

ಬಿಹಾರದ ನೀರಾವರಿ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ನಿಯುಕ್ತಿಯಾದಾಗ ಸಹಾಯಕ ಇಂಜಿನಿಯರ್ಗಳ ವರ್ಗಾವಣೆ ಬೇಕಾಬಿಟ್ಟಿ ನಡೆಯುತ್ತಿತ್ತು. ಪ್ರಬಲರು, ಬಲವಾದ ಶಿಫಾರಸು ಇರುವವರು ಲಾಭದಾಯಕ ಸ್ಥಳಗಳಿಗೆ ಪದೇಪದೆ ನಿಯುಕ್ತಿಯಾಗುತ್ತಿದ್ದರು. ಸೂಕ್ತವಾದ ಡೇಟಾಬೇಸ್ ಇಲ್ಲದ ಕಾರಣ ಒಂದೇ ಸ್ಥಳದಲ್ಲಿ ಹಲವಾರು ವರ್ಷಗಳ ಕಾಲ ಮುಂದುವರಿಯುತ್ತಿದ್ದರು. ಇದನ್ನು ಬದಲಾಯಿಸಲು 4 ಸಾವಿರ ಸಹಾಯಕ ಇಂಜಿನಿಯರ್ಗಳ ಡೇಟಾಬೇಸ್ ಸಿದ್ಧಪಡಿಸಿದ ಶರ್ವ, ಪ್ರತಿಯೊಬ್ಬರಿಗೂ 5 ಅಂಕಿ ಕೋಡ್ ನೀಡಿ ನಿಯುಕ್ತಿಯಾಗಿದ್ದ ಸ್ಥಳಗಳನ್ನು ದಾಖಲಿಸಲು ಆರಂಭಿಸಿದರು. ತರುವಾಯ ಯಾರಿಗೂ ಅನ್ಯಾಯವಾಗದ ಹಾಗೆ ವರ್ಗಾವಣೆ ನೀತಿ ಜಾರಿಗೆ ಬಂತು.
ಇವರು ಬೇಗುಸರಾಯ್ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡ ಸಂದರ್ಭ. ಅಲ್ಲಿ ಕಳೆದು ಹೋದ ಗನ್ಗಳ ದಾಖಲೆಯೇ ಇರಲಿಲ್ಲ. ಇದರಿಂದ ಅಪರಾಧ ತನಿಖೆಗೆ ತೊಡಕಾಗುತ್ತಿತ್ತು. ಕಳೆದು ಹೋದ ಮತ್ತು ದೊರೆತ ಗನ್ಗಳ ದಾಖಲೆಯನ್ನು ಡಿ ಬೇಸ್ ಸಹಾಯದಿಂದ ರಚಿಸಿದ ಕಾರಣ 23 ಪ್ರಕರಣಗಳನ್ನು 30 ದಿನಗಳಲ್ಲಿ ಪತ್ತೆ ಮಾಡಲು ಸಾಧ್ಯವಾಯಿತು ಮತ್ತು ಈ ದಾಖಲೆಯಿಂದ ಅಪರಾಧ ತನಿಖೆಗೆ ಸಹಾಯವಾಯಿತು. ಚುನಾವಣೆಗೆ ಬಳಸುವ ಖಾಸಗಿ ವಾಹನಗಳ ದುರ್ಬಳಕೆ ತಡೆದು ವಾಹನ ಮಾಲೀಕರಿಗೆ ಸಮಯಕ್ಕೆ ಸರಿಯಾಗಿ ವಾಹನ ಬಾಡಿಗೆ ನೀಡಲು 1985ರಲ್ಲಿ ಕಂಪ್ಯೂಟರ್ ಡೇಟಾ ಸಿದ್ಧಪಡಿಸಿ, ಸುಸೂತ್ರವಾಗಿ ವಾಹನಗಳ ನಿರ್ವಹಣೆ ಮಾಡಿದರು. ಜಿಲ್ಲೆಯ ಭೂದಾಖಲೆ ಗಳನ್ನು ಗಣಕೀಕರಣಗೊಳಿಸಿ ಭೂವ್ಯಾಜ್ಯಗಳು ಶೀಘ್ರ ವಿಲೇವಾರಿ ಆಗುವಂತೆ ಮಾಡಿದರು.
ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಸಿಬ್ಬಂದಿ ಆಡಳಿತ ಪಕ್ಷದೊಂದಿಗೆ ಶಾಮೀಲಾಗಿ ಅಕ್ರಮದಲ್ಲಿ ಭಾಗಿಯಾಗುವುದನ್ನು ತಪ್ಪಿಸಲು 1990ರಲ್ಲಿ ಕ್ರಮ ಕೈಗೊಂಡರು. ಕಂಪ್ಯೂಟರ್ ಸಹಾಯದಿಂದ ಪ್ರತಿಯೊಬ್ಬ ಸಿಬ್ಬಂದಿಗೂ ಕೋಡ್ ನೀಡಿ ಅಂತಿಮ ಕ್ಷಣದಲ್ಲಿ ಅವರು ನಿಯೋಜನೆಗೊಂಡಿರುವ ಬೂತ್ಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಿ ಚುನಾವಣಾ ಅಕ್ರಮಕ್ಕೆ ಕಡಿವಾಣ ಹಾಕಿದರು. ಮಾತ್ರವಲ್ಲ, ಸಾರಿಗೆ ಇಲಾಖೆಯನ್ನು ಡಿಜಿಟಲೈಸ್ ಮಾಡಿ ವಾಹನ ತೆರಿಗೆ ಸೋರಿಕೆಯನ್ನು ತಡೆದರು. ತತ್ಪರಿಣಾಮ 48 ಕೋಟಿ ಇದ್ದ ವರಮಾನವು 3 ಪಟ್ಟು ಹೆಚ್ಚಾಗಿ 150 ಕೋಟಿ ರೂಪಾಯಿ ಸಂಗ್ರಹವಾಯಿತು.
ಈ ಮಧ್ಯೆ, ಕ್ಯಾಲಿಫೋರ್ನೀಯಾದ ವಿಶ್ವವಿದ್ಯಾಲಯದಲ್ಲಿ ಮಾಹಿತಿ-ತಂತ್ರಜ್ಞಾನ ವಿಭಾಗದಲ್ಲಿ ಮಾಸ್ಟರ್ಸ್ ಡಿಗ್ರಿ ಪಡೆದರು. ಬಳಿಕ ಜಾರ್ಖಂಡ್ ಮಾಹಿತಿ-ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿಯಾಗಿ 4 ವರ್ಷಗಳ ಅವಧಿಯಲ್ಲಿ ಹಲವಾರು ಇಲಾಖೆಗಳನ್ನು ಗಣಕೀಕರಣ ಮಾಡಿದರು. 2009ರಲ್ಲಿ ಕೇಂದ್ರ ಸೇವೆಗೆ ನಿಯೋಜನೆಗೊಂಡರು. ಅಂದಿನ ಪ್ರಧಾನಿ ಮನಮೋಹನ ಸಿಂಗ್ ‘ಆಧಾರ್ ಕಾರ್ಡ್’ ಯೋಜನೆ ಅನುಷ್ಠಾನಗೊಳಿಸಲು 2009ರಲ್ಲಿ ಪ್ರಾಧಿಕಾರ ರಚಿಸಿದರು. ನಂದನ್ ನಿಲೇಕಣಿ ಆ ಪ್ರಾಧಿಕಾರದ ಮುಖ್ಯಸ್ಥರಾದರೆ, ರಾಮಸೇವಕ್ ಶರ್ಮಾ ಮಹಾನಿರ್ದೇಶಕರಾದರು.
ಈ ಯೋಜನೆ ಬಗ್ಗೆ ಶರ್ವ, ‘ದೇಹ ನಶ್ವರ ಆದರೆ ಆತ್ಮ ಶಾಶ್ವತ. ಅದಕ್ಕೆ ಸಾವೇ ಇಲ್ಲ. ಹಾಗೆಯೇ ಆಧಾರ್ ನಂಬರ್ ಸಹ ಶಾಶ್ವತ. ನಮ್ಮ ಮರಣಾನಂತರವೂ ನಂಬರ್ ಉಳಿದಿರುತ್ತದೆ. ಒಮ್ಮೆ ಒಬ್ಬರಿಗೆ ನೀಡಿದ ತರುವಾಯ ಮತ್ತೊಬ್ಬರಿಗೆ ಕೊಡಲು ಸಾಧ್ಯವೇ ಇಲ್ಲ’ ಎಂದಿದ್ದಾರೆ. ಆಗಿನ ಸರ್ಕಾರದಲ್ಲಿ ಇರುವವರು ಆಧಾರ್ ಕಾರ್ಡ್ನ ಸಾಮಾಜಿಕ ಲಾಭಗಳ ಕುರಿತು ಮನವರಿಕೆ ಮಾಡದೆ ಕೇವಲ ಗುರುತಿನ ಚೀಟಿಯೆಂದೇ ಬಿಂಬಿಸಿದ ಕಾರಣ ಇದನ್ನು ವಿರೋಧಿಸಿದವರಿಗೆ ಹೆಚ್ಚು ಬಲ ಬಂದಿತ್ತು. ಸುರಕ್ಷತೆಯ ಕಾರಣದಿಂದ ಬಿಜೆಪಿ ಆಧಾರ್ ಕಾರ್ಡ್ ಯೋಜನೆಯನ್ನು ವಿರೋಧಿಸಿತ್ತು. ನರೇಂದ್ರ ಮೋದಿ ಪ್ರಧಾನಿಯಾದ ತರುವಾಯ ನಂದನ್ ನಿಲೇಕಣಿ ಮತ್ತು ರಾಮಸೇವಕ್ ಶರ್ವರೊಂದಿಗೆ ಚರ್ಚೆ ಮಾಡಿ ಇದರ ವ್ಯಾಪಕ ಬಳಕೆಗೆ ನಾಂದಿ ಹಾಡಿದರು. ಸಂಸತ್ತಿನಲ್ಲಿ ಮನಿಬಿಲ್ ಮುಖಾಂತರ ಆಧಾರ್ಗೆ ಮಸೂದೆಯ ಬೆಂಬಲವನ್ನು ಕೊಟ್ಟರು. ಆಧಾರ್ ಗೌಪ್ಯತೆ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದಾಗ ಅದಕ್ಕೆ ಸೂಕ್ತ ಉತ್ತರದ ಮೂಲಕ ನ್ಯಾಯಾಲಯದ ಒಪ್ಪಿಗೆಯ ಮುದ್ರೆ ಪಡೆದುಕೊಂಡರು.
ಸರ್ಕಾರದ ಹಲವಾರು ಯೋಜನೆಗಳ ಅನುಷ್ಠಾನದಲ್ಲಿ ಆಧಾರ್ ಕಡ್ಡಾಯ ಗೊಳಿಸಿರುವ ಪರಿಣಾಮ ಕಳೆದ ಆರು ವರ್ಷದಲ್ಲಿ ಸರ್ಕಾರಕ್ಕೆ -ಠಿ; 1.7 ಲಕ್ಷ ಕೋಟಿ ಉಳಿತಾಯವಾಗಿದೆ. ಇದಲ್ಲದೆ ರಾಜ್ಯ ಸರ್ಕಾರಗಳು ಕೂಡ ಅನೇಕ ಯೋಜನೆಗಳಿಗೆ ಆಧಾರ್ ಕಡ್ಡಾಯಗೊಳಿಸಿದ್ದು, ಸಾವಿರಾರು ಕೋಟಿ ಉಳಿತಾಯವಾಗುತ್ತಿದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಕರೊನಾ ಲಸಿಕೆ ಹಾಕಿಸಿಕೊಳ್ಳುವವರಗೆ ಆಧಾರ ಕಾರ್ಡ್ ಬಳಕೆಯಾಗುತ್ತಿದೆ. ರಾಮಸೇವಕ್ ಶರ್ಮಾ ಕೇವಲ ಸರ್ಕಾರಿ ಕಡತಗಳ ಮಧ್ಯೆ ತಲೆ ಹುದುಗಿಸಿಕೊಳ್ಳದೆ ಮತ್ತು ಸರ್ಕಾರದ ನೀತಿ ನಿಯಮಾವಳಿಗಳ ಚೌಕಟ್ಟಿಗೆ ತಮ್ಮನ್ನು ಸಿಮೀತ ಮಾಡಿಕೊಳ್ಳದೆ ಆಡಳಿತದಲ್ಲಿ ಸುಧಾರಣೆಯನ್ನು ತರಲು ತಂತ್ರಜ್ಞಾನವನ್ನು ಗರಿಷ್ಠ ಪ್ರಮಾಣದಲ್ಲಿ ಅಳವಡಿಸಿಕೊಂಡರು. ಸರ್ಕಾರದಡಿಯಲ್ಲಿ ಸಾವಿರಾರು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಹಾಗೂ ಇನ್ನಿತರ ವಿವಿಧ ವೃಂದದ ಅಧಿಕಾರಿಗಳಿದ್ದಾರೆ. ಇವರಲ್ಲಿ ಶೇಕಡ 10ರಷ್ಟು ಅಧಿಕಾರಿಗಳಾದರೂ ಭಿನ್ನವಾಗಿ ಆಲೋಚಿಸಿ ಆಡಳಿತದಲ್ಲಿ ಸುಧಾರಣೆ ತರಲು ಮುಂದಾದರೆ ಸಮಾಜ ಸುಧಾರಣೆಯ ಆಶಯಕ್ಕೆ ಬಲ ಬರುತ್ತದೆ.
ಶರ್ವರ ಸೇವಾಬದ್ಧತೆಯನ್ನು ಗುರುತಿಸಿ ಇವರನ್ನು ಟ್ರಾಯ್ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಯಿತು. ಇವರ ಪ್ರಯತ್ನದ ಫಲವಾಗಿಯೇ ಮೊಬೈಲ್ ಫೋನ್ ಬಳಕೆದಾರರಿಗೆ ನಂಬರ್ ಮೊಬಿಲಿಟಿ ದೊರೆತಿರುವುದು. ಕೇಬಲ್ ಮತ್ತು ಡಿಟಿಎಚ್ ಕ್ಷೇತ್ರದಲ್ಲಿ ಇವರು ತಂದ ಬದಲಾವಣೆಯಿಂದ ದರಗಳಲ್ಲಿ ಕಡಿತವಾಗಿ ನಮಗೆ ಬೇಕಾದ ಚಾನಲ್ ಆಯ್ಕೆಯ ಸ್ವಾತಂತ್ರ್ಯ ಲಭಿಸಿದೆ. ಕೋವಿಡ್ ಲಸಿಕೆ ವಿತರಣಾ ತಂತ್ರಜ್ಞಾನ ವೇದಿಕೆ ಕೋ-ವಿನ್ ಅಧಿಕಾರ ಸಮಿತಿಯ ಅಧ್ಯಕ್ಷರಾಗಿ ನೇಮಕವಾಗಿರುವ ಇವರು, ಲಸಿಕಾ ಅಭಿಯಾನದ ಉನ್ನತ ಮಟ್ಟದ ಸಮಿತಿ ಸದ್ಯಸರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಮೋದಿಯವರ ಕನಸಿನ ಯೋಜನೆಯಾದ ಸಾರ್ವತ್ರಿಕ ಆರೋಗ್ಯ ವಿಮೆ ‘ಆಯುಷ್ಮಾನ್ ಭಾರತ’ ಯೋಜನೆಯ ಮುಖ್ಯಸ್ಥರನ್ನಾಗಿ ಶರ್ಮಾ ಅವರನ್ನು ಇತ್ತೀಚೆಗೆ ನೇಮಕ ಮಾಡಲಾಗಿದ್ದು, ಇವರ ಪ್ರತಿಭೆಗೆ ದೊರೆತಿರುವ ಮತ್ತೊಂದು ಗೌರವವಾಗಿದೆ. ಕರ್ತವ್ಯ ನಿರ್ವಹಿಸಿದ ಸ್ಥಳಗಳಲ್ಲಿ ಪ್ರತಿಭೆ ಮತ್ತು ದಕ್ಷತೆಯಿಂದ ತಮ್ಮ ಛಾಪು ಮೂಡಿಸಿ ಆಡಳಿತದಲ್ಲಿ ಹೊಸ ಚೈತನ್ಯ ತರುವ ಮೂಲಕ ಸಹೋದ್ಯೋಗಿಗಳಿಗೆ ರಾಮಸೇವಕ್ ಶರ್ಮಾ ಮಾದರಿಯಾಗಿದ್ದಾರೆ.
(ಸೌಜನ್ಯ: ದಿ ಮೇಕಿಂಗ್ ಆಫ್ ಆಧಾರ್ ವರ್ಲ್ಡ್ ಲಾರ್ಜೆಸ್ಟ್ ಐಡೆಂಟಿಟಿ ಪ್ಲಾಟ್ಫಾರಂ)
(ಲೇಖಕರು ಸಾಮಾಜಿಕ ಕಾರ್ಯಕರ್ತರು, ಹವ್ಯಾಸಿ ಬರಹಗಾರರು)