

ಶಿವನನ್ನು ಮತ್ತು ವಿಷ್ಣುವನ್ನು ದೇವರುಗಳೆಂದು ಪೂಜಿಸುವವರು ಅಂದರೆ ಹಿಂದೂಗಳು ರಾಮಾಯಣ ಮತ್ತು ಮಹಾಭಾರತಗಳನ್ನೂ ತಮ್ಮ ದೇವರುಗಳ ಕಥೆಗಳೆಂದೇ ಭಾವಿಸಿ ಅಥವಾ ನಂಬಿ ತಮಗೆ ಹತ್ತಿರವಾಗಿಸಿಕೊಂಡರು, ಆ ಮೂಲಕ ತಂತಮ್ಮ ನಡುವಿನ ಇತರೆಲ್ಲ ಭಾಷಿಕ, ಆಹಾರಪದ್ಧತಿಗಳ ಭೇದಗಳನ್ನೂ ಬದಿಗಿಟ್ಟು ತಾವೆಲ್ಲರೂ ಒಂದು ಎಂಬ ಐಕ್ಯತಾ ಭಾವನೆಯನ್ನು ಬೆಳೆಸಿಕೊಂಡರು.
ಕಳೆದ ಎರಡೂವರೆ ಸಾವಿರ ವರ್ಷಗಳಲ್ಲಿ ಇಲ್ಲಿ ಹಲವಾರು ಮಹಾಸಾಮ್ರಾಜ್ಯಗಳು ಆಗಿಹೋಗಿವೆ. ಆದರೆ ಯಾವೊಂದು ಸಾಮ್ರಾಜ್ಯವೂ ಈ ದೇಶದ ಎಲ್ಲ ಪ್ರದೇಶಗಳನ್ನೂ ಒಳಗೊಂಡಿರಲಿಲ್ಲ, ಯಾವೊಬ್ಬ ಚಕ್ರವರ್ತಿಯೂ ಈ ದೇಶದ ಎಲ್ಲ ಪ್ರದೇಶಗಳ ನಿವಾಸಿಗಳನ್ನು ಒಂದೇ ಶಾಸನದಡಿ ತರುವುದರಲ್ಲಿ ಯಶಸ್ವಿಯಾದದ್ದಿಲ್ಲ. ಇದರರ್ಥ ಈ ದೇಶವನ್ನು ಒಂದುಗೂಡಿಸುವಲ್ಲಿ ಯಾವೊಂದು ಸೇನೆಯೂ ಎಂದೂ ಯಶಸ್ವಿಯಾದದ್ದಿಲ್ಲ. ಇಷ್ಟಾಗಿಯೂ, ಈ ದೇಶದ ನಿವಾಸಿಗಳಲ್ಲಿ ತಾವೆಲ್ಲರೂ ‘ಸಾಂಸ್ಕೃತಿಕವಾಗಿ’ ಒಂದು ಎಂಬ ಭಾವನೆ ಮಾತ್ರ ಇತಿಹಾಸ ಕಾಲದುದ್ದಕ್ಕೂ ಅನೂಚಾನವಾಗಿ ಬೆಳೆದುಬಂದಿರುವುದು ಸತ್ಯ. ಅಂದರೆ ಈ ದೇಶವನ್ನು ಒಂದಾಗಿಸಿದವರು ಸಾಂಸ್ಕೃತಿಕ ವ್ಯಕ್ತಿಗಳೇ ಹೊರತು ಯಾವುದೇ ರಾಜಕೀಯ ಅಥವಾ ಆರ್ಥಿಕ ಶಕ್ತಿಗಳಲ್ಲ. ಆ ಸಾಂಸ್ಕೃತಿಕ ವ್ಯಕ್ತಿಗಳನ್ನು ಗುರುತಿಸಹೊರಟರೆ ನಮಗೆ ಸಿಗುವ ಮೊದಲ ಹೆಸರು ವಾಲ್ಮೀಕಿ, ನಂತರದ್ದು ವ್ಯಾಸ.
ವಾಲ್ಮೀಕಿ ರಚಿಸಿದ ರಾಮಾಯಣ ಕಾವ್ಯ ಇಂದಿನ ಉತ್ತರ ಪ್ರದೇಶದಿಂದ ಹಿಡಿದು ನೇರ ದಕ್ಷಿಣದ ತಮಿಳುನಾಡಿನವರೆಗಿನ ವಿವಿಧ ಪ್ರದೇಶಗಳನ್ನೂ, ಆವುಗಳ ಭೌಗೋಳಿಕ ಮಾಹಿತಿಗಳನ್ನೂ, ಜನಜಾನುವಾರು, ಸಸ್ಯಸಂಕುಲಗಳ ವಿವರಗಳನ್ನೂ ನೀಡುತ್ತದೆ. ಲಂಕೆಯ ರಾವಣನಿಂದ ಅಪಹೃತಳಾದ ಸೀತೆಯನ್ನು ಹುಡುಕಲು ಪರಸ್ಪರ ಸಂಬಂಧವೇ ಇಲ್ಲದಿದ್ದ ವಿವಿಧ ಪ್ರದೇಶಗಳ ನರರು, ವಾನರರು ಒಂದುಗೂಡಿ ಪ್ರಯತ್ನಿಸುವುದನ್ನು ರಾಮಾಯಣದಲ್ಲಿ ಕಾಣುತ್ತೇವೆ. ಇವರ ನಡುವೆ ಭಾಷೆ, ಆಹಾರಪದ್ಧತಿಯ ಭಿನ್ನತೆ ಇದ್ದಿರಬಹುದಾದರೂ ಇವರಲ್ಲಿ ಯಾವುದೇ ಪ್ರಾದೇಶಿಕ ವಿರೋಧ ಅಥವಾ ಅಸಹಿಷ್ಣುತೆ ಇದ್ದ ಉದಾಹರಣೆಗಳು ಕಾಣಬರುವುದಿಲ್ಲ. ರಾಮ ಹಾಗೂ ಸೀತೆ, ಹನುಮಂತ ಮುಂತಾದವರು ತಮ್ಮವರೇ ಎಂದು ಈ ಪ್ರದೇಶಗಳ ನಿವಾಸಿಗಳೆಲ್ಲರೂ ಭಾವಿಸಿದ್ದನ್ನು ಇತಿಹಾಸದುದ್ದಕ್ಕೂ ಕಾಣುತ್ತೇವೆ. ಈ ಭಾವನೆ ವ್ಯಕ್ತವಾದದ್ದು ಎಲ್ಲ ಸಾಮಾಜಿಕ ವರ್ಗಗಳ ಜನರಲ್ಲೂ, ಶಿಕ್ಷಿತ-ಅಶಿಕ್ಷಿತರಲ್ಲೂ ಎನ್ನುವುದು ಗಮನಾರ್ಹ. ಶಿಕ್ಷಿತರು ದೂರ ದಕ್ಷಿಣದಲ್ಲಿ ಕಂಬ ರಾಮಾಯಣ, ಉತ್ತರದಲ್ಲಿ ತುಲಸೀ ರಾಮಾಯಣ, ಇವೆರಡರ ನಡುವೆ ಇನ್ನೆಷ್ಟೋ ರಾಮಾಯಣಗಳನ್ನು ಇತಿಹಾಸದುದ್ದಕ್ಕೂ ಸೃಷ್ಟಿಸುತ್ತ ಬಂದ ಅಶಿಕ್ಷಿತ ಜನಸಮುದಾಯಗಳೂ ತಮ್ಮದೇ ರಾಮಾಯಣಗಳನ್ನು ಸೃಷ್ಟಿಸಿಕೊಂಡವು. ರಾಮ-ಸೀತೆ-ರಾವಣರ ನಡುವಿನ ಸಂಬಂಧಗಳನ್ನು ಬೇರೆಬೇರೆ ಬಗೆಯಲ್ಲಿ ಚಿತ್ರಿಸುವ ಐದು ವಿವಿಧ ರಾಮಾಯಣ ಕಥೆಗಳನ್ನು ನನ್ನ ಅಜ್ಜಿಯಿಂದ ಕೇಳಿದ್ದೇನೆ. ರಾಮನೂ ಸೀತೆಯೂ ಅಣ್ಣ-ತಂಗಿಯರು, ಸೀತೆ ರಾವಣನ ಮಗಳು ಎನ್ನುವುದು ಅವುಗಳಲ್ಲೆರಡು. ಪ್ರಾಚೀನ ಈಜಿಪ್ತ್ ರಾಜಮನೆತನಗಳಲ್ಲಿ ಒಡಹುಟ್ಟುಗಳ ನಡುವೆ ನಿಯಮಿತವಾಗಿ ಏರ್ಪಡುತ್ತಿದ್ದ ವೈವಾಹಿಕ ಸಂಬಂಧ ನಮ್ಮಲ್ಲಿನ ಜಾನಪದೀಯ ಕಲ್ಪನೆಗಳಲ್ಲೂ ಕಾಣಿಸಿಕೊಂಡದ್ದು ಅಚ್ಚರಿ ಹುಟ್ಟಿಸುತ್ತದೆ. (ಅಯೋಧ್ಯೆಯ ರಾಜಮನೆತನಗಳಲ್ಲಿ ಪ್ರಚಲಿತವಿದ್ದ ಒಡಹುಟ್ಟುಗಳ ನಡುವಿನ ವಿವಾಹವನ್ನು ಶಂಕರ ಮೊಕಾಶಿ ಪುಣೇಕರರು ತಮ್ಮ ‘ಅವಧೇಶ್ವರಿ’ಯಲ್ಲೂ ನೀಡುತ್ತಾರೆ.) ಹಾಗೆಯೇ, ಇಲ್ಲಿನ ಜನಸಮುದಾಯಗಳು ರಾಮಾಯಣದ ಪಾತ್ರಗಳನ್ನು ತಮ್ಮವೇ ಎಂದೂ, ಪ್ರಸಂಗಗಳನ್ನು ತಮ್ಮ ಸುತ್ತಮುತ್ತಲೇ ಘಟಿಸಿದವೆಂದೂ ಕಲ್ಪಿಸಿಕೊಂಡೋ, ನಂಬಿಯೋ ಆ ಬಗ್ಗೆ ಐತಿಹ್ಯಗಳನ್ನು ಕಟ್ಟಿಕೊಂಡರು.
ಕರ್ನಾಟಕದ ಯಾವುದೋ ಮೂಲೆಯ ಯಾವುದೋ ಹಳ್ಳದ ನೀರು ತನ್ನ ಶತಶತಮಾನಗಳ ಹರಿಯುವಿಕೆಯಲ್ಲಿ ಬಂಡೆಯ ಮೇಲೆ ಮೂಡಿಸಿದ ಗೆರೆಗಳನ್ನು ‘ಸ್ನಾನ ಮಾಡುತ್ತಿದ್ದ ಸೀತೆ ಬೇಟೆಯಿಂದ ಹಿಂತಿರುಗಿದ ರಾಮಲಕ್ಷ್ಮಣರ ದನಿ ಕೇಳಿ ಆತುರಾತುರವಾಗಿ ಮರೆಗೆ ಓಡುವಾಗ ಬಂಡೆಯ ಮೇಲೆ ಸೆರಗು ಎಳೆದದ್ದರಿಂದಾಗಿ ಮೂಡಿದ ಗೆರೆಗಳು’ ಎಂದು ಜನ ‘ಕಥೆ’ ಹೇಳುವುದನ್ನು ಎಷ್ಟು ಕಡೆ ಕೇಳಿಲ್ಲ! ಸೀತೆಯ ಸಂಕಷ್ಟಗಳನ್ನು ದೇಶದ ಮೂಲೆಮೂಲೆಯ ಹಳ್ಳಿಗಾಡಿನ ಎಷ್ಟೊಂದು ಹೆಂಗೆಳೆಯರು ತಮ್ಮವೇ ಎಂದು ತಂತಮ್ಮ ಭಾಷೆಗಳಲ್ಲಿ ಹೇಳಿಕೊಂಡು ಕೊರಗಿ ಕಣ್ಣೀರು ಹಾಕಿಬಿಡುವುದಿಲ್ಲ! ಅಷ್ಟೇ ಅಲ್ಲ, ಅಯೋಧ್ಯೆಯಿಂದ ಸಹಸ್ರಾರು ಮೈಲು (ಯೋಜನ?) ದೂರದ ನಾಡುಗಳ ಜನ ರಾಮಾಯಣದ ಪಾತ್ರಗಳನ್ನು ತಂತಮ್ಮ ದೈನಂದಿನ ಚಟುವಟಿಕೆಗಳಲ್ಲೂ ಕಾಣತೊಡಗಿದ್ದೂ ಆಗಿಹೋಗಿದೆ. ಇದಕ್ಕೆ ಉದಾಹರಣೆಯನ್ನು ನನ್ನ ಬಾಲ್ಯದಲ್ಲೇ ಕಂಡಿದ್ದೇನೆ. ನನ್ನ ಅಜ್ಜಿ ಅಡಿಗೆಗೆಂದು ಸೊಪು್ಪ-ತರಕಾರಿಗಳನ್ನು ಬಿಡಿಸಿ ಶುದ್ಧಗೊಳಿಸುವಾಗ ‘ಸೀತಮ್ಮ ಅಟ್ಟು, ಶ್ರೀರಾಮರು ಉಂಡು’ ಎಂದು ಹಾಡಿಕೊಳ್ಳುತ್ತಿದ್ದಳು. ಎಲ್ಲಿಯ ತ್ರೇತಾಯುಗದ
ಅಯೋಧ್ಯೆಯ ರಾಮ ಸೀತೆ, ಎಲ್ಲಿಯ ಕಲಿಯುಗದ ಕೊಳ್ಳೇಗಾಲದ ನನ್ನಜ್ಜಿ! ಈ ಬಗೆಯ ಜಾನಪದ ಹಾಡುಗಳು ರಾಮ ಸೀತೆಯರನ್ನು ನಮ್ಮ ಮನೆಯವರೇ ಆಗಿಸಿಬಿಡು ತ್ತಿದ್ದುದಂತೂ ನಿಜ. ಇಂತಹದೇ ಹಾಡುಗಳನ್ನು ದೇಶದ ಎಲ್ಲೆಡೆಯ ಜನ ಅವರವರ ಭಾಷೆಗಳಲ್ಲಿ ಹಾಡಿರಬಹುದು, ಹಾಡುತ್ತಿರಬಹುದು. ರಾಮಾಯಣ ವೆಂಬ ‘ಕಥೆ’ ಪರಸ್ಪರ ಕಂಡೇ ಇಲ್ಲದ ಉತ್ತರದ, ದಕ್ಷಿಣದ ಜನರೆಲ್ಲರನ್ನೂ ಒಂದಾಗಿ ಬೆಸೆದದ್ದು ಹೀಗೆ.
ನಂತರದ ವ್ಯಾಸರ ಮಹಾಭಾರತ ದೇಶದ ಭೌಗೋಳಿಕತೆಯನ್ನು ಮತ್ತಷ್ಟು ವಿಸ್ತರಿಸುತ್ತದೆ. ರಾಮಾಯಣದ ಉತ್ತರ ದಕ್ಷಿಣಗಳಿಗೆ ಮಹಾಭಾರತದಲ್ಲಿ ಪೂರ್ವ ಪಶ್ಚಿಮಗಳು ಸೇರಿಕೊಳ್ಳುತ್ತವೆ. ಪೂರ್ವದಲ್ಲಿ ಅಸ್ಸಾಂ (ಪ್ರಾಗ್ಜೋತಿಷಪುರ) ಭಾರತದ ಭಾಗವಾದರೆ ಪಶ್ಚಿಮದಲ್ಲಿ ಪಶ್ಚಿಮ ಪಂಜಾಬ್ ಮತ್ತು ಬಲೂಚಿಸ್ತಾನ (ಮದ್ರ), ಅವುಗಳಾಚೆಯ ಕಂದಹಾರ್ (ಗಾಂಧಾರ) ಭಾರತಕ್ಕೆ ಸೇರಿಕೊಳ್ಳುತ್ತವೆ, ವಿಶಾಲ ನಾಡಿನ ಉದ್ದಗಲಕ್ಕೂ ಅವುಗಳದೇ ಭಾಷೆಗಳ ಮಹಾಭಾರತಗಳು ಸೃಷ್ಟಿಯಾಗುತ್ತವೆ, ದೇಶದ ಯಾವುದೋ ಮೂಲೆಯಲ್ಲಿ ಮೂರು ಭಾರಿ ಕಲ್ಲು ಗುಂಡುಗಳು ಪ್ರಾಕೃತಿಕವಾಗಿ ಒಂದೆಡೆ ಕಂಡುಬಂದರೆ ‘ಪಾಂಡವರು ವನವಾಸದಲ್ಲಿದ್ದಾಗ ಅಡಿಗೆ ಮಾಡಿಕೊಳ್ಳಲು ಹೂಡಿದ ಕಲ್ಲೊಲೆ’ ಎಂಬ ಐತಿಹ್ಯ ಸೃಷ್ಟಿಯಾಗುತ್ತದೆ. ಒಟ್ಟಿನಲ್ಲಿ ರಾಮಾಯಣ ಆರಂಭಿಸಿದ, ಒಂದಕ್ಕೊಂದು ನೇರ ಸಂಪರ್ಕವೇ ಇಲ್ಲದ ಜನಸಮುದಾಯಗಳನ್ನು ಬಂಧಿಸುವ ‘ಸಾಂಸ್ಕೃತಿಕ ಅಂಟು’ ಪಾತ್ರವನ್ನು ಮಹಾಭಾರತ ಮುಂದುವರಿಸುತ್ತದೆ. ಅಂತಿಮವಾಗಿ ಯಾವ ಸೇನೆಯೂ ಸಾಧಿಸಲಾಗದ ಐಕ್ಯತೆಯನ್ನು ಈ ಎರಡು ಮಹಾಕಾವ್ಯಗಳು ತಣ್ಣಗೆ ಸಾಧಿಸಿಬಿಡುತ್ತವೆ!
ಈ ಎರಡು ಮಹಾಕಾವ್ಯಗಳು, ಅವುಗಳಲ್ಲಿನ ಪ್ರಮುಖ ಪಾತ್ರಗಳು ದೇಶದೆಲ್ಲೆಡೆಯ ಜನರಿಗೆ ಇಷ್ಟೊಂದು ಆಪ್ತ, ಪ್ರಿಯ, ಗೌರವಾರ್ಹ ಪೂಜಾರ್ಹವೆನಿಸಿದ್ದು ಹೇಗೆ? ಇದಕ್ಕೆ ನಿರ್ದಿಷ್ಟ ಕಾರಣಗಳು ಲಭ್ಯವಿಲ್ಲ. ಆದರೆ ರ್ತಾಕವಾಗಿ ಒಂದು ಚಿತ್ರವನ್ನು ಕಟ್ಟಿಕೊಳ್ಳಲು ಅವಕಾಶವಿದೆ. ರಾಮ ಮತ್ತು ಕೃಷ್ಣರು ವಿಷ್ಣುವಿನ ಅವತಾರಗಳೆಂದು ಬಿಂಬಿತವಾಗಿರುವುದು ಸರಿಯಷ್ಟೇ. ಹೇಳಿಕೇಳಿ ವಿಷ್ಣು ಹಿಂದೂಗಳ ದೇವರು, ಈ ದೇವರ ಅವತಾರಗಳು ಮತ್ತೊಬ್ಬ ಹಿಂದೂ ದೇವರಾದ ಶಿವನ ಬಗ್ಗೆ ಅಮಿತ ಭಕ್ತಿಭಾವ ಹೊಂದಿವೆ ಹಾಗೂ ಅದನ್ನು ದೊಡ್ಡದಾಗಿಯೇ ವ್ಯಕ್ತಪಡಿಸುತ್ತವೆ ಕೂಡ. ಹೀಗಾಗಿ ವಿಷ್ಣು ಮತ್ತು ಶಿವನನ್ನು ದೇವರುಗಳೆಂದು ಸ್ವೀಕರಿಸಿ ಪೂಜಿಸುವವರೆಲ್ಲರ ಹೃದಯಗಳಿಗೂ ರಾಮಾಯಣ ಮತ್ತು ಮಹಾಭಾರತಗಳು ಹತ್ತಿರವಾಗಿಬಿಡುತ್ತವೆ, ಅವುಗಳಲ್ಲಿನ ಪ್ರಮುಖ ಪಾತ್ರಗಳಲ್ಲಿ ತಮ್ಮನ್ನೂ, ತಮಗೆ ಪ್ರಿಯರಾದವರನ್ನೂ ಜನರು ಕಾಣತೊಡಗುತ್ತಾರೆ. ಈ ನಿಟ್ಟಿನಲ್ಲಿ ನಮ್ಮ ತರ್ಕವನ್ನು ಮುಂದುವರಿಸುವುದಾದರೆ ಶಿವನನ್ನು ಮತ್ತು ವಿಷ್ಣುವನ್ನು ದೇವರುಗಳೆಂದು ಪೂಜಿಸುವವರು ಅಂದರೆ ಹಿಂದೂಗಳು ರಾಮಾಯಣ ಮತ್ತು ಮಹಾಭಾರತಗಳನ್ನೂ ತಮ್ಮ ದೇವರುಗಳ ಕಥೆಗಳೆಂದೇ ಭಾವಿಸಿ ಅಥವಾ ನಂಬಿ ತಮಗೆ ಹತ್ತಿರವಾಗಿಸಿಕೊಂಡರು, ಆ ಮೂಲಕ ತಂತಮ್ಮ ನಡುವಿನ ಇತರೆಲ್ಲ ಭಾಷಿಕ, ಆಹಾರಪದ್ಧತಿಗಳ ಭೇದಗಳನ್ನೂ ಬದಿಗಿಟ್ಟು ತಾವೆಲ್ಲರೂ ಒಂದು ಎಂಬ ಐಕ್ಯತಾ ಭಾವನೆ ಬೆಳೆಸಿಕೊಂಡರು. ಭಾರತ ಎಂಬ ಸಾಂಸ್ಕೃತಿಕ ಅಸ್ಮಿತೆ ಜನ್ಮತಳೆದಿದ್ದು ಹೀಗೆ.
ಇಲ್ಲೊಂದು ಸ್ಪಷ್ಟೀಕರಣದ ಅಗತ್ಯವಿದೆ. ತನ್ನ ಸಹಸ್ರಾರು ವರ್ಷಗಳ ಸಾಂಸ್ಕೃತಿಕ ಇತಿಹಾಸದಲ್ಲಿ ಭಾರತ ರಾಮಾಯಣ ಮತ್ತು ಮಹಾಭಾರತಗಳ ಜತೆಗೆ ವೇದಗಳು, ಉಪನಿಷತ್ತುಗಳು, ಪುರಾಣಗಳು ಮುಂತಾದ ಅದೆಷ್ಟೋ ಜ್ಞಾನಿಕ, ದಾರ್ಶನಿಕ ಹಾಗೂ ಬೌದ್ಧಿಕ ಕೃತಿಗಳನ್ನೂ ಸೃಷ್ಟಿಸಿದೆ. ಇಷ್ಟಾಗಿಯೂ ಭಾರತೀಯರಲ್ಲಿ ಸಾಂಸ್ಕೃತಿಕ ಬಂಧವನ್ನು ಸೃಷ್ಟಿಸಿ ಬೆಳೆಸಿದ ಹೆಗ್ಗಳಿಕೆಯನ್ನು ಆ ಎರಡು ಮಹಾಕಾವ್ಯಗಳಿಗಷ್ಟೇ ನೀಡುತ್ತೇನೆ. ಯಾಕೆಂದರೆ ರಾಮಾಯಣ, ಮಹಾಭಾರತಗಳ ಹೊರತಾಗಿ ಉಳಿದೆಲ್ಲ ಕೃತಿಗಳು ಸಾರ್ವತ್ರಿಕವಾಗಿ ಸಮಾಜದ ಎಲ್ಲ ವರ್ಗಗಳಿಗೂ ತಲುಪಲಿಲ್ಲ. ಅವು ಒಂದು ಪುಟ್ಟ ಶಿಕ್ಷಿತ-ಚಿಂತಕ-ದಾರ್ಶನಿಕ-ಸಂತ-ಋಷಿ ವಲಯಕ್ಕಷ್ಟೇ ಸೀಮಿತವಾಗುಳಿದವು, ಇಂದಿಗೂ ಹಾಗೇ ಉಳಿದಿವೆ. ಅವುಗಳ ಹೆಸರನ್ನೇ ಕೇಳರಿಯದ ಅಶಿಕ್ಷಿತ ವರ್ಗದ ಬಹುದೊಡ್ಡ ಭಾಗಕ್ಕೆ ರಾಮಾಯಣ ಮತ್ತು ಮಹಾಭಾರತಗಳು ಇಡಿಯಾಗಿ ಗೊತ್ತು ಮತ್ತು ಅವುಗಳಲ್ಲಿನ ಪಾತ್ರ, ಸನ್ನಿವೇಶಗಳನ್ನು ತನ್ನ ಬದುಕಿಗೆ ಸಮೀಕರಿಸಿಕೊಳ್ಳುವುದೂ ಗೊತ್ತು. ರಾಮಾಯಣ ಮತ್ತು ಮಹಾಭಾರತಗಳ ಹೊರತಾದ ಶ್ರುತಿ ಮತ್ತು ಸ್ಮೃತಿಗಳೆಲ್ಲವೂ ಹಿಂದೂ ಮೌಲ್ಯಗಳ ಬೇರುಗಳನ್ನು ಬಲಪಡಿಸುವಲ್ಲಿ, ಪೋಷಿಸುವಲ್ಲಿ ಮಹತ್ತರ ಕಾರ್ಯ ನಿರ್ವಹಿಸುತ್ತಲೇ ಬಂದಿವೆ. ನೆಲದೊಳಗಿನ ತೇವ ಸದ್ದಿಲ್ಲದೆ, ತನ್ನ ಇರುವಿಕೆಯ ಸುಳಿವನ್ನೂ ನೀಡದೆ, ನೆಲದ ಮೇಲೆ ಹಸಿರನ್ನು ಮೂಡಿಸಿ ಕಾಪಿಡುವ ಸುಕೃತ್ಯ ಅವುಗಳದು. ರಾಮಾಯಣ, ಮಹಾಭಾರತಗಳು ಭಾರತ, ಭಾರತೀಯ ಎಂಬ ಸಾಂಸ್ಕೃತಿಕ ಅಸ್ಮಿತೆಗಳಿಗೆ ಜನ್ಮ ನೀಡಿದ ಬಗೆಯನ್ನು ಮೇಲೆ ಹೇಳುತ್ತಿದ್ದೆ ಅಲ್ಲವೇ. ಈ ಅಸ್ಮಿತೆ ಮೂಡಿದ್ದು ನಿರ್ದಿಷ್ಟ ರಾಜಕೀಯ ವ್ಯವಸ್ಥೆಯೊಳಗೆ ಮಾತ್ರವಲ್ಲ. ಹಲವು ಹತ್ತು ರಾಜ್ಯ-ಸಾಮ್ರಾಜ್ಯಗಳಲ್ಲಿ ಹಂಚಿಹೋಗಿದ್ದ, ಪರಸ್ಪರ ನಿರಂತರವಾಗಿ ಕಿತ್ತಾಡುತ್ತಿದ್ದ ರಾಜರು-ಚಕ್ರವರ್ತಿಗಳ ಪ್ರಜೆಗಳಾಗಿದ್ದ, ವಿಭಿನ್ನ ಭಾಷೆಗಳನ್ನು ಮಾತಾಡುತ್ತಿದ್ದ ಜನರ ನಡುವೆ ತಾವೆಲ್ಲ ಒಂದು, ತಾವೆಲ್ಲ ಭಾರತೀಯರು ಎಂಬ ಅಸ್ಮಿತೆ ಮೂಡಿತು. ಮಹಾಪದ್ಮನಂದ, ಅಶೋಕ, ಚಂದ್ರಗುಪ್ತ ವಿಕ್ರಮಾದಿತ್ಯ, ಲಲಿತಾದಿತ್ಯ, ಅಲ್ಲಾವುದ್ದೀನ್ ಖಿಲ್ಜಿ, ಅಕ್ಬರ್- ಇವರಾರ ಕೈಲೂ ಆಗದಿದ್ದನ್ನು ವಾಲ್ಮೀಕಿ, ವ್ಯಾಸರು ಸಾಧಿಸಿಬಿಟ್ಟರು. ಅದನ್ನು ಮುಂದುವರಿಸಿ, ಕಾಲಕಾಲಕ್ಕೆ ನೀರೆರೆದು ಪೋಷಿಸಿದ್ದು ಕಂಬನ್, ಪಂಪ, ಕುಮಾರವ್ಯಾಸ, ಚೈತನ್ಯ, ಕೃತ್ತಿಬಾಸ್ ಓಜಾ, ತುಲಸೀದಾಸ, ಭಾನುಭಕ್ತ ಆಚಾರ್ಯ, ಕುವೆಂಪು ಮುಂತಾದ ನೂರೊಂದು ಸಾಂಸ್ಕೃತಿಕ ವ್ಯಕ್ತಿಗಳು. ಈ ಅಸ್ಮಿತೆಯನ್ನು ತಮಗೆ ಅರಿವೇ ಇಲ್ಲದೆ ಎದೆಯಲ್ಲಿಟ್ಟುಕೊಂಡು ನನ್ನವರೆಗೆ ತಂದದ್ದು ನನ್ನ ಅಜ್ಜಿಯಂತಹ ಕೋಟ್ಯಂತರ ಸಾಮಾನ್ಯ ಭಾರತೀಯರು.
ಇವರೆಲ್ಲದೂ ಸೃಷ್ಟಿಸಿ, ಪೋಷಿಸಿ, ಉಳಿಸಿಕೊಂಡು ಬಂದಿರುವ ‘ಭಾರತೀಯ’ ಎಂಬ ಅಸ್ಮಿತೆ ಜಗತ್ತಿನಲ್ಲೇ ವಿಶಿಷ್ಟ. ಇಂದು ಜಗತ್ತಿನಲ್ಲಿ ಅತಿ ದೊಡ್ಡ ರಾಷ್ಟ್ರೀಯ ಅಸ್ಮಿತೆಯೆಂದರೆ ಚೀನೀ ಹಾನ್ ಅಸ್ಮಿತೆ. ಈ ಜನ ಇಂದು 120 ಕೋಟಿಯಷ್ಟಿದ್ದಾರೆ. ಈ ಹಾನ್ ಜನರೆಲ್ಲರದೂ ಒಂದೇ ಭಾಷೆ, ಒಂದೇ ಆಹಾರಪದ್ಧತಿ, ಒಂದೇ ವಿವಾಹಪದ್ಧತಿ, ಒಂದೇ ಸಾಮಾಜಿಕ ವ್ಯವಸ್ಥೆ. ಜತೆಗೆ ಇತಿಹಾಸದುದ್ದಕ್ಕೂ ಅವರು ಒಂದೇ ರಾಜಕೀಯ ವ್ಯವಸ್ಥೆಯೊಳಗೇ ಇದ್ದಾರೆ. ಹೀಗೆ ಎಲ್ಲವೂ ಒಂದೇ ಆಗಿರುವ ಚೀನೀ ಹಾನ್ ಜನಾಂಗ ತಾವು ಒಂದು ಎಂದು ಭಾವಿಸುವುದು ವಿಶೇಷವೇನೂ ಅಲ್ಲ. ಹಾಗೆಯೇ ಸ್ವಲ್ಪ ಯೂರೋಪಿನತ್ತಲೂ ಹೊರಳೋಣ. ಯೂರೋಪಿಯನ್ನರೆಲ್ಲರೂ ಒಂದೇ ಜನಾಂಗಕ್ಕೆ ಸೇರಿದವರು, ಅವರ ಆಹಾರಪದ್ಧತಿಗಳೂ ಸರಿಸುಮಾರು ಒಂದೇ. ಈ ಏಕತೆಯ ಜತೆಗೇ ನಮ್ಮ ಹಾಗೇ ಅವರಲ್ಲಿ ಭಾಷಾವೈವಿಧ್ಯ ಇದೆ. ತಮ್ಮ ನಡುವಿನ ಜನಾಂಗೀಯ, ಆಹಾರಪದ್ಧತಿಗಳ ಸಾಮ್ಯತೆಗಳನ್ನು ಬದಿಗಿಟ್ಟು ಭಾಷಾ ಭಿನ್ನತೆಯನ್ನೇ ಮುಂದುಮಾಡಿ ಯೂರೋಪಿಯನ್ನರು ಭಾಷೆಗೊಂದು ರಾಷ್ಟ್ರೀಯತೆಯನ್ನೂ, ಅದಕ್ಕನುಗುಣವಾಗಿ ರಾಷ್ಟ್ರ-ರಾಜ್ಯಗಳನ್ನೂ ಸೃಷ್ಟಿಸಿಕೊಂಡಿದ್ದಾರೆ, ಹೀಗಾದದ್ದು ಏಕೆಂದರೆ ಇಡೀ ಯೂರೋಪಿಯನ್ನರು ತಮ್ಮದೇ ಎಂದು ಭಾವಿಸಿಕೊಳ್ಳುವಂಥ ಮಹಾಕಾವ್ಯಗಳು ಅಂದರೆ ನಮ್ಮ ರಾಮಾಯಣ, ಮಹಾಭಾರತಗಳಂತಹವು ಅಲ್ಲಿ ಸೃಷ್ಟಿಯಾಗಲೇ ಇಲ್ಲ. ಇಲಿಯಡ್ ಮತ್ತು ಒಡಿಸ್ಸಿಗಳನ್ನು ಯೂರೋಪಿಯನ್ನರು ನೋಡುವುದು ಪ್ರಾಚೀನ ಗ್ರೀಕ್ ಮಹಾಕಾವ್ಯಗಳು ಎಂದಷ್ಟೇ. ಆ ಕಾವ್ಯಗಳ ಭೌಗೋಳಿಕತೆ ಗ್ರೀಸ್ ಮತ್ತು ಪೂರ್ವ ತುರ್ಕಿಗಳಿಗಷ್ಟೇ ಸೀಮಿತ. ಅವುಗಳಲ್ಲಿನ ಪಾತ್ರಗಳನ್ನು ತಮ್ಮವರು ಎಂದು ಗ್ರೀಕರ ಹೊರತಾಗಿ ಇನ್ನಾವ ಯೂರೋಪಿಯನ್ನರೂ ತಿಳಿಯುವುದಿಲ್ಲ. ಹೆಲೆನ್ಳನ್ನು ಹೊತ್ತೊಯ್ಯುವಾಗ ಪ್ಯಾರಿಸ್ ಇಲ್ಲಿ ಒಂದು ತಾಸು ವಿಶ್ರಮಿಸಿದ್ದ ಎಂದು ಯಾವ ಬ್ರಿಟಿಷನಾಗಲೀ, ಜರ್ಮನನಾಗಲೀ ತಮ್ಮೂರ ಹತ್ತಿರದ ಬೆಟ್ಟದತ್ತ ಬೊಟ್ಟುಮಾಡಿ ತೋರಿಸುವುದಿಲ್ಲ. ಟ್ರೋಜನ್ ಯುದ್ಧ ಮುಗಿದಾದ ನಂತರ ಯುಲಿಸೀಸ್ ಇಲ್ಲಿನ ತಣ್ಣೀರು ಕುಡಿದು ನೆರಳಲ್ಲಿ ವಿಶ್ರಮಿಸಿದ ಎಂದು ಯಾವ ಫ್ರೆಂಚನಾಗಲೀ, ರಷ್ಯನ್ನನಾಗಲೀ ತಮ್ಮೂರ ಹೊರವಲಯದ ಸರೋವರವನ್ನೂ, ಅದರ ತಡಿಯ ಓಕ್ ಮರಗಳನ್ನೂ ತೋರಿಸುವುದಿಲ್ಲ. ಯಾಕೆಂದರೆ ಅಂತಹ ಕಲ್ಪನೆಯನ್ನು ಅವರೆಲ್ಲರಲ್ಲಿ ಬಿತ್ತಬಲ್ಲ ಕವಿಗಳೇ ಅಂದರೆ ಸಾಂಸ್ಕೃತಿಕ ವ್ಯಕ್ತಿಗಳೇ ಅಲ್ಲಿ ಹುಟ್ಟಲಿಲ್ಲ. ಭಾರತೀಯ ಅಸ್ಮಿತೆಯ ಮಹತ್ವ ಅರಿವಾಗುವುದು ಇಲ್ಲಿ.
ಹೀಗೆ ವಿಶ್ವದಲ್ಲೇ ವಿಶಿಷ್ಟವೆನಿಸಿರುವ ಭಾರತೀಯ ಅಸ್ಮಿತೆಗೆ ಹೊಡೆತ ಬಿದ್ದ, ಬೀಳುತ್ತಿರುವ ಬಗೆಯನ್ನು ಮುಂದಿನ ಕಂತಿನಲ್ಲಿ ನೋಡೋಣ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)