ದಿಕ್ಸೂಚಿ ಅಂಕಣ: ಭಾರತೀಯ ಪರಂಪರೆಗೆ ನಮಸ್ತೆ!

Namaste
Published on

ಈಗಿನ ಕರೊನಾ ಆತಂಕದ ಕಾಲದಲ್ಲಾದರೂ ಭಾರತೀಯ ಪರಂಪರೆಯ ಉತ್ತಮಾಂಶಗಳನ್ನು ಅಳವಡಿಸಿಕೊಳ್ಳುವ ಯತ್ನ ಸಾಮೂಹಿಕವಾಗಿ ಆದಲ್ಲಿ ಒಳಿತೇ ಅಲ್ಲವೆ? ಭಾರತೀಯವಾದುದು ಎಂದಾಕ್ಷಣ ಎಲ್ಲವನ್ನೂ ಕಣ್ಮುಚ್ಚಿ ಸ್ವೀಕರಿಸಬೇಕು ಎಂದಲ್ಲ, ಪರೀಕ್ಷಿಸಿ, ಸತ್ವ ಇದ್ದರೆ ಒಪ್ಪಬಹುದು.

ಕಣ್ಣಿಗೆ ಕಾಣುವ ಶತ್ರುವಾದರೆ ಹೇಗೋ ಎದುರಿಸಬಹುದು. ಸೋಲೋ ಗೆಲುವೋ ಯುದ್ಧವನ್ನಂತೂ ಮಾಡಬಹುದು. ಹಿಂದೆ ರಾಕ್ಷಸರು

ಮಾಯಾಯುದ್ಧ ಮಾಡುತ್ತಿದ್ದರಂತೆ. ಆಗ ರಾಮ, ಶ್ರೀಕೃಷ್ಣರಂತಹ ಭಗವದವತಾರಿಗಳಿಗೇ ಇಂಥ ಸನ್ನಿವೇಶಗಳು ಎದುರಾಗಿದ್ದವು ಎಂದಮೇಲೆ ಉಳಿದವರ ಪಾಡೇನು? ಯಾವ ಕ್ಷಣದಲ್ಲಿ ಎಲ್ಲಿಂದ ಬರುತ್ತಾರೋ ಎಂಬಂಥ ಅಯೋಮಯ ಪರಿಸ್ಥಿತಿ. ಭೂಮಿಯಿಂದ, ಆಗಸದಿಂದ, ಛದ್ಮವೇಷದಿಂದ... ಹೀಗೆ ರಕ್ಕಸರ ಚೇಷ್ಟೆಗಳಿಗೆ ಮಿತಿಯೇ ಇರಲಿಲ್ಲ. ಈಗಲೂ ಸರಿಸುಮಾರು ಅಂಥದೇ ಸನ್ನಿವೇಶ ನಿರ್ವಣವಾಗಿದೆ. ಕರೊನಾ ಎಂಬ ಮಹಾಮಾರಿ ಯಾರಿಂದ ಯಾವಾಗ ಎಲ್ಲಿ ಹೇಗೆ ಬಂದು ವಕ್ಕರಿಸುತ್ತದೆಯೋ ಎಂಬ ಭೀತಿ ಜಗತ್ತಿನಾದ್ಯಂತ ಸೃಷ್ಟಿಯಾಗಿರುವುದನ್ನು ಕಾಣುತ್ತಿದ್ದೇವೆ. ಬಹುತೇಕ ಇಡೀ ಜಗತ್ತು ದಿಗ್ಬಂಧನದಲ್ಲಿದೆ (ಲಾಕ್​ಡೌನ್). ಹೊರಗೆ ಕಾಲಿಟ್ಟರೆ ಎಲ್ಲಿ ಕರೊನಾ ಬಂದುಬಿಡುತ್ತದೋ ಎಂಬ ಭಯ. ಅಕ್ಕಪಕ್ಕದಲ್ಲಿ ಯಾರಾದರೂ ಸೀನಿದರೆ ಕರೊನಾ ಕಣ್ಣೆದುರು ಕುಣಿದಂತಾಗುತ್ತದೆ. ಯಾರಾದರೂ ಜ್ವರ ಎಂದರೆ ನಮಗೆ ಮೈಚಳಿಯಾಗುತ್ತದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚಾರಕ್ಕೂ ಆಸ್ಪದ ಇಲ್ಲ. ಏಪ್ರಿಲ್ 14ರವರೆಗೆ ಲಾಕ್​ಡೌನ್ ಘೋಷಣೆಯಾಗುತ್ತಿದ್ದಂತೆಯೇ, ಬೆಂಗಳೂರಿನಲ್ಲಿ ನೆಲೆಸಿರುವ ಲಕ್ಷಾಂತರ ಜನರ ಪೈಕಿ ಅನೇಕರು ಊರಿನತ್ತ ತೆರಳಲು ಧಾವಿಸಿದರು. ಈಗ ಕೆಲವೆಡೆ ಹೀಗೆ ಬಂದವರನ್ನೇ ಅನುಮಾನದಿಂದ ನೋಡುವ ಸನ್ನಿವೇಶ ಉಂಟಾಗಿದೆಯೆಂದರೆ ಈ ಕರೊನಾ ಉಂಟುಮಾಡಿರುವ ಸ್ಥಿತಿ ಏನೆಂಬುದು ಸುಲಭದಲ್ಲಿ ಮನದಟ್ಟಾಗುತ್ತದೆ. ಭಯೋತ್ಪಾದಕರಿಗೂ ಕರೊನಾ ಭಯ ಉಂಟಾಗಿದೆಯೆಂದ ಮೇಲೆ ಇನ್ನೇನುಳಿಯಿತು!

2019ರ ಡಿಸೆಂಬರ್ 31ರಂದು ಚೀನಾವು ವಿಶ್ವ ಆರೋಗ್ಯ ಸಂಸ್ಥೆಗೆ ನೀಡಿದ ವರದಿ ನಂತರದಲ್ಲಿ ಕರೊನಾ ವೈರಸ್ ವಿಚಾರ ಬಹಿರಂಗವಾಯಿತು. ಹುಬೆ ಪ್ರಾಂತ್ಯದ ವುಹಾನ್ ನಗರದಲ್ಲಿ ನ್ಯುಮೊನಿಯಾದ ಹಲವು ಪ್ರಕರಣಗಳು ಕಂಡಿಬಂದಿರುವುದಾಗಿಯೂ, ಇದಕ್ಕೆ ಕಾರಣ ಗೊತ್ತಾಗಿಲ್ಲವೆಂದೂ ಚೀನಾ ಸರ್ಕಾರ ತಿಳಿಸಿತ್ತು. ಅಷ್ಟರ ನಂತರದಲ್ಲಿ ಈ ವೈರಸ್ ಬೇಗಬೇಗ ಚೀನಾದ ಇತರ ನಗರಗಳಿಗೆ ಮತ್ತು ಅನ್ಯದೇಶಗಳಿಗೆ ಹಬ್ಬತೊಡಗಿತು. ಈಗ ಬಹುತೇಕ ಇಡೀ ವಿಶ್ವ ಕರೊನಾ ಕಬಂಧಬಾಹುವಿನಲ್ಲಿ ಸಿಲುಕಿರುವುದು ಗೊತ್ತೇ ಇದೆ. ಅಮೆರಿಕದಂತಹ ಅಮೆರಿಕವೇ ಪತರಗುಡುತ್ತಿದೆ. ಭಾರತದಲ್ಲಿ ವೈರಸ್ ಮೂರನೇ ಹಂತಕ್ಕೆ ಹೋಗದಂತೆ ತಡೆಯುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಇದೆಲ್ಲ ಒಂದೆಡೆಯಾಯಿತು, ಅಸಲಿಗೆ ಈ ವೈರಸ್ ಹೇಗೆ ಜನ್ಮತಾಳಿತು ಅಥವಾ ಕಾಣಿಸಿಕೊಳ್ಳಲು ಕಾರಣವೇನು ಎಂಬುದು ಮಾತ್ರ ನಿಗೂಢವಾಗಿಯೇ ಇದೆ. ಈ ಬಗ್ಗೆ ಭಿನ್ನ ಭಿನ್ನ ವರದಿಗಳಿವೆಯಾದರೂ ಅಧಿಕೃತವಾಗಿ ಯಾವುದೂ ದೃಢಪಟ್ಟಿಲ್ಲ. ಕೆಲವರು ಹೇಳುವ ಪ್ರಕಾರ, ಚೀನಾ ಜೈವಿಕ ಅಸ್ತ್ರದ ತಯಾರಿ ಅಂಗವಾಗಿ ಕೈಗೊಂಡ ಸಂಶೋಧನೆಯಲ್ಲಿ ಆಕಸ್ಮಿಕವಾಗಿ ಆದ ಸೋರಿಕೆಯಿಂದ ಅಥವಾ ಪ್ರಮಾದದಿಂದ ಈ ವೈರಸ್ ಉತ್ಪತ್ತಿಯಾಗಿದೆ. ಇನ್ನು ಕೆಲವರ ಪ್ರಕಾರ, ಇದಕ್ಕೆಲ್ಲ ಚೀನಾದ ಲಂಗುಲಗಾಮಿಲ್ಲದ ಆಹಾರ ಹವ್ಯಾಸವೇ ಕಾರಣ. ಭೂಮಿಯ ಮೇಲಿನ ಯಾವ ಪ್ರಾಣಿಯನ್ನೂ ಬಿಡದೆ ಭಕ್ಷಿಸಿದರೆ ರೋಗ ಬರದಿರುತ್ತದೆಯೇ ಎಂದು ಇವರು ಪ್ರಶ್ನಿಸುತ್ತಾರೆ. ಇನ್ನೂ ಕೆಲವರು, ‘ಛೇ ಛೇ ಇಂಥದೇನಿಲ್ಲ. ಇದು ನಿಸರ್ಗದಲ್ಲಿ ಆಕಸ್ಮಿಕವಾಗಿ ಸೃಷ್ಟಿಯಾದ ವೈರಸ್’ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಈ ರಹಸ್ಯ ಬಗೆಹರಿಯುವ ಸಾಧ್ಯತೆ ಕಡಿಮೆ. ಕಾರಣ- ಚೀನಾದ ಕಮ್ಯುನಿಸ್ಟ್ ಆಡಳಿತ. ಅಲ್ಲಿ ಮಾಧ್ಯಮ ನಿರ್ಬಂಧ ಇದೆ. ಚೀನಾ ಸರ್ಕಾರದ ಅಧಿಕೃತ ವಾರ್ತಾಸಂಸ್ಥೆ ಯಾವ ಸುದ್ದಿಯನ್ನು ನೀಡುತ್ತದೆಯೋ ಉಳಿದವರು ಅದನ್ನು ಮಾತ್ರ ಕೊಡಬೇಕು. ಆದ್ದರಿಂದ ಅಲ್ಲಿನ ವಾಸ್ತವ ಏನು ಎಂಬ ಚಿತ್ರಣ ಯಾರಿಗೂ ಸರಿಯಾಗಿ ಇಲ್ಲ. ‘ಕರೊನಾ ವೈರಸ್ ವಿಚಾರ ಅಲ್ಲಿನ ನಾಯಕರಿಗೆ ಮುಂಚೆಯೇ ತಿಳಿದಿತ್ತು. ಆದರೆ ಹೊರಜಗತ್ತಿಗೆ ತಿಳಿಸಿರಲಿಲ್ಲ’ ಎನ್ನುತ್ತಾರೆ, ಮಾಜಿ ರಾಯಭಾರಿ ಎನ್.ಪಾರ್ಥಸಾರಥಿ. ಅದೇ ಕರೊನಾದಂಥ ಸನ್ನಿವೇಶ ಭಾರತದಂಥಲ್ಲಿ ಸಂಭವಿಸಿದ್ದರೆ...? ಇಷ್ಟೊತ್ತಿಗೆ ಜಗತ್ತಿನ ಮಾಧ್ಯಮಗಳೆಲ್ಲ ಇಲ್ಲಿನ ಇಂಚಿಂಚೂ ಚಿತ್ರಣವನ್ನು ಕ್ಷಣಕ್ಷಣಕ್ಕೂ ಹೊರಜಗತ್ತಿಗೆ ತೆರೆದಿಡುತ್ತಿದ್ದವು. ‘ಚೀನಾ ಕರೊನಾ ವೈರಸ್ಸನ್ನು ಸೃಷ್ಟಿಸಿಯೂ ಇಲ್ಲ; ಅದನ್ನು ಹೊರಜಗತ್ತಿಗೆ ಹರಡಿಯೂ ಇಲ್ಲ. ಹೀಗಾಗಿ, ಇದನ್ನು ಚೀನಿ ವೈರಸ್ ಅಥವಾ ವುಹಾನ್ ವೈರಸ್ ಎಂದು ಹಣೆಪಟ್ಟಿ ಹಚ್ಚುವುದು ತಪು್ಪ. ಈ ಸಾಂಕ್ರಾಮಿಕ ರೋಗದ ವಿರುದ್ಧ ಚೀನಾ ತ್ವರಿತವಾಗಿ ಕೈಗೊಂಡ ನಿಯಂತ್ರಣ ಕ್ರಮಗಳ ಬಗ್ಗೆ ಜಗತ್ತು ಗಮನಹರಿಸಬೇಕೆ ಹೊರತು ಚೀನೀಯರನ್ನು ದೂರುವುದು ಸಲ್ಲದು’ ಎಂದು ಬೇರೆ ಚೀನಾ ಹೇಳಿರುವುದರಿಂದ, ಕರೊನಾ ಗುಟ್ಟು ಹಾಗೇ ಉಳಿಯುವುದರಲ್ಲಿ ಅನುಮಾನವಿಲ್ಲ.

ಸದ್ಯ ಈ ವೈರಸ್ ಸೋಂಕಿಗೆ ನಿರ್ದಿಷ್ಟ ಚಿಕಿತ್ಸೆ ಅಥವಾ ಲಸಿಕೆ ಲಭ್ಯವಿಲ್ಲ. ಕೆಮ್ಮು, ನೆಗಡಿ, ಜ್ವರದ ಲಕ್ಷಣಗಳ ಆಧಾರದ ಮೇಲೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಹೀಗಾಗಿ ಕರೊನಾ ವೈರಸ್ ಬಗ್ಗೆ ಅನಗತ್ಯವಾಗಿ ಭಯಪಡದೆ ಸರಿಯಾದ ಮಾಹಿತಿ ಪಡೆದು ಮುನ್ನೆಚ್ಚರಿಕೆ ವಹಿಸುವುದೂ ಮುಖ್ಯವಾಗುತ್ತದೆ. ಇನ್ನು, ಈ ಹೊಸ ಕಾಯಿಲೆಗೆ ಮದ್ದು ಕಂಡುಹಿಡಿಯುವ ಯತ್ನವನ್ನು ವೈದ್ಯಲೋಕ ಮುಂದುವರಿಸಿದೆ. ಅಮೆರಿಕದಲ್ಲಿ ಈಗಾಗಲೇ ಕ್ಲಿನಿಕಲ್ ಟ್ರಯಲ್(ಅಂದರೆ ಪ್ರಾಣಿಗಳ ಮೇಲೆ ಔಷಧ ಪ್ರಯೋಗಿಸಿದ ನಂತರದಲ್ಲಿ ಮನುಷ್ಯರ ಮೇಲೆ ಪ್ರಯೋಗಿಸಿ ಅದರ ಪರಿಣಾಮಕಾರಿತ್ವ ದೃಢಪಡಿಸಿಕೊಳ್ಳುವುದು. ನಂತರದಲ್ಲಿ, ಸರ್ಕಾರ ಸಮ್ಮತಿ ನೀಡಿದ ಮೇಲಷ್ಟೇ ಆ ಔಷಧ ಸಾರ್ವಜನಿಕ ಬಳಕೆಗೆ ಮುಕ್ತವಾಗುತ್ತದೆ) ಗೆ ಚಾಲನೆ ನೀಡಲಾಗಿದೆ. ಚೀನಾ ಕೂಡ ಲಸಿಕೆ ಅಭಿವೃದ್ಧಿಪಡಿಸಿರುವುದಾಗಿ ಹೇಳಿದೆ.ಜರ್ಮನಿಯಲ್ಲೂ ಯತ್ನ ನಡೆದಿದೆ. ಆದಷ್ಟು ಬೇಗ ಈ ಯತ್ನ ಯಶಸ್ವಿಯಾಗಲಿ, ಮನುಕುಲದ ಈ ಹೆಮ್ಮಾರಿ ಮತ್ತೆಂದೂ ತಿರುಗಿಬಾರದಂತೆ ತೊಲಗಲಿ ಎಂದು ಹಾರೈಸೋಣ; ಕರೊನಾಪೀಡಿತರ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು, ದಾದಿಯರು ಹಾಗೂ ಸಾರ್ವಜನಿಕರಿಗೆ ಅವಶ್ಯಕ ಸೇವೆಯನ್ನು ಒದಗಿಸುತ್ತಿರುವ ಪೊಲೀಸ್, ಮಾಧ್ಯಮ... ಹೀಗೆ ಎಲ್ಲ ವಲಯಗಳವರಿಗೂ ಒಂದು ಸಲಾಂ ಹೇಳುತ್ತ ಅವರ ಆರೋಗ್ಯಕ್ಕೂ ಪ್ರಾರ್ಥಿಸೋಣ. ಇಂಗ್ಲೆಂಡಿನ ರಾಜಕುಮಾರ ಚಾರ್ಲ್ಸ್ ಕೆಲ ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಆಗ ಅವರು ಸಹಜ ರೂಢಿಗನುಸಾರವಾಗಿ ಗಣ್ಯರಿಗೆ ಹಸ್ತಲಾಘವ ಮಾಡಲು ಮುಂದಾದರು. ಏನನ್ನಿಸಿತೋ ಏನೋ, ಷಾಕ್ ಹೊಡೆದಂತೆ, ಕುಲುಕಲು ಮುಂದಾದ ಕೈಯನ್ನು ಹಿಂತೆಗೆದುಕೊಂಡು ಎರಡೂ ಕೈಜೋಡಿಸಿ ನಮಸ್ಕಾರ ಮಾಡಿದರು! ಇದು ಕರೊನಾ ಕಲಿಸಿದ ಪಾಠ. ಪರಸ್ಪರ ಷೇಕ್ ಹ್ಯಾಂಡ್ ಮಾಡುವುದರಿಂದ ವೈರಸ್ ಹರಡಲು ಸುಲಭವಾಗುತ್ತದೆ. ಅದೇ ನಮಸ್ಕಾರ ಮಾಡಿದರೆ ಅಲ್ಲಿ ಪರಸ್ಪರ ಸ್ಪರ್ಶದ ಪ್ರಮೇಯವೇ ಇಲ್ಲ. ಅಂದಹಾಗೆ, ರಾಜಕುಮಾರ ಚಾರ್ಲ್ಸ್ ಅವರು ಆ ದೇಶದಲ್ಲಿ ಕರೊನಾ ನಿಯಂತ್ರಣದ ಪ್ರಚಾರಾಭಿಯಾನದ ಮುಂಚೂಣಿ ಪ್ರಮುಖರಲ್ಲಿ ಒಬ್ಬರು.

ಕರೊನಾ ಆರ್ಭಟ ಶುರುವಾದಂದಿನಿಂದಲೂ ಭಾರತೀಯ ಸಂಸ್ಕೃತಿ, ಪರಂಪರೆಯ ಸಂಗತಿಗಳು, ಆಚರಣೆಗಳು ಚರ್ಚೆಯ ಮುನ್ನೆಲೆಗೆ ಬಂದಿವೆ, ಕೆಲವನ್ನು ಇತರರೂ ಆಚರಣೆಗೂ ತರುತ್ತಿದ್ದಾರೆ. ನಮ್ಮ ಪ್ರಾಚೀನ ಋಷಿಮುನಿಗಳು, ನಮ್ಮ ಪೂರ್ವಜರು ಮಾನವ ಜೀವನವನ್ನು ಸಮಗ್ರವಾಗಿ ವಿವೇಚಿಸಿದರು. ನಮ್ಮದು ತ್ಯಾಗಜೀವನವೇ ಹೊರತು ಭೋಗಜೀವನದ ಕಲ್ಪನೆಯಲ್ಲ. ‘ಮಾನವ ಜನ್ಮ ದುರ್ಲಭ’ ಎಂಬ ಪರಿಕಲ್ಪನೆಯಿಂದ ಹಿಡಿದು ಅದನ್ನು ಸಾರ್ಥಕಪಡಿಸಿಕೊಳ್ಳುವ ಬಗೆಯವರೆಗೂ ಮುಂದಿನ ಜನಾಂಗಕ್ಕೆ ಮಾರ್ಗದರ್ಶಿಸೂತ್ರಗಳನ್ನು ರಚಿಸಿಕೊಟ್ಟರು. ಸಫಲ ಜೀವನದ ಎಲ್ಲ ಅಂಶಗಳೂ ಈ ಸೂತ್ರದಲ್ಲಿ ಅಡಕವಾಗಿವೆ. ಇದರಲ್ಲಿನ ಕೆಲ ಅಂಶಗಳ ಕುರಿತು ಈ ಆಧುನಿಕ ಯುಗದಲ್ಲಿ ಕೆಲವರು ತಕರಾರು ಎತ್ತಬಹುದಾದರೂ ಇಂದಿಗೂ ಕೋಟಿ ಕೋಟಿ ಮಂದಿ ಶ್ರದ್ಧಾಳುಗಳಿಗೆ ಇವು ದಾರಿದೀಪಗಳಾಗಿವೆ. ಇದರಿಂದ ತಾವು ಸಂಪತ್ತು ಗಳಿಸಬೇಕು ಅಥವಾ ಇನ್ನೇನನ್ನೋ ಪಡೆಯಬೇಕು ಎಂಬ ತಿಲಮಾತ್ರದ ಬಯಕೆಯೂ ನಮ್ಮ ಹಿಂದಿನವರಿಗಿರಲಿಲ್ಲ. ಈಗಿನ ಹಾಗೆ ‘ಪೇಟೆಂಟ್’ ಆಸೆಯೂ ಇರಲಿಲ್ಲ.

ನಮ್ಮ ಹಳ್ಳಿಗಳಲ್ಲಿ ಮನೆಯ ಹೊರಗೆ ನೀರಿನ ಪಾತ್ರೆ ಇಡುವ ರೂಢಿ ಹಿಂದೆ ಸಾಮಾನ್ಯವಾಗಿತ್ತು. ಈಗಲೂ ಪೂರ್ತಿ ಮರೆಯಾಗಿಲ್ಲ. ಹೊರಗಿನಿಂದ ಬಂದವರು ಕಾಲು ತೊಳೆದುಕೊಂಡೇ ಮನೆಯ ಒಳಗೆ ಬರಬೇಕು. ಸ್ವಚ್ಛತೆಗೆ ಇದಕ್ಕಿಂತ ದೊಡ್ಡ ಪಾಠ ಬೇಕೆ! ಈಗ ಕರೊನಾ ವೈರಸ್ ಬರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪದೇಪದೆ ಕೈತೊಳೆಯಲು ವೈದ್ಯರು ಹೇಳುವುದನ್ನು ಗಮನಿಸಿ. ಮೊದಲೆಲ್ಲ ಹಳ್ಳಿಗಳಲ್ಲಿ ಮಣ್ಣಿನ ನೆಲವೇ. ಆ ನೆಲವನ್ನು ಸಗಣಿಯಿಂದ ಸಾರಿಸಿದರೆ ಕ್ರಿಮಿಕೀಟಗಳು ಬರುತ್ತಿರಲಿಲ್ಲ. ಅಲ್ಲದೆ ಆ ಸಗಣಿಯ ಘಮವೇ ಬೇರೆ. ಸೀರೆ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿಕೊಂಡ ಅಮ್ಮ ಹಾಳೆಕಡಿಯಿಂದ (ಅಡಕೆ ಹಾಳೆಯಿಂದ ತಯಾರಿಸಿದ ಸಾಧನ) ನೆಲ ಸಾರಿಸುವ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಹಾಗೆ ಮನೆಯ ಏಳಿಗೆಗಾಗಿ ನಡುಬಗ್ಗಿಸಿ ದುಡಿದ ಮಹಿಳೆಯರ ಲೆಕ್ಕವಿಟ್ಟವರಾರು?

ಕೈಜೋಡಿಸಿ ಮಾಡುವ ನಮಸ್ಕಾರ, ದೇವರಪೂಜೆ, ಮಂತ್ರಪಠಣ, ದೇವರೆದುರಿಗೆ ಇಡುವ ನಂದಾದೀಪ, ಹೊಸಿಲಿಗೆ ಹಚ್ಚುವ ದೀಪ, ಮನೆ ಮುಂದಿನ ತುಳಸಿಕಟ್ಟೆ, ಸಣ್ಣಪುಟ್ಟ ಆರೋಗ್ಯ ತೊಂದರೆಗೆ ಮನೆಮದ್ದಿನ ಬಳಕೆ, ನಿತ್ಯ ಅಡುಗೆಯಲ್ಲಿ ಬಳಸುವ ಅರಿಶಿಣ, ಕೊತ್ತಂಬರಿ, ಶುಂಠಿ ಇತ್ಯಾದಿ ಸಾಮಗ್ರಿಗಳು.... ಹೀಗೆ ಎಲ್ಲದರಲ್ಲೂ ಒಂದೊಂದು ವಿಶೇಷ, ಅದರ ಹಿಂದೊಂದು ತತ್ತ್ವ. ನಮ್ಮ ಯಾವುದೇ ಹಬ್ಬಹರಿದಿನ ತೆಗೆದುಕೊಂಡರೂ ಅದರ ಹಿಂದೊಂದು ತತ್ತ್ವ ತರ್ಕ ಇರುತ್ತದೆ. ಭಾರತದ ಅವಿಭಕ್ತ ಕುಟುಂಬದ ಪರಿಕಲ್ಪನೆಗೆ ಸರಿಸಾಟಿಯಾಗಬಲ್ಲ ಕುಟುಂಬ ವ್ಯವಸ್ಥೆ ಜಗತ್ತಿನ ಬೇರೆಲ್ಲಾದರೂ ಇದೆಯಾ? ‘ಏ ಇದೆಲ್ಲ ಓಬೀರಾಯನ ಕಾಲದ ಆಚರಣೆಗಳು’ ಎಂದು ಅನಾದರ ತೋರದೆ ಪರಿಶೀಲಿಸಿದರೆ ಆ ತತ್ವ ತನ್ನನ್ನು ತೋರಿಕೊಳ್ಳುತ್ತದೆ. ಒಂದು ಉದಾಹರಣೆ ನೀಡುವುದಾದರೆ- ಬೆಂಗಳೂರಿನ ನಿಮ್ಹಾನ್ಸ್ ನಡೆಸಿದ ಅಧ್ಯಯನವು, ‘ಓಂ’ಕಾರ ಉಚ್ಚಾರಣೆಯಿಂದ ಮಾನವನ ಮಿದುಳಿನ ಮೇಲಾಗುವ ಸಕಾರಾತ್ಮಕ ಪರಿಣಾಮಗಳನ್ನು ದಾಖಲಿಸಿತ್ತು. ಯೋಗ-ಧ್ಯಾನದ ಪರಿಣಾಮ ಮತ್ತು ಪ್ರಯೋಜನಗಳನ್ನು ಆಧುನಿಕ ಸಂಶೋಧನೆಗಳೂ ದಾಖಲಿಸಿವೆ. ಪ್ರತಿವರ್ಷ ಜೂನ್ 21ರಂದು ನಡೆಯುವ ವಿಶ್ವ ಯೋಗ ದಿನಕ್ಕೆ ಇತರ ದೇಶಗಳು ಸ್ಪಂದಿಸುವ ಬಗೆ ಯೋಗದ ವಿಶ್ವಮಾನ್ಯತೆಗೆ ಸಾಕ್ಷಿ.

ಭಾರತ ಜಗತ್ತಿಗೆ ಗುರುವಾಗುವುದು, ಆದರ್ಶವಾಗುವುದು ಎಂದರೆ ಇದೇನಾ? ಈಗಿನ ಕರೊನಾ ಆತಂಕದ ಕಾಲದಲ್ಲಾದರೂ ಭಾರತೀಯ ಪರಂಪರೆಯ ಉತ್ತಮಾಂಶಗಳನ್ನು ಅಳವಡಿಸಿಕೊಳ್ಳುವ ಯತ್ನ ಸಾಮೂಹಿಕವಾಗಿ ಆದಲ್ಲಿ ಒಳಿತೇ ಅಲ್ಲವೆ? ಇದು ನಮಗೊಂದೇ ಅಲ್ಲ. ಇಡೀ ಜಗತ್ತಿನ ಒಳಿತಿಗಾಗಿರುವಂಥದು. ಅಷ್ಟಕ್ಕೂ ‘ಲೋಕಾಃ ಸಮಸ್ತಾಃ ಸುಖಿನೋ ಭವಂತು’ ಎಂಬುದು ನಮ್ಮ ಪ್ರಾಚೀನ ಆದರ್ಶ ತಾನೆ? ಭಾರತೀಯ ಪರಂಪರೆ ಎಂದಾಕ್ಷಣ ಎಲ್ಲವನ್ನೂ ಕಣ್ಮುಚ್ಚಿ ಸ್ವೀಕರಿಸಬೇಕು ಎಂದಲ್ಲ. ಪರೀಕ್ಷಿಸಿ ಸತ್ವ ಇದ್ದರೆ ಒಪ್ಪಬಹುದು. ‘ಯಾವುದನ್ನೂ ಕುರುಡಾಗಿ ಒಪ್ಪಬೇಡ’ ಎಂಬುದೂ ನಮ್ಮದೇ ಋಷಿಮುನಿಗಳ ಮಾತು. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಹೇಳಿದ್ದೂ ಇದನ್ನೇ- ‘ನಾನು ಹೇಳಿದೆ ಎಂದಾಕ್ಷಣ ಒಪ್ಪಬೇಡ. ನೀನೇ ಪರೀಕ್ಷಿಸಿ ನಿರ್ಣಯಕ್ಕೆ ಬಾ. ಅದನ್ನು ಅನುಸರಿಸು.’

ಕೊನೇ ಮಾತು: ಮೊದಲೆಲ್ಲ ಫಾರಿನ್ ರಿಟರ್ನ್ಡ್ ಎಂದರೆ ಬಲು ಮಾನ್ಯತೆ, ಗೌರವ. ಈಗ ವಿದೇಶದಿಂದ ಬಂದವರು ಎಂದರೆ ಮಾರುದೂರ. ಕಾಲಮಹಿಮೆ ಎಂದರೆ ಇದೇ ಇರಬೇಕು!

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net