

ಭಾರತದಲ್ಲಿ ಬ್ರಿಟಿಷರ ಆಡಳಿತದ ಕಾಲದಲ್ಲಿ ದೇಶಪ್ರೇಮವನ್ನು ತೋರಿಸಿದರೆ, ದೇಶಪ್ರೇಮದ ಘೊಷಣೆ ಕೂಗಿದರೆ, ದೇಶಕ್ಕಾಗಿ ಹೋರಾಡಿದರೆ ಅವರಿಗೆ ಕಠಿಣ ಶಿಕ್ಷೆಯಾಗುತ್ತಿತ್ತು. ಸೆರೆಮನೆಯ ವಾಸವನ್ನು ಅನುಭವಿಸಬೇಕಾಗುತ್ತಿತ್ತು. ಯಾಕೆಂದರೆ ಅದನ್ನು ಆಡಳಿತದ ವಿರುದ್ಧದ ನಡವಳಿಕೆಯಾಗಿ ಕರೆಯಲಾಗುತ್ತಿತ್ತು. ಬ್ರಿಟಿಷರಿಗೆ ಅದು ದೇಶದ್ರೋಹದ ವಿಚಾರವಾಗಿತ್ತು. ಆದರೂ ನಮ್ಮವರು ದೇಶಭಕ್ತಿಯನ್ನು ಬಿಟ್ಟು ಕೊಡಲಿಲ್ಲ. ದೇಶಾಭಿಮಾನದ ಕಿಡಿಯನ್ನು ಆರಲು ಬಿಡಲಿಲ್ಲ. ಎಷ್ಟೊಂದು ಕಷ್ಟಗಳನ್ನು ಸಹಿಸಿಯೂ ನಮ್ಮ ದೇಶವೇ ಶ್ರೇಷ್ಠ ಎಂದು ಸಾರಿದರು. ಅದಕ್ಕಾಗಿ ತ್ಯಾಗ, ಬಲಿದಾನ ಮಾಡಿದರು. ಪ್ರಾಣವನ್ನೇ ಲೆಕ್ಕಿಸದೆ ಹೋರಾಡಿದರು. ಎಷ್ಟೋ ಜನರು ನೇಣುಗಂಬವೇರಿ ಪ್ರಾಣಾರ್ಪಣೆ ಮಾಡಿದರು. ಈ ಇತಿಹಾಸದ ಪುಟಗಳ ಬಗ್ಗೆ, ಅದು ಸಾರಿದ ರಾಷ್ಟ್ರಾಭಿಮಾನದ ಬಗ್ಗೆ ಗೊತ್ತೇ ಇದೆ. ಅದನ್ನೆಲ್ಲ ನೆನಪಿಸಿಕೊಂಡರೂ ರೋಮಾಂಚನವಾಗಿ ಭಾರತ ಬಗೆಗಿನ ಹೆಮ್ಮೆ ಇಮ್ಮಡಿಯಾಗುತ್ತದೆ.
‘ಜನನಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತ ಮಿಗಿಲು’ ಅನ್ನುವ ಸಂಸ್ಕೃತಿಯನ್ನು ಕಲಿಸಿದ ದೇಶವಿದು. ನಿಂತ ನೆಲವನ್ನು, ಪೋಷಿಸುವ ಪ್ರಕೃತಿಯನ್ನು ಮಾತೆ ಅಂತ ಗೌರವಿಸುವವರು ನಾವು. ಏನೇ ಲೋಪದೋಷಗಳಿದ್ದರೂ ಸಹಬಾಳ್ವೆಯಿಂದ ಹೊಂದಿಕೊಂಡು ಬಾಳುವ ಮನೋಭಾವವನ್ನು ಬೆಳೆಸಿದ ದೇಶ ನಮ್ಮದು. ದೇಶದಲ್ಲಿರುವ ಒಬ್ಬ ತೀರಾ ಅನಕ್ಷರಸ್ಥನಿಗೂ ಇದು ತಿಳಿದಿದೆ. ಈ ದೇಶದಲ್ಲಿ ಹುಟ್ಟಿ ಬೆಳೆದ ಕೆಲವು ಬುದ್ಧಿವಂತರಿಗೆ ಮಾತ್ರ ನಮ್ಮ ನೆಲಕ್ಕಿಂತಲೂ ನಮ್ಮ ವೈರಿನೆಲದ ಮೇಲೆ ಅಪಾರ ಪ್ರೀತಿ! ಇಲ್ಲಿ ಸಿಗುವ ಎಲ್ಲ ಸವಲತ್ತುಗಳನ್ನು ಬಾಚಿಕೊಂಡು ಅನುಭವಿಸಿ ‘ನಮ್ಮ ನೆಲ ಸರಿಯಿಲ್ಲ, ಜನ ಸರಿ ಇಲ್ಲ, ಸಹಿಷ್ಣುತೆ ಇಲ್ಲ, ಶಾಂತಿ ಇಲ್ಲ’ ಅಂತ ದೂಷಿಸುತ್ತ
ಅಶಾಂತಿ ಹರಡುವವರಿಗೇನೂ ಕಮ್ಮಿ ಇಲ್ಲ. ಪ್ರಜಾಪ್ರಭುತ್ವ ದೇಶದಲ್ಲಿ ದೊರೆತ ಸ್ವಾತಂತ್ರ್ಯದ ಫಲ ಇದು.
ದಾರಿ ತಪ್ಪಿಸುವ ಇಂತಹ ಬುದ್ಧಿವಂತ ಜನರ ಮಾನಸಿಕ ಅಸ್ವಸ್ಥತೆಗೊಂದು ಶಾಶ್ವತ ಪರಿಹಾರ ಬೇಕಿದೆ. ನಿಂತ ನೆಲ ಸರಿ ಇಲ್ಲ ಅನ್ನುವ ಹತಾಶರನ್ನು ಅವರು ಮೆಚ್ಚುವ ನಾಡಿಗೆ ಕಳುಹಿಸಬೇಕಿದೆ. ಪಾಕಿಸ್ತಾನದ ದುಷ್ಕೃತ್ಯಗಳನ್ನು ತಿಳಿದೂ ಅವರಿಗೆ ‘ಜೈ’ ಅನ್ನುವ ದ್ರೋಹಿಗಳು ನಮ್ಮಲ್ಲಿ ಇರುವುದಾದರೂ ಯಾಕೆ? ವಿಷಾದದ ವಿಚಾರವೆಂದರೆ, ನಮ್ಮ ಮಕ್ಕಳಿಗೆ ದೇಶಪ್ರೇಮವನ್ನು ಬೆಳೆಸುವ ಯಾವ ಪಾಠವೂ ಇಲ್ಲ. ಭಾರತದ ಮೇಲೆ ಆಕ್ರಮಣ ಮಾಡಿದವರನ್ನೇ ಮಹಾವೀರರು, ಶೂರರು ಅಂತ ಇತಿಹಾಸದಲ್ಲಿ ವರ್ಣಿಸಲಾಗುತ್ತದೆ. ಈ ದೇಶದಲ್ಲಿ ದೇಶಪ್ರೇಮಿಗಳು ಹಿಂಸೆ, ಸೆರೆಮನೆವಾಸ ಅನುಭವಿಸಿದಷ್ಟು ದೇಶದ್ರೋಹಿಗಳು ಅನುಭವಿಸಿಲ್ಲ. ‘ವಂದೇ ಮಾತರಂ’ ಹೇಳಲಾರದ, ‘ಭಾರತ್ ಮಾತಾ ಕೀ ಜೈ’ ಅನ್ನುವುದಕ್ಕೆ ಹಿಂಜರಿಯುವ ಕೆಲವರು ಭಯೋತ್ಪಾದನೆಯನ್ನೇ ಬಂಡವಾಳವಾಗಿ ಇರಿಸಿಕೊಂಡು ಪ್ರಪಂಚಕ್ಕೇ ತಲೆನೋವಾದ ತಮ್ಮದಲ್ಲದ ದೇಶವೊಂದಕ್ಕೆ ಬಹುಪರಾಕ್ ಹೇಳುವಷ್ಟರ ಮಟ್ಟಕ್ಕೆ ಬೆಳೆದಿದ್ದಾರೆ ಎಂದರೆ ಇವರು ದೇಶದ್ರೋಹಿಗಳಲ್ಲದೆ ಇನ್ನೇನು? ಶತ್ರುಗಳು ಹೊರಗಿಲ್ಲ. ನಮ್ಮೊಳಗೇ ಇದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತ ದಾರಿ ತಪ್ಪಿಸುತ್ತಿದ್ದಾರೆ. ಶಾಂತಿಭಂಗ ಮಾಡುವ ಇವರಿಗೆ, ಇವರ ಬೆಂಬಲಿಗರಿಗೆ ಧಿಕ್ಕಾರವಿರಲಿ. ಆತಂಕದ ವಿಷಯವೆಂದರೆ ಕೆಲವು ವಿದ್ಯಾಸಂಸ್ಥೆಗಳು, ವಿಶ್ವವಿದ್ಯಾಲಯಗಳೇ ಇಂತಹ ದೇಶದ್ರೋಹಿಗಳನ್ನು ಹುಟ್ಟುಹಾಕಿ ಪೋಷಿಸುತ್ತಿರುವುದು. ಅತಿ ಕಲಿತ ಸ್ವಯಂಘೋಷಿತ ಬುದ್ಧಿಜೀವಿಗಳು ಈ ದೇಶದ್ರೋಹಿಗಳನ್ನು ಬೆಂಬಲಿಸುವುದು ಬೇರೆ.
ಸರ್ಕಾರದಿಂದ ಸಿಗುವ ಎಲ್ಲ ಅನುಕೂಲತೆಗಳನ್ನು ಪಡೆದು ‘ಸರ್ಕಾರ ಸರಿ ಇಲ್ಲ’ ಅಂತ ಪ್ರತಿಭಟಿಸುವುದು, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿ ‘ಪೊಲೀಸ್ ವ್ಯವಸ್ಥೆ ಸರಿ ಇಲ್ಲ’ ಅಂತ ದೂಷಿಸುವುದು, ಬಾಯಿಗೆ ಬಂದಂತೆ ಮಾತನಾಡಿ ಪ್ರಜಾಪ್ರಭುತ್ವದ ಮೌಲ್ಯವನ್ನು ಹಾಳು ಮಾಡುವುದು ಇದೆಲ್ಲ ನಮ್ಮ ದೇಶದಲ್ಲಿ ಈಗ ಸಾಮಾನ್ಯವಾಗಿ ಬಿಟ್ಟಿದೆ. ಕಾರಣ ಇಲ್ಲಿ ಶಿಸ್ತುಕ್ರಮಗಳೇ ಇಲ್ಲ. ಇಂತಹವರನ್ನು ರಕ್ಷಿಸುವುದಕ್ಕೆ ಸಾವಿರಾರು ಜನ ಸಿದ್ಧರಿದ್ದಾರೆ. ರಾಜಕೀಯ ವೈಷಮ್ಯಗಳಿಗೆ ದೇಶವನ್ನೇ ಬಲಿಕೊಡುವ ನಾಯಕರಿಗೇನೂ ಕಡಿಮೆ ಇಲ್ಲ. ವಿಚಾರಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಕುರಿಯ ಹಿಂದೆ ಹೋಗುವ ಮಂದಿಗೂ ಕೊರತೆ ಇಲ್ಲ. ಭೀಕರ ಕೊಲೆ ಮಾಡಿದವರಿಗೆ, ಹಿಂಸಾತ್ಮಕವಾಗಿ ಅತ್ಯಾಚಾರ ಮಾಡಿ ಸಾಯಿಸಿದವರ ಪರವಾಗಿ ವಾದಿಸುವ ವಕೀಲರಿದ್ದಾರೆ ಎಂದ ಮೇಲೆ ಈ ದೇಶದಲ್ಲಿ ಒಳ್ಳೆಯವರು ಮಾತ್ರವೇ ಇರುತ್ತಾರೆ, ಇರಬೇಕು ಅಂತ ಬಯಸುವುದೇ ತಪ್ಪಲ್ಲವೆ?
ದೇಶದ್ರೋಹಿಗಳನ್ನು, ದೇಶದ ವಿರುದ್ಧ ಘೊಷಣೆ ಕೂಗುವವರನ್ನು ಬೆಂಬಲಿಸುವವರನ್ನು ಬಿಡದೆ ಶಿಕ್ಷಿಸಬೇಕು. ವಿರೋಧಿಗಳ ಪರ ಮಾತನಾಡುವವರು ನಮ್ಮ ಹಿತವರಾಗಿರಲು ಸಾಧ್ಯವಿಲ್ಲ. ಭಯೋತ್ಪಾದನೆಯ ಮೂಲಕ ಶತ್ರುತ್ವ ಸಾರುವವರು ನಮ್ಮ ಮಿತ್ರರಾಗಲು ಸಾಧ್ಯವೆ? ಪ್ರತಿಭಟನೆಯ ಹೆಸರಿನಲ್ಲಿ ಇವರೆಲ್ಲ ಏನು ಮಾಡಹೊರಟಿದ್ದಾರೆ? ದೇಶಪ್ರೇಮದ ವಿಚಾರ ಬಂದಾಗ ಪಕ್ಷಾತೀತವಾಗಿ ಪ್ರತಿಭಟಿಸುವ ಮನೋಭಾವವನ್ನು ನಮ್ಮ ರಾಜಕಾರಣಿಗಳು ಬೆಳೆಸಿಕೊಂಡರೆ ಮಾತ್ರ ಇಂತಹ ವಿಷಕಾರಿ ಅಣಬೆಗಳನ್ನು ನಿಮೂಲನ ಮಾಡಬಹುದು. ಇಲ್ಲಿಯ ನೆಲದಲ್ಲಿ ನಿಂತು, ನಾವು ಬೆಳೆದ ಆಹಾರ ತಿಂದು ವಿರೋಧಿಗಳಿಗೆ ಜೈಕಾರ ಹೇಳುವುದನ್ನು, ಸಮರ್ಥಿಸಿಕೊಳ್ಳುವುದನ್ನು ಕ್ಷಮಿಸುವುದು ಸಾಧ್ಯವೇ ಇಲ್ಲ,ಸಾಧುವೂ ಅಲ್ಲ.
(ಲೇಖಕರು ಸಹಾಯಕ ಪ್ರಾಧ್ಯಾಪಕರು, ಹವ್ಯಾಸಿ ಬರಹಗಾರರು)