

ತನ್ನ ಕುಖ್ಯಾತ ಸೇನೆಯ ಸಹಾಯದಿಂದ ಸಿಸಿಪಿ ಸುತ್ತಲ ಇಪ್ಪತ್ತೊಂದು ದೇಶಗಳ ನೆಲ ಮತ್ತು ಜಲ ಪ್ರದೇಶಗಳ ಮೇಲೆ ಚೀನಾದ ಹಕ್ಕು ಮುಂದೆಮಾಡಿ ಆ ದೇಶಗಳ ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ತರುತ್ತಿದೆ. ಸಿಸಿಪಿ ತನ್ನ ಸೇನೆಯನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬಳಸಿ ನೆಲ ಕಬಳಿಸಿದ ದೇಶಗಳಲ್ಲಿ ಭಾರತದಂಥ ದೊಡ್ಡ ದೇಶವೂ, ರ್ಕಿಘಿಸ್ತಾನದಂಥ ಪುಟ್ಟ ದೇಶವೂ ಇದೆ.
ಪಾಕಿಸ್ತಾನ ತನ್ನ ಸೇನೆಯನ್ನು ಜಮಾಯಿಸಿದ್ದು ಗಲ್ವಾನ್ ಕಣಿವೆಯ ನೇರ ಎದುರಿನಲ್ಲಿ. ಚೀನೀ ಮತ್ತು ಪಾಕ್ ಸೇನೆಗಳೆರಡೂ ಪೂರ್ವ ಪಶ್ಚಿಮಗಳಿಂದ ಏಕಕಾಲದಲ್ಲಿ ಮುಂದೊತ್ತಿ ಬಂದು ಉತ್ತರ ಲಡಾಖ್ ಅನ್ನು ಇಕ್ಕಳದಲ್ಲಿ ಸಿಲುಕಿಸಿಕೊಂಡು ಬಿಡುವಂಥ ಅಪಾಯಕಾರಿ ಸನ್ನಿವೇಶವದು. ಈ ಸಂಯೋಜಿತ ಸೇನಾ ಕ್ರಮಗಳಿಂದ ಎರಡೂ ವೈರಿ ದೇಶಗಳಿಗೆ ತಂತಮ್ಮ ಬಹುಕಾಲದ ಉದ್ದೇಶಗಳು ಸಾಧಿತವಾಗುತ್ತಿದ್ದವು. ಭಾರತ ನಿರ್ವಿುಸಿರುವ ಆಯಕಟ್ಟಿನ ಡಿಎಸ್ಡಿಬಿಓ ರಸ್ತೆ ಚೀನಾದ ವಶವಾಗುತ್ತಿತ್ತು ಮತ್ತು ಅದರೊಂದಿಗೆ ಕಾರಾಕೊರಂ ಕಣಿವೆ ಮತ್ತು ದೌಲತ್ ಬೇಗ್ ಓಲ್ದಿ ಸೇನಾ-ವಾಯುನೆಲೆ ಭಾರತದ ಕೈಬಿಟ್ಟುಹೋಗುತ್ತಿದ್ದವು. ಅತ್ತ ಪಾಕಿಸ್ತಾನ ಸಿಯಾಚಿನ್ ಗ್ಲೇಷಿಯರ್ ಮೇಲೆ ಸುಲಭವಾಗಿ ನಿಯಂತ್ರಣ ಸ್ಥಾಪಿಸಿ ತನ್ನ ಮೂರೂವರೆ ದಶಕಗಳ ಬಯಕೆಯನ್ನು ಪೂರ್ಣಗೊಳಿಸಿಕೊಳ್ಳುತ್ತಿತ್ತು. ಇದನ್ನು ತಡೆಯುವ ಸಾಮರ್ಥ್ಯ ಭಾರತಕ್ಕಿತ್ತೇ?
1962ರ ಯುದ್ಧದ ಹೊರತಾಗಿ ಚೀನೀ ಸೇನೆ ರಣಾಂಗಣದಲ್ಲಿ ಯಾವುದೇ ವಿಜಯ ಸಾಧಿಸಿಲ್ಲ. ಕಮ್ಯೂನಿಸ್ಟ್ ಸರ್ಕಾರವೂ ಆ ದೇಶದ ಗಾತ್ರಕ್ಕೆ ಗೌರವ ತರುವಂಥ ಧೈರ್ಯ, ಸಾಹಸಗಳನ್ನು ಪ್ರದರ್ಶಿಸಿಲ್ಲ. ಸೇನೆಯೇ ಇಲ್ಲದ ಟಿಬೆಟ್ ಅನ್ನು 1950ರಲ್ಲಿ ಚೀನಾ ಆಕ್ರಮಿಸಿಕೊಂಡದ್ದನ್ನು ಯಾವ ಬಗೆಯಲ್ಲೂ ಸೇನಾ ಹಾಗೂ ರಾಜಕೀಯ ವಿಜಯವೆಂದು ಕರೆಯಲಾಗದು. 1958ರಲ್ಲಿ ತೈವಾನ್ಗೆ ಸೇರಿದ, ತನ್ನ ತೀರಕ್ಕೆ ಕೂಗಳತೆಯಷ್ಟು ದೂರದಲ್ಲಿರುವ ಕ್ವಿಮಾಯ್ ಹಾಗೂ ಮತ್ಸು ದ್ವೀಪಗಳನ್ನು ಆಕ್ರಮಿಸಿಕೊಳ್ಳಲು ಮುನ್ನುಗ್ನಿದ ಚೀನಾ ಅಂದಿನ ಅಮೆರಿಕ ಅಧ್ಯಕ್ಷ ಐಸೆನ್ಹೋವರ್ ಗುಟುರು ಹಾಕಿದೊಡನೇ ಬಾಲ ಮುದುರಿಕೊಂಡು ಹಿಂದಕ್ಕೆ ಸರಿದುಬಿಟ್ಟಿತು. 1962ರಲ್ಲಿ ಭಾರತದ ವಿರುದ್ಧ ಅದು ವಿಜಯ ಸಾಧಿಸಿದರೂ ಅಂದು ನಿಜವಾದ ಅರ್ಥದಲ್ಲಿ ಸೋತದ್ದು ಭಾರತೀಯ ರಾಜಕೀಯ ನಾಯಕತ್ವ, ಭಾರತೀಯ ಸೇನೆಯಲ್ಲ. ನಂತರ 1967ರಲ್ಲಿ ಸಿಕ್ಕಿಂ-ಚುಂಬಿ ಕಣಿವೆ ಗಡಿಯಲ್ಲಿ ಭಾರತ ಸಾಧಿಸಿದ್ದು ಅಭೂತಪೂರ್ವ ವಿಜಯ. ತಾನೇ ಕಾಲುಕೆರೆದು ಕಾಳಗಕ್ಕಿಳಿದ ಚೀನೀ ಸೇನೆ ಭಾರತದ 88 ಸೈನಿಕರಿಗೆ ಪ್ರತಿಯಾಗಿ 340 ಸೈನಿಕರನ್ನು ಕಳೆದುಕೊಂಡು ಓಡಿಹೋಯಿತು. ಅಂದು ಕಳೆದುಕೊಂಡ ಪ್ರದೇಶವನ್ನು ಮರಳಿ ಪಡೆಯುವ ಪ್ರಯತ್ನವನ್ನು ಚೀನೀ ಸೇನೆಯಾಗಲೀ ಸರ್ಕಾರವಾಗಲೀ ಇದುವರೆಗೆ ಮಾಡಿಲ್ಲ. ಅದಾದ ನಂತರ ಚೀನೀ ಸೇನೆ ರಣಾಂಗಣಕ್ಕಿಳಿದದ್ದು ಒಂದೇ ಬಾರಿ, 1979ರ ಫೆಬ್ರವರಿಯಲ್ಲಿ. ಆಗ ‘ವಿಶ್ವದ ಅತಿ ದೊಡ್ಡ ಸೇನೆ’ ಪುಟ್ಟ ವಿಯೆಟ್ನಾಂನಿಂದ ಮೂಗಿನ ಮೇಲೇ ಗುದ್ದಿಸಿಕೊಂಡದ್ದೀಗ ಇತಿಹಾಸ. ಈಗಲೂ ಚೀನೀ ಸೇನೆಯ ಕಾದುವ ಸಾಮರ್ಥ್ಯದ ಬಗ್ಗೆ ಅಂತಾರಾಷ್ಟ್ರೀಯ ವಲಯದಲ್ಲಿ ತೀವ್ರ ಅನುಮಾನಗಳಿವೆ. ದಕ್ಷಿಣ ಸುಡಾನ್ನಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಭಾಗವಾಗಿದ್ದ ಚೀನೀ ಸೇನೆ 2015ರಲ್ಲಿ ಬಂಡುಕೋರರ ವಿರುದ್ಧ ನಿಲ್ಲಲಾರದೇ ತನ್ನ ಶಿಬಿರವನ್ನೇ ತೊರೆದು ಓಡಿಹೋದದ್ದನ್ನೂ, ಹತ್ತಿರದಲ್ಲಿದ್ದ ಭಾರತೀಯ ಪಡೆ ಸಹಾಯಕ್ಕೆ ಧಾವಿಸಿ ಕಳೆದುಹೋಗಿದ್ದ ಶಿಬಿರವನ್ನು ಚೀನೀಯರಿಗೆ ಮರಳಿ ಕೊಡಿಸಿದ್ದನ್ನೂ ಇಡೀ ಜಗತ್ತೇ ನೋಡಿದೆ. ನೇರ ಮುಖಾಮುಖಿಯಲ್ಲಿ ಭಾರತೀಯ ಸೇನೆಯ ಎದುರು ಚೀನೀ ಸೇನೆ ನಿಲ್ಲಲಾರದೆಂದು ಜೂನ್ 15ರಂದು ಗಲ್ವಾನ್ ಕಣಿವೆಯಲ್ಲಿ ಜಗತ್ತು ನೋಡಿದೆ. ಈ ಹಿನ್ನೆಲೆಯಲ್ಲಿ ಇಂದಿನ ವಾಸ್ತವವೆಂದರೆ ಲಡಾಖ್ನ ಹತೋಟಿ ರೇಖೆಯಲ್ಲಿ ನಾವು ಹೆದರಬೇಕಾಗಿರುವುದು ಚೀನೀ ಸೈನಿಕರಿಗಲ್ಲ, ಬದಲಾಗಿ (ಅವರು ಸರಿಯಾಗಿ ಉಪಯೋಗಿಸುವುದಾದರೆ) ಅವರ ಶಸ್ತ್ರಾಸ್ತ್ರಗಳಿಗೆ, ಮುಖ್ಯವಾಗಿ ಎಸ್-300 ಮತ್ತು ಎಸ್-400 ಮಿಸೈಲ್ಗಳಿಗೆ.
ಆದರೆ ಪಾಕಿಸ್ತಾನೀ ಸೇನೆಯನ್ನು ಹೀಗೆ ಹಗುರವಾಗಿ ನೋಡುವ ಹಾಗಿಲ್ಲ. ಖೈಬರ್-ಪಕ್ತೂನ್ಖ್ವಾ ಪ್ರಾಂತ್ಯದಲ್ಲಿ ಹಲವು ಬಂಡುಕೋರ ಸೇನೆಗಳೊಂದಿಗೆ ನಿರಂತರ ಕಾಳಗದ ಅನುಭವ ಹಾಗೂ ಅವುಗಳನ್ನು ಬಗ್ಗುಬಡಿದ ಅನುಭವವಿರುವ ಪಾಕಿಸ್ತಾನೀ ಸೇನೆಯ ಕಾದುವ ಸಾಮರ್ಥ್ಯನ್ನು ನಾವು ನಿರ್ಲಕ್ಷಿಸಲಾಗದು. ಇಪ್ಪತ್ತೊಂದು ವರ್ಷಗಳ ಹಿಂದೆ ಅವರನ್ನು ಕಾರ್ಗಿಲ್ ಉನ್ನತ ಪ್ರದೇಶಗಳಿಂದ ಹೊರದೂಡಲು ನಮಗೆ ಅಮೆರಿಕದ ರಾಜತಾಂತ್ರಿಕ ಸಹಾಯ ಬೇಕಾಯಿತೆಂಬುದನ್ನು ನಾವು ಮರೆಯಬಾರದು. ಇಂತಹ ಸ್ಥಿತಿಯಲ್ಲಿ ಇಂದು ಪಾಕ್ ಸೈನಿಕರು ಮತ್ತು ಚೀನೀ ಶಸ್ತ್ರಾಸ್ತ್ರಗಳ ಒಟ್ಟುಗೂಡುವಿಕೆ ನಮಗೆ ಘಾತಕವಾಗಬಹುದಾಗಿದದ್ದು ನಿಶ್ಚಿತ.
ಎದುರಾಗಲಿದ್ದ ಪ್ರತಿಕೂಲ ಪರಿಸ್ಥಿತಿಯನ್ನು ನಿಭಾಯಿಸಲು ಭಾರತ ತೀವ್ರ ಗತಿಯಲ್ಲಿ ತಯಾರಿ ನಡೆಸಿತು. ಇರುವ ಶಸ್ತ್ರಾಸ್ತ್ರಗಳೊಂದಿಗೆ ಶಸ್ತ್ರಭಂಡಾರವನ್ನು ವೃದ್ಧಿಸಿಕೊಳ್ಳುವ ಪ್ರಯತ್ನಕ್ಕೆ ಸರ್ಕಾರ ತೊಡಗಿತು. ಇಸ್ರೇಲ್ ಮತ್ತು ಅಮೆರಿಕಗಳಿಂದ ಕ್ಷಿಪಣಿಗಳು ಮತ್ತು ಟ್ಯಾಂಕ್ಗಳನ್ನು ಪಡೆದುಕೊಳ್ಳುವ ಪ್ರಯತ್ನ ಶೀಘ್ರ ಯಶಸ್ಸಿನ ಹಾದಿ ಹಿಡಿದರೆ ರಷ್ಯಾದಿಂದ ಯುದ್ಧವಿಮಾನಗಳನ್ನು ಪಡೆದುಕೊಳ್ಳುವ ಪ್ರಯತ್ನ ತಾಂತ್ರಿಕ ಕಾರಣಗಳಿಂದಾಗಿ ಮಂದಗತಿಯಲ್ಲಿ ಸಾಗಿತು. ಇಂತಹ ಸನ್ನಿವೇಶದಲ್ಲಿ ಭಾರತಕ್ಕೆ ಬೆಂಬಲವಾಗಿ ಬಂದದ್ದು ಬದಲಾದ ಜಾಗತಿಕ ಮನೋಭಾವ.
ಭಾರತ ಮತ್ತು ಚೀನಾಗಳು ಕಳೆದ ಆರು ದಶಕಗಳಿಂದ ಕಿತ್ತಾಡುತ್ತಿರುವುದು ಜನವಸತಿಗೆ ಯೋಗ್ಯವಲ್ಲದ, ಹಿಮಾಚ್ಛಾದಿತ ಪರ್ವತಗಳ ಸಂದುಗೊಂದುಗಳಿಗಾಗಿ. ಜಾಗತಿಕ ಭೂ-ರಾಜಕೀಯ, ಭೂ-ಆರ್ಥಿಕ, ಭೂ-ಸಾಮರಿಕ ನಕಾಶೆಯಲ್ಲಿ ‘ಸದ್ಯಕ್ಕೆ’ ಮಹತ್ವದ್ದಾಗಿ ಕಾಣದ ಈ ಪ್ರದೇಶಗಳು ಮತ್ತು ಅವುಗಳಿಗಾಗಿ ನಡೆಯುವ ಕಿತ್ತಾಟಗಳು ಜಾಗತಿಕ ಶಕ್ತಿಗಳಿಗೆ ಮುಖ್ಯ ಎನಿಸುವುದಿಲ್ಲ. ಆದರಿಂದು ಪರಿಸ್ಥಿತಿ ಬೇರೊಂದು ಬಗೆಯ ತಿರುವು ಪಡೆದುಕೊಂಡಿದೆ. ಶೀತಲ ಸಮರದ ಕಾಲದಲ್ಲಿ ಅಮೆರಿಕ ಮತ್ತದರ ಸಹಯೋಗಿಗಳು ತಮ್ಮ ಏಕೈಕ ಶತ್ರುವೆಂದು ಬಗೆದದ್ದು ಸೋವಿಯೆತ್ ಯೂನಿಯನ್ ಅನ್ನು. ಆ ಕಮ್ಯೂನಿಸ್ಟ್ ದೈತ್ಯನನ್ನು ನಿಶ್ಶಕ್ತಗೊಳಿಸುವ ಕಾರ್ಯಯೋಜನೆಯ ಒಂದು ಭಾಗವಾಗಿ ಅವು ಚೀನಾವನ್ನು ಓಲೈಸತೊಡಗಿದವು. ಸೋವಿಯೆತ್ ಯೂನಿಯನ್ಗೆ ತನ್ನದೇ ಕಮ್ಯೂನಿಸ್ಟ್ ಬಣದಲ್ಲಿ ಪ್ರಬಲ ಪ್ರತಿಸ್ಪರ್ಧಿಯನ್ನು ಸೃಷ್ಟಿಸುವುದರ ಮೂಲಕ ಅದನ್ನು ಹತಾಶೆಗೊಳಿಸಿ ಶರಣಾಗತಿಯತ್ತ ಒಯ್ಯಬಹುದೆಂದು ಅವು ರ್ತಸಿದ್ದವು. ಅಂದು ಚೀನಾದ ವರ್ತನೆಯೂ ಅವುಗಳ ತರ್ಕಕ್ಕೆ ಇಂಬುಗೊಡುವಂತೆಯೇ ಇತ್ತು. ನಂತರ ಚೀನಾ ತನ್ನ ಕೋಟ್ಯಂತರ ಕೂಲಿಕಾರರನ್ನೂ, ಅಗಾಧ ಪ್ರಾಕೃತಿಕ ಸಂಪತ್ತನ್ನೂ, ಅವೆಲ್ಲವನ್ನೂ ಉಪಯೋಗಿಸಿಕೊಂಡು ಎಲ್ಲ ಬಗೆಯ ಅಗತ್ಯ ವಸ್ತುಗಳನ್ನೂ ನಿರಾತಂಕವಾಗಿ ಉತ್ಪಾದಿಸಲು ಅಗತ್ಯವಾದ ಮುಷ್ಕರರಹಿತ ವಾತಾವರಣವನ್ನೂ ಪಾಶ್ಚಿಮಾತ್ಯ ಜಗತ್ತಿನ ಮುಂದಿಟ್ಟಾಗ ಪಶ್ಚಿಮದ ಲಾಭಕೋರ ಬಂಡವಾಳಶಾಹಿಗಳು ಅದಕ್ಕೆ ನಾ ಮುಂದು ತಾ ಮುಂದು ಎಂದು ಮುಗಿಬಿದ್ದವು. ಆಗ ‘ಜಗತ್ತಿನ ಕಾರ್ಖಾನೆ’ಯಾಗಿ ಬದಲಾದ ಚೀನಾ ಅದರಿಂದ ಬಂದ ಅಗಾಧ ಆದಾಯವನ್ನು ತನ್ನದೇ ಸ್ವಂತ ಆರ್ಥಿಕ ಶಕ್ತಿ ಹಾಗೂ ಸೇನಾ ಸಾಮರ್ಥ್ಯ ವೃದ್ಧಿಗಾಗಿ ಬಳಸತೊಡಗಿದ್ದು ಸೋವಿಯೆತ್-ವಿರೋಧ ಹಾಗೂ ಲಾಭಕೋರತನದಿಂದ ತಮ್ಮ ಕಣ್ಣುಗಳನ್ನೇ ಮಬ್ಬಾಗಿಸಿಕೊಂಡಿದ್ದ ಪಶ್ಚಿಮ ಜಗತ್ತಿಗೆ ಕಾಣಲೇ ಇಲ್ಲ. ಚೀನಾ ಕೂಡ ತನ್ನ ಹುನ್ನಾರಗಳನ್ನು ಮರೆಯಾಗಿಯೇ ಇರಿಸಿತ್ತು. ಮಹಾನಾಯಕ ಡೆಂಗ್ ಷಿಯಾವೋ-ಪಿಂಗ್ "Hide your strength, Bide your time' ಎಂಬ ಕಿವಿಮಾತನ್ನು ತನ್ನ ಜನರಿಗೆ ಹೇಳಿಯೇ ಇದ್ದನಲ್ಲ!
ಚೀನೀ ಮುಖವಾಡದ ಹಿಂದಿನ ಕರಾಳತೆಗೆ ಜಗತ್ತು ಅದೆಷ್ಟು ಕುರುಡಾಗಿತ್ತೆಂದರೆ ಚೀನಾವನ್ನು ಅಮೆರಿಕದ ಪ್ರಮುಖ ಆರ್ಥಿಕ ಸಹಯೋಗಿ ಎಂದು ಬಗೆದ ಅಧ್ಯಕ್ಷ ಹಿರಿಯ ಜಾರ್ಜ್ ಬುಷ್ 1992-93ರಲ್ಲಿ ಅದನ್ನು ವಿಶ್ವ ಆರ್ಥಿಕ ಸಂಘಟನೆಗೆ ಸೇರಿಸಲು ಇನ್ನಿಲ್ಲದ ಕಸರತ್ತು ನಡೆಸಿದರೆ ಎರಡು ದಶಕಗಳ ನಂತರ, ಟಿಬೆಟ್ನಲ್ಲಿ ಚೀನೀಯರು ಎಸಗುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಹೇಗಾದರೂ ತಡೆಯಬೇಕೆಂದು ಬೇಡಿಕೊಂಡ ದಲೈಲಾಮಾರಿಗೆ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದು ‘ಚೀನೀಯರ ಜತೆ ಮಾತಾಡಿ’ ಎಂದು! ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಎನ್ನುವಂತೆ ಅಮೆರಿಕದ ಈ ನೀತಿಯನ್ನೇ ಜಗತ್ತಿನ ಪ್ರಮುಖ ರಾಷ್ಟ್ರಗಳೆಲ್ಲವೂ ಅನುಸರಿಸಿದವು.
ಇದೆಲ್ಲವೂ ಬದಲಾದದ್ದು ಡೊನಾಲ್ಡ್ ಟ್ರಂಪ್ ಶ್ವೇತಭವನ ಪ್ರವೇಶಿಸಿದಾಗ. ಅಮೆರಿಕ ಸೇರಿ ಮುಕ್ತ ಜಗತ್ತಿನ ಅತಿದೊಡ್ಡ ಶತ್ರು ರಷ್ಯಾವೂ ಅಲ್ಲ, ಇಸ್ಲಾಮಿಕ್ ಮೂಲಭೂತವಾದವೂ ಅಲ್ಲ, ಅದು ಚೀನಾ ಮಾತ್ರ ಎಂದು ಸರಿಯಾಗಿಯೇ ಗುರುತಿಸಿದ ಟ್ರಂಪ್ ಚೀನೀ ಕರಾಳತೆಯ ಬೆನ್ನುಲುಬಾದ ಆರ್ಥಿಕ ಸಾಮರ್ಥ್ಯನ್ನು ಕುಗ್ಗಿಸಲು ವಿವಿಧ ಕ್ರಮಗಳನ್ನು ಕೈಗೊಂಡರು. ಅವರದು ಏಕಾಂಗಿ ಹೋರಾಟ. ಯೂರೋಪಿಯನ್ ರಾಷ್ಟ್ರಗಳು ತಮ್ಮ ಪಾಡಿಗೆ ತಾವು ಚೀನಾ ಜತೆಗಿನ ಚಕ್ಕಂದವನ್ನು ಮುಂದುವರಿಸಿದವು. ಅವುಗಳ ಕಣ್ಣನ್ನು ಕೊನೆಗೂ ತೆರೆಸಿದ್ದು ಕರೊನಾ ವೈರಸ್. ಈಗ ಇಡೀ ಜಗತ್ತು ಚೀನಾವನ್ನು ನೋಡುವುದು ಹೀಗೆ- ಚೀನೀ ಕಮ್ಯೂನಿಸ್ಟ್ ಪಕ್ಷ (ಸಿಸಿಪಿ) ತನ್ನದೇ ಸೇನೆ ಹೊಂದಿದೆ. ಆ ಸೇನೆ ಸಾಂಖ್ಯಿಕವಾಗಿ ಜಗತ್ತಿನಲ್ಲೇ ಅತಿ ದೊಡ್ಡದು. ಈ ಭಾರಿ ಸೇನೆಯನ್ನು ಉಪಯೋಗಿಸಿಕೊಂಡು ಸಿಸಿಪಿ ನಿರಂಕುಶಾಧಿಕಾರ ನಡೆಸುತ್ತಿದೆ. ವಿರೋಧಿಗಳನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲುತ್ತದೆ. ಇಡೀಇಡೀ ಜನಾಂಗಗಳೇ ಸಿಸಿಪಿಯ ಕ್ರೌರ್ಯಕ್ಕೆ ಬಲಿಯಾಗಿವೆ. ಉಯ್ಘರ್ ಷಿನ್ಜಿಯಾಂಗ್ ಪ್ರಾಂತ್ಯದಲ್ಲಿ ಯಾತನಾಶಿಬಿರಗಳಲ್ಲಿ ಕೊಳೆಯುತ್ತಿರುವವರ ಸಂಖ್ಯೆ ಒಂದು ಮಿಲಿಯನ್ಗಿಂತಲೂ ಅಧಿಕ. ಟಿಬೆಟ್ ಮತ್ತು ಹೊರ ಮಂಗೋಲಿಯಾಗಳಲ್ಲೂ ಲಕ್ಷಾಂತರ ಜನ ಕಾಣೆಯಾಗಿದ್ದಾರೆ ಅಥವಾ ಯಾತನಾ ಶಿಬಿರಗಳಲ್ಲಿದ್ದಾರೆ.
ಇದು ಚೀನಾದ ಒಳಗಿನ ದುರಂತವಾದರೆ, ತನ್ನ ಅದೇ ಕುಖ್ಯಾತ ಸೇನೆಯ ಸಹಾಯದಿಂದ ಸಿಸಿಪಿ ಸುತ್ತಲ ಇಪ್ಪತ್ತೊಂದು ದೇಶಗಳ ನೆಲ ಮತ್ತು ಜಲ ಪ್ರದೇಶಗಳ ಮೇಲೆ ಚೀನಾದ ಹಕ್ಕು ಮುಂದೆಮಾಡಿ ಆ ದೇಶಗಳ ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ತರುತ್ತಿದೆ. ಸಿಸಿಪಿ ತನ್ನ ಸೇನೆಯನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬಳಸಿ ನೆಲ ಕಬಳಿಸಿದ ದೇಶಗಳಲ್ಲಿ ಭಾರತದಂಥ ದೊಡ್ಡ ದೇಶವೂ, ರ್ಕಿಘಿಸ್ತಾನದಂಥ ಪುಟ್ಟ ದೇಶವೂ ಇದೆ ಮತ್ತು ಈಗ ಅಪಾಯ ಎದುರಿಸುತ್ತಿರುವ ದೇಶಗಳಲ್ಲಿ ಬ್ರುನೈನಂಥ ಪುಟಾಣಿ ದೇಶವೂ ಇದೆ, ರಷ್ಯಾದಂಥ ಬೃಹತ್ ದೇಶವೂ ಇದೆ! ಹೀಗೆ ಚೀನಾದ ಒಳಗೆ ಮತ್ತು ಹೊರಗೆ ನಿರಂತರ ಅಶಾಂತಿ ಮತ್ತು ಭಯದ ವಾತಾವರಣವನ್ನು ಸೃಷ್ಟಿಸುತ್ತಿರುವ ಚೀನೀ ಕಮ್ಯೂನಿಸ್ಟ್ ಪಕ್ಷ ಜಗತ್ತನ ಅತಿದೊಡ್ಡ ಭಯೋತ್ಪಾದಕ ಸಂಘಟನೆ! ಇಂತಹ ಶಾಂತಿಕಂಟಕ ಸಿಸಿಪಿಯನ್ನು ಹಲವು ರಂಗಗಳಲ್ಲಿ ಎದುರಿಸಿ ಮಣಿಸಬೇಕು.
ಸಿಸಿಪಿಯನ್ನು ಮಣಿಸಲು ಅಮೆರಿಕ ಮತ್ತು ಅದರ ಮಿತ್ರದೇಶಗಳು ಆಯ್ಕೆ ಮಾಡಿಕೊಂಡಿರುವ ಎರಡು ಪ್ರಮಖ ರಣಾಂಗಣಗಳು ಭಾರತ-ಚೀನಾ ಗಡಿ ಮತ್ತು ಪಶ್ಚಿಮ ಪೆಸಿಫಿಕ್ ವಲಯ. ಅದರ ಪ್ರಕಾರ, ಭಾರತದ ವಿರುದ್ಧ ಚೀನಾ ಮತ್ತು ಪಾಕಿಸ್ತಾನಗಳು ಒಟ್ಟುಗೂಡುತ್ತಿದ್ದಂತೇ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪೆಯೋ ‘ಅಮೆರಿಕದ ರಕ್ಷಣಾ ಪಡೆಗಳು ಭಾರತದ ಸಹಾಯಕ್ಕಿವೆ’ ಎಂದು ಘೊಷಿಸಿದರು, ಚೀನಾ ಜತೆಗಿನ ಸ್ನೇಹವನ್ನು ಸೀಮಿತಗೊಳಿಸುವಂತೆ ಪಾಕಿಸ್ತಾನವನ್ನು ಎಚ್ಚರಿಸಿದರು. ಜೂನ್ 27ರಂದು ಅಮೆರಿಕ ತನ್ನ 9,500 ಸೈನಿಕರನ್ನು ಜರ್ಮನಿಯಿಂದ ಹೊರತಂದು ಇಂಡೋ-ಪೆಸಿಫಿಕ್ ವಲಯದಲ್ಲಿ ನೆಲೆಗೊಳಿಸಿತು, ಚೀನಾ ತನ್ನದು ಎಂದು ಹೇಳಿಕೊಂಡು ಸುತ್ತಲ ಸಣ್ಣಪುಟ್ಟ ದೇಶಗಳ ಎದುರು ಆಟಾಟೋಪ ನಡೆಸುತ್ತಿದ್ದ ದಕ್ಷಿಣ ಚೀನಾ ಸಮುದ್ರಕ್ಕೆ ಎರಡು ವಿಮಾನವಾಹಕ ಯುದ್ಧನೌಕೆಗಳನ್ನು ಕಳುಹಿಸಿ ಇದು ಆರಂಭವಷ್ಟೇ ಎಂದೂ ಹೇಳಿತು. ಭಾರತವಂತೂ ಸೇನಾ-ಆರ್ಥಿಕ ಕಾರ್ಯಾಚರಣೆಗೆ ಸಜ್ಜುಗೊಂಡು ನಿಂತಾಗಿತ್ತು.
ಅಮೆರಿಕ ಮತ್ತು ಭಾರತದ ಹಿಂದೆಯೇ ಜಪಾನ್, ತೈವಾನ್ಗಳು ಚೀನಾಗೆದುರಾಗಿ ಕ್ಷಿಪಣಿಗಳನ್ನು ಸಜ್ಜುಗೊಳಿಸಿದವು, ಆಸ್ಟ್ರೇಲಿಯಾ ತಾನೂ ಎಲ್ಲಕ್ಕೂ ಸಿದ್ಧ ಎಂದು ಘೊಷಿಸಿತು. ವಿಯೆಟ್ನಾಂ ಮತ್ತು ಇಂಡೋನೇಷ್ಯಾಗಳು ಸದ್ದಿಲ್ಲದೆ ತಯಾರಿ ಆರಂಭಿಸಿದವು. ಈ ಪಟ್ಟಿಗೆ ಈಗ ಥಾಯ್ಲೆಂಡ್ ಸಹ ಸೇರಿದೆ ಎಂದು ಸುದ್ದಿ. ಇದಕ್ಕೆ ಚೀನಾದ ಪ್ರತಿಕ್ರಿಯೆ? ಲಡಾಖ್ನಲ್ಲಿ ಹಿಂದೆ ಸರಿದಿದೆ, ದಕ್ಷಿಣ ಚೀನಾ ಸಮುದ್ರದಲ್ಲಿ ಮಾನ ಉಳಿಸಿಕೊಳ್ಳಲು ಅಮೆರಿಕದ ಯುದ್ಧನೌಕೆಗಳಿಗೆ ಪ್ರತಿಯಾಗಿ ಒಂದೆರಡು ಫ್ರಿಗೇಟ್ಗಳು ಸೇರಿ ಕೆಲವು ಸಣ್ಣಪುಟ್ಣ ನೌಕೆಗಳನ್ನು ಕಳಹಿಸಿದೆ, ಹಿಂದೆಯೇ ಅಮೆರಿಕ ತಯಾರಿದ್ದರೆ ತಾನು ಮಾತುಕತೆಗೆ ಸಿದ್ಧ ಎಂದೂ ಹೇಳಿದೆ. ಅತ್ತ ಪಾಕಿಸ್ತಾನ ತಾನು ಸೇನಾ ಜಮಾವಣೆ ಮಾಡಿಯೇ ಇಲ್ಲ ಅನ್ನತೊಡಗಿದೆ. ಲೋಕಕಂಟಕ ಚೀನಾ ಇಂದು ಒಂಟಿ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)