ವಿವೇಚನೆ, ಶ್ರಮವಿಲ್ಲದ ಭಕ್ತಿಗೆ ಭಗವಂತ ಒಲಿಯಲಾರ

Dharma
Published on

ಮಹಾ ದೈವಭಕ್ತನೊಬ್ಬ ನೆಮ್ಮದಿಯ ಜೀವನ ನಡೆಸುತ್ತಿದ್ದ. ಎಲ್ಲವೂ ಭಗವಂತನ ಕೃಪೆ; ಜನನ&ಮರಣ ಸಹಿತ ಈ ಲೋಕದಲ್ಲಿ ನಡೆಯುವುದೆಲ್ಲ ಭಗವಂತನ ಇಚ್ಛೆ ಎಂದು ನಂಬಿದ್ದ.

ಏನೇ ಕಷ್ಟ, ನಷ್ಟಗಳಾದರೂ ಭಗವಂತ ರಸುತ್ತಾನೆಂದು ಭಾವಿಸಿದ್ದ. ಹೀಗಿರುವಾಗ ಮಳೆಗಾಲದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಂದು ಊರಿನಲ್ಲಿ ಪ್ರವಾಹ ಉಂಟಾಯಿತು. ಹಲವರ ಮನೆಗಳು ನೀರಿನಲ್ಲಿ ಕೊಚ್ಚಿಹೋದವು. ದೈವಭಕ್ತನ ಮನೆಯಂಗಳಕ್ಕೂ ನೀರು ಉಕ್ಕಿತು. "ಇನ್ನು ಇಲ್ಲಿರುವುದು ಅಪಾಯ. ಜೀವವನ್ನಾದರೂ ಉಳಿಸಿಕೊಳ್ಳೋಣ' ಎಂದು ಮನೆಯವರೆಲ್ಲ ಹೋಗಲು ಅನುವಾದರು. ಆಗ ಈತ "ಯಾಕೆ ಭಯಪಡುವಿರಿ? ಮಳೆ ಸುರಿಸಿದ ಭಗವಂತನೇ ನಮ್ಮೆಲ್ಲರನ್ನು ಖಂಡಿತವಾಗಿ ಸಂಕಷ್ಟದಿಂದ ರಸುವನು' ಎಂದ. "ನಿಮಗೆ ಹುಚ್ಚು ಹಿಡಿದಿದೆಯೇ? ಮನೆ ಮುಳುಗುವ ಮುನ್ನ ಬೆಟ್ಟ ಹತ್ತೋಣ. ನೀವು ಬೇಕಾದರೆ ಇರಿ. ನಾವು ಎಲ್ಲಾದರೂ ಹೋಗಿ ಜೀವ ಉಳಿಸಿಕೊಳ್ಳುತ್ತೇವೆ' ಎಂದು ಹೇಳಿ ಅವರೆಲ್ಲ ತೆರಳಿದರು.

ಸಮಯ ಸರಿದಂತೆ ನೀರು ಹೆಚ್ಚಾಯಿತು. ಊರವರು ಬಂದು "ಅಯ್ಯಾ ನೀರಿನ ಮಟ್ಟ ಮೇಲೇರುತ್ತಿದೆ. ಇಲ್ಲಿಯೇ ಇದ್ದರೆ ಪ್ರವಾಹದಲ್ಲಿ ಕೊಚ್ಚಿ ಹೋಗುವಿ, ಬಾ.. ಗುಡ್ಡದ ಮೇಲೆ ಹೋಗೋಣ' ಎಂದು ಕರೆದರು. "ನಾನು ಬರಲಾರೆ, ಭಗವಂತ ಕಾಪಾಡುತ್ತಾನೆಂಬ ಭರವಸೆಯಿದೆ' ಎಂದುತ್ತರಿಸಿದ. ನೀರು ಹೆಚ್ಚಿದಾಗ ಆತ ಮನೆಯ ಛಾವಣಿ ಮೇಲೇರಿದ. ಆಗ ಜನ ಹಗ್ಗ ಎಸೆದು "ಇದನ್ನು ಸೊಂಟಕ್ಕೆ ಕಟ್ಟಿಕೋ. ಕಾಪಾಡುತ್ತೇವೆ' ಎಂದರು. ದೋಣಿಯನ್ನೂ ಕಳುಹಿಸಿದರು. ಉಹುಂ, ಆತ ನಿರ್ಧಾರವನ್ನು ಬದಲಿಸಲಿಲ್ಲ.

ಊರವರು ಪ್ರಯತ್ನಪಟ್ಟು ಹೆಲಿಕಾಪ್ಟರನ್ನು ತರಿಸಿ, ಮೇಲಿನಿಂದ ಹಗ್ಗ ಇಳಿಸಿದರು. ಆದರೂ ಆತನದ್ದು ಅದೇ ಹಠ& ಕಾಪಾಡಲು ಭಗವಂತ ಬರುತ್ತಾನೆ ಎಂದು. ಊರವರು ಪ್ರಯತ್ನ ಕೈ ಬಿಟ್ಟರು. ಕೊನೆಗೆ ಪ್ರವಾಹಕ್ಕೆ ಸಿಲುಕಿ ಆತ ಮೃತಪಟ್ಟ. ಬಳಿಕ ಆತನು ಭಗವಂತನ ಸನ್ನಿಧಿಗೆ ಹೋದ. ಅಲ್ಲಿ ಭಗವಂತನನ್ನು ಕಾಣುತ್ತಲೇ ಸಿಟ್ಟಿನಿಂದ, "ಅಲ್ಲಾ ಸ್ವಾಮಿ! ಪ್ರವಾಹದಿಂದ ರಸಲು ನೀನು ಬರುವಿಯೆಂದು ಭಾವಿಸಿದ್ದೆ. ಅನ್ಯಾಯವಾಗಿ ನನ್ನ ಪ್ರಾಣಹರಣವಾಯಿತಲ್ಲ. ನೀನು ಅನಾಥರಕ್ಷಕ, ಆಪದ್ಭಾಂಧವನೆಂದು ಆರಾಧಿಸುತ್ತಾರೆ. ನನ್ನನ್ನು ರಸಲಿಲ್ಲವಲ್ಲ' ಎಂದ. ಭಗವಂತನು, "ನಿನ್ನನ್ನು ರಸಲು ಬರಲಿಲ್ಲವೆಂದು ಏಕೆ ಭಾವಿಸುತ್ತಿ' ಎಂದಾಗ, ಭಕ್ತನು "ನೀನು ಬಂದಿದ್ದರೆ ನಾನು ಬದುಕಿ ಉಳಿಯುತ್ತಿರಲಿಲ್ಲವೇ? ಸತ್ತು ಇಲ್ಲಿರಬೇಕಿತ್ತೇ' ಎಂದು ಕೋಪ&ಬೇಸರದಿಂದ ಹೇಳಿದ.

ಆಗ ಭಗವಂತ, "ನೋಡು, ಮೊದಲಿಗೆ ನಿನ್ನ ಮನೆಯವರಿಗೆ ನಿನ್ನನ್ನು ರಸಲು ಪ್ರೇರಣೆ ನೀಡಿದೆ. ಬಳಿಕ ಊರವರನ್ನು ಕಳುಹಿಸಿ ನಿನಗೆ ತಿಳಿಹೇಳಿದೆ. ದೋಣಿ ಕಳುಹಿಸಿದೆ. ಕೊನೆಯ ಪ್ರಯತ್ನವೆಂಬಂತೆ ಹೆಲಿಕಾಪ್ಟರನ್ನೂ ಕಳುಹಿಸಿದೆ. ಅವೆಲ್ಲ ಕಾರ್ಯಗಳು ಸ್ವತ@ ನನ್ನ ಪ್ರೇರಣೆ, ಅನುಗ್ರಹದಿಂದಲೇ ಆಗಿವೆ. ನಿನ್ನನ್ನು ರಸಿಕೊಳ್ಳಲು ನೀನು ಪ್ರಯತ್ನವನ್ನೇ ಮಾಡದಿರುವಾಗ ನಾನಾದರೂ ಏನು ಮಾಡಲಿ' ಎಂದಾಗ ಭಕ್ತನಿಗೆ ಜ್ಞಾನೋದಯವಾಯಿತು. ಭಗವಂತ ಅದೆಷ್ಟು ಕಷ್ಟ, ನಷ್ಟಗಳನ್ನು ಕೊಟ್ಟರೂ ಒಂದಲ್ಲ ಒಂದು ರೀತಿಯಿಂದ ನಮಗೆ ಸಹಾಯ ಮಾಡುತ್ತಾನೆ, ಆತನ ಸಹಾಯವನ್ನು ಅರಿಯುವ ವಿವೇಚನೆ ಹೊಂದುವುದು ಅಗತ್ಯ.

ಸುಖಮಾಪತಿತಂ ಸೇವೇತ್​ದುಃಖಮಾಪತಿತಂ ಸಹೇತ್​

ಚಕ್ರವತ್​ ಪರಿವರ್ತಂತೆದುಃಖಾನಿ ಚ ಸುಖಾನಿ ಚ & ಸುಭಾಷಿತ ರತ್ನ

"ಜೀವನದಲ್ಲಿ ಸುಖ ಬಂದಾಗ ಅನುಭವಿಸಬೇಕು, ದು@ಖ ಬಂದಾಗ ಸಹಿಸಿಕೊಳ್ಳಬೇಕು. ಸುಖ&ದು@ಖ ಯಾವುದೂ ಶಾಶ್ವತವಲ್ಲ. ಚಕ್ರವು ತಿರುಗಿದಂತೆ ಒಂದಾದ ಮೇಲೆ ಒಂದರಂತೆ ಬರುತ್ತಲೇ ಇರುತ್ತವೆ'. ಈ ಬಗ್ಗೆ ರಾಮಾಯಣ, ಮಹಾಭಾರತದಲ್ಲಿ ಸಾಕಷ್ಟು ಸನ್ನಿವೇಶಗಳಿವೆ. ಭಗವಂತನ ಮೇಲೆ ಭರವಸೆ, ನಂಬಿಕೆಯಿಂದ ಶರಣಾದರೆ ಎಂತಹ ಕಷ್ಟವನ್ನಾದರೂ ಜಯಿಸಬಹುದು.

ಪಾಂಡವರು ಜೂಜಿನಲ್ಲಿ ಎಲ್ಲ ಸಂಪತ್ತುಗಳನ್ನೂ ಕಳೆದುಕೊಂಡು ಕೊನೆಗೆ ದ್ರೌಪದಿಯನ್ನೂ ಪಣಕ್ಕಿಟ್ಟು ಸೋತರು. ಆ ವೇಳೆ ದುಯೋರ್ಧನನು ತನ್ನ ದಾಸಿಯನ್ನಾಗಿಸಲು ದ್ರೌಪದಿಯನ್ನು ಕರೆತರಲು ದುಶ್ಶಾಸನನನ್ನು ಕಳುಹಿಸಿದ. ಆತ ದ್ರೌಪದಿಯ ಮುಡಿಹಿಡಿದುಕೊಂಡು ತುಂಬಿದ ಸಭೆಗೆ ಎಳೆದು ತಂದ. ದಾಸಿಯಾಗಲು ಒಪ್ಪದ ದ್ರೌಪದಿಯ ವಸ್ತ್ರಾಪಹರಣ ಮಾಡಲು ದುಯೋರ್ಧನನು ತಿಳಿಸಿದಾಗ ದುಶ್ಶಾಸನನು ದ್ರೌಪದಿಯ ಸೀರೆ ಎಳೆಯಲು ಮುಂದಾದ. ಈ ಸಂದರ್ಭದಲ್ಲಿ ಪಾಂಡವರು ಮಾತ್ರವಲ್ಲದೆ ಭೀಷ್ಮ, ದ್ರೋಣಾಚಾರ್ಯರು ಸೇರಿ ಎಲ್ಲ ಟಾನುಟಿಗಳು ಅಸಹಾಯಕರಾಗಿದ್ದರು. ದ್ರೌಪದಿ ಶಕ್ತಿಮೀರಿ ತನ್ನನ್ನು ಕಾಪಾಡಿಕೊಳ್ಳಲು ಯತ್ನಿಸಿದಳು. ಇನ್ನು ಸಾಧ್ಯವೇ ಇಲ್ಲ ಎಂದು ತಿಳಿದು ಎರಡೂ ಕೈಗಳನ್ನು ಮೇಲೆತ್ತಿ "ಕೃಷ್ಣಾ ನಿನ್ನನ್ನೇ ನಂಬಿದ್ದೇನೆ... ಕಾಪಾಡು' ಎಂದು ಕೃಷ್ಣನಿಗೆ ಸಂಪೂರ್ಣವಾಗಿ ಶರಣಾದಳು. ಕೃಷ್ಣನು ಸೀರೆಯನ್ನು ಅಕ್ಷಯವನ್ನಾಗಿಸಿ ದ್ರೌಪದಿಯ ಮಾನ ಕಾಪಾಡಿದ. ಮುಂದೊಮ್ಮೆ ದ್ರೌಪದಿಯು ಕೃಷ್ಣನನ್ನುದ್ದೇಶಿಸಿ "ಅಂದು ತುಂಬಿದ ಸಭೆಯಲ್ಲಿ ನನ್ನ ಮಾನಹರಣವಾಗುವಾಗ ನಿನ್ನನ್ನು ಕೂಗಿದಾಕ್ಷಣ ಯಾಕೆ ಬರಲಿಲ್ಲ್ಲ?' ಎಂದು ಪ್ರಶ್ನಿಸಿದಳು. ಅದಕ್ಕೆ ಕೃಷ್ಣ "ನೀನು ರಕ್ಷಣೆಗಾಗಿ ಕೂಗಿದ್ದು ಹೌದು. ಅದರ ಜೊತೆಗೆ ನೀನುಟ್ಟ ಸೀರೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಸ್ವಯಂರಕ್ಷಣೆಗೆ ಪ್ರಯತ್ನ ಮಾಡುತ್ತಿದ್ದೆ. ಯಾವಾಗ ಅದು ಸಾಧ್ಯವಿಲ್ಲ ಎಂದು ತಿಳಿದು ಎರಡೂ ಕೈ ಮೇಲೆತ್ತಿ ನನಗೆ ಶರಣಾದೆಯೋ ಆಗ ನಿನ್ನ ರಕ್ಷಣೆಗೆ ಧಾವಿಸಿದೆ' ಎಂದ. ತಾತ್ಪರ್ಯ& ಎಲ್ಲರೂ ಸ್ವಪ್ರಯತ್ನಿಗಳಾಗಬೇಕು, ಶ್ರಮಿಸಬೇಕು. ಸಾಧ್ಯವಾದಷ್ಟು ಪ್ರಯತ್ನ ಮಾಡಿ ತನ್ನಿಂದ ಸಾಧ್ಯವೇ ಇಲ್ಲವೆಂದಾದಾಗ ದೇವರಿಗೆ ಶರಣಾದರೆ ಖಂಡಿತವಾಗಿಯೂ ಅಭಯ ನೀಡುತ್ತಾನೆ. ಕಿಂಚಿತ್ತೂ ಪ್ರಯತ್ನ, ಶ್ರಮವಿಲ್ಲದೆ ಎಷ್ಟು ಭಕ್ತಿ ಮಾಡಿದರೂ ಭಗವಂತ ಒಲಿಯಲಾರ.

"ಕಾಯಿ-ಕಡುಬು ಕೊಡುತ್ತೇನೆ ಗಣೇಶ, ದಯವಿಟ್ಟು ಪರೀೆಯಲ್ಲಿ ಪಾಸು ಮಾಡಿಸು' "ದೇವೀ.. ಈ ಸಲವಾದರೂ ಒಳ್ಳೆಯ ಹುಡುಗಿ ದೊರೆತು ನಮ್ಮಮ್ಮನಿಗೆ ಸೊಸೆ ಸಿಗುವಂತೆ ಮಾಡು..' "ಈ ಸಲ ಜಮೀನಿನಲ್ಲಿ ಒಳ್ಳೆಯ ಬೆಳೆ ಬಂದರೆ ನಿನಗಿಷ್ಟವಾದ ನೈವೇದ್ಯ ಮಾಡುತ್ತೇನೆ ದೇವರೇ..' ಎಂಬಿತ್ಯಾದಿ ಬೇಡಿಕೆಗಳ ಸರಮಾಲೆಯನ್ನೇ ದೇವರ ಮುಂದಿಡುವುದುಂಟು. ಇದೆಲ್ಲ ಬೇಡಿಕೆ ಮಾತ್ರ. ಅದಕ್ಕೆ ಪೂರಕವಾದ ಪರಿಶ್ರಮವೂ ಇಲ್ಲ, ಪ್ರಯತ್ನವೂ ಇಲ್ಲ. "ಅಷ್ಟೆಲ್ಲ ಮಾಡಿದರೂ ಯಾಕೆ ನನ್ನ ಕೆಲಸ ಕಾರ್ಯ, ಆಸೆಗಳು ನೆರವೇರುವುದಿಲ್ಲ? ನೀನು ನನ್ಗೆ ಮೋಸ ಮಾಡಿದೆ, ನಿನ್ಗೆ ಇನ್ನು ಪೂಜೆನೂ ಇಲ್ಲ ಏನೂ ಇಲ್ಲ' ಎಂದು ದೇವರನ್ನೇ ತರಾಟೆಗೆ ತೆಗೆದುಕೊಳ್ಳುವವರೂ ಇದ್ದಾರೆ.

ತುಂಬ ಸಾಲಗಾರನಾಗಿದ್ದ ವ್ಯಕ್ತಿಯೊಬ್ಬ "ದೇವರೇ ಜೀವನ ಕಷ್ಟವಾಗಿದೆ. ಎಷ್ಟು ದುಡಿದರೂ ಸಾಲುತ್ತಿಲ್ಲ. ಒಮ್ಮೆ ಲಾಟರಿಯಲ್ಲಿ ಹಣ ದೊರಕುವಂತೆ ಮಾಡಿ ನನ್ನ ಕಷ್ಟಗಳನ್ನು ದೂರ ಮಾಡಪ್ಪಾ' ಎಂದು ದಿನವೂ ಪ್ರಾರ್ಥಿಸುತ್ತಿದ್ದನಂತೆ. ಅನೇಕ ತಿಂಗಳು ಉರುಳಿದ ಮೇಲೆ "ನನ್ನ ಮೇಲೆ ಇನ್ನೂ ಕೋಪವೇ? ನನ್ನ ಮೇಲೆ ದಯೆ ಇಲ್ವಾ?' ಎಂದು ಕೇಳಿದನಂತೆ. ಆಗ ಭಗವಂತನು "ನೀನು ಅರ್ಧ ದಾರಿ ಮುಂದೆ ಬಂದರೆ ನಾನೂ ಅರ್ಧ ಹಾದಿ ಮುಂದೆ ಬರುತ್ತೇನೆ. ನೀನು ಒಂದಾದರೂ ಲಾಟರಿ ಟಿಕೇಟು ಕೊಂಡು ಪ್ರಯತ್ನಿಸಿದ್ದರೆ ಅದೃಷ್ಟ ಖುಲಾಯಿಸುತ್ತಿತ್ತೋ ಏನೋ' ಎಂದನಂತೆ. ಈ ಜಗತ್ತೇ ಭಗವಂತನ ಸೃಷ್ಟಿ. ಅವನ ಆೆಯಿಲ್ಲದೆ ಹುಲ್ಲುಕಡ್ಡಿಯೂ ಅಲುಗಾಡಲಾರದು ಎಂದಿರುವಾಗ ನಾವೇಕೆ ಕಷ್ಟಪಡಬೇಕು? ದುಡಿಯಬೇಕು? ಎಲ್ಲರ ಹುಟ್ಟಿಗೆ ಕಾರಣನಾದ ಆತ ನಮ್ಮೆಲ್ಲರ ಹೊಟ್ಟೆಯ ಹಸಿವನ್ನು ನೀಗಿಸಲಾರನೇ ಎಂಬಿತ್ಯಾದಿ ಪ್ರಶ್ನೆಗಳು, ಜಿಜ್ಞಾಸೆಗಳು ಮೂಡುವುದು ಸಹಜ.

ಒಬ್ಬ ವ್ಯಕ್ತಿ, "ನಮ್ಮ&ನಮ್ಮ ಜೀವನದಲ್ಲಿ ಏನು ಆಗಬೇಕೋ ಅದನ್ನು ಭಗವಂತ ಮೊದಲೇ ನಿಶ್ಚಯಿಸಿರುತ್ತಾನೆ. ಅದಕ್ಕಾಗಿ ನಾನು ಕಷ್ಟಪಡುವುದಿಲ್ಲ' ಎನ್ನುತ್ತ ದುಡಿಯದೆ ಮನೆಯಲ್ಲೇ ಕೂತಿರುತ್ತಿದ್ದನಂತೆ. ಯಾರು ಕೇಳಿದರೂ "ಇಷ್ಟೇ ನಮ್ಮ ಹಣೆಬರಹ' ಎನ್ನುತ್ತಿದ್ದ. ಹೀಗೊಮ್ಮೆ ಶಾಲಾ ಮಾಸ್ತರಲ್ಲಿ ಮಾತನಾಡುವಾಗ "ಹಣೆಬರಹದಲ್ಲಿ ಬರೆದಂತೆ ಆಗುತ್ತದೆ ಸ್ವಾಮಿ' ಎಂದ. ಆಗ ಮಾಸ್ತರರು, "ಹೌದು, ನಿಜವಾಗಿ ಹಣೆಬರಹದಲ್ಲಿ ಬರೆದಂತೆ ಆಗುತ್ತದೆ. ಆದರೆ ದುಡಿದರೆ ಮಾತ್ರ ಪ್ರತಿಲ, ಅದರಿಂದ ಉತ್ತಮ ಬದುಕು ನಡೆಸಲು ಸಾಧ್ಯ ಎಂದು ಹಣೆಯಲ್ಲಿ ಬರೆದಿದ್ದರೆ!' ಎಂದಾಗ ಆತ ಹಣೆಬರಹವೆಂದರೆ ಏನೆಂದು ಅರ್ಥ ಮಾಡಿಕೊಂಡ. ಭಗವಂತ ನೀಡಿರುವ ಅವಕಾಶವನ್ನು ಬಳಸಿಕೊಂಡು, ಮೋಸ, ಅನ್ಯಾಯ ಮಾಡದೆ ಶ್ರಮಪಟ್ಟು ದುಡಿದರೆ, ದೇವರು ಬರೆದ ಹಣೆಬರಹವನ್ನು ಕೂಡ ಬದಲಿಸಲು ಸಾಧ್ಯ ಎಂದು ನಿರೂಪಿಸಬಹುದಾಗಿದೆ ಎಂದುಕೊಂಡ.

ಸೃಷ್ಟಿಯಲ್ಲಿ ಪಶು, ಪ, ಮರ, ಗಿಡ, ಬೆಟ್ಟ&ಗುಡ್ಡ, ನದಿ, ಸರೋವರಗಳು ಹೀಗೆ ಸಕಲವೂ ಭಿನ್ನತೆಯಿಂದ ಕೂಡಿದೆ. ಮಾನವನಿಗೆ ಮಾತ್ರ ಜೀವನವನ್ನು ರೂಪಿಸಿಕೊಳ್ಳಲು ವಿವೇಚನೆ ಎಂಬ ಶಕ್ತಿ ನೀಡಿದ್ದಾನೆ. "ತಮ್ಮ ಶಕ್ತಿ ಸಾಮರ್ಥ್ಯಗಳ ಅರಿವು ಇಲ್ಲದಿರುವವರು ಹಣೆಬರಹವನ್ನು ಹೊಣೆ ಮಾಡುತ್ತಾರೆ' ಎಂಬ ಮಾತನ್ನು ಕೇಳಿರಬಹುದು. ಜೀವನ ಜಂಟಾಟಗಳಿಂದ ಸಂಕಷ್ಟ, ಬಾಧೆಗೊಳಗಾದವರ ಹಣೆಬರಹವನ್ನೇ ಹೊಣೆ ಮಾಡಿ ಒಂದಷ್ಟು ಸಮಾಧಾನ ತಂದುಕೊಳ್ಳುತ್ತಾರೆ. ಆದರೆ ಎಲ್ಲದಕ್ಕೂ ಹಣೆಬರಹವನ್ನೇ ದೂಷಿಸಿ ಪ್ರಯೋಜನವಿಲ್ಲ. ಯಾಕೆಂದರೆ ಒಳಿತು ಮತ್ತು ಕೆಡುಕು ಇವೆರಡರಲ್ಲಿ ಯಾವ ಆಯ್ಕೆ ಸೂಕ್ತ ಎಂಬ ವಿವೇಚನಾ ಶಕ್ತಿ ನಮ್ಮಲ್ಲಿದೆ.

ಒಬ್ಬಾಕೆ ದೈವಭಕ್ತೆ ಮತ್ತು ಒಬ್ಬ ನಾಸ್ತಿಕ ಅಕ್ಕ&ಪಕ್ಕದ ಮನೆಗಳಲ್ಲಿ ವಾಸಿಸುತ್ತಿದ್ದರು. ದೈವಭಕ್ತೆ ದಿನವೂ ಬೆಳಗ್ಗೆ ಮನೆಯ ಬಾಗಿಲು ತೆರೆದು "ಭಗವಂತನಿಗೆ ಜಯವಾಗಲಿ. ಭಗವಂತನು ಇದ್ದಾನೆ' ಎಂದು ಗಟ್ಟಿಯಾಗಿ ಹೇಳುತ್ತಿದ್ದಳು. ಅದೇ ಸಮಯದಲ್ಲಿ ನಾಸ್ತಿಕ "ದೇವರು ಇಲ್ಲ' ಎಂದು ಜೋರಾಗಿ ಹೇಳುತ್ತಿದ್ದ. ಒಂದು ದಿನ ದೈವಭಕ್ತೆಗೆ ನಿತ್ಯಕ್ಕೆ ಬೇಕಾದ ಆಹಾರ ವಸ್ತುಗಳನ್ನು ಖರೀದಿಸಲೂ ಹಣವಿರಲಿಲ್ಲ. ಆ ದಿನ ಆಕೆ ಮುಂಬಾಗಿಲು ತೆರೆದು "ಭಗವಂತನಿಗೆ ಜಯವಾಗಲಿ. ನನ್ನ ಕಷ್ಟ ದೂರವಾಗಲಿ' ಎಂದಳು. ನೆರೆಮನೆಯವನು "ದೇವರು ಇಲ್ಲ' ಎಂದ.

ಮರುದಿನ ಭಕ್ತೆ ಎಂದಿನಂತೆ ದೇವರನ್ನು ಸ್ಮರಿಸುವಾಗ ಅಂದಿನ ಊಟಕ್ಕೆ ಬೇಕಾಗುವ ವಸ್ತುಗಳು ಮನೆಯ ಬಾಗಿಲಲ್ಲಿ ಇದ್ದವು. ಆಕೆ ಸಂತಸದಿಂದ "ದೇವರಿದ್ದಾನೆ' ಎಂದಳು. ಆಗ ಪಕ್ಕದ ಮನೆಯವನು "ನಾನು ಆಹಾರ ಇಟ್ಟಿದ್ದೇನೆ. ದೇವರು ಇಲ್ಲ' ಎಂದ. ಆಗ ಆಕೆ "ಭಗವಂತ ನಿನಗೆ ಧನ್ಯವಾದಗಳು. ಆತನ ಹೃದಯದ ಪರಿವರ್ತನೆಗಾಗಿ' ಎಂದಳು. ದೇವರೇ ಆತನಿಗೆ ಆಹಾರ ನೀಡಲು ಪ್ರೇರೇಪಿಸಿದ ಎಂದು ಆಕೆ ಭಾವಿಸಿದಳು. ಇತ್ತ ಈತ ಆಕೆಯ ಹಸಿವು ನೀಗಿಸಲು ತಾನೇ ಆಹಾರ ಇಟ್ಟು ಮಾನವೀಯತೆ ತೋರಿದ. ಎಲ್ಲಿ ಮಾನವೀಯ ಗುಣಗಳು ಇರುತ್ತವೆಯೋ ಅಲ್ಲಿ ದೇವರಿರುತ್ತಾನೆ ಎಂಬುದು ಸತ್ಯವಾದ ಮಾತು.

ಯೇನ ಕೇನ ಪ್ರಕಾರೇಣಯಸ್ಯಕಸ್ಯಾಪಿ ದೇಹಿನಃ

ಸಂತೋಷಂಜನಯೇತ್​ ಪ್ರಾಜ್ಞಃತದೇವೇಶ್ವರಪೂಜನಮ್​

"ಉತ್ತಮನು, ತಿಳಿದವನು, ಪಂಡಿತನು, ವಿವೇಚನೆಯಿಂದ ವರ್ತಿಸುವವನು, ಪ್ರಾನು ಹೇಗಾದರೂ ಸರಿಯೆ, ಯಾವುದೇ ಜೀವಿಗಾದರೂ ಸರಿಯೇ ಸದಾ ಸಂತೋಷವನ್ನೇ ನೀಡಬೇಕು. ಅದುವೇ ಈಶ್ವರ ಪೂಜೆ.' ಅದೆಷ್ಟು ಸಂಕಟ, ನೋವು, ದು@ಖ ದುಮ್ಮಾನಗಳು ಎದುರಾದರೂ ಅಮ್ಮನ ಮಡಿಲಲ್ಲಿ ದು@ಖ ಶಮನವಾಗುವಂತೆ ಭಗವಂತನ ಸಾನ್ನಿಧ್ಯದಲ್ಲಿ ಕಷ್ಟವನ್ನು ಕಳೆದುಕೊಂಡು ನವೋತ್ಸಾಹವನ್ನು ಪಡೆಯುತ್ತೇವೆ. ನಮ್ಮ ನಮ್ಮ ಕಾಯಕಗಳನ್ನು ಮಾಡುತ್ತ, ಮಾನವೀಯ ಗುಣಗಳನ್ನು ಪಸರಿಸುತ್ತ ನಾವೂ ಬದುಕೋಣ. ಇತರರಿಗೂ ಬದುಕಲು ಸಹಾಯ ಮಾಡೋಣ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net