

ರಾಜೇಂದ್ರ ಭಾರತದಾದ್ಯಂತ ವಹಿವಾಟನ್ನು ನಡೆಸುತ್ತಿದ್ದ ಖಾಸಗಿ ಕಂಪನಿಯೊಂದರಲ್ಲಿ ಬ್ರಾಂಚ್ ಮ್ಯಾನೇಜರ್ ಆಗಿದ್ದ. ಆತನ
ನಂತರ ಮನೆ ಹತ್ತಿರವಿದ್ದ ಶಾಲೆಯಲ್ಲಿ ಶಿಕ್ಷಕಿಯ ಕೆಲಸಕ್ಕೆ ಅರ್ಜಿ ಹಾಕಿದಾಗ ಆಕೆಗೆ ನೌಕರಿಯೂ ದೊರೆಯಿತು. ಶಾಲೆಯ ಇತರ ಕೆಲಸಗಳನ್ನೂ ಮಾಡಬೇಕಾಗಿದ್ದುದರಿಂದ ಆಕೆ ಬೆಳಗಿನ ಉಪಾಹಾರವನ್ನು ಮುಗಿಸಿ ಶಾಲೆಗೆ ಹೋದರೆ ವಾಪಸ್ ಆಗುತ್ತಿದ್ದುದು ಸಂಜೆ ಆರು ಗಂಟೆಯ ನಂತರ. ಕುಟುಂಬದ ಎಲ್ಲ ಸದಸ್ಯರು ಒಟ್ಟಿಗೆ ಸೇರುತ್ತಿದ್ದುದು ಊಟದ ಸಮಯದಲ್ಲಿಯೇ. ಏತನ್ಮಧ್ಯೆ ರಾಜೇಂದ್ರ ಸಹೋದ್ಯೋಗಿಗಳೊಂದಿಗೆ ಪ್ರವಾಸಿತಾಣಕ್ಕೆ ಪಿಕ್ನಿಕ್ಗೆ ಹೋದಾಗ ರಜನಿಯನ್ನೂ ತನ್ನೊಡನೆ ಕರೆದೊಯ್ದ. ಇತರ ಉದ್ಯೋಗಿಗಳೂ ತಮ್ಮ ಪತ್ನಿಯರ ಜತೆಯಲ್ಲಿ ಬಂದಿದ್ದರು. ಎಲ್ಲರೂ ಒಂದಾಗಿ ಅಂತ್ಯಾಕ್ಷರಿ, ಜೋಕ್, ಹಾಡು, ಹರಟೆ, ಮಿಮಿಕ್ರಿ ಮುಂತಾದುವುಗಳಲ್ಲಿ ಪಾಲ್ಗೊಂಡು ಖುಷಿ ಪಡೆದರು. ರಾಜೇಂದ್ರ ತನ್ನ ಆಪ್ತ ಸಹಾಯಕ ವಿನಾಯಕನ ಪತ್ನಿ ಶುಭಾಳ ಜತೆಗೆ ಸರಸವಾಡುತ್ತಿದ್ದುದನ್ನು ರಜನಿ ಗಮನಿಸದೇ ಇರಲಿಲ್ಲ. ಒಂದು ವರ್ಷದ ಹಿಂದೆ ವಿನಾಯಕನ ಲಗ್ನಕ್ಕೆ ಹೋದದ್ದನ್ನು ನೆನಪಿಸಿಕೊಂಡ ರಜನಿ 26 ವಯಸ್ಸಿನ ಶುಭಾ ತನ್ನ ಮಾಟವಾದ ದೇಹ, ಜಿಂಕೆಯಂತಹ ಕಣ್ಣುಗಳು ಹಾಗೂ ಸುಂದರ ನಗೆಯಿಂದ ಯಾರನ್ನಾದರೂ ಆಕರ್ಷಿಸಬಲ್ಲವಳಾದ್ದರಿಂದ ತನ್ನ ಗಂಡನೂ ಅವಳನ್ನು ಇಂಪ್ರೆಸ್ ಮಾಡತೊಡಗಿದ್ದಾನೆ ಎಂದು ಊಹಿಸಿದಳು. ಈಗಾಗಲೇ 50 ವರ್ಷಗಳಾಗಿರುವ ತನ್ನ ಗಂಡ ನಮ್ಮ ಮಗಳಿಗಿಂತ ಸ್ವಲ್ಪವೇ ಹಿರಿಯಳಾಗಿರುವ ಶುಭಾಳನ್ನು ಬೇರೊಂದು ದೃಷ್ಟಿಯಿಂದ ನೋಡುತ್ತಿರಬಹುದು ಎಂದು ಆಕೆ ಊಹಿಸಲೇ ಇಲ್ಲ. ರಾಜೇಂದ್ರನಾದರೋ ಶುಭಾಳತ್ತ ತೀವ್ರವಾಗಿ ಅನುರಕ್ತನಾಗಿದ್ದ. ಒಂದು ಮಧ್ಯಾಹ್ನ ವಿನಾಯಕ ಅರ್ಧದಿನದ ರಜೆ ಕೇಳಿದಾಗ, ರಾಜೇಂದ್ರ ಕಾರಣ ಕೇಳಿದ. ‘ಇಂದು ನನ್ನ ಪತ್ನಿಯ ಹುಟ್ಟುಹಬ್ಬವಿರುವುದರಿಂದ ನಾವಿಬ್ಬರೂ ದೇವಸ್ಥಾನಕ್ಕೆ ಹೋಗಿ ನಂತರ ಉತ್ತಮ ಹೋಟೆಲೊಂದರಲ್ಲಿ ಊಟ ಮಾಡುವ ಯೋಜನೆಯನ್ನು ಹಾಕಿದ್ದೇವೆ’ ಎಂದ ವಿನಾಯಕ. ಕೂಡಲೇ ರಜೆ ಮಂಜೂರು ಮಾಡಿದ ರಾಜೇಂದ್ರ ಅದೇ ಸಂಜೆ ಹೂವಿನ ಗುಚ್ಛವನ್ನು ಹಿಡಿದುಕೊಂಡು ವಿನಾಯಕನ ಮನೆಗೆ ಹೋದಾಗ ಪತಿ ಪತ್ನಿಯರಿಬ್ಬರಿಗೂ ಆಶ್ಚರ್ಯವಾಯಿತು. ಬಾಸ್ ಮನೆಗೆ ಬಂದಾಗ ಸತ್ಕರಿಸದಿರಲಾದೀತೇ? ಚಹಾದ ನಂತರ ರಾಜೇಂದ್ರ ‘ಶುಭಾಳ ಹುಟ್ಟುಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸೋಣ’ ಎಂದು ಹೇಳಿ ಅವರಿಬ್ಬರನ್ನೂ ಮಾಲ್ ಒಂದಕ್ಕೆ ಕರೆದೊಯ್ದು ಶುಭಾಗೆ ಉಡುಗೊರೆಯನ್ನು ಕೊಡಿಸಿ ನಂತರ ಇಬ್ಬರಿಗೂ ಪಂಚತಾರಾ ಹೋಟೆಲ್ನಲ್ಲಿ ಡಿನ್ನರ್ ಕೊಡಿಸಿದ.
ಕೆಲವೇ ದಿನಗಳ ನಂತರ ರಾಜೇಂದ್ರ ಕಚೇರಿಯ ಕೆಲಸದ ಮಧ್ಯೆಯೇ ಶುಭಾಳ ಮನೆಗೆ ಹೋಗಿ ಅವಳೊಡನೆ ಸಮಯ ಕಳೆದು ಬರುತ್ತಿದ್ದ. ಸ್ವಲ್ಪಕಾಲದ ನಂತರ ಅವರಿಬ್ಬರ ನಡುವೆ ದೈಹಿಕ ಸಂಬಂಧವೂ ಬೆಳೆಯಿತು. ವಿನಾಯಕ ಒಂದು ದಿನ ಇದ್ದಕ್ಕಿದ್ದಂತೆ ಭೋಜನ ವಿರಾಮದ ನಂತರ ತನ್ನ ಮನೆಗೆ ಬಂದಾಗ ಮನೆ ಮುಂದೆ ರಾಜೇಂದ್ರನ ಕಾರು ನಿಂತಿರುವುದನ್ನು ನೋಡಿ ಗಲಿಬಿಲಿಗೊಂಡ. ಮನೆಯ ಕರೆಗಂಟೆ ಒತ್ತಿದಾಗ ಶುಭಾ ತನ್ನ ವಸ್ತ್ರಗಳನ್ನು ಸರಿಮಾಡಿಕೊಳ್ಳುತ್ತ ಬಾಗಿಲು ತೆರೆದಳು. ಮನೆಯ ಬೆಡ್ರೂಂನಿಂದ ಹೊರಬಂದ ರಾಜೇಂದ್ರ ‘ಇದೇನಿದು ಇಷ್ಟು ಬೇಗನೇ ಮನೆಗೆ ಬಂದೆಯಲ್ಲ’ ಎಂದು ವಿನಾಯಕನಿಗೆ ಗದರಿದ. ‘ಮನೆಯಲ್ಲಿ ಮುಖ್ಯ ಫೈಲನ್ನು ಮರೆತು ಬಂದದ್ದರಿಂದ ಇಲ್ಲಿಗೆ ಬರಬೇಕಾಯಿತು’ ಎಂದುತ್ತರಿಸಿದ ವಿನಾಯಕ ಫೈಲ್ ತೆಗೆದುಕೊಂಡು ರಾಜೇಂದ್ರನ ಜತೆಯೇ ಕಚೇರಿಗೆ ವಾಪಸಾದ. ಅದೇ ಸಂಜೆ ವಿನಾಯಕ ಶುಭಾಳನ್ನು ಪೊಲೀಸರಂತೆಯೇ ಪ್ರಶ್ನಿಸಿದಾಗ ಕಳೆದ ಎರಡು-ಮೂರು ತಿಂಗಳಿಂದ ರಾಜೇಂದ್ರನ ಜತೆಗೆ ಸಂಪರ್ಕವಾಗಿದೆ ಎಂದು ಆಕೆ ಒಪ್ಪಿಕೊಂಡಳು.
ವಿನಾಯಕನಿಗೆ ಕೋಪ ಬರುವ ಬದಲು ಸಂತಸವಾಗಿದ್ದನ್ನು ಕಂಡು ಶುಭಾ ಅಚ್ಚರಿಗೊಂಡಳು. ‘ನೀನು ನನ್ನ ಬಾಸ್ಗೆ ತೃಪ್ತಿ ಪಡಿಸಿದರೆ ನನ್ನ ಅಭ್ಯಂತರವಿಲ್ಲ’ ಎಂದ ವಿನಾಯಕ ತನ್ನ ಬೆಡ್ರೂಂನಲ್ಲಿ ಗುಪ್ತಕ್ಯಾಮರಾ ಅಳವಡಿಸಿ ಅವರಿಬ್ಬರೂ ಜತೆಗಿದ್ದ ವೀಡಿಯೋ ಮಾಡಿ ಆನಂತರ ವೀಡಿಯೋವನ್ನು ರಾಜೇಂದ್ರನಿಗೆ ತೋರಿಸಿದ. ‘ನೀವು ನನ್ನ ಹೆಂಡತಿ ಜೊತೆ ಸಂಬಂಧ ಬೆಳೆಸಿರುವುದು ಗುಟ್ಟಾಗಿಯೇ ಇರಬೇಕಾದರೆ ಪ್ರತಿತಿಂಗಳೂ ನನಗೆ ಹತ್ತುಸಾವಿರ ರೂಪಾಯಿ ಕೊಡಬೇಕು’ ಎಂದ. ಈ ಬೇಡಿಕೆಗೆ ಸುಲಭವಾಗಿ ಒಪ್ಪಿದ ರಾಜೇಂದ್ರ ಆನಂತರ ರಾಜಾರೋಷವಾಗಿ ಶುಭಾಳ ಜತೆಗೆ ಓಡಾಡತೊಡಗಿದ.
ಮುಗ್ಧೆ ರಜನಿಗೆ ಈ ಯಾವ ವಿಷಯವೂ ತಿಳಿದಿರಲಿಲ್ಲ. ಏತನ್ಮಧ್ಯೆ ರಾಜೇಂದ್ರನಿಗೆ ಬೇರೊಂದು ಊರಿಗೆ ವರ್ಗವಾಯಿತು. ರಜನಿಗೆ ಗಂಡನ ಜತೆಗೆ ಹೋಗಲು ಸಾಧ್ಯವಿರಲಿಲ್ಲ. ಏಕೆಂದರೆ ಆಕೆ ನೌಕರಿಗೆ ರಾಜೀನಾಮೆ ಕೊಡಬೇಕಾಗಿತ್ತು. ಅಲ್ಲದೆ ಮಕ್ಕಳು ಕಾಲೇಜಿನಲ್ಲಿ ಓದುತ್ತಿದ್ದರು. ಹೀಗಾಗಿ ಆಕೆ ಅದೇ ಮನೆಯಲ್ಲಿಯೇ ಇರಬೇಕಾಗಿತ್ತು. ಬೇರೆ ಊರಿಗೆ ಹೋದ ನಂತರ ರಾಜೇಂದ್ರ ತನ್ನ ಹಿರಿಯರನ್ನು ಕೋರಿ ವಿನಾಯಕನನ್ನೂ ಅದೇ ಕಚೇರಿಗೆ ವರ್ಗ ಮಾಡಿಸಿಕೊಂಡ. ಮುಂದೆ ಶುಭಾಳ ಜತೆಗಿನ ಅವನ ಸಂಬಂಧ ಸಲೀಸಾಯಿತು. ಆದರೆ ಇಂತಹ ಸಂಬಂಧಗಳು ಹೆಚ್ಚು ದಿನ ಗುಟ್ಟಾಗಿರುವುದಿಲ್ಲ. ರಾಜೇಂದ್ರ-ಶುಭಾಳನ್ನು ಒಟ್ಟಿಗೆ ನೋಡಿದ ಪರಿಚಯಸ್ಥರೊಬ್ಬರು ರಜನಿಗೆ ಸುದ್ದಿ ಮುಟ್ಟಿಸಿದರು. ಈ ಬಗ್ಗೆ ಗಂಡನನ್ನು ರಜನಿ ವಿಚಾರಿಸಿದಾಗ ಆತ ಸಾರಾಸಗಟಾಗಿ ಆರೋಪವನ್ನು ಅಲ್ಲಗಳೆದ. ಮುಂದಿನ ವರ್ಷ ಪದೋನ್ನತಿ ಮೇರೆಗೆ ರಾಜೇಂದ್ರನಿಗೆ ಮತ್ತೆ ತನ್ನ ಊರಿಗೇ ವರ್ಗವಾಯಿತು. ಆತ ವಿನಾಯಕನನ್ನೂ ತನ್ನ ಜತೆಗೆ ವರ್ಗಮಾಡಿಸಿಕೊಂಡ. ಒಂದು ದಿನ ರಾಜೇಂದ್ರನ ಮಗ ಗೆಳೆಯರ ಜತೆಗೆ ಮಾಲ್ ಒಂದರಲ್ಲಿ ಸಿನಿಮಾಕ್ಕೆ ಹೋದಾಗ ತನ್ನ ತಂದೆ ಇನ್ನೊಬ್ಬಳ ಜತೆ ಅಲ್ಲಿಗೆ ಬಂದು ಸರಸಸಲ್ಲಾಪದಲ್ಲಿ ತೊಡಗಿರುವುದನ್ನು ಕಂಡು ತಾಯಿಗೆ ವಿಷಯ ತಿಳಿಸಿದ. ರಜನಿ ಈ ಬಗ್ಗೆ ಗಂಡನನ್ನು ವಿಚಾರಿಸಿದಾಗ ಆತ ‘ಶುಭಾ ನಮ್ಮ ಮಗಳ ವಯಸ್ಸಿನವಳು, ನೀನು ಹೀಗೆಲ್ಲ ಮಾತನಾಡಿದರೆ ಹುಷಾರ್’ ಎಂದು ಗದರಿದ. ಸುಮ್ಮನಿರದ ರಜನಿ ಗಂಡನನ್ನು ಪರಸ್ತ್ರೀಯ ಸಂಬಂಧವನ್ನು ಬಿಡಲು ಹೇಳಿದಾಗ ರಾಜೇಂದ್ರ, ‘ನಾನು ಅವಳ ಜೊತೆ ಸಂಬಂಧವಿಟ್ಟುಕೊಂಡಿರುವುದು ನಿಜ, ನೀನು ಏನೂ ಬೇಕಾದರೂ ಮಾಡಿಕೋ’ ಎಂದ. ಕ್ಷುಲ್ಲಕ ಕಾರಣಗಳಿಗೆ ಅವಳನ್ನು ಪ್ರತಿದಿನವೂ ಬೈಯುವುದಲ್ಲದೆ ಹೊಡೆಯಲಾರಂಭಿಸಿದ. ಮನೆಗೇ ಶುಭಾಳನ್ನು ಕರೆದುಕೊಂಡು ಬಂದು ಎಲ್ಲರೆದುರೇ ಅವಳ ಜತೆ ಸರಸಸಲ್ಲಾಪ ನಡೆಸುತ್ತಿದ್ದ. ತಾಯಿಯ ದುಸ್ಥಿತಿ ನೋಡಿದ ಮಕ್ಕಳು ‘ಅಮ್ಮಾ, ನೀನು ಚಿಂತಿಸಬೇಡ. ನಾವಿರುವ ಮನೆ ಪಿತ್ರಾರ್ಜಿತವಾಗಿ ನಿನಗೇ ಬಂದಿದೆ. ಅಪ್ಪನಿಗೆ ಈ ಮನೆ ಮೇಲೆ ಹಕ್ಕಿಲ್ಲ. ಅವನನ್ನೇ ಮನೆಯಿಂದ ಹೊರಹಾಕೋಣ’ ಎಂದು ಹೇಳಿದರು. ಆದರೆ ರಜನಿಗೆ ಈ ಸಲಹೆ ಒಪ್ಪಿಗೆಯಾಗದೆ ಆಕೆ ಗೆಳತಿಯೊಬ್ಬಳ ಜತೆಗೆ ಸಮಾಲೋಚಿಸಿದಳು. ಅವಳು ಹೇಳಿದಂತೆ ಗಂಡನಿಗೆ ವಿವಾಹ ವಿಚ್ಛೇದನದ ನೋಟೀಸ್ ನೀಡಿದಳು.
ಈ ನೋಟೀಸ್ ಮುಟ್ಟುತ್ತಿದ್ದಂತೆ ರಾಜೇಂದ್ರ ಕೆಂಡಾಮಂಡಲಗೊಂಡ. ಮನೆಗೆ ಬಂದು ರಜನಿಗೆ ಕೋಲೊಂದರಿಂದ ರಪರಪನೆ ಥಳಿಸಿದ. ಮೈತುಂಬ ಗಾಯಗೊಂಡು ಅಳುತ್ತಿದ್ದ ತಾಯಿಯನ್ನು ನೋಡಿದ ಮಕ್ಕಳು ರೋಸಿ ಹೋದರು. ಅವಳನ್ನು ಕೂಡಲೇ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಕೌಟುಂಬಿಕ ಹಿಂಸೆಯಿಂದ ರಕ್ಷಣೆ ಕಾನೂನಿನನ್ವಯ ಪೊಲೀಸರು ಅರ್ಜಿಯನ್ನು ಬರೆಸಿಕೊಂಡರು. ರಜನಿಯನ್ನು ಆಸ್ಪತ್ರೆಗೆ ಕಳಿಸಿ ಆಕೆಯ ಹಲ್ಲು ಮುರಿದಿದ್ದ ಕಾರಣ ದಂಡ ಸಂಹಿತೆಯ ಅನ್ವಯ ಗಾಯ ಮಾಡಿದ ದೂರನ್ನು ದಾಖಲಿಸಿ ರಾಜೇಂದ್ರನನ್ನು ಬಂಧಿಸಿದರು. ಕೌಟುಂಬಿಕ ನ್ಯಾಯಾಲಯ ರಜನಿಯ ದೂರಿಗೆ ಸ್ಪಂದಿಸಿ ರಾಜೇಂದ್ರನಿಗೆ ರಜನಿಯ ಮನೆಗೆ ಹೋಗದಂತೆ ಆದೇಶ ನೀಡಿತು. ಆನಂತರ ಇಬ್ಬರ ವಿವಾಹ ವಿಚ್ಛೇದನವೂ ಮಂಜೂರಾಯಿತು. ಸಾಕಷ್ಟು ಮಹಿಳೆಯರು ಪತಿಯನ್ನೇ ಜೀವನ ನಿರ್ವಹಣೆಗಾಗಿ ಅವಲಂಬಿಸಬೇಕಾಗುತ್ತದೆ. ಅಂತಹವರಿಗೆ ಕೌಟುಂಬಿಕ ಹಿಂಸೆಯಿಂದ ರಕ್ಷಣೆ ಕಾನೂನಿನನ್ವಯ ತಾನಿರುವ ಮನೆಯಿಂದ ಗಂಡ ಹೊರಹಾಕದಂತೆ ಇಲ್ಲವೆ ಪರ್ಯಾಯ ವಸತಿ ಕಲ್ಪಿಸಲು ಆದೇಶಿಸಬಹುದು; ಹಿಂಸೆ ನೀಡದಂತೆ ಗಂಡನಿಂದ ಮುಚ್ಚಳಿಕೆಯನ್ನು ಬರೆಸಿಕೊಳ್ಳಬಹುದು; ಮಡದಿ-ಮಕ್ಕಳ ಜೀವನಕ್ಕೆ ಬೇಕಾದ ಆರ್ಥಿಕ ವ್ಯವಸ್ಥೆಯನ್ನು ಕಲ್ಪಿಸಲು ಹೇಳಬಹುದು; ಇಲ್ಲವೇ ಯಾವುದೇ ಸೂಕ್ತ ಆದೇಶವನ್ನು ಮಾಡಬಹುದಾಗಿದೆ. ಒಂದು ವೇಳೆ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿದರೆ ಗಂಡನಿಗೆ ಜೈಲುವಾಸವನ್ನೂ ನೀಡಬಹುದು. ಘಾನಾದ ಖ್ಯಾತ ಲೇಖಕಿ ಲ್ಯೆಲಾ ಗಿಫ್ಟಿ ಅಕಿತಾ, ‘ಪ್ರತಿಯೊಂದು ದುರಾಚಾರದ ಕೃತ್ಯದಿಂದ ದೂರ ಹೋಗಿ, ಎಂದಿಗೂ ತಿರುಗಿ ನೋಡದಿರಿ’ ಎಂದಳು. ಶೋಷಿತ ಸ್ತ್ರೀಯರು ಪ್ರತಿಭಟಿಸಿದಾಗ ಮಾತ್ರ ಕೌಟುಂಬಿಕ ಹಿಂಸೆ ನಿಲ್ಲಬಹುದೇನೋ.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)