ್ಯದ ಜವಾಬ್ದಾರಿ ಹೊತ್ತಿದ್ದ ನಾಲ್ವರು ಚೀನೀ ಇಂಜಿನಿಯರ್ಗಳು ಮತ್ತು ಇಬ್ಬರು ಕೆಲಸಗಾರರ ತಂಡ ತಮಗೆ ಸುರಕ್ಷೆ ನೀಡಿದ್ದ ಆರು ಪಾಕ್ ಸೈನಿಕರ ತಂಡದ ಮೇಲೆ ವಿನಾಕಾರಣ ಕಲಹಕ್ಕಿಳಿದು ತಂಡದ ನಾಯಕ ಹವಾಲ್ದಾರ್ ಅಸಾದುಲ್ಲಾನಿಗೆ ತಲೆಯ ಮೇಲೆ ಹೊಡೆದು ಗಾಯಗೊಳಿಸಿದ್ದಲ್ಲದೆ ಇತರ ಸೈನಿಕರ ಮೇಲೂ ಹಲ್ಲೆಯೆಸಗಿದರು ಎಂದು ವಿವರಿಸಿದ್ದಾರೆ. ಲೆ.ಕ. ಖಾಸಿಂ ಪತ್ರ ನಮಗೆ ದೊರೆತಿರುವುದರಿಂದ ಆ ಪ್ರಕರಣದ ಬಗ್ಗೆ ತಿಳಿಯುವಂತಾಗಿದೆ.
2018ರ ಖಾನೇವಾಲ್ ಘಟನೆಯಿಂದ ಈ ಪ್ರಕರಣದವರೆಗೆ ಪಾಕಿಸ್ತಾನೀಯರು ಚೀನೀಯರಿಂದ ಹೊರಜಗತ್ತಿಗೆ ತಿಳಿಯದಂತೆ ಎಲ್ಲೆಲ್ಲಿ ಎಷ್ಟೆಷ್ಟು ಹೊಡೆತ ತಿಂದಿದ್ದಾರೋ. ಅದಂತೂ ರಹಸ್ಯವೇ. ಆದರೆ, ಲೆ.ಕ. ಖಾಸಿಂ ಪತ್ರ ಪ್ರಕರಣ ಒಂದು ವಿಷಯವನ್ನು ಜಗಜ್ಜಾಹೀರು ಮಾಡಿದೆ. ಅವರ ಪತ್ರಕ್ಕೆ ‘ಮೇಲಿನಿಂದ’ ಬಂದ ಉತ್ತರ, ಎಂತಹ ಸಂದರ್ಭದಲ್ಲೂ ಚೀನೀಯರ ವಿರುದ್ಧ ಏನೂ ಮಾಡಕೂಡದು ಎಂದು. ಅಂದರೆ ತೆಪ್ಪಗೆ ಇಕ್ಕಡಿಸಿಕೊಳ್ಳಿ ಎಂದು. ಅಷ್ಟೇ ಅಲ್ಲ, ಈ ರೀತಿಯಾಗಿ ಪಾಕ್ ಸರ್ಕಾರದಿಂದ ತನ್ನ ಭದ್ರತಾಪಡೆಗಳಿಗೆ ‘ಸ್ಟಾ್ಯಂಡಿಂಗ್ ಇನ್ಸ್ಟ್ರಕ್ಷನ್’ ಇದೆಯೆಂತೆ!
ಇದರ ಹಿಂದೆ ಪಾಕ್ ಸರ್ಕಾರಕ್ಕೆ ಚೀನೀ ಸರ್ಕಾರದಿಂದ ಬಂದಿರಬಹುದಾದ ‘ಸ್ಟಾ್ಯಂಡಿಂಗ್ ಇನ್ಸ್ಟ್ರಕ್ಷನ್’ ಏನಾದರೂ ಇದೆಯೇ? ಆ ಸೂಚನೆಯೂ ದೊರೆತಿದೆ. ಮುಸ್ಲಿಂ ಪ್ರಾಬಲ್ಯದ ಉಯ್ಘರ್ ಷಿನ್ಜಿಯಾಂಗ್ ಪ್ರಾಂತ್ಯದಲ್ಲಿ ಚೀನೀ ಸರ್ಕಾರ-ಸೇನೆ ಎಸಗುತ್ತಿರುವ ಕುಕೃತ್ಯಗಳು ಈಗ ಜಗತ್ತಿನೆಲ್ಲೆಡೆ ಸುದ್ದಿಯಾಗುತ್ತಿವೆ. ಹತ್ತುಲಕ್ಷ ಉಯ್ಘರ್ ಮುಸ್ಲಿಮರನ್ನು ಚೀನೀ ಸರ್ಕಾರ ಯಾತನಾಶಿಬಿರಗಳಲ್ಲಿ ಇಟ್ಟಿರುವುದು, ಪ್ರತೀ ಉಯ್ಘರ್ ಮನೆಯಲ್ಲೂ ಚೀನೀ ಕಮ್ಯೂನಿಸ್ಟ್ ಅಧಿಕಾರಿಯೊಬ್ಬ ಮೇಲ್ವಿಚಾರಕನಾಗಿ ತಳವೂರಿರುವುದು- ಇದೆಲ್ಲದರ ಮೂಲಕ ಉಯ್ಘರರ ಮುಸ್ಲಿಂ ಅಸ್ಮಿತೆಯನ್ನೇ ಅಳಿಸಿಹಾಕಲು ಚೀನೀ ಕಮ್ಯೂನಿಸ್ಟ್ ಸರ್ಕಾರ ಉದ್ಯುಕ್ತವಾಗಿರುವುದು ಈಗ ಜಗಜ್ಜಾಹೀರಾಗಿಹೋಗಿದೆ. ಈ ಬಗ್ಗೆ ಪಾಕಿಸ್ತಾನದಲ್ಲೂ ಜನಾಕ್ರೋಶ ಭುಗಿಲೆದ್ದಿದೆ. ಡಜನ್ಗಟ್ಟಲೆ ಉರ್ದು ಪತ್ರಿಕೆಗಳು ಚೀನೀ ಕಮ್ಯೂನಿಸ್ಟ್ ಕುಕೃತ್ಯಗಳ ಬಗ್ಗೆ ನಿರಂತರವಾಗಿ ಸುದ್ದಿಗಳನ್ನೂ, ಲೇಖನಗಳನ್ನೂ ಪ್ರಕಟಿಸಿ ಜನಜಾಗೃತಿ ಮೂಡಿಸುತ್ತಿವೆ. ಹೀಗಾಗಿ, ಚೀನಾ ವಿರುದ್ಧ ವಿವಿಧೆಡೆ ಪ್ರದರ್ಶನಗಳಾಗುತ್ತಿವೆ (ಅಂತಹದೊಂದು ಪ್ರದರ್ಶನ ಕಳೆದವಾರ ಪಾಕ್ ಆಕ್ರಮಿತ ಕಾಶ್ಮೀರದ ಮುಝುಫರಾಬಾದ್ನಲ್ಲೂ ನಡೆಯಿತು). ಹೀಗಾಗಿ ಚೀನಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಇಮ್ರಾನ್ ಖಾನ್ ಸರ್ಕಾರದ ಮೇಲೆ ಒತ್ತಡ ದಿನೇದಿನೇ ಹೆಚ್ಚಾಗುತ್ತಿದೆ. ಹೇಳಿಕೇಳಿ ಅವರ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಮುಖ್ಯ ಬೆಂಬಲಿಗರು ಸಂಪ್ರದಾಯಸ್ಥ ಮುಸ್ಲಿಮರೇ. ಇವರ ಒತ್ತಡಕ್ಕೆ ಮಣಿದ ಖಾನ್ ಸರ್ಕಾರ ಜುಲೈನಲ್ಲಿ ಆಂತರಿಕ ಪರಿಶೋಧನಾ ಸಮಿತಿ ನೇಮಿಸಿ, ಉಯ್ಘರ್ ಸಮಸ್ಯೆ ಮತ್ತು ಪಾಕಿಸ್ತಾನೀಯರು ಅದರ ಬಗ್ಗೆ ಯಾವ ಮಟ್ಟಕ್ಕೆ ಭಾವನಾತ್ಮಕವಾಗಿ ಸ್ಪಂದಿಸುತ್ತಿದ್ದಾರೆಂದು ಅಧ್ಯಯನ ನಡೆಸಿ ವರದಿ ಒಪ್ಪಿಸಬೇಕೆಂದು ಕೇಳಿಕೊಂಡಿತು. ಸಮಿತಿ ತನ್ನ ಕೆಲಸವನ್ನು ಸರಿಯಾಗಿಯೇ ಮಾಡಿತು ಮತ್ತು ಅದರ ವರದಿಯೂ ಬಂತು. ಚೀನಾ ವಿರುದ್ಧ ಪಾಕ್ ಸರ್ಕಾರ ಉನ್ನತಮಟ್ಟದಲ್ಲಿ ತನ್ನ ಆಕ್ಷೇಪಣೆ ಸಲ್ಲಿಸಬೇಕೆಂದೂ; ಅದರಲ್ಲಿ ಉಯ್ಘರರ ವಿರುದ್ಧ ಕಾರ್ಯಾಚರಣೆಯನ್ನು ನಿಲ್ಲಿಸಬೇಕು ಮತ್ತು ಕೆಲವು ಉಯ್ಘರ್ ಮುಸ್ಲಿಮರ ಭಯೋತ್ಪಾದಕ ಕೃತ್ಯಗಳಿಗಾಗಿ ಇಡೀ ಉಯ್ಘರ್ ಜನಾಂಗವನ್ನೇ ಶಿಕ್ಷಿಸುವುದು ತರವಲ್ಲವೆಂದು ಚೀನೀ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕೆಂದು ಸಮಿತಿ ಸರ್ಕಾರಕ್ಕೆ ಹೇಳಿತು. ಅದನ್ನು ನಿರಾಕರಿಸಲಾಗದೆ ಇಮ್ರಾನ್ ಖಾನ್ ಸರ್ಕಾರ ಚೀನೀ ಸರ್ಕಾರಕ್ಕೆ ಸಂದೇಶ ಕಳುಹಿಸಿತು. ಪ್ರತಿಯಾಗಿ ಚೀನೀಯರಿಂದ ಬಂದ ಉತ್ತರ-‘ಉಯ್ಘರರ ಬಗ್ಗೆ ಪಾಕ್ ಸರ್ಕಾರ ಭಾವನಾತ್ಮಕವಾಗುವ ಅಗತ್ಯವಿಲ್ಲ. ಬದಲಿಗೆ ಆ ಕುರಿತಾಗಿ ಪಾಕ್ ನೆಲದಲ್ಲಿ ಯಾವುದೇ ಅಹಿತಕರ ಪ್ರಸಂಗ ನಡೆಯದಂತೆ (ಅಂದರೆ ಚೀನೀಯರ ಮೇಲೆ ಹಲ್ಲೆ ಆಗದಂತೆ) ನೋಡಿಕೊಳ್ಳಬೇಕು’ ಎಂದು.
ಚೀನೀ ಸಂದೇಶವನ್ನು ಇಮ್ರಾನ್ ಖಾನ್ ಸರಿಯಾಗಿಯೇ ಅರ್ಥಮಾಡಿಕೊಂಡರು ಮತ್ತದನ್ನು ವ್ಯಕ್ತಪಡಿಸಿದರು ಸಹಾ. ಪತ್ರಿಕಾಸಂದರ್ಶನವೊಂದರಲ್ಲಿ, ‘ಉಯ್ಘರ್ ಸಮಸ್ಯೆ ಬಗ್ಗೆ ನೀವು ಏನು ಹೇಳುತ್ತೀರಿ?’ ಎಂಬ ಪ್ರಶ್ನೆಗೆ ಇಮ್ರಾನ್ ಖಾನ್ ನೀಡಿದ ಉತ್ತರ-‘ಉಯ್ಘರ್ ವಿಷಯದಲ್ಲಿ ಚೀನೀಯರ ಬಗ್ಗೆ ನಾವು ಸಾರ್ವಜನಿಕವಾಗಿ ಏನನ್ನೂ ಹೇಳುವುದಿಲ್ಲ, ಚೀನೀಯರೊಂದಿಗೆ ಖಾಸಗಿಯಾಗಿ ಮಾತಾಡುತ್ತೇವೆ ಅಷ್ಟೇ.’ ಇಡೀ ಪ್ರಕರಣ ಎತ್ತಿತೋರುವುದು ಪಾಕಿಸ್ತಾನ ಯಾವ ವಿಷಯದಲ್ಲೂ ಚೀನೀ ಸರ್ಕಾರದ ವಿರುದ್ಧ ದನಿಯೆತ್ತುವ ಉದ್ಧಟತನ ತೋರಬಾರದು ಎಂದು. ಪಾಕಿಸ್ತಾನ ತನ್ನ ಸಾರ್ವಭೌಮತ್ವವನ್ನೇ ಚೀನಾಗೆ ಹೀಗೆ ಅಡವಿಟ್ಟ ಬೆಳವಣಿಗೆ ಘಟಿಸಿದ್ದು ಹೇಗೆ? ಇದಕ್ಕೆ ಉತ್ತರ ಪಾಕಿಸ್ತಾನೀ ಜನತೆಯ ಗುಲಾಮೀ ಮನೋಭಾವದಲ್ಲೇ ಇದೆಯೇ? ಇದನ್ನು ಮುಂದಿನವಾರ ವಿವರವಾಗಿ ಪರಿಶೀಲಿಸೋಣ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)