ಪ್ರಕೃತಿಗೆ ಪೂರಕವಾಗಿ ಬದುಕುವುದರಲ್ಲೇ ಸಂತೋಷ

Edit 1
Published on

ಪ್ರಕೃತಿ ಮೇಲೆ ನಿರಂತರವಾಗಿ ಶೋಷಣೆ, ದಬ್ಬಾಳಿಕೆ ನಡೆಯುತ್ತಲೇ ಇದೆ. ಮಾನವನ ಈ ಅಟ್ಟಹಾಸವನ್ನು ಅದು ಎಷ್ಟು ಕಾಲ ಮೌನದಿಂದ ಸಹಿಸಿಕೊಳ್ಳಲು ಸಾಧ್ಯ? ಪ್ರಕೃತಿ ದೀರ್ಘಕಾಲದಿಂದ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದು, ಅದು ಈಗ ಕೋವಿಡ್ ರೂಪದಲ್ಲಿ ಬಂದೆರಗಿದೆ ಎನಿಸುತ್ತಿದೆ.

ಈಗಿನ ದಿನಚರಿ ಮುಂಚಿನಂತಿಲ್ಲ. ಕರೊನಾ ಹಾವಳಿ, ಲಾಕ್​ಡೌನ್ ಪರಿಣಾಮ ಪ್ರತಿ ದಿನವೂ ಒಂದೇ ಥರ ಎಂಬಂತಾಗಿದೆ. ಭಯದಲ್ಲೇ ದಿನಗಳು ಕಳೆಯುವಂತಾಗಿದೆ.

ಬೆಳಗ್ಗೆ ಹಾಲು ತೆಗೆದುಕೊಳ್ಳಲು ಬಾಗಿಲು ತೆರೆದು ಹೋಗಲು ಸಿದ್ಧಳಾದೆ. ಒಂದೇ ಕ್ಷಣದಲ್ಲಿ ಮನದಲ್ಲಿ ಎಷ್ಟೊಂದು ಯೋಚನೆಗಳು ಬಂದು ಹೋದವು! ಹಾಲು ಹಾಕುವವನು ಮಾಸ್ಕ್ ಹಾಕದೆ ಬಂದು ಹೋಗಿದ್ದರೆ ಅಥವಾ ಮೆಟ್ಟಿಲು ಹತ್ತುವಾಗ ಆತ ಸೀನಿದ್ದರೆ, ಕೆಮ್ಮಿದ್ದರೆ...! ಮನೆ ಮುಂದಿನ ಗಾಳಿಯಲ್ಲಿ ಕರೊನಾ ವೈರಸ್ ಸೇರಿಕೊಂಡಿದ್ದರೆ; ಹೀಗೆ ಹಲವು ಅನುಮಾನಗಳು. ಹಿಂದಿನ ರಾತ್ರಿಯೇ ಬಕೆಟ್​ನಲ್ಲಿ ಸೋಪು ನೀರು ಹಾಕಿಟ್ಟಿದ್ದೆ. ಕೈಯಲ್ಲಿ ಹಸಿ ಬಟ್ಟೆ ಹಿಡಿದುಕೊಂಡು, ಬಾಗಿಲು ತೆಗೆದು, ಬಕೆಟ್​ನ್ನು ಮುಟ್ಟದೆ ಹಾಲಿನ ಪ್ಯಾಕೆಟ್ ಎತ್ತಿಕೊಂಡು ಅಡುಗೆಮನೆಗೆ ಬಂದೆ. ವಾಶ್​ಬೇಸಿನ್​ನಲ್ಲಿ ಹಾಲಿನ ಪ್ಯಾಕೆಟ್ ಇಟ್ಟು, ಚೆನ್ನಾಗಿ ತೊಳೆದು, ಕೈತೊಳೆದುಕೊಂಡ ಬಳಿಕವೇ ಕೊಂಚ ಸಮಾಧಾನವಾಯಿತು. ಹಾಗೆಯೇ, ಬದುಕು ಎಷ್ಟು ಬದಲಾಗಿ ಬಿಟ್ಟಿದೆಯಲ್ಲ, ಕೋಟೆ ಕಟ್ಟಿಕೊಂಡು ಬದುಕಿದರೂ ಕರೊನಾ ಭಯದಿಂದ ಪಾರಾಗಲು ಸಾಧ್ಯವಾಗುತ್ತಿಲ್ಲವಲ್ಲ ಎನಿಸಿತು. ಈ ಆಲೋಚನಾ ಲಹರಿಗಳಲ್ಲಿ ಇದ್ದಾಗಲೇ ಮನಸ್ಸು ಮಹಾಭಾರತದ ಕಥೆಗಳನ್ನು ನೆನಪಿಸಿತು. ವಿಶೇಷವಾಗಿ ರಾಜಾ ಪರೀಕ್ಷಿತನದ್ದು.

ಮಹಾಭಾರತದ ಯುದ್ಧವೆಲ್ಲ ಮುಗಿದ ಮೇಲೆ ಧರ್ಮರಾಜನು ಆಳ್ವಿಕೆ ನಡೆಸಿದ್ದು ಗೊತ್ತೇ ಇದೆ. ಧರ್ಮರಾಜನ ಬಳಿಕ ರಾಜನಾಗಿ 60 ವರ್ಷಗಳ ಕಾಲ ಯಶಸ್ವಿಯಾಗಿ ಆಡಳಿತ ನಡೆಸಿದವನು ಪರೀಕ್ಷಿತ. ಒಂದು ಸಣ್ಣ ಪ್ರಮಾದಕ್ಕಾಗಿ ರಾಜಾ ಪರೀಕ್ಷಿತ ಋಷಿಯಿಂದ ಶಾಪಗ್ರಸ್ತನಾದ. ‘ಏಳು ದಿನಗಳಲ್ಲಿ ಸರ್ಪ ಕಚ್ಚಿ ಸಾಯುವೆ’ ಎಂಬ ಶಾಪವದು. ಪರೀಕ್ಷಿತ ರಾಜ ಹಾವಿನಿಂದ ರಕ್ಷಿಸಿಕೊಳ್ಳಲು ಮಾಡದೆ ಇರುವ ಉಪಾಯವೇ ಇಲ್ಲ. ಏಳು ಕಂಬಗಳನ್ನು ಕಟ್ಟಿ, ಮಧ್ಯದಲ್ಲಿ ಇನ್ನೊಂದು ಕಂಬ ಇರಿಸಿ, ಅದರ ಮೇಲೆ ಎತ್ತರದಲ್ಲಿ ಅರಮನೆಯನ್ನು ಕಟ್ಟಿದ. ಎಲ್ಲಿಂದಲೂ ಹಾವು ಬರಲು ಆಸ್ಪದವೇ ಇಲ್ಲದಂತೆ ಅರಮನೆಯನ್ನು ಅಣಿಗೊಳಿಸಿದ. ಅರಮನೆಯೊಳಗೇ ಕ್ವಾರಂಟೈನ್ ಒಳಗಾದ. ಆದರೂ ಭಯದಿಂದಲೇ ಬದುಕುತ್ತಿದ್ದ. ಯಾವಾಗ ಏನಾದೀತು ಎಂಬ ಆತಂಕ. ಪ್ರತಿ ವಸ್ತುವನ್ನು ತಪಾಸಣೆಗೆ ಒಳಪಡಿಸಿ, ಸ್ಯಾನ್​ಟೈಜ್ ಮಾಡಿದ ಬಳಿಕವಷ್ಟೇ ಅರಮನೆಯೊಳಗೆ ಪ್ರವೇಶ. ಏಳನೇ ದಿನ ಬಂದುಬಿಟ್ಟಿತು. ರಾಜಾ ತಕ್ಷಕ (ಸರ್ಪಗಳ ರಾಜ) ಹಣ್ಣುಗಳ ಜತೆ ಅರಮನೆ ಸೇರಿಕೊಂಡು, ಏಳನೇ ದಿನ ಪರೀಕ್ಷಿತನನ್ನು ಕೊಂದುಬಿಟ್ಟ. ಒಂದು ಸಣ್ಣ ಪ್ರಮಾದಕ್ಕಾಗಿ ಧರ್ವತ್ಮ ರಾಜನ ಅಂತ್ಯವಾಯಿತು. ಪರೀಕ್ಷಿತ ಮಹಾರಾಜ ಮಾಡಿದ್ದ ಭದ್ರತೆಯಲ್ಲಿ ಎಲ್ಲಿ ಲೋಪವಾಯಿತು, ಧರ್ವತ್ಮ ರಾಜನಿಗೆ ಈ ಗತಿ ಏಕೆ ಬಂತು? ಎಂಬೆಲ್ಲ ಅಂಶಗಳು ಚರ್ಚೆಯ ಮತ್ತೊಂದು ಆಯಾಮ.

ತಕ್ಷಕ ನಾಗನಿಂದ ತನ್ನ ತಂದೆ ಪರೀಕ್ಷಿತನು ಮೃತಪಟ್ಟಿದ್ದರಿಂದ ನಾಗವಂಶವೆಲ್ಲ ನಿರ್ನಾಮ ಮಾಡಲು ಜನಮೇಜಯ ಸರ್ಪಯಜ್ಞ ಕೈಗೊಂಡ. ಆದರೆ, ರಾಜಾ ತಕ್ಷಕ ಯಾರು ಎಂಬುದನ್ನು ಶೋಧಿಸುತ್ತ ಹೋದರೆ ಆ ಕಥೆ ಇಂದಿಗೂ ಪ್ರಸ್ತುತ ಎನಿಸುತ್ತದೆ.

ಪಾಂಡವರು ಸ್ವಯಂವರದಲ್ಲಿ ದ್ರೌಪದಿಯನ್ನು ಮದುವೆಯಾದರು. ಅರಗಿನ ಅರಮನೆಯಲ್ಲಿ ಇವರು ಸತ್ತಿಲ್ಲ ಎಂದು ಗೊತ್ತಾದೊಡನೆ, ಧೃತರಾಷ್ಟ್ರ ಇವರನ್ನು ಕರೆದು ಇಂದ್ರಪ್ರಸ್ಥ ಎಂಬ ಭೂಭಾಗ ನೀಡಿ, ಅಲ್ಲಿ ಅರಮನೆ ನಿರ್ವಿುಸಿಕೊಳ್ಳಿ ಎಂದು ಹೇಳಿದ.

ಅದರಂತೆ ಅರ್ಜುನ-ಕೃಷ್ಣ ಅಲ್ಲಿ ತೆರಳಿ, ಯಮುನಾ ನದಿತೀರದಲ್ಲಿ ಸಂಚರಿಸುತ್ತಿರುತ್ತಾರೆ. ಆ ಸಂದರ್ಭದಲ್ಲಿ ಅಗ್ನಿಯು ಮನುಷ್ಯನ ರೂಪ ಧರಿಸಿ ಇವರಲ್ಲಿ ಬಂದು, ‘ನನಗೆ ತುಂಬ ಹಸಿವಾಗಿದೆ, ಹಸಿವನ್ನು ನೀಗಿಸಿ’ ಎಂದು ಕೇಳಿಕೊಂಡಾಗ, ಇವರು ‘ಆಗಲಿ’ ಎಂದು ಒಪ್ಪಿಕೊಳ್ಳುತ್ತಾರೆ. ‘ಯಮುನಾ ನದಿತೀರದಲ್ಲಿರುವ ಖಾಂಡವ ವನಕ್ಕೆ ಬೆಂಕಿ ಹಾಕಬೇಕು, ಆಗಲೇ ನನ್ನ ಹಸಿವು ನೀಗುತ್ತದೆ’ ಎಂದಾಗ ಕೃಷ್ಣಾರ್ಜುನ ಅದಕ್ಕೆ ಸಮ್ಮತಿಸುತ್ತಾರೆ. ಖಾಂಡವ ವನಕ್ಕೆ ಬೆಂಕಿ ಬಿದ್ದು, ಹದಿನಾಲ್ಕು ದಿನಗಳ ಕಾಲ ಧಗಧಗನೆ ಉರಿಯುತ್ತದೆ. ಆ ವನವನ್ನು ರಕ್ಷಿಸುವ ಹೊಣೆ ಹೊತ್ತಿದ್ದ ಇಂದ್ರದೇವ ಬರದಂತೆ, ವರುಣನೂ ಆಗಮಿಸದಂತೆ ಕೃಷ್ಣಾರ್ಜುನರು ತಡೆಯುತ್ತಾರೆ. ಹಲವು ದಿನಗಳ ಕಾಲ ವನ ಹೊತ್ತಿ ಉರಿದ ಪರಿಣಾಮ, ಕೆಲ ಪ್ರಾಣಿ-ಪಕ್ಷಿಗಳು ಓಡಿ ಹೋದರೆ, ಎಷ್ಟೋ ಪ್ರಾಣಿ-ಪಕ್ಷಿಗಳು ಜೀವ ಕಳೆದುಕೊಳ್ಳುತ್ತವೆ. ಅಲ್ಲಿದ್ದ ಎಲ್ಲ ಅಸುರರೂ ನಾಶ ಹೊಂದುತ್ತಾರೆ. ಇದೇ ವನದಲ್ಲಿ ಸರ್ಪಗಳ ರಾಜಾ ತಕ್ಷಕ ವಾಸಿಸುತ್ತಿದ್ದ. ಆದರೆ, ಕಾಡ್ಗಿಚ್ಚು ಹರಡುವ ಮುನ್ನವೇ ಯಾವುದೋ ಕೆಲಸದ ನಿಮಿತ್ತ ತಕ್ಷಕ ಬೇರೆ ಕಡೆ ಹೋಗಿದ್ದ. ಬೆಂಕಿ ಬೀಳುತ್ತಿದ್ದಂತೆ ತಕ್ಷಕನ ಮಗ ಓಡಿ ಹೋದ. ಆದರೆ, ಘಟನೆಯಲ್ಲಿ ತಕ್ಷನ ಹೆಂಡತಿ ಪ್ರಾಣ ಕಳೆದುಕೊಂಡಳು.

ಘಟನೆಯಲ್ಲಿ ಬದುಕುಳಿದವರು ಕೆಲವೇ ಜನ. ತಕ್ಷಕ (ಆತ ಹೊರಹೋಗಿದ್ದರಿಂದ ಬದುಕಿಳಿದ). ಅಶ್ವಸೇನ (ಈತ ತಕ್ಷಕನ ಮಗ. ಓಡಿಹೋಗಿ, ಪ್ರಾಣ ಉಳಿಸಿಕೊಂಡ) ಮಯ (ಈತ ನಿಪುಣ ಆರ್ಕಿಟೆಕ್ಟ್ ಆಗಿದ್ದ). ಮಯ ತನ್ನನ್ನು ಕ್ಷಮಿಸುವಂತೆ ಕೃಷ್ಣಾರ್ಜುನರಲ್ಲಿ ಬಿನ್ನವಿಸಿಕೊಂಡ. ಆಗ ಅದಕ್ಕೆ ಸಮ್ಮತಿಸಿದ ಕೃಷ್ಣಾರ್ಜುನರು, ‘ಯುಮುನಾ ತೀರದ ಪಶ್ಚಿಮ ಭಾಗದಲ್ಲಿರುವ ಇಂದ್ರಪ್ರಸ್ಥದಲ್ಲಿ ಸುಸಜ್ಜಿತ ಅರಮನೆ ನಿರ್ವಿುಸಿಕೊಡಬೇಕು’ ಎಂಬ ಷರತ್ತು ಹಾಕುತ್ತಾರೆ. ಅದಕ್ಕೆ ಮಯ ಒಪ್ಪಿಕೊಂಡು, ಭವ್ಯ ಅರಮನೆ ನಿರ್ವಿುಸಿ ಕೊಡುತ್ತಾನೆ.

ಮುಂದೆ, ದ್ರೌಪದಿ ಅಲ್ಲೇ ದುರ್ಯೋಧನನನ್ನು ಕೆಣಕಿದಳು, ದುರ್ಯೋಧನ ಕೆರಳಿ ಪಗಡೆ ಆಟಕ್ಕೆ ಆಹ್ವಾನ ನೀಡಿದ. ಅದುವೇ ಮುಂದೆ ಮಹಾಭಾರತ ಯುದ್ಧಕ್ಕೆ ಕಾರಣವಾಯಿತು ಎಂಬುದು ಗೊತ್ತಿರುವಂಥದ್ದೇ. ಮತ್ತೊಂದೆಡೆ, ತನ್ನ ತಾಯಿಯನ್ನು ಕಳೆದುಕೊಂಡಿದ್ದಕ್ಕಾಗಿ ಅಶ್ವಸೇನನಿಗೆ ಪಾಂಡವರ ಮೇಲೆ ಭಾರಿ ಕೋಪ, ದ್ವೇಷ ಇತ್ತು. ಹೇಗಾದರೂ ಮಾಡಿ ಅರ್ಜುನನ ಹತ್ಯೆ ಮಾಡಬೇಕೆಂದು ಆತ ಸಂಕಲ್ಪಿಸಿ, ಆ ನಿಟ್ಟಿನಲ್ಲಿ ವಿವಿಧ ಪ್ರಯತ್ನ ಮಾಡಿ ವಿಫಲನಾಗಿದ್ದ. ಕೊನೆಗೊಮ್ಮೆ ಕರ್ಣನ ಮುಖಾಂತರ ಅವನ ಬತ್ತಳಿಕೆಯಲ್ಲಿ ಅಶ್ವಸೇನ ಸೇರಿಕೊಂಡು ಅರ್ಜುನನ್ನು ಕೊಲ್ಲಲು ಯತ್ನಿಸುತ್ತಾನೆ. ಆದರೆ, ಶ್ರೀಕೃಷ್ಣ ಅರ್ಜುನನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾನೆ.

ಅದೇನೇ ಇರಲಿ, ಆ ಕಾಡ್ಗಿಚ್ಚಿನಲ್ಲಿ ಅಸುರರು ನಾಶವಾಗಿದ್ದು ನಿಜವಾದರೂ, ಪ್ರಕೃತಿಯ ಮೇಲೂ ಶೋಷಣೆ ನಡೆಯುತ್ತದೆ. ಅಸಂಖ್ಯ ಪ್ರಾಣಿ-ಪಕ್ಷಿಗಳು ಬಲಿಯಾಗುತ್ತವೆ. ಆ ಸೇಡನ್ನೇ ತಕ್ಷಕ ಪರೀಕ್ಷಿತನನ್ನು ಕೊಲ್ಲುವ ಮೂಲಕ ತೀರಿಸಿಕೊಂಡ ಎಂದು ಹೇಳುವ ಪ್ರಯತ್ನವನ್ನು ಮಹಾಭಾರತದ ಕಥೆ ಮಾಡಿದಂತಿದೆ. ಅಂದರೆ, ಪ್ರಕೃತಿಯ ಮೇಲೆ ಎಸಗಿದ ದಬ್ಬಾಳಿಕೆ, ಶೋಷಣೆಗೆ ಒಂದಿಲ್ಲ ಒಂದು ದಿನ ಬೆಲೆ ತೆರಲೇ ಬೇಕಾಗುತ್ತದೆ. ಇಲ್ಲವೆ ಪ್ರಕೃತಿಯೇ ಸೇಡು ತೀರಿಸಿಕೊಳ್ಳುತ್ತದೆ.

ಇಂದಿನ ದಿನಗಳಲ್ಲಂತೂ ಪ್ರಕೃತಿಯ ಮೇಲೆ ನಿರಂತರ ಶೋಷಣೆ ನಡೆಯುತ್ತಿದೆ. ಇಂಧನಗಳ ಅತಿಯಾದ ಬಳಕೆ, ಲೆದರ್ ವಸ್ತುಗಳ ತಯಾರಿಕೆಗಾಗಿ ಪ್ರಾಣಿಗಳ ಬಲಿ ಚಿಂತೆಗೆ ಕಾರಣವಾಗಿದೆ. ಮಿತಿ ಮೀರಿರುವ ಗಣಿಗಾರಿಕೆ ಭೂಮಿಯ ಒಡಲನ್ನು, ಸೈಸರ್ಗಿಕ ಸಂಪನ್ಮೂಲಗಳನ್ನು ಬರಿದು ಮಾಡುತ್ತಿದೆ. ಆದರೂ, ಗಣಿಗಾರಿಕೆಗೆ ಕಡಿವಾಣ ಬೀಳುತ್ತಿಲ್ಲ. ಮುಂಚೆಯೆಲ್ಲ ಮನೆಗೆ ಒಂದರಂತೆ ವಾಹನಗಳು ಸೀಮಿತ ಪ್ರಮಾಣದಲ್ಲಿದ್ದವು. ಆದರೀಗ, ಮನೆಗೆ ಮೂರ್ನಾಲ್ಕು ವಾಹನಗಳು ಆಗಿ, ಅವು ಅವಶ್ಯಕತೆಗಳಿಗಿಂತ ಐಷಾರಾಮಿಯ ಪ್ರತೀಕವಾಗಿ ಬಳಕೆ ಆಗುತ್ತಿವೆ. ಆ ಮೂಲಕ ವಾಯುಮಾಲಿನ್ಯ ಹೆಚ್ಚಿಸುತ್ತಿವೆ. ಪ್ರಾಣಿಗಳ ಹತ್ಯೆ ಮಾಡಿ ಚಮೋತ್ಪನ್ನಗಳನ್ನು ಬಳಸುವುದರಲ್ಲಿ ಯಾವ ಅರ್ಥವಿದೆ? ಹಾಗೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಮನುಷ್ಯರ ಮೇಲೂ ಶೋಷಣೆ, ದಬ್ಬಾಳಿಕೆ ನಡೆಯುತ್ತಿದೆ, ಕನಿಷ್ಠ ಮಾನವ ಹಕ್ಕುಗಳೂ ಸಿಗುತ್ತಿಲ್ಲ ಎಂಬುದು ವಾಸ್ತವವೇ. ಆದರೆ ಪ್ರಾಣಿ, ಪಕ್ಷಿ, ಒಟ್ಟಾರೆ ಜೀವಸಂಕುಲದ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಹೆಚ್ಚುತ್ತಲೇ ಸಾಗಿರುವುದು ಶೋಚನೀಯ. ಚೀನಾದ ಪರಿಸ್ಥಿತಿಯಂತೂ ಈಗ ಎಲ್ಲರ ಅರಿವಿಗೂ ಬಂದಿದೆ. ಅಲ್ಲಿನ ಹಸಿಮಾಂಸದ ಮಾರುಕಟ್ಟೆಗಳು ಎಷ್ಟೆಲ್ಲ ಅಧ್ವಾನ ಸೃಷ್ಟಿಸಿವೆ ಎಂಬುದರ ಬಗ್ಗೆ ವರದಿಗಳು ಬರುತ್ತಲೇ ಇವೆ. ನಮ್ಮಲ್ಲಿ ಸವತೆಕಾಯಿ, ಬದನೆಕಾಯಿ, ಕೋಸು ಮಾರಾಟಕ್ಕೆ ಇಟ್ಟಂತೆ ಅಲ್ಲಿ ಜೀವಂತ ಹಾವು, ಚೇಳು, ಬಾವಲಿಗಳನ್ನೆಲ್ಲ ಮಾರಾಟ ಮಾಡುತ್ತಾರೆ.

ಕಳೆದ ಹಲವು ದಶಕಗಳ ಈ ಬೆಳವಣಿಗೆಗಳನ್ನು, ಹಾನಿಯ ಪ್ರಮಾಣವನ್ನು ಅವಲೋಕಿಸಿದರೆ ಪ್ರಕೃತಿ ಈಗ ಕೋವಿಡ್-19 ರೂಪದಲ್ಲಿ ಸೇಡು ತೀರಿಸಿಕೊಳ್ಳುತ್ತಿದೆ ಎಂದೆನಿಸುತ್ತಿದೆ. ಅದಕ್ಕೆಂದೆ, ಹಲವು ಪ್ರಯತ್ನಗಳ ಹೊರತಾಗಿಯೂ ಕರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಹಾಗಿದ್ದರೆ, ನಾವೇನು ಮಾಡಬಹುದು? ಸದ್ಯದ ಪರಿಸ್ಥಿತಿಯಲ್ಲಂತೂ ಅಸಹಾಯಕರಾಗಿದ್ದೇವೆ. ಆದರೆ, ಅನವಶ್ಯಕ ಓಡಾಟವನ್ನು ತಪ್ಪಿಸಿ, ಮನೆಯಲ್ಲೇ ಉಳಿಯುವುದು ಸುರಕ್ಷಿತ. ತೀರಾ ಅವಶ್ಯಕ ಕೆಲಸಗಳಿಗಾಗಿ ಮಾಸ್ಕ್ ಧರಿಸಿಕೊಂಡು, ಸುರಕ್ಷಿತ ಅಂತರ ಕಾಪಾಡಿಕೊಂಡು ಸಂಚರಿಸಬೇಕು. ಪದೇಪದೆ ಕೈತೊಳೆಯುವುದು, ಸ್ವಚ್ಛತೆ ಕಾಯ್ದುಕೊಳ್ಳುವುದು, ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು, ಸರ್ಕಾರ ಸೂಚಿಸಿದ ನಿಯಮಗಳನ್ನು ಚಾಚುತಪ್ಪದೆ ಪಾಲಿಸುವುದು, ಆತಂಕಕ್ಕೆ ಒಳಗಾಗದೆ ಪರಿಸ್ಥಿತಿಯನ್ನು ಎದುರಿಸುವುದು ತಾತ್ಕಾಲಿಕ ಪರಿಹಾರ.

ಕರೊನಾಕ್ಕೆ ಔಷಧ ಕಂಡುಹಿಡಿಯುವ ಪ್ರಯತ್ನ ಸಮರೋಪಾದಿಯಲ್ಲಿ ನಡೆಯುತ್ತಿದೆ. ವಿಜ್ಞಾನಿಗಳು, ವೈದ್ಯಕೀಯ ತಜ್ಞರು ಸ್ವಲ್ಪ ಕಾಲದಲ್ಲಿ ಈ ಪ್ರಯತ್ನದಲ್ಲಿ ಯಶಸ್ವಿಯಾಗುವುದರಲ್ಲಿ ಅನುಮಾನವಿಲ್ಲ. ಕರೊನಾಕ್ಕೆ ಔಷಧ ಬಂದ ಮೇಲೆ ಜನಜೀವನ ಮೊದಲಿನಂತೆ ಸಹಜಸ್ಥಿತಿಗೆ ಬರುತ್ತದೆ, ಮಾನವ ಚಟುವಟಿಕೆಗಳು ಎಂದಿನಂತೆ ಸಾಗುತ್ತವೆ. ಆದರೆ, ಇವುಗಳಿಗೆಲ್ಲ ಅಂತಿಮ ಪರಿಹಾರ ಏನು ಎಂಬ ಬಗ್ಗೆ ಇನ್ನಾದರೂ ಯೋಚಿಸಬೇಕಲ್ಲವೇ? ಕರೊನಾ ವಿರುದ್ಧ ಹೋರಾಡಿ, ಗೆದ್ದುಬರೋಣ. ಆದರೆ, ನಿಸರ್ಗದ ಮೇಲೆ ಶೋಷಣೆ ಮಾಡದೆ ಪ್ರಕೃತಿಗೆ ಪೂರಕವಾಗಿ ಬದುಕು ಕಟ್ಟಿಕೊಳ್ಳಲು ಸಂಕಲ್ಪಿಸಬೇಕು, ಅದನ್ನು ನಿತ್ಯಾನುಷ್ಠಾನದಲ್ಲಿ ತರಬೇಕು. ಹಳೆಯ ತಪು್ಪಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. ಪ್ರಕೃತಿಗೆ ಪೂರಕವಾಗಿ ಬದುಕುವುದರಲ್ಲೇ ಹೆಚ್ಚು ಆನಂದವಿದೆ, ನಿಜವಾದ ಸಂತೋಷವಿದೆ ಎಂದು ಅರಿತುಕೊಳ್ಳಬೇಕು. ಇಂಥ ವಿಪತ್ತುಗಳು ನಮ್ಮ ಕಣ್ಣು ತೆರೆಸಲಿ. ನಮ್ಮ ಬದುಕಿನ ಶೈಲಿ ಬದಲಾಗಿ, ಅದು ಪ್ರಕೃತಿಗೆ ಪೂರಕವಾಗಿ ಮಾರ್ಪಡಲಿ. ಆ ಮೂಲಕ ನಿಸರ್ಗದೊಂದಿಗೆ ಸಾಮರಸ್ಯದ ಮೂಲಕ ಬದುಕುವ ನಮ್ಮ ಜೀವನಸಂಸ್ಕೃತಿ ಮತ್ತೊಮ್ಮೆ ಸ್ಥಾಪಿತವಾಗಲಿ ಎಂಬುದೇ ಆಶಯ.

(ಲೇಖಕರು ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net