ಅನಿಸಿಕೆ ಅಂಕಣ: ಆಹಾರ ಸಂಸ್ಕೃತಿ ಮರೆತರೆ ಕಾಯಿಲೆಗಳಿಗೆ ಆಹ್ವಾನ

Edit 2
Published on

‘ಕರೊನಾ ಕರೊನಾ’... ಎಂದರೆ ಹಿಂದಿಯಲ್ಲಿ ‘ಮಾಡು, ಮಾಡು’ ಎಂದಾಗುತ್ತದೆ! ಆಗ ಮೃತ್ಯುವು ‘ಕರ್ದಿಯಾ’ ಕರೊನಾ ಎಂದು ಹೇಳುತ್ತ ಗಹಗಹಿಸಿ ನಗುತ್ತದೆ. ಹಿಂದೆ ‘ಕರೊನಾ’ ಎಂದಾಗ ಭಗವಂತನ ನಾಮಸ್ಮರಣೆ, ಸತ್ಕರ್ಮಗಳನ್ನು ಮಾಡುತ್ತ ‘ಕರ್ದಿಯಾ’ ಎನ್ನುತ್ತಿದ್ದರು. ಈಗ ಕಾಲ ಬದಲಾಗಿದೆ. ಅತ್ಯಾಚಾರ, ಅನಾಚಾರಗಳಲ್ಲದೆ ಅನಿಯಮಿತ ಆಹಾರ ಸೇವನೆ ಮಾಡುತ್ತ ‘ಕರ್ದಿಯಾ’ ಎನ್ನುವ ಕಾಲ ಬಂದಿದೆ. ಕಂಡಕಂಡಲ್ಲಿ ತಿನ್ನುವುದು, ಆಧುನಿಕ ಚೀನಾ ಆಹಾರ ಪದ್ಧತಿಯ ಅನುಕರಣೆ, ಚೀನೀಸ್ ಆಹಾರದ ಗೂಡಂಗಡಿಗಳು ತಲೆ ಎತ್ತಿದ್ದೇ ದುರಂತಗಳಿಗೆ ಆಹ್ವಾನ. ಬುದ್ಧಿಸಂ ಎನ್ನುವ ಚೀನಾ ದೇಶ ಎಲ್ಲಿ ಗೌತಮ ಬುದ್ಧನ ಅನುಕರಣೆ ಮಾಡಿದೆ? ಕೇವಲ ಬುದ್ಧ ದೇವಾಲಯಗಳನ್ನು ಪ್ರವಾಸಿಕೇಂದ್ರ ಮಾಡಿಕೊಂಡು, ಅಲಂಕಾರ, ಆಡಂಬರ ಮಾಡುವುದು ಬಿಟ್ಟರೆ ಗೌತಮ ಬುದ್ಧನ ಆಹಾರಸಂಸ್ಕೃತಿ, ನಿಯಮ, ಶಿಸ್ತು ಎಲ್ಲಿದೆ?

ಈಗ ನಮ್ಮಲ್ಲೂ ಇಂತಹ ಆಡಂಬರ ಶುರುವಾಗಿದೆ. ಆಡಂಬರ ಮಾಡಿದವರಿಗೆ ಏನಾಗುತ್ತಿದೆ ಎಂಬುದನ್ನೊಮ್ಮೆ ಸಿಂಹಾವಲೋಕನ ಮಾಡಬೇಕಿದೆ. ಹಿಂದೆ ನಮ್ಮ ಊರಲ್ಲಿ ಊರ ಮಾರಿ (ಮಾಯಿ=ತಾಯಿ ಎಂದಾಗಬೇಕು) ಎಂದು ಮಾರಮ್ಮನ ಗುಡಿಯಲ್ಲಿ ಪೂಜೆ ಮಾಡುತ್ತಿದ್ದರು. ಮಹಾ ಮಾರಿ ರೋಗಗಳನ್ನು ತಡೆಯುವ ಶಕ್ತಿ ಆ ಮಹಾಮಾತೆಗೆ ಮಾತ್ರ ಸಾಧ್ಯ ಎಂದು ಅವಳಿಗೆ ಶರಣಾಗುತ್ತಿದ್ದರು. ಸಿಡುಬು, ಕಾಮಾಲೆ, ಕಾಲರಾ, ಜ್ವರಬಾಧೆಗಳೆಂಬ ಮಹಾಮಾರಿ ರೋಗಗಳಿಂದ ಊರಿಗೆ ಊರೇ ಖಾಲಿಯಾಗುತ್ತಿದ್ದ ಕಾಲವದು. ಕಾರಣ ಏನೆಂದರೆ ಸಂಸ್ಕೃತಿ ಅಳಿದುಹೋಗಿತ್ತು. ಸ್ವಚ್ಛತೆ ಇರಲಿಲ್ಲ. ಹೊಲಸನ್ನು ಬೀದಿಗೆಸೆದು ಹಂದಿ, ಬೀದಿ ನಾಯಿಗಳಿಗೆ ಆಹಾರ ಸಿಗುವಂತೆ ಮಾಡುತ್ತಿದ್ದ ಕಾಲವದು. ಇದರ ಪರಿಣಾಮ ರೋಗಗ್ರಸ್ತ ಪ್ರಾಣಿಗಳನ್ನೇ ತಿನ್ನೋದು, ಸಾಲದ್ದಕ್ಕೆ ಅದರ ಹೊಲಸನ್ನು ರಸ್ತೆಗೆ ಬಿಸಾಡೋದು. ಇದೆಲ್ಲ ರೋಗವನ್ನು ಸೃಷ್ಟಿಸಿಕೊಳ್ಳೋದೂ ನಾವೇ, ಸಾಯೋದೂ ನಾವೇ. ಸುಂದರ ಪರಿಸರವನ್ನು ಮಲಿನಗೊಳಿಸಿದರೆ ಏನಾಗುತ್ತದೆ ಎಂದು ಅನುಭವಿಸಿದಾಗಲೇ ಗೊತ್ತಾಗೋದು.

ಮತ್ತೆ ಸಂಕಟಪಟ್ಟು ಪ್ರಯೋಜನವೇನಿದೆ? ಈಗ ಸ್ವಚ್ಛತೆ ಏನೋ ಇದೆ. ಆಡಳಿತಗಳು ಸ್ವಚ್ಛತೆಗೆ ಒತ್ತು ನೀಡುತ್ತಿವೆ. ಸ್ವಚ್ಛವಾದ ಆಹಾರ ಮಾರುವ ಕೇಂದ್ರಗಳೂ ಎದ್ದು ನಿಂತಿವೆ. ಉತ್ತಮವಾದ ಸೇವೆ ಇದೆ. ಅಡುಗೆ ಕೋಣೆಗಳೂ ಸ್ವಚ್ಛವಾಗಿವೆ. ಸಪ್ಲೈ ಮಾಡುವವರೂ ಸ್ವಚ್ಛವೇ. ಅದಕ್ಕೆ ಬೇಕಾದ ಪರಿಕರಗಳೂ (ತಟ್ಟೆ, ಚಮಚ ಇತ್ಯಾದಿ) ಸ್ವಚ್ಛವಾಗಿವೆ. ಆದರೆ ಅದರ ಒಳಗೆ ಘಮಘಮಿಸುವ ಆಹಾರವೆಲ್ಲ ವಿಷಯುಕ್ತ. ವಿವಿಧ ರೀತಿಯ ರಾಸಾಯನಿಕಗಳದ್ದೇ ಕಾರುಬಾರು. ಇಂತಹ ಆಹಾರವು ದೇಹಕ್ಕೆ ಅಪಥ್ಯವಾಗುತ್ತದೆ. ನಾಲಿಗೆಗೆ ಪಥ್ಯವಾದರೂ ದೇಹಕ್ಕೆ ಅಪಥ್ಯವೇ. ಮನಸ್ಸಿಗೆ ಅಪಥ್ಯವೇ. ಯಾವಾಗ ಮನಸ್ಸಿಗೆ ಅಪಥ್ಯವಾಗುತ್ತದೋ ಆಗ ದೇಹದೊಳಗಿನ ಬ್ಯಾಕ್ಟೀರಿಯಗಳ ರೂಪವೂ ಬದಲಾಗಿ ಮಾರಕವಾಗುತ್ತದೆ. ಇಂತಹ ಹೊಸ ಹೊಸ ಅಬೋಲ, ಕರೊನಾ ವೈರಸ್​ಗಳಾಗಿ ಮಾರ್ಪಾಟಾಗಿ ದೇಹವನ್ನು ಜರ್ಜರಿತಗೊಳಿಸುತ್ತವೆ.

ಜಾತಕಗಳಲ್ಲಿ ರಾಹು-ಕೇತುಗಳೆಂಬ ಎರಡು ಗ್ರಹಗಳು ಸೈನೈಡ್ ಸೂಚಕಗಳು. ದೇಹದೊಳಗೆ ರೋಗ ನಿರೋಧಕವಾದ ಸೈನೈಡ್ ಬೇಕಾಗುತ್ತದೆ. ಅದು ಹೆಚ್ಚಾದರೂ ರೋಗ, ಪ್ರಮಾಣಕ್ಕಿಂತ ಕಡಿಮೆಯಾದರೂ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಪುರಾಣ ಕಥೆಗಳಲ್ಲಿ ಶಿವನ ಬಗ್ಗೆ ಕೇಳಿರಬಹುದು. ಹಾಲಾಹಲವನ್ನು ಕುಡಿದವನೇ ಪರಶಿವ. ಪ್ರಜಾರಕ್ಷಣೆಗಾಗಿ ಶಿವನು ಹಾಲಾಹಲ ಕುಡಿದ. ಅದರ ಸಂಕೇತವಾಗಿ ಶಿವನ ಚಿತ್ರಗಳಲ್ಲಿ ಕತ್ತಿನಲ್ಲಿ ನೀಲವರ್ಣವಿರುತ್ತದೆ. ಅಂದರೆ ವಿಷವನ್ನೂ ಸಮತೋಲನದಲ್ಲಿ ಇಟ್ಟುಕೊಂಡವ ಶಿವ ಎಂದರ್ಥ. ಇದಕ್ಕಾಗಿಯೇ ಶಿವನನ್ನು ನಂಜುಂಡೇಶ್ವರ ಎಂದು ಪೂಜಿಸಿದೆವು. ನಂಜನಗೂಡಿನ ನಂಜುಂಡೇಶ್ವರ ದೇವರ ತೀರ್ಥ ಪ್ರಾಶನವು ಸರ್ವವಿಷಗಳನ್ನೂ ನಿಮೂಲನ ಮಾಡುತ್ತದೆ. ಆ ಕ್ಷೇತ್ರದ ಮಹಿಮೆ ಅದು.

ಹಾಗಾಗಿ ಇಂತಹ ಮಹಾರೋಗಕ್ಕೆ ಔಷಧ ಎಂದರೆ ಪರಶಿವನು ಮಾತ್ರ. ಇದು ನಂಬಿಕೆಯಲ್ಲ. ಸೈದ್ಧಾಂತಿಕವಾದ ತತ್ತ್ವ. ಸುಮ್ಮಸುಮ್ಮನೆ ನಂಜುಂಡೇಶ್ವರ ಎಂಬ ಹೆಸರು ಬರಲಿಲ್ಲ, ಆ ಹೆಸರಿನಲ್ಲಿ ದೇವರನ್ನೂ ಕಾಣಲಿಲ್ಲ. ಇದರೊಳಗೆ ಮಹಾತತ್ತ್ವವಿದೆ. ಈಗಿನ ಕಾಲದಲ್ಲಿ ಆ ತತ್ತ್ವಗಳ ಬಗ್ಗೆ ನೋಡುತ್ತಿಲ್ಲ. ಕೇವಲ ಊಚ್ಞ್ಚ ಆಗಿರೋದೇ ದುರಂತ.

ಒಂದು ದೇಹಕ್ಕೆ ಇಂತಿಷ್ಟೇ ರೋಗಗಳ ಬಾಧೆಗಳಿರುತ್ತದೆ ಎಂಬುದು ಶರೀರ ರಚನೆಯ ಸಿದ್ಧಾಂತ. ಹೇಗೆ ಒಂದು ಕಂಪ್ಯೂಟರಿಗೋ, ಯಂತ್ರಕ್ಕೋ, ವಾಹನಕ್ಕೋ ತೊಂದರೆಗಳು ಹೀಗೇ ಬರುತ್ತವೆ ಎಂಬ ಸಿದ್ಧಾಂತ ಇದೆಯೋ ಹಾಗೆಯೇ ದೇಹಕ್ಕೂ ಇರುತ್ತದೆ. ಎಣ್ಣೆಯಲ್ಲಿ ಕರಿದ ಪದಾರ್ಥ ಹೆಚ್ಚು ತಿಂದರೆ ಎಸಿಡಿಟ್ ಎಂದು ಹೇಳುತ್ತೇವೆಯೋ, ಮಳೆಗೆ ನೆನೆದರೆ ಶೀತ, ಕಫದೋಷ ಎಂದು ಹೇಳುತ್ತೇವೆಯೋ ಅದೇ ರೀತಿ ವಿವಿಧ ರೋಗಗಳಿಗೆ ಕಾರಣವೂ ಇದೆ. ಅಲ್ಲದೆ ರೋಗ ಬರುವುದಕ್ಕೆ ಲಕ್ಷಣಗಳೂ (symptoms) ಇರುತ್ತವೆ. ಆದರೆ ಮನುಷ್ಯರಿಗೆ ಅದನ್ನು ತಿಳಿಯುವ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಆಹಾರ ನಿಯಮ ಮರೆತಿದ್ದರ ಫಲವೇ ಈ ಎಲ್ಲ ಸಮಸ್ಯೆಗಳು. ಈಗೆಲ್ಲ, ಒಂದು ಎರಡು ಸಲ ಅಕ್ಷಿ ಬಂದರೆ ಸಾಕು ಅದಕ್ಕೆ ಪ್ಯಾರಸಿಟಮಲ್ ಮಾತ್ರೆಗಳು, ತಲೆನೋವು ಬಂದರೆ ಯಾವುದ್ಯಾವುದೋ ಬಾಮುಗಳು ಇರುತ್ತವೆ. ಇದೆಲ್ಲವೂ ಸ್ಪರ್ಶಜ್ಞಾನ(sensation)ವನ್ನು ನಾಶ ಮಾಡುತ್ತವೆ. ಯಾವಾಗ ಸ್ಪರ್ಶಜ್ಞಾನ ಹೋಗುತ್ತದೋ ಆವಾಗ ರೋಗ ತಗುಲಿದ್ದೇ ಗೊತ್ತಾಗಲ್ಲ. ಮುಂದೆ ಮೃತ್ಯುವಿಗೇ ಆಹ್ವಾನ.

‘ನಿರ್ಣಯ ಸಿಂಧು’ ಮುಂತಾದ ಗ್ರಂಥಗಳಲ್ಲಿ ದಿನಕೃತ್ಯಗಳ ಬಗ್ಗೆ ಹೇಳಲಾಗಿದೆ. ಮಾಸ, ದಿನ, ತಿಥಿಗಳಿಗೆ ಅನುಗುಣವಾಗಿ ವ್ರತ ನಿಯಮಗಳನ್ನು, ಆಹಾರ ಪಥ್ಯಗಳನ್ನು ತಿಳಿಸಿದ್ದಾರೆ. ಇಂದು ಅದೆಲ್ಲವನ್ನು ಗೊಡ್ಡು ಸಂಪ್ರದಾಯವೆಂದು ಜರಿಯಲಾಗುತ್ತಿದೆ ಎಂಬುದು ವಿಪರ್ಯಾಸ. ಇದರ ಫಲವೇ ಇಂತಹ ಮಹಾರೋಗಗಳ ಹಾವಳಿ. ಕನಿಷ್ಠಕ್ರಮದ ಪಥ್ಯವನ್ನಾದರೂ ಮಾಡಿಕೊಂಡರೆ ಖಂಡಿತವಾಗಿಯೂ ದೇಹಾರೋಗ್ಯ ಸರಿ ಮಾಡಿಕೊಳ್ಳಬಹುದು, ಆಯಸ್ಸನ್ನೂ ಹೆಚ್ಚಿಸಿಕೊಳ್ಳಬಹುದು. ಆಯಸ್ಸನ್ನು ದೇವರು ನೀಡುವುದಲ್ಲ. ನಮ್ಮ ನಮ್ಮ ಜ್ಞಾನವೇ ನಿರ್ಧರಿಸುತ್ತದೆ. ಪ್ರತೀ ಮಾಸ ಬದಲಾವಣೆ ಅಥವಾ ಪರ್ವದಿನ ಅಥವಾ ಋತು ಬದಲಾವಣೆಯ ಕಾಲದಲ್ಲಿ ಪಂಚಗವ್ಯ ಪ್ರಾಶನ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಹಾಗೆ ಮಾಡಲಾಗದಿದ್ದರೂ ವರ್ಷಕ್ಕೊಮ್ಮೆ ಪ್ರಾಶನ ಮಾಡಲೇ ಬೇಕು. ದೇವರ ತುಳಸಿಯುಕ್ತ ಶಾಲಗ್ರಾಮ ತೀರ್ಥವು ಸರ್ವರೋಗ ನಿವಾರಕ. ನಮ್ಮ ಸಂಪ್ರದಾಯಗಳಲ್ಲಿ ಇದು ರೂಢಿಯಾಗಿ ಇಂದಿಗೂ ನಡೆಯುತ್ತಿದೆ. ಅಂದರೆ ಮನುಷ್ಯನು ರೋಗನಿರೋಧಕ ಶಕ್ತಿಯನ್ನು ವೃದ್ಧಿಗೊಳಿಸಬೇಕು ಎಂಬುದೇ ಮೂಲ ಉದ್ದೇಶ. ಅದನ್ನು ಅರಿತುಕೊಂಡು ನಡೆದರೆ ಕ್ಷೇಮ. ಆಧುನಿಕತೆಯ ಭರದಲ್ಲಿ ನಮ್ಮ ಸಂಸ್ಕೃತಿ, ಆಹಾರ ಕ್ರಮವನ್ನು ಮರೆತು ಆಡಂಬರದ ಬೆನ್ನು ಹತ್ತಿದರೆ ಸಮಸ್ಯೆ ತಪ್ಪಿದ್ದಲ್ಲ.

(ಲೇಖಕರು ಜ್ಯೋತಿರ್ವಿಜ್ಞಾನ ವಿದ್ವಾಂಸರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net