ಸುಂದರ ಅಡುಗೆ ಮನೆಗೆ ಹಸಿರು ಇಂಧನ ಬೇಡವೇ?

Edit 1
Published on

ಹುಲಿಗಳ ರಕ್ಷಣೆ ಆಗಬೇಕು, ಅವುಗಳ ಸಂಖ್ಯೆ ಬೆಳೆಯಬೇಕು ಎಂದು ಅನೇಕ ಹೋರಾಟ ನಡೆದಿದ್ದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ, ಎಲ್​ಪಿಜಿಯಿಂದ ಹುಲಿಗಳ ಸಂಖ್ಯೆ ಜಾಸ್ತಿಯಾಗಿದೆ. ಇದೇನಿದು, ಎಲ್​ಪಿಜಿ ಸಿಲಿಂಡರ್​ಗೂ ಹುಲಿಗೂ ಏನು ಸಂಬಂಧ ಎಂದು ಗಲಿಬಿಲಿಯಾಯಿತೆ? ಹಾಗಿದ್ದರೆ ಪರಿವರ್ತನೆಯ ಈ ಸ್ವಾರಸ್ಯಕರ ಕಥನವನ್ನು ಕೇಳಿ.

15 ವರ್ಷಗಳ ಹಿಂದಷ್ಟೇ ಬಂಡೀಪುರ ಕಾಡಿನಲ್ಲಿ (ಚಾಮರಾಜನಗರ ಜಿಲ್ಲೆ) 80 ಹುಲಿಗಳಿದ್ದವು. ಪ್ರಸಕ್ತ ಅಲ್ಲಿ

ಹುಲಿಗಳ ಸಂಖ್ಯೆ 128ಕ್ಕೆ ಏರಿಕೆಯಾಗಿದೆ. ವಿವಿಧ ಸಂಘಸಂಸ್ಥೆಗಳ ಪ್ರಯತ್ನ ಇದರ ಹಿಂದಿದೆಯಾದರೂ, ಬಂಡೀಪುರ ಸುತ್ತಮುತ್ತಲಿನ 280 ಹಳ್ಳಿಗಳ 38 ಸಾವಿರ ಮನೆಗಳು ಕೈಗೊಂಡ ದಿಟ್ಟಕ್ರಮ ಇದಕ್ಕೆ ಪ್ರಮುಖ ಕಾರಣ ಎನ್ನಬಹುದು. ಈ 280 ಹಳ್ಳಿಗಳ ಮನೆಯ ಹೆಣ್ಣುಮಕ್ಕಳು ಸೌದೆ ತರಲೆಂದು ಕಾಡಿಗೆ ಹೋಗಿ, ದಿನಕ್ಕೆ 4-5 ಗಂಟೆ ಅದಕ್ಕೆ ವಿನಿಯೋಗಿಸುತ್ತಿದ್ದರು. ಸೌದೆಯೇನೋ ಸಿಗುತ್ತಿತ್ತು. ಆದರೆ, ಕಟ್ಟಿಗೆ ಒಲೆ ಮೇಲೆ ಅಡುಗೆ ಮಾಡುವುದರಿಂದ ಹೊಗೆಯ ಸಂಕಟ. ಅಡುಗೆಮನೆ ಕಪ್ಪಾಗುವುದು ಒಂದೆಡೆಯಾದರೆ, ಮಹಿಳೆಯರ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿತ್ತು.

ಅದು 2000-2001ರ ಸಮಯ. ಖ್ಯಾತ ವನ್ಯಜೀವಿ ಛಾಯಾಗ್ರಾಹಕರೂ, ಪರಿಸರಪ್ರೇಮಿಗಳೂ ಆಗಿರುವ ಕೃಪಾಕರ ಮತ್ತು ಸೇನಾನಿ ‘ನಮ್ಮ ಸಂಘ’ ಸ್ಥಾಪಿಸಿ 2 ಸಾವಿರ ಮನೆಗಳಿಗೆ ಎಲ್​ಪಿಜಿ ಸಂಪರ್ಕ ಕೊಡಿಸಿದರು. ಕಳೆದ ಎರಡು ದಶಕದಲ್ಲಿ ಆ ಸಂಖ್ಯೆ 38 ಸಾವಿರಕ್ಕೆ ಏರಿಕೆಯಾಗಿದೆ ಎಂಬುದು ಗಮನಾರ್ಹ. Nature Conservation Foundationನಲ್ಲಿ ವಿಜ್ಞಾನಿಯಾಗಿರುವ ಪರಿಸರ ತಜ್ಞ ಸಂಜಯ್ ಗುಬ್ಬಿ ಅವರ ಸಂಸ್ಥೆಯೂ ಬಂಡೀಪುರ ಸುತ್ತಮುತ್ತಲಿನ ಸಾವಿರಾರು ಮನೆಗಳಿಗೆ ಎಲ್​ಪಿಜಿ ಸಂಪರ್ಕ ಕಲ್ಪಿಸಿದೆ.

ಇದರ ಪರಿಣಾಮ ಅದ್ಭುತ! ಇಲ್ಲಿನ ಬಹುತೇಕ ಎಲ್ಲ ಮನೆಗಳಿಗೂ ಎಲ್​ಪಿಜಿ ಬಂದಿರುವುದರಿಂದ ದೊಡ್ಡಮಟ್ಟದಲ್ಲಿ ಕಾಡಿನ ಹಸಿರು ಉಳಿಸಲು ಸಾಧ್ಯವಾಗಿದೆ. ಇಲ್ಲಿಯವರು ದಿನಕ್ಕೆ ಸರಾಸರಿ 25 ಕೆಜಿಯಂತೆ ತಿಂಗಳಿಗೆ 700-750 ಕೆಜಿ ಸೌದೆ ಬಳಸುತ್ತಿದ್ದರು. ಅಂದರೆ, ಎಷ್ಟೊಂದು ಗಿಡಮರ ಅದಕ್ಕೆ ಆಹುತಿಯಾಗುತ್ತಿದ್ದವು ಎಂಬುದನ್ನು ಕಲ್ಪಿಸಿಕೊಂಡರೂ ಗಾಬರಿಯಾಗುತ್ತದೆ. ಇಷ್ಟೊಂದು ಹಳ್ಳಿಗಳ ಮನೆಗಳಿಗೆ ಎಲ್​ಪಿಜಿ ಸಿಲಿಂಡರ್ ಬಂದಿರುವುದರಿಂದ ಮಾಸಿಕವಾಗಿ 16 ಸಾವಿರ ಟನ್ ಸೌದೆ ಉಳಿತಾಯವಾಗುತ್ತಿದೆ!

ಹಬ್ಬಿದ ಹಸಿರು: ಸೌದೆಯ ಆಸೆಗೆ ಗಿಡ ಗಳನ್ನು ಬೆಳೆಯಲಿಕ್ಕೇ ಕೊಡದೆ, ಕತ್ತರಿಸಿ, ಸಂಗ್ರಹಿಸಿಕೊಳ್ಳುತ್ತಿ ದ್ದರು. ಆದರೀಗ ಸೌದೆ ಸಂಗ್ರಹ ಬಹುತೇಕ ನಿಂತಿರುವುದ ರಿಂದ ಹಸಿರು ಚೆನ್ನಾಗಿ ಹಬ್ಬಿದೆ. ಮರಗಿಡಗಳು ಮಾನವ ಹಸ್ತಕ್ಷೇಪವಿಲ್ಲದೆ ಹುಲುಸಾಗಿ ಬೆಳೆಯಲು ಸಾಧ್ಯವಾಗುತ್ತಿದೆ. ಹಾಗಾಗಿ, ಆಹಾರದ ಲಭ್ಯತೆ ಹೆಚ್ಚಾಗಿ ಸಸ್ಯಹಾರಿ ಪ್ರಾಣಿಗಳ ಸಂಖ್ಯೆ ಬೆಳೆದಿದೆ. ಈ ಪ್ರಾಣಿಗಳ ಸಂಖ್ಯೆ ಹೆಚ್ಚಿರುವುದರಿಂದ ಹುಲಿಗಳಿಗೂ ಆಹಾರದ ಲಭ್ಯತೆ ಪ್ರಮಾಣ ಹೆಚ್ಚಿದೆ. ಹಾಗಾಗಿ, ಹುಲಿಗಳ ಸಂಖ್ಯೆಯೂ ಹೆಚ್ಚಿದೆ!

ಸುಧಾರಿಸಿದ ಆರೋಗ್ಯ: ಹಸಿರು ಹೆಚ್ಚಾಗುವಿಕೆ, ವನ್ಯಜೀವಿಗಳಿಗೆ ನೆಮ್ಮದಿಯ ಜತೆಗೆ ಮಹಿಳೆಯರ ಆರೋಗ್ಯವೂ ಸುಧಾರಿಸಿದೆ. ವೃತ್ತಿಯಲ್ಲಿ ಶ್ವಾಸಕೋಶ ತಜ್ಞೆಯಾಗಿರುವ ಸಂಜಯ್ ಗುಬ್ಬಿ ಅವರ ಪತ್ನಿ, ಪ್ರತಿ ವರ್ಷ ಈ ಭಾಗದಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸುತ್ತಿದ್ದು, ಮಹಿಳೆಯರ ಆರೋಗ್ಯದಲ್ಲಿನ ವ್ಯತ್ಯಾಸ ಕಂಡುಬಂದಿದೆ. ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡುತ್ತಿದ್ದಾಗ ಮಹಿಳೆಯರ ಆರೋಗ್ಯ ಹೇಗಿತ್ತು, ಈಗ ಹೇಗಿದೆ ಎಂಬುದನ್ನೂ ಗಮನಿಸಲಾಗಿದೆ. ಸೌದೆ ಒಲೆಯಲ್ಲಿ ಅಡುಗೆ ಮಾಡುವ ಶೇಕಡ 60ರಷ್ಟು ಮಹಿಳೆಯರಲ್ಲಿ ಶ್ವಾಸಕೋಶದ ಸಮಸ್ಯೆ ಕಂಡುಬಂದಿದ್ದರೆ, ಎಲ್​ಪಿಜಿ ಬಳಸುತ್ತಿರುವ ಮಹಿಳೆಯರಲ್ಲಿ ಈ ಸಮಸ್ಯೆ ಇಲ್ಲದಿರುವುದು ಸ್ಪಷ್ಟಗೊಂಡಿದೆ. ಅಷ್ಟೇ ಅಲ್ಲ, ಮಹಿಳೆಯರ ಸಮಯ ಉಳಿಯುತ್ತಿರುವುದರಿಂದ ಅವರು ರಚನಾತ್ಮಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತಾಗಿದೆ. ಮಕ್ಕಳ ಪಾಲನೆ-ಪೋಷಣೆ ಕಡೆಗೆ ಹೆಚ್ಚು ಗಮನ ನೀಡುತ್ತಿದ್ದು, ಅವರ ಶಿಕ್ಷಣಕ್ಕೂ ಆದ್ಯತೆ ನೀಡುತ್ತಿದ್ದಾರೆ. ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಲು ಹೊಸ ಕೌಶಲಗಳನ್ನು ಕಲಿಯುತ್ತಿರುವ ಈ ಮಹಿಳೆಯರು ಜೀವನಶೈಲಿಯನ್ನೂ ಬದಲಿಸಿಕೊಂಡಿದ್ದಾರೆ. ಆತ್ಮವಿಶ್ವಾಸ, ಸುಧಾರಣೆಯ ಹಾದಿಯಲ್ಲಿ ಸಾಗುತ್ತಿದ್ದು ಕೆಲವರು ಖಾಸಗಿ ಉದ್ಯೋಗದಲ್ಲೂ ತೊಡಗಿಕೊಂಡಿದ್ದಾರೆ.

ಬಂಡೀಪುರ ಸುತ್ತಮುತ್ತಲಿನ 280 ಹಳ್ಳಿಗಳ 38 ಸಾವಿರ ಮನೆಗಳಿಗೆ ಎಲ್​ಪಿಜಿ ಸಂಪರ್ಕ ಕಲ್ಪಿಸಿದ ಮೇಲೆ ಪರಿಸರ, ಆರೋಗ್ಯ ಮತ್ತು ಮಹಿಳೆಯರ ಅಭ್ಯುದಯಕ್ಕೆ ಇಷ್ಟೊಂದು ಅನುಕೂಲಗಳು ಆಗಿವೆ. ಅಂದ ಮೇಲೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ‘ಉಜ್ವಲಾ’ ಯೋಜನೆ ಅಡಿಯಲ್ಲಿ ಕಳೆದ ಐದು ವರ್ಷಗಳಲ್ಲಿ 8 ಕೋಟಿ ಮನೆಗಳಿಗೆ ಎಲ್​ಪಿಜಿ ಸಂಪರ್ಕ ಕಲ್ಪಿಸಿರುವುದರಿಂದ, ಅದೆಷ್ಟು ಬದಲಾವಣೆ ಸಾಧ್ಯವಾಗಿರಬಹುದು ಎಂಬುದನ್ನು ಅವಲೋಕಿಸಿದರೆ ‘ಉಜ್ವಲಾ’ದ ಮಹತ್ವ ಮತ್ತು ಸಾರ್ಥಕತೆ ಮನದಟ್ಟಾಗುತ್ತದೆ.

ಮರಗಳ ಬಗ್ಗೆ ಪೂಜ್ಯ ಭಾವ: ಹಾಗೆ ನೋಡಿದರೆ ನಮ್ಮ ಸಂಸ್ಕೃತಿ-ಪರಂಪರೆಯಲ್ಲಿ ಪ್ರಕೃತಿಯನ್ನು ದೇವರಂತೆ ಕಾಣಲಾಗಿದ್ದು, ಮನುಷ್ಯನ ಸ್ವಾರ್ಥಕ್ಕಾಗಿ ಮರಗಳನ್ನು ಕಡಿಯುವುದು ಮಹಾಪಾಪ ಎಂದೇ ಹೇಳಲಾಗಿದೆ. ಪುರಾಣ ಕಥೆಗಳಲ್ಲೂ ಈ ಬಗೆಯ ನಿದರ್ಶನಗಳು ನಮಗೆ ಸಿಗುತ್ತವೆ. ಈ ಪೈಕಿ ನನಗೆ ತುಂಬ ಕಾಡಿದ್ದು ಸೀತೆಯ ಕಥೆ. ವಾಲ್ಮೀಕಿ ಆಶ್ರಮದಲ್ಲಿ ಸೀತಾಮಾತೆ ಲವ-ಕುಶರನ್ನು ಪೋಷಿಸುತ್ತಿದ್ದ ಸಂದರ್ಭ. ಅದೊಮ್ಮೆ ತಾಯಿಗೆ ಸಹಾಯವಾಗಲಿ ಎಂದು ಕುಶ ಸೌದೆ ಸಂಗ್ರಹಿಸಲು ಕಾಡಿಗೆ ಹೋದ. ತುಂಬ ಕಟ್ಟಿಗೆ ಒಯ್ಯಬೇಕು ಎನ್ನುವ ಭರದಲ್ಲಿ ದೊಡ್ಡ ಮರವೊಂದಕ್ಕೆ ಕೊಡಲಿಯಿಂದ ಹೊಡೆಯುತ್ತಿದ್ದ. ಇದನ್ನು ಕಂಡ ಸೀತಾಮಾತೆ ಕೂಡಲೇ ಧಾವಿಸಿ ಬಂದು- ‘ಮಗು ಇದಕ್ಕೆ ಹೊಡೆಯಬೇಡ, ಗಿಡಮರ ಎಂಬುದು ಮೂಕಪ್ರಾಣಿಯಿದ್ದಂತೆ. ಅದಕ್ಕೆ ಮಾತನಾಡಲು ಬಾರದು. ಹೀಗೆ ಹೊಡೆದರೆ ಅದಕ್ಕೆ ನೋವಾಗುವುದಿಲ್ಲವೇ? ಅಷ್ಟಕ್ಕೂ, ಗಿಡಮರ ಕಡಿದು ಸೌದೆ ತೆಗೆದುಕೊಳ್ಳಬಾರದು. ಕೆಳಗೆ ಬಿದ್ದ ಟೊಂಗೆ, ಇತರ ಕಟ್ಟಿಗೆಗಳನ್ನು ಮಾತ್ರ ಹೆಕ್ಕಿ ತೆಗೆಯಬೇಕು’ ಎಂದು ಹೇಳುವ ಮೂಲಕ ಹಸಿರು ಉಳಿವಿನ ದೊಡ್ಡ ಪಾಠವನ್ನು ನೀಡಿದಳು. ಶ್ರೀಕೃಷ್ಣನ ಕಥೆಯಲ್ಲೂ ಇದೇ ಬಗೆಯ ನೀತಿ ಬರುತ್ತದೆ. ನಮ್ಮ ಹಿರಿಯರು ಕೂಡ ಇದೇ ಬಗೆಯ ಭಾವವನ್ನು ವ್ಯಕ್ತಪಡಿಸುತ್ತ, ಮರಗಿಡಗಳನ್ನು ಪೂಜ್ಯಭಾವದಿಂದ ಕಾಣುತ್ತಿದ್ದರು. ಆದರೆ, ಇಂದು ವೃಕ್ಷಗಳನ್ನು ಪೂಜಿಸುತ್ತೇವೆಯಾದರೂ, ಅದು ತೋರಿಕೆಗೆ ಎಂಬಂತೆ ಆಗಿರುವುದು ವಿಪರ್ಯಾಸ.

ಭಾರತದಲ್ಲಿ ಟಿಂಬರ್ ಲಾಬಿ ಶುರುವಾಗಿದ್ದು ಬ್ರಿಟಿಷರ ಕಾಲದಲ್ಲಿಯೇ. ಆಗಲೇ ಕೆಲ ರಾಜರು ಬ್ರಿಟಿಷರ ಈ ನೀತಿಗೆ, ಟಿಂಬರ್ ಲಾಬಿಗೆ ವಿರೋಧ ತೋರಿದ ನಿದರ್ಶನಗಳೂ ಇವೆ. ಆದರೆ, ಸ್ವಾತಂತ್ರ್ಯ ಪ್ರಾಪ್ತಿಯ ಬಳಿಕ ದೇಶದ ಸಾಮಾಜಿಕ, ಅರ್ಥಿಕ ಚಿತ್ರಣವೂ ಬದಲಾಯಿತು. ಜನರ ಕೈಯಲ್ಲಿ ಹಣ ಓಡಾಡಲು ಆರಂಭವಾಯಿತು. ದುಡ್ಡು ಕೊಟ್ಟರೆ ಎಲ್ಲವೂ ಸಿಗುತ್ತದೆ ಎಂಬ ಭ್ರಮೆಯಿಂದ ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಬಳಕೆ, ಅವುಗಳ ಶೋಷಣೆ ಜಾಸ್ತಿಯಾಯಿತು.

ಎಲ್​ಪಿಜಿ ಪ್ರಾಬಲ್ಯ: ಮೊದಲಿಗೆ ಇದ್ದಲಿ (ಕಲ್ಲಿದ್ದಲು) ಒಲೆ ಬಂತು. ಸ್ವಲ್ಪ ವರ್ಷಗಳ ಬಳಿಕ ಸೀಮೆಎಣ್ಣೆಯ ಸ್ಟೋ ಬಂತು. ಕಳೆದ 30-40 ವರ್ಷಗಳಿಂದ ಎಲ್​ಪಿಜಿ ಬಳಕೆ ಸಾಮಾನ್ಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇಂಡಕ್ಷನ್ ಸ್ಟೋ ಪ್ರಚಲಿತದಲ್ಲಿದೆ. ಸೋಲಾರ್ ಒಲೆಗಳನ್ನೂ ಕೆಲವರು ಬಳಸುತ್ತಿದ್ದಾರೆ. ಬಯೋ ಗ್ಯಾಸ್​ನಿಂದ ಅಡುಗೆ ಮಾಡಲು ಒತ್ತು ನೀಡಲಾಗುತ್ತಿದೆ. ಮಿಥೆನಾಲ್ ಸ್ಟೋಗಳ ಬಗ್ಗೆ ಇತ್ತೀಚಿನ ದಿನಗಳಲ್ಲಿ ಚರ್ಚೆ ಆರಂಭವಾಗಿದೆ. ಅದೇನಿದ್ದರೂ, ಪಳೆಯುಳಿಕೆ ಇಂಧನವಾಗಿದ್ದರೂ ಎಲ್​ಪಿಜಿಯಿಂದ ಹಲವು ಪ್ರಯೋಜನಗಳಿರುವುದರಿಂದ, ತನ್ನ ಸ್ಥಾನವನ್ನು ಅದು ಗಟ್ಟಿಯಾಗಿ ಇರಿಸಿಕೊಂಡಿದೆ.

ಎಲ್​ಪಿಜಿ ಸಿಲಿಂಡರ್ ಕಡುಬಡವರ, ಕೆಳಮಧ್ಯಮ ವರ್ಗದವರ ಮನೆಗಳಿಗೆ ತಲುಪಲು ಮತ್ತಷ್ಟು ಸಹಾಯವಾಗಿದ್ದು ನರೇಂದ್ರ ಮೋದಿ ನೇತೃತ್ವ ಸರ್ಕಾರದ ‘ಗಿವ್ ಇಟ್ ಅಪ್ ಎಲ್​ಪಿಜಿ ಸಬ್ಸಿಡಿ’ ಯೋಜನೆಯಿಂದ. 2014ರಲ್ಲಿ ಅದೊಂದು ದಿನ ದೆಹಲಿಯಿಂದ ಅನಂತಕುಮಾರ್ ಅವರ ಕರೆ ಬಂತು. ‘ಒಂದ್ನಿಮಿಷ ಪೆಟ್ರೋಲಿಯಂ ಸಚಿವರು ಮಾತನಾಡುತ್ತಾರೆ’ ಎಂದು ಅವರ ಬಳಿ ಫೋನ್ ಕೊಟ್ಟರು. ಧಮೇಂದ್ರ ಪ್ರಧಾನ್ ಮಾತನಾಡಿ, ‘ಸಾಧ್ಯ ಇದ್ದವರು ಎಲ್​ಪಿಜಿ ಸಬ್ಸಿಡಿ ಬಿಡಬೇಕು. ಈ ಬಗ್ಗೆ ರೂಪಿಸಿದ ಯೋಜನೆಗೆ ಸಂಪುಟ ಸಭೆಯಲ್ಲಿ ಈಗಷ್ಟೇ ಅನುಮತಿ ಸಿಕ್ಕಿದೆ. ನೀವು ಸಬ್ಸಿಡಿ ಬಿಟ್ಟುಕೊಡುತ್ತಿರಲ್ಲಾ?’ ಎಂದವರು ಪ್ರಶ್ನಿಸಿದಾಗ, ನಾನು ಹಾಸ್ಯದ ಧಾಟಿಯಲ್ಲಿ, ‘ಸಬ್ಸಿಡಿ ಏಕೆ ಎಲ್​ಪಿಜಿಯನ್ನೇ ಬಿಟ್ಟುಕೊಡುತ್ತೇನೆ’ ಎಂದೆ. ಅದಕ್ಕೆ, ಪ್ರಧಾನ್, ‘ಹಾಗೆ ಮಾಡಬೇಡಿ. ಸಬ್ಸಿಡಿ ಮಾತ್ರ ಬಿಡಿ. ಎಲ್​ಪಿಜಿಯನ್ನಲ್ಲ’ ಎಂದರು. ಹೀಗೆ ದೇಶದ ಲಕ್ಷಾಂತರ ಜನರು ಸಬ್ಸಿಡಿ ತ್ಯಜಿಸಿದ ಪರಿಣಾಮ, ಬಡಕುಟುಂಬಗಳಿಗೆ ಎಲ್​ಪಿಜಿ ಸಂಪರ್ಕ ಸಿಗಲು ಸಾಧ್ಯವಾಗಿದೆ.

ಎಂಥ ಇಂಧನ ಬೇಕು ನಮಗೆ?: ಇದೆಲ್ಲವೂ ಸರಿಯೇ. ಆದರೆ, ಇಂಧನ ಕುರಿತಾದ ಹೊಸ ಆಯ್ಕೆಗಳ ಬಗ್ಗೆಯೂ ಗಂಭೀರವಾಗಿ ಚಿಂತನೆ ಮಾಡಬೇಕಾದ ಸಮಯ ಈಗ ಬಂದಿದೆ. ಪಳೆಯುಳಿಕೆ ರಹಿತ ಇಂಧನ ನಮ್ಮ ಆದ್ಯತೆಯನ್ನಾಗಿಸಿಕೊಳ್ಳುವ ಚಿಂತನೆ ಬೆಳೆಯಬೇಕಿದೆ. ಅದಮ್ಯ ಚೇತನ ಸಂಸ್ಥೆಯನ್ನು ಪ್ರವೇಶಿಸುತ್ತಿದ್ದಂತೆಯೇ, ಮೊದಲು ಗಮನ ಸೆಳೆಯುವುದು-‘ಸಂಪುರ್ಣ ಜೈವಿಕ ಇಂಧನದಲ್ಲಿ ಅಡುಗೆ ತಯಾರಿಸುವ ಅಡುಗೆಮನೆಗೆ ಸ್ವಾಗತ’ ಎಂಬ ಫಲಕ. ಅನೇಕ ಜನರಲ್ಲಿ ಇಂದಿಗೂ ಜೈವಿಕ ಇಂಧನ (ಪಳೆಯುಳಿಕೆ ರಹಿತ) ಕುರಿತು ಗೊಂದಲ ಮಿಶ್ರಿತ ಕುತೂಹಲ. ಅದಮ್ಯ ಚೇತನದ ಅಡುಗೆಮನೆ ಶುದ್ಧ ಇಂಧನವಾಗಿ ಮಾರ್ಪಟ್ಟಿರುವ ಪಯಣ ನಿಜಕ್ಕೂ ಚೇತೋಹಾರಿ.

2003ರ ಸಂದರ್ಭ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದರು. ಅವರ ನೇತೃತ್ವದ ಸರ್ಕಾರ ದೇಶದ ಎಲ್ಲ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಬಿಸಿಯೂಟ ಒದಗಿಸುವ ಮಹತ್ವದ ನಿರ್ಣಯ ತಳೆಯಿತು. ಅಷ್ಟೇ ಅಲ್ಲ, ಸುಪ್ರೀಂ ಕೋರ್ಟ್ ಕೂಡ 2003ರ ಜುಲೈನಲ್ಲಿ ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ ಶಾಲೆಗಳಲ್ಲಿ ಬಿಸಿಯೂಟ ಆರಂಭಿಸಲು ಸೂಚಿಸಿತು. ಗ್ರಾಮೀಣ ಭಾಗದ ಶಾಲೆಗಳಲ್ಲೇ ಅಡುಗೆ ತಯಾರಿಕೆ ಶುರುವಾಯಿತು. ಆದರೆ, ನಗರಪ್ರದೇಶದ ಶಾಲೆಗಳ ಆವರಣದಲ್ಲಿ ಅಡುಗೆ ತಯಾರಿಸುವುದು ಸಾಧ್ಯವಿರಲಿಲ್ಲ. ಆಗ, ಅಕ್ಷಯಪಾತ್ರಾ, ಅದಮ್ಯ ಚೇತನದಂಥ ಸಂಸ್ಥೆಗಳು ಶುಚಿ-ರುಚಿಯಾದ ಊಟ ತಯಾರಿಸಲು ಆರಂಭಿಸಿದವು. ಅದಮ್ಯ ಚೇತನದ ‘ಅನ್ನಪೂರ್ಣ’ ಅಡುಗೆಮನೆಯಲ್ಲಿ ಮೊದಲ ದಿನವೇ 10 ಸಾವಿರ ವಿದ್ಯಾರ್ಥಿಗಳಿಗೆ ಊಟ ತಯಾರಾದಾಗ, 15 ಎಲ್​ಪಿಜಿ ಸಿಲಿಂಡರ್ ಖಾಲಿಯಾದವು. 50 ಸಾವಿರ ಮಕ್ಕಳಿಗೆ ಊಟ ತಯಾರಿಸುವಾಗ ಬೇಕಾಗಿದ್ದು 45 ಸಿಲಿಂಡರ್. ಆಗ ಪರ್ಯಾಯವನ್ನು ಏಕೆ ಶೋಧಿಸಬಾರದು ಎಂಬ ಪ್ರಶ್ನೆಗೆ ಉತ್ತರ ಶೋಧಿಸುತ್ತ ಹೊರಟಾಗ ದಾರಿಯೂ ಸ್ಪಷ್ಟಗೊಂಡಿತು.

ಕಸದಿಂದ ತಯಾರು ಮಾಡಿದ ಬ್ರಿಕೆಟ್ಸ್ (Briquettes) ಮೂಲಕವೇ ಈಗ ಅಡುಗೆ ತಯಾರಿಸಲಾಗುತ್ತಿದ್ದು, ಶಾಖ ಮತ್ತು ಹೊಗೆ ಹೊರಗಡೆ ಹೋಗದಂತೆ ಎಚ್ಚರಿಕೆ ವಹಿಸಲಾಗಿದೆ. ಒಲೆಗೆ ತೆಂಗಿನ ಚಿಪು್ಪ ಬಳಸಿ ದಿನವೂ ಕ್ವಿಂಟಲ್​ಗಟ್ಟಲೇ ಮಸಾಲೆ ಹುರಿಯಲಾಗುತ್ತಿದೆ. ಕಳೆದ 12 ವರ್ಷಗಳಿಂದ ಒಂದೂ ಸಿಲಿಂಡರ್ ಬಳಸದೆ ಕಸದಿಂದ ತಯಾರಾಗಿರುವ ಹಸಿರು ಇಂಧನವನ್ನೇ (ಬ್ರಿಕೆಟ್ಸ್, ಪೆಲೆಟ್ಸ್, ಬಯೋಗ್ಯಾಸ್)ಬಳಸುತ್ತಿರುವುದು ಹೆಮ್ಮೆಯ ಸಂಗತಿ. ಪರ್ಯಾಯ ಇಂಧನದ ಬಳಕೆಯ ಸಣ್ಣ ಸಾಧ್ಯತೆಯನ್ನು ಅದಮ್ಯ ಚೇತನ ದೇಶದ ಮುಂದೆ ಇರಿಸಿದೆ. ಈ ಪ್ರಯತ್ನ ಮತ್ತಷ್ಟು ಸರ್ವವ್ಯಾಪಿಯಾದ್ದಲ್ಲಿ ಪರಿಸರಕ್ಕೆ ಎಷ್ಟು ಹಿತವಲ್ಲವೇ? ಕಸದ ಸಮಸ್ಯೆಗೂ ಪರಿಹಾರ ದೊರೆಯುತ್ತದೆ.

ನಮ್ಮಲ್ಲಿ ಗೋರಕ್ಷಣೆಯ ಕುರಿತು ಸಾಕಷ್ಟು ಚರ್ಚೆ ನಡೆಯುತ್ತದೆ. ಈ ನಿಟ್ಟಿನಲ್ಲೊಂದು ಹೊಸ ಹೊಳಹು. ಎಲ್​ಪಿಜಿ ಸಿಲಿಂಡರ್​ಗಳಿಗೇ ಗೋಬರ್ ಗ್ಯಾಸ್ ತುಂಬುವಂತಾದರೆ ಗೋಸಂತತಿಯ ರಕ್ಷಣೆಯೂ ಸಾಧ್ಯವಾಗುತ್ತದೆ. ಪಳೆಯುಳಿಕೆ ರಹಿತ ಇಂಧನದ ಬಳಕೆಯೂ ಜಾಸ್ತಿಯಾಗಿ ಪರಿಸರಕ್ಕೆ ಪೂರಕವಾಗುತ್ತದೆ. ಹಸಿರು ಇಂಧನದಿಂದ ಸುಂದರ ಅಡುಗೆಮನೆಯೂ ನಿಜ ಅರ್ಥದಲ್ಲಿ ಸಾಕಾರಗೊಳ್ಳುತ್ತದೆ. ಇಂಥದ್ದೊಂದು ಚಿಂತನೆಯ ಸಾಕಾರಕ್ಕೆ ಒಂದಿಷ್ಟು ಅಧ್ಯಯನ ಮತ್ತು ಪ್ರಯೋಗಗಳು ನಡೆದರೆ ಕ್ರಾಂತಿಕಾರಿ ಬದಲಾವಣೆಗೆ ಮುನ್ನುಡಿ ಬರೆಯಬಹುದು. ಈ ಬಗ್ಗೆ ಹೊಸಪೀಳಿಗೆಯವರು ಮತ್ತು ವಿಜ್ಞಾನಿಗಳು ಕಾರ್ಯತತ್ಪರರಾಗಲಿ ಎಂಬುದೇ ಆಶಯ.

(ಲೇಖಕರು ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net