

ಯಾವೆಲ್ಲ ಕ್ಷೇತ್ರಗಳಲ್ಲಿ ಪ್ಲಾಸ್ಟಿಕ್ ಬಳಸಬೇಕು, ಎಲ್ಲಿ ಬಳಸಬಾರದು ಎಂಬ ವಿವೇಚನೆ, ವಿವೇಕ ಅಗತ್ಯ. ಈ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕಿದೆ. ಎಲ್ಲಿ ಬೇಡವೋ ಅಲ್ಲಿ ಪ್ಲಾಸ್ಟಿಕ್ ಬಳಸುತ್ತಿರುವುದರಿಂದ ಪರಿಸರಕ್ಕೆ, ಆರೋಗ್ಯಕ್ಕೆ ಕುತ್ತು ತಂದಿದ್ದೇವೆ. ಅದನ್ನು ಸರಿಯಾದ ರಂಗಗಳಲ್ಲಿ ಬಳಸಿದಾಗ ಅಭಿವೃದ್ಧಿಗೂ ವೇಗ.
ಇಂದಿನ ಲೇಖನದಲ್ಲಿ ಪ್ಲಾಸ್ಟಿಕಿನ ಎರಡು ಮುಖಗಳನ್ನೂ ಅವಲೋಕಿಸೋಣ. ಪ್ಲಾಸ್ಟಿಕಿನಿಂದ ಹಲವು ರಂಗಗಳಿಗೆ ಆಗುತ್ತಿರುವ ಪ್ರಯೋಜನದ
ಪ್ಲಾಸ್ಟಿಕ್ನ್ನು ‘ಆಧುನಿಕ ಯುಗದ ವರದಾನ’ ಎಂದೂ ಕರೆಯುತ್ತಾರೆ. ಎಲ್ಲೆಡೆ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವ ಯತ್ನ ಆಗುತ್ತಿರಬೇಕಾದರೆ ಇದೇನಪ್ಪ ಹೊಸ ವಿಷಯ ಎಂದು ಅಚ್ಚರಿಪಡಬೇಡಿ.
ಸ್ವಲ್ಪ ಹಿಂದಕ್ಕೆ ಹೋಗೋಣ. ಅದು 2014 ಮೇ ನಲ್ಲಿ ನರೇಂದ್ರ ಮೋದಿ ಪ್ರಧಾನಿ ಆಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭ. ದೇಶಾದ್ಯಂತ ಸಂಭ್ರಮದ ವಾತಾವರಣ ನೆಲೆಸಿತ್ತು. ಅನಂತಕುಮಾರ್ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆರನೇ ಬಾರಿಗೆ ಸಂಸದರಾಗಿ ಲೋಕಸಭೆ ಪ್ರವೇಶಿಸಿದ್ದರು. ಮೋದಿ ಪ್ರಧಾನಿಯಾದ ದಿನವೇ ಅನಂತಕುಮಾರ್ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ವಿಮಾನಯಾನ ಸಚಿವರಾಗಿದ್ದ ಅನಂತಕುಮಾರ್ ಈ ಹೊಸ ಖಾತೆಯ ಬಗ್ಗೆ ಏನು ಹೇಳುತ್ತಾರೆ ಎಂಬ ಕುತೂಹಲ ತುಂಬ ಜನರಲ್ಲಿತ್ತು. ಹಾಗಾಗಿ, ಅದೇ ದಿನ ಅವರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ರಾಸಾಯನಿಕ ಗೊಬ್ಬರ ಖಾತೆ ಅಡಿಯಲ್ಲೇ ಪ್ಲಾಸ್ಟಿಕ್ಗೆ ಸಂಬಂಧಿಸಿದ ನೀತಿನಿರೂಪಣೆಯೂ ಸೇರಿಕೊಂಡಿತ್ತು. ‘ಎಲ್ಲ ರೈತರಿಗೂ ಯೂರಿಯಾ ಸಿಗುವಂತೆ ಮಾಡಲಾಗುವುದು, ನಮ್ಮಲ್ಲೇ ಹೆಚ್ಚೆಚ್ಚು ಉತ್ಪಾದಿಸಲು ಉತ್ತೇಜನ ನೀಡಲಾಗುವುದು’ ಎಂದೆಲ್ಲ ವಿವರಿಸಿದ ಬಳಿಕ ಸಂಸ್ಕೃತ ಶ್ಲೋಕ ವೊಂದನ್ನು ಉಲ್ಲೇಖ ಮಾಡಿ, ಅದನ್ನು ಇಂದಿನ ಸ್ಥಿತಿಗೆ ಅನ್ವಯಿಸುತ್ತ ‘ಅಣುರೇಣು ತೃಣಕಾಷ್ಟದಲ್ಲೂ ಇಂದು ಪ್ಲಾಸ್ಟಿಕ್ ಇದೆ. ಅದು ನಮಗೆ ವರದಾನ. ಪ್ಲಾಸ್ಟಿಕ್ ಎಂದು ಮೂಗು ಮುರಿಯಬೇಡಿ’ ಎಂದರು. ಆ ಮಾತು ಕೇಳುತ್ತಿದ್ದಂತೆ ಅಲ್ಲೇ ಕೊನೆ ಸಾಲಿನಲ್ಲಿ ಕುಳಿತಿದ್ದ ನಾನೂ ಅಚ್ಚರಿಗೊಳಗಾದೆ. ಏಕೆಂದರೆ, ಆಗಲೇ (2014) ಬೆಂಗಳೂರಿನಲ್ಲಿ ನಾವು ಪ್ಲಾಸ್ಟಿಕ್ ವಿರುದ್ಧ ನಡೆಸುತ್ತಿದ್ದ ಆಂದೋಲನ ಹತ್ತು ವರ್ಷಗಳನ್ನು ಪೂರೈಸಿತ್ತು. ‘ಅದಮ್ಯ ಚೇತನ’ದ ಅನ್ನಪೂರ್ಣ ಅಡಿಗೆಮನೆಯನ್ನು ಶೂನ್ಯತ್ಯಾಜ್ಯ ವಾಗಿ ಪರಿವರ್ತಿಸಿ, ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಲಾಗಿತ್ತು. ಹೀಗಿರುವಾಗ ಅನಂತಕುಮಾರ್ ಹೀಗೇಕೆ ಹೇಳುತ್ತಿದ್ದಾರೆ ಎಂದು ಯೋಚಿಸಿದೆ. ಅವರೇ ಮುಂದುವರಿದು, ‘ನಮ್ಮ ಸ್ಯಾಟ್ಲೈಟ್ಗಳಿಗೆ, ಅದರ ಬಿಡಿ ಭಾಗಗಳಿಗೆ, ಬಸ್, ರೈಲುಗಳಲ್ಲಿ, ಔಷಧ ತಯಾರಿಕೆ, ಕೃಷಿ ಉಪಕರಣ, ಮಕ್ಕಳ ಆಟಿಕೆ ತಯಾರಿಕೆಗೂ ಪ್ಲಾಸ್ಟಿಕ್ ಅಗತ್ಯವಾಗಿದೆ. ಅಷ್ಟೇ ಏಕೆ ಹೃದಯದ ರಕ್ತನಾಳಕ್ಕೆ ಅಳವಡಿಸುವ ಜೀವರಕ್ಷಕ ಸ್ಟಂಟ್ ಕೂಡ ಪ್ಲಾಸ್ಟಿಕ್ನಿಂದ ಮಾಡಿರುವಂಥದ್ದು’ ಎಂದರು.
ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಅಡಿಯಲ್ಲೇ ಬರುವ Central Institute of Plastics Engineering & Technology (CIPET) ಬಗ್ಗೆಯೂ ಅನಂತಕುಮಾರ್ ಮಾತನಾಡಿದರು. ಈ ಇಂಜಿನಿಯರಿಂಗ್ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆಯವರಿಗೆ ಐಎಸ್ಆರ್ಒನಿಂದ ಸ್ಯಾಟಲೈಟಿನ ಕೆಲ ಭಾಗಗಳನ್ನು ತಯಾರು ಮಾಡಲಿಕ್ಕೆ ಮತ್ತು ವಿನ್ಯಾಸ ಮಾಡಲಿಕ್ಕೆ ಆರ್ಡರ್ ದೊರೆತಿತ್ತು. ಅದರಂತೆ ಅವರು ಆ ಭಾಗಗಳನ್ನು ತಯಾರು ಮಾಡುತ್ತಿದ್ದರು. ಅಲ್ಲದೆ, ನೀರಿನ ಮೇಲಿರುವ Floating solar panelsನ್ನು ಸಿಪೆಟ್ ಕಂಡುಹಿಡಿದಿತ್ತು. ಹೀಗೆ ಹಲವು ಹೊಸ ಸಂಗತಿಗಳನ್ನು ಅನಂತಕುಮಾರ್ ವಿವರಿಸುತ್ತಲೇ, ‘ಪ್ಲಾಸ್ಟಿಕ್ ಇಂಜಿನಿಯರಿಂಗ್ ಓದಿದ ಯುವಕ-ಯುವತಿಯರಿಗೆ ಶೇಕಡ 100ರಷ್ಟು ಪ್ಲೇಸ್ವೆುಂಟ್ ಅಂದರೆ ತಕ್ಷಣ ಕೆಲಸ ಸಿಗುತ್ತಿದೆ. ಈ ಇಂಜಿನಿಯರಿಂಗ್ ಪದವಿಧರರಿಗೆ ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ದೊಡ್ಡ ಮಟ್ಟದಲ್ಲಿ ಬೇಡಿಕೆ ಇದೆ. ಆದರೆ, ನಮ್ಮಲ್ಲಿ ಇಂಥ ರಾಷ್ಟ್ರಮಟ್ಟದ ಹದಿನೈದು ಸಂಸ್ಥೆಗಳು ಮಾತ್ರ ಇವೆ. ರಾಜ್ಯಕ್ಕೊಂದರಂತೆ ಒಟ್ಟು 30-35 ಸಂಸ್ಥೆಗಳನ್ನು ಬೆಳೆಸಲು ಉದ್ದೇಶಿಸಿದ್ದೇವೆ. ಆ ಮೂಲಕ ಪ್ಲಾಸ್ಟಿಕ್ ಇಂಜಿನಿಯರಿಂಗ್ನಲ್ಲಿ ಇನ್ನೂ ಹೆಚ್ಚಿನ ಸಂಶೋಧನೆ ಮಾಡಲಿದ್ದೇವೆ. ಈ ನಿಟ್ಟಿನಲ್ಲಿ ಯುವಕರಿಗೆ ಶಾರ್ಟ್ ಟ್ರೇನಿಂಗ್ ನೀಡಲಿದ್ದೇವೆ. ಪ್ಲಾಸ್ಟಿಕ್ ಪಾರ್ಕ್ಗಳನ್ನೂ ಸ್ಥಾಪಿಸಲಿದ್ದೇವೆ. ಇದರಿಂದ ಸಾವಿರಾರು ಯುವಕರಿಗೆ ಕೆಲಸ ಸಿಗಲಿದೆ’ ಎಂದು ವಿವರಿಸಿದರು.
‘ಆದರೆ, ಇಂಥ ಪ್ಲಾಸ್ಟಿಕನ್ನು ಎಲ್ಲಿ ಬಳಸಬಾರದೋ ಅಲ್ಲಿ ಬಳಸಿ ಪರಿಸರಕ್ಕೆ ಹಾನಿ ಮಾಡುತ್ತಿದ್ದೇವೆ, ಆ ಮೂಲಕ ದೊಡ್ಡ ಸಮಸ್ಯೆಯಲ್ಲಿ ಸಿಲುಕಿ ಹಾಕಿಕೊಂಡಿದ್ದೇವೆ. ಇದು ಈಗಿನ ವಸ್ತುಸ್ಥಿತಿ. ಪ್ಲಾಸ್ಟಿಕನ್ನು ಎಲ್ಲಿ, ಹೇಗೆ ಬಳಸಬೇಕು, ಅದರಿಂದ ದೇಶದ ಅಭಿವೃದ್ಧಿಗೆ ಹೇಗೆ ಲಾಭ ಪಡೆಯಬೇಕು ಎಂಬುದನ್ನು ಮುಂದಿನ ದಿನಗಳಲ್ಲಿ ನಮ್ಮ ಸಚಿವಾಲಯ ತೋರಿಸಿಕೊಡಲಿದೆ’ ಎಂದು ವಿಶ್ವಾಸದಿಂದ ನುಡಿದಿದ್ದರು.
ಈಗ ಸ್ಥಿತಿ ಹೇಗಿದೆ ನೋಡೋಣ. ಪ್ರಸಕ್ತ ದೇಶಾದ್ಯಂತ CIPETನ 32 ತರಬೇತಿ ಸಂಸ್ಥೆಗಳು, ಇಂಜಿನಿಯರಿಂಗ್ ಕಾಲೇಜುಗಳು ಸಾವಿರಾರು ಯುವಕ-ಯುವತಿಯರನ್ನು ತಯಾರು ಮಾಡುತ್ತಿವೆ. ಅದೇ ರೀತಿ ಪ್ಲಾಸ್ಟಿಕ್ ಪಾರ್ಕ್ ಗಳು ಗುಜರಾತ್, ಮಹಾರಾಷ್ಟ್ರ, ಆಂಧ್ರದಲ್ಲಿ ಆರಂಭವಾಗಿವೆ ಮತ್ತು ಅನಂತಕುಮಾರ್ ಅವರ ಕನಸಿನ ಕೇಂದ್ರ ಬೆಂಗಳೂರಿನ CIPETನಲ್ಲೂ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದು, ಸಂಶೋಧನೆಯೂ ನಡೆಯುತ್ತಿದೆ. ಪ್ಲಾಸ್ಟಿಕ್ನಿಂದ ಆಗುವ ಲಾಭಗಳು, ಅದರ ಸಕಾರಾತ್ಮಕ ಅನ್ವಯದ ಬಗ್ಗೆ ಹೊಸ ಹೊಸ ಸಂಗತಿಗಳು ಬೆಳಕಿಗೆ ಬರುತ್ತಿವೆ.
ಏನಿದು ಪ್ಲಾಸ್ಟಿಕ್...? ಇದರ ವ್ಯಾಖ್ಯಾನವನ್ನು ನೋಡ ಹೊರಟರೆ ಪಾಲಿಥಿಲಿನ್ (polyethylene), ಇತ್ಯಾದಿ ಸಾವಯವ ಪಾಲಿಮಾರ್ (ಸಂಕೀರ್ಣ ಅಣುವಿನ್ಯಾಸದ ಕಣಗಳು)ನಿಂದ ತಯಾರಾದ ವಸ್ತು ಇದು.
ಪ್ಲಾಸ್ಟಿಕಿನ ನಕಾರಾತ್ಮಕ ಮುಖ: ಪ್ಲಾಸ್ಟಿಕ್ ತಯಾರಿಕೆಗೆ ಅವಶ್ಯಕವಾಗಿ ಬೇಕಿರುವುದು Bisphenol A (BPA).. ಇದರಿಂದಲೇ ಪ್ಲಾಸ್ಟಿಕ್ಗೆ ಗಟ್ಟಿತನ, ಬಣ್ಣ ದೊರಕುತ್ತದೆ. ಆದರೆ ಬಿಪಿಎಯಿಂದಲೇ ಆರೋಗ್ಯದ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂಬ ಕಾರಣದಿಂದ ಬಿಪಿಎ ಮುಕ್ತ ಪ್ಲಾಸ್ಟಿಕ್ ಬಳಕೆಗೆ ಆದ್ಯತೆ ನೀಡಲಾಗಿದೆ. ಅಂದರೆ Bisphenol S (BPS) ಅಥವಾ Bisphenol F(BPF) ಅನ್ನು ಬಳಸಿ ಪ್ಲಾಸ್ಟಿಕ್ ತಯಾರಿಸಲಾಗುತ್ತಿದೆ. ದಿನದಿಂದ ದಿನಕ್ಕೆ ಪ್ಲಾಸ್ಟಿಕಿನ ಬಳಕೆ ಹೆಚ್ಚಾಗುತ್ತಿದೆ, ಅದರಂತೆ ಅದರ ಬೆಲೆಯೂ ಕಡಿಮೆ ಆಗುತ್ತಿದೆ. ಉತ್ಪಾದನೆ ಸುಲಭವಾಗಿದೆ. ವಿವಿಧ ಬಣ್ಣಗಳಲ್ಲಿ ಲಭ್ಯವಾಗುತ್ತಿದೆ. ಯಾವುದೇ ಥರದ ವಿನ್ಯಾಸ ಮಾಡಬಹುದು. ಈ ಎಲ್ಲ ಕಾರಣಗಳಿಂದಾಗಿ ಯಾವ ಕ್ಷೇತ್ರದಲ್ಲಿ ಪ್ಲಾಸ್ಟಿಕ್ ಅನವಶ್ಯಕವಾಗಿತ್ತೋ ಅಲ್ಲೂ ಬಳಕೆ ಆಗಲು ಆರಂಭವಾಯಿತು. ಆಗಲೇ ಪರಿಸರ ಸಂಬಂಧಿ ಸಮಸ್ಯೆ ಸೃಷ್ಟಿಯಾಗಿದ್ದು.
BPA ಕುರಿತು ಹಲವು ಖಾಸಗಿ ಸಂಸ್ಥೆಗಳು, ಕೈಗಾರಿಕೆಗಳು ಮತ್ತು ದೊಡ್ಡ ಸಂಶೋಧನಾ ಸಂಸ್ಥೆಗಳು ರೀಸರ್ಚ್ ಮಾಡಿವೆ. ಆದರೆ ಖಾಸಗಿ ಸಂಸ್ಥೆಗಳು ಬಿಪಿಎಯಿಂದ ‘ಯಾವುದೇ ಹಾನಿ ಇಲ್ಲ’ ಎಂದು ತಾವು ನಡೆಸಿದ ‘ಸಂಶೋಧನೆ’ಯಲ್ಲಿ ತಿಳಿಸಿರುವುದು ನಿಜಕ್ಕೂ ಅಚ್ಚರಿಯ ವಿಚಾರವೇ. ಆದರೆ, ಐಐಟಿಗಳು, ವಿಶ್ವಸಂಸ್ಥೆಯ ಪರಿಸರ ಸಂಬಂಧಿ ವಿಭಾಗ ಬಿಪಿಎ ಕುರಿತ ವಾಸ್ತವಾಂಶವನ್ನು ಹೊರಗೆಡವಿದ್ದು, Bisphenol ಅ ನಮ್ಮ ದೇಹದಲ್ಲಿ ಹಾಮೋನುಗಳ ಅಸಮತೋಲನ ಉಂಟು ಮಾಡುತ್ತದೆ. ಇದರಿಂದ ಪುರುಷರೂ, ಮಹಿಳೆಯರೂ ತೊಂದರೆ ಅನುಭವಿಸಬೇಕಾಗುತ್ತದೆ. ಕ್ಯಾನ್ಸರ್ ಸಂಖ್ಯೆ ಬೆಳೆಯುತ್ತದೆ, ಹೃದಯ, ಮಿದುಳಿನ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ ಎಂದು ವಿವರಿಸಿತು. ಹಾಗಾಗಿ, ಬಿಪಿಎ ರಹಿತ ಪ್ಲಾಸ್ಟಿಕ್ ತಯಾರಿಕೆಗೆ ಒತ್ತು ನೀಡಲಾಯಿತು. ಆದರೆ ಬಿಪಿಎಸ್ ಮತ್ತು ಬಿಪಿಎಫ್ನಿಂದ ಯಾವುದೇ ತೊಂದರೆಗಳು ಇಲ್ಲವೆ ಎಂದು ಪರಿಶೀಲಿಸಿದಾಗ ಅದರಿಂದಲೂ ತೊಂದರೆ ಆಗುತ್ತಿರುವುದು ಸ್ಪಷ್ಟವಾಗಿ ಸಾಬೀತಾಯಿತು.
ಪರಿಹಾರವೇನು?: ಹೀಗಾಗಿ, ಪ್ಲಾಸ್ಟಿಕ್ಗಳಲ್ಲಿ ಆಹಾರಪದಾರ್ಥವಿರಿಸಿ ಅದನ್ನು ಫ್ರಿಡ್ಜ್ ನಲ್ಲಿಡುವುದೋ ಅಥವಾ ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಆಹಾರವನ್ನು ಬಿಸಿ ಮಾಡುವಂಥ ಅಪಸವ್ಯಗಳನ್ನು ಸಂಪೂರ್ಣ ನಿಷೇಧ ಮಾಡಬೇಕಿದೆ. ಪ್ಲಾಸ್ಟಿಕಿ ಹಾನಿಗಳನ್ನು ತಡೆಯಲು ಇದುವೇ ಉತ್ತಮ ಪರಿಹಾರ. ಏಕೆಂದರೆ, ಬಿಪಿಎ ವ್ಯಾಪಕನ ಹಾನಿ ಮಾಡುತ್ತಿದೆ. ಇದರ ಅಂಶಗಳು ದೇಹದ ರಕ್ತ, ಮೂತ್ರ ಮಾತ್ರವಲ್ಲ ತಾಯಿ ಎದೆಹಾಲಿನಲ್ಲೂ ಕಾಣಿಸಿಕೊಳ್ಳುತ್ತಿವೆ. ಕರುಳಬಳ್ಳಿಯ ಮುಖಾಂತರ ನವಜಾತ ಶಿಶುವಿಗೂ ಬಿಪಿಎ ಕಣಗಳು ವರ್ಗವಾಗುತ್ತವೆ ಎಂಬುದನ್ನು ಅಧ್ಯಯನಗಳು ಹೇಳಿವೆ.
ಇತ್ತೀಚೆಗೆ ನಡೆಸಿದ ಸ್ವಾರಸ್ಯಕರ ಅಧ್ಯಯನದ ವರದಿಯೊಂದನ್ನು ಓದುತ್ತಿದ್ದೆ. ಅದೇನೆಂದರೆ, ಒಬ್ಬ ವ್ಯಕ್ತಿಗೆ ನಾಲ್ಕು ದಿನಗಳ ಕಾಲ ಪ್ಲಾಸ್ಟಿಕಿನ ಸಂಪರ್ಕಕ್ಕೆ ಬರದ ಅಂದರೆ ಅಲ್ಲೇ ತಾಜಾ ಆಗಿ ತಯಾರಿಸಿ ಕೊಡಲಾದ ಆಹಾರ ನೀಡಲಾಯಿತು. ಆ ಬಳಿಕ ಮೂತ್ರಪರೀಕ್ಷೆ ಮಾಡಿದಾಗ, Bisphenol A ಕಣಗಳು ಶೇಕಡ 66ರಷ್ಟು ಕಡಿಮೆ ಆಗಿತ್ತು. ಅದೇ ರೀತಿ ಇನ್ನೊಬ್ಬ ವ್ಯಕ್ತಿಗೆ ಪ್ಲಾಸ್ಟಿಕ್ ಪೊಟ್ಟಣ ಅಥವಾ ಹೊದಿಕೆಯಲ್ಲೇ ಬಂದ ಆಹಾರಗಳನ್ನು (ಕ್ಯಾನ್ ್ಡ ಫುಡ್-ಬ್ರೆಡ್, ರೆಡಿಮೆಡ್ ಸೂಪು) ನಾಲ್ಕು ದಿನಗಳ ಕಾಲ ನೀಡಲಾಯಿತು. ಬಳಿಕ ಪರೀಕ್ಷೆ ನಡೆಸಿದಾಗ ಬಿಪಿಎ ಕಣಗಳ ಪ್ರಮಾಣ ಶೇಕಡ 1,120ರಷ್ಟು ಹೆಚ್ಚಾಗಿತ್ತಂತೆ! ಪ್ಲಾಸ್ಟಿಕ್ ಸಂಪರ್ಕದ ಆಹಾರ ಏಕೆ ಯೋಗ್ಯವಲ್ಲ ಎಂಬುದಕ್ಕೆ ಇದಕ್ಕಿಂತ ಸೂಕ್ತ ನಿದರ್ಶನ ಬೇಕೆ?
ಪ್ಲಾಸ್ಟಿಕ್ ತಿಂದು ಹಸು ಏಕೆ ಸಾಯುತ್ತದೆ?: ಪ್ಲಾಸ್ಟಿಕ್ ಸೇವನೆಯಿಂದ ಹಸುಗಳು ಸಾವಿಗೀಡಾದ ಸುದ್ದಿಗಳನ್ನು ಆಗಾಗ ಕೇಳುತ್ತೇವೆ, ಇಂಥ ದೃಶ್ಯಗಳನ್ನು ನೋಡಿದ್ದೇವೆ. ಆದರೆ, ಪ್ಲಾಸ್ಟಿಕ್ ಸೇವನೆಯಿಂದ ಹಸು ಏಕೆ ಸಾಯುತ್ತದೆ ಎಂಬುದನ್ನು ಅವಲೋಕಿಸಿದರೆ ಹಲವು ವಾಸ್ತವ ಎದುರಾಗುತ್ತವೆ. ನಮ್ಮ ಹೃದಯದಲ್ಲಿ ಇರುವಂತೆ ಹಸುವಿನ ಹೊಟ್ಟೆಯಲ್ಲಿ ನಾಲ್ಕು ಕವಾಟಗಳಿರುತ್ತವೆ. ಹಸು ಮೇಯ್ದ ಹುಲ್ಲನ್ನು ಜಗಿಯುತ್ತ ಅದರ ರಸವನ್ನು ಒಂದು ಕವಾಟದಿಂದ ಇನ್ನೊಂದು ಕವಾಟಕ್ಕೆ ವರ್ಗಾಯಿಸುತ್ತದೆ. ಅದು ತಿಂದ ಆಹಾರ ಹದಿನೈದು ದಿನಗಳಲ್ಲಿ ಸಂಪೂರ್ಣ ಜೀರ್ಣವಾಗಿ ರಕ್ತಕ್ಕೆ ಸೇರಿಕೊಳ್ಳುತ್ತದೆ. ಆದರೆ, ಹಸು ಪ್ಲಾಸ್ಟಿಕ್ ತಿಂದ ಮೇಲೆ ಅದು ರಸವಾಗುವುದಿಲ್ಲ, ಜೀರ್ಣ ಆಗುವುದಿಲ್ಲ. ಮೊದಲ ಅಥವಾ ಎರಡನೇ ಕವಾಟದಲ್ಲೇ ಉಳಿದುಕೊಳ್ಳುತ್ತದೆ. ಹೊಟ್ಟೆಯಲ್ಲೇ ಪ್ಲಾಸ್ಟಿಕ್ ಪ್ರಮಾಣ 30 ಕೆಜಿಗಿಂತ ಹೆಚ್ಚಾದಾಗ ಹಸುವಿನ ಸಾವು ನಿಶ್ಚಿತ. ಅಷ್ಟೇ ಅಲ್ಲ, ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಇದ್ದಾಗ ಹಸುವಿಗೆ ಆರೋಗ್ಯದ ಹಲವು ಸಮಸ್ಯೆಗಳು ಎದುರಾಗುತ್ತವೆ. ಹೀಗೆ ನಾವು ಎಸೆದ ಪ್ಲಾಸ್ಟಿಕ್ ಮೂಕಪ್ರಾಣಿಗಳ ಸಾವಿಗೆ ಕಾರಣವಾಗುತ್ತದೆ ಎಂಬುದು ನೆನಪಿರಲಿ.
ಒಂದ್ನಿಮಿಷ ಯೋಚಿಸೋಣ. ಪ್ಲಾಸ್ಟಿಕ್ ಉಪ್ಪಿನಲ್ಲೂ, ಸೊಪ್ಪಿನಲ್ಲೂ ಸೇರಿಕೊಂಡು ನಮ್ಮ ಉಸಿರಿಗೂ ಆವರಿಸಿಕೊಳ್ಳುತ್ತಿದೆ. ಹಾಗಾಗಿ, ಪ್ಲಾಸ್ಟಿಕಿನ ಅನವಶ್ಯಕ ಬಳಕೆ ಬೇಡವೇ ಬೇಡ. ಸಾಧ್ಯವಾದಷ್ಟು, ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸೋಣ. ಅದರ ತ್ಯಾಜ್ಯವನ್ನು ಜಾಗ್ರತೆಯಿಂದ ನಿವಾರಿಸೋಣ. ನಮ್ಮ ಆಹಾರ, ನೀರಿಗೆ ಪ್ಲಾಸ್ಟಿಕ್ ಪ್ರವೇಶವಾಗದಂತೆ ಎಚ್ಚರಿಕೆ ವಹಿಸೋಣ. ಜೀವರಕ್ಷಕವಾಗಿ ಮತ್ತು ಆಧುನಿಕತೆಯ ಹೊಸ ಯಂತ್ರಗಳಲ್ಲಿ, ವಾಹನ ತಯಾರಿಕೆಯಲ್ಲಿ ಮಾತ್ರ ಪ್ಲಾಸ್ಟಿಕ್ ಬಳಕೆಯಾಗಲಿ. ಆ ತಂತ್ರಜ್ಞಾನ ಅಭಿವೃದ್ಧಿಗೆ ಪೂರಕವಾಗಿ ಮುಂದುವರಿಯಲಿ. ಆದರೆ, ನಮ್ಮ ದೈನಂದಿನ ಬದುಕಿನಲ್ಲಿ, ದಿನಚರಿಯಲ್ಲಿ ಪ್ಲಾಸ್ಟಿಕ್ ಬೇಡ. ಅದರಿಂದಾಗುತ್ತಿರುವ ಹಾನಿಗಳ ಬಗ್ಗೆ ನಾವು ಅರಿತರಷ್ಟೇ ಸಾಕಾಗದು. ಈ ಬಗ್ಗೆ ಇತರರಲ್ಲೂ ಜಾಗೃತಿ ಮೂಡಿಸೋಣ. ಆ ಮೂಲಕ ಆರೋಗ್ಯಯುತ ಜೀವನಶೈಲಿ ನಮ್ಮದಾಗಿಸಿಕೊಳ್ಳಲು ಪ್ರಯತ್ನಿಸೋಣ. ಅಲ್ಲವೇ?
ದಯವಿಟ್ಟು ಪ್ಲಾಸ್ಟಿಕ್ ಸುಡಬೇಡಿ
ಪ್ಲಾಸ್ಟಿಕ್ ಕಸ ಹೋಗಲಾಡಿಸಲು ಅದನ್ನು ಸುಡುವುದು ಪರಿಹಾರ ಎಂದು ಬಹುತೇಕರು ನಂಬಿದ್ದಾರೆ. ಆದರೆ, ಖಂಡಿತವಾಗಿಯೂ ಹೀಗೆ ಮಾಡಬೇಡಿ. ಪ್ಲಾಸ್ಟಿಕ್ನ್ನು ಸುಡುವುದರಿಂದ ಪರಿಸರಕ್ಕೆ ವಿಪರೀತ ಹಾನಿ ನಿಶ್ಚಿತ. ಪ್ಲಾಸ್ಟಿಕ್ ಸುಟ್ಟಾಗ ಡಿಆಕ್ಸಿನ್ ಸೇರಿ ಇನ್ನಿತರ ವಿಷಕಾರಕ ರಾಸಾಯನಿಕಗಳು ಗಾಳಿಗೆ ಸೇರುತ್ತವೆ. ಇಂಥ ವಿಷಾನಿಲದಲ್ಲಿ ಉಸಿರಾಡುವುದರಿಂದ ಹೃದಯ ಸಂಬಂಧಿ ಸಮಸ್ಯೆ, ಅಸ್ತಮಾ ಕಾಣಿಸಿಕೊಳ್ಳುತ್ತವೆ. ವಿಪರ್ಯಾಸವೆಂದರೆ, ನಮ್ಮಲ್ಲಿ ಮಾತ್ರವಲ್ಲ ಜಗತ್ತಿನೆಲ್ಲೆಡೆ ಅವೈಜ್ಞಾನಿಕವಾಗಿ ಪ್ಲಾಸ್ಟಿಕ್ನ್ನು ಸುಡುತ್ತಿದ್ದಾರೆ. ಪ್ಲಾಸ್ಟಿಕನ್ನು ವೈಜ್ಞಾನಿಕವಾಗಿ ದಹಿಸುವುದರಿಂದ ಇಂಧನ ತಯಾರಿಸಬಹುದು, ಅದರಿಂದ ಪರಿಸರಕ್ಕೂ ಯಾವುದೇ ಹಾನಿಯಿಲ್ಲ. ಆದರೆ, ಈ ರೀತಿಯ ವೈಜ್ಞಾನಿಕ ಪ್ರಯತ್ನ, ಪ್ರಯೋಗಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿಲ್ಲ.
(ಲೇಖಕರು ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥರು)