ಹಣ-ಝಣ ಅಂಕಣ| ಕೊಟ್ಟ ಸಾಲ ಕೇಳದೆ ಹೋಯ್ತು...

Hanajhana
Published on

ವ್ಯಾಪಾರದಲ್ಲಿರುವ ದೊಡ್ಡ ಸಮಸ್ಯೆ ಏನೆಂದರೆ ಸಾಲ ಕೊಡದೇ ವ್ಯಾಪಾರ ಅಸಾಧ್ಯ. ಆಧರೆ ಒಬ್ಬರಿಗೇ ಹೆಚ್ಚು ಸಾಲ ಕೊಡಬೇಡಿ, ಆತ ವಾಪಸು ಕೊಡದಿದ್ದಲ್ಲಿ ನೀವು ಬಿಕ್ಕಟ್ಟಿನಲ್ಲಿ ಸಿಲುಕುತ್ತೀರಿ. ಬದಲಿಗೆ ಹತ್ತು ಮಂದಿಗೆ ಸ್ವಲ್ಪ ಸ್ವಲ್ಪವಾಗಿ ಒಂದು ತಿಂಗಳ ಸಾಲ ಕೊಡಿ. ಅವರು ಸಾವಿರ ರೂಪಾಯಿ ಕೇಳಿದರೆ ಐನೂರಷ್ಟೆ ಕೊಡಿ. ಯಾಕೆಂದರೆ ಸಾಲ ವಸೂಲಿಗೆ ಹೋದಾಗ ನೀವು ಕೊಟ್ಟ ಸಾವಿರ ರೂಪಾಯಿಯ ಮಾಲಿನಲ್ಲಿ ಐನೂರು ರೂಪಾಯಿಯ ಮಾಲು ಮಾರಿ ಹೋಗಿದ್ದರೂ ಉಳಿದ ಸ್ಟಾಕನ್ನು ತೋರಿಸಿ ‘ಇನ್ನೂ ಖರ್ಚಾಗಿಲ್ಲ, ಖಾಲಿಯಾದ ಮೇಲೆ ದುಡ್ಡು ಕೊಡುತ್ತೇನೆ’ ಎನ್ನಬಹುದು.

ಹತ್ತರಲ್ಲಿ ಆರೇಳು ಗ್ರಾಹಕರು ಸರಿಯಾದ ಸಮಯಕ್ಕೆ ಸಾಲ ಹಿಂದಿರುಗಿಸುತ್ತಾರೆ. ಉಳಿದವರು ‘ಚೆಕ್​ಗೆ ಯಜಮಾನರ ಸಹಿ ಆಗಿಲ್ಲ’ ಅಂತಾನೋ ಅಥವಾ ‘ಇನ್ನೂ ಸ್ವಲ್ಪ ಐಟಂಗಳನ್ನು ಕೊಡಿ, ಎಲ್ಲ ದುಡ್ಡು ಒಟ್ಟಿಗೆ ಕೊಡುತ್ತೇನೆ’ ಅಂತಾನೋ ಕಥೆ ಹೇಳಿದರೆ ಅಂಥವರಿಗೆ ಸಾಲ ಕೊಡುವುದನ್ನು ನಿಲ್ಲಿಸಿ. ಮತ್ತೆ ಹೊಸದಾಗಿ ಹತ್ತು ಜನರಿಗೆ ಸಾಲ ಕೊಡಿ. ಸಮಯಕ್ಕೆ ಸರಿಯಾಗಿ ಹಣ ಕೊಟ್ಟವರಿಗೆ ಮುಂದುವರಿಸಿ, ಮುಂದೆ ನಿಧಾನವಾಗಿ ಸಾಲದ ಮೊತ್ತ ಹಾಗೂ ಗ್ರಾಹಕರನ್ನು ಹೆಚ್ಚಿಸುತ್ತ ಹೋಗಿ. ಆಗಾಗ ಸಾಲದ ಹಣ ಕೇಳುತ್ತಾ ಇರಿ. ‘ಕೊಟ್ಟ ಸಾಲ ಕೇಳದೆ ಹೋಯ್ತು, ಮಾಡಿದ ಆರಂಬ (ಬೇಸಾಯ) ನೋಡದೆ ಹೋಯ್ತು’ ಅಂತ ಗಾದೆನೇ ಇದೆ. ಕೆಲವು ವ್ಯಾಪಾರಿಗಳು ಸಾಲ ಕೇಳಿದರೆ ಹೆಚ್ಚಿನ ಬೆಲೆಗೆ ಮಾರುತ್ತಾರೆ. ಇದು ಸರಿಯಾದ ಕ್ರಮ ಅಲ್ಲ. ಯಾಕೆಂದರೆ ಮೋಸ ಮಾಡುವ ಗ್ರಾಹಕ ಎಷ್ಟಕ್ಕೂ ಒಪ್ಪಿಕೊಳ್ಳುತ್ತಾನೆ. ನೀವು ‘ಕ್ಯಾಶ್​ಡಿಸ್ಕೌಂಟ್ ಕೊಡುತ್ತೇನೆ’ ಎಂದು ಆದಷ್ಟು ನಗದಿಗೆ ಮಾರಿ. ಲಾಭ ಕಡಿಮೆ ಆದ್ರೂ ಅಡ್ಡಿ ಇಲ್ಲ, ವಸೂಲಿಗೆ ಓಡಾಡೋ ಕೆಲಸ ಉಳಿಯುತ್ತೆ.

‘ಅಂದ್ಕೊಂಡೆ’ಗಳಾಗಬೇಡಿ: ಯಾವುದನ್ನೂ ಪರೀಕ್ಷಿಸದೆ ನಿರ್ಧಾರಕ್ಕೆ ಬರಬೇಡಿ. ನಾನು ಮ್ಯಾಜಿಕ್ ರಂಗದಲ್ಲಿ ಸಂಶೋಧಕನಾಗಿ ಹೆಸರುವಾಸಿ ಆಗಿದ್ದೀನಿ. ಒಮ್ಮೆ ನನ್ನ ಶಿಷ್ಯನೊಬ್ಬ, ‘ಇಲೆಕ್ಟ್ರಾನಿಕ್ ಉಪಕರಣದ ಬಳಿ ಮ್ಯಾಗ್ನೆಟ್ ತಂದರೆ ಉಪಕರಣ ಹಾಳಾಗುತ್ತದೆ’ ಅಂದ. ಮ್ಯಾಗ್ನೆಟ್ ಬಳಸದೆ ಅದನ್ನು ಮಾಡಲು ಸಾಧ್ಯವೇ ಇರಲಿಲ್ಲ. ಹಾಳಾದರೂ ಪರವಾಗಿಲ್ಲ, ಎಂದು ಪರೀಕ್ಷಿಸಿದೆ. ಆತನ ಊಹೆ ಸುಳ್ಳಾಗಿತ್ತು. ಈ ಐಟಂ ಸಾವಿರಾರು ಸಂಖ್ಯೆಯಲ್ಲಿ ಮಾರಿಹೋಯಿತು. ಊಹೆ ಬಹಳ ಸಂದರ್ಭಗಳಲ್ಲಿ ಸುಳ್ಳಾಗುತ್ತದೆ. ‘ಗಜಿಠಜ್ಛu ಠಿಜಜ್ಞಿkಜ್ಞಿಜ’ ಮಾಡುವವರೇ ಹೆಚ್ಚು. ‘ನೀವು ಇರಲ್ಲ ಅಂದ್ಕೊಂಡೆ’, ‘ಮಾಡಿರ್ತೀರಾ ಅಂದ್ಕೊಂಡೆ’- ಹೀಗೆ ಸಮರ್ಥನೆ ಕೊಡುತ್ತೀರಿ. ಅವರು ಏನು ಅಂದ್ಕೊಂಡ್ರು ಅನ್ನೋದನ್ನ ನೀವು ಹೇಗೆ ಅಂದ್ಕೋತೀರಿ, ಅಲ್ವಾ? ನೋಡದೇ, ಮಾಡದೇ, ಪರೀಕ್ಷಿಸದೇ ನಿರ್ಧಾರಕ್ಕೆ ಬರಬೇಡಿ. ‘ಅಂದ್ಕೊಂಡೆ’ಗಳನ್ನು ಹತ್ತಿರಕ್ಕೆ ಸೇರಿಸಬೇಡಿ.

ಚಟಗಳನ್ನು ತ್ಯಜಿಸಿ: ಚಟಗಳು ಬಿಜಿನೆಸ್ಸಿನ ಓಟಕ್ಕೆ ಕಡಿವಾಣ ಹಾಕುತ್ತವೆ. ನಿಮಗೆ ಧೂಮಪಾನ, ಮದ್ಯಪಾನ ಅಥವಾ ತಂಬಾಕಿನ ಚಟವಿದ್ದು ತ್ಯಜಿಸಬೇಕೆಂದು ತೀರ್ವನಿಸಿದಲ್ಲಿ ನಿಮ್ಮ ಮನಸ್ಸು ‘ಹೇಗೂ ಬಿಡುವುದೆಂದು ತೀರ್ವನಿಸಿದ್ದೀಯಲ್ಲಾ, ಇವತ್ತೊಂದಿನ ಅನುಭವಿಸಿ ನಂತರ ಬಿಡು’ ಎನ್ನುತ್ತದೆ. ಹೀಗೆ ಪ್ರತಿ ದಿನವೂ ನಿಮ್ಮ ಮನಸ್ಸು ಹೇಳುವುದರಿಂದ, ಅದನ್ನೇ ಮುಂದುವರಿಸುತ್ತೀರಿ! ಬದಲಿಗೆ ಗಟ್ಟಿ ಮನಸ್ಸಿನಿಂದ ಒಂದೇ ಒಂದು ವಾರ ಬಿಡುವ ತೀರ್ಮಾನ ಮಾಡಿ ತಕ್ಷಣ ಬಿಟ್ಟುಬಿಡಿ. ನಂತರ ಮತ್ತೊಂದು ವಾರ ಮುಂದುವರಿಸಿ. ಇದರಿಂದ ನಿಮ್ಮ ‘ಗಜಿಠಿಜಛ್ಟಚಡಿಚ್ಝ ಠಢಞಟಠಿಟಞಠ’ ಕಡಿಮೆಯಾಗುತ್ತದೆ. ಕ್ರಮೇಣ ಚಟ ಬಿಟ್ಟುಹೋಗುತ್ತದೆ.

ಲೆಕ್ಕಾಚಾರ ಸರಿ, ಆದರೆ: ನನ್ನ ಶಿಷ್ಯ ಸೂರ್ಯ ಕ್ರೂಸ್ ಶಿಪ್​ಗಳಲ್ಲಿ ಮ್ಯಾಜಿಕ್ ಶೋಗಳನ್ನು ಮಾಡಿ ಚೆನ್ನಾಗಿ ದುಡ್ಡು ಸಂಪಾದಿಸಿ ವಾಪಸ್ ಬಂದ. ಬಂದವನೇ ಒಂದು ಸೂಪರ್ ಐಡಿಯಾ, ಲಕ್ಷಗಟ್ಟಲೆ ದುಡ್ಡು ಮಾಡಬಹುದೆಂದು ಹೇಳಿದ-‘ಅಮೆಜಾನ್​ಗೆ 10 ಕೋಟಿ ಸಬ್​ಸ್ಕೈ›ಬರ್ಸ್ ಇದ್ದಾರೆ, ಇದರಲ್ಲಿ ಒಂದು ಪರ್ಸೆಂಟ್ ಜನ ಆದ್ರೂ ನಮ್ಮ ಮ್ಯಾಜಿಕ್ ಕಿಟ್ ತಗೊಂಡ್ರೆ ಒಂದಕ್ಕೆ ನೂರು ರೂಪಾಯಿ ಲಾಭ ಸಿಕ್ಕಿದ್ರೂ ಕೋಟಿ ಮಾಡ್ಬಹುದು’ ಅಂದ. ಲೆಕ್ಕಾಚಾರ ಏನೋ ಸರಿಯಾಗಿಯೇ ಇತ್ತು. ಅದು ಹರೋಗರ ಜಾತ್ರೆಯ ನನ್ನ ಅನುಭವವನ್ನು ನೆನಪಿಸಿತು. ಶಿವಮೊಗ್ಗದ ಗುಡ್ಡೇಕಲ್ಲಿನಲ್ಲಿ ಪ್ರತಿವರ್ಷ ಹರೋಗರ ಜಾತ್ರೆ ನಡೀತದೆ. ನನಗಾಗ ಹದಿನೈದನೇ ವಯಸ್ಸು. ಮ್ಯಾಜಿಕ್ ಶೋಗಳನ್ನು ಪ್ರಾರಂಭಿಸಿದ್ದೆ ಅಷ್ಟೆ. ಆಗ ನಮ್ಮೂರಲ್ಲಿ ಅಚ್ಯುತ ರಾವ್ ಅನ್ನೋ ಟೇಲರ್ ಇದ್ರು. ಅವರು ಒಂದಿನ ‘ಅಲ್ಲಿ ಇಲ್ಲಿ ಶೋ ಮಾಡ್ತಾ ಯಾಕೋ ಒದ್ದಾಡ್ತೀಯಾ? ಮಾಡಿದ್ರೆ ಹರೋಗರ ಜಾತ್ರೆಯಲ್ಲಿ ಮಾಡ್ಬೇಕು, ಲಕ್ಷಗಟ್ಟಲೆ ಸಂಪಾದಿಸ್ಬಹುದು’ ಅಂದ್ರು. ನಾನು ಆಸೆಗಣ್ಣಿಂದ ಅವರನ್ನೇ ನೋಡಿದೆ. ‘ನೋಡಪ್ಪಾ, ಜಾತ್ರೆ ದಿನ ಒಂದು ಲಕ್ಷವಾದ್ರೂ ಜನ ಬರ್ತಾರೆ. ಟಿಕೆಟ್​ಗೆ ಐದು ರೂಪಾಯಿ ಇಟ್ರೂನೂ ಐದು ಲಕ್ಷ ಆಯ್ತು, ಬೇಡಾ ಐವತ್ತು ಸಾವಿರ ಜನಾ ಅಂತ್ಲೇ ಅಂದ್ಕೊಳ್ಳೋಣ, ಆಗ್ಲೂ ಎರಡೂವರೆ ಲಕ್ಷ ಆಯ್ತು, ಬೇಡಪ್ಪ, ಬರೇ ಹತ್ತು ಪರ್ಸೆಂಟ್ ಜನಾನೇ ಬಂದ್ರೂ ಐವತ್ತು ಸಾವಿರ ಸಿಗುತ್ತಲ್ಲಾ?’ ಅಂದಾಗ ಮನಸ್ಸು ಒಪ್ಪಿತು. ‘ಬೆಳಗ್ಗೆ ಸಿಕ್ಕಾಪಟ್ಟೆ ಜನಸಂದಣಿ ಇರುತ್ತೆ. ವೆಹಿಕಲ್ ತಗೊಂಡು ಹೋಗೊಕ್ಕೆ ಆಗೋಲ್ಲಾ. ಅದಕ್ಕೆ ರಾತ್ರೀನೇ ಹೋಗಿ ಟೆಂಟ್ ಹಾಕ್ಬೇಕು. ಟಿಕೆಟ್ ಕೊಡೋದಕ್ಕೆ ನಾನೂ ಬರ್ತೀನಿ’ ಎಂದೂ ಸೇರಿಸಿದರು. ರಾತ್ರಿನೇ ನನ್ನ ಗಿಟಾರಿಸ್ಟ್ ಪ್ರೇಮ್ುಮಾರ್, ಡ್ರಮ್ಮರ್ ಪಡಿಯಾರ್, ಮೈಕ್ ಕಾಮತ್ ಹಾಗೂ ನನ್ನ ತಮ್ಮ ಚಿದ್ದುವಿನೊಡನೆ ಹೋಗಿ ಟೆಂಟ್ ಹಾಕಿ ಸೊಳ್ಳೆಗಳೊಂದಿಗೆ ಮಲಗಿದ್ವಿ. ನಿದ್ರೆ ಇಲ್ಲದೇ ರಾತ್ರಿ ಕಳೆದು, ಬೇಗ ಎದ್ದು ಬ್ಯಾನರ್ ಕಟ್ಟಿ ಮೈಕಲ್ಲಿ ಪ್ರಚಾರಾನೂ ಶುರು ಮಾಡಿದ್ವಿ. ಟೆಂಟ್ ಹೊರಗೆ ಎತ್ತರದಲ್ಲಿ ಸ್ಟೇಜಿನ ಮೇಲೆ ಮ್ಯಾಜಿಕ್ ತೋರಿಸ್ತಾ ನಿಂತ್ಕೊಂಡೆ. ಗಂಟೆ ಹತ್ತಾಯ್ತು, ಹನ್ನೆರಡಾಯ್ತು, ಗಲ್ಲಕ್ಕೆ ತ್ರಿಶೂಲ ಚುಚ್ಚಿಕೊಂಡ ಕೆಲವರು ಮೈಮೇಲೆ ದೇವರು ಬಂದಂತೆ ಹರೋಗರಾ ಹರೋಗರಾ ಎಂದು ನರ್ತಿಸುತ್ತಿದ್ದರೆ ಇನ್ನು ಕೆಲವರು ಅವರನ್ನು ಹಿಡಿದುಕೊಂಡು ದೇವಸ್ಥಾನದ ಕಡೆಗೆ ಹೋಗ್ತಾ ಇದ್ರು. ನಾವು ನಿರಾಶೆಯಿಂದ ಹ್ಯಾಪ್ ಮೋರೆ ಹಾಕ್ಕೊಂಡು ಕೂತಿದ್ವಿ. ಅಚ್ಯುತ ರಾಯರು ‘ಇವ್ರಿಗೆ ರೇಟು ಸ್ವಲ್ಪ ಜಾಸ್ತಿ ಆಯ್ತೇನೋ ಅನ್ಸುತ್ತೆ’ ಅಂದ್ರು. ರೇಟು ಇಳಿಸುತ್ತಾ ಕೊನೆಗೆ 5 ರೂಪಾಯಿಂದ 50 ಪೈಸೆಗೆ ಬಂದು ತಲುಪಿದೆ. ಸಂಜೆ ಆಗ್ತಾ ಬಂತು. ಊಹೂಂ ಬೋಣಿನೇ ಆಗಲಿಲ್ಲ. ಕೊನೆಗೆ ಅಂಗಡಿ ಹಾಕಿದವರಿಗಾಗಿ ಒಂದು ಶೋ ಉಚಿತವಾಗಿ ಮಾಡಿದೆ. ಅತ್ತ ಅಚ್ಯುತ ರಾಯರು ಮಾಯವಾಗಿದ್ದರು! ಯಾರಾದ್ರೂ ಅಂಕಿ-ಅಂಶಗಳ ಮೇಲೆ ಲಾಭದ ಲೆಕ್ಕ ಹಾಕಿದ್ರೆ ಅದೆಲ್ಲ ಕೈಗೂಡುತ್ತೆ ಅಂತ ಅಂದ್ಕೋಬೇಡಿ. ಅಂಥ ಲೆಕ್ಕಕ್ಕೆ ನಾವು ‘ಅಚ್ಯುತ್ ರಾವ್ ಲೆಕ್ಕ’ ಅಂತ ಹೆಸರಿಟ್ಟಿದ್ದೀವಿ.

ಜೋಕು: ನನ್ನ ಲೇಖನ ಓದಿದ ಮಹಿಳೆಯೊಬ್ಬಳು ಕರೆ ಮಾಡಿ, ‘ಸರ್, ನಮ್ ಯಜಮಾನ್ರು ನಮ್ಮ ಚಿಕನ್ ಅಂಗಡಿಯಲ್ಲಿ ಕೂರ್ತಾನೇ ಇಲ್ಲ, ಇಸ್ಪೀಟ್ ಆಡೋಕೆ ಹೋಗಿಬಿಡ್ತಾರೆ, ವ್ಯಾಪಾರಾನೇ ಇಲ್ಲ, ಏನ್ ಮಾಡ್ಲಿ?’ ಅಂತ ಸಲಹೆ ಕೇಳಿದಳು. ನಾನು ಕೆಲವು ಸಲಹೆ ಕೊಟ್ಟೆ. ಅವಳಿಗೆ ಸಮಾಧಾನವಾಗಲಿಲ್ಲ. ಕೊನೆಗೆ ತಮಾಷೆಗೆ ‘ಚಿಕನ್ ಕಾಲನ್ನು ಕತ್ತರಿಸಿ ಅಂಗಡಿಯಲ್ಲಿ ನೇತುಹಾಕಮ್ಮಾ’ ಅಂದೆ. ಸ್ವಲ್ಪ ದಿನದ ನಂತ್ರ ಆಕೆ ‘ಸರ್, ಈಗ ವ್ಯಾಪಾರ ಚೆನ್ನಾಗಿದೆ, ಅವ್ರೂ ಅಂಗ್ಡೀಲೇ ಮೂರು ಹೊತ್ತೂ ಬಿದ್ಕೊಂಡು ಇರ್ತಾರೆ, ತುಂಬ ಥ್ಯಾಂಕ್ಸ್’ ಅಂತ ಹೇಳಿದಾಗ ಆಶ್ಚರ್ಯದಿಂದ ‘ಏನ್ಮಾಡಿದ್ಯಮ್ಮಾ?’ ಅಂದೆ. ‘ನೀವು ಹೇಳಿದ ಹಾಗೆ ಕಾಲನ್ನ ಕಟ್ ಮಾಡಿ ನೇತು ಹಾಕಿದ್ದೀನಿ, ಅದನ್ನ ನೋಡೋಕೆ ಜನ ಬರ್ತಾ ಇದ್ದಾರೆ’ ಅಂದ್ಲು. ಗಾಬರಿಯಿಂದ ಕೇಳಿದೆ- ‘ಯಾರ್ದು ಕಾಲು?’ ಅದಕ್ಕೆ ಆಕೆ- ‘ಕೋಳಿದು ಮತ್ತೆ ನಮ್ಮ ಯಜಮಾನರದ್ದು’ ಅನ್ನಬೇಕೆ!

(ಲೇಖಕರು ಖ್ಯಾತ ಜಾದೂಗಾರರು, ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net