

ದೊಡ್ಡ ಕಂಪನಿಯೊಂದರಲ್ಲಿ ಸೇಲ್ಸ್ ಮ್ಯಾನೇಜರ್ ಆಗಿದ್ದ 50 ವರ್ಷ ವಯಸ್ಸಿನ ಪ್ರಮೋದ್ ತನ್ನ ಪತ್ನಿ ಲೀನಾ ಮತ್ತು ಮಗಳು ಅಮೃತಾ ಜತೆ ಮಹಾನಗರವೊಂದರಲ್ಲಿ ವಾಸಿಸುತ್ತಿದ್ದ. ಸ್ಪುರದ್ರೂಪಿ ಅಮೃತಾ ಅದೇ ತಾನೆ ಪದವಿ ಗಳಿಸಿ ಕಾಲ್ಸೆಂಟರ್ನಲ್ಲಿ ಕೆಲಸ ಮಾಡತೊಡಗಿದ್ದಳು. ಹಣದ ದುರ್ವ್ಯವಹಾರದ ಆರೋಪದ ಮೇಲೆ ಪ್ರಮೋದ್ ಇದ್ದಕ್ಕಿದ್ದಂತೆ ನೌಕರಿ ಕಳೆದುಕೊಂಡಾಗ ಕುಟುಂಬಕ್ಕೆ ಅಮೃತಾ ಗಳಿಸುತ್ತಿದ್ದ ಕಡಿಮೆ ವರಮಾನದ ಹೊರತು ಆದಾಯದ ಬೇರೆ ಯಾವುದೇ ಮೂಲವಿರದಂತಾಯಿತು. ಗೃಹಿಣಿಯಾಗಿದ್ದ ಲೀನಾ ತಾನೂ ಕೆಲಸ ಮಾಡಲು ನಿರ್ಧರಿಸಿ ಕೆಲಸಗಳನ್ನು ಹುಡುಕತೊಡಗಿದಳು. ಪ್ರಮೋದ್ ಬೇರೆ ನೌಕರಿಗಳಿಗಾಗಿ ಅರ್ಜಿ ಹಾಕತೊಡಗಿದ.
ತಾನೇ ಏಕೆ ಡೇಟಿಂಗ್ ಸೈಟ್ ರೂಪಿಸಿ ಹಣಗಳಿಸಬಾರದೆಂದು ಯೋಚಿಸಿದ ಪ್ರಮೋದ್ ಕೆಲವು ಮಿತ್ರರನ್ನು ಸಂರ್ಪಸಿದ. ‘ಲಕ್ಷಾಂತರ ರೂ.ಗಳ ಬಂಡವಾಳ ಇದ್ದರೆ ಇಂತಹ ತಾಣವನ್ನು ನೀನೇ ಪ್ರಾರಂಭಿಸಬಹುದು, ಏಕೆಂದರೆ ಏನಾದರೂ ಹೆಚ್ಚು ಕಡಿಮೆಯಾದರೆ ಪೊಲೀಸರು, ಕೋರ್ಟು ಕಚೇರಿಗಳ ಸಮಸ್ಯೆಗಳು ಎದುರಾಗುತ್ತವೆ’ ಎಂಬ ಉತ್ತರ ಬಂದಾಗ ಆತ ಸುಮ್ಮನಾದರೂ ಆ ತಾಣಗಳ ಬಗ್ಗೆ ಅಧ್ಯಯನವನ್ನೇ ಮಾಡಿದ. ಆನಂತರ ಅವನಿಗೆ ಕೆಟ್ಟ ಯೋಚನೆಯೊಂದು ಹೊಳೆಯಿತು. ಮಗಳು ಅಮೃತಾಳ ಹೆಸರಿನಲ್ಲಿ ತಾನೇ ಡೇಟಿಂಗ್ ಸೈಟ್ ಒಂದರ ಸದಸ್ಯನಾದ. ಮಗಳ ಫೋಟೋ ಮತ್ತು ಇತರ ವಿವರಗಳನ್ನು ಆ ತಾಣದಲ್ಲಿ ತಾನೇ ಅಪ್ಲೋಡ್ ಮಾಡಿದ. ಮಗಳಿಗೆ ಈ ವಿಷಯ ತಿಳಿಯದಂತೆ ನೋಡಿಕೊಂಡ.
ಅಮೃತಾಳ ವಿವರಗಳು ಆ ತಾಣದಲ್ಲಿ ಬಂದ ಕೂಡಲೇ ಹಲವಾರು ಜನರಿಂದ ಡೇಟ್ ಮಾಡಲು ಕೋರಿಕೆಗಳು ಬರತೊಡಗಿದವು. ಕೋರಿಕೆ ಸಲ್ಲಿಸುವವರ ಪೂರ್ವಾಪರಗಳನ್ನು ವಿಚಾರಿಸಿ ಬಹಳಷ್ಟು ಜನರನ್ನು ಪ್ರಮೋದನೇ ತಿರಸ್ಕರಿಸಿದ. ಒಮ್ಮೆ ಅಶೋಕ ಎನ್ನುವ ಯುವಕನಿಂದ ಅಮೃತಾಳಿಗೆ ಡೇಟಿಂಗ್ ಕೋರಿಕೆ ಬಂದಿತು. ಆ ಯುವಕನ ಪ್ರೊಫೈಲನ್ನು ನೋಡಿ ಶ್ರೀಮಂತನೆಂದರಿತ ಪ್ರಮೋದ್ ಕೂಡಲೇ ಅವನ ಕೋರಿಕೆ ಒಪ್ಪಿದ. ನಂತರ ಮಗಳ ಹೆಸರಿನಲ್ಲಿಯೇ ಅವನೊಡನೆ ಚಾಟ್ ಮಾಡತೊಡಗಿದ.
ಅಶೋಕ ಶ್ರೀಮಂತ ವ್ಯಾಪಾರಿಯ ಏಕೈಕ ಪುತ್ರನಾಗಿದ್ದು ತಂದೆಯ ಜತೆಗೆ ಆತನ ಅಂಗಡಿಯಲ್ಲಿಯೇ ಕೆಲಸಮಾಡುತ್ತಿದ್ದ ಬಗ್ಗೆ ಪ್ರಮೋದ್ ಅರಿತ. ಅಮೃತಾಳೂ ಅವನ ಜತೆ ಆಸಕ್ತಿ ಹೊಂದಿರುವಂತೆ ತೋರಿಸಿಕೊಂಡು ಆತನ ಮೊಬೈಲ್ ನಂಬರ್ ಮತ್ತಿತರ ವಿವರ ಪಡೆದ. ‘ನಾವು ಆನ್ಲೈನ್ನಲ್ಲಿ ಮಾತನಾಡಿದ್ದು ಸಾಕು, ಇನ್ನು ಮುಖತಃ ಭೇಟಿಯಾಗೋಣ’ ಎಂದು ಅವನಿಗೆ ಮೆಸೇಜ್ ಕಳಿಸಿದ. ಅಶೋಕ ಎಲ್ಲಿ ಯಾವಾಗ ಭೇಟಿಯಾಗುವುದು ಎಂದು ಕೇಳಿದ. ‘ಕೆಲಕಾಲ ಕಾಯಬೇಕು. ಭೇಟಿಯ ಸ್ಥಳ, ದಿನ ಹಾಗೂ ವೇಳೆಯನ್ನು ತಿಳಿಸುವೆ’ ಎಂದು ಉತ್ತರಿಸಿದ.
‘ನಿನಗೆ ಒಬ್ಬ ಉತ್ತಮ ಯುವಕನನ್ನು ಸ್ನೇಹಿತನನ್ನಾಗಿ ಮಾಡಿಕೊಡುತ್ತಿರುವೆ’ ಎಂದು ಅಮೃತಾಗೆ ಹೇಳಿದ ಪ್ರಮೋದ್ ಅಶೋಕನನ್ನು ರೆಸ್ಟೋರೆಂಟ್ ಒಂದರಲ್ಲಿ ಭೇಟಿಯಾಗಲು ಸೂಚಿಸಿದ. ‘ಅಶೋಕ ಒಳ್ಳೆಯ ಹುಡುಗ, ಮೊದಲ ಭೇಟಿಯಲ್ಲಿಯೇ ಆತ ನಿನಗೆ ಇಷ್ಟವಾಗದೇ ಇರಬಹುದು, ಆದರೆ ನಿನ್ನ ಭಾವನೆಗಳನ್ನು ಏಕಾಏಕಿ ತೋರಿಸಿಕೊಳ್ಳದೇ ಅವನೊಡನೆ ಅನ್ಯೋನ್ಯವಾಗಿರುವಂತೆ ನಟಿಸಬೇಕು’ ಎಂದು ಮಗಳಿಗೆ ಹೇಳಿದ. ತಾನೇಕೆ ಯಾರ್ಯಾರನ್ನೋ ಫ್ರೆಂಡ್ ಮಾಡಿಕೊಳ್ಳಬೇಕೆಂದು ಅಮೃತಾ ಪ್ರಶ್ನಿಸಿದಾಗ, ‘ಇದೆಲ್ಲ ನಿನ್ನ ಒಳ್ಳೆಯದಕ್ಕೇ. ನಾನು ಹೇಳಿದಂತೆ ಮಾಡು’ ಎಂದ. ತಂದೆಯ ಸೂಚನೆಯಂತೆಯೇ ಅಮೃತಾ ಎರಡು ಬಾರಿ ಅಶೋಕನನ್ನು ಭೇಟಿ ಮಾಡಿದಳು.
ಪ್ರಮೋದ್ ಲೀನಾಗೆ ತನ್ನ ಮುಂದಿನ ಪ್ಲಾನ್ ವಿವರಿಸಿ ಮುಂದುವರಿಯಲು ಅವಳ ಒಪ್ಪಿಗೆ ಪಡೆದ. ತನ್ನ ಜತೆಗೆ ಒಂದು ರಾತ್ರಿ ಕಳೆಯಲು ಅಶೋಕನನ್ನು ಲಾಡ್ಜ್ವೊಂದಕ್ಕೆ ಆಹ್ವಾನಿಸಲು ಅವರು ಅಮೃತಾಳಿಗೆ ಸೂಚಿಸಿದರು. ಆಕೆ ಹೌಹಾರಿದಾಗ, ‘ನೀನೇನು ಅವನ ಜತೆಗೆ ದೈಹಿಕ ಸಂಪರ್ಕ ಮಾಡಬೇಕಾಗಿಲ್ಲ, ಅವನಿಗೆ ವಿವಸ್ತ್ರನಾಗಲು ಹೇಳಿ ಸುಮ್ಮನೆ ಅವನನ್ನು ಅಪ್ಪಿಕೊಂಡು ಹಾಸಿಗೆಯ ಮೇಲೆ ಕುಳಿತುಕೊಂಡು ಒಂದು ಸೆಲ್ಪಿ ಕ್ಲಿಕ್ ಮಾಡು. ಐದು ನಿಮಿಷದ ಬಳಿಕ ತುಂಬಾ ತಲೆನೋವೆಂದು ಹೇಳಿ ಮನೆಗೆ ಬಂದುಬಿಡು’ ಎಂದರು. ಅಮೃತಾಗೆ ಸ್ವಲ್ಪವೂ ಇಷ್ಟವಿರದಿದ್ದರೂ ಮಾತಾಪಿತರ ಒತ್ತಾಯಕ್ಕೆ ಮಣಿಯಬೇಕಾಯಿತು.
ಒಂದು ಸಂಜೆ ಅಶೋಕನೇ ಅವಳನ್ನು ದೊಡ್ಡ ಹೋಟೆಲ್ಗೆ ಕರೆದುಕೊಂಡು ಹೋದ. ಅಲ್ಲಿ ರಾತ್ರಿಯ ಊಟ ಮಾಡಿ ರೂಂ ಬಾಡಿಗೆಗೆ ಪಡೆದ. ಅವನ ಜತೆ ರೂಮಿನೊಳಗೆ ಹೋದ ನಂತರ ಅಮೃತಾ ಮಾತಾಪಿತರು ಹೇಳಿದಂತೆಯೇ ನಟಿಸಿದಳು. ಅರ್ಧಗಂಟೆಯ ನಂತರ ತಲೆನೋವೆಂದು ಹೊರಗೆ ಬಂದಳು. ಹೋಟೆಲಿನ ಹೊರಗೆ ಕಾಯುತ್ತಿದ್ದ ಪ್ರಮೋದ್ ಅವಳನ್ನು ಮನೆಗೆ ಕರೆತಂದ.
ಎರಡು ದಿನಗಳ ನಂತರ ಪ್ರಮೋದ್ ಅಶೋಕನ ತಂದೆಗೆ ಫೋನ್ ಮಾಡಿ ‘ನಿಮ್ಮ ಮಗ ನನ್ನ ಮಗಳ ಜೊತೆ ಡೇಟಿಂಗ್ ತಾಣದಲ್ಲಿ ಗೆಳೆಯನಾಗಿದ್ದು, ಅವಳನ್ನು ಲಾಡ್ಜಗೆ ಕರೆದುಕೊಂಡು ಹೋಗಿ ಬಲಾತ್ಕಾರ ಮಾಡಿದ್ದಾನೆ. ನಿಮ್ಮ ಮಗನ ಕಾಮಕೇಳಿಯ ವಿಡಿಯೋ ಮತ್ತು ಫೋಟೋ ನಮ್ಮ ಬಳಿ ಇದೆ. ಇವನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತೇವೆ, ನಾಳೆ ನನ್ನನ್ನು ಭೇಟಿಯಾಗಿ ಸಮಸ್ಯೆ ಪರಿಹರಿಸಿಕೊಳ್ಳಿ’ ಎಂದು ಬೆದರಿಸಿದ. ಗಾಬರಿಯಾದ ಅಶೋಕನ ತಂದೆ ಶ್ರೀನಾಥ್ ರೆಸ್ಟೋರೆಂಟ್ ಒಂದರಲ್ಲಿ ಪ್ರಮೋದ್ನನ್ನು ಭೇಟಿಯಾದರು. ಆಗ ಲೀನಾ ಸಹಾ ಗಂಡನ ಜತೆಗಿದ್ದಳು.
‘ನಿಮ್ಮ ಮಗ ಅಶೋಕ ಅಪ್ರಾಪ್ತ ವಯಸ್ಸಿನ ನಮ್ಮ ಮಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದಾನೆ. ಅವಳನ್ನು ಹೋಟೆಲ್ಗೆ ಕರೆದುಕೊಂಡು ಹೋಗಿ ರೇಪ್ ಮಾಡಿದ್ದಾನೆ. ನಮ್ಮ ಬಳಿ ಅವರಿಬ್ಬರ ಖಾಸಗಿ ಚಿತ್ರಗಳು ಹಾಗೂ ವಿಡಿಯೋಗಳಿವೆ’ ಎಂದ ಪ್ರಮೋದ್, ಅಮೃತಾ ಹೋಟೆಲಿನಲ್ಲಿ ತೆಗೆದಿದ್ದ ಸೆಲ್ಪಿಯನ್ನು ತೋರಿಸಿದ. ‘ಇದು ಟ್ರೇಲರ್ ಅಷ್ಟೇ, ಇನ್ನೂ ಬೇರೆ ವಿಡಿಯೋಗಳಿವೆ’ ಎಂದಾಗ ಶ್ರೀನಾಥ್ ಬೆವೆತುಹೋದ. ಆಗ ಪ್ರಮೋದ್, ‘ನೀವು 30 ಲಕ್ಷ ರೂಪಾಯಿಗಳನ್ನು ಕೊಟ್ಟರೆ ಈ ಪ್ರಕರಣವನ್ನು ಇಲ್ಲಿಯೇ ಮುಕ್ತಾಯ ಮಾಡಬಹುದು, ಇಲ್ಲದಿದ್ದರೆ ನಾವು ಪೊಲೀಸಿಗೆ ದೂರು ನೀಡುತ್ತೇವೆ, ಅವರು ಹೋಟೆಲಿನ ಸಿಸಿಟಿವಿ ಚಿತ್ರಗಳು ಹಾಗೂ ರಿಸೆಪ್ಷನಿಸ್ಟ್ಗಳ ಮೂಲಕ ಸತ್ಯವನ್ನು ಹೊರತೆಗೆಯುತ್ತಾರೆ. ನನ್ನ ಮಗಳಿಗೆ ಇನ್ನೂ 18 ವರ್ಷ ತುಂಬದಿರುವುದರಿಂದ ನಿಮ್ಮ ಮಗನಿಗೆ ಪೋಕ್ಸೋ ಕಾಯ್ದೆಯ ಮೇರೆಗೆ ಹತ್ತು ವರ್ಷ ಜೈಲಾಗುತ್ತದೆ’ ಎಂದ. ಹೆದರಿದ ಶ್ರೀನಾಥ್ ಹಣ ಕೊಡಲು ಒಪ್ಪಿ ಮೂರು ಕಂತುಗಳಲ್ಲಿ ಪ್ರಮೋದನ ಬ್ಯಾಂಕ್ ಖಾತೆಗೆ ಜಮಾ ಮಾಡಿದ. ಅಶೋಕ ತನ್ನ ಡೇಟಿಂಗ್ ಸೈಟಿನ ಸದಸ್ಯತ್ವವನ್ನು ಕೂಡಲೇ ರದ್ದುಗೊಳಿಸಿದ.
ಮೂರು ತಿಂಗಳ ನಂತರ ಮತ್ತೆ ಶ್ರೀನಾಥ್ನನ್ನು ವಾಟ್ಸಾಪ್ ಮೂಲಕ ಸಂರ್ಪಸಿದ ಪ್ರಮೋದ್, ‘ಅಶೋಕ ನನ್ನ ಮಗಳ ಜತೆಗೆ ದೈಹಿಕ ಸಂಪರ್ಕ ಮಾಡಿದ ಕಾರಣದಿಂದ ಆಕೆ ಈಗ ಗರ್ಭಿಣಿಯಾಗಿದ್ದಾಳೆ. ವೈದ್ಯರಿಗೆ ತೋರಿಸಿದಾಗ ಗರ್ಭಪಾತ ಮಾಡಬೇಕೆಂದು ಹೇಳುತ್ತಿದ್ದಾರೆ. ಆಕೆ ಮಾನಸಿಕವಾಗಿ ಜಝುರಿತಳಾಗಿದ್ದಾಳೆ. ಗರ್ಭಪಾತದ ವಿಷಯ ಯಾರಿಗಾದರೂ ತಿಳಿದರೆ ಅವಳಿಗೆ ಮುಂದೆ ಗಂಡುಗಳೇ ಸಿಗುವುದಿಲ್ಲ, ಅವಳ ಜೀವನವೇ ಹಾಳಾಗುತ್ತದೆ’ಎಂದ. ‘ನಾನೇನು ಮಾಡಲಿ, ಈಗಾಗಲೇ ನೀವು ಕೇಳಿದಷ್ಟು ಹಣವನ್ನು ಕೊಟ್ಟಾಯಿತಲ್ಲ’ ಎಂದು ಶ್ರೀನಾಥ್ ಹೇಳಿದಾಗ, ‘ಆಸ್ಪತ್ರೆ ಖರ್ಚು, ಅಮೃತಾಳ ಮುಂದಿನ ಉಪಚಾರ ಮತ್ತು ಮನೋವೈದ್ಯರಿಂದ ಚಿಕಿತ್ಸೆ ಕೊಡಿಸಲು ಇಪ್ಪತ್ತು ಲಕ್ಷ ರೂ. ಕೊಡಿ’ ಎಂದ. ‘ನೀವು ಕೇಳುತ್ತಿರುವ ಹಣ ತೀರಾ ಜಾಸ್ತಿಯಾಯಿತು’ ಎಂದು ಶ್ರೀನಾಥ್ ಉತ್ತರಿಸಿದಾಗ, ‘ಹಣ ಕೊಡದೇ ಹೋದರೆ ನಾನು, ನನ್ನ ಪತ್ನಿ ಮತ್ತು ಅಮೃತಾ ನಿಮ್ಮ ಮನೆ ಮತ್ತು ಅಂಗಡಿಯ ಮುಂದೆ ಧರಣಿ ಮಾಡುತ್ತೇವೆ’ ಎಂದು ಪ್ರಮೋದ್ ಬೆದರಿಸಿದ. ‘ಆಗಲಿ, ಹಣ ಹೊಂದಿಸಿಕೊಂಡು ನಿಮ್ಮನ್ನು ಸಂರ್ಪಸುವೆ’ ಎಂದ ಶ್ರೀನಾಥ್.
ವಾರದ ನಂತರ ಪ್ರಮೋದನಿಗೆ ಫೋನ್ ಮಾಡಿದ ಶ್ರೀನಾಥ್ ಹಣ ಪಡೆಯಲು ಈ ಹಿಂದೆ ಬಂದಿದ್ದ ರೆಸ್ಟೋರೆಂಟಿಗೇ ಬರಲು ತಿಳಿಸಿದ. ಪ್ರಮೋದ್ ಖುಷಿಯಿಂದ ಅಲ್ಲಿಗೆ ಹೋದಾಗ ಪೊಲೀಸರು ಬಂಧಿಸಿ ಅವನ ವಿರುದ್ಧ ಬ್ಲಾ್ಯಕ್ವೆುೕಲ್ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದರು. ಆನಂತರ ಲೀನಾಳನ್ನೂ ಬಂಧಿಸಲಾಯಿತು.
ಪ್ರಮೋದ ಹೂಡಿದ್ದ ನಾಟಕ ಪೊಲೀಸರ ತನಿಖೆಯಲ್ಲಿ ಸಾಬೀತಾಯಿತು. ಆತ ಮತ್ತು ಲೀನಾ ವಿರುದ್ಧ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಯಿತು. ಲೀನಾಳನ್ನು ಬಿಡುಗಡೆ ಮಾಡಿದ ನ್ಯಾಯಾಲಯ ಪ್ರಮೋದನಿಗೆ ಮೂರು ವರ್ಷಗಳ ಜೈಲುವಾಸ ವಿಧಿಸಿತು.
ಮಗಳನ್ನೇ ದಾಳಮಾಡಿಕೊಂಡು ಹಣ ಗಳಿಸಲೆತ್ನಿಸಿದ ಪ್ರಮೋದ ‘ತಂದೆಯೊಬ್ಬನಿಗೆ ತನ್ನ ಮಗಳಿಗಿಂತ ಪ್ರೀತಿಯಿರುವ ವಸ್ತುವಿಲ್ಲ’ ಎಂದ ಗ್ರೀಕ್ ನಾಟಕಕಾರ ಯೂರಿಪಿಡಿಸ್ನ ಮಾತುಗಳಿಗೆ ಅಪವಾದವಾದ.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)