ಚೀನಾ ವಿಚಾರದಲ್ಲಿ ನೆಹರು ಅಲ್ಲ, ಪಟೇಲರೇ ಸರಿ

E 1
Published on

ಕಮ್ಯುನಿಸ್ಟ್ ಸಾಮ್ರಾಜ್ಯಶಾಹಿ ಚೀನಾದ ನೀತಿಯು ಪಾಶ್ಚಿಮಾತ್ಯ ಶಕ್ತಿಗಳ ವಿಸ್ತರಣೆ ಅಥವಾ ಸಾಮ್ರಾಜ್ಯಶಾಹಿಗಿಂತಲೂ ಭಿನ್ನವಾಗಿದೆ. ಚೀನಾ ಸಿದ್ಧಾಂತದ ಮೇಲಂಗಿಯನ್ನು ತೊಟ್ಟಿದ್ದು, ಹೆಚ್ಚು ಅಪಾಯಕಾರಿ. ಚೀನಾಕ್ಕೆ ಒಂದು ನಿರ್ದಿಷ್ಟ ಮಹತ್ವಾಕಾಂಕ್ಷೆ ಮತ್ತು ಗುರಿ ಇದ್ದು, ಅದು ಭಾರತದ ಕಡೆಗೆ ಸ್ನೇಹಪರವಾಗಿ ಗೋಚರಿಸುತ್ತಿಲ್ಲ ಎಂದು ಪಟೇಲರು ನೆಹರುಗೆ ಬರೆದ ಪತ್ರದಲ್ಲಿ ಸ್ಪಷ್ಟವಾಗಿ ಹೇಳಿದ್ದರು.

ಸ್ವಾತಂತ್ರೊ್ಯೕತ್ತರ ಭಾರತದ ಪ್ರಥಮ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ 70 ವರ್ಷಗಳ ಹಿಂದೆ ಅಂದರೆ 1950

ನವೆಂಬರ್ 11ರಂದು ಅಂದಿನ ಪ್ರಧಾನಿ ಪಂಡಿತ್ ಜವಾಹರ್​ಲಾಲ್ ಅವರಿಗೆ ಮಹತ್ವದ ಪತ್ರ ಬರೆದು-‘ಚೀನಾದ ವಿಸ್ತರಣಾವಾದದ ವಿನ್ಯಾಸವು ಭಾರತದ ಏಕತೆ, ಅಖಂಡತೆ ಮತ್ತು ಸಾರ್ವಭೌಮತ್ವಕ್ಕೆ ನಿರಂತರ ಬೆದರಿಕೆ ಆಗಿರುವುದರಿಂದ, ನಾವು ಆ ದೇಶವನ್ನು ಅನುಮಾನ ಮತ್ತು ಸಂಶಯದಿಂದಲೇ ನೋಡುವ ಅಗತ್ಯವಿದೆ’ ಎಂದು ಎಚ್ಚರಿಸಿದ್ದರು.

ಚೀನಾವನ್ನು ಏಕೆ ನಂಬಲು ಸಾಧ್ಯವಿಲ್ಲ ಎಂಬುದನ್ನು ಮತ್ತು ಚೀನಾದ ಕೈಯಲ್ಲಿ ಭಾರತ ಹೇಗೆ ನರಳಬಹುದು ಎಂಬುದನ್ನೂ ಆ ಸುದೀರ್ಘ ಪತ್ರದಲ್ಲಿ ಪಟೇಲರು ವಿವರಿಸಿದ್ದರು. ವಾಯವ್ಯದಿಂದ ಮಾತ್ರವಲ್ಲದೆ ಈಶಾನ್ಯದಿಂದಲೂ ಎದುರಾಗಬಹುದಾದ ಬಾಹ್ಯ ಆಕ್ರಮಣಶೀಲತೆಯ ಬೆದರಿಕೆಗಳನ್ನು ಎದುರಿಸಲು ನಮ್ಮ ರಕ್ಷಣಾ ಪಡೆಗಳನ್ನು ಬಲಪಡಿಸುವ ಮತ್ತು ಆಧುನೀಕರಿಸುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದರು.

‘ಭಾರತದ ಏಕತೆ, ಅಖಂಡತೆ ಮತ್ತು ಸಾರ್ವಭೌಮತ್ವಕ್ಕೆ ವಾಯವ್ಯ ಗಡಿಯಿಂದಷ್ಟೇ ಅಲ್ಲದೆ, ಈಶಾನ್ಯ ಗಡಿಯಿಂದಲೂ ಅದರಲ್ಲೂ ಚೀನಾದಿಂದ ಭೀತಿ ಎದುರಾಗುತ್ತಿರುವುದನ್ನು ನಾನು ಗಮನಿಸುತ್ತಿದ್ದೇನೆ. ನಾವು ಈ ಭೀತಿಯನ್ನು ಸಮರ್ಥವಾಗಿ ನಿಗ್ರಹಿಸಲು ಸನ್ನದ್ಧರಾಗಬೇಕು ಮತ್ತು ಕಟ್ಟುನಿಟ್ಟಿನ ನಿಗಾ ಇಡಬೇಕು’ ಎಂದು ಪಟೇಲರು ಆ ಪತ್ರದಲ್ಲಿ ಉಲ್ಲೇಖಿಸಿದ್ದರು. ಚೀನಾದ ವಿಸ್ತರಣಾವಾದದ ಸ್ವರೂಪದ ಬಗ್ಗೆ ಸರ್ದಾರ್ ಪಟೇಲ್ ನಿಖರವಾಗಿ ಬರೆದಿದ್ದಾರೆ.

‘ಕಮ್ಯುನಿಸ್ಟ್ ಸಾಮ್ರಾಜ್ಯಶಾಹಿ ಚೀನಾದ ನೀತಿಯು ಪಾಶ್ಚಿಮಾತ್ಯ ಶಕ್ತಿಗಳ ವಿಸ್ತರಣೆ ಅಥವಾ ಸಾಮ್ರಾಜ್ಯಶಾಹಿಗಿಂತಲೂ ಭಿನ್ನವಾಗಿದೆ. ಚೀನಾ ಸಿದ್ಧಾಂತದ ಮೇಲಂಗಿಯನ್ನು ತೊಟ್ಟಿದ್ದು, ಹೆಚ್ಚು ಅಪಾಯಕಾರಿ. ಸೈದ್ಧಾಂತಿಕ ವಿಸ್ತರಣೆಯ ಸೋಗಿನಲ್ಲಿ ಜನಾಂಗೀಯ, ರಾಷ್ಟ್ರೀಯ ಅಥವಾ ಐತಿಹಾಸಿಕ ಹಕ್ಕುಗಳನ್ನು ಮರೆಮಾಚಲಾಗಿದೆ. ಆದ್ದರಿಂದ ಕಮ್ಯುನಿಸ್ಟ್ ಮತ್ತು ಸಾಮ್ರಾಜ್ಯಶಾಹಿಯ ಎರಡೂ ಅಪಾಯ ಉತ್ತರ ಮತ್ತು ಈಶಾನ್ಯದಿಂದ ಎದುರಾಗುತ್ತಿವೆ. ಹೀಗಾಗಿ ಭಾರತದ ರಕ್ಷಣೆಗೆ ಎರಡೂ ಕಡೆಗಳಲ್ಲಿ ಏಕಕಾಲದಲ್ಲಿ ಗಮನ ಕೇಂದ್ರೀಕರಿಸಬೇಕಾಗಿದೆ. ಈವರೆಗೆ ನಮ್ಮ ರಕ್ಷಣಾ ಕ್ರಮಗಳು ಪಾಕಿಸ್ತಾನಕ್ಕಿಂತ ಎಷ್ಟು ಮಿಗಿಲಾಗಿದೆ ಎಂದಷ್ಟೇ ಲೆಕ್ಕ ಹಾಕಲಾಗುತ್ತಿತ್ತು. ಆದರೆ ನಮ್ಮ ಲೆಕ್ಕಾಚಾರದಲ್ಲಿ ನಾವು ಕಮ್ಯೂನಿಸ್ಟ್ ಚೀನಾವನ್ನು ಉತ್ತರ ಮತ್ತು ಈಶಾನ್ಯದಲ್ಲಿ ಹೇಗೆ ಎದುರಿಸಬೇಕು ಎಂಬುದನ್ನೂ ಪರಿಗಣಿಸಬೇಕಾಗಿದೆ- ಕಮ್ಯುನಿಸ್ಟ್ ಚೀನಾಕ್ಕೆ ಒಂದು ನಿರ್ದಿಷ್ಟ ಮಹತ್ವಾಕಾಂಕ್ಷೆ ಮತ್ತು ಗುರಿ ಇದ್ದು, ಅದು ಹೇಗೆ ನೋಡಿದರೂ ನಮ್ಮ ಕಡೆಗೆ ಸ್ನೇಹಪರವಾಗಿ ಗೋಚರಿಸುತ್ತಿಲ್ಲ’ ಎಂದು ಪಟೇಲರು ಸ್ಪಷ್ಟವಾಗಿ ಬರೆದಿದ್ದರು.

ಭಾರತಕ್ಕೆ ಅಂತಹ ಬಲವಾದ ಮತ್ತು ದೊಡ್ಡ ಸೈನ್ಯ ಹೊಂದುವ ಅಗತ್ಯವಿಲ್ಲ ಎಂಬ ಕ್ಲೀಷೆಯ ಆಧಾರದ ಮೇಲೆ ಸೈನ್ಯದ ಬಲವನ್ನು ತಗ್ಗಿಸುವ ಯೋಜನೆಯನ್ನು ನೆಹರು ಹೊಂದಿದ್ದರು. ಆದರೆ ಪಟೇಲರು, ‘ನಾವು ನಮ್ಮ ಪಡೆಗಳ ಬಲವನ್ನು ಪ್ರದರ್ಶಿಸಬೇಕಾಗಿದೆ. ಉತ್ತರ ಮತ್ತು ಈಶಾನ್ಯ ಭಾಗದಿಂದ ನಿರ್ದಿಷ್ಟ ಬೆದರಿಕೆ ಇರುವುದರಿಂದ ಸೇನಾಪಡೆ ಕಡಿಮೆಗೊಳಿಸುವ ನಿರ್ಧಾರ ಮರುಪರಿಶೀಲಿಸಬೇಕು’ ಎಂದಿದ್ದರು.

ಆದರೆ, ಪಟೇಲರ ಭಾವನೆಯನ್ನು ನೆಹರು ಕಡೆಗಣಿಸಿದರು. 1950ರ ನವೆಂಬರ್ 18ರಂದು ಪಟೇಲರ ಪತ್ರಕ್ಕೆ ಉತ್ತರಿಸಿದ ನೆಹರು, ‘ರಕ್ಷಣಾ ಪಡೆಗಳನ್ನು ಆಧುನೀಕರಿಸುವ ಮತ್ತು ಹೆಚ್ಚಿಸುವ ಅಗತ್ಯ ನಮಗಿಲ್ಲ. ಭಾರತ ಶಾಂತಿಪ್ರಿಯ ರಾಷ್ಟ್ರ. ನಾವು ಇತರ ರಾಷ್ಟ್ರಗಳ ಮೇಲೆ ಆಕ್ರಮಣ ಮಾಡುವುದಿಲ್ಲ. ಹೀಗಾಗಿ ಚಿಂತೆ ಮಾಡುವ ಅಗತ್ಯವಿಲ್ಲ. ಹಿಂದಿನ ಯೋಜನೆೆಯಂತೆಯೇ ನಾವು ಸೇನಾಬಲ ತಗ್ಗಿಸುವ ನಿಟ್ಟಿನಲ್ಲಿ ಮುಂದುವರಿಯಬೇಕು. ನಾವು ಚೀನಾದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ನಾನು ಭಾವಿಸಿದ್ದೇನೆ. ಭಾರತದ ಮೇಲೆ ಆಕ್ರಮಣ ಮಾಡುವ, ಕನಿಷ್ಠ ಸೇನಾ ಯೋಜನೆಗಳನ್ನು ಅದು ಹೊಂದಿಲ್ಲ. ಸೇನಾ ಹಸ್ತಕ್ಷೇಪದಿಂದ ನಮಗೆ ಅಪಾಯವಿಲ್ಲ, ಆದರೆ ಜನ ಮತ್ತು ಕಲ್ಪನೆಗಳ ಒಳನುಸುಳುವಿಕೆಯಿಂದ ಅಪಾಯವಿದೆ’ ಎಂದಿದ್ದರು.

ಪಟೇಲರು ನಿಧನರಾದ 12 ವರ್ಷಗಳ ಬಳಿಕ (1950 ಡಿಸೆಂಬರ್​ನಲ್ಲಿ ಪಟೇಲ್ ನಿಧನರಾದರು) ಅಂದರೆ 1962ರ ಅಕ್ಟೋಬರ್​ನಲ್ಲಿ ಅದೇ ನೆಹರು ಆಡಳಿತದಲ್ಲಿ ಭಾರತ ಚೀನಾ ವಿರುದ್ಧ ಸೋಲುವಂತಾಯಿತು. ಆಗ ಭಾರತದ ಕಡೆ ನಿಖರವಾಗಿ ಎಷ್ಟು ಸಾವು -ನೋವು ಸಂಭವಿಸಿತು ಎಂಬುದು ಇಂದಿಗೂ ರಹಸ್ಯವಾಗಿಯೇ ಉಳಿದಿದೆ, ಆದರೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳಿಗೆ ಸಂಬಂಧಿಸಿ, ‘ಕಳಪೆ ಸನ್ನದ್ಧತೆ’ಯಿಂದಾಗಿ ನೂರಾರು ವೀರಯೋಧರು ಹುತಾತ್ಮರಾದರು ಎಂಬುದರಲ್ಲಿ ಸಂದೇಹವಿಲ್ಲ. ನೆಹರುರ ‘ಸಂಕುಚಿತ ದೃಷ್ಟಿ ಮತ್ತು ಕೆಟ್ಟನಿರ್ಧಾರ’ದಿಂದಾಗಿ ಭಾರತ ಈ ಅವಮಾನ ಎದುರಿಸಬೇಕಾಯಿತು.

ಚೀನಾದ ಇಂಥ ವರ್ತನೆಯನ್ನು ಸರ್ದಾರ್ ಪಟೇಲರು ಮೊದಲೇ ಊಹಿಸಿದ್ದರು. ಅದೇ ಪತ್ರದಲ್ಲಿ ಪಟೇಲರು, ‘ನಿಮ್ಮ ಪ್ರಕಾರ ಚೀನಾ ಮಿತ್ರನಂತಿದ್ದರೂ, ನನ್ನ ಪ್ರಕಾರ ಚೀನಾ ನಮ್ಮನ್ನು ಮಿತ್ರ ಎಂದು ಪರಿಗಣಿಸುವುದಿಲ್ಲ’ ಎಂದಿದ್ದರು. ‘ಕಮ್ಯೂನಿಸ್ಟರ ಮನೋಭಾವ-‘ಯಾರು ನಮ್ಮೊಂದಿಗೆ ಇರುವುದಿಲ್ಲವೋ ನಾವು ಅವರ ವಿರುದ್ಧ’. ಇದನ್ನು ಪೂರ್ಣ ಗಂಭೀರತೆಯಿಂದ ಪರಿಗಣಿಸಬೇಕು. ನಮ್ಮ ಒಳ್ಳೆಯ ಉದ್ದೇಶಗಳು, ಸ್ನೇಹಪರತೆ ಮತ್ತು ಸದಿಚ್ಛೆಯನ್ನು ಚೀನಾಕ್ಕೆ ಮನವರಿಕೆ ಮಾಡಲು ನಾವು ಈಗಾಗಲೇ ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಅದಕ್ಕಿಂತ ಹೆಚ್ಚಿನದನ್ನು ಏನು ಮಾಡಲು ಸಾಧ್ಯವಿದೆ?’ ಡ್ರಾ್ಯಗನ್ ರಾಷ್ಟ್ರದ ದುರುದ್ದೇಶ, ಪೈಶಾಚಿಕ ಮನೋಭಾವವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದ ಸರ್ದಾರ್​ರ ದೂರದೃಷ್ಟಿಗೆ ಇದು ಸಾಕ್ಷಿಯಾಗಿದೆ.

1950 ನವೆಂಬರ್ 4ರಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಗಿರಿಜಾ ಶಂಕರ್ ವಾಜಪೇಯಿ ಅವರಿಗೆ ಬರೆದ ಪತ್ರದಲ್ಲಿ ಪಟೇಲರು, ‘ನಮ್ಮ ಬಾಗಿಲಿನಲ್ಲೇ ಇರುವ ಸಂಪೂರ್ಣ ನಿರ್ಲಜ್ಜ, ವಿಶ್ವಾಸಾರ್ಹವಲ್ಲದ ಶಕ್ತಿಯನ್ನು ಗಮನಿಸಬೇಕು. ನನ್ನ ನಿರ್ಣಯದಂತೆ, ನಾವು ಅವರನ್ನು (ಚೀನಾದವರನ್ನು) ಹಗೆತನದಿಂದಲೇ ನೋಡಬೇಕು, ಚೀನಾದೊಂದಿಗೆ ಸ್ನೇಹಪರವಾಗಿರಲು ಸಾಧ್ಯವಿಲ್ಲ’ ಎಂದು ಹೇಳಿದ್ದರು.

ಚೀನಾ ನಂಬಿಕೆಗೆ ಸಂಪೂರ್ಣವಾಗಿ ಅರ್ಹವಲ್ಲ ಮತ್ತು ವಿಶ್ವಾಸಾರ್ಹವಲ್ಲ ಎಂಬ ತಮ್ಮ ವಾದವನ್ನು ಸಮರ್ಥಿಸಲು, ಪಟೇಲರು, ‘ನಾನು ವಿದೇಶಾಂಗ ಸಚಿವಾಲಯ ಮತ್ತು ಪೀಕಿಂಗ್​ನಲ್ಲಿರುವ ನಮ್ಮ ರಾಯಭಾರಿ ಹಾಗೂ ಅವರ ಮೂಲಕ ಚೀನಾ ಸರ್ಕಾರದ ನಡುವೆ ನಡೆದಿರುವ ಪತ್ರವ್ಯವಹಾರಗಳನ್ನು ಬಹಳ ಎಚ್ಚರಿಕೆಯಿಂದ ಗಮನಿಸಿದ್ದೇನೆ. ಚೀನಾ ಸರ್ಕಾರ ನಮ್ಮನ್ನು ಮೋಸಗೊಳಿಸಲು ಪ್ರಯತ್ನಿಸಿದೆ. ನಾವು ಚೀನಿಯರನ್ನು ನಂಬಲು ಸಾಧ್ಯವಿಲ್ಲ’ ಎಂದು ಬರೆದಿದ್ದರು.

ಕಳೆದ ಕೆಲವು ವಾರಗಳಿಂದ ಗಾಲ್ವಾನ್ ಕಣಿವೆಯಲ್ಲಿ ಸೈನ್ಯವನ್ನು ಹಿಂದಕ್ಕೆ ಕರೆಸಿಕೊಳ್ಳುವ ವಿಚಾರದಲ್ಲಿ ಚೀನಾ ಮಾಡುತ್ತಿರುವುದು ಇದನ್ನೇ-ಶಾಂತಿಯ ಹೆಸರಿನಲ್ಲಿ ಭಾರತವನ್ನು ನಂಬಿಸುವ ಪ್ರಯತ್ನಮಾಡಿ ತನ್ನ ನಿಲುವನ್ನು ಅಚಲವಾಗಿ ಮುಂದುವರಿಸಿದೆ. ಒಪ್ಪಂದಗಳ ರೀತ್ಯ ಪೂರ್ಣವಾಗಿ ಸೈನ್ಯವನ್ನು ಹಿಂದಕ್ಕೆ ಕರೆಸಿಕೊಳ್ಳುವ ಬದಲು, ವಾಸ್ತವ ಗಡಿ ನಿಯಂತ್ರಣ ರೇಖೆ ಉದ್ದಕ್ಕೂ ಪಡೆಗಳ ನಿಯೋಜನೆಯನ್ನು ಮುಂದುವರಿಸಿದೆ. ಸೇನೆ ಸಹ- ‘ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ ಮತ್ತು ಚೀನಾ ಅನಗತ್ಯವಾಗಿ ವಿಳಂಬ ಮಾಡುತ್ತಿದೆ’ ಎಂದು ಹೇಳಿದೆ. ಅಂದರೆ, ಚೀನಾ ‘ಶಾಂತಿಯುತ ಉದ್ದೇಶ’ಗಳ ತನ್ನ ಗುಪ್ತ ಕಾರ್ಯಸೂಚಿಯನ್ನು ಮರೆಮಾಚುವ ಮೂಲಕ ನಮ್ಮನ್ನು ಮೋಸಗೊಳಿಸುತ್ತಿದೆಯೇ?

ಇದರಲ್ಲಿ ಭರವಸೆಯ ಕಿರಣವೆಂದರೆ, ಈಗಿನದು 2020ರ ಭರವಸೆಯ ಭಾರತವೇ ಹೊರತು 1962ರ ಭಾರತವಲ್ಲ ಮತ್ತು ನಾವು ನೆಹರುರಂಥ ಸಂಕುಚಿತ ದೃಷ್ಟಿಕೋನದ, ರಕ್ಷಣಾ ಪಡೆಗಳ ಬಗ್ಗೆ ತಿರಸ್ಕಾರ ಹೊಂದಿದ ನಾಯಕನನ್ನು ಹೊಂದಿಲ್ಲ. ಬದಲಾಗಿ, ಭಾರತವನ್ನು ಈಗ ಮುನ್ನಡೆಸುತ್ತಿರುವುದು ದೂರದರ್ಶಿತ್ವ, ಸ್ಥಿರತೆ ಹೊಂದಿರುವ, ಸಶಸ್ತ್ರ ಪಡೆಗಳನ್ನು ಬಲಪಡಿಸಲು ದೃಢನಿಶ್ಚಯ ತಳೆದಿರುವ ಮತ್ತು 130 ಕೋಟಿ ಭಾರತೀಯರ ಸಾಮೂಹಿಕ ಸ್ವಾಭಿಮಾನ, ಘನತೆ ಮತ್ತು ಗೌರವವನ್ನು ಬಿಟ್ಟುಕೊಡದ ನಾಯಕ ಎಂಬುದು ಹೆಮ್ಮೆಯ ವಿಚಾರ.

(ಲೇಖಕರು ಹಿರಿಯ ಪತ್ರಕರ್ತರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net