

ವೈವಿಧ್ಯ ನಮ್ಮ ಜೀವನಧರ್ಮ, ಸಂಸ್ಕೃತಿಯ ಜೀವಾಳ. ಇದನ್ನು ಮರೆತು ಸುಧಾರಣೆ, ಅಭಿವೃದ್ಧಿ ಹೆಸರಿನಲ್ಲಿ ಎಲ್ಲವನ್ನೂ ಏಕತಾನತೆಗೊಳಿಸುತ್ತಿದ್ದೇವೆ. ಒಂದೇ ಬಗೆಯ ಪಾಠ, ಊಟ, ಉಡುಗೆ... ಹೀಗೆ ಎಲ್ಲಿಗೆ ಹೊರಟಿದ್ದೇವೆ, ಏಕೆ ಹೊರಟಿದ್ದೇವೆ ಎಂಬುದೇ ಅರ್ಥವಾಗುತ್ತಿಲ್ಲ. ಈ ಮನೋಭಾವ ಬದಲಾಗಬೇಕಿದೆ.
ಇದೊಂದು ವಿಚಿತ್ರ ಘಟನೆ. 1997ರಲ್ಲಿ ಪ್ರವಾಸ ನಿಮಿತ್ತ ನಮ್ಮ ಕುಟುಂಬ ಅಮೆರಿಕಕ್ಕೆ ಹೋಗಿತ್ತು. ಡಿಸ್ನಿಲ್ಯಾಂಡ್ ವೀಕ್ಷಣೆ, ಲಾಂಗ್ಡ್ರೖೆವ್, ಅನೇಕ ಸ್ಥಳಗಳಿಗೆ ಭೇಟಿ ಹೀಗೆ ಪ್ರವಾಸ ಸಾಗುತ್ತಿರಬೇಕಾದರೆ ಒಂದು ರಾತ್ರಿ
ನಮ್ಮಲ್ಲಿ ರಸ್ತೆಗಳಿಗೆ ಕವಿಗಳು, ಮಹನೀಯರು, ರಾಷ್ಟ್ರಪುರುಷರ ಹೆಸರನ್ನು ಇಡುತ್ತಾರೆ. 25 ವರ್ಷಗಳ ಹಿಂದೆಯೇ ಬೆಂಗಳೂರಿನ ರಸ್ತೆಗಳಿಗೆ ಇಂಥ ಹೆಸರುಗಳನ್ನು (ದ.ರಾ. ಬೇಂದ್ರೆ ರಸ್ತೆ, ಪೂರ್ಣಚಂದ್ರ ತೇಜಸ್ವಿ ರಸ್ತೆ, ಪಂಪ ಮಹಾಕವಿ ರಸ್ತೆ-ಹೀಗೆ) ಕಾಣಬಹುದಾಗಿತ್ತು. ಅಮೆರಿಕದಲ್ಲಿ ಒಂದೊಂದು ಹೆದ್ದಾರಿಗೂ, ಅದರ ತಿರುವುಗಳಿಗೂ, ಸಣ್ಣರಸ್ತೆಗಳಿಗೂ ಪ್ರತ್ಯೇಕ ಸಂಖ್ಯೆ ನೀಡಿರುತ್ತಾರೆ. ಆ ಪೈಕಿ ಯಾವುದೋ ಒಂದು ಸಂಖ್ಯೆ ಮರೆತುಹೋದರೂ ದಾರಿ ತಪ್ಪಿ, ವೃಥಾ ಅಲೆಯಬೇಕಾಗುತ್ತದೆ. ನಮಗೂ ಹೀಗೇ ಆಯಿತು, ಅದರಲ್ಲೂ ಸಂಖ್ಯೆಗಳನ್ನು ನೆನಪಿನಲ್ಲಿ ಇಡುವುದು ಭಾರಿ ಕಷ್ಟದ ಕೆಲಸ. ಹಲವು ಕಿಲೋಮೀಟರ್ ಮುಂದೆ ಹೋಗಿ, ಮತ್ತೆ ವಾಪಸ್ ಬಂದು, ಹಲವು ತಿರುವುಗಳನ್ನು ದಾಟಿ, ಕ್ರಮಿಸಿ ಬಂದ ದಾರಿ ಸರಿಯಿದೆಯೋ ಅಥವಾ ಮತ್ತೆ ಬೇರೆ ಕಡೆ ಬಂದಿದ್ದೆವೋ ಎಂಬ ಅಳುಕು, ಆತಂಕದ ನಡುವೆಯೇ ಹೋಟೆಲ್ಗೆ ತಲುಪಿದಾಗ ಕೊಂಚ ಸಮಾಧಾನ. ಅಲ್ಲಿನ ಶಿಷ್ಟಾಚಾರದಂತೆ ಸ್ವಾಗತಕಾರಿಣಿ ಮುಗುಳ್ನಗೆಯಿಂದ ಸ್ವಾಗತಿಸಿ, ‘ಹೌ ಆರ್ ಯೂ’ ಎಂದೆಲ್ಲ ವಿಚಾರಿಸಿದರು. ಎರಡನೇ ಮಹಡಿಯಲ್ಲಿ ಕೋಣೆಗಳು. ನಾವು ಇನ್ನೇನು ಕೋಣೆಯ ಬಾಗಿಲು ತೆರೆಯಬೇಕು ಎನ್ನುವಷ್ಟರಲ್ಲಿ, ಸ್ವಲ್ಪ ಮುಂದೆ ಇರುವ ಕೋಣೆಯನ್ನು ಪ್ರವೇಶಿಸಬೇಕಿದ್ದ ಅನಂತಕುಮಾರ್ ಸ್ನೇಹಿತ ಮಕ್ಬೂಲ್ ಪಟೇಲ್-‘ನಿಲ್ಲಿ, ನಿಲ್ಲಿ ಬಾಗಿಲು ತೆರೆಯಬೇಡಿ, ಬೇಗ ಇಲ್ಲಿಂದ ಹೊರಡೋಣ’ ಎಂದು ಗಾಬರಿಯಿಂದ ಧಾವಿಸುತ್ತ ಬಂದು ಹೇಳಿದರು. ನಮಗೆ ಏನೂ ಅರ್ಥವಾಗಲಿಲ್ಲ. ಅಲ್ಲಿಂದ ಮತ್ತೆ ಕಾರಿನಲ್ಲಿ ಹೊರಟು, ವಿಳಾಸ ಶೋಧಿಸುತ್ತ ನಾವು ಕೋಣೆ ಕಾಯ್ದಿರಿಸಿದ್ದ ಹೋಟೆಲ್ಗೆ ಬಂದು ತಲುಪಿದಾಗ ನಸುಕಿನ ಜಾವ ಮೂರೂವರೆಯಾಗಿತ್ತು. ಮರುದಿನ ಬೆಳಗ್ಗೆ ತಿಂಡಿಹೊತ್ತಲ್ಲಿ ಮಕ್ಬೂಲ್ ಪಟೇಲರನ್ನು, ‘ನಿನ್ನೆ ಏನಾಯಿತು, ಅಷ್ಟು ಗಾಬರಿಗೊಂಡಿದ್ದಿರಿ?’ ಎಂದು ಕೇಳಿದಾಗ-‘ಇಲ್ಲಿ ಎಲ್ಲ ಹೋಟೆಲ್ಗಳು, ಅದರಲ್ಲಿರುವ ಕೋಣೆಗಳು ಒಂದೇ ವಿನ್ಯಾಸ ಹೊಂದಿವೆ. ತಪ್ಪಾಗಿ ಬೇರೆ ಹೋಟೆಲ್ಗೆ ಹೋಗಿದ್ದೆವು. ಕೀ ತೆಗೆದು, ಆ ಕೋಣೆಯಲ್ಲಿ ಯಾರಾದರೂ ಇದ್ದಿದ್ದರೆ ಎಷ್ಟು ಆಭಾಸವಾಗುತ್ತಿತ್ತು’ ಎಂದಾಗ ನಮಗೆ ಸಮಸ್ಯೆಯ ಗಂಭೀರತೆ ಅರ್ಥವಾಯಿತು.
ಅಮೆರಿಕದಲ್ಲಿ ಇದು ಬರೀ ಹೆದ್ದಾರಿ, ಹೋಟೆಲ್ಗಳಿಗೆ ಮಾತ್ರ ಸೀಮಿತವಾಗಿಲ್ಲ. ಎಲ್ಲಿ ಹೋದರೂ ಇದೇ ಕಥೆ. ಮಾಲ್, ಅಂಗಡಿಗಳಲ್ಲಿ ವಸ್ತುಗಳನ್ನು ಒಂದೇ ರೀತಿ ಜೋಡಿಸಿಟ್ಟಿರುತ್ತಾರೆ. ಉದಾಹರಣೆಗೆ, ಮೊಸರೋ, ತರಕಾರಿಯೋ ಬೇಕೆಂದರೆ ನಿರ್ದಿಷ್ಟ ಜಾಗದ, ನಿರ್ದಿಷ್ಟ ಶೆಲ್ಪ್ನಲ್ಲಿ ಸಿಗುತ್ತದೆ. ಯಾವುದೇ ಊರಿನ ಯಾವುದೇ ಮಾಲ್-ಅಂಗಡಿಗೆ ಹೋದರೂ ಇದೇ ಚಿತ್ರಣ. ಮೊದಮೊದಲಿಗೆ, ಈ ಶಿಸ್ತು ಇಷ್ಟವಾದರೂ, ಕ್ರಮೇಣ ಅದೇ ಅಂಗಡಿ, ಅದೇ ಥರದ ವಿನ್ಯಾಸ, ಅದೇ ಜಾಗ... ಕಂಡು ‘ಎಲ್ಲಿ ಹೋದ್ರೂ ಅದೇ ಅದೇ’ ಎಂಬ ಏಕತಾನತೆ ಕಾಡತೊಡಗಿತು. ಅಲ್ಲಿನ ಜನರು ಬಟ್ಟೆ ಧರಿಸುವುದೂ ಹಾಗೆಯೇ, ಬಣ್ಣಗಳೇ ಇಲ್ಲ. ಬರೀ ಕಪು್ಪ, ಬಿಳುಪು ಮತ್ತು ಬೂದು ಬಣ್ಣದ ಬಟ್ಟೆಗಳಷ್ಟೇ. ಹೋಗಲಿ, ಗಿಡಗಳು ವೈವಿಧ್ಯಮಯವಾಗಿವೆಯೇ ಎಂದರೆ ಅವು ಕೂಡ ದುಂಡು-ದುಂಡಾಗಿ ಒಂದೇ ವಿನ್ಯಾಸದಲ್ಲಿ ನಿಂತಿವೆ. ಒಟ್ಟಾರೆ, ಆ ನಮ್ಮ ಪ್ರವಾಸದ ಅರ್ಧದಷ್ಟು ಸಮಯ ಅಂಕಿಸಂಖ್ಯೆಗಳನ್ನು ನೆನಪಿಟ್ಟುಕೊಂಡು, ರಸ್ತೆ-ವಿಳಾಸ ಹುಡುಕುವುದರಲ್ಲೇ ಹೋಗಿಬಿಟ್ಟಿತು.
ಅಲ್ಲಿಂದ ಹೊರಟು ಬೆಂಗಳೂರು ವಿಮಾನನಿಲ್ದಾಣಕ್ಕೆ ಬಂದಿಳಿದಾಗ ಬಣ್ಣಬಣ್ಣದ ಬಟ್ಟೆಗಳು, ಬಗೆಬಗೆಯ ಜನರು, ವಿಭಿನ್ನ ವಿನ್ಯಾಸದ ಕಟ್ಟಡಗಳು, ಗಿಡ-ಮರಗಳು ಇದೆಲ್ಲವನ್ನು ಕಂಡು ಹೊಸಲೋಕಕ್ಕೇ ಪ್ರವೇಶಿಸಿದಂತಾಯಿತು. ನಿಜಕ್ಕೂ, ವೈವಿಧ್ಯತೆ ನಮ್ಮ ದೇಶದ ಜೀವಾಳ. ನಮ್ಮ ದೇಶದಲ್ಲಿ ಎಷ್ಟೊಂದು ಭಾಷೆಗಳು, ಸಂಪ್ರದಾಯಗಳು, ರೀತಿ-ರಿವಾಜುಗಳು! ಭಾರತದಲ್ಲಿ ಹತ್ತು ಸಾವಿರಕ್ಕೂ ಅಧಿಕ ಭಾಷೆಗಳಿವೆಯಂತೆ. ಪ್ರತೀ 15-20 ಕಿಲೋಮೀಟರ್ಗೆ ಭಾಷೆ ಬದಲಾಗುತ್ತದೆ. ವಿವಿಧತೆಯಲ್ಲಿ ಏಕತೆ ಸಾಧಿಸಿದ ಅಪೂರ್ವ ದೇಶ ನಮ್ಮದು ಎಂದು ಹಿರಿಯರು ಹಿಂದೆಯೇ ಹೇಳಿರುವುದು ಈ ಕಾರಣಗಳಿಂದಲೇ.
ಪ್ರಕೃತಿಯಲ್ಲೂ ವೈವಿಧ್ಯವಿದೆ. ಸಾವಿರಾರು ಬಗೆಯ ಪ್ರಾಣಿ-ಪಕ್ಷಿಗಳು, ಕೀಟಗಳು. ಒಂದೊಂದು ಬಗೆಯೂ ಕುತೂಹಲಕಾರಿಯೇ. ನಮ್ಮ ಕರ್ನಾಟಕದ ಪಶ್ಚಿಮ ಘಟ್ಟವನ್ನೇ ನೋಡಿ. ಅಪಾರ ಜೀವವೈವಿಧ್ಯದ ತಾಣ. ಇಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಬಗೆಯ ಚಿಟ್ಟೆ ಪ್ರಭೇದಗಳಿವೆ, ನೂರಾರು ಬಗೆಯ ಪಕ್ಷಿ-ಕೀಟಗಳಿವೆ. ಹೀಗೆ ಮುಖ್ಯವಾಗಿ ನಮ್ಮಲ್ಲಿ ಮೂರುಬಗೆಯ ವೈವಿಧ್ಯಗಳಿವೆ. 1) ಪ್ರಾಕೃತಿಕ ವೈವಿಧ್ಯ 2) ಸಾಮಾಜಿಕ ವೈವಿಧ್ಯ ಮತ್ತು 3) ವೈಯಕ್ತಿಕ ಜೀವನದ ವೈವಿಧ್ಯ. ಪ್ರಕೃತಿಯನ್ನು ಅವಲೋಕಿಸಿ. ಅಲ್ಲಿ ಯಾವುದೂ ಒಂದೇ ಥರ ಇಲ್ಲ. ನಾಳೆಯ ಸೂರ್ಯೋದಯ ಇಂದಿನಂತೆ ಇರುವುದಿಲ್ಲ; ಇಂದಿನ ಸೂರ್ಯಾಸ್ತ ನಿನ್ನೆಯಂತಿರುವುದಿಲ್ಲ. ಒಂದು ಹೂವಿನ ಅರಳುವಿಕೆ, ಪರಿಮಳ, ಮತ್ತೊಂದರಂತೆ ಇರುವುದಿಲ್ಲ. ಹಣ್ಣುಗಳೂ ಹಾಗೆಯೇ. ಪ್ರಕೃತಿಯೊಂದಿಗೆ ಸಾಮೀಪ್ಯ ಸಾಧಿಸಿದಾಗ ಇಂಥ ಸಾವಿರಾರು ಬೆರಗುಗಳು ಗೋಚರಿಸುತ್ತವೆ.
ಸಾಮಾಜಿಕ ಬದುಕಿನ ವೈವಿಧ್ಯದ ಅನುಭವವನ್ನಂತೂ ನಮ್ಮ ದಿನನಿತ್ಯದ ಜೀವನದಲ್ಲಿ ಕಾಣುತ್ತಿರುತ್ತೇವೆ. ರಾಜಸ್ಥಾನದ ಜೋಧಪುರದಲ್ಲಿಯೂ ಅದಮ್ಯ ಚೇತನದ ಅಡುಗೆಮನೆ ಇರುವುದರಿಂದ, ಆಗಾಗ ಅಲ್ಲಿ ಭೇಟಿ ನೀಡುತ್ತೇನೆ. ರಾಜಸ್ಥಾನೀ ಸಂಪ್ರದಾಯವೇ ವಿಶಿಷ್ಟ. ಅಲ್ಲಿನ ವೇಷಭೂಷ, ಭಾಷೆ, ಆಹಾರ ಸಂಸ್ಕೃತಿ ಎಲ್ಲವೂ ವಿಶೇಷ. ತಲೆಗೆ ಕಟ್ಟಿಕೊಳ್ಳುವ ಪೇಠಾವನ್ನು ಅಲ್ಲಿ ಸಾಫಾ ಎಂದು ಕರೆಯುತ್ತಾರೆ. ನನಗೂ ಒಮ್ಮೆ ಅಲ್ಲಿಯ ಜನ ಆತ್ಮೀಯತೆಯಿಂದ ಸಾಫಾ ಕಟ್ಟಿದರು. ಅದು 18 ಗಜದ ಬಟ್ಟೆ! ಅದನ್ನು ಕತ್ತರಿಸಿದರೆ ಮೂರು ಸೀರೆ ತಯಾರಿಸಬಹುದು! ‘ಇದನ್ನು ಎಷ್ಟು ಬಗೆಯಲ್ಲಿ ಕಟ್ಟುತ್ತೀರಿ?’ ಎಂದು ಆ ವ್ಯಕ್ತಿಯನ್ನು ಪ್ರಶ್ನಿಸಿದಾಗ, ‘25 ಬಗೆಯಲ್ಲಿ ಕಟ್ಟುತ್ತಾರೆ. ನನಗೆ ಎರಡು-ಮೂರು ವಿಧವಷ್ಟೇ ಗೊತ್ತು’ ಎಂದ. ಭೌಗೋಳಿಕ ಹಿನ್ನೆಲೆ, ಜನಾಂಗದ ಪ್ರಕಾರವೂ ಸಾಫಾವನ್ನು ಕಟ್ಟಲಾಗುತ್ತದೆ.
ಇಂಥ ವಸ್ತ್ರವೈವಿಧ್ಯವನ್ನು, ಆಹಾರ ಸಂಸ್ಕೃತಿಯನ್ನು ನಮ್ಮ ರಾಜ್ಯದಲ್ಲೂ ಕಾಣಬಹುದು. ಹುಬ್ಬಳ್ಳಿಯಲ್ಲಿ (ಬಯಲುಸೀಮೆ) ರೊಟ್ಟಿ ಊಟ, ಮಂಗಳೂರು-ಉಡುಪಿಯಲ್ಲಿ ಕುಚಲಕ್ಕಿ ಅನ್ನ, ಬೆಂಗಳೂರಿನಲ್ಲಿ ರಾಗಿಮುದ್ದೆ, ಸೊಪು್ಪಸಾರು-ಹೀಗೆ ಆಯಾ ಪ್ರದೇಶದ ಹವಾಗುಣ, ಭೌಗೋಳಿಕ ವೈಶಿಷ್ಟ್ಯ, ಅಲ್ಲಿನ ಬೆಳೆಗಳು, ಆಹಾರಪದ್ಧತಿ ಈ ಎಲ್ಲ ಅಂಶಗಳು ಇಲ್ಲಿ ಅಡಕವಾಗಿರುತ್ತವೆ ಮತ್ತು ಜನರ ಸ್ವಾಸ್ಥ್ಯರಕ್ಷಣೆ ನಿಟ್ಟಿನಲ್ಲೂ ಅವು ಸಹಕಾರಿ ಆಗುತ್ತವೆ.
ವೈಯಕ್ತಿಕ ಬದುಕಿನಲ್ಲಿಯೂ ವೈವಿಧ್ಯವೇ ಜೀವಾಳ. ಹಬ್ಬಹರಿದಿನಗಳ ಹೊತ್ತಲ್ಲಿ ಎಷ್ಟೊಂದು ಸಿಹಿತಿಂಡಿಗಳನ್ನು, ಇತರ ಖಾದ್ಯಗಳನ್ನು ತಯಾರಿಸುತ್ತೇವೆ, ಎಷ್ಟೊಂದು ಹಬ್ಬಗಳನ್ನು ಆಚರಿಸಿದರೂ ಅಲ್ಲಿ ಏಕತಾನತೆ ಇರುವುದಿಲ್ಲ. ಒಂದಕ್ಕಿಂತ ಇನ್ನೊಂದು ಭಿನ್ನ, ವಿಶೇಷ.
ಒಟ್ಟಾರೆಯಾಗಿ ಹೇಳಬೇಕಾದರೆ, ನಮ್ಮ ದೇಶದ ಬೇರೆ ಬೇರೆ ಜೀವನಪದ್ಧತಿಗಳು, ಭಾಷೆಗಳು, ಉಡುಗೆತೊಡುಗೆಗಳು, ಆಹಾರ, ಸಂಪ್ರದಾಯಗಳು ವೈವಿಧ್ಯಮಯ ಆಗಿರುವುದರಿಂದಲೇ, ಅವು ಗಟ್ಟಿ ಮತ್ತು ಸತ್ವಯುತವಾಗಿ ಸಮಾಜವನ್ನು ಪೋಷಿಸುತ್ತಿವೆ. ಆದರೆ, ಅಮೆರಿಕದ ಸ್ಥಿತಿ ನಮ್ಮಲ್ಲೂ ಸಂಭವಿಸುತ್ತಿದೆಯೇ? ಇದಕ್ಕೆ ಉತ್ತರ ಕಂಡುಕೊಳ್ಳುವ ಮುನ್ನ ನಿಮ್ಮನ್ನು 25 ವರ್ಷಗಳ ಹಿಂದೆ ಕರೆದುಕೊಂಡು ಹೋಗುತ್ತೇನೆ. ಆಗಲೇ, ಮಾಹಿತಿ-ತಂತ್ರಜ್ಞಾನ ವಲಯ ಪ್ರವರ್ಧಮಾನಕ್ಕೆ ಬಂದು 7-8 ವರ್ಷಗಳಾಗಿದ್ದವು. ನಮ್ಮ ಕುಟುಂಬ ಆಗಷ್ಟೇ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬಂದು ನೆಲೆಸಿತ್ತು.
ಬೆಳಗ್ಗೆ ಎದ್ದು ಶಾಲೆಗೆ ಹೋಗುವ ಮಕ್ಕಳನ್ನು ಕಂಡರೆ ಎಲ್ಲ ಮಕ್ಕಳೂ ಒಂದೇ ಥರ ಕಾಣುತ್ತಿದ್ದರು. ಕಾಲಿಗೆ ಸಾಕ್ಸ್, ಶೂ, ಸಮವಸ್ತ್ರ ಧರಿಸಿದ ಮಕ್ಕಳಲ್ಲಿ ಭಿನ್ನತೆಯೇ ಇರಲಿಲ್ಲ. ದೂರದ ಶಿಮ್ಲಾದ ಮಕ್ಕಳು ಚಳಿಯ ಕಾರಣಕ್ಕಾಗಿ ಸಾಕ್ಸ್ ಧರಿಸುವುದರಲ್ಲಿ ಅರ್ಥವಿದೆ. ಆದರೆ, ತೀವ್ರ ಬಿಸಿಲು ಇರುವ ನಮ್ಮ ಕಲಬುರಗಿ, ರಾಯಚೂರಿನ ಮಕ್ಕಳು ಸಾಕ್ಸ್ ಧರಿಸಿ, ಏಕೆ ಹಿಂಸೆ ಅನುಭವಿಸಬೇಕು? ಇದಕ್ಕೆ ಉತ್ತರವಿಲ್ಲ. ಅವರಾರೋ ಮಾಡಿದರು ಎಂದು ನಾವು ಅನುಕರಣೆ ಮಾಡಿದೆವು. ಆಗೆಲ್ಲ ಬೆಂಗಳೂರಿನ ಸಂಬಂಧಿಕರು, ಪರಿಚಯಸ್ಥರ ಮನೆಗೆ ಹೋದರೆ ಇಂಗ್ಲಿಷಿನಲ್ಲೇ ಸ್ವಾಗತ, ಮಕ್ಕಳು ಕೂಡ-‘ಪ್ಲೀಸ್ ಕಮ್ ಹೌ ಆರ್ ಯೂ, ಪ್ಲೀಸ್ ಸೀಟ್ಡೌನ್’ ಎಂದೆಲ್ಲ ಸಂಭಾಷಿಸುತ್ತಿದ್ದರು. ಕನ್ನಡ ಮಾಧ್ಯಮದಲ್ಲಿ ಓದಿದ ನಾನು ಇಂಜಿನಿಯರಿಂಗ್ ಕಾಲೇಜಿನಲ್ಲೂ ಇಂಗ್ಲಿಷಿನಲ್ಲಿ ಅಷ್ಟಾಗಿ ಮಾತನಾಡಿರಲಿಲ್ಲ. ಈ ಮಧ್ಯೆ, ಕನ್ನಡವನ್ನೋ, ಮರಾಠಿಯನ್ನೋ ಅಥವಾ ತೆಲುಗುನ್ನೋ ಮಾತೃಭಾಷೆಯಾಗಿ ಹೊಂದಿದ ತಾಯಂದಿರು ಮಕ್ಕಳಿಗಾಗಿ ಕಷ್ಟಪಟ್ಟು ಇಂಗ್ಲಿಷ್ ಮಾತಾಡುವುದನ್ನು ರೂಢಿಸಿಕೊಳ್ಳುತ್ತಿದ್ದರು. ಅದಕ್ಕಾಗಿ ತಮ್ಮ ಇಷ್ಟದ ಪುಸ್ತಕಗಳನ್ನು ಬದಿಗಿರಿಸಿ, ಇಂಗ್ಲಿಷ್ ಕಥೆ-ಕಾದಂಬರಿ ಪುಸ್ತಕಗಳನ್ನು ಓದುತ್ತಿದ್ದರು. ಎಲ್ಲ ಮಕ್ಕಳ ಬಾಯಲ್ಲೂ, ಅವರ ತಾಯಂದಿರ ಬಾಯಲ್ಲೂ ಇಂಗ್ಲಿಷ್ ನುಲಿಯತೊಡಗಿತು. ಇಲ್ಲಿಂದ ಆರಂಭವಾದ ವೈವಿಧ್ಯತೆಯ ಪತನ ಕ್ರಮೇಣ ಅನೇಕ ಕ್ಷೇತ್ರಗಳಿಗೆ, ವೈಯಕ್ತಿಕ ಮತ್ತು ಸಾಮಾಜಿಕ ಜೀವನದ ಎಲ್ಲ ಆಯಾಮಗಳಿಗೆ ವಿಸ್ತರಿಸತೊಡಗಿತು. ಇದರಿಂದ ಎಂಥ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದರೆ ಪರಿಸರದಿಂದ, ನಮ್ಮ ಹಳೆಯ ಪದ್ಧತಿಗಳಿಂದ, ಜೀವನಾದರ್ಶಗಳಿಂದ ದೂರವಾಗುತ್ತ, ಏಕತಾನತೆಯನ್ನು ಸೃಷ್ಟಿಸಿಕೊಂಡು ಒತ್ತಡ ಉತ್ಪಾದಕರಾಗುತ್ತಿದ್ದೇವೆ. ಆ ಒತ್ತಡವನ್ನು ನಮ್ಮ ಮೇಲೂ ಹೇರಿಕೊಂಡು, ಮಕ್ಕಳ ಮೇಲೂ ಒತ್ತಾಯಪೂರ್ವಕವಾಗಿ ಹೇರುತ್ತಿರುವ ಪರಿಣಾಮ ಖಿನ್ನತೆ ಹೆಚ್ಚುತ್ತಿದೆ. ಅದೆಷ್ಟು ಸುಶಾಂತ್ ಸಿಂಗ್ಗಳು ನಮ್ಮ ನಡುವೆ ಇದ್ದಾರೆ, ವಿದ್ಯಾರ್ಥಿಗಳು, ಯುವಕರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಜೀವನವೇ ಸಾಕು ಎಂಬ ಧೋರಣೆ ಬೆಳೆಯುತ್ತಿದೆ. ಅಂಧಾನುಕರಣೆಯ ಹೆಸರಿನಲ್ಲಿ ಎಲ್ಲರೂ ಒಂದೇ ದೋಣಿ ಏರುತ್ತಿರುವುದರಿಂದ, ಅದು ಒತ್ತಡದಿಂದ ಯಾವಾಗ ಮುಳಗಲಿದೆ ಎಂದು ಹೇಳದಂತಾಗಿದೆ. ನಾವಾಗಿಯೇ ಸೃಷ್ಟಿಸಿಕೊಂಡ ಈ ಸಮಸ್ಯೆಯಿಂದ ಹೊರಬರಬೇಕಿದೆ. ಈ ಸಮಸ್ಯೆಗೆ ನಿರ್ದಿಷ್ಟ ಕಾರಣಗಳೇನು? ಪರಿಹಾರ ಮಾರ್ಗಗಳು ಯಾವವು? ವೈವಿಧ್ಯತೆಯ ಅಗಾಧತೆಯನ್ನು ಏಕೆ ಉಳಿಸಿಕೊಳ್ಳಬೇಕಿದೆ? ಈ ಎಲ್ಲ ಸಂಗತಿಗಳನ್ನು ಮುಂದಿನ ಅಂಕಣದಲ್ಲಿ ಅವಲೋಕಿಸೋಣ. ಆವರೆಗೆ, ವೈವಿಧ್ಯತೆಗೆ ನಾವು ಉಂಟುಮಾಡಿದ ಹಾನಿಯ ಬಗ್ಗೆ ಒಂದಿಷ್ಟು ಆತ್ಮಾವಲೋಕನ ಮಾಡಿಕೊಳ್ಳೋಣ.
(ಲೇಖಕರು ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥರು)