ಡ್ರಗ್ಸ್ ವಿರುದ್ಧ ನಿರ್ಣಾಯಕ ಸಮರದಲ್ಲಿ ಯೋಧರಾಗೋಣ!

Hand
Published on

ಸುಶಾಂತ್ ಸಿಂಗ್ ರಜಪೂತ್ ಸಾವಿಗೂ ಡ್ರಗ್ಸ್​ಗೂ ಸಂಬಂಧವಿದೆ ಮತ್ತು ಅದರ ಪೂರೈಕೆದಾರರಿಗೂ ಬೆಂಗಳೂರಿನ ಧಾರಾವಾಹಿ ನಟಿಗೂ ಲಿಂಕ್ ಇದೆ ಎಂದು ಗೊತ್ತಾದ ನಂತರ ಡ್ರಗ್ಸ್ ಜಾಲವನ್ನು ಬುಡಸಮೇತ ಕಿತ್ತೊಗೆಯಲು ರಾಜ್ಯ ಸರ್ಕಾರ ನಿರ್ಧರಿಸಿತು. ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ಮೇರೆಗೆ ಗೃಹ ಸಚಿವರಾದ ಬಸವರಾಜ್ ಬೊಮ್ಮಾಯಿ ಪೊಲೀಸ್ ಉನ್ನತ ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದರು.

‘ಮನಸ್ಸು ಶುದ್ಧವಿದ್ದಷ್ಟು ಅದನ್ನು ಹತೋಟಿಗೆ ತರುವುದು ಸುಲಭ’. ಶತಮಾನದ ಶ್ರೇಷ್ಠಸಂತ ಸ್ವಾಮಿ ವಿವೇಕಾನಂದರು ಹೇಳಿದ ಆ ಒಂದು ವಾಕ್ಯದಲ್ಲಿ ನಮ್ಮ ಬದುಕಿನ ಅಷ್ಟೂ ಸಾರ ಅಡಗಿದೆ. ಯಾವಾಗ ಮನಸ್ಸಿನಲ್ಲಿ

ಸ್ವಾರ್ಥ, ವಂಚನೆ ಮತ್ತು ದುರಾಸೆ ತುಂಬುತ್ತದೆಯೋ ಅದನ್ನು ನಿಯಂತ್ರಣಕ್ಕೆ ತರಲಾಗದೆ ಮನುಷ್ಯ ಒದ್ದಾಡಿ ನಂತರ ಒಂದು ದಿನ ಅದರ ಕರ್ಮವನ್ನು ಅನುಭವಿಸಬೇಕಾಗುತ್ತದೆ. ಸಿಸಿಬಿ ಪೊಲೀಸರು ಸರಣಿಯಲ್ಲಿ ಬಂಧಿಸುತ್ತಿರುವ ಯುವಕ, ಯುವತಿಯರನ್ನು ನೋಡುವಾಗ ಸ್ವಾಮಿ ವಿವೇಕಾನಂದರ ಆ ಮಾತುಗಳು ನೆನಪಾದವು.

ಡ್ರಗ್ಸ್ ಎನ್ನುವುದು ದೇಹವನ್ನು ನಾಶ ಮಾಡುವ ಅಪ್ಪಟ ಪ್ರಭೇದಗಳಲ್ಲಿ ಮೊದಲನೇ ಸ್ಥಾನದಲ್ಲಿದೆ ಎಂದು ಗೊತ್ತಿಲ್ಲದಷ್ಟು ಅಮಾಯಕರು ನಮ್ಮಲ್ಲಿ ಯಾರೂ ಇಲ್ಲ. ಇವರಿಗೆಲ್ಲರಿಗೂ ಅದು ಗೊತ್ತಿತ್ತು. ಆದರೂ ಡ್ರಗ್ಸ್​ಗೆ ದಾಸರಾಗಿಬಿಟ್ಟರು. ಡ್ರಗ್ಸ್ ಸರಬರಾಜು, ಖರೀದಿ, ಪೂರೈಕೆ ಮತ್ತು ಸೇವನೆ ಕಾನೂನು ಪ್ರಕಾರ ಶಿಕ್ಷೆಗೆ ಒಳಗಾಗುವ ಅಪರಾಧಗಳು ಎಂದು ಗೊತ್ತಿದ್ದೂ ಅದನ್ನು ಮಾಡಿದ್ರು. ಏಕೆಂದರೆ ಹಾಗೇ ಮಾಡುತ್ತಿದ್ದವರಿಗೆ ಒಂದಲ್ಲ ಒಂದು ದಿನ ನಾವು ಸಿಕ್ಕಿ ಬೀಳುತ್ತೇವೆ ಎಂಬ ಭಯ ಇರಲೇ ಇಲ್ಲ. ಅವರ ಸುತ್ತಲೂ ಇದ್ದವರು ಕಾನೂನನ್ನೇ ಖರೀದಿಸಬಲ್ಲಷ್ಟು ಶಕ್ತರಾಗಿದ್ದರು. ಪ್ರಭಾವಿ ರಾಜಕಾರಣಿಗಳ ಸಂಗವಿತ್ತು. ಉನ್ನತ ಅಧಿಕಾರಿಗಳ ಶಿಫಾರಸ್ಸು ಇತ್ತು. ಕೋಟ್ಯಧಿಪತಿಗಳ ಅಭಯವಿತ್ತು. ಅದಕ್ಕಾಗಿ ಮೋಜು, ಮಸ್ತಿಯಲ್ಲಿ ತಮ್ಮನ್ನು ಡ್ರಗ್ಸ್ ವಶಕ್ಕೆ ಅನಾಯಾಸವಾಗಿ ಒಪ್ಪಿಸಿಬಿಟ್ಟಿದ್ದರು. ಈಗ ಅಂಥವರು ‘ನಮ್ಮ ಭವಿಷ್ಯ ಹಾಳಾಯಿತಲ್ಲ’ ಎಂದು ಪರಿತಪಿಸುತ್ತಿದ್ದಾರೆ.

ಬಿಜೆಪಿ ರಾಜ್ಯದಾಡಳಿತವನ್ನು ಕೈಗೆ ತೆಗೆದುಕೊಳ್ಳುವ ಮೊದಲು ಕಳೆದೊಂದು ದಶಕದಲ್ಲಿ ರಾಜ್ಯವನ್ನು ಆಳುತ್ತಿದ್ದವರಿಗೆ ಅವರ ಬೇಳೆ ಬೇಯಿಸಿಕೊಳ್ಳಬೇಕಿತ್ತೆ ಹೊರತು ಡ್ರಗ್ಸ್ ತಮ್ಮದೇ ಮನೆಯ ಮಕ್ಕಳನ್ನು ಕೂಡ ಸಾವಿನ ಅಂಚಿಗೆ ತಳ್ಳಬಹುದು ಎನ್ನುವ ಯೋಚನೆಯೂ ಇರಲಿಲ್ಲ. ಇಂಥವರ ಆಟಾಟೋಪಗಳಿಗೆ ಲಗಾಮು ಹಾಕಲು ಪೊಲೀಸರಿಗೆ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ಡ್ರಗ್ಸ್ ಸರಬರಾಜು ಮಾಡುವವರು ಸಿಕ್ಕಿ ಬಿದ್ದರೂ ಅವರನ್ನು ಬಿಡಿಸಲು ಕೆಲವು ಪ್ರಭಾವಿಗಳ ಮಕ್ಕಳೇ ಮುಂದಾಗುತ್ತಿದ್ದರು. ಪೊಲೀಸ್ ಇಲಾಖೆಯ ಕೈಯನ್ನು ಅಕ್ಷರಶಃ ಕಟ್ಟಿಹಾಕಲಾಗಿತ್ತು. ‘ನಮಗೆ ಅಧಿಕಾರ ಚಲಾಯಿಸುವ ಅವಕಾಶ ಕೊಡಿ. ರಾಜ್ಯದಲ್ಲಿ ಡ್ರಗ್ಸ್ ವಿರುದ್ಧ ಸಮರ ಸಾರುತ್ತೇವೆ’ ಎನ್ನುವ ಕೂಗು ಪೊಲೀಸ್ ಇಲಾಖೆ ಒಳಗಿನಿಂದ ಕೇಳಿಬರುತ್ತಿತ್ತು. ಅಂಥ ಒಂದು ಅವಕಾಶಕ್ಕಾಗಿ ರಾಜ್ಯ ಪೊಲೀಸ್ ಇಲಾಖೆ ಕಾಯುತ್ತಿತ್ತು.

ಮುಂಬೈಯಲ್ಲಿ ಯುವ ನಾಯಕನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೂ ಡ್ರಗ್ಸ್​ಗೂ ಸಂಬಂಧವಿದೆ ಮತ್ತು ಅದರ ಪೂರೈಕೆದಾರರಿಗೂ ಬೆಂಗಳೂರಿನ ಧಾರಾವಾಹಿ ನಟಿಗೂ ಲಿಂಕ್ ಇದೆ ಎಂದು ಗೊತ್ತಾದ ನಂತರ ಡ್ರಗ್ಸ್ ಜಾಲವನ್ನು ಬುಡಸಮೇತ ಕಿತ್ತೊಗೆಯಲು ರಾಜ್ಯ ಸರ್ಕಾರ ನಿರ್ಧರಿಸಿತು. ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ಮೇರೆಗೆ ಗೃಹ ಸಚಿವರಾದ ಬಸವರಾಜ್ ಬೊಮ್ಮಾಯಿ ಪೊಲೀಸ್ ಉನ್ನತ ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದರು. ಹಾಗಾಗಿಯೇ, ಪೊಲೀಸ್ ಅಧಿಕಾರಿಗಳು, ಸಿಸಿಬಿ ಅಧಿಕಾರಿಗಳು ಡ್ರಗ್ಸ್ ಜಾಲವನ್ನು ಜಾಲಾಡಿ ಬಿಟ್ಟರು. ಅದರಲ್ಲಿ ಸಿಕ್ಕಿದ್ದು ಸಣ್ಣಪುಟ್ಟ ಹೆಸರುಗಳೇನಲ್ಲ. ಸಿನಿಮಾ ರಂಗದ ತಾರೆಯರ ಹೆಸರು ಕೇಳಿಬರುತ್ತಿದ್ದಂತೆ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ಒಂದು ಸರ್ಕಾರ ಹೀಗೆ ಕೂಡ ರಾಜ್ಯದ ಜನರ ಪರವಾಗಿ ಕೆಲಸ ಮಾಡಬಹುದು ಎಂದು ಎಲ್ಲರೂ ಆಶ್ಚರ್ಯಪಡುವಂತೆ ಭಾರತೀಯ ಜನತಾ ಪಾರ್ಟಿಯ ಸರ್ಕಾರ ಕಠಿಣ ನಿಲುವುಗಳನ್ನು ತಳೆಯಿತು.

ಈ ನಡುವೆ ಬಂಧಿತರಾದವರು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರರೊಂದಿಗೆ ಚುನಾವಣಾ ಪ್ರಚಾರಕ್ಕೆ ತೊಡಗಿರುವ ಫೋಟೋಗಳನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟರು. ಜನ ಈ ಬಗ್ಗೆ ರ್ಚಚಿಸತೊಡಗಿದರು. ಇನ್ನು ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ರಾಗಿಣಿ ವಿಷಯದಲ್ಲಿ ಬಿಜೆಪಿ ಸರ್ಕಾರ ಮೃದುಧೋರಣೆ ತಳೆಯಬಹುದು ಎಂದೇ ಹಲವರು ಭಾವಿಸಿದರು. ಆದರೆ ನಮ್ಮ ನಿಲುವು ಅಚಲವಾಗಿತ್ತು. ಈ ನೆಲದ ಕಾನೂನನ್ನು ಯಾರೇ ಉಲ್ಲಂಘಿಸಲಿ, ಅವರು ಎಷ್ಟೇ ಪ್ರಭಾವಿ ವ್ಯಕ್ತಿಯಾಗಿರಲಿ ಅವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಎಲ್ಲ ಸಚಿವರು, ಬಿಜೆಪಿ ಮುಖಂಡರು ಸ್ಪಷ್ಟ ಮಾತುಗಳಲ್ಲಿ ಹೇಳಿದರು. ಇದು ರಾಷ್ಟ್ರೀಯ ಪಕ್ಷವೊಂದರ ರಾಜ್ಯಾಧ್ಯಕ್ಷನಾಗಿ ನನಗೆ ಅತ್ಯಂತ ಸಮಾಧಾನದ ವಿಷಯ. ಅಷ್ಟಕ್ಕೂ ಅನೇಕ ಸಿನೆಮಾ ತಾರೆಯರು ಚುನಾವಣಾ ಸಂದರ್ಭಗಳಲ್ಲಿ ವಿವಿಧ ಪಕ್ಷಗಳ ತಾರಾಪ್ರಚಾರಕರಾಗಿ ಕೆಲಸ ಮಾಡುತ್ತಾರೆ. ಅವರು ಆ ಸಂದರ್ಭಕ್ಕೆ ಮಾತ್ರ ಸೀಮಿತ. ಅವರು ನಮ್ಮ ಪಕ್ಷದ ಸದಸ್ಯರೂ ಇರುವುದಿಲ್ಲ.

ನಮಗೆ ಈ ರಾಜ್ಯದ ಯುವಜನಾಂಗದ ಭವಿಷ್ಯ ಮುಖ್ಯ. ಡ್ರಗ್ಸ್ ಜಾಲದಲ್ಲಿ ಸಿಲುಕಿ ಅಪರಾಧ ಮಾಡಿದವರು ಎಂಥವರೇ ಆಗಿರಲಿ ನಮಗೆ ಅದು ಮುಖ್ಯವಾಗಿರುವುದಿಲ್ಲ. ಒಂದು ವೇಳೆ ಬೇರೆ ಪಕ್ಷ ಈಗ ಅಧಿಕಾರದಲ್ಲಿದ್ದು, ಸಿನೆಮಾ ತಾರೆಯರು ಅವರ ಪಕ್ಷಕ್ಕೆ ತಾರಾಪ್ರಚಾರಕರಾಗಿ ಕೆಲಸ ಮಾಡಿದಿದ್ದರೆ ಅಂಥವರನ್ನು ರಕ್ಷಿಸುವ ಕೆಲಸ ಆಗುತ್ತಿದ್ದರಲ್ಲಿ ಸಂಶಯವಿಲ್ಲ. ಆದರೆ ನಮ್ಮ ಪಕ್ಷ ವೈಯಕ್ತಿಕ ಲಾಭಕ್ಕಿಂತ ರಾಷ್ಟ್ರೀಯ ಚಿಂತನೆಯನ್ನು ಹೊಂದಿರುವುದರಿಂದಲೇ ನಮ್ಮಲ್ಲಿ ಅದೆಲ್ಲ ನಡೆಯುವುದೇ ಇಲ್ಲ. ಹೀಗೆ ಹಿಂದೆ ಆದಾಗ ಅಂಥವರನ್ನು ರಕ್ಷಿಸುವ ಕೆಲಸ ಆಗಿರಬಹುದು, ಅದಕ್ಕಾಗಿ ಪೊಲೀಸ್ ಇಲಾಖೆ ಮೇಲೆ ಒತ್ತಡ ಕೂಡ ಹಾಕಿರಬಹುದು. ಅದರಿಂದಲೇ ಡ್ರಗ್ಸ್ ಜಾಲ ಈ ಪ್ರಮಾಣದಲ್ಲಿ ಬೆಳೆದಿರುವುದು. ಇದು ಇವತ್ತಿನ ದಿನಗಳಲ್ಲಿ ಬೆಂಗಳೂರಿನಂಥ ಮಹಾನಗರಗಳಿಗೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ಬೆಂಗಳೂರಿನಿಂದ ಶುರುವಾಗಿ ರಾಜ್ಯದ ಉದ್ದಗಲಕ್ಕೂ ಇದು ಹರಡಿಕೊಂಡಿದೆ.

ಈ ಪ್ರಕರಣಗಳ ರ್ತಾಕ ಅಂತ್ಯ ಕಾಣಿಸಲು ಗೃಹ ಇಲಾಖೆ ಹೇಗೆ ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದೆಯೋ ಅದೇ ರೀತಿಯಲ್ಲಿ ಪಕ್ಷದ ಕಾರ್ಯಕರ್ತರು ಕೂಡ ಈ ಬಗ್ಗೆ ಗ್ರಾಮ, ತಾಲೂಕು, ಜಿಲ್ಲೆಗಳಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಇವರೊಂದಿಗೆ ನಮ್ಮ ನಾಗರಿಕ ಬಂಧುಗಳು ಕೂಡ ಕೈಜೋಡಿಸಬೇಕಾಗಿದೆ. ನಿಮ್ಮಲ್ಲಿ ಡ್ರಗ್ಸ್ ಜಾಲದ ಬಗ್ಗೆ ಏನೇ ಮಾಹಿತಿಗಳಿದ್ದರೂ ಅದನ್ನು ಸಮೀಪದ ಪೊಲೀಸ್ ಠಾಣೆಗೆ ನೀಡಿ. ಈ ಬಗ್ಗೆ ನಮ್ಮ ಕಾರ್ಯಕರ್ತರ ನೆರವನ್ನು ಕೂಡ ಪಡೆಯಬಹುದು. ನೀವು ಕೊಡುವ ಮಾಹಿತಿಯನ್ನು ಆಧರಿಸಿ ಪೊಲೀಸ್ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

ಡ್ರಗ್ಸ್ ದೇಹವನ್ನು ಮಾತ್ರವಲ್ಲ, ದೇಶವನ್ನೂ ದುರ್ಬಲಗೊಳಿಸುತ್ತದೆ. ಪ್ರಪಂಚದಲ್ಲಿ ಹೆಚ್ಚು ಯುವಕರನ್ನು ಹೊಂದಿರುವ ದೇಶ ನಮ್ಮದು. ಬೇರೆ ದೇಶಗಳು ಇಳಿವಯಸ್ಸಿನ ನಾಗರಿಕರನ್ನು ಹೆಚ್ಚೆಚ್ಚು ಹೊಂದುತ್ತಿವೆ. ಈ ಮೂಲಕ ಅವುಗಳ ಉತ್ಪಾದನಾ ಕಾರ್ಯಕ್ಷಮತೆ ಇಳಿಮುಖವಾಗುತ್ತ ಹೋಗುತ್ತದೆ. ಆದರೆ ಭಾರತದಲ್ಲಿ ಹಾಗಲ್ಲ. ಪ್ರಬಲ, ಶಕ್ತಿವಂತ ಯುವಜನಾಂಗವನ್ನು ದೇಶದ ಆಸ್ತಿಯನ್ನಾಗಿ ಹೊಂದಿದ್ದೇವೆ. ಇದನ್ನು ದುರ್ಬಲಗೊಳಿಸಲು ವಿದೇಶಿಗರ ಸಂಚು ಯಾವುದೆಂದರೆ-ದೇಹದ ಒಳಗೆ ಪರೋಕ್ಷವಾಗಿ ವಿಷವನ್ನು ಚುಚ್ಚುವುದು. ಈಗಾಗಲೇ ನೈಜೀರಿಯಾದಿಂದ ಇಲ್ಲಿಗೆ ಬಂದು, ವೀಸಾ ಅವಧಿ ಮುಗಿದರೂ ಹಿಂದಿರುಗದೇ ಇರುವ ಅಲ್ಲಿನ ಪ್ರಜೆಗಳು ಡ್ರಗ್ಸ್ ಸರಬರಾಜು ಮಾಡುವಂಥ ಕೆಲಸ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಆ ಕುರಿತು ಪೊಲೀಸ್ ಇಲಾಖೆ ವಿಚಾರಣೆ ನಡೆಸುತ್ತಿದೆ. ಒಂದು ರೀತಿಯಲ್ಲಿ ಇದೊಂದು ಡ್ರಗ್ಸ್ ಭಯೋತ್ಪಾದನೆ. ಆದ್ದರಿಂದ ಈ ಬಗ್ಗೆ ಶಾಲಾ, ಕಾಲೇಜುಗಳಲ್ಲಿ ಹೆಚ್ಚೆಚ್ಚು ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕಿದೆ. ಅದರೊಂದಿಗೆ ಇದಕ್ಕಿರುವ ಶಿಕ್ಷೆಪ್ರಮಾಣದ ಬಗ್ಗೆಯೂ ಯುವ ಸಮುದಾಯದಲ್ಲಿ ಅರಿವು ಮೂಡಿಸಬೇಕಿದೆ.

ಡ್ರಗ್ಸ್ ಪಿಡುಗು ಈ ದಶಕಕ್ಕೆ ಅಂತ್ಯವಾಗಲಿ. ಡ್ರಗ್ಸ್ ಮುಕ್ತ ಕರ್ನಾಟಕವನ್ನು ಕಟ್ಟೋಣ. ಕರೊನಾದೊಂದಿಗೆ ಡ್ರಗ್ಸ್ ಕೂಡ ನಮ್ಮನ್ನು ಬಿಟ್ಟು ಹೋಗಲಿ. ಸ್ವಾಮಿ ವಿವೇಕಾನಂದರ ಮತ್ತೊಂದು ವಾಣಿ-‘ಶಕ್ತಿಯೇ ಜೀವನ, ಬಲಹೀನತೆಯೇ ಮರಣ’. ಸ್ವಾಮಿ ವಿವೇಕಾನಂದರು ಹೇಳಿದ್ದನ್ನೇ ಜೀವನದಲ್ಲಿ ಅಳವಡಿಸುವುದಾದರೆ ಡ್ರಗ್ಸ್ ದೇಹದ ಶಕ್ತಿಯನ್ನು ಹೀರಿ ನಮ್ಮನ್ನು ನಾಶ ಮಾಡುತ್ತದೆ. ಡ್ರಗ್ಸ್ ಸೇವಿಸದ ಮನುಷ್ಯ ಶಕ್ತಿವಂತನಾಗಿರುತ್ತಾನೆ. ಸೇವಿಸುವ ವ್ಯಕ್ತಿ ದುರ್ಬಲನಾಗುತ್ತಾನೆ. ದುರ್ಬಲತೆ ಮರಣದೊಂದಿಗೆ ಅಂತ್ಯವಾಗುತ್ತದೆ. ದೇಶಕ್ಕಾಗಿ ಏನಾದರೂ ಸಾಧನೆ ಮಾಡಿ ರಾಷ್ಟ್ರದ ಕೀರ್ತಿ ಪತಾಕೆಯನ್ನು ಜಾಗತಿಕವಾಗಿ ಹರಡಿಸಲು ನಾವು ಬದುಕಬೇಕಿದೆ. ಡ್ರಗ್ಸ್ ಆ ನಿಟ್ಟಿನಲ್ಲಿ ದಾರಿಯಲ್ಲಿರುವ ಮುಳ್ಳಾಗಿದೆ.

(ಲೇಖಕರು ಬಿಜೆಪಿ ರಾಜ್ಯಾಧ್ಯಕ್ಷರು, ದಕ್ಷಿಣ ಕನ್ನಡ ಸಂಸದರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net