ಭಾರತೀಯ ಪರಂಪರೆಯ ಧ್ರುವತಾರೆ ವೇದವ್ಯಾಸ

Hombe
Published on

ದೇಶ-ದೇಶಗಳನ್ನು ಗೆದ್ದು ಚಕ್ರವರ್ತಿಯಾಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದ ಅಲೆಕ್ಸಾಂಡರ್ ತನ್ನ ಗುರುವಾದ ಅರಿಸ್ಟಾಟಲ್​ನ ಆಶೀರ್ವಾದ ಪಡೆಯಲಿಚ್ಛಿಸಿದ. ಶಿಷ್ಯನ ನಿಲುವನ್ನು ಮೆಚ್ಚಿ ಬೆನ್ನು ಚಪ್ಪರಿಸಿದ ಗುರು, ಅವನಲ್ಲಿ ಭಾರತವನ್ನೂ ಗೆಲ್ಲಬೇಕೆಂಬ ಇಚ್ಛೆ ಇರುವುದನ್ನು ಕಂಡು ಸಕಾಲಿಕ ಎಚ್ಚರಿಕೆ ನೀಡಲು ಮರೆಯಲಿಲ್ಲ. ‘ಭಾರತ ಜ್ಞಾನಿಗಳ, ತತ್ತ್ವಜ್ಞರ ತವರುಮನೆ, ಅಲ್ಲಿಗೆ ವಿದ್ಯಾರ್ಥಿಯಾಗಿ ಹೋಗಬೇಕೇ ಹೊರತು ವಿಜಯಾಕಾಂಕ್ಷಿಯಾಗಿ ಅಲ್ಲ. ಅಲ್ಲಿನ ಕೆಲವು ವಿದ್ವಾಂಸರನ್ನು ಗ್ರೀಸಿಗೆ ತರಬಲ್ಲೆಯಾದರೆ, ಗ್ರೀಸ್ ಅದ್ಭುತ ಬೆಳವಣಿಗೆ ಕಾಣುವುದರಲ್ಲಿ ಸಂಶಯವೇ ಇಲ್ಲ’

ಎಂದು. ಹೌದು, ಗ್ರೀಸ್ ಮಾತ್ರ ಏಕೆ! ಯಾವುದೇ ದೇಶ ಸಮೃದ್ಧ, ಸದೃಢವಾಗಿ ನಿಲ್ಲಬೇಕಾದರೆ, ಉಳಿಯಬೇಕಾದರೆ ಇಂತಹ ಅಸಂಖ್ಯಾತ ಶಕ್ತಿಗಳ ತವರುನೆಲೆಯೇ ಆದ ‘ಸತ್ಯ’ವನ್ನು ಅರಸುವ, ಅದನ್ನೇ ಜೀವನದ ಪ್ರಧಾನ ಗುರಿಯನ್ನಾಗಿಸಿಕೊಳ್ಳುವ, ಅದಕ್ಕಾಗೇ ಮೀಸಲಾದ ವ್ಯಕ್ತಿಸಮೂಹಗಳ ನೆಲೆವೀಡು ಅದಾಗಬೇಕು. ಭಾರತ ಈ ಲಕ್ಷಣಗಳನ್ನು ತನ್ನ ಮಣ್ಣಿನಲ್ಲೇ, ಉಸಿರಿನ ಗಾಳಿಯಲ್ಲೇ ಅನಾದಿಕಾಲದಿಂದಲೂ ತುಂಬಿಕೊಂಡಿದೆ. ಅಂದೂ ಇಂದೂ ಒಂದು ದೇಶದ ಶಕ್ತಿ ಇರುವುದು ಇಲ್ಲಿಯೇ. ಒಂದು ಸಮಾಜಕ್ಕೆ ಇರಬೇಕಾದ ಬದ್ಧತೆಯೂ ಇದೇ! ಅಲೆಕ್ಸಾಂಡರ್ ನಿಜಕ್ಕೂ ವಿದ್ವಾಂಸರನ್ನು ಕರೆದೊಯ್ದ, ಅಷ್ಟೇ ಅಲ್ಲ, ತಕ್ಷಶಿಲಾ ವಿಶ್ವವಿದ್ಯಾಲಯದಿಂದ ಪ್ರಭಾವಿತನಾಗಿ, ಈಜಿಪ್ತ್​ನಲ್ಲಿ ಅಂಥ ಮಹಾನ್ ಕೇಂದ್ರ ಸ್ಥಾಪಿಸಲು ನಿರ್ಧರಿಸಿದ. ಅದೇ ಮುಂದೆ ತನ್ನ ಶಿಷ್ಯ ಟಾಲೆಮಿ ನಿರ್ವಿುಸಿದ ‘ಅಲೆಕ್ಸಾಂಡ್ರಿಯ ವಿಶ್ವವಿದ್ಯಾಲಯ’.

ಅದು ಸರಿ! ಭಾರತದ ಬಗ್ಗೆ ಅರಿಸ್ಟಾಟಲ್ ಇಷ್ಟು ಉನ್ನತ ಹಾಗೂ ನಿಖರ ಅಭಿಪ್ರಾಯ ಹೊಂದಲು ಸಾಧ್ಯವಾದದ್ದಾದರೂ ಹೇಗೆ? ಇದನ್ನು ಅರಿಯಬೇಕಾದರೆ, ಅವನ ಗುರು ಪ್ಲೇಟೋನ ಚಿಂತನೆಗಳನ್ನೊಮ್ಮೆ ಅವಲೋಕಿಸಬೇಕು. ಯಾರ ವೈಚಾರಿಕ ವಿಶಾಲ ವ್ಯಾಪ್ತಿಯಲ್ಲಿ ದೀರ್ಘಕಾಲ ಮುಳುಗಿ ಸ್ವಯಂ, ಪ್ಲೇಟೋನೇ ಸ್ತಂಬೀಭೂತನಾದನೋ ಆ ಪೈಥಾಗೋರಸ್​ನ

ಬರಹಗಳನ್ನು ಅವಲೋಕಿಸಬೇಕು, ಇಲ್ಲೆಲ್ಲ ಕಾಣುವುದೇ ಭಾರತೀಯ ಚಿಂತನೆ. ಭಾರತೀಯ ಮಣ್ಣಿನ ವಾಸನೆ. ಭಾರತೀಯ ಉಸಿರಿನ ಹಸಿರು! ತನ್ನ ಗುರು ಸಾಕ್ರೆಟೀಸನಿಗೆ ವಿಷಪ್ರಾಶನವಾದಮೇಲೆ ಛಿದ್ರಗೊಂಡ ಹೃದಯದಿಂದ ಅಥೆನ್ಸ್​ನ್ನು ಬಿಟ್ಟ ಪ್ಲೇಟೋ ಇಟಲಿಯಲ್ಲಿ ಭಾರತೀಯ ಗುರುಕುಲದಂತೆ ಇದ್ದ ಪೈಥಾಗೋರಸ್​ನ ಆಶ್ರಮದಲ್ಲಿ ದೀರ್ಘಕಾಲ ಅಧ್ಯಯನದಲ್ಲಿ ತೊಡಗಿ, ಆ ಚಿಂತನೆಗಳ ಹಾಗೂ ಅದಕ್ಕೆ ರೂಪಕೊಟ್ಟ ಭಾರತದ ಅನುಪಮ ಸಂಸ್ಕೃತಿಯನ್ನು ಅದೆಷ್ಟು ಸಲ ಶಿಷ್ಯ ಅರಿಸ್ಟಾಟಲ್​ನ ಮುಂದೆ ವರ್ಣಿಸಿರಬೇಡ! ಇಲ್ಲಿಂದ ಏಳುನೂರು ವರ್ಷಗಳವರೆಗೆ ಗ್ರೀಸ್​ನ ಕಣ್ಣುಗಳಿಗೆ ಭಾರತ ಕಂಡಿದ್ದು ಸಾರಸ್ವತ ಸೌರಭವೇ ಮೇಳೈಸಿದ, ಮೇರೆಯೇ ಇಲ್ಲದ ಧವಳ ಹಿಮಾಲಯದಂತೆ. ಇತ್ತೀಚಿನ ದಿನಗಳಲ್ಲಿ ಅಮೆರಿಕದ ಐರಿಶ್ ಸಂಜಾತ Mark Twain ಭಾರತದ ಬಗ್ಗೆ "Our most valuable and most instructive materials in the history of man are treasured up in India' ಎನ್ನುತ್ತಾನಲ್ಲ, ಅದರ ಪ್ರಾಚೀನ ಸಂವೇದನಗಳ ಸ್ಪಷ್ಟರೂಪವನ್ನು, ಇದರ ಪರಾಕಾಷ್ಠೆಯನ್ನು ನಾವು ನೋಡುವುದು ಮುಂದೆ ಬೈಬಲ್​ಗೆ ಇಂದಿನ ವ್ಯವಸ್ಥಿತ ರೂಪ ಕೊಟ್ಟ ಸೇಂಟ್ ಅಗಸ್ಟೀನ್​ನ ಸಂತತ್ವದಲ್ಲಿ! ಅವನ Mystical ಚಿಂತನೆಗಳಲ್ಲಿ. ಆದರೆ Augustine ಆದರೋ ವೈದಿಕ ಋಷಿಯಂತೆ ಜೀವಿಸಿದ, ವೇದಾಂತ ಚಿಂತನೆಗಳಿಂದ ಇನ್ನಿಲ್ಲದಂತೆ ಪ್ರಭಾವಿತನಾಗಿದ್ದ, ಗ್ರೀಕ್ ಚಿಂತಕ ಪ್ಲಾಟಿನಸ್​ನ ಪಡಿಯಚ್ಚು. ಪಾಶ್ಚಾತ್ಯ ಚಿಂತಕನೊಬ್ಬ ಹೆಮ್ಮೆಯಿಂದ ಉದ್ಗರಿಸುತ್ತಾನೆ- ‘ಈಜಿಪ್ಷಿಯನ್ ನಾಗರಿಕತೆ ಪಿರಮಿಡ್​ಗಳಲ್ಲಿ ತನ್ನ ಸಾಧನೆ, ಸಾರ್ಥಕತೆಗಳನ್ನು ಮೆರೆಯಿತು. ಆದರೆ ಅವು ಕುಸಿಯುತ್ತಿವೆ, ಕಳ್ಳಕಾಕರ ಆಕ್ರಮಣಕ್ಕೆ ಒಳಗಾಗಿವೆ. ಭಾರತೀಯರಾದರೋ ಕಾಲ, ದೇಶಗಳ ಮೇರೆಯನ್ನೇ ಅರಿಯದ, ಕುಸಿಯದ, ಕಳ್ಳರ ಪಾಲಾಗದ ಸಾರಸ್ವತ ಲೋಕವೊಂದನ್ನೇ ನಿರ್ವಿುಸಿ ಪ್ರಬುದ್ಧತೆ ಮೆರೆದರು’ ಎಂದು. ಆ ಸಾರಸ್ವತಲೋಕವೇ ಇಂದು ಜಾಗತಿಕ ಬೌದ್ಧಿಕ ವಲಯಗಳನ್ನು ಮಂತ್ರಮುಗ್ಧವಾಗಿಸುತ್ತಿರುವ ವೇದವಾಙ್ಮಯ!

ಇಂಗ್ಲೆಂಡ್​ನ ಪ್ರಖ್ಯಾತ ಚಿಂತಕ ಫ್ರೆಡ್ರಿಕ್ ಮ್ಯಾಕ್ಸ್ ಮುಲ್ಲರ್ ಹೀಗೆ ಹೇಳುತ್ತಾರೆ- "In the history of the world the Vedas fill a gap which no literary work in any other language could fill. I maintain that to everybody who cares for himself, for his ancestors, for his intellectual development, a study of the Vedic literature is indeed indispensable' ಎಂದು. ಈ ನಿಟ್ಟಿನಲ್ಲಿ ಅಮೆರಿಕನ್ Transcendental movement ಮೇರು ವ್ಯಕ್ತಿ Henry David Thoreau ಏನೂ ಹಿಂದೆ ಬೀಳುವುದಿಲ್ಲ- "one sentence in the Vedas is worth the state of Massachusetts many times over'’ ಎನ್ನುತ್ತಾರೆ. ಗಮನಿಸಿ! ಹೀಗೆಂದವರು ಭಾರತೀಯರಲ್ಲ! ಹಿಂದೂವೂ ಅಲ್ಲ! ಅಮೆರಿಕನ್! ಅಂದರೆ ವೇದಗಳ ಗಾಂಭೀರ್ಯ, ಪ್ರತಿಷ್ಠೆ ಏನೆಂಬುದು ಸ್ಪಷ್ಟವಾಗುತ್ತದೆ. ಸ್ವಾಮಿ ವಿವೇಕಾನಂದರೇ ವೇದಗಳ ಸಾರ್ವಕಾಲಿಕ ‘ಇದಮಿತ್ಥಂ’ ಸಾಮರ್ಥ್ಯವನ್ನು ಎತ್ತಿಹಿಡಿದು, ದುರ್ಬಲನನ್ನು ಪ್ರಬಲನನ್ನಾಗಿಸುವ ಅದರ ಸತ್ವವನ್ನು ಪುನರುಚ್ಚರಿಸಿದ್ದಾರೆ. ಈ ಮಹಾನ್ ವೇದವೆಂಬ ನಭೋಮಂಡಲವನ್ನು ನಿರ್ವಿುಸಿದ, ‘ಪುರುಷಸರಸ್ವತಿ’ಯರಂತಿದ್ದ ಋಷಿಪರಂಪರೆಯೇ ಇಂದಿಗೂ ಇತಿಹಾಸದುದ್ದಕ್ಕೂ ಭಾರತ ಅನುಸರಿಸಿಕೊಂಡು ಬಂದ ಮಾರ್ಗದರ್ಶಕ ಮಂಡಳಿ! ಆಧುನಿಕ ವಿಜ್ಞಾನ ಇವರ ಒಂದು ವಾಕ್ಯವನ್ನೂ ಪಕ್ಕಕ್ಕಿಡಲಾರದು.

ಉಪನಿಷತ್, ವೇದಾಂತ ಎನ್ನುವುದು ವೇದಗಳ ಪ್ರಮುಖ ಭಾಗ. ಅಷ್ಟೇ ಅಲ್ಲ ಪ್ರಾಚೀನ ವೇದ ಮತ್ತು ಆಧುನಿಕ ವಿಜ್ಞಾನ ಪರಸ್ಪರ ಕೈ ಕುಲುಕುತ್ತಿರುವುದು ಭಾರತೀಯರಾದ ನಮಗೆ ಅದೆಷ್ಟು

ಹೆಮ್ಮೆಯ ವಿಷಯ. ಈ ಅದ್ಭುತ ಪರಂಪರೆಯಲ್ಲಿ ‘ಧ್ರುವತಾರೆ’ಯಂತೆ ಕಂಗೊಳಿಸುವ ವ್ಯಕ್ತಿಯೇ ವ್ಯಾಸ ಅಥವಾ ವೇದವ್ಯಾಸ. ಈ ವ್ಯಾಸರೇ ಇಂದು ಇಡೀ ಗುರುಕುಲೋತ್ತುಂಗರೆಂಬ ಉತ್ಕೃಷ್ಟತೆಗೆ ಏರಿ, ಅವರ ಜನ್ಮದಿನೋತ್ಸವವೇ ‘ಗುರುಪೂರ್ಣಿಮೆ’ ಎಂಬ ಖ್ಯಾತಿಗೆ ಪಾತ್ರವಾಗಿರುವುದು ಸರ್ವವಿದಿತ.

‘ಋಷಿ ಪರಂಪರೆ’ಯಲ್ಲಿ ವ್ಯಾಸ ಸಂತತಿ ಮತ್ತು ಕ್ಷಾತ್ರ ಪರಂಪರೆಯಲ್ಲಿ ‘ರಘುವಂಶ ’ ಸಾರ್ವಕಾಲಿಕ ಆದರ್ಶ. ಹೋಲಿಕೆಯೇ ಇಲ್ಲದಷ್ಟು ಭವ್ಯತೆಯನ್ನು ಮೆರೆದ ವಂಶಗಳಿವು. ವ್ಯಾಸ, ಪರಾಶರರ ಮಗ ಮತ್ತು ಪರಾಶರರಾದರೋ ಸಪ್ತಋಷಿಗಳಲ್ಲೇ ಮೇರುವ್ಯಕ್ತಿತ್ವ ಎಂದೆನಿಸಿದ್ದ ವಸಿಷ್ಠರ ಮೊಮ್ಮಗ ‘ಶಕ್ತಿ’ಯ ಮಗ. ಶ್ರೀರಾಮಕೃಷ್ಣರು ಹೇಳುತ್ತಿದ್ದಂತೆ ಜಗತ್ತಿಗೆ ಬೋಧಿಸಲು ಜಗನ್ಮಾತೆಯಿಂದ ಲೈಸೆನ್ಸ್ ಪಡೆದ ವ್ಯಕ್ತಿಗಳಲ್ಲಿ ಮೊದಲನೆಯವರಾದ ಭಗವಾನ್ ಶುಕ ಮಹರ್ಷಿ, ವ್ಯಾಸರ ಮಗ. ವಸಿಷ್ಠರಿಂದ ಹಿಡಿದು ಶುಕನವರೆಗೆ ಒಬ್ಬೊಬ್ಬರೂ ಸ್ವಯಂ ವೇದಪುರುಷನೇ ಮೂರ್ತಿವೆತ್ತಂತಿದ್ದವರು. ವಸಿಷ್ಠರು ಋಗ್ವೇದದ 7ನೇ ಮಂಡಲದಲ್ಲಿ ಪ್ರಧಾನ ವ್ಯಕ್ತಿತ್ವ ಮತ್ತು ಮಂತ್ರಗಳ ಮೂರ್ತರೂಪವೇ ಎಂದರೂ ಸರಿಯೇ. ‘ಯೋಗವಾಸಿಷ್ಠ’ವೆಂಬ ಪರಮಾದ್ಭುತವಾದ ಕೃತಿ ರಚಿಸಿದವರು! ಇದಾದರೋ ಇಂದಿಗೂ, ಎಂದೆಂದಿಗೂ ಪ್ರಸ್ತುತವಿರುವ ನೂರಾರು ಚಿಂತನೆಗಳಿಗಲ್ಲದೆ ಆಧುನಿಕ ವಿಜ್ಞಾನದ ಹಲವು ಹೊಳಹುಗಳ ಮೂಲವೇ ಆಗಿದೆ. ವ್ಯಾಸರ ಕೊಡುಗೆ ಇರುವುದು ವೇದಗಳ ರಚನೆಗಿಂತ ಅವುಗಳನ್ನು ವ್ಯವಸ್ಥಿತಗೊಳಿಸುವಲ್ಲಿ. ಕೆಲವು ಮೂಲಗಳ ಪ್ರಕಾರ ವೇದಗಳ ಸಂಖ್ಯೆ ನಾಲ್ಕು ಆಗಿದ್ದೇ ಅವರ ಕಾಲದಲ್ಲಿ; ಅವರ ತಂದೆ ಪರಾಶರರು ತೀವ್ರವಾಗಿ ಪ್ರಯತ್ನಪಟ್ಟರೂ ಅದು ಕೈಗೂಡಲಿಲ್ಲವೆಂದು ಪ್ರಖ್ಯಾತ ವಿದ್ವಾಂಸ ಕೆ.ಎಂ.ಮುನ್ಷಿ ಅಭಿಪ್ರಾಯಪಡುತ್ತಾರೆ. ವ್ಯಾಸರ ಪ್ರಭಾವದಿಂದ ಅಥರ್ವಣ ವೇದ, ವೇದವಾಙ್ಮಯವನ್ನು ಸೇರುವಂತಾಯಿತು. ಸಮಗ್ರ ವೇದ ರಾಶಿಯನ್ನು ಋಗ್ವೇದ, ಯಜುರ್ವೇದ, ಸಾಮ, ಅಥರ್ವ ಎಂದು ವಿಂಗಡಿಸಿದವರು ಅವರೇ, ಆ ಕಾರಣಕ್ಕಾಗಿಯೇ ಅವರು ‘ವ್ಯಾಸ’.

ನೆನಪಿಟ್ಟುಕೊಳ್ಳಿ! ವಿಶ್ವದ ಹಳೆಯದಾದ ಈ ಸಾಹಿತ್ಯ ನಾಗರಿಕ ಸಮಾಜಕ್ಕೆ, ಸುಸಂಸ್ಕೃತ ಸಮಾಜಕ್ಕೆ ಅತ್ಯವಶ್ಯವಾದ, ಅವುಗಳ ಉದ್ಧರಣಕ್ಕೆ ಅನುಸರಿಸಬೇಕಾದ ಚಿಂತನ ಸ್ರೋತದ ಒಂದೊಂದು ಹನಿಯನ್ನೂ ವಿಪುಲವಾಗಿ ಹೊಂದಿದೆ. ವೇದದಿಂದ ಉಪನಿಷತ್, ಅಲ್ಲಿಂದ ಷಡ್ದರ್ಶನ, ಗೀತೆ, ವ್ಯಾಸ ಕೃತಿಯೇ ಆದ ಬ್ರಹ್ಮಸೂತ್ರಗಳಲ್ಲಿ ಯಾವುದೇ ಉದಾತ್ತ ಚಿಂತನೆಯ ನೈತಿಕ, ಸಾಂಸ್ಕೃತಿಕ, ಸತ್ಯದೆಡೆಗಿನ ರಾಜಪಥದ ಮೂಲವನ್ನೇ ಕಾಣುತ್ತೇವೆ. ‘ಸಾಹಿತ್ಯ’ ಎನ್ನುವ ಪದದ ಅರ್ಥವೇ ಅದು. ಬರೆದಿದ್ದೆಲ್ಲ ಬರಹ ಆಗಬಲ್ಲದು, ಸಾಹಿತ್ಯವಲ್ಲ! ಸಾಹಿತ್ಯಕ್ಕೆ ಮೇಲೆತ್ತಬಲ್ಲ ಸಾಮರ್ಥ್ಯ ಇರಬೇಕು. ವಿಶ್ವದ ಮೊಟ್ಟಮೊದಲ ತತ್ತ್ವಜ್ಞನೆಂದು ಖ್ಯಾತಿವೆತ್ತ ಭಗವಾನ್ ಕಪಿಲನಿಗೆ ಗ್ರೀಕ್ ಚಿಂತನೆ ಋಣಿಯಾಗಿರುವಂತೆ, ಮುಂದೆ ಆಚಾರ್ಯತ್ರಯರಾದಿಯಾಗಿ ಹಲವಾರು ಪ್ರಖರ ಬುದ್ಧಿಮತ್ತೆಗಳು ಅವ್ಯಾಹತವಾಗಿ ರಚಿಸಿದ ಚಿಂತನಲೋಕದ ನಕ್ಷತ್ರಗುಚ್ಛಗಳು ವಸ್ತುವಾಗಿ ಬಳಸಿಕೊಂಡಿದ್ದು ವ್ಯಾಸ ಪ್ರಣೀತ ಉತ್ತರ ಮೀಮಾಂಸವನ್ನು. ವೇದಾಂತವೆಂದು ಕರೆಯಲ್ಪಡುವ ಇದು ಪಾಶ್ಚಿಮಾತ್ಯ ವೈಜ್ಞಾನಿಕ ಸಂಶೋಧನೆಗಳಿಗೆ ಆಪದ್ಬಾಂಧವನಂತೆ ನಿಂತಿರುವುದು ಆಶ್ಚರ್ಯವೇನೂ ಅಲ್ಲ ಎನ್ನುವುದು ಈ ಭಾಷ್ಯಗಳ ಅವಲೋಕನ ತಿಳಿಸಿಕೊಡುತ್ತದೆ.

ದರ್ಶನ ಶಾಸ್ತ್ರಗಳ ಉತ್ತುಂಗದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ‘ಭಗವದ್ಗೀತೆ’ಯೂ ವ್ಯಾಸ ಕೃತಿಯೇ. ವೇದಗಳ ಶ್ರೇಷ್ಠ ಭಾಷ್ಯವೇ ಭಗವದ್ಗೀತೆ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ. ವೇದಗಳ ಭಾಷೆ ಕ್ಲಿಷ್ಟ ಸಂಸ್ಕೃತವಷ್ಟೇ ಅಲ್ಲ, ಅಲ್ಲೆಲ್ಲ ನಾವು ಕಾಣುವುದು ‘ಒಗಟು’ಗಳನ್ನು. ಯಾವುದೇ ಅನುಭಾವ ಸಾಹಿತ್ಯ ಒಗಟುಗಳೇ. ಶಿಶುನಾಳ ಶರೀಫ, ಅಲ್ಲಮಪ್ರಭು ಹಾಗೂ ಅಕ್ಕಮಹಾದೇವಿಯವರ ಕೃತಿಗಳು ಇದನ್ನು ಪುಷ್ಟೀಕರಿಸುತ್ತವೆ. ಸ್ವಯಂ ವೇದಭಾಷ್ಯಕಾರರೇ, ‘ವೇದಗಳೇ ಕೃಪೆಮಾಡಿ ತಿಳಿಸದಿದ್ದರೆ ಅವು ತಿಳಿಯುವಂತೆ ಇಲ್ಲ’ ಎಂದು ಸ್ಪಷ್ಟಪಡಿಸಿರುವಾಗ ಮತ್ತು ‘ವೇದಾಂಗ’ಗಳೆಂಬ ಆರು ವಿಜ್ಞಾನಗಳ ಸಹಾಯವಿಲ್ಲದೆ ವೇದಸಾರವನ್ನು ತಿಳಿಯುವುದು ಕಷ್ಟಸಾಧ್ಯ ಎಂದು ಅಭಿಪ್ರಾಯಪಟ್ಟಿರುವಾಗ, ಅದೊಂದು ಗಗನಕುಸುಮವಾಗದೆ ಇನ್ನೇನಾದೀತು?! ವ್ಯಾಸರ ಹೃದಯವಂತಿಕೆ

ಇಲ್ಲಿಯೇ ನಮಗೆ ಮನದಟ್ಟಾಗುವುದು. ನಾಲ್ಕು ವೇದಗಳ ಸಾರವನ್ನು ಕ್ರೋಡೀಕರಿಸಿ ಐದನೇ ವೇದವನ್ನೇ ರಚಿಸಿಬಿಟ್ಟರು, ಅದೇ ‘ಮಹಾಭಾರತ’. ‘ಭಾರತಃ ಪಂಚಮೋವೇದಃ’ ಎನ್ನುವ ಹೆಗ್ಗಳಿಕೆ ಅದಕ್ಕೆ ಬಂದದ್ದು ಹೀಗೆಯೇ. ಒಂದು ವಾಕ್ಯದಲ್ಲಿ ಹೇಳಬೇಕಾದರೆ ‘ವ್ಯಾಸೋಚ್ಛಿಷ್ಟಂ ಜಗತ್ಸರ್ವಂ’ ಅರ್ಥಾತ್ ವ್ಯಾಸರು ರುಚಿ ನೋಡದ ವಿಷಯವೇ ಇಲ್ಲ!

ಭಾರತ ಮೊದಲಿನಿಂದಲೂ ಅದ್ಭುತಗಳ ದೇಶ! ಜರ್ಮನ್ ಚಿಂತಕ ಫ್ರೆಡ್ರಿಕ್ ಹೆಗಲ್​ನಿಂದ ಹಿಡಿದು ವಾರೆನ್ ಹೇಸ್ಟಿಂಗ್ಸ್​ನವರೆಗೆ ಇದನ್ನು ಅದೆಷ್ಟು ಸಲ ಉಚ್ಚರಿಸಿದ್ದಾರೋ! ಸುಪ್ರಸಿದ್ಧ ಬ್ರಿಟಿಷ್ ಚಿಂತಕ, ಯುರೋಪಿಯನ್ ಇತಿಹಾಸಕಾರು ಭಾರತದೆಡೆಗೆ ಎಸಗಿದ್ದ ಅವಘಡಗಳನ್ನು ಪರಿಣಾಮಕಾರಿಯಾಗಿ ಎದುರಿಸಿದ ಸುಪ್ರಸಿದ್ಧ ಎ.ಎಲ್.ಭಾಷ್ಯಂ "The wonder that was India' ’ ಎಂಬ ಕೃತಿಯನ್ನೇ ಬರೆದರು. ಆ ಖ್ಯಾತಿಯನ್ನು ಉಳಿಸುವ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದು.

(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net