ಇಂಧನ ಅಗ್ನಿಯಲ್ಲಿ ಮೈಕಾಯಿಸಿಕೊಳ್ಳುವ ಪ್ರತಿಪಕ್ಷಗಳು

Congress
Published on

ಪೆಟ್ರೋಲ್​ ಶತಕ ಬಾರಿಸಿದೆ. ಕ್ರಿಕೆಟ್​ ಪಂದ್ಯದಲ್ಲಿ ಹೇಳುವಂತೆ ಇದು ಸಂತಸಪಡುವ ವಿಚಾರವಲ್ಲ. ಪೆಟ್ರೋಲ್​, ಡೀಸೆಲ್​ ಉತ್ಪನ್ನಗಳು ಇಂದು ಸಮಾಜದ ಅವಿಭಾಜ್ಯ ಅಂಗಗಳಾಗಿವೆ. ಹಣ್ಣು, ತರಕಾರಿ, ಬೇಳೆ ಸಾಗಿಸಲು ರೈಲು, ಟ್ರಕ್​ಗಳಿಗೆ ಇಂಧನ ಬೇಕು. ನಂತರ ಅದನ್ನು ದೇಶಾದ್ಯಂತ ನರಮಂಡಲಗಳಂತೆ ಹರಡಿಕೊಂಡಿರುವ ಚಿಲ್ಲರೆ ಮಾರುಕಟ್ಟೆಗಳಿಗೆ, ಪ್ರತಿ ಗ್ರಾಹಕನ ಮನೆಗೆ ತಲುಪಿಸಲು ಪೆಟ್ರೋಲ್​ ಬೇಕು. ಕೃಷಿ ೇತ್ರದ ಯಂತ್ರಗಳ ಚಾಲನೆಗೆ ಇಂಧನ ಬೇಕು. ಇಂಧನ ದರ ಏರಿಕೆಯಿಂದ ಸಾಗಣೆ ವೆಚ್ಚ ಹೆಚ್ಚಾಗುತ್ತದೆ. ಸಾಗಣೆ ವೆಚ್ಚ ಹೆಚ್ಚಿದಂತೆ ಉತ್ಪಾದನಾ ವೆಚ್ಚ ಹೆಚ್ಚಾಗುತ್ತದೆ. ಗ್ರಾಹಕರ ಜೇಬಿಗೂ ಕತ್ತರಿ ಬೀಳುತ್ತದೆ. ಒಂದೂವರೆ ವರ್ಷದ ಕರೊನಾ ಮಹಾಮಾರಿ ನಡುವೆ ಇಂಧನ ಬೆಲೆ ಏರಿಕೆ ಜನಸಾಮಾನ್ಯರ ಸಂಕಷ್ಟವನ್ನು ಹೆಚ್ಚಿಸಿದೆ ಎಂಬುದನ್ನು ನಾವೆಲ್ಲರೂ ಒಪ್ಪಬೇಕು. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ತೈಲ ಸಚಿವ ಧಮೇರ್ಂದ್ರ ಪ್ರಧಾನ್​ ಅವರೂ ಇದೇ ಮಾತನ್ನು ಹೇಳಿದ್ದಾರೆ.

ಬೆಲೆ ಏರಿಕೆಯಿಂದ ಜನರಿಗೆ ಸಂಕಷ್ಟವಾಗಿದೆ ಎಂಬುದು ಪ್ರತಿಪಕ್ಷಗಳಿಗೆ ಹಬ್ಬವಾಗಿ ಪರಿಣಮಿಸಿದೆ. ರಾಜ್ಯ ಕಾಂಗ್ರೆಸ್​ ಟಕದ ಅಧ್ಯಕ್ಷರೇ ರಸ್ತೆಯಲ್ಲಿ ಫಲಕ ಹಿಡಿದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಹರಿಹಾಯ್ದಿದ್ದಾರೆ. ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಲೀಟರ್​ ಪೆಟ್ರೋಲ್​ 30 ರೂಪಾಯಿ ಹೆಚ್ಚಳವಾಗಿದೆ. ಮನ್​ಮೋಹನ್​ ಸಿಂಗ್​ ಅವಧಿಯಲ್ಲಿ ಕಚ್ಚಾತೈಲದ ಬೆಲೆ 125 ಡಾಲರ್​ ಇತ್ತು. ಆಗ ಪೆಟ್ರೋಲ್​ ಬೆಲೆ 70 ರೂಪಾಯಿಯಷ್ಟಿತ್ತು. ಈಗ ಕಚ್ಚಾತೈಲದ ಬೆಲೆ 70 ಡಾಲರ್​ ಇದ್ದರೂ ಪೆಟ್ರೋಲ್​ ಬೆಲೆ 100 ರೂ. ದಾಟಿದೆ. ಜೊತೆಗೆ ಈಗಿನ ಕೇಂದ್ರ ಸರ್ಕಾರ ಲೀಟರ್​ ಪೆಟ್ರೋಲ್​ ಮೇಲೆ 31.84 ರೂ. ಹಾಗೂ ಡಿಸೇಲ್​ ಮೇಲೆ 32.84 ರೂ. ಅಬಕಾರಿ ಸುಂಕ ವಿಧಿಸಿ ಜನರ ಸುಲಿಗೆ ಮಾಡುತ್ತಿದೆ. ಲೀಟರ್​ ಪೆಟ್ರೋಲ್​ ಮೂಲಬೆಲೆ 35 ರೂಪಾಯಿ ಇದ್ದರೂ ಜನರು 65 ರೂಪಾಯಿ ತೆರಬೇಕು. ಪ್ರಪಂಚದಲ್ಲಿ ಲೀಟರ್​ ಪೆಟ್ರೋಲ್​ಗೆ ಶೇ 65% ತೆರಿಗೆ ಪಾವತಿಸುತ್ತಿರುವುದು ಭಾರತದಲ್ಲಿ ಮಾತ್ರ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ. ಅವರು ಹೇಳಿದ ಅಂಕಿಅಂಶ ಸರಿಯಿದೆ. ಆದರೆ ಅದರ ಹಿಂದಿನ ಕಾರಣಗಳನ್ನು ತಿಳಿಸುವ ಪ್ರಾಮಾಣಿಕತೆಯನ್ನು ಮಾತ್ರ ಅವರು ತೋರಿಸಿಲ್ಲ. ಮನಮೋಹನ್​ ಸಿಂಗ್​ ಸರ್ಕಾರವಿದ್ದಾಗ 2012&14ರ ಅವಧಿಯಲ್ಲಿ ಕಚ್ಚಾತೈಲದ ಬೆಲೆ ಹೆಚ್ಚಿದ್ದರೂ ಪೆಟ್ರೋಲ್​ ಬೆಲೆ 70 ರೂಪಾಯಿ ಆಸುಪಾಸಿನಲ್ಲೇ ಇತ್ತು ಎಂದಿರುವುದು ಅರ್ಧಸತ್ಯ. ಪೂರ್ಣ ಸತ್ಯ ಏನೆಂದರೆ, ಸನಿಹದಲ್ಲೆ(2014ರಲ್ಲಿ) ದೇಶದಲ್ಲಿ ಲೋಕಸಭೆ ಚುನಾವಣೆಗಳು ಎದುರಾಗುವುದಿತ್ತು. ಈ ಸಮಯದಲ್ಲಿ ಇಂಧನ ದರ ಏರಿಕೆಯಾದರೆ ಸೋಲು ಖಚಿತ ಎಂದರಿತ ಕಾಂಗ್ರೆಸ್​ ನೇತೃತ್ವದ ಸರ್ಕಾರ, 1.44 ಲಕ್ಷ ಕೋಟಿ ರೂ. ಮೌತ್ತದ ತೈಲ ಬಾಂಡ್​ ಖರೀದಿಸಿತ್ತು. ತೈಲ ಬಾಂಡ್​ ಎಂದರೆ ಸಾಲದ ಬಾಂಡ್​. ಇಷ್ಟು ಮೊತ್ತದ ಹಣವನ್ನು ಕೇಂದ್ರ ಸರ್ಕಾರ ನೇರವಾಗಿ ತೈಲ ಕಂಪನಿಗಳಿಗೆ ತೈಲ ಸಬ್ಸಿಡಿಯಾಗಿ ವರ್ಗಾವಣೆ ಮಾಡಿತು. ಇಂಧನ ದರ ಕಡಿತದಿಂದ ತಮಗಾಗುತ್ತಿದ್ದ ನಷ್ಟವನ್ನು ತೈಲ ಕಂಪನಿಗಳು ಈ ಹಣದಿಂದ ತೀರಿಸಿಕೊಂಡಿದ್ದರಿಂದ ನಾಗರಿಕರಿಗೆ ಹೊರೆ ಕಂಡಿರಲಿಲ್ಲ. ಈ ಸಾಲದ ತಂತ್ರದ ಹೊರತಾಗಿಯೂ ಕಾಂಗ್ರೆಸ್​ ಸೋತು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂತು. ಯುಪಿಎ ಸರ್ಕಾರ ಮಾಡಿದ್ದ ತೈಲ ಬಾಂಡ್​ ಸಾಲಕ್ಕೆ ಮೋದಿ ಸರ್ಕಾರ 70 ಸಾವಿರ ಕೋಟಿ ರೂಪಾಯಿ ಬಡ್ಡಿಯನ್ನೇ ಪಾವತಿಸಬೇಕಿತ್ತು. ಹೀಗೆಯೇ ಮುಂದುವರಿದರೆ ದೇಶದ ತೆರಿಗೆದಾರರ ಶ್ರಮದ ಹಣವನ್ನು ವ್ಯರ್ಥ ಮಾಡಿದಂತಾಗುತ್ತದೆ ಎಂದರಿತು, ಬಡ್ಡಿ ಸಮೇತ ಸುಮಾರು 2 ಲಕ್ಷ ಕೋಟಿ ರೂಪಾಯಿ ಸಾಲ ತೀರಿಸಿತು. ಹಾಗಾದರೆ, ಜನರ ತೆರಿಗೆ ಹಣವನ್ನು ಬಡ್ಡಿಗೆ ಪಾವತಿಸುವುದು ಉತ್ತಮ ಆರ್ಥಿಕತೆ ಎಂದು ಕಾಂಗ್ರೆಸ್ಸಿಗರು ಹೇಳುತ್ತಾರೆಯೇ?

2005&2014ರವರೆಗಿನ ಯುಪಿಎ ಸರ್ಕಾರದ ಅವಧಿಯಲ್ಲಿ ದೇಶದ ಮೇಲಿದ್ದ ಒಟ್ಟು ಸಾಲದ ಮೊತ್ತ 52 ಲಕ್ಷ ಕೋಟಿ ರೂಪಾಯಿ. ಮೋದಿ ಸರ್ಕಾರ ಈ ಸಾಲ ತೀರಿಸಿದ್ದಷ್ಟೆ ಅಲ್ಲದೆ ವಿಶ್ವಬ್ಯಾಂಕ್​ನಿಂದ ಸಾಲವನ್ನೇ ಪಡೆದಿಲ್ಲ. ಇಷ್ಟೆಲ್ಲದರ ನಡುವೆ ಹತ್ತಾರು ನೂತನ ಏರ್​ಪೋರ್ಟ್​ಗಳ ನಿರ್ಮಾಣ ಆಗಿದೆ. ಯುಪಿಎ ಅವಧಿಯಲ್ಲಿ ಆಮೆಗತಿಯಲ್ಲಿ ಸಾಗುತ್ತಿದ್ದ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಕಾರ್ಯ ಈಗ ಶರವೇಗ ಪಡೆದಿದ್ದು, ಪ್ರತಿದಿನ 134 ಕಿ.ಮೀ. ರಸ್ತೆ ನಿರ್ಮಾಣ ಆಗುತ್ತಿದೆ. ಸಾಗರಮಾಲಾ, ಭಾರತಮಾಲಾ ಯೋಜನೆಗಳಡಿಯಲ್ಲಿ ಕರಾವಳಿ ಪ್ರದೇಶ ಹಾಗೂ ವಿವಿಧೆಡೆಗಳ ರಸ್ತೆ ಹಾಗೂ ಇನ್ನಿತರ ಮೂಲಸೌಕರ್ಯ ಅಭಿವೃದ್ಧಿಗೆ ವೆಚ್ಚ ಮಾಡಲಾಗುತ್ತಿದೆ. ಈಶಾನ್ಯ ರಾಜ್ಯಗಳು ಇವೆ ಎಂಬುದನ್ನೂ ಕಾಂಗ್ರೆಸ್​ ನೇತೃತ್ವದ ಸರ್ಕಾರಗಳು ಗಣನೆಗೆ ತೆಗೆದುಕೊಂಡಿರಲಿಲ್ಲ. ಅಂತಾರಾಷ್ಟ್ರೀಯ ಹಣಕಾಸು ತ ಎಂದು ಹೆಸರು ಪಡೆದ, 10 ವರ್ಷ ದೇಶವನ್ನಾಳಿದ ಮನಮೋಹನ್​ ಸಿಂಗ್​ ಅವರು ಮೂರು ದಶಕ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾಗುತ್ತಿದ್ದದ್ದು ಇದೇ ಈಶಾನ್ಯ ರಾಜ್ಯಗಳಲ್ಲೊಂದಾದ ಅಸ್ಸಾಂನಿಂದ. ಆದರೆ ಅವರಿಗೆ ಅಲ್ಲಿನ ಪ್ರತ್ಯೇಕತಾವಾದಿಗಳ ಸಮಸ್ಯೆ ಬಗೆಹರಿಸಬೇಕೆಂದು ಅನ್ನಿಸಲೇ ಇಲ್ಲ. ದೇಶಾದ್ಯಂತ ಹರಡಿಕೊಂಡಿರುವ ರೈಲ್ವೆ ಜಾಲ ಈಶಾನ್ಯಕ್ಕೆ ಏಕೆ ಇಲ್ಲ ಎಂದೂ ಹೊಳೆಯಲಿಲ್ಲ. ಕೊನೆಗೆ ಈಶಾನ್ಯ ರಾಜ್ಯಗಳಿಗೆ ರೈಲ್ವೆ ಹಳಿ ಸ್ಥಾಪಿಸಿದ್ದೂ ಮೋದಿ ಸರ್ಕಾರ. ಇದೀಗ ದೇಶದಲ್ಲಿ ಪ್ರತಿದಿನ 6.6 ಕಿ.ಮೀ. ರೈಲೆ ಮಾರ್ಗ ನಿರ್ಮಾಣ ಆಗುತ್ತಿದೆ.

ಒಂದೂವರೆ ವರ್ಷದಿಂದ ಕರೊನಾ ಮಹಾಮಾರಿ ಆವರಿಸಿದೆ. ಪ್ರತಿ ಬಾರಿ ವಿಶ್ವಕ್ಕೆ ಮಹಾಮಾರಿ ಆವರಿಸಿದಾಗ ಭಾರತ ವಿವಿಧ ದೇಶಗಳನ್ನು ಬೇಡುವುದರಲ್ಲೆ ಸಮಯ ಕಳೆಯುತ್ತಿತ್ತು. ಆದರೆ ಈ ಬಾರಿ ಪ್ರಾರಂಭದ ಕೆಲ ಸಮಯ ಹೊಂದಿಸಿಕೊಂಡಿದ್ದು ಬಿಟ್ಟರೆ ಕರೊನಾ ನಿರ್ವಹಣೆಯಲ್ಲಿ ದೇಶ ಬಹುತೇಕ ಆತ್ಮನಿರ್ಭರತೆ ಸಾಧಿಸಿದೆ. ದೇಶದ ಎಲ್ಲ ಜನರಿಗೆ ಲಸಿಕೆ ನೀಡುವುದನ್ನು ಗುರಿಯಾಗಿಸಿಕೊಂಡು, ಇದೊಂದೇ ವರ್ಷದಲ್ಲಿ ಲಸಿಕೆಗಾಗಿ 35 ಸಾವಿರ ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ. ಪ್ರಧಾನಮಂತ್ರಿ ಗರೀಬ್​ ಕಲ್ಯಾಣ ಯೋಜನೆಯಲ್ಲಿ ಉಚಿತ ಆಹಾರ ಧಾನ್ಯ ವಿತರಣೆಗೆ 1 ಲಕ್ಷ ಕೋಟಿ ರೂ. ವ್ಯಯಿಸಲಾಗುತ್ತಿದೆ. ರೈತರ ಖಾತೆಗೆ ನೇರವಾಗಿ ಹಣವನ್ನು ನೀಡಲಾಗಿದೆ.

ಇಷ್ಟೆಲ್ಲದ್ದಕ್ಕೆ ಹಣ ಎಲ್ಲಿಂದ ಬರಬೇಕು? ಹಾಗಾಗಿಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಕಡಿಮೆಯಾದರೂ ತೆರಿಗೆ ಕಡಿತ ಮಾಡಿಲ್ಲ ಎಂಬ ಪ್ರಾಮಾಣಿಕ ಮಾತನ್ನು ಕೇಂದ್ರ ಸರ್ಕಾರ ಹೇಳಿದೆ. ಇಂಧನಕ್ಕೆ ವಿಧಿಸುತ್ತಿರುವ ಸುಮಾರು ಶೇ.60 ತೆರಿಗೆಯಲ್ಲಿ ಶೇ.40 ಕೇಂದ್ರ ಸರ್ಕಾರಕ್ಕೆ, ಶೇ.20 ರಾಜ್ಯ ಸರ್ಕಾರಕ್ಕೆ ಲಭಿಸುತ್ತದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ. ಇದೇ ಕಾರಣಕ್ಕೆ ಅನೇಕರು ಕೇಂದ್ರ ಸರ್ಕಾರ ತೆರಿಗೆ ಕಡಿತ ಮಾಡುತ್ತಿಲ್ಲ ಎಂದು ಆಪಾದಿಸುತ್ತಾರೆ. ಆದರೆ ಹಣಕಾಸು ಆಯೋಗದ ಶಿಫಾರಸಿನ ಮೇರೆಗೆ, ಇಂಧನ ಸೇರಿ ರಾಜ್ಯಗಳಿಂದ ದೊರೆತ ಎಲ್ಲ ತೆರಿಗೆಯಲ್ಲೂ ಶೇ.42ನ್ನು ರಾಜ್ಯಗಳಿಗೆ ಕೇಂದ್ರ ಸರ್ಕಾರ ಹಿಂದಿರುಗಿಸುತ್ತದೆ. ಉದಾಹರಣೆಗೆ 100 ರೂ. ಪೆಟ್ರೋಲ್​ ದರದಲ್ಲಿ ಮೂಲ ದರ 40 ರೂ. ಇದ್ದರೆ, ಉಳಿದ 60 ರೂ. ತೆರಿಗೆ. ಇದರಲ್ಲಿ 20 ರೂ. ರಾಜ್ಯಕ್ಕೆ, 40 ರೂ. ಕೇಂದ್ರಕ್ಕೆ ಹಂಚಿಕೆಯಾಗುತ್ತದೆ. ನಂತರ ಕೇಂದ್ರದ 40 ರೂ.ನಲ್ಲಿ ಶೇ. 42 ಅಂದರೆ 16.8 ರೂ. ಮತ್ತೆ ರಾಜ್ಯಕ್ಕೆ ಸಲ್ಲಿಕೆಯಾಗುತ್ತದೆ. ಅಂದರೆ ರಾಜ್ಯಕ್ಕೆ ಒಟ್ಟು 36.8 ರೂ., ಕೇಂದ್ರಕ್ಕೆ 23.2 ರೂ. ಲಭಿಸುತ್ತದೆ. ಇದರ ಜತೆಗೆ, ಗ್ರಾಮ ಪಂಚಾಯಿತಿಗಳಿಗೆ ಕೇಂದ್ರ ನೇರವಾಗಿ ಹಣ ಹಂಚಿಕೆ ಮಾಡುತ್ತದೆ. ಹಾಗೆಂದು ರಾಜ್ಯ ಸರ್ಕಾರಗಳು ತೆರಿಗೆ ಕಡಿಮೆ ಮಾಡಲಿ ಎಂದಲ್ಲ, ಬದಲಿಗೆ ಆರೋಪ ಮಾಡುವವರು ಸರಿಯಾದ ಮಾಹಿತಿಯಿಲ್ಲದೆ ಮಾತನಾಡುತ್ತಿದ್ದಾರೆ ಎಂಬುದಕ್ಕಾಗಿ ತಿಳಿಸಿದ್ದೇನೆ.

ಕಾಂಗ್ರೆಸ್​ ನಾಯಕರು ತಮ್ಮ ಹಾಗೂ ತಮ್ಮಜತೆಗಿನ ಮೈತ್ರಿ ಸರ್ಕಾರವಿರುವ ಮಹಾರಾಷ್ಟ್ರ, ರಾಜಸ್ಥಾನ ಮುಂತಾದ ರಾಜ್ಯಗಳಲ್ಲಿ ಏಕೆ ಇಂಧನ ತೆರಿಗೆ ಕಡಿತ ಮಾಡುತ್ತಿಲ್ಲ? ಕರೊನಾ ಲಾಕ್​ಡೌನ್​ನಿಂದಾಗಿ ಕೈಗಾರಿಕೆಗಳು ಬಂದ್​ ಆಗಿರುವ ಕಾರಣ ಆದಾಯದ ಮೂಲಗಳು ಕುಸಿದಿದ್ದು, ಕರೊನಾ ಕಾರಣಕ್ಕೆ ಆರೋಗ್ಯ ಕ್ಷೇತ್ರದ ಮೇಲಿನ ವೆಚ್ಚ ಹೆಚ್ಚಿದೆ. ಈ ಕಾರಣದಿಂದಾಗಿ ರಾಜ್ಯ ಸರ್ಕಾರಗಳೂ ಇಂಧನ ತೆರಿಗೆ ಇಳಿಸುವ ಸ್ಥಿತಿಯಲ್ಲಿಲ್ಲ. ಇಲ್ಲಿ ಆ ಪಕ್ಷ ಈ ಪಕ್ಷ ಎಂದು ದೂರುವ ಸಮಯವಲ್ಲ. ನಿಜಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು.

ಇದೀಗ ಸರ್ಕಾರದ ಮುಂದೆ ಇನ್ನೊಂದು ಸವಾಲಿದೆ. ದೇಶದ ಕೈಗಾರಿಕಾ ೇತ್ರ ಸ್ತಬ್ಧವಾಗಿರುವುದರಿಂದ ಕಾರ್ಮಿಕರಿಗೆ ಉದ್ಯೋಗಗಳಿಲ್ಲದಂತಾಗಿದೆ. ಹೂಡಿಕೆ ಮಾಡುವವರ ಕೈ ಬರಿದಾಗಿರುವುದರಿಂದ ಆರ್ಥಿಕ ಚಟುವಟಿಕೆ ಕರೊನಾ ಲಾಕ್​ಡೌನ್​ ತೆರವಿನ ನಂತರವೂ ಗರಿಗೆದರುವುದು ಅನುಮಾನ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವೇ ಹೂಡಿಕೆದಾರನ ಪಾತ್ರ ವಹಿಸಬೇಕಾಗುತ್ತದೆ. ಬೃಹತ್​ ಪ್ರಮಾಣದಲ್ಲಿ ನರೇಗಾ ಯೋಜನೆ ಮೂಲಕ ಉದ್ಯೋಗ ಸೃಷ್ಟಿಗೆ ಹಣ ವ್ಯಯಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಸ್ತೆ ಸೇರಿ ಮೂಲಸೌಕರ್ಯ ನಿರ್ಮಾಣಕ್ಕೆ ಹೆಚ್ಚಿನ ಹಣ ವ್ಯಯಿಸಲು, ಇಂಧನದಿಂದ ಲಭಿಸಿದ ಹಣವನ್ನು ಕಾಪಾಡಲಾಗುತ್ತಿದೆ. ಈ ಹೂಡಿಕೆಯಿಂದ ದೇಶದಲ್ಲಿ ಮತ್ತೆ ಆರ್ಥಿಕ ಚಟುವಟಿಕೆ ಆರಂಭವಾಗಿ, ಉದ್ಯೋಗ ಸೃಷ್ಟಿಯಾಗುತ್ತದೆ. ಹೀಗೆ ಮಾಡುವುದು ಒಳಿತೋ? ಕಾಂಗ್ರೆಸ್​ ರೀತಿಯಲ್ಲಿ ತೈಲ ಬಾಂಡ್​ ತಂದು ದೇಶವನ್ನು ಸಾಲಗಾರವಾಗಿಸುವುದು ಒಳಿತೋ?

ಇಷ್ಟೆಲ್ಲ ಹಣವನ್ನು ಕೇಂದ್ರ ಸರ್ಕಾರ ಸಂಗ್ರಹಿಸುತ್ತಿದೆ. ಅದನ್ನು ಹೇಗೆ ಬಳಸುತ್ತಿದೆ ಎಂಬುದನ್ನು ವೀಸಲು ಕಾಂಗ್ರೆಸ್​ ಸೇರಿ ಎಲ್ಲ ಪ್ರತಿಪಕ್ಷಗಳಿಗೂ ಅವಕಾಶ ಇದ್ದೇ ಇದೆಯಲ್ಲ? ಕಳೆದ ಏಳು ವರ್ಷದಲ್ಲಿ ಒಂದೂ ಭ್ರಷ್ಟಾಚಾರದ ಕಳಂಕವಿಲ್ಲದೆ ಕೇಂದ್ರ ಸರ್ಕಾರ ನಡೆಯುತ್ತಿದೆ. ಹಾಗೊಂದು ವೇಳೆ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಪ್ರತಿಪಕ್ಷಗಳಿಗೆ ಕಂಡುಬಂದರೆ ಪ್ರಶ್ನಿಸಲು ಸಂಸತ್​ ಇದೆ, ಸಾರ್ವಜನಿಕ ವೇದಿಕೆಗಳಿವೆ, ಮಾಧ್ಯಮಗಳಿವೆ. ಸೂಕ್ತ ರೀತಿಯಲ್ಲಿ ಕೆಲಸ ಕಾರ್ಯಗಳು ಸಾಗಲು ಪ್ರತಿಪಕ್ಷಗಳು ಸಹಕರಿಸಬೇಕು; ಏನಾದರೂ ತೊಂದರೆಯಾದರೆ ಅದರ ಪರಿಹಾರಕ್ಕಾಗಿ ತಮ್ಮ ಸಹಭಾಗಿತ್ವ, ಸಲಹೆ ನೀಡಬೇಕು. ಅದನ್ನು ಬಿಟ್ಟು, ಪೆಟ್ರೋಲ್​, ಡೀಸೆಲ್​ ಹೆಸರಿನಲ್ಲಿ ಸಮಾಜದಲ್ಲಿ ಬೆಂಕಿ ಹಚ್ಚಿ ಅದರಿಂದ ಮೈ ಕಾಯಿಸಿಕೊಳ್ಳುವ ಹಂತಕ್ಕೆ ಇಳಿಯಬಾರದು. ಏಕೆಂದರೆ ಜನರ ಅಂಗೈಯಲ್ಲೆ ಇಂದು ದತ್ತಾಂಶ, ಮಾಹಿತಿಗಳು ಸಿಗುವ ಮಾಹಿತಿ ತಂತ್ರಜ್ಞಾನ ಯುಗ. ನಿಮ್ಮ ಮಾತುಗಳಲ್ಲಿನ ಟೊಳ್ಳುತನ ಜನರಿಗೆ ನಾಳೆ ಗೊತ್ತಾದರೆ, ಇಂದು ಬೇರೆಯವರ ಮನೆಗೆ ಹಚ್ಚಿದ ಬೆಂಕಿ ನಾಳೆ ನಿಮ್ಮನ್ನೇ ಸುಡುತ್ತದೆ ಎಂಬ ಎಚ್ಚರಿಕೆ ಇರಲಿ.

(ಲೇಖಕರು ಬಿಎಂಟಿಸಿ ಉಪಾಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net