

ಸನಾತನ ಧರ್ಮ ಬೇರೆ ಧರ್ಮಗಳಂತೆ ಸುಲಭವಾಗಿ ವಿಶ್ಲೇಷಿಸಲು ಸಾಧ್ಯವಿಲ್ಲದ್ದು. ಮನುಸ್ಮೃತಿ ಮತ್ತು ಹಿಂದೂಧರ್ಮ ಎರಡೂ ಒಂದೇ ಎಂದು ತಿಳಿದಿರುವ ಪ್ರಜ್ಞಾಹೀನರಿಗೇನು ಕೊರತೆಯೇ? ಈ ಕನಿಷ್ಠ ಜ್ಞಾನ ಇಲ್ಲದ ಜನ ನಮ್ಮ ಧರ್ಮದ ವಕ್ತಾರರಾಗಿರುವುದಕ್ಕಿಂತ ಹೆಚ್ಚಿನ ದುರಂತ, ದುರವಸ್ಥೆ ಏನಿದೆ?
‘ಪುಣ್ಯಸ್ಯ ಫಲಂ ಇಚ್ಛಂತಿ | ಪುಣ್ಯಂ ನೇಚ್ಛಂತಿ ಮಾನವಾಃ | ಪಾಪಸ್ಯ ಫಲಂ ನೇಚ್ಛಂತಿ | ಪಾಪಂ ಕುರ್ವಂತಿ ಯತ್ನತಃ’ ಎನ್ನುವುದು ಆರ್ಯೂೕಕ್ತಿ. ಅರ್ಥಾತ್ ಅಲ್ಪರು, ಪುಣ್ಯದ ಫಲವನ್ನು ಬಯಸುತ್ತಾರೆ ; ಪುಣ್ಯವನ್ನು ಮಾಡಹೊರಡುವುದಿಲ್ಲ ;
ಪಾಪದ ಫಲವನ್ನು ಎಂದಿಗೂ ಬಯಸುವುದಿಲ್ಲ ಆದರೆ ಪ್ರಯತ್ನಪೂರ್ವಕವಾಗಿ ಪಾಪವನ್ನೇ ಮಾಡುತ್ತಿರುತ್ತಾರೆ. ಸಾರಾಂಶವಿಷ್ಟು ; ಪಾಪ ಮಾಡುತ್ತ ಪುಣ್ಯದ ಫಲವನ್ನು ನಿರೀಕ್ಷಿಸುವುದು. ಭಾರತೀಯ ಮೂಲವಾದ ಚಿಂತನೆಗಳು ಇಂದು ವೈಜ್ಞಾನಿಕ ವಲಯಗಳಲ್ಲಿ, ಪ್ರಪಂಚದ ಮೂಲೆಮೂಲೆಗಳಲ್ಲಿ ಕಾತುರದಿಂದ ಸ್ವೀಕರಿಸಲ್ಪಡುತ್ತಿವೆ, ಆರಾಧಿಸಲ್ಪಡುತ್ತಿವೆ! ಅವುಗಳನ್ನು ಆಧಾರವಾಗಿಟ್ಟುಕೊಂಡು ಅದ್ಭುತ ಸಂಶೋಧನೆಗಳು ಅನಾವರಣಗೊಳ್ಳುತ್ತಿವೆ, ಆದರೆ ಭಾರತೀಯ ಚಿಂತನಚಾವಡಿಗಳಲ್ಲಿ ಅವೆಲ್ಲ ಎಷ್ಟರಮಟ್ಟಿಗೆ ಅನುರಣಿತವಾಗುತ್ತಿವೆ? ಇದನ್ನೆಲ್ಲ ಹೇಳುವುದಕ್ಕೆ ಕಾರಣವಿಷ್ಟೇ, ಆಧುನಿಕ ಯುಗದ ಪ್ರಖ್ಯಾತ ವಿಜ್ಞಾನಿ ನೀಲ್ ಬೋರ್ ಜೀವನಚರಿತ್ರೆಯನ್ನು ಅವಲೋಕಿಸುತ್ತಿದ್ದಾಗ ಒಂದು ಅದ್ಭುತ ವಿಚಾರ ನನ್ನ ಗಮನ ಸೆಳೆಯಿತು, ಅದೇನೆಂದರೆ ತಮ್ಮ ಗುರು ಪ್ರೊಫೆಸರ್ ಹಾಫ್ಡಿಂಗ್ ಶಿಷ್ಯನೊಂದಿಗಿನ ಎಲೆಕ್ಟ್ರಾನ್ ಕುರಿತ ಚರ್ಚೆಯೊಂದರಲ್ಲಿ, ‘ಹಾಗಾದರೆ ನಿಜಕ್ಕೂ ಎಲೆಕ್ಟ್ರಾನ್ ಎಲ್ಲಿ ಇದೆ ಎಂದು ತಿಳಿಯಬೇಕು?’ ಎಂದು ಪ್ರಶ್ನಿಸಿದಾಗ ವಿಜ್ಞಾನಿ ಬೋರ್ ಉತ್ತರಿಸುತ್ತಾರೆ, ‘ಮೊದಲು ‘ಇರುವುದು’ ಎಂದರೆ ಏನು? ಅದನ್ನು ತಿಳಿಯಬೇಕಿದೆ’ ಎಂದು. ಆಶ್ಚರ್ಯಗೊಂಡೆ, ಹೌದು! ಸೃಷ್ಟಿಯ ಪೂರ್ವದಲ್ಲಿ ಯಾವ ವಸ್ತುವಿನಿಂದ ಜಗತ್ತೆಲ್ಲ ಬಂದಿದೆಯೋ ಅದನ್ನು ‘ಇತ್ತು’ ಎನ್ನಲೂ ಆಗದು; ‘ಇರಲಿಲ್ಲ’ ಎನ್ನಲೂ ಆಗದು! ಎಂತಲೇ ನಾಸದೀಯ ಸೂಕ್ತ ಘಂಟಾಘೊಷವಾಗಿ ಸಾರಿರುವುದು. ‘ಇದೆ’ ಎನ್ನುವುದೇ ಮೂಲಸ್ಥಿತಿಗಿಂತ ಒಂದು ಮೆಟ್ಟಿಲು ಕೆಳಗಿನಸ್ಥಿತಿ. ನಾಸದೀಯ ಸೂಕ್ತ ಮತ್ತು ಶ್ರೀಶಂಕರಾಚಾರ್ಯರ ‘ಮಾಯೆ’ಯ ಮೇಲಿನ ವ್ಯಾಖ್ಯೆಯಾದ ‘ಸನ್ನಾಪಿ ಅಸನ್ನಾಪಿ ಉಭಯಾತ್ಮಿಕಾನೋ’ ಎನ್ನುವಲ್ಲಿ ಭಾಷೆ ಮತ್ತು ತರ್ಕ ಎರಡೂ ಸೋಲುತ್ತವೆ. ಹೌದು! ಇದು ಸೃಷ್ಟಿಯ ಮೂಲ ವಸ್ತುವನ್ನು ಕುರಿತ ‘ಅವಾಙ್ಮನಸ ಗೋಚರಂ’ ಎನ್ನುವ ವ್ಯಾಖ್ಯೆಯ ವಿಷದೀಕರಣವೇ! ಇದರರ್ಥ, ವಾಕ್ ಮನಸ್ಸುಗಳಿಗೆ ಅಗೋಚರ ಎಂದು. ವಾಕ್ ಭಾಷೆಗೆ ಸಂಬಂಧಿಸಿದ್ದು, ಮನಸ್ಸು ತರ್ಕಕ್ಕೆ ಸಂಬಂಧಿಸಿದ್ದು.
ತೈತ್ತರೀಯ ಉಪನಿಷತ್ತಿನ ‘ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ’ ಎನ್ನುವುದರ ಪ್ರತಿಧ್ವನಿಯೇ ಇದು. ಯಾವ ಮಹಾನ್ ಸತ್ಯ ನೀಲ್ ಬೋರ್ರಿಗೆ ಒಂದು Glimpse ಮಾತ್ರ ಲಭ್ಯವಾಯಿತೋ ಅದರ ಸ್ಪಷ್ಟ ವ್ಯಾಖ್ಯೆಯನ್ನು ವೇದ, ಉಪನಿಷತ್, ಪ್ರಕರಣ ಗ್ರಂಥಗಳಲ್ಲಿ ಭಾರತೀಯರು ಬುದ್ಧ ಪೂರ್ವ ದಿನಗಳಲ್ಲಿ ಸಾರಿದ್ದಾರೆ, ಸ್ವಯಂ ನೀಲ್ ಬೋರ್ರವರೇ ಇದನ್ನು ಉಪನಿಷತ್ ಅಧ್ಯಯನದಿಂದ ಪಡೆದಿರಲಾರರು ಎಂದು ನನಗೇನೂ ಅನ್ನಿಸುವುದಿಲ್ಲ, ಏಕೆಂದರೆ ಅವರ ಶಿಷ್ಯ ನೊಬೆಲ್ ವಿಜೇತ John Wheeler ಬೋರ್ರವರು ಆಳವಾದ ಉಪನಿಷತ್ ಅಧ್ಯಯನದಲ್ಲಿ ಆಗಾಗ್ಗೆ ತೊಡಗುತ್ತಿದ್ದರೆಂಬುದನ್ನು ನೇರಮಾತುಗಳಲ್ಲೇ ಸ್ಪಷ್ಟಪಡಿಸಿದ್ದಾರೆ.
ಭಾರತೀಯರಾದ ನಮಗೆ ಎಂದಾದರೂ ನಮ್ಮ ಪೂರ್ವಿಕರ ಮಹಿಮೆ ತಿಳಿಯುವ ಸಂಭವವಿದೆ ಎಂದು ನಿಮಗನ್ನಿಸುತ್ತದೆಯೇ? ಇದು ವಿಸ್ಮ ೃತಿಯೋ?!
ಯಾವುದಾದರೂ ಸಮ್ಮೋಹನವೋ?! ಮತ್ತೆ ಅದೇ ಮಹಾನ್ ಸ್ವಾಮಿ ವಿವೇಕಾನಂದರೇ ಎಚ್ಚರಿಸಿದಂತೆ "what India badly needs is Dehypnotization' ಹೌದು! ಈ Hypnotism ನಮ್ಮನ್ನು ವಿಜ್ಞಾನವೆಂದರೆ ಸಾಕು ಅದರ ವಾರಸುದಾರರು ಪಾಶ್ಚಾತ್ಯರು ಎನ್ನುವ ಮಹಾನ್ ಮೂಢನಂಬಿಕೆಗೆ ತಳ್ಳಿಬಿಟ್ಟಿದೆ.
ಅಮೆರಿಕದ Marylandನಲ್ಲಿ 2007ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂರೊಡನೆ ವೇದಿಕೆ ಹಂಚಿಕೊಳ್ಳುವ ಸಂದರ್ಭವೊದಗಿತ್ತು. ಸುತ್ತೂರು ಜಗದ್ಗುರುಗಳು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪೂಜ್ಯ ಸಿದ್ಧೇಶ್ವರ ಸ್ವಾಮಿಗಳೂ ಉಪಸ್ಥಿತರಿದ್ದರು. ಮಾತನಾಡುವ ಸಂದರ್ಭದಲ್ಲಿ ನಾನು ‘ಭಾರತದಲ್ಲೇಕೆ ವಿಶ್ವದರ್ಜೆ ವಿಜ್ಞಾನಿಗಳು ಹುಟ್ಟುತ್ತಿಲ್ಲ’ ಎಂದು ಪ್ರಶ್ನೆ ಮಾಡಿದೆ. ತಕ್ಷಣವೇ ಕಲಾಂರವರು ‘ನಿಮಗೊಂದು ಇ-ಮೇಲ್ ಕಳಿಸುವೆ ಅದನ್ನು ನೋಡಿ’ ಎಂದರು. ಮಾರನೇ ದಿನ ಇ-ಮೇಲ್ ಬಂದಿತ್ತು. ಮೆಕಾಲೆ ಮಹಾಶಯ ಭಾರತೀಯ ಶಿಕ್ಷಣ ಪದ್ಧತಿಯ ರೂಪರೇಷೆ ಹೇಗಿರಬೇಕು ಎಂದು ಹೇಳಿದ ಮಾತಿನ ಸಾರ ಅದು. ಪ್ರಸ್ತುತ ವಿದ್ಯಮಾನಗಳನ್ನು ಅವನು 200 ವರ್ಷದ ಹಿಂದೆಯೇ ನೋಡಿಬಿಟ್ಟಿದ್ದನೇ ಎಂದು ಆಶ್ಚರ್ಯವಾಗದಿರದು. ಹೇಳುತ್ತಾನೆ ಅವನು, "I have travelled along the.. the dominated country'. ಅರ್ಥಾತ್ ಈ ದೇಶದ ಉದ್ದಗಲಕ್ಕೂ ನಾನು ಸಂಚಾರ ಮಾಡಿದ್ದೇನೆ ಒಬ್ಬ ಕಳ್ಳನೂ, ಒಬ್ಬ ಭಿಕ್ಷುಕನೂ ನನಗೆ ಕಾಣಲಿಲ್ಲ. ಇಲ್ಲಿಯ ಸಂಪತ್ತು, ನೈತಿಕತೆ, ಸ್ಥೈರ್ಯ, ಮಾನವೀಯತೆ ಇವುಗಳನ್ನು ನೋಡಿದಾಗ ಇದೆಲ್ಲದರ ಮೂಲವಾದ ಅವರ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯ ಬೆನ್ನುಮೂಳೆಯನ್ನು ಮುರಿಯದೆ ಅವರನ್ನು ಎಂದಾದರೂ ನಾವು ಆಳುವೆವು ಎಂದು ನನಗೆ ಅನ್ನಿಸುವುದಿಲ್ಲ, ಆದ್ದರಿಂದ ಪರಕೀಯವಾದದ್ದೆಲ್ಲ ಶ್ರೇಷ್ಠ ಮತ್ತು ದೇಶಿಯ ಮೂಲದ್ದು ನಿಕೃಷ್ಟ ಎಂಬ ತತ್ತ್ವವನ್ನೇ ಸಾರುವ ಶಿಕ್ಷಣ ಪದ್ಧತಿಯಿಂದ ಅವರ ಪ್ರಾಚೀನ ಶಿಕ್ಷಣ ಪದ್ಧತಿಯನ್ನು ಬದಲಿಸದಿದ್ದರೆ ಅವರನ್ನು ನಮ್ಮ ಅಧೀನರಾಷ್ಟ್ರವನ್ನಾಗಿ ಮಾಡಿಕೊಳ್ಳುವೆವು ಎಂಬ ಭರವಸೆ ನನಗಿಲ್ಲ’.
ಅಂದಿನ ಬ್ರಿಟಿಷ್ ಭಾರತದ ರಾಜಧಾನಿಯಾದ ಕಲ್ಕತ್ತೆಯಲ್ಲಿ ಶಿಕ್ಷಣ ಪೂರೈಸಿದ ವಿವೇಕಾನಂದರು ಮದ್ರಾಸಿನಲ್ಲಿ ಅಂದಿನ ಶಿಕ್ಷಣ ಪದ್ಧತಿ ಕುರಿತು ಹೇಳಿದ ಮಾತುಗಳನ್ನು ಗಮನಿಸಿ. ಭಾರತವನ್ನು ಕುರಿತ ಚರಿತ್ರೆಯಲ್ಲಿ ಒಂದೋ ಭಾರತೀಯ ವ್ಯವಸ್ಥೆಗಳ ಕುರಿತ ಅವಹೇಳನ ಇಲ್ಲವೇ ಆ ವ್ಯವಸ್ಥೆಗಳ ಮೂಲ ಯುರೋಪ್, ಭಾರತವಲ್ಲ ಎಂಬ ಅನಿಸಿಕೆ, ಒಟ್ಟಿನಲ್ಲಿ ಪರಂಪರೆ ಬಗ್ಗೆ ಯಾವ ಭಾರತೀಯನಿಗೂ ಗೌರವ ಮೂಡಿರಬಾರದು. ಸ್ವತಂತ್ರೋತ್ತರ ಭಾರತದಲ್ಲಿ ಪರಿಸ್ಥಿತಿ ಬದಲಾವಣೆ ಆಗಬೇಕಿತ್ತು, ದುರಂತವೆಂದರೆ ಪರಂಪರೆಯ ಅವಹೇಳನ ಮತ್ತು ಪರಕೀಯರ ವೈಭವೀಕರಣ ಜೊತೆಜೊತೆಯಲ್ಲೇ ಸಾಗಿದ್ದು. ಅನರ್ಹರನ್ನು ಪಠ್ಯಪುಸ್ತಕ ಸಮಿತಿಯಲ್ಲಿ ಹಾಕಿಕೊಂಡಿದ್ದು. ಇವರೆಲ್ಲರನ್ನೂ ಹೀಗೆಯೇ ನಿರ್ವಿುಸುವ ಎನ್ಸಿಎಚ್ಆರ್ ಅನ್ನು ತಯಾರು ಮಾಡಿದ್ದು. ಅಂತಾರಾಷ್ಟ್ರೀಯ ಸಮಾವೇಶಗಳಿಗೆ ಪರಂಪರೆಯ ಗಂಧಗಾಳಿ ಇಲ್ಲದ ಜನರನ್ನು ಪ್ರತಿನಿಧಿಗಳನ್ನಾಗಿ ಕಳಿಸಿದ್ದು, ಇದನ್ನೆಲ್ಲ ಅನುಭವದ ಆಧಾರದ ಮೇಲೆ ಹೇಳುತ್ತಿದ್ದೇನೆ.
2006ರಲ್ಲಿ ಇಟಲಿಯ ಟ್ಯೂರಿನ್ ವಿಶ್ವವಿದ್ಯಾಲಯದಲ್ಲಿ The Vedas and their contemporary relevance ಎನ್ನುವ ವಿಷಯದ ಬಗ್ಗೆ ಉಪನ್ಯಾಸ ನೀಡಲು ಆಹ್ವಾನಿತನಾಗಿದ್ದೆ. ಸ್ವಾಮಿ ವೀರೇಶಾನಂದರು ಹಾಗೂ ಸ್ವಾಮಿ ಯೋಗೇಶ್ವರಾನಂದರು ಕೂಡ ಇದರಲ್ಲಿ ಭಾಗಿಗಳಾಗಿದ್ದರು. ಪ್ರವಚನದಲ್ಲಿ ಪಾಲ್ಗೊಂಡು ನಂತರ Indology Departmentನ ಕಡೆಗೆ ಹೊರಟ ನಾವು, ಅಲ್ಲಿ ಶ್ರೀಶಂಕರಾಚಾರ್ಯರ ಮತ್ತು
ರಮಣ ಮಹರ್ಷಿಗಳ ಚಿತ್ರ ಕಂಡು ಖುಷಿಪಡುತ್ತಿದ್ದಂತೆ ಪ್ರೊಫೆಸರ್ ಅಲೆಸಾಂಡ್ರಾ ನಮಗೆಲ್ಲ ಒಂದು ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು "Hindu Masculinities' ಎಂದು ಶೀರ್ಷಿಕೆ. ಸುಮ್ಮನೆ ತಿರುವಿ ಹಾಕಿದ ತಕ್ಷಣ ನಮಗೆ ಗೊತ್ತಾಗಿದ್ದು ಅದೊಂದು ವಿಕೃತ ವಿಚಾರಗಳ ಸಂಗ್ರಹ. ಶಿವ, ಕೃಷ್ಣ, ಕಾಳಿ, ಭಾರತೀಯ ಗುರುಕುಲ ಪದ್ಧತಿ ಇವುಗಳ ಕುರಿತ
ನಾವು ಕಂಡು ಕೇಳರಿಯದ ವಿಷಯಗಳು, ಅವಾಕ್ಕಾದ ನಾನು ಅವರನ್ನು ಕೇಳಿದೆ, ‘ಈ ಮಾಹಿತಿ ನಿಮಗೆಲ್ಲಿಂದ ಸಿಗುತ್ತದೆ’, ಬೆಂಗಳೂರಿನ ವ್ಯಕ್ತಿಯೊಬ್ಬರನ್ನು ಹೆಸರಿಸಿದರು, ಆ ವ್ಯಕ್ತಿಯೋ ಕೇವಲ ಒಬ್ಬ ಕಾದಂಬರಿಗಾರ್ತಿ, ಪರಂಪರೆಯ ಜ್ಞಾನವೇ ಇಲ್ಲದ ವ್ಯಕ್ತಿ, ಇದಲ್ಲವೇ ಸಮಸ್ಯೆಯ ಮೂಲ!
ಸತ್ಯವನ್ನು ತಿಳಿಸುವ ಯೋಗ್ಯತೆಯಿಲ್ಲದವರು ಮೌನಕ್ಕೆ ಶರಣಾಗಬೇಕು. ಮನುಷ್ಯನೊಬ್ಬನ ಕೊಲೆ ಶಿಕ್ಷಾರ್ಹವಾದರೆ ಸತ್ಯದ ಕೊಲೆ ಅದರ ನೂರರಷ್ಟು ಶಿಕ್ಷಾರ್ಹ. ಪ್ರಜ್ಞಾವಂತರಾಗುವುದು ಪ್ರತಿಯೊಬ್ಬರ ಹಕ್ಕು. ಪ್ರಜಾಪ್ರಭುತ್ವದಂಥ ವ್ಯವಸ್ಥೆಯಲ್ಲಿ ಇದು ಅನಿವಾರ್ಯವಾದ ಅವಶ್ಯಕತೆ ಕೂಡ. ಇಲ್ಲದಿದ್ದಲ್ಲಿ ದೇಶ ಬಿರುಗಾಳಿಗೆ ಸಿಕ್ಕ ದೋಣಿಯಂತಾಗುತ್ತದೆ. ಬಹುಜನ ಹಿತಕ್ಕಾಗಿ, ಸ್ವಯಂ ತನ್ನದೇ ಉದ್ಧಾರಕ್ಕಾಗಿ ಪ್ರತಿಯೊಬ್ಬನೂ ನಿರಂತರ ವಿಕಾಸದ ಹಾದಿಯಲ್ಲಿ ಸಾಗಬೇಕಾಗಿರುತ್ತದೆ. ‘ವಿಕಸನವೇ ಜೀವನ ಸಂಕುಚಿತತೆಯೇ ಮರಣ’ ಇದನ್ನು ಸಾಧಿಸಲು ಆತ್ಮವಿಶ್ವಾಸ ಮತ್ತು ಆತ್ಮಗೌರವಗಳು ಭದ್ರಬುನಾದಿಗಳಂತೆ ಕೆಲಸ ಮಾಡಬಲ್ಲವು; ಮೊದಲನೆಯದು ಸವಾಲುಗಳನ್ನು ಸ್ವೀಕರಿಸಿ ಪೌರುಷವಂತನನ್ನಾಗಿಸಿದರೆ ಎರಡನೆಯದು ಜವಾಬ್ದಾರಿತನವನ್ನು ಜಾಗೃತಗೊಳಿಸುತ್ತದೆ. ಇವೆರಡನ್ನೂ ಒಂದು ದೇಶ ಏಕಕಾಲದಲ್ಲಿ ಸಾಧಿಸಬಲ್ಲದು ಸ್ಪೂರ್ತಿಯುತ, ಹೆಮ್ಮೆಯನ್ನು ಸೃಜಿಸುವ ಪರಂಪರೆ, ಚರಿತ್ರೆ ಅದಕ್ಕಿದ್ದರೆ. ಭಾರತದಷ್ಟು ಶ್ರೀಮಂತ ರಾಷ್ಟ್ರ ಈ ವಿಷಯದಲ್ಲಿ ಮತ್ತಾವುದೂ ಇಲ್ಲ ಎಂಬುದು ನಿರ್ವಿವಾದ. ಆದರೆ ನಮ್ಮ ಇತಿಹಾಸ ಹಾಗೆ ರಚನೆಯೇ ಆಗಲಿಲ್ಲ. ಪೂರ್ವಗ್ರಹ ಮತ್ತು ಪಟ್ಟಭದ್ರ ಹಿತಾಸಕ್ತಿ ಐತಿಹಾಸಿಕ ಸತ್ಯಗಳನ್ನು ನಿಷ್ಕರುಣೆಯಿಂದ ಚಿವುಟಿ ಹಾಕಿದೆ. ಸುಪ್ರಸಿದ್ಧ ಇತಿಹಾಸಕಾರರಾದ ಆರ್ನಾಲ್ಡ್ ಟಾಯ್್ನ ಬಿ, ವಿಲ್ ಡ್ಯೂರೆಂಟ್, ವಾಲ್ಟೇರ್, ಮ್ಯಾಕ್ಸ್ ಮುಲ್ಲರ್ ಇತ್ಯಾದಿ ಪಾಶ್ಚಾತ್ಯ ಪಂಡಿತವರ್ಗ ಭಾರತೀಯರ ಸಾಧನೆಗಳನ್ನು ಕಂಡು ಮೂಕವಿಸ್ಮಿತವಾಗಿದೆ. ಆಧುನಿಕ ವಿಜ್ಞಾನದ ಒಗಟುಗಳಿಗೆ ಪ್ರಾಚೀನ ಭಾರತ ನೀಡಿದ ಪರಿಹಾರಗಳನ್ನು ಈಗಾಗಲೇ ಪ್ರಸ್ತಾಪಿಸಿದ್ದೇನೆ. ಇವೆಲ್ಲವನ್ನೂ ಬಿಡೋಣ; ಪ್ರತಿಯೊಂದಕ್ಕೂ ವೈಜ್ಞಾನಿಕ ವಿವರಣೆಯನ್ನು ಕೇಳುವ ನಾವು, ‘ಮೂಢನಂಬಿಕೆ’ ವಿರುದ್ಧ ಸಮರ ಸಾರಿರುವ ನಾವು, ವೈಜ್ಞಾನಿಕತೆಯ ಉಸಿರೇ ಆದ ‘ಸತ್ಯನಿಷ್ಠೆ’ಗೆ ಎಳ್ಳುನೀರು ಬಿಟ್ಟಿರುವುದು ಕೌತುಕವೇ ಸೈ! ಬದಲಾಗಬೇಕು, ಪ್ರಪಂಚದ ಯಾವ ವಿಜ್ಞಾನಿಯೂ ಭಾರತದ ಬಗ್ಗೆ ಒಂದು ಅಪಸ್ವರವನ್ನೂ ಎತ್ತಿಲ್ಲ ; ಅಷ್ಟೇ ಅಲ್ಲ ಪ್ರಶಂಸೆಯ ಮಳೆಗರೆದಿದ್ದಾನೆ.
ಗ್ರೀಸಿನ ರಾಣಿ ಫ್ರೆಡ್ರಿಕಾ ಹೀಗೆ ಬರೆಯುತ್ತಾರೆ-"You Indians are fortunate to inherit such knowledge, I envy you. While Greece is the county of my birth India is the country of my soul.
ಇದೇ ನಿಜವಾದ ಭಾರತ! ಸನಾತನ ಭಾರತ!!
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)