ಹಲೋ ಡಾಕ್ಟರ್: ವಾಸ್ತವ ಅರಿಯಿರಿ ಮಕ್ಕಳ ಜತೆ ಬೆರೆಯಿರಿ

Untitled-1
Published on
ಕಾಲ ಬದಲಾಗಿದೆ. ಈಗೇನಿದ್ದರೂ ಎಲ್ಲವೂ ಎಲ್ಲರೂ ಅಪ್​ಡೇಟ್. ನಾವು ನೀವು ಊಹಿಸದ ಮಟ್ಟಕ್ಕೆ ಇಂದಿನ ಮಕ್ಕಳು ಹೆಚ್ಚು ತಿಳಿದುಕೊಂಡಿದ್ದಾರೆ. ಅಪ್​ಡೇಟ್ ಆಗುವ ಭರದಲ್ಲಿ ನೈತಿಕ ಅಧಃಪತನ ಆಗುತ್ತಿದೆ ಎಂಬ ವಿಷಾದ ಗುರುಹಿರಿಯರ ಹಿರಿಯರಷ್ಟೇ ಅಲ್ಲ ಹೆತ್ತವರ ಆತಂಕವೂ ಹೌದು.

ನಮ್ಮದು ಸಂಪ್ರದಾಯ, ಸಂಸ್ಕೃತಿ ಸೇರಿದಂತೆ ಕೆಲ ಶಿಷ್ಟಾಚಾರ ಪಾಲಿಸುತ್ತ ಬಂದಿರುವ ದೇಶ. ಹೀಗಿರುವಾಗ ಇದಕ್ಕೆ ಧಕ್ಕೆ ಅಥವಾ ಚ್ಯುತಿ ಬಂದಾಗ ಅದನ್ನು ಪಾಲಿಸುವವರಿಗೆ ಅಥವಾ ಎಲ್ಲರೂ ಅದನ್ನು ಪಾಲಿಸಬೇಕು ಎಂದು ಬಯಸುವವರಿಗೆ ಸ್ವಲ್ಪ ನೋವು, ಆಘಾತ ಸಹಜ. ಇದು ಆತಂಕಕ್ಕೆ ಒಳಗಾಗುವ ವಿಷಯವೇ. ಇತ್ತೀಚೆಗೆ ಶಾಲೆಯಲ್ಲಿ 9 ಹಾಗೂ 10 ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳ ಬ್ಯಾಗಿನಲ್ಲಿ ಶಾಲಾ ಸಿಬ್ಬಂದಿಯೊಬ್ಬರು ಮೊಬೈಲ್​ನ್ನು ಹುಡುಕುತ್ತಿರುವಾಗ ತಮ್ಮ ವಯಸ್ಸಿಗೆ ಬೇಡವಾದಂಥ ವಸ್ತುಗಳು ಹಾಗೂ ಡ್ರಗ್್ಸ ಕೂಡ ಗಮನಕ್ಕೆ ಬಂದಿರುವಾಗ, ಪಾಲಕರು ಈ ಸ್ಥಿತಿಯನ್ನು ಅರ್ಥೈಸಿಕೊಳ್ಳಬೇಕಾದ ಅನಿವಾರ್ಯತೆ ತುರ್ತು ಅಗತ್ಯವಾಗಿದೆ. ಹದಿಹರೆಯದ ವಯಸ್ಸೇ ಹಾಗೆ. ಈ ಹಂತದಲ್ಲಿ ವಯೋಸಹಜ ಆಕರ್ಷಣೆ ಸಹಜ. ದೇಹದಲ್ಲಿ ಹಾಮೋನುಗಳ ವ್ಯತ್ಯಾಸದಿಂದ ಬದಲಾವಣೆ ನಿರಂತರ ನಡೆಯುವ ಪ್ರಕ್ರಿಯೆ. ಅದಕ್ಕೆ ಪೂರಕವಾಗಿ ಮನೋಕಾಮನೆಗಳು ಕೂಡ ಬದಲಾಗುತ್ತಿರುತ್ತವೆ. ಮಕ್ಕಳು ಇದರಿಂದ ನಾವು ಅಂದುಕೊಂಡಷ್ಟು ಹೊರಬರಲಾಗುವುದಿಲ್ಲ. ಈ ವಾಸ್ತವವನ್ನು ಅರಿಯುವುದು ಪಾಲಕರ ಕರ್ತವ್ಯವಾಗಿದೆ.

ಇಂದಿನ ಯಾಂತ್ರಿಕ ಯುಗದಲ್ಲಿ ಪಾಲಕರಿಬ್ಬರೂ ದುಡಿಯಲು ಹೋಗುವುದು ಅನಿವಾರ್ಯ ಎಂಬಂತಾಗಿದೆ. ಹಾಗಂತ ಇದನ್ನು ತಪ್ಪು ಎನ್ನಲಾಗದು. ಈ ಎಲ್ಲ ಒತ್ತಡ, ಜಂಜಾಟದ ಮಧ್ಯೆಯೂ ಹೆತ್ತವರು ಮಕ್ಕಳ ಕಡೆ ಲಕ್ಷ್ಯ ವಹಿಸಬೇಕಾದ ಅವಶ್ಯಕತೆ ಇದೆ. ಮಕ್ಕಳ ಬ್ಯಾಗಲ್ಲಿ ಈ ತರಹದ ವಸ್ತುಗಳು ಅದೂ ಈ ಹಂತದಲ್ಲಿ ಕಂಡು ಬಂದಾಗ ಬೈಯ್ಯುವುದಕ್ಕಿಂತ ಕರೆದು ಆಪ್ತವಾಗಿ ಮಾತನಾಡಿದರೆ ಸೂಕ್ತ. ಬೈಯ್ಯುವುದರಿಂದ ಸಮಸ್ಯೆಗೆ ಪರಿಹಾರ ಸಿಗದು. ಬದಲು ಆಪ್ತ ಸಮಾಲೋಚನೆ ಸರಿಯಾದ ಕ್ರಮ. ಅದು ಆಪ್ತಮಿತ್ರನಂತೆ ಭಾವನೆಗಳನ್ನು ಅರ್ಥೈಸಿಕೊಡುವ ಸಾಧನವಿದ್ದಂತೆ. ಇದಕ್ಕೆ ಪೂರಕವಾಗಿ ಶಾಲೆಯಲ್ಲಿ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಕೂಡ ಆಪ್ತ ಸಮಾಲೋಚಕರನ್ನು ಕರೆಯಿಸಿ ಕೌನ್ಸೆಲಿಂಗ್ ವ್ಯವಸ್ಥೆ ಮಾಡಿಸಬೇಕು. ಈ ವೇಳೆ ಮಕ್ಕಳಿಗೆ ತಿಳಿ ಹೇಳಲು ಅವರ ಮನಸ್ಸಿನ ತೊಳಲಾಟ ಅರಿಯಲು ಮನೆಯವರಿಗಿಂತ ಆಪ್ತ ಸಮಾಲೋಚಕರು ನೀಡುವ ಧೈರ್ಯ ಅಥವಾ ಅವರು ನೀಡುವ ತಿಳಿವಳಿಕೆ ಹೆಚ್ಚು ಪರಿಣಾಮಕಾರಿ. ಮಕ್ಕಳು ಯಾರ ಮಾತನ್ನು ಕೇಳುತ್ತಾರೋ ಅಥವಾ ಗೌರವಿಸುತ್ತಾರೋ ಅವರಿಂದಲೇ ಸರಿ-ತಪ್ಪುಗಳನ್ನು ಹೇಳಿಸಬೇಕು.

ಈ ಮಾತುಗಳು ಒಳಿತು ಬಯಸುವ ಸ್ನೇಹಿತನ ಹಿತನುಡಿಗಳಂತಿರಬೇಕು. ಆತ ಅಥವಾ ಆಕೆಗೆ ಘಾಸಿಯಾಗದಂತೆ ಮನದಟ್ಟಾಗಿಸುವಂತಿರಬೇಕು. ಇದೆಲ್ಲಕ್ಕಿಂತ ಮನೋವೈದ್ಯರು ಅಥವಾ ಆಪ್ತ ಸಮಾಲೋಚಕರ ಬಳಿ ಕರೆದುಕೊಂಡು ಹೋದರೆ ಸಮಸ್ಯೆಗೆ ಸಕಾಲಿಕ ಪರಿಹಾರ ಖಚಿತ. ಮೊನ್ನೆ ಬೆಂಗಳೂರಿನಲ್ಲಿ ನಡೆದ ಘಟನೆ ಒಂದು ಉದಾಹರಣೆಯಷ್ಟೇ. ಇಂತಹ ಘಟನೆಗಳು ಹಿಂದೆಯೂ ನಡೆದಿವೆ. ಪಾಲಕರು ಎಷ್ಟೇ ಒತ್ತಡವಿದ್ದರೂ ಮಕ್ಕಳೊಂದಿಗೆ ಪ್ರತಿ ದಿನ ಕೆಲ ಸಮಯ ಕಳೆಯಿರಿ. ಬೆರೆಯಿರಿ. ಅವರ ವಯಸ್ಸಿಗೆ ತಕ್ಕಂತೆ ಮನಸ್ಸು ಯಾವ ರೀತಿ ಬದಲಾಗುತ್ತದೆ ಎಂಬುದನ್ನು ಅರಿಯಿರಿ. ಶಾಲೆಯಲ್ಲಿ ಇಂದಿನ ದಿನ ಹೇಗಿತ್ತು? ನಿನ್ನ ಆಸಕ್ತಿ, ಬೇಕು ಬೇಡಗಳೇನು ಎಂದು ಪ್ರಶ್ನಿಸಿ.

ಕೋವಿಡ್ ನಂತರ ಶಿಕ್ಷಣ ವ್ಯವಸ್ಥೆ ಬದಲಾಗಿದೆ. ಮಕ್ಕಳು ಸ್ಮಾರ್ಟ್ ಫೋನ್, ಲ್ಯಾಪ್​ಟಾಪ್ ಬಳಸುವುದು ಅನಿವಾರ್ಯವಾಗಿದೆ. ಹೀಗೆ ಬಳಸುವಾಗ ಅವರ ಮನಸ್ಥಿತಿ ಮೇಲೆ ನಿಗಾ ಇಡಬೇಕು. ಅವರು ಒಂದು ಭ್ರಮಾಲೋಕದ ಅಮಲಿನಲ್ಲಿ ತೇಲುತ್ತಿರುತ್ತಾರೆ. ಅದನ್ನು ಗುರುತಿಸಿ ಹೊರಬರಲು ಪ್ರೇರೇಪಿಸಿ. ಸ್ನೇಹಿತರ ಜತೆಗಿನ ಅವರ ನಡವಳಿಕೆಗಳನ್ನೂ ಗಮನಿಸಿ. ಜೀವನ ಮೌಲ್ಯಗಳ ಮಾಹಿತಿ ಕೊರತೆ ಆಗದಂತೆ ನೋಡಿಕೊಳ್ಳಿ. ಮಕ್ಕಳಿಗೆ ಸಕಾಲಿಕ ಮಾರ್ಗದರ್ಶನ ನೀಡಿ.

ಹದಿಹರೆಯ ಅತ್ಯಂತ ಸೂಕ್ಷ್ಮವಾದ ವಯಸ್ಸು. ದೈಹಿಕ ಬದಲಾವಣೆ ಮಾನಸಿಕ ಹಾಗೂ ಭಾವನೆಗಳ ಏರು-ಪೇರು, ಮನಸ್ಸಿನ ತುಮುಲ, ಮುಜುಗರ, ಸುತ್ತಮುತ್ತಲಿನ ಆಕರ್ಷಣೆಗಳು ಇವೆಲ್ಲವುಗಳನ್ನೂ ರಚನಾತ್ಮಕ ದೃಷ್ಟಿಕೋನದಿಂದ ನೋಡಿ ಗುರಿಯತ್ತ ಸಾಗುವ ಮಾರ್ಗದರ್ಶನ ಇಂದಿನ ಯುವಜನಾಂಗಕ್ಕೆ ಅತ್ಯವಶ್ಯವಾಗಿದೆ. ಅದರಲ್ಲಿಯೂ 9,10, ಹಾಗೂ ಪಿಯುಸಿ ಓದುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಆಪ್ತಸಲಹೆ ಹಾಗೂ ತಜ್ಞರ ಮನೋವೈದ್ಯಕೀಯ ಸಲಹೆಗಳು ಖಂಡಿತವಾಗಿಯೂ ಪೂರಕವಾಗಬಲ್ಲದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net