

ಭಾರತವನ್ನು ಸ್ವಾವಲಂಬಿಯಾಗಿಸುವ ಚರ್ಚೆ ಇತ್ತೀಚಿನ ದಿನಗಳಲ್ಲಿ ಗರಿಗೆದರಿದೆ. ಪ್ರಮುಖ ಕ್ಷೇತ್ರಗಳಲ್ಲಿ ವಿದೇಶಗಳ ಮೇಲಿನ ಅವಲಂಬನೆಯನ್ನು ತಪ್ಪಿಸುವ ಜತೆಗೆ, ಇಲ್ಲಿನ ಪಾರಂಪರಿಕ ಗೃಹಉದ್ಯೋಗ ಸೇರಿ, ಹಲವಾರು ವಲಯಗಳನ್ನು ಸಬಲೀಕರಣಗೊಳಿಸುವುದು ಇದರ ಉದ್ದೇಶ. ಪ್ರಧಾನಿ ನರೇಂದ್ರ ಮೋದಿ ಇದಕ್ಕೆ ‘ಆತ್ಮನಿರ್ಭರ ಭಾರತ’ವೆಂದು ಕರೆದು, ಈ ಉದ್ದೇಶಕ್ಕಾಗಿ ಕೆಲಸ ಮಾಡುವ ಶಕ್ತಿಗಳು ಹೆಚ್ಚಬೇಕಿವೆ ಎಂದು ಕರೆ ನೀಡಿದರು. ಅದರ ಪರಿಣಾಮವೂ ಈಗಾಗಲೇ ಹಲವಾರು ಕ್ಷೇತ್ರಗಳಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಚೀನಾದಿಂದ ಆಮದನ್ನು ತಗ್ಗಿಸುವ ಪ್ರಯತ್ನ ಆರಂಭವಾಗಿದೆ. ರಕ್ಷಣೆ, ಬೃಹತ್, ಮಧ್ಯಮ ಕೈಗಾರಿಕೆಗಳಲ್ಲಿ ದೇಶೀಯತೆಗೆ ಒತ್ತು ನೀಡಲಾಗಿದೆ. ಇಷ್ಟು ಮಾತ್ರವಲ್ಲದೆ, ನಮ್ಮ ಸಂಪ್ರದಾಯಕ್ಕೆ ಅನುರೂಪವಾದ ಚಟುವಟಿಕೆಗಳಿಗೆ ವೃತ್ತಿಪರ ಮತ್ತು ಆರ್ಥಿಕತೆಯ ಸ್ಪರ್ಶ ನೀಡುತ್ತಿರುವುದು ಮಹತ್ವದ ಬೆಳವಣಿಗೆ. ಇದರ ಭಾಗವಾಗಿಯೇ, ಕಳೆದ ಕೆಲ ವರ್ಷಗಳಿಂದ ಚೀನಾದ ಪಟಾಕಿಯನ್ನು, ಆ ದೇಶದ ಇತರ ಉತ್ಪನ್ನಗಳನ್ನು ಬಹಿಷ್ಕರಿಸಲಾಗುತ್ತಿದೆ. ಈ ಪ್ರಯತ್ನ ಜನಾಂದೋಲನದ ಸ್ವರೂಪವೂ ಪಡೆದುಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ.
ಇದರ ಮುಂದುವರಿದ ಭಾಗವಾಗಿ ರಾಷ್ಟ್ರೀಯ ಕಾಮಧೇನು ಆಯೋಗ ಮಹತ್ವದ ಹೆಜ್ಜೆಯನ್ನು ಇರಿಸಿ, ಹೊಸ ಸಾಧ್ಯತೆಗಳನ್ನು ಅನುಷ್ಠಾನದ ರೂಪದಲ್ಲಿ ತರುತ್ತಿದೆ. ಪರಿಸರಸ್ನೇಹಿ ದೀಪಾವಳಿಗೆ ಅನುಕೂಲವಾಗುವಂತೆ ಗೋಮಯದಿಂದ (ಸಗಣಿ) ತಯಾರಿಸಲಾದ ಹಣತೆ ಬಳಸುವ ಬೃಹತ್ ಆಂದೋಲನಕ್ಕೆ ಅದು ಮುಂದಾಗಿದೆ. ಈ ನಿಟ್ಟಿನಲ್ಲಿ ಗೋಮಯದಿಂದ 33 ಕೋಟಿ ಹಣತೆಗಳನ್ನು ತಯಾರಿಸುವ ಹಾಗೂ ಬಳಸುವ ಉದ್ದೇಶ ಹೊಂದಲಾಗಿದೆ. ಈ ಅಭಿಯಾನದಲ್ಲಿ ಭಾಗವಹಿಸಲು ಕೇರಳ, ತಮಿಳುನಾಡು, ಛತ್ತೀಸ್ಗಢ, ಗುಜರಾತ್, ಉತ್ತರಪ್ರದೇಶ, ಮಧ್ಯಪ್ರದೇಶ ಸೇರಿ 15 ರಾಜ್ಯಗಳು ಒಪ್ಪಿಗೆ ಸೂಚಿಸಿವೆ. ದೀಪಾವಳಿಯನ್ನು ಭಾರತದಾದ್ಯಂತ ಸಡಗರದಿಂದ ಆಚರಿಸಲಾಗುತ್ತದೆಯಲ್ಲದೆ, ಅಯೋಧ್ಯೆಯಲ್ಲಿ 3 ಲಕ್ಷ, ಕಾಶಿಯಲ್ಲಿ 1 ಲಕ್ಷ ಹಣತೆಗಳನ್ನು ಬೆಳಗಲಾಗುತ್ತದೆ. ಮೊಬೈಲ್ ವಿಕಿರಣ ಪ್ರತಿಬಂಧಿಸುವ ‘ಗೋಸತ್ವ ಕವಚ’ ಚಿಪ್ ಅನ್ನೂ ಬಿಡುಗಡೆ ಮಾಡಲಾಗಿದೆ.
ಇದೆಲ್ಲವೂ ಮತ್ತೆ ಮೂಲಕ್ಕೆ ಮರಳುವ ಪ್ರಯತ್ನಗಳು. ನಮ್ಮ ದೇಶದಲ್ಲಿ ದೊರೆಯುವ ಸಂಪನ್ಮೂಲಗಳಿಂದಲೇ ಪರಿಸರಸ್ನೇಹಿಯಾದ, ಜನೋಪಯೋಗಿಯಾದ ಉತ್ಪನ್ನಗಳನ್ನು ತಯಾರಿಸಬಹುದಾದರೆ ಸುಖಾಸುಮ್ಮನೆ ಬೇರೆ ದೇಶಗಳನ್ನು ಏಕೆ ಅವಲಂಬಿಸಬೇಕು? ಇಂಥ ಕ್ರಮಗಳಿಂದ ಭಾರತದ ಆರ್ಥಿಕ ಚಟುವಟಿಕೆಗಳು ತೀವ್ರಗೊಳ್ಳಲು, ಉದ್ಯೋಗಸೃಷ್ಟಿಯಾಗಲು ಮತ್ತು ಗೃಹೋದ್ಯಮದಂಥ ಪಾರಂಪರಿಕ ಮತ್ತು ಸುಸ್ಥಿರ ಅಭಿವೃದ್ಧಿಯ ಕ್ರಮಗಳು ಮತ್ತಷ್ಟು ಬಲಿಷ್ಠವಾಗಲು ಸಾಧ್ಯವಾಗಲಿದೆ. ಜನಸಾಮಾನ್ಯರಿಗೂ ದೇಶೀಯ ಉತ್ಪನ್ನಗಳ ಮಹತ್ವ ಅರಿವಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದಕ್ಕೆ ಉತ್ತೇಜನ ನೀಡುವಂತಾದರೆ, ಕಾಮಧೇನು ಆಯೋಗದಂತೆಯೇ ಉಳಿದ ಸಂಸ್ಥೆಗಳು, ಕೈಗಾರಿಕೆಗಳು ಮಹತ್ವದ ಹೆಜ್ಜೆಯನ್ನು ಇರಿಸಬಲ್ಲವು. ಸರ್ಕಾರದ ಪ್ರೋತ್ಸಾಹ ದೊರೆತರೆ ಸ್ವದೇಶಿ ಚಿಂತನೆಗೆ ಮತ್ತಷ್ಟು ಬಲ ಬರುವುದರಲ್ಲಿ ಸಂಶಯವಿಲ್ಲ. ಆರ್ಥಿಕತೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಲು ಉತ್ಸುಕವಾಗಿರುವ ಭಾರತ ತನ್ನ ಶಕ್ತಿ ಅರಿತುಕೊಂಡು, ಜನಸಹಭಾಗಿತ್ವದೊಂದಿಗೆ ಮುಂದಡಿ ಇಟ್ಟರೆ, ನಿಜಕ್ಕೂ ಅಭಿವೃದ್ಧಿಯ ಹೊಸ ಮತ್ತು ಸಾರ್ಥಕ ಮಾದರಿ ಸಾಧಿಸಲು ಸಾಧ್ಯ.