

ಜಪಾನ್ ಒಂದು ಮಾಂತ್ರಿಕ ನಾಡಾಗಿತ್ತು. ಅದನ್ನು ಹಾಗೆ ಮಾಡುವುದಕ್ಕೆ ಮಾಂತ್ರಿಕರ ತಂಡವೇ ಅಲ್ಲಿ ನಿರ್ಮಾಣವಾಗಿತ್ತು, ಈ ಮಾಂತ್ರಿಕರನ್ನು ಇಂದಿಗೂ ಜಪಾನ್ ದೇವರಂತೆ ಗೌರವಿಸುತ್ತದೆ. ನರಕವನ್ನು ಸ್ವರ್ಗವನ್ನಾಗಿಸಿದವರು ಬೇರಾರೂ ಅಲ್ಲ, ಅಲ್ಲಿಯ ಶಿಕ್ಷಕರು!
ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಕರಾಳದಿನಗಳೆಂದರೆ 1945ರ ಆಗಸ್ಟ್ 6 ಮತ್ತು 9. ರಾಜಕೀಯ ಮಹಾತ್ವಾಕಾಂಕ್ಷೆಗಳಿಗೆ ಲಕ್ಷ್ಮಣರೇಖೆ ಇಲ್ಲದಿದ್ದಲ್ಲಿ ದೇಶದೇಶಗಳು ಹೇಗೆ ಕಾಡುಪಾಲಾಗುತ್ತವೆ! ಕ್ಷಾತ್ರಶಕ್ತಿಗೆ ಜ್ಞಾನಶಕ್ತಿಯ ಅಂಕುಶವಿಲ್ಲದಿದ್ದಲ್ಲಿ ಜೀವನ ಹೇಗೆ 'ಜೀವ'ನ ಆಗುತ್ತದೆ ಎಂದು ತೋರಿಸಿದ ದಿನಗಳವು. ಅಮೆರಿಕ ಜಪಾನಿನ ಹಿರೋಶಿಮಾ, ನಾಗಾಸಾಕಿ ನಗರಗಳ ಮೇಲೆ ಅಣುಬಾಂಬ್ ಎಸೆದು ಸ್ವರ್ಗೀಯ ದೆಸೆಯತ್ತ ಸಾಗುತ್ತಿದ್ದ ದೇಶವನ್ನು
ವ್ಯಷ್ಟಿ ಮತ್ತು ಸಮಷ್ಟಿ ಸ್ತರಗಳಲ್ಲಿ ಇದೆಲ್ಲ ಇದ್ದದ್ದೇ. ನೆಪೋಲಿಯನ್ನ ಆತ್ಮಚರಿತ್ರೆ (ಅಪೂರ್ಣಗೊಂಡ) ಇದನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. ಗುರಿಯಿಲ್ಲದ ಪ್ರಯಾಣ ಆಯಾಸಮಾತ್ರ. ಗತಿ ಬೇರೆ; ಪ್ರಗತಿ ಬೇರೆ! ವಿವೇಕ, ವಿವೇಕಿಗಳ ಪ್ರಸ್ತುತತೆ ಬರುವುದೇ ಇಲ್ಲಿ. ಯೋಗ್ಯ ಗುರು, ಸಮ್ಯಕ್ ಗುರಿ ಇವೆಲ್ಲ ಪ್ರಕತಿ ಸಹಜವೇನಲ್ಲ. ಅವು ಹೆಮ್ಮೆಯ ಗಳಿಕೆಗಳು. ವಿಧಾತ ವರ್ಷಿಸಿದ ಸೌಭಾಗ್ಯಗಳಲ್ಲ. ಕಷ್ಟಪಟ್ಟು ಪ್ರಜ್ಞಾಪೂರ್ವಕವಾಗಿ ಅರಸಬೇಕಾದ, ಆರಿಸಿಕೊಳ್ಳಬೇಕಾದ ಸಂಗತಿಗಳು. ಶಿಸ್ತಿಲ್ಲದಿದ್ದಲ್ಲಿ ಇರುವುದು ಸುಸ್ತು ಮಾತ್ರ! ಆದರೆ, ಜಪಾನ್ ಬೇರೆ ದೇಶಗಳಂತಲ್ಲ! ವೆಯಕ್ತಿಕ ನೆಲೆಯಲ್ಲಾಗಲಿ, ಸಾರ್ವತ್ರಿಕ ನೆಲೆಯಲ್ಲಾಗಲಿ ಯಶಸ್ಸಿನ ನಿಯಮಗಳು ಬೇರೆ ಬೇರೆ ಇಲ್ಲ, ವೆಯಕ್ತಿಕತೆಯ ಬಹುತ್ವವೇ ಸಾರ್ವತ್ರಿಕತೆ. ಬಿದ್ದವನು ಎದ್ದು ನಿಲ್ಲಬೇಕಾದರೆ, ಗೆದ್ದು ವಿಜಂಭಿಸಬೇಕಾದರೆ ಅವನು ಎಂದಿಗೂ ಸೋಲೊಪ್ಪಿಕೊಳ್ಳಬಾರದು, ಛಲದಿಂದ ಏಳಬೇಕು, ಗುರಿ ನಿರಂತರ ಕಣ್ಣೆದುರಿಗಿರಬೇಕು! ಇದೆಲ್ಲದ್ದಕ್ಕಿಂತ ಮಿಗಿಲಾಗಿ ಯೋಗ್ಯ ಗುರುವಿನ ಮಾರ್ಗದರ್ಶನದಲ್ಲೇ ಹೆಜ್ಜೆ ಇಡುವ ನಮ್ರತೆ, ವಿವೇಕಗಳಿರಬೇಕು. "ಗತಿಸಿದ ದಿನಗಳು ಮರುಕಳಿಸಬೇಕು. ಹಿಂದೆ ಇದ್ದದ್ದು ಅಲ್ಪ! ಇಂದು ನೋಡಿ! ಇದುವೇ ನಿಜವಾದ ಜಪಾನ್ ಎಂದು ಜಗತ್ತಿಗೆ ತೋರಿಸಬೇಕು! ನಮ್ಮ ಪುನಶ್ಚೇತನ ಜಗತ್ತನ್ನು ಬೆರಗಾಗಿಸಬೇಕು' ಎನ್ನುವ ಛಲದ ಸೆಲೆ ಪ್ರತಿಯೊಬ್ಬ ಜಪಾನೀಯನ ಉಸಿರೇ ಆಗಿತ್ತು. ಆದರೆ ಉಪಾಯವೇನು? ಇದನ್ನೆಲ್ಲ ಸಾಧಿಸುವುದು ಹೇಗೆ? ಅದೂ ತ್ವರಿತಗತಿಯಲ್ಲಿ!
ಪ್ರತಿನಿತ್ಯವೆಂಬಂತೆ ಸಭೆ-ಸಮಾರಂಭಗಳಲ್ಲಿ ಎಲ್ಲೆಲ್ಲೂ ಒಂದೇ ಚರ್ಚೆ, ಒಂದೇ ವಿಷಯ 'ಜಪಾನಿನ ಪುನರ್ನಿರ್ಮಾಣ ಹೇಗೆ?' ಸಾವಿರಾರು ಸಲಹೆ! ನೂರಾರು ಸೂಚನೆ! ಒಬ್ಬ ಮಹಾತ್ಮ ಎದ್ದು ಬಂದ! ಶ್ವೇತಾಶ್ವತರ ಉಪನಿಷತ್ತಿನ ಯುವ ಸಂನ್ಯಾಸಿಯಂತೆ! ಪರಿಹಾರ ಕೊಟ್ಟ, 'ಮತ್ತೇನೂ ಬೇಡ! ನಮ್ಮ ಸಮಾಜದ ಶ್ರೇಷ್ಠ ಯುವಕ-ಯುವತಿಯರನ್ನು ಶಿಕರನ್ನಾಗಿ ನೇಮಿಸಿ'.
ಪವಾಡದಂತೆ ಕೆಲಸಮಾಡಿತು ಈ ಸೂಚನೆ. ನೋಡನೋಡುತ್ತಿದ್ದಂತೆಯೇ ಜಪಾನ್ ಕೊಡವಿಕೊಂಡು ಮೇಲೆದ್ದಿತು. 'ಮುಂದಿನ 50 ವರ್ಷಗಳಲ್ಲಿ ಜಪಾನಿನಲ್ಲಿ ಹುಲ್ಲು ಕೂಡ ಬೆಳೆಯುವುದಿಲ್ಲ! ಹುಟ್ಟಿದ ಮಕ್ಕಳಲ್ಲಿ ಪ್ರತಿ ಮೂವರಲ್ಲಿ ಒಬ್ಬ ಅಂಗವಿಕಲನಾಗಿರುತ್ತಾನೆ, ಉಸಿರಾಟದ ರೋಗಗಳಿಗೆ ಜಪಾನ್ ತವರುನೆಲವಾಗುತ್ತದೆ' ಎಂದೆಲ್ಲ ಕೇಳಿಬಂದಿದ್ದ ವಿಜ್ಞಾನಿಗಳ ಭವಿಷ್ಯವಾಣಿಗಳು ಸ್ವರವನ್ನೇ ಕಳೆದುಕೊಂಡವು. 1945ರಲ್ಲಿ ನರಕವಾಗಿದ್ದ ಜಪಾನ್, ಕೇವಲ 25 ವರ್ಷಗಳಲ್ಲಿ (1970ರ ಹೊತ್ತಿಗೆ) ಸೂಪರ್ ಪವರ್ ಆಯಿತು. ತಮ್ಮ ಸಾಧನೆಯನ್ನು ಹೊರಜಗತ್ತಿಗೆ ತೋರಿಸಲು 1970ರಲ್ಲಿ 'EXPO-70' ಎನ್ನುವ ಪ್ರದರ್ಶನ ಉತ್ಸವವನ್ನು ಏರ್ಪಡಿಸಿತು. ಪ್ರಪಂಚದ ಮೂಲೆ ಮೂಲೆಯಿಂದ ಬಂದಿದ್ದ ಪ್ರಮುಖರು ನಾಯಕರು ತಮ್ಮ ಕಣ್ಣುಗಳನ್ನೇ ನಂಬದಾದರು.
ಜಪಾನ್ ಒಂದು ಮಾಂತ್ರಿಕ ನಾಡಾಗಿತ್ತು. ಅದನ್ನು ಹಾಗೆ ಮಾಡುವುದಕ್ಕೆ ಮಾಂತ್ರಿಕರ ತಂಡವೇ ಅಲ್ಲಿ ನಿರ್ಮಾಣವಾಗಿತ್ತು, ಈ ಮಾಂತ್ರಿಕರನ್ನು ಇಂದಿಗೂ ಜಪಾನ್ ದೇವರಂತೆ ಗೌರವಿಸುತ್ತದೆ. ನರಕವನ್ನು ಸ್ವರ್ಗವನ್ನಾಗಿಸಿದವರಲ್ಲವೆ ಅವರು! ಅವರೇ ಅಲ್ಲಿಯ ಶಿಕ್ಷಕರು! ಇಂದಿಗೂ ಜಪಾನಿನ Highest paid civil servant ಶಿಕ್ಷಕನೇ! ವಿವೇಕಾನಂದರು ಶಿಕ್ಷಣವನ್ನು (ಸರಿಯಾದ ಶಿಕ್ಷಣ) ಕರೆದದ್ದೇ ಮ್ಯಾಜಿಕ್ ಅಂತ. “What is it that can't be achieved by that magic word education” ಅಂತಲೇ ಒಂದೆಡೆ ಹೇಳುತ್ತಾರೆ. ಶಿಕ್ಷಣವೇ Magic; ಶಿಕ್ಷಕನೇ Magician.
ಜಪಾನ್ ಮಾತ್ರ ಏಕೆ? ಇಡೀ ನಾಗರಿಕ ಜಗತ್ತನ್ನೇ ಭಾರತ ತನ್ನ ಅಮೂಲ್ಯ ಜ್ಞಾನಪ್ರವಾಹದಿಂದ ಉಪಕರಿಸಿದೆ. ಬುದ್ಧಪೂರ್ವ ದಿನಗಳಿಂದಲೂ ಭಾರತದ ವಿಜ್ಞಾನಗಳು ಜನಸ್ತೋಮವನ್ನು ಉದ್ಧರಿಸಿದೆ, ಎಂದು ಹೇಳಿದವರಲ್ಲಿ ಜಪಾನಿನ ಸುಪ್ರಸಿದ್ಧ ಚಿಂತಕ ಪ್ರೊ. ಓಕಾಕುರ ಕೂಡ ಒಬ್ಬರು! ಹೀಗೆ ಹೇಳಿದ ನೂರಾರು ಮಹಾನ್ ಮುತ್ಸದ್ಧಿಗಳಲ್ಲಿ ಅವರೂ ಒಬ್ಬರು. ಏಕೆ ಹೇಳಿದೆ ಎಂದರೆ ಈ ಇಡೀ ಪ್ರಕ್ರಿಯೆಯಲ್ಲಿ ಜಪಾನ್ ಅನುಸರಿಸಿದ್ದು, ಅನಾದಿ ಕಾಲದಿಂದ ಭಾರತ ಅನುಸರಿಸುತ್ತಿದ್ದ ಸೂತ್ರವನ್ನೆ! ಈ ವಿಷಯದಲ್ಲಿ ಜಪಾನಿಗೆ ಒಮ್ಮತವೂ ಇದೆ, ಕತತೆಯೂ ಇದೆ ಎಂಬುದನ್ನು ಜಪಾನ್ ಹಾಗೂ ಭಾರತದ ಸಾಂಸತಿಕ ಒಳಹರಿವುಗಳನ್ನು ಬಲ್ಲ ಯಾರಾದರೂ ತಿಳಿಯಬಲ್ಲರು. ಗುರುವರ್ಯ ರವೀಂದ್ರರಿಗೆ ನೊಬೆಲ್ ಪ್ರಶಸ್ತಿ ಬಂದಾಗ ಭಾರತಕ್ಕಿಂತ ಹಿಗ್ಗಿದ್ದು, ಸಂಭ್ರಮಿಸಿದ್ದು, ಸನ್ಮಾನಿಸಿದ್ದು ಜಪಾನ್. ಏಕೆಂದರೆ ನೊಬೆಲ್ ವಿಜೇತರಾದ ಪ್ರಪ್ರಥಮ ಏಷ್ಯನ್ ಅವರು ಎಂದು.
ಯಾರು ಈ ಶಿಕ್ಷಕ, ಯಾರು ಈ ಮಾಂತ್ರಿಕ? ಭಾರತೀಯ ಪರಂಪರೆಯಲ್ಲಿ ಇವನು ಎಲ್ಲಿ ಉದ್ಭವಿಸಿದ? ಇವನಲ್ಲಿ ಇರುವ ಈ ಮಾಂತ್ರಿಕ ಶಕ್ತಿಗಳಾದರೂ ಯಾವವು? ಇವನ್ನು ಅವಲೋಕಿಸಬೇಕಷ್ಟೇ ಅಲ್ಲ ನಿರಂತರ ಸ್ಮೃತಿಯಲ್ಲಿಟ್ಟುಕೊಳ್ಳಬೇಕು. ಪ್ರಯೋಜನ ಪಡೆಯಬೇಕು. ಒಂದು ದೇಶದ ಆಡಳಿತ ಯಂತ್ರಕ್ಕೆ ಇರಬೇಕಾದ ಬಹುದೊಡ್ಡ ಜವಾಬ್ದಾರಿ ಬಹುದೊಡ್ಡ ಸಾಮರ್ಥ್ಯಗಳಲ್ಲಿ ಇದೇ ಪ್ರಮುಖವಾದದ್ದು. ಚಿಂತಕ ಸ್ವಾಮಿ ರಂಗನಾಥನಂದಜಿ ಒಂದಡೆ ಹೇಳುತ್ತಾರೆ "Every inch of the road that leads to total human fulfilment is mapped in India of the upanishadic days' ಪ್ರತಿಯೊಂದಕ್ಕೂ ಪಶ್ಚಿಮದ ಕಡೆ ನೋಡುವ ಭಿಕ್ಷುಕರಂತೆ ನಾವು ಬದುಕಬಹುದೆ? ಸಮರ್ಥ ವ್ಯಕ್ತಿಗಳಿಂದಲೇ ರಾಷ್ಟ್ರ ನಿರ್ಮಾಣವಾಗುವುದು! ಹತ್ತರಲ್ಲಿ ಹನ್ನೊಂದನೆಯದಾದamorphous existence ನ ಜನರಿಂದಲ್ಲ, ಸಾಮರ್ಥ್ಯವೇನೋ ಎಲ್ಲರಲ್ಲೂ ಇದೆ. ಆದರೆ ಅದನ್ನು ಕೆಗೆಟಕುವಂತೆ (available)) ಮಾಡುವುದು ಹೇಗೆ? ಇಡೀ Human resource development ಮುಂದಿರುವ ಸವಾಲೇ ಇದು.
ಇದಕ್ಕೆ ಪ್ರಾಚಿನ ಭಾರತ ಕಂಡುಕೊಂಡಿರುವ ಉಪಾಯವೇ, 'ವಿದ್ಯಾರ್ಥಿಯ ಆಂತರ್ಯದಲ್ಲಿ ಮಂಥನಗಳುಂಟಾಗಬೇಕು, ಆಶ್ಚರ್ಯ, ಉದ್ಗಾರ, ರೋಮಾಂಚನ, ಕನಸು, ಪ್ರಶಂಸೆಗಳು ಇವುಗಳಿಗೆ ಅವನು ನಿರಂತರ ಒಳಪಡುತ್ತಿರಬೇಕು. ಅವನ ಪ್ರಜ್ಞಾವಲಯ ಕಲಕಲ್ಪಡುತ್ತಿರಬೇಕು. ಅವು dynamic ಆಗಬೇಕು. ಇದನ್ನೆಲ್ಲ ಒಟ್ಟಿಗೆ ಸೇರಿಸಿ ವಿದ್ಯಾರ್ಥಿ ನಿರಂತರ 'ಸ್ಫೂರ್ತಿ'ಗೊಳ್ಳುತ್ತಿರಬೇಕು' ಎಂದು ಉಪನಿಷತ್ತುಗಳ ಉದ್ದಕ್ಕೂ ನಾವು ನೋಡುವುದು ಇದನ್ನೇ. ಹಾಗೆ ಮಾಡುವವರಾರು? ಕಠೋಪನಿಷತ್ ಹೇಳುತ್ತದೆ. 'ಆಶ್ಚರ್ಯವತ್' ಆದ ವ್ಯಕ್ತಿ ಮಾಡುತ್ತಾನೆ. ಯಾರನ್ನು ನೋಡಿದಾಗ ಯಾರಿವನು? ಎಂಬ ಪ್ರಶ್ನೆ ಪದೇಪದೆ ಮೂಡುತ್ತದೆಯೋ, ಅವನೇ ಇದನ್ನು ಮಾಡಬಲ್ಲ. ಹೌದು! ಇಂದು ಇಡೀ ಜಗತ್ತೇ ಯಾರಿಂದ ಪ್ರತಿನಿತ್ಯವೆಂಬಂತೆ ಸ್ಫೂರ್ತಿಗೊಳ್ಳುತ್ತಿದೆಯೋ, ಆ ಸ್ವಾಮಿ ವಿವೇಕಾನಂದರನ್ನು ಕುರಿತು ಕುವೆಂಪು 'ಯಾರಿವನು?' ಎಂತಲೇ ಉದ್ಗರಿಸಿದ್ದು! ಇದೇ ಶಿಕ್ಷಕನಲ್ಲಿರಬೇಕಾದ ಪ್ರಥಮ ಗುಣ, ಪ್ರಧಾನ ಗುಣ, ಯಾರನ್ನೂ ಚಕಿತರನ್ನಾಗಿಸುವ ವ್ಯಕ್ತಿತ್ವ. ದೇಶವನ್ನು ಕಟ್ಟುವುದಕ್ಕಿಂತ ಮುಂಚೆ ಅದನ್ನು ಕಟ್ಟುವ ವ್ಯಕ್ತಿಗಳನ್ನು ಕಟ್ಟಬೇಕು. ಸ್ಫೂರ್ತಿ ಮರುಜನ್ಮವನ್ನೇ ಕೊಡುತ್ತದೆ. ಮೊದಲ ಬಾರಿಗೆ 'ಆರ್ಯಭಟ'ವನ್ನು ಆಕಾಶಕ್ಕೆ ಹಾರಿಸಿದ ಪ್ರೊ.ಯು.ಆರ್.ರಾವ್ ಅವರನ್ನು ಈ ಯಶಸ್ಸಿನ ಹಿನ್ನೆಲೆ ಏನೆಂದು ಪ್ರಶ್ನಿಸಿದಾಗ, ಅವರು 'ನಾನು ಒಂಬತ್ತನೇ ತರಗತಿಯಲ್ಲಿದ್ದಾಗ ನನ್ನ ವಿಜ್ಞಾನ ಶಿಕ್ಷಕ ಶೆಣೈ ಸರ್ ಖಗೋಳಶಾಸ್ತ್ರದ ಪಾಠಗಳನ್ನು ಮಾಡುತ್ತಿದ್ದ ರೀತಿ. ಅಂದೇ ನಿರ್ಧರಿಸಿದೆ, ನಾನು Astrophysicist ಆಗಬೇಕು' ಎಂದು ಉತ್ತರಿಸಿದರು. ವಿಜ್ಞಾನಿಯಷ್ಟೇ ಅಲ್ಲ, ಪ್ರಧಾನ ಮಂತ್ರಿ, ಕವಿ, ಉದ್ದಿಮೆದಾರ, ದಾರ್ಶನಿಕ, ವೆದ್ಯ, ಇಂಜಿನಿಯರ್ ಇವರೆಲ್ಲರನ್ನೂ ನಿರ್ಮಿಸುವ ಶಿಲ್ಪಿ ಶಿಕ್ಷಕನೇ.
ಭಾರತೀಯ ಪರಂಪರೆಯಲ್ಲಿ ಈ 'ಅಶ್ವರ್ಯವತ್' ವ್ಯಕ್ತಿ ರಾಜನೂ ಅಲ್ಲ, ಚಕ್ರವರ್ತಿಯೂ ಅಲ್ಲ, ಕವಿಯೂ ಅಲ್ಲ, ಶ್ರೀಮಂತನೂ ಅಲ್ಲ, ಹಾಗಾದರೆ ಯಾರು? ಬುದ್ಧ ಹೇಳುತ್ತಾನೆ, 'ಸಾವಿರ ಇಂದ್ರರನ್ನು ಗೆಲ್ಲಬಹುದು, ಇಂದ್ರಿಯಗಳನ್ನು ಗೆಲ್ಲು ನೋಡೋಣ'. ಶಂಕರರು ಇದನ್ನೇ ಪ್ರತಿಧ್ವನಿಸುತ್ತಾರೆ, 'ಜಿತಂ ಜಗತ್ ಕೇನ ಮನೋಹಿ ಏನ' ಅರ್ಥಾತ್ ಯಾರಿಂದ ಜಗತ್ ಗೆಲ್ಲಲ್ಪಟ್ಟಿದೆ? ಮನಸ್ಸನ್ನು ಗೆದ್ದವರಿಂದ ಎಂದು. ಈ ತಪಸ್ವಿ, ಈ ಜಿತೇಂದ್ರೀಯ, ಈ ಸತ್ಯದರ್ಶಿಯೇ ಆ ವ್ಯಕ್ತಿ; ಅವನು ತೇಜಸ್ವಿ, ಓಜಸ್ವಿ, ಊರ್ಧ್ವರೇತಸ್ವಿ, ವರ್ಚಸ್ವಿ! ಅವನ ಮಾತು, ನಡೆ, ನೋಟವೇ ಯಾರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ಈ ಸಂಸತಿಯ ಇತ್ತೀಚಿನ ಪ್ರತಿನಿಧಿಗಳೇ ಶ್ರೀರಾಮಕಷ್ಣರು, ವಿವೇಕಾನಂದರು, ಅಲ್ಲಮಪ್ರಭು, ರಾಧಾಕಷ್ಣನ್, ಕುವೆಂಪು ಇತ್ಯಾದಿ, ಇಂತಹ ಪರಂಪರೆಯೇ ವೇದಕಾಲದಲ್ಲಿತ್ತು. ವಸಿಷ್ಠ, ಧೌಮ್ಯ, ಆರುಣಿ, ಉಪಮನ್ಯು, ಶ್ವೇತಕೇತು, ಕಚ ಇತ್ಯಾದಿಗಳ ಜೀವನಕಥನ, ಬುದ್ಧೀತೀಕ್ಷಣತೆ, ಪ್ರಕೃತಿಯ ರಹಸ್ಯಗಳನ್ನು ಭೇದಿಸುವ ಅದ್ಭುತ ಸಾಮರ್ಥ್ಯ ಅನನುಕರಣೀಯ! ಇವರಿತ್ತ ಚಿಂತನೆಯ ಆಧುನಿಕ ವಿಶ್ಲೇಷಣೆಯೇ 'ವೇದಾಂತ'. ಇದನ್ನೇ ವಿವೇಕಾನಂದರು ಪಾಶ್ಚಿಮಾತ್ಯರ ಮುಂದಿಟ್ಟಿದ್ದು, ಅದನ್ನು ಕೇಳಿಯೇ ಅವರು ತಲೆದೂಗಿ "This is the truth we were seeking all these days' ಎಂದು ಉದ್ಗರಿಸಿದ್ದು! ಈ ಪರಂಪರೆ ಇಂದಿಗೂ ಮುಂದುವರಿದಿದೆ. ಆದರೆ ಗುಣಾತ್ಮಕತೆ ದುರ್ಬಲವಾಗುತ್ತಿದೆ. ತಾನು ಮೆಚ್ಚಿಕೊಂಡ ಗುರುವಿನ ಒಂದು ಪ್ರಶಂಸಾವಾಕ್ಯ ಶಿಷ್ಯನನ್ನು ಸಿಂಹನನ್ನಾಗಿಸುತ್ತದೆ. ಸ್ಫೂರ್ತಿಯ ಸೆಲೆ ಯಾವುದೇ ಇದ್ದರೂ ಮೆಚ್ಚಿಕೊಂಡ ಗುರುವಿನಿಂದ ಬಂದಾಗ ಅದು ಬೇರೆಯೇ! ಆದ್ದರಿಂದಲೇ ಯಾವುದೇ ವಿದ್ಯಾರ್ಥಿ ಅತಿ ಹೆಚ್ಚು ಅಂಕಗಳನ್ನು ಪಡೆಯುವುದು ತನ್ನ ನೆಚ್ಚಿನ ಶಿಕ್ಷಕ ಬೋಧಿಸುವ ವಿಷಯದಲ್ಲೇ! ಇದಲ್ಲವೇ 'ಮ್ಯಾಜಿಕ್' ಅಂದರೆ. ಇಂತಹ ಸಂಶೋಧನೆಗಳ ಸರಮಾಲೆಯೇ ಇದೆ, ಭಾರತೀಯ ಶೈಕ್ಷಣಿಕ ಸಂಸತಿಯಲ್ಲಿ.
ನೂರಾರು ಯುವಕರನ್ನು ತ್ಯಾಗ ಜೀವನದೆಡೆಗೆ ಸ್ಫೂರ್ತಿಗೈದ ಮಹಾಗುರು ಸ್ವಾಮಿ ಪುರುಷೋತ್ತಮಾನಂದಜಿ ಒಂದೆಡೆ ಬರೆದಿದ್ದಾರೆ-
'ತಮವ ಕಳೆದು ಬೆಳಕ ತಂದ! ದೀನ ಬಂಧು ಗುರುವರ
ಕರ್ಮಬಂಧ ತರಿದ ಧೀರ! ನಿನಗಿದೋ ನಮಸ್ಕಾರ!'
ಆ ಗುರುವಿಗೆ ನಮಸ್ಕಾರ. ಆ ಪರಂಪರೆಗೆ ನಮಸ್ಕಾರ!
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ - ವಿವೇಕಾನಂದ ಆಶ್ರಮದ ಅಧ್ಯಕ್ಷರು)