

1984ರ ಜನವರಿ 22ರ ಬೆಳಗಿನ 4 ಗಂಟೆಗೆ ಕೇರಳ ರಾಜ್ಯದ ಅಲೆಪ್ಪೆ (ಅಲಪುಳಾ) ಜಿಲ್ಲೆಯ ಮಾವೇಳಿಕರ ಪೊಲೀಸ್ ಠಾಣೆಗೆ ಒಬ್ಬ ವ್ಯಕ್ತಿ ಗಾಬರಿಯಿಂದ ಬಂದು ತಾನು ಅಲ್ಲಿಂದ 6 ಕಿ.ಮೀ ದೂರವಿರುವ ಕೊಳ್ಳಕಡವು ಗ್ರಾಮದ ವಾಸಿಯಾಗಿದ್ದು, ಗ್ರಾಮದ ರಸ್ತೆಯ ಪಕ್ಕದಲ್ಲಿರುವ ಒಣ ಭತ್ತದ ಗದ್ದೆಯಲ್ಲಿ ಕಾರೊಂದು ಉರಿಯುತ್ತಾ ಬಿದ್ದಿದೆ ಎಂದ.
ಬೆಳಕು ಹರಿದ ಕೂಡಲೇ ಸ್ಥಳ ಪರಿಶೀಲನೆ ಮಾಡಿದಾಗ ಕೈಗಳಿಗೆ ತೊಡುವ ಒಂದು ರಬ್ಬರ್ ಗ್ಲೌಸ್, ಬೆಂಕಿಪೊಟ್ಟಣ ಮತ್ತು ಒಂದು ಚಪ್ಪಲಿ ಕಾರಿನ ಸಮೀಪದಲ್ಲಿ ಬಿದ್ದಿತ್ತು. ಕಾರು ನಿಂತಿದ್ದ ಸ್ಥಳದಿಂದ ರಸ್ತೆಯವರೆಗೆ ಮಣ್ಣಿನ ಮೇಲೆ ವ್ಯಕ್ತಿ ಓಡಾಡಿದ ಹೆಜ್ಜೆಗುರುತುಗಳು ಕಂಡು ಬಂದವು. ಪೊಲೀಸರಿಗೆ ಈ ಘಟನೆ ಆಕಸ್ಮಿಕವಲ್ಲ ಎಂಬ ನಂಬಿಕೆ ಬಲವಾಯಿತು.
ಶವಪರೀಕ್ಷೆ ಮಾಡಿದ ಅಲಪ್ಪುಳ ಮೆಡಿಕಲ್ ಕಾಲೇಜಿನ ವಿಧಿವಿಜ್ಞಾನ ತಜ್ಞ ಮತ್ತು ಪೊಲೀಸ್ ಸರ್ಜನ್ ಡಾ.ಉಮಾದಾತನ್ ಮೃತನ ಪುಪು್ಪಸದಲ್ಲಿ ಅಥವಾ ಉಸಿರಾಡುವ ಭಾಗಗಳಲ್ಲಿ ಯಾವುದೇ ಇದ್ದಿಲಿನ ಅಂಶಗಳು ಇಲ್ಲ ಎಂದು ಹೇಳಿ ಆತನನ್ನು ಉಸಿರುಗಟ್ಟಿಸಿ ಕೊಲೆಮಾಡಿ ಆನಂತರ ಪೆಟ್ರೋಲ್ ಹಚ್ಚಿ ಸುಡಲಾಗಿದೆ ಎಂದು ತಿಳಿಸಿದರು. ಮೃತನ ಹೊಟ್ಟೆಯಲ್ಲಿನ ದ್ರವದ (ವಿಸೆರಾ) ಪರೀಕ್ಷೆಯ ನಂತರವೇ ಅಂತಿಮ ವರದಿಯನ್ನು ನೀಡಲಾಗುವುದೆಂದರು. ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣ ದಾಖಲಾಯಿತು.
ಅದೇ ಸಂಜೆ ಭಾಸ್ಕರ ಪಿಳ್ಳೈ ಎಂಬ ಒಬ್ಬ ವ್ಯಕ್ತಿ ಮಾವೇಳಿಕಾರ ಪೊಲೀಸ್ ಠಾಣೆಗೆ ಹಾಜರಾಗಿ ‘ನನ್ನ ಷಡ್ಡಕನಾಗಿರುವ 38 ವರ್ಷ ವಯಸ್ಸಿನ ಸುಕುಮಾರನ್ ಕುರುಪ್ ಠಾಣೆಗೆ 7 ಕಿ.ಮೀ ದೂರದ ಚೆರಿಯನಾಡ್ ಊರಿನವ. ಆತ ಅಂಬಾಲಪುರ ಎನ್ನುವ ಊರಿನಲ್ಲಿ ಸೈಟ್ ಖರೀದಿಸಿದ್ದ. ಕಳೆದ ರಾತ್ರಿ ನನ್ನ ಕಾರಿನಲ್ಲಿ ಅಲ್ಲಿಗೆ ಹೋಗಿದ್ದು ಇನ್ನೂವರೆಗೆ ಮನೆಗೆ ಹಿಂತಿರುಗಿಲ್ಲ. ಕೊಳ್ಳಕಡವು ಗ್ರಾಮದಲ್ಲಿ ಸಿಕ್ಕ ಶವವನ್ನು ನೋಡಬಹುದೇ’ ಎಂದು ಕೋರಿದ. ತಾವು ಜಪ್ತುಮಾಡಿದ್ದ ಶವದ ಮೇಲಿದ್ದ ಸುಟ್ಟ ಬಟ್ಟೆಯ ತುಂಡುಗಳನ್ನು ಪೊಲೀಸರು ತೋರಿಸಿದಾಗ, ಅವು ಸುಕುಮಾರನ್ನದೇ ಎಂದು ಪಿಳ್ಳೈ ಗುರುತಿಸಿದ. ಇದಲ್ಲದೇ ಸರ್ಕಾರೀ ಆಸ್ಪತ್ರೆಯ ಶವಾಗಾರದಲ್ಲಿದ್ದ ಅಪರಿಚಿತ ಶವವನ್ನು ತನ್ನ ಷಡ್ಡಕನದೇ ಎಂದು ಕರಾರುವಾಕ್ಕಾಗಿ ಹೇಳಿ ಸುಟ್ಟಿದ್ದ ಕರಿಯ ಅಂಬಾಸಿಡರ್ ಕಾರೂ ತನ್ನದೇ ಎಂದ.
ಸುಕುಮಾರನ್ ಅಬುಧಾಬಿಯಲ್ಲಿ ಕೆಲಸ ಮಾಡುತ್ತಿದ್ದು ಮೂರು ವಾರಗಳ ಹಿಂದೆ, ಅಂದರೆ ಜನವರಿ 1ರಂದು ಊರಿಗೆ ಹಿಂತಿರುಗಿದ್ದ. ಆತ ಸಾಕಷ್ಟು ಅನುಕೂಲವಂತನಾಗಿದ್ದು ಹತ್ತಿರದ ಅಂಬಾಲಪುರದಲ್ಲಿ್ಲ ಮನೆ ಕಟ್ಟಲು ತೀರ್ವನಿಸಿದ್ದ ಎಂದು ಪಿಳ್ಳೈ ಹೇಳಿದ. ಸುಕುಮಾರನ್ಗೆ ಯಾರಾದರೂ ವೈರಿಗಳಿದ್ದರೇ ಎಂದು ಪೊಲೀಸರು ಪ್ರಶ್ನಿಸಿದಾಗ ಇಲ್ಲವೆಂದ ಪಿಳ್ಳೈ ಆತ ಜನಾನುರಾಗಿಯಾಗಿದ್ದು ಕಷ್ಟದಲ್ಲಿದ್ದ ಸ್ನೇಹಿತರು ಮತ್ತು ಸಂಬಂಧಿಕರಿಗೆ ಧನಸಹಾಯ ಮಾಡುತ್ತಿದ್ದ ಎಂದ. ಹಣಕ್ಕಾಗಿ ಯಾರಾದರೂ ಅವನ ಕೊಲೆ ಮಾಡಿರುವ ಸಾಧ್ಯತೆಯನ್ನು ಪಿಳ್ಳೈ ಅಲ್ಲಗಳೆದ. ಸ್ತ್ರೀ ಸಂಬಂಧದ ವ್ಯಾಜ್ಯಗಳಲ್ಲೂ ಸುಕುಮಾರನ್ ಶಾಮೀಲಾಗಿರಲಿಲ್ಲ ಎಂದು ತಿಳಿಸಿದಾಗ ಆತನನ್ನು ಯಾರು, ಏಕೆ ಕೊಲೆ ಮಾಡಿದರು ಎನ್ನುವುದು ಯಕ್ಷಪ್ರಶ್ನೆಯಾಯಿತು.
ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಬರದಿರುವ ಕಾರಣ ಶವವನ್ನು ಸುಡದೆ ಹೂಳಬೇಕು, ಹಾಗೂ ಮುಂದಿನ ತನಿಖೆಗೆ ಬೇಕಾದಲ್ಲಿ ಶವವನ್ನು ಭೂಮಿಯಿಂದ ಹೊರತೆಗೆಯಲು ಕೊಡಬೇಕು ಎನ್ನುವ ಷರತ್ತಿನ ಮೇರೆಗೆ ಪೊಲೀಸರು ಶವವನ್ನು ಪಿಳ್ಳೈಗೆ ಹಸ್ತಾಂತರಿಸಿದರು. ತನಿಖೆಯ ಉಸ್ತುವಾರಿಯನ್ನು ಡಿವೈಎಸ್ಪಿ ಹರಿದಾಸ್ ಕೈಗೆತ್ತಿಕೊಂಡು ಮಾರನೆಯ ಮಧ್ಯಾಹ್ನವೇ ಸುಕುಮಾರನ್ ಮನೆಗೆ ಹೋದರು. ಅಲ್ಲಿದ್ದವರು ಆ ಸಮಯದಲ್ಲಿ ಊಟ ಮಾಡುತ್ತಿದ್ದು ಭೋಜನಕ್ಕೆ ಕೋಳಿಯ ಸಾರನ್ನು ಬಡಿಸುತ್ತಿದ್ದುದನ್ನು ಕಂಡ ಹರಿದಾಸ್ ಆಶ್ಚರ್ಯಗೊಂಡರು. ಏಕೆಂದರೆ ಸ್ಥಳೀಯ ಸಂಪ್ರದಾಯದಂತೆ ಸೂತಕದ ದಿನಗಳಲ್ಲಿ ಮಾಂಸಾಹಾರ ವರ್ಜಿತ ಎಂದು ಅವರಿಗೆ ತಿಳಿದಿತ್ತು. ಸುಕುಮಾರನ್ ಮನೆಗೆ ಬಂದಿದ್ದವರು ಯಾರೂ ದುಃಖದಿಂದ ಇಲ್ಲದಿರುವುದನ್ನೂ ಸೂಕ್ಷ್ಮಮತಿಯಾದ ಆ ಅಧಿಕಾರಿ ಗಮನಿಸಿದರು. ಅದೇ ಬೆಳಿಗ್ಗೆ ತನ್ನ ಷಡ್ಡಕನ ಶವಸಂಸ್ಕಾರ ಮಾಡಿದ್ದಾಗಿ ತಿಳಿಸಿದ ಪಿಳ್ಳೈ, ಸುಕುಮಾರನ್ನ ಪತ್ನಿ ಸರಸಮ್ಮ ಅಬುಧಾಬಿಯಲ್ಲಿ ನರ್ಸ್ ಆಗಿರುವುದರಿಂದ ಆಕೆಗೆ ರಜೆ ಸಿಗದೆ, ವಿಮಾನದ ಟಿಕೆಟ್ ದೊರೆಯದ ಕಾರಣ ಆಕೆ ಶವಸಂಸ್ಕಾರಕ್ಕೆ ಬರಲಿಲ್ಲ, ತಾನೇ ಸಂಸ್ಕಾರ ಮಾಡಿದೆ ಎಂದ.
ಪಿಳ್ಳೈ ಮುಖ ಮತ್ತು ಬಲಗೈ ಮೇಲೆ ಸುಟ್ಟ ಗಾಯಗಳಾಗಿರುವುದನ್ನು ಹರಿದಾಸ್ ಗಮನಿಸಿ ಪ್ರಶ್ನಿಸಿದರು. ‘ರಾತ್ರಿ ಚಳಿಯಿದ್ದ ಕಾರಣ ಬೆಂಕಿ ಕಾಯಿಸುತ್ತಿದ್ದೆ, ಆಗ ಕೆಂಡದ ಚೂರು ಅಕಸ್ಮಾತ್ತಾಗಿ ಮೈಮೇಲೆ ಬಿತ್ತು’ ಎಂಬ ಉತ್ತರ ಬಂತು. ಹರಿದಾಸ್ ಪಿಳ್ಳೈನ ಪತ್ನಿಯ ಬಳಿ ಕೇಳಿದಾಗ ಆತ ಸ್ನಾನ ಮಾಡಲು ಬಿಸಿ ನೀರನ್ನು ತರುತ್ತಿದ್ದಾಗ ಎಡವಿ ಬಿದ್ದು ಬಿಸಿ ನೀರು ತಾಕಿ ಗಾಯಗಳಾದವು ಎಂದಳು.
ಸಂಶಯಗೊಂಡ ಡಿವೈಎಸ್ಪಿ ಹರಿದಾಸ್ ಮಾರನೆಯ ದಿನವೇ ಪೊಲೀಸ್ ಠಾಣೆಗೆ ಬರಲು ಪಿಳ್ಳೈಗೆ ಸೂಚಿಸಿದರು. ಆತ ಠಾಣೆಗೆ ಬಂದಾಗ ಅವನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಆತನ ಹಣೆ, ಮೂಗು, ಎರಡೂ ಕೈಗಳು, ಬಲ ಬೆರಳುಗಳು, ಬಲಗಾಲು, ತೊಡೆ ಮುಂತಾದ ಜಾಗಗಳಲ್ಲಿ ಎರಡನೆಯ ಪ್ರಮಾಣದ ಸುಟ್ಟ ಗಾಯಗಳು ಇರುವುದಾಗಿ ವೈದ್ಯರು ವರದಿ ಮಾಡಿದರು. ಇಷ್ಟು ವ್ಯಾಪಕವಾಗಿ ಸುಟ್ಟ ಗಾಯಗಳು ನಿನಗೆ ಹೇಗಾದವು ಎಂದು ಪೊಲೀಸರು ತೀವ್ರರೀತಿಯಲ್ಲಿ ಪ್ರಶ್ನಿಸಿದಾಗ ತಾನೇ ಕಾರಿಗೆ ಬೆಂಕಿ ಹಚ್ಚಿದ್ದಾಗಿಯೂ ಆ ಸಮಯದಲ್ಲಿ ತನಗೆ ಸುಟ್ಟಗಾಯಗಳಾದವೆಂದೂ ಪಿಳ್ಳೈ ಒಪ್ಪಿಕೊಂಡ. ಮೃತವ್ಯಕ್ತಿ ತನ್ನ ಷಡ್ಡಕ ಸುಕುಮಾರನ್ ಅಲ್ಲವೆಂದು ಆತ ಹೇಳಿದಾಗ ತನಿಖಾಧಿಕಾರಿ ಗಾಬರಿಯಾಗಿ ಹಾಗಾದರೆ ಆತ ಯಾರು ಎಂದು ಪ್ರಶ್ನಿಸಿದರು. ಆತ ಯಾರೆಂಬುದು ತನಗೆ ತಿಳಿದಿಲ್ಲ ಎಂದ ಪಿಳ್ಳೈ, ‘ಸುಕುಮಾರನ್ನ ಸಹೋದ್ಯೋಗಿ ಸಾಹುವಿನ ಜತೆ ಸೇರಿ ನಾವೆಲ್ಲರೂ ಈ ಕೊಲೆ ಮಾಡಿದ್ದೇವೆ, ಕೊಲೆಯ ಸೂತ್ರಧಾರಿ ಸುಕುಮಾರನ್ ಪರಾರಿಯಾಗಿದ್ದಾನೆ, ಸಾಹು ಇಂದೋ ನಾಳೆಯೋ ಅಬುಧಾಬಿಗೆ ವಾಪಸಾಗುತ್ತಾನೆ’ ಎಂದ. ಪಿಳ್ಳೈ ಯನ್ನು ಕೂಡಲೇ ಬಂಧಿಸಿ ಸುಕುಮಾರನ್ ಪತ್ತೆಗಾಗಿ ಪೊಲೀಸರನ್ನು ಕಳಿಸಲಾಯಿತು.
ಸಾಹುವಿನ ವಿಳಾಸವನ್ನು ಪಡೆದ ಇನ್ಸ್ಪೆಕ್ಟರ್ ಕೆ.ಜೆ.ದೇವಾಸಿಯ ಅದೇ ರಾತ್ರಿ ಸುಮಾರು 150 ಕಿ.ಮೀ ದೂರದಲ್ಲಿರುವ ಚಾವಕ್ಕಾಡ್ಗೆ ಧಾವಿಸಿದರು. ಮಧ್ಯರಾತ್ರಿ ಅವರು ಸಾಹುವಿನ ಮನೆಯ ಬಾಗಿಲನ್ನು ತಟ್ಟಿದಾಗ ಮಾರನೆಯ ಬೆಳಿಗ್ಗೆ ಅಬುದಾಭಿಗೆ ಹೋಗುವ ವಿಮಾನ ಹಿಡಿಯಲು ಆತ ಕೊಚ್ಚಿಗೆ ಹೊರಡಲು ತಯಾರಾಗುತ್ತಿದ್ದ. ಅವನನ್ನು ವಶಕ್ಕೆ ಪಡೆದ ದೇವಾಸಿಯ ವಾಪಸಾದರು. ತಾನೂ ಅಪರಿಚಿತ ವ್ಯಕ್ತಿಯ ಕೊಲೆಯಲ್ಲಿ ಶಾಮೀಲಾಗಿದ್ದೆ ಎಂದು ಒಪ್ಪಿದ ಸಾಹು ಹೀಗೆ ಹೇಳಿದ:‘ ಸುಕುಮಾರನ್ ಜೊತೆಗೆ ನಾನು ಅಬುಧಾಬಿ ಮರಿನ್ ಆಪರೇಟಿಂಗ್ ಕಂಪನಿ ಎನ್ನುವ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಕಂಪನಿಯಲ್ಲಿ ಸುಕುಮಾರನ್ ಜನಪ್ರಿಯ ಅಧಿಕಾರಿಯಾಗಿದ್ದು ನಾವಿಬ್ಬರೂ ಹತ್ತಿರದ ಸ್ನೇಹಿತರಾದೆವು. ಕೆಲ ಕಾಲದ ನಂತರ ಅವನ ಪತ್ನಿ ಸರಸಮ್ಮ ಅಬುಧಾಬಿಗೆ ಬಂದು ಆಸ್ಪತ್ರೆಯೊಂದರಲ್ಲಿ ನರ್ಸ್ ಕೆಲಸಕ್ಕೆ ಸೇರಿದಳು. ಎರಡು ತಿಂಗಳ ಹಿಂದೆ ನಮ್ಮ ಕಂಪನಿಯನ್ನು ಮುಚ್ಚುತ್ತಾರೆ ಎಂಬ ವದಂತಿ ಹಬ್ಬಿ ನಮ್ಮಲ್ಲಿ ಭೀತಿ ಆವರಿಸಿತ್ತು. ಏಕಾಏಕಿ ಕೆಲಸ ಹೋದರೆ ಮುಂದೇನು ಮಾಡುವುದು ಎಂಬ ಚಿಂತೆ ಕಾಡತೊಡಗಿತು.
ಒಂದು ರಾತ್ರಿ ನಾನು ಸುಕುಮಾರನ್ ಮನೆಗೆ ಊಟಕ್ಕೆ ಹೋಗಿದ್ದಾಗ ನಮ್ಮ ಕಂಪನಿಯನ್ನು ಮುಚ್ಚಿದರೆ ಮುಂದೇನು ಮಾಡುವುದು ಎಂದು ಕೇಳಿದೆ. ಆಗ ಆತ ತಾನು ಒಂದು ಜರ್ಮನ್ ಸಿನಿಮಾ ನೋಡಿ ಅದರಿಂದ ಐಡಿಯಾ ಪಡೆದಿದ್ದೇನೆ ಎಂದ. ಏನದು ಎಂದು ಕೇಳಿದಾಗ, ‘ನಾನು 3 ಲಕ್ಷ ದಿರ್ಹಾಮ್ಳಿಗೆ (ಸುಮಾರು 60 ಲಕ್ಷ ರೂಗಳು) ಜೀವವಿಮೆ ಪಾಲಿಸಿ ತೆಗೆದುಕೊಂಡು ಅದಕ್ಕೆ ನನ್ನ ಹೆಂಡತಿಯನ್ನು ಫಲಾನುಭವಿ ಎಂದು ನಾಮಿನೇಷನ್ ಮಾಡಿಸುತ್ತೇನೆ. ನಾವಿಬ್ಬರೂ ಕೇರಳಕ್ಕೆ ಹೋಗೋಣ. ಅಲ್ಲಿ ನಾನು ಸತ್ತುಹೋದೆನೆಂದು ಬಿಂಬಿಸೋಣ. ಇದರ ಫಲವಾಗಿ ನನ್ನ ಹೆಂಡತಿಗೆ ಬರುವ ಹಣವನ್ನು ನಾವಿಬ್ಬರೂ ಹಂಚಿಕೊಂಡು ಸುಖವಾಗಿ ಜೀವಿಸೋಣ’ ಎಂದ.
(ಮುಂದುವರಿಯುವುದು)
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)