

ಹಾಗೆ ನೋಡಿದರೆ ಇತ್ತೀಚಿನ ದಿನಗಳಲ್ಲಿ ಜಾಗತಿಕವಾಗಿ ಇದೇ ಅತಿ ದೊಡ್ಡ ಪ್ರವಾಹವಲ್ಲ. ಆ ದಾಖಲೆ ಇರುವುದು ಎರಡು ವರ್ಷಗಳ ಹಿಂದೆ ಚೀನಾ ಅನುಭವಿಸಿದ ದುರಂತಕ್ಕೆ. ಹಿಂದಿನ 80 ವರ್ಷಗಳಲ್ಲಿಯೇ ಅತ್ಯಧಿಕ ಪ್ರಮಾಣದ ಮಳೆಯಿಂದಾಗಿ ಜೂನ್-ಆಗಸ್ಟ್ 2020ರಲ್ಲಿ ಚೀನಾದ ಮೂರನೆಯ ಎರಡು ಭಾಗದಷ್ಟು ಅಂದರೆ ಇಡೀ ಪಾಕಿಸ್ತಾನದ ಎಂಟು ಪಟ್ಟು ಮತ್ತು ನಮ್ಮ ಭಾರತದ ಎರಡು ಪಟ್ಟು ಪ್ರದೇಶ ಪ್ರವಾಹ ಮತ್ತು ಭೂಕುಸಿತಕ್ಕೆ ಒಳಗಾಗಿತ್ತು. ಹಲವು ಅಣೆಕಟ್ಟೆಗಳು ಕುಸಿದು ಕೋಟ್ಯಂತರ ಜನರು ಸಂಕಷ್ಟಕ್ಕೀಡಾಗಿದ್ದರು. ಸಾವು-ನೋವಿನ ಪ್ರಮಾಣದ ಸ್ಪಷ್ಟ ಚಿತ್ರಣ ಹೊರಜಗತ್ತಿಗೆ ದೊರೆಯದಿದ್ದರೂ ಅದು ಅಗಾಧವಾಗಿಯೇ ಇದ್ದಿರಬಹುದು. ಕೋವಿಡ್ ಸಂಕಷ್ಟದ ನಡುವೆ ಈ ಪ್ರಮಾಣದ ನೈಸರ್ಗಿಕ ವಿಕೋಪಕ್ಕೆ ದೈತ್ಯ ಚೀನಾ ತತ್ತರಿಸಿಹೋಗಿತ್ತು. ಅಪಾರ ಪ್ರಮಾಣದ ಬೆಳೆ ನಾಶ ಮತ್ತು ಮಳೆ- ಪ್ರವಾಹ- ಭೂಕುಸಿತಗಳಿಂದಾಗಿ ಸಾಗಾಣಿಕೆ ವ್ಯವಸ್ಥೆ ಕುಸಿದುಬಿದ್ದು, ದೇಶದಲ್ಲಿ ಆಹಾರ ಪದಾರ್ಥಗಳ ಭಾರಿ ಕೊರತೆ ಉಂಟಾದ ಕಾರಣ, ಜನತೆ ಆಹಾರ ಸೇವನೆಯನ್ನು ಮಿತಿಗೊಳಿಸಬೇಕೆಂದೂ; ಆಹಾರ ವ್ಯರ್ಥವಾಗಕೂಡದೆಂದೂ ಸರ್ಕಾರ ಕಟ್ಟಳೆ ವಿಧಿಸಿತ್ತು.
ಇಂದಿನ ಪಾಕ್ ಪ್ರವಾಹವನ್ನು ಚೀನೀ ದುರಂತಕ್ಕೆ ಹೋಲಿಸಲಾಗದಿದ್ದರೂ ದಕ್ಷಿಣ ಏಷ್ಯಾದ ಈ ದೇಶದ ಮಟ್ಟಿಗಂತೂ ಇದು ಅತಿದೊಡ್ಡ ನೈಸರ್ಗಿಕ ವಿಕೋಪ. ದೇಶದ ನಾಲ್ಕೂ ಪ್ರಾಂತ್ಯಗಳನ್ನು ಪ್ರಭಾವಿಸಿರುವ ಈ ಪ್ರವಾಹದಿಂದಾಗಿ ಈವರೆಗೆ 481 ಮಕ್ಕಳೂ ಸೇರಿ 1355 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಏಳು ಲಕ್ಷ ಜಾನುವಾರುಗಳು ಅಸುನೀಗಿವೆ. ಹತ್ತು ಲಕ್ಷದಷ್ಟು ಮನೆಗಳು ಕುಸಿದಿವೆ ಅಥವಾ ನೀರಿನಲ್ಲಿ ಮುಳುಗಿವೆ, ಆರು ಸಾವಿರ ಕಿಲೋಮೀಟರ್ ಉದ್ದದ ರಸ್ತೆಗಳು ಹಾಳಾಗಿವೆ. ಒಟ್ಟಾರೆ 3.30 ಕೋಟಿ ಜನ ಒಂದಲ್ಲಾ ಒಂದು ಬಗೆಯಲ್ಲಿ ವಿಪತ್ತಿಗೊಳಗಾಗಿದ್ದಾರೆ. ಸುಮಾರು ಆರೂವರೆ ಲಕ್ಷ ಜನರು ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ, ಆ ಶಿಬಿರಗಳಲ್ಲಿ ಶುದ್ದ ನೀರು, ಆಹಾರ ಮತ್ತು ನೈರ್ಮಲ್ಯದ ಕೊರತೆ ಬಹಳವಿದೆ. ಪ್ರವಾಹದ ಉಗ್ರ ಹೊಡೆತಕ್ಕೆ ಒಳಗಾಗಿರುವ ಇನ್ನೊಂದು ಕ್ಷೇತ್ರವೆಂದರೆ ಹತ್ತಿ ಉತ್ಪಾದನೆ. ಪಾಕಿಸ್ತಾನ ತನ್ನ ವಿದೇಶಿ ವಿನಿಮಯ ಅಂದರೆ ಡಾಲರ್ನ ಶೇ. 55ರಷ್ಟು ಗಳಿಸುವುದು ಹತ್ತಿಯ ರಫ್ತಿನಿಂದ. ಪ್ರವಾಹದಿಂದಾಗಿ ಶೇ. 45ರಷ್ಟು ಹತ್ತಿ ಬೆಳೆ ಈಗಾಗಲೇ ನಾಶವಾಗಿದೆ! ಅಷ್ಟರಮಟ್ಟಿಗೆ ಈ ವರ್ಷ ದೇಶದ ಡಾಲರ್ ಗಳಿಕೆಗೆ ಕತ್ತರಿ. ಎಂಟು ಬಿಲಿಯನ್ಗೂ ಕೆಳಗೆ ಕುಸಿದಿರುವ ಡಾಲರ್ ಸಂಗ್ರಹವನ್ನು ಅಗತ್ಯವಸ್ತುಗಳ ಆಮದಿಗಾಗಿ ಉಪಯೋಗಿಸಬೇಕೋ ಅಥವಾ ವಿದೇಶಿ (ಮುಖ್ಯವಾಗಿ ಚೀನೀ) ಸಾಲಗಳಿಗೆ ಬಡ್ಡಿ ತೆರಲು ಬಳಸಬೇಕೋ ಎಂಬ ಸಂದಿಗ್ಧದಲ್ಲಿ ತೊಳಲುತ್ತಿರುವ ಪಾಕಿಸ್ತಾನಕ್ಕೆ ಹತ್ತಿ ರಫ್ತಿನ ಕುಸಿತ ಸಹಿಸಲಾಗದ ಪೆಟ್ಟಾಗಲಿದೆ. ಅರ್ಥಮಂತ್ರಿ ಮಿಹ್ತಾಬ್ ಇಸ್ಮಾಯಿಲ್ ಹೇಳುವ ಪ್ರಕಾರ, ದೇಶಕ್ಕಾಗಿರುವ ನಷ್ಟ ಕನಿಷ್ಠ ಹತ್ತು ಬಿಲಿಯನ್ ಡಾಲರ್ಗಳು! ಇದು ಪ್ರಾಥಮಿಕ ಅಂದಾಜಷ್ಟೇ. ಮೂಲಭೂತ ಸೌಕರ್ಯಗಳಿಗೆ ಪ್ರವಾಹದಿಂದಾಗಿರುವ ಹಾನಿಯನ್ನು ಸರಿಪಡಿಸಿ ಜನಜೀವನವನ್ನು ಸಹಜಗೊಳಿಸಬೇಕಾದರೆ ಹತ್ತರಿಂದ ಹದಿನೈದು ಬಿಲಿಯನ್ ಡಾಲರ್ ಅಗತ್ಯವಿದೆಯಂತೆ. ಈಗಾಗಲೇ ಆರ್ಥಿಕ ಸಂಕಟದಲ್ಲಿ ಕತ್ತಿನವರೆಗೆ ಮುಳುಗಿಹೋಗಿರುವ ಪಾಕಿಸ್ತಾನಕ್ಕೆ ಇದು ನಿರ್ವಹಿಸಲಾಗದ ಹೊರೆ. ಭಾರಿ ಪ್ರಮಾಣದ ಅಂತಾರಾಷ್ಟ್ರೀಯ ನೆರವಿಲ್ಲದೆ ಪಾಕಿಸ್ತಾನ ಮೇಲೇಳಲಾರದು ಎಂಬ ಆತಂಕ ದೇಶೀಯ ಮತ್ತು ಅಂತಾರಾಷ್ಟ್ರೀಯ ಉನ್ನತ ವಲಯಗಳಿಂದ ಬರುತ್ತಿದೆ. ಯುಎಇ, ತುರ್ಕಿ (ಹಿಂದಿನ ಟರ್ಕಿ), ಯೂರೋಪಿಯನ್ ಯೂನಿಯನ್, ಅಮೆರಿಕಾ ಮತ್ತು ವಿಶ್ವಸಂಸ್ಥೆಗಳು ತಕ್ಷಣದ ಸಹಾಯವಾಗಿ ಪರಿಹಾರ ಸಾಮಗ್ರಿಗಳನ್ನು ಪೂರೈಸತೊಡಗಿವೆ ಮತ್ತು ಧನಸಹಾಯವನ್ನೂ ನೀಡತೊಡಗಿವೆ. ಆದರೆ, ಇದು ಕೆಲವು ವರ್ಷಗಳವರೆಗೆ ನಿರಂತರವಾಗಿ ಮುಂದುವರಿಯಬೇಕಾದ ಅಗತ್ಯವಿದೆ.
ಪಾಕಿಸ್ತಾನದ ಈ ಸಂಕಷ್ಟಕ್ಕೆ ಸಿಕ್ಕಿರುವ ಹಲವು ಕಾರಣಗಳಲ್ಲಿ ಮುಖ್ಯವಾದುದು ಜಾಗತಿಕ ತಾಪಮಾನದಲ್ಲಾಗುತ್ತಿರುವ ಏರಿಕೆ. ಶ್ರೀಮಂತ ರಾಷ್ಟ್ರಗಳು ವಾತಾವರಣಕ್ಕೆ ಬಿಡುಗಡೆ ಮಾಡುತ್ತಿರುವ ಗ್ರೀನ್ಹೌಸ್ ಅನಿಲಗಳ ದುಷ್ಪರಿಣಾಮವಾದ ಹವಾಮಾನ ವಿನಾಶದ ‘ಗ್ರೌಂಡ್ ಝೀರೋ’ ಪಾಕಿಸ್ತಾನವಾಗಿದೆ ಎಂದು ದೇಶದ ಹವಾಮಾನ ವೈಪರೀತ್ಯ ಮಂತ್ರಿ (Federal Minister for Climate Change) ಶೆರಿ ರೆಹಮಾನ್ ಹೇಳುತ್ತಾರೆ. ಈ ಮಾತು ಬಹುತೇಕ ನಿಜ. ಜಾಗತಿಕ ತಾಪಮಾನ ಪಾಕಿಸ್ತಾನವನ್ನು ಒಂದಕ್ಕಿಂತ ಹೆಚ್ಚು ವಿಧಗಳಲ್ಲಿ ಬಾಧಿಸುತ್ತಿದೆ. ಈಶಾನ್ಯ ಪಾಕಿಸ್ತಾನದ ವಿಶಾಲ ಹಾಗೂ ಉನ್ನತ ಪರ್ವತ ಪ್ರದೇಶದಲ್ಲಿ ಸುಮಾರು ಏಳು ಸಾವಿರ ಹಿಮನದಿಗಳಿವೆ. ಗ್ಲೋಬಲ್ ವಾರ್ವಿುಂಗ್ನಿಂದಾಗಿ ಅವೆಲ್ಲವೂ ಈ ದಿನಗಳಲ್ಲಿ ಕರಗಿ ಅಗಾಧ ಪ್ರಮಾಣದ ನೀರು ಮೇಲಿನಿಂದ ಕೆಳಕ್ಕೆ ದೇಶದ ಉದ್ದಕ್ಕೂ ಹರಿಯುವ ಸಿಂಧೂ ನದಿಯನ್ನು ಸೇರಿ ಆ ಮಹಾನದಿಯನ್ನು ಸದಾ ಉಕ್ಕೇರಿದ ಸ್ಥಿತಿಯಲ್ಲಿಟ್ಟಿದೆ. ಈ ನೀರಿನೊಂದಿಗೆ ಹವಾಮಾನ ವೈಪರೀತ್ಯದಿಂದಾಗಿ ಪಾಕಿಸ್ತಾನದ ಹವಾಮಾನ ಸ್ಥಿತಿಯೇ ಬದಲಾಗಿಬಿಟ್ಟಿದೆ. ಹೀಗಾಗಿ ಕಳೆದ ಕಾಲು ಶತಮಾನದಲ್ಲಿ ಅತಿವೃಷ್ಟಿ, ಅನಾವೃಷ್ಟಿಗಳೆರಡೂ ಪಾಕಿಸ್ತಾನದ ಮೇಲೆ ಮತ್ತೆಮತ್ತೆ ಎರಗುತ್ತಿವೆ. ಅತಿವೃಷ್ಟಿಯಿಂದಾದ ಪ್ರಮುಖ ಪ್ರವಾಹಗಳನ್ನೇ ಪಟ್ಟಿ ಮಾಡುವುದಾದರೆ 2009 ಮತ್ತು 2020ರಲ್ಲಿ ದೇಶದ ಏಕೈಕ ಬಂದರು ನಗರ ಕರಾಚಿಗೆ ನುಗ್ಗಿದ, 2003 ಮತ್ತು 2011ರಲ್ಲಿ ಸಿಂಧ್ ಪ್ರಾಂತ್ಯ ಅನುಭವಿಸಿದ, ಹಾಗೂ 2010ರಲ್ಲಿ ಮತ್ತು ಈಗ ಇಡೀ ದೇಶಕ್ಕೆ ಎರಗಿದ ಪ್ರವಾಹಗಳನ್ನು ಹೆಸರಿಸಬಹುದು.
ಜರ್ಮನಿಯ ಪೋಟ್ಸ್ಡ್ಯಾಮ್ ಇನ್ಸ್ಟಿಟ್ಯೂಟ್ ಫಾರ್ ಕ್ಲೈಮೇಟ್ ಇಂಪ್ಯಾಕ್ಟ್ ರೀಸರ್ಚ್ ತನ್ನ ಇತ್ತೀಚಿನ ಅಧ್ಯಯನವೊಂದರಲ್ಲಿ ಕಂಡುಕೊಂಡ ಪ್ರಕಾರ ಗ್ಲೋಬಲ್ ವಾರ್ವಿುಂಗ್ ದಕ್ಷಿಣ ಏಷ್ಯಾದ ಮಾನ್ಸೂನನ್ನೇ ಅಸ್ತವ್ಯಸ್ತಗೊಳಿಸಿಬಿಟ್ಟಿದೆ. ಈ ವೈಪರೀತ್ಯ ದೊಡ್ಡದಾಗಿ ಕಾಣುತ್ತಿರುವುದು ಪಾಕಿಸ್ತಾನದಲ್ಲಿ. ಈ ವರ್ಷವೇ ಇಲ್ಲಿಯವರೆಗೆ ಆ ದೇಶ ಹಿಮನದಿಗಳ ಕರಗುವಿಕೆ, ಮೇಘಸ್ಪೋಟ, ಅಸಹನೀಯ ಬಿಸಿಗಾಳಿ, ಭೀಕರ ಅನಾವೃಷ್ಟಿ ಮತ್ತು ಅತಿವೃಷ್ಟಿಗಳನ್ನು ಅನುಭವಿಸಿದೆ! ಈಗ ಬಾಧಿಸುತ್ತಿರುವ ಅತಿವೃಷ್ಟಿಯ ಬಗ್ಗೆ ಹೇಳುವುದಾದರೆ, ಕಳೆದ ಮೂವತ್ತು ವರ್ಷಗಳಲ್ಲಿ ಜುಲೈ-ಆಗಸ್ಟ್ನ ಸರಾಸರಿ ತೆಗೆದುಕೊಂಡರೆ ಒಟ್ಟಾರೆ ಪಾಕಿಸ್ತಾನದಲ್ಲಿ ಮಳೆಯ ಪ್ರಮಾಣ ಈ ವರ್ಷ ದುಪ್ಪಟ್ಟಾಗಿದ್ದರೆ ಸಿಂಧ್ ಪ್ರಾಂತ್ಯದಲ್ಲಿ ಅದು ನಾಲ್ಕೂವರೆ ಪಟ್ಟು! ಆಗಸ್ಟ್ ದ್ವಿತೀಯಾರ್ಧದಲ್ಲಿ ಸಿಂಧ್ನಲ್ಲಿ ಸತತ ಹದಿನೈದು ದಿನಗಳು ಮತ್ತು ಪೂರ್ವ ಬಲೂಚಿಸ್ತಾನದಲ್ಲಿ ಸತತ ಒಂಬತ್ತು ದಿನಗಳು ಮಳೆ ಸುರಿದಿದೆ. ಸಾಮಾನ್ಯ ವರ್ಷಗಳಲ್ಲಿ ಹೀಗೆ ಸತತವಾಗಿ ಮಳೆ ಸುರಿಯುವುದು ಹೆಚ್ಚೆಂದರೆ ಎರಡು ದಿನಗಳು ಮಾತ್ರ ಎನ್ನುವುದನ್ನು ಅರಿತರೆ ಈ ಬಾರಿಯ ಮಳೆಯ ಅಗಾಧತೆಯ ಪ್ರಮಾಣ ನಮಗಾಗಬಹುದು. ಆಗಸ್ಟ್ 19ರಂದು ಉತ್ತರ ಸಿಂಧ್ನ ಪಾತೇದಾನ್ನಲ್ಲಿ ಒಂದೇ ದಿನದಲ್ಲಿ 355 ಮಿಲಿಮೀಟರ್ ಮಳೆಯಾಯಿತು! ಈ ವರ್ಷದ ಭಾರಿ ಪ್ರಮಾಣದ ಮಳೆಯನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂತೋನಿಯೋ ಗುತರೆಸ್ Monsoon on Steroids
ಎಂದು ಬಣ್ಣಿಸಿದ್ದಾರೆ. ‘ಹವಾಮಾನ ವೈಪರೀತ್ಯದಿಂದಾಗಿ ದಕ್ಷಿಣ ಏಷ್ಯಾದಲ್ಲಿ ಮಾನ್ಸೂನ್ ಎರಾ›ಬಿರ್ರಿಯಾಗಿದೆ; ಅದಕ್ಕೆ ಇಂದು ಪಾಕಿಸ್ತಾನ ಬಲಿ, ನಾಳೆ ಮತ್ತಾರೋ. ಗ್ಲೋಬಲ್ ವಾರ್ವಿುಂಗ್ ಸಮಸ್ಯೆಯನ್ನು ಜಗತ್ತು ಗಂಭೀರವಾಗಿ ಪರಿಗಣಿಸಿ ತುರ್ತಾಗಿ ಪರಿಹಾರ ಕಾರ್ಯಯೋಜನೆಗಳನ್ನು ಕೈಗೊಳ್ಳಬೇಕು, ಇಲ್ಲದಿದ್ದರೆ ವಿನಾಶ ಖಂಡಿತ’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಜಾಗತಿಕ ತಾಪಮಾನದ ಏರಿಕೆಗೆ ಯಾವುದೇ ಗಮನಾರ್ಹ ಕಾಣಿಕೆ ನೀಡದ ಬಡ ಪಾಕಿಸ್ತಾನ ಅದರ ದುಷ್ಟರಿಣಾಮವನ್ನು ಈ ಬಗೆಯಲ್ಲಿ ಅನುಭವಿಸುತ್ತಿರುವುದು ನಿಜಕ್ಕೂ ವಿಪರ್ಯಾಸವೇ ಸರಿ. (ಆದಾಗ್ಯೂ, ಇಂದಿನ ಪ್ರವಾಹ ಸಿಂಧೂ ಕಣಿವೆಯ ನಾಗರಿಕತೆಯ ಅಂತ್ಯದ ಬಗ್ಗೆ ನಮಗೊಂದು ಸುಳಿವು ನೀಡುತ್ತಿದೆಯೇ? ಇದನ್ನು ಮುಂದಿನ ವಾರ ಪರಿಶೀಲಿಸೋಣ.)
ಗ್ಲೋಬಲ್ ವಾರ್ವಿುಂಗ್ ಭೂತ ಪಾಕಿಸ್ತಾನವನ್ನು ಸಂಕಷ್ಟಕ್ಕೀಡಾಗಿಸಿದೆಯೆಂದು ಗುರುತಿಸುವುದರ ಜತೆಗೇ ಪ್ರವಾಹಗಳ ಸರಣಿಗೆ ಖುದ್ದು ಪಾಕಿಸ್ತಾನಿಯರ ಕಾಣಿಕೆಯನ್ನೂ ಗುರುತಿಸಬೇಕು. ಅವು ಮುಖ್ಯವಾಗಿ ಅರಣ್ಯನಾಶ ಮತ್ತು ಅಣೆಕಟ್ಟೆಗಳ ಅಸಮರ್ಪಕ ನಿರ್ವಹಣೆ.
ಅರಣ್ಯನಾಶದಿಂದಾಗಿ ನೆಲ ಗಟ್ಟಿಯಾಗುವುದರಿಂದ ಮಳೆನೀರು ಸುಲಭವಾಗಿ ನೆಲದೊಳಗೆ ಇಳಿಯದೇ ಹರಿದುಹೋಗುವುದರಿಂದ ತಗ್ಗು ಪ್ರದೇಶಗಳೆಲ್ಲವೂ ನೀರಿನಿಂದ ಆವೃತವಾಗುವುದು ಪಾಕಿಸ್ತಾನದ (ಎಲ್ಲೆಡೆ ಸಹಾ) ಸಮಸ್ಯೆ. ಅಣೆಕಟ್ಟೆಗಳ ವಿಚಾರಕ್ಕೆ ಬಂದರೆ ಸಿಂಧೂನದಿಯ ತಾರ್ಬೆಲಾ ಮತ್ತು ಸುಕ್ಕೂರು ಹಾಗೂ ಝೀಲಂ ನದಿಯ ಮಂಗಲಾ ಅಣೆಕಟ್ಟೆಗಳಲ್ಲಿ ದಶಕಗಳಿಂದಲೂ ಹೂಳೆತ್ತದೇ ಇರುವುದರಿಂದ ಅವುಗಳ ನೀರಿನ ಸಂಗ್ರಹ ಕುಗ್ಗಿರುವ ಕಾರಣ ಉತ್ತರದಿಂದ ಬರುವ ಅಗಾಧ ನೀರಿಗೆ ಸೂಕ್ತ ತಡೆಯೇ ಇಲ್ಲದಂತಾಗಿದೆ. ಜತೆಗೆ, ಹಲವು ದಶಕಗಳಿಂದಲೂ ಸರ್ಕಾರಗಳು ನಿರ್ಲಕ್ಷಿಸಿದ್ದ ಹೊಸ ಅಣೆಕಟ್ಟೆಗಳ ನಿರ್ಮಾಣ ಇಮ್ರಾನ್ ಖಾನ್ ಅವಧಿಯಲ್ಲಿ ಭಾರಿ ಪ್ರಮಾಣದಲ್ಲಿ ಆರಂಭವಾಯಿತಷ್ಟೇ. ಆದರೆ, ಹಿಮನದಿಗಳ ಕರಗುವಿಕೆಯಿಂದ ಈಗಾಗಲೇ ಏರಿದ್ದ ನೀರಿನ ಜತೆಗೆ ಈ ವರ್ಷದ ಮಳೆಯ ಅಬ್ಬರವೂ ಸೇರಿಕೊಂಡಾಗ ನಿರ್ಮಾಣ ಹಂತದಲ್ಲಿದ್ದ ಹೆಚ್ಚಿನ ಅಣೆಕಟ್ಟೆಗಳು ಕುಸಿದುಹೋದವು. ಪರಿಣಾಮವಾಗಿ ಕೆಳಗಿನ ಪ್ರದೇಶಗಳಿಗೆ ಏಕಾಏಕಿ ನೀರು ನುಗ್ಗಿತು. ಅಣೆಕಟ್ಟೆಗಳ ಸ್ಥಿತಿಯ ಬಗ್ಗೆ ಸಮರ್ಪಕ ಮಾಹಿತಿ ನಿರ್ವಹಣಾಧಿಕಾರಿಗಳಿಗೆ ಇದ್ದು, ಬರಬಹುದಾದ ಅಪಾಯದ ಬಗ್ಗೆ ಅವರು ಸ್ಥಳೀಯ ಸರ್ಕಾರಗಳ ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟಿದ್ದಲ್ಲಿ, ಮತ್ತವರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಲ್ಲಿ ಜನತೆ ಈ ಪ್ರಮಾಣದಲ್ಲಿ ಸಂಕಷ್ಟಕ್ಕೀಡಾಗುತ್ತಿರಲಿಲ್ಲ.
ಕೊನೆಯ ಮಾತು: ಗ್ಲೋಬಲ್ ವಾರ್ವಿುಂಗ್ನಿಂದಾಗಿ ಈಶಾನ್ಯ ಪಾಕಿಸ್ತಾನದಲ್ಲಿರುವ ಏಳು ಸಾವಿರದಷ್ಟು ಹಿಮನದಿಗಳು ಕರಗುತ್ತಿರುವುದು ಸಿಂಧೂ ನದಿಯಲ್ಲಿ ಮತ್ತೆಮತ್ತೆ ಪ್ರವಾಹವನ್ನು ಉಂಟುಮಾಡುತ್ತಿದೆ ಎಂದು ಮೇಲೆ ಹೇಳಿದ್ದೇನೆ ಅಲ್ಲವೇ? ಈಶಾನ್ಯ ಪಾಕಿಸ್ತಾನ ಅಂದರೆ ಪಾಕ್ ಆಕ್ರಮಿತ ಕಾಶ್ಮೀರ! ಅಂದರೆ ನಮ್ಮ ಕಾಶ್ಮೀರದ ಒಂದು ಭಾಗವನ್ನು ಆಕ್ರಮಿಸಿಕೊಂಡು ಪಾಕಿಸ್ತಾನ ಅಗಾಧ ಹಿಮರಾಶಿಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡಿದೆ ಅಂತಾಯಿತು! ಈಗ ತಲೆಯ ಮೇಲಿನ ಹಿಮ ಕರಗಿ ನೀರಾಗಿ ಕೆಳಗಿಳಿದು ಮೈಮೇಲೆಲ್ಲಾ ಹರಿಯುತ್ತಿದೆ! ಇದನ್ನು ಮೂರು ಕೋನಗಳಲ್ಲಿ ವ್ಯಾಖ್ಯಾನಿಸಬಹುದು, ಸ್ವಲ್ಪ ಗಂಭೀರವಾಗಿ, ಸ್ವಲ್ಪ ತಮಾಷೆಯಾಗಿ.
ಒಂದು- ನಮ್ಮ ಕಾಶ್ಮೀರದ ಒಂದು ಭಾಗವನ್ನು ದುರಾಕ್ರಮಣದ ಮೂಲಕ ಆಕ್ರಮಿಸಿಕೊಂಡಿದ್ದಕ್ಕಾಗಿ ಪಾಕಿಸ್ತಾನ ಈಗ ಈ ಬಗೆಯ ಶಿಕ್ಷೆ ಅನುಭವಿಸುತ್ತಿದೆ ಅನ್ನಬಹುದೇನೋ. ಎರಡು- ಆ ಪ್ರದೇಶ ನಮ್ಮ ಹಿಡಿತದಲ್ಲೇ ಇದ್ದಿದ್ದರೆ ನಾವು ಸಹ ಪ್ರಕೃತಿಯ ಮುಂದೆ ನಿಸ್ಸಹಾಯಕರಾಗುತ್ತಿದ್ದೆವು ನಿಜ. ಆದರೆ, ಅಲ್ಲಿ ಕರಗುವ ಹಿಮದಿಂದ ನಮಗೇನೂ ತೊಂದರೆಯಾಗುತ್ತಿರಲಿಲ್ಲ. ಆ ನೀರೆಲ್ಲವೂ ಸಿಂಧೂನದಿಗೆ ಇಳಿದು ಹರಿದುಹೋಗುವುದು ನೇರವಾಗಿ ಪಾಕಿಸ್ತಾನಕ್ಕೇ ವಿನಾ ನಮ್ಮ ಕಡೆಗಲ್ಲ. ಆದರೆ ಹಿಮನದಿಗಳ ಅಸ್ತಿತ್ವ ಮತ್ತು ಗ್ಲೋಬಲ್ ವಾರ್ವಿುಂಗ್ ಅನ್ನು ಬದಿಗಿಟ್ಟು, ನಾವು ಬೇಕೆಂದೇ ತನಗೆ ಹಾನಿಯೆಸಗುತ್ತಿದ್ದೇವೆಂದು ಪಾಕಿಸ್ತಾನ ನಮ್ಮ ಮೇಲೆ ಗೂಬೆ ಕೂರಿಸಿ ದಿನಬೆಳಗಾದರೆ ಎಲ್ಲ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಖಂಡಿತಾ ಕೂಗಾಡುತ್ತಿರುತ್ತಿತ್ತು! ಮೂರು- ಕಾಶ್ಮೀರದ ಆ ಭಾಗದಲ್ಲಿರುವ ಹಿಮನದಿಗಳು ಒಂದು ಅಗಾಧ ಟೈಂ ಬಾಂಬ್, ಮುಂದೊಂದು ದಿನ ಅದು ಸ್ಪೋಟಿಸಿ ಪಾಕಿಸ್ತಾನವನ್ನು ಪ್ರವಾಹದಲ್ಲಿ ಮುಳುಗಿಸಿಬಿಡುತ್ತದೆ ಎಂದು ಪಂಡಿತರಾದ ನಮ್ಮ ಜವಾಹರ್ಲಾಲ್ ನೆಹರೂ ಅವರಿಗೆ ಮೊದಲೇ ತಿಳಿದಿದ್ದಿರಬೇಕು. ಆದ್ದರಿಂದಲೇ, ಪಾಕಿಸ್ತಾನ ಮುಳುಗಿಹೋಗಲಿ, ಆದರೆ, ಆಪಾದನೆ ನಮ್ಮ ಮೇಲೆ ಬಾರದಿರಲಿ ಎಂದೇ ನಮ್ಮ ಚಾಚಾ ನೆಹರು ಆ ಪ್ರದೇಶವನ್ನು ಪಾಕಿಸ್ತಾನದ ವಶಕ್ಕೆ ಬಿಟ್ಟುಕೊಟ್ಟಿರಬೇಕು! ಎಂತಹ ದೂರದೃಷ್ಟಿ ಅವರದು! ಅವರನ್ನು ಮೊದಲ ಪ್ರಧಾನಿಯಾಗಿ ಪಡೆದ ನಾವೇ ಧನ್ಯರು!
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)