

ಅಪಹರಣಗೊಂಡಿದ್ದ ಭಿಕ್ಷುಕಿಯ ಮಗ ರಾಜುವನ್ನು ಖರೀದಿಸಿದ್ದ ಬಟ್ಟೆ ವ್ಯಾಪಾರಿ ಕಿಷನ್ ಪೊಲೀಸರ ಮುಂದೆ ತನ್ನ ಹೇಳಿಕೆಯನ್ನು ಹೀಗೆ ಮುಂದುವರಿಸಿದ: ‘ನಮ್ಮ ಚೊಚ್ಚಲ ಹೆಣ್ಣುಮಗು ನನ್ನ ಪತ್ನಿಯ ಗರ್ಭದಿಂದಲೇ ಬಂದಿದ್ದೆಂದು ಎಲ್ಲರಿಗೂ ಬಿಂಬಿಸಿದ್ದೆವು. ಬೇಗನೇ ಗಂಡುಮಗು ಪಡೆಯಬೇಕೆಂದು ಕುಟುಂಬದ ಹಿರಿಯರು ಒತ್ತಾಯಿಸತೊಡಗಿದರು.
ಇದಾದ ಒಂದು ತಿಂಗಳ ನಂತರವೂ ಯಾವುದೇ ಮಗು ಸಿಗದಿದ್ದಾಗ ಕಂಗಾಲಾದೆವು. ಆಶಾ ಮತ್ತು ಶ್ರೀದೇವಿಯನ್ನು ಸಂರ್ಪಸಿ ಗಂಡುಮಗುವನ್ನು ಕೆಲ ದಿನಗಳಲ್ಲಿ ತಂದು ಕೊಡದಿದ್ದರೆ ಕುಟುಂಬದಲ್ಲಿ ಮಾನ ಹೋಗುವುದಾಗಿ ಹೇಳಿದೆವು. ಅವರಿಬ್ಬರೂ ಪ್ರಯತ್ನ ಮಾಡುವುದಾಗಿ ಆಶ್ವಾಸನೆಯಿತ್ತರು. ಶೀಘ್ರದಲ್ಲಿಯೇ ಗಂಡುಮಗುವೇನಾದರೂ ಸಿಗದಿದ್ದರೆ, ‘ನಿನ್ನ ಮಗು ಡೆಲಿವರಿ ಸಮಯದಲ್ಲಿ ಸತ್ತುಹೋಯಿತು’ಎಂದು ಸರ್ಟಿಫಿಕೆಟ್ ನೀಡುವೆ, ಚಿಂತಿಸಬೇಡ’ ಎಂದು ಆಶಾ ನನಗೆ ಹೇಳಿದಳು. ನನಗೆ ಹೀಗೆ ಮಾಡುವುದು ಇಷ್ಟವಿರಲಿಲ್ಲ. ಹೀಗಾಗಿ ಶ್ರೀದೇವಿಯನ್ನು ಸಂರ್ಪಸಿ ಬೇರೆ ಎಲ್ಲಿಂದಾದರೂ ಗಂಡುಮಗುವನ್ನು ತಂದುಕೊಡಲು ಒತ್ತಾಯಿಸಿದೆ. ನನ್ನ ಒತ್ತಡದಿಂದ ಆಕೆ ಆರು ತಿಂಗಳ ಹಿಂದೆ ಗಂಡುಮಗುವನ್ನು ತಂದುಕೊಟ್ಟಳು. ಇದನ್ನು ನಮಗೆ ಜನಿಸಿದ ಮಗುವೆಂದೇ ಎಲ್ಲರಿಗೂ ತಿಳಿಸಿ, ಆ ಪ್ರಕಾರ ಜನನ ಪ್ರಮಾಣಪತ್ರವನ್ನೂ ಮಾಡಿಸಿ ಅದನ್ನು ಪ್ರೀತಿಯಿಂದ ಸಾಕುತ್ತಿದ್ದೇವೆ’ ಎಂದ.
ತನ್ನ ಮುಂದುವರಿದ ಹೇಳಿಕೆಯಲ್ಲಿ ನರ್ಸ್ ಶ್ರೀದೇವಿ ಹೀಗೆಂದಳು: ‘ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸಾಗಿದ್ದ ರೇಣುಕಾ ಎನ್ನುವವಳು ತಮ್ಮ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬಾಣಂತಿಯನ್ನು ಆಕೆಯ ಮಗುವಿನ ಜತೆಗೆ ಹೆಚ್ಚಿನ ಚಿಕಿತ್ಸೆಗಾಗಿ ನಮ್ಮ ನರ್ಸಿಂಗ್ ಹೋಮಿಗೆ 2012ರಲ್ಲಿ ಅಡ್ಮಿಟ್ ಮಾಡಿಸಿದಳು. ಆ ಬಾಣಂತಿ ಅಲೆಮಾರಿ ಜನಾಂಗಕ್ಕೆ ಸೇರಿದ ಬಡವಳಾಗಿದ್ದು ಆಕೆಯ ಹೆಣ್ಣು ಮಗುವಿಗೆ ಜಾಂಡಿಸ್ ರೋಗ ತಗುಲಿತ್ತು. ಆ ಮಗುವಿಗೆ ಎಂಟು ದಿನ ಆರೈಕೆ ಮಾಡಿ ಆಸ್ಪತ್ರೆಯ ಬಿಲ್ ನೀಡಿದಾಗ ಆಕೆ ಹಣ ತಂದುಕೊಡುತ್ತೇನೆಂದು ಹೇಳಿ ಮಗುವನ್ನು ನರ್ಸಿಂಗ್ ಹೋಂನಲ್ಲಿಯೇ ಬಿಟ್ಟು ಪರಾರಿಯಾದಳು. ಆಗ ಆಸ್ಪತ್ರೆಯಲ್ಲಿ ಬಾಲಕಿಯನ್ನು ನಾನೇ ಪಾಲಿಸುತ್ತಿದ್ದ ಕಾರಣ ನನಗೆ ಅದರ ಮೇಲೆ ಮಮತೆಯುಂಟಾಯಿತು. ಮಗುವಿನ ತಾಯಿ ಆರು ತಿಂಗಳಾದರೂ ವಾಪಸಾಗದಿದ್ದಾಗ ನಾನು ಆಸ್ಪತ್ರೆಯ ಮಾಲಕಿ ಆಶಾಳಿಗೆ ಆ ಮಗುವನ್ನು ನಾನೇ ಸಾಕಿಕೊಳ್ಳುವೆನೆಂದು ಕೇಳಿದೆ. ನನಗೇ ಮಗು ಹುಟ್ಟಿದಂತೆ ಆಶಾ ದಾಖಲೆಗಳನ್ನು ಸೃಷ್ಟಿಸಿ, ಮಗುವಿನ ಶುಶ್ರೂಷೆ ಖರ್ಚೆಂದು ನನ್ನಿಂದ -ಠಿ; 25 ಸಾವಿರ ಪಡೆದು ಮಗುವನ್ನು ನನಗೆ ಕೊಟ್ಟರು.
‘ನಾನು ಆ ಮಗುವನ್ನು ಇಂದಿಗೂ ಪ್ರೀತಿಯಿಂದ ಸಾಕುತ್ತಿದ್ದೇನೆ. ಒಂದು ದಿನ ನನ್ನ ಸಂಬಂಧಿಕಳಾದ ಲೀಲಾ ನಾನು ಗರ್ಭಿಣಿಯಾಗದಿದ್ದರೂ ಮಗು ಹೇಗಾಯಿತೆಂದು ಕೇಳಿದಾಗ ನಿಜ ಹೇಳಬೇಕಾಯಿತು. ಆಗ ಲೀಲಾ ತನಗೂ ಮಕ್ಕಳಿಲ್ಲದಿರುವುದರಿಂದ ಗಂಡುಮಗುವನ್ನು ಕೊಡಿಸಲು ಕೋರಿದಳು. ನಾನು ಈ ಕೋರಿಕೆಯನ್ನು ರೇಣುಕಾ ಮತ್ತು ಆಶಾಗೆ ತಿಳಿಸಿದೆ. ಅದೇ ಸಮಯದಲ್ಲಿ ತನ್ನ ಆಸ್ಪತ್ರೆಯಲ್ಲಿ ಒಬ್ಬ ಅವಿವಾಹಿತ ಯುವತಿ ಗಂಡುಮಗುವಿಗೆ ಜನ್ಮ ನೀಡಿರುವುದಾಗಿಯೂ ಆ ಮಗುವನ್ನು ಒಯ್ಯಲು ಆ ಯುವತಿ ಒಪ್ಪುತ್ತಿಲ್ಲವೆಂದೂ ರೇಣುಕಾ ತಿಳಿಸಿ ಆ ಮಗುವನ್ನು ಆಶಾಳಿಗೆ ತಂದುಕೊಟ್ಟಳು. ರೇಣುಕಾಳಿಗೆ -ಠಿ; 25 ಸಾವಿರ ನೀಡಿದ ಆಶಾ ಆ ಮಗುವಿಗೂ ಕೆಲಕಾಲ ಚಿಕಿತ್ಸೆ ನೀಡಿ ಅದನ್ನು ನನ್ನ ಮೂಲಕ ಲೀಲಾಗೆ ಮಾರಿದಳು.
ಈ ವಿಷಯವನ್ನು ನನ್ನ ನೆರೆಹೊರೆಯವರು ಮತ್ತು ಸಂಬಂಧಿಕರು ಅರಿತ ನಂತರ ಮಕ್ಕಳಿಲ್ಲದ ಹಲವರು ನನ್ನನ್ನು ಸಂರ್ಪಸಿ ತಮಗೂ ಮಕ್ಕಳನ್ನು ಕೊಡಿಸಬೇಕೆಂದು ಪೀಡಿಸತೊಡಗಿದರು. ಈ ಬಗ್ಗೆ ಆಶಾಗೆ ತಿಳಿಸಿದಾಗ ಅವರು ರೇಣುಕಾಳನ್ನೂ ಕರೆಸಿದರು. ಅನೈತಿಕ ಸಂಬಂಧಗಳಿಂದ ಗರ್ಭಿಣಿಯಾದವರು ಮತ್ತು ಮಕ್ಕಳನ್ನು ಸಾಕಲಾರದವರು ಹೆರಿಗೆಯ ನಂತರ ಮಕ್ಕಳನ್ನು ನಗರದ ಹಲವಾರು ಆಸ್ಪತ್ರೆಗಳಲ್ಲಿ ಬಿಟ್ಟು ಹೋದಾಗ ಅಂತಹ ಮಕ್ಕಳನ್ನು ಪಡೆದು ಮಾರಾಟ ಮಾಡಬೇಕೆಂದು ನಿರ್ಧರಿಸಲಾಯಿತು. ಹಾಗೆಯೇ ಕೆಲವು ಗರ್ಭಿಣಿಯರಿಗೆ ನಮ್ಮ ನರ್ಸಿಂಗ್ ಹೋಮಿನಲ್ಲಿ ಅವಧಿಪೂರ್ವ ಹೆರಿಗೆ ಮಾಡಿಸಿ ಆ ಮಕ್ಕಳನ್ನೂ ಮಾರಲು ತೀರ್ವನಿಸಿದೆವು. ಹೀಗೆ ಮಕ್ಕಳ ಮಾರಾಟ ಜಾಲವನ್ನು ಆಶಾ ಪ್ರಾರಂಭಿಸಿದಳು’.
ಪೊಲೀಸರು ಕಿಷನ್ ಬಳಿಯಿಂದ ಭಿಕ್ಷುಕಿಯ ಮಗನನ್ನು ಮರಳಿ ಪಡೆದು ತಾಯಿಗೆ ಮರಳಿಸಿದರು. ಈ ಪ್ರಕರಣದಲ್ಲಿ ಶ್ರೀದೇವಿ ಮತ್ತು ಸುನೀಲ ಸೇರಿ ಆರು ಜನರನ್ನು ಬಂಧಿಸಿ ಅಪಹರಣದ ಕೇಸಿನಲ್ಲಿ ಆರೋಪಪಟ್ಟಿ ಸಲ್ಲಿಸಿದರು. ಏತನ್ಮಧ್ಯೆ ಅರುಣ ಮತ್ತು ಅವನ ಸಹಚರ ರವಿ ಇತರ ಹಲವಾರು ಕಳ್ಳತನ ಪ್ರಕರಣಗಳಲ್ಲಿ ಶಾಮೀಲಾಗಿದ್ದುದು ಬೆಳಕಿಗೆ ಬಂದು ಅವರಿಬ್ಬರಿಂದ ಸ್ಕೋಡಾ ಕಾರಿನ ಜತೆಗೆ ಬಂಗಾರದ ಆಭರಣಗಳನ್ನು ಪೊಲೀಸರು ಜಪ್ತಿ ಮಾಡಿದರು.
ರಾಜುವಿನ ಅಪಹರಣವಾಗಿದ್ದ ಸ್ಥಳ ಹಾಗೂ ಆಶಾಳ ನರ್ಸಿಂಗ್ ಹೋಂ ಬೇರೆ-ಬೇರೆ ಊರುಗಳಲ್ಲಿದ್ದ ಕಾರಣ ಆಶಾಳ ವಿರುದ್ಧ ಬೇರೊಂದು ಪೊಲೀಸ್ ಠಾಣೆಯಲ್ಲಿ ಮಕ್ಕಳ ಮಾರಾಟ ಜಾಲದ ಪ್ರಕರಣ ದಾಖಲಾಯಿತು. ಈ ಪ್ರಕರಣದ ತನಿಖೆ ಮಾಡಿದಾಗ ಆಶಾ ಅದೇ ಊರಿನ ಹಲವಾರು ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದ ನರ್ಸಗಳನ್ನು, ಡಯಾಗ್ನಾಸ್ಟಿಕ್ ಸೆಂಟರ್ಗಳಲ್ಲಿ ಕೆಲಸ ಮಾಡುತ್ತಿದ್ದ ತಾಂತ್ರಿಕ ಸಿಬ್ಬಂದಿ ಮೂಲಕ, ಮಕ್ಕಳಾಗಲು ಬಯಸದ ಗರ್ಭಿಣಿಯರ ಹಾಗೂ ಮಕ್ಕಳನ್ನು ಸಾಕಲಾರದ ಬಾಣಂತಿಯರ ಮಾಹಿತಿ ಸಂಗ್ರಹಿಸಿ, ಅಂಥವರನ್ನು ಸಂರ್ಪಸಿ ಅವರಿಗೆ ಶುಲ್ಕವಿಲ್ಲದೇ ಸೂಕ್ತ ಚಿಕಿತ್ಸೆ ಕೊಡುವುದಾಗಿ ಹೇಳಿ ಅವರು ಏಳು ತಿಂಗಳ ಗರ್ಭಿಣಿಯಾದಾಗ ಅವಧಿಪೂರ್ವ ಹೆರಿಗೆ ಮಾಡಿಸಿ ಮನೆಗೆ ಕಳುಹಿಸಿಕೊಡುತ್ತಿದ್ದಳು ಎಂದು ತಿಳಿಯಿತು. ನವಜಾತ ಶಿಶುಗಳನ್ನು ಇನಕ್ಯೂಬೇಟರ್ನಲ್ಲಿಟ್ಟು ಶುಶ್ರೂಷೆ ಮಾಡಿ ಮಕ್ಕಳನ್ನು ಖರೀದಿಸುವವರಿಗಾಗಿ ಕಾಯಲಾಗುತ್ತಿತ್ತು. ಮಕ್ಕಳು ಬೇಕಾದವರನ್ನು ಪತ್ತೆಮಾಡಲೆಂದೇ ರೇಣುಕಾ ಮತ್ತು ಶ್ರೀದೇವಿಯಂತಹ ಹಲವಾರು ಏಜೆಂಟರಿದ್ದರು. ಮಕ್ಕಳು ಬೇಕಾದವರಿಂದ ಆಶಾ ಒಂದರಿಂದ ಎರಡು ಲಕ್ಷ ರೂ. ಪಡೆದು ಅವರೇ ಮಕ್ಕಳನ್ನು ಹಡೆದಂತೆ ದಾಖಲೆ ಸೃಷ್ಟಿಸಿ ಮಾರಾಟ ಮಾಡುತ್ತಿದ್ದಳು. ನೋಡಲು ಅಂದವಾಗಿರುವ ಹಾಗೂ ಗಂಡುಮಕ್ಕಳಿಗೆ ಹೆಚ್ಚಿನ ಬೆಲೆ ನಿಗದಿಪಡಿಸುತ್ತಿದ್ದು ಹೆಣ್ಣು ಮಕ್ಕಳಿಗೆ ಹೆಚ್ಚು ಬೇಡಿಕೆಯಿರದ ಕಾರಣ ಕಡಿಮೆ ಬೆಲೆಗೆ ಮಾರುತ್ತಿದ್ದಳು.
ಆಶಾಳ ನರ್ಸಿಂಗ್ ಹೋಂ ಮೇಲೆ ಪೊಲೀಸರು ದಾಳಿ ಮಾಡಿದಾಗ ಅವಳ ಪತಿ ರಾಬರ್ಟ್ ಅದೇ ನರ್ಸಿಂಗ್ ಹೋಂನಲ್ಲಿದ್ದ ಒಂದು ನವಜಾತ ಶಿಶುವನ್ನು ಕಾರ್ಡ್ಬೋರ್ಡ್ ಡಬ್ಬಿಯಲ್ಲಿ ಹಾಕಿಕೊಂಡು ಪರಾರಿಯಾದ. ಆತ ಹಾದಿಯಲ್ಲಿ ಡಾಬಾದಲ್ಲಿ ಚಹಾ ಕುಡಿಯಲು ನಿಂತಾಗ ಕಾರಿನ ಡಬ್ಬಿಯಲ್ಲಿದ್ದ ಮಗು ಅಳತೊಡಗಿ ಹಾದಿಹೋಕರನ್ನು ಆಕರ್ಷಿಸಿತು. ಆಗ ಅಲ್ಲಿ ಜಮಾಯಿಸಿದ ಜನರು ಡಬ್ಬಿಯಲ್ಲಿದ್ದ ಮಗುವನ್ನು ನೋಡಿ ಸಂಶಯಗೊಂಡು ರಾಬರ್ಟ್ನನ್ನು ಪೊಲೀಸರ ವಶಕ್ಕೆ ಒಪ್ಪಿಸಿದರು.
ಏತನ್ಮಧ್ಯೆ ಆಶಾ ತನ್ನ ಮನೆಯಲ್ಲಿಯೇ ಇಂತಹ ಒಂದು ಶಿಶುವನ್ನು ಸಾಕುತ್ತಿರುವುದಾಗಿ ಹೇಳಿದಳು. ತಾನು ಮತ್ತು ತನ್ನ ಸಹಚರರು ಅಲ್ಲಿಯವರೆಗೆ 16 ಶಿಶುಗಳನ್ನು ಮಾರಾಟ ಮಾಡಿರುವುದಾಗಿ ಆಶಾ ತಿಳಿಸಿದಳು. ಆ ಶಿಶುಗಳನ್ನು ಬೆಂಗಳೂರು, ಮಂಗಳೂರು, ಮಡಿಕೇರಿ, ಮೈಸೂರು, ಶಿವಮೊಗ್ಗವಲ್ಲದೆ ಕೇರಳ ರಾಜ್ಯ ಮತ್ತು ಅಮೆರಿಕಗಳಿಗೂ ಮಾರಾಟ ಮಾಡಿರುವುದಾಗಿ ತಿಳಿಯಿತು. ಪೊಲೀಸರಿಗೆ ಬಂದ ಮುಂದಿನ ಸವಾಲೆಂದರೆ ಮಾರಾಟವಾಗಿದ್ದ ಶಿಶುಗಳನ್ನು ಅವುಗಳ ಪಾಲಕರಿಂದ ವಶಪಡಿಸಿಕೊಳ್ಳುವುದು. ಕೆಲವು ಪಾಲಕರು ಆ ಮಕ್ಕಳನ್ನು ತಮ್ಮದೆಂದೇ ಹಲವಾರು ವರ್ಷಗಳ ಕಾಲ ಪ್ರೀತಿಯಿಂದ ಸಾಕಿ ಸಲಹಿದ್ದರು. ಅವರು ಶಿಶು ತಮ್ಮಿಂದ ಅಗಲುವುದನ್ನು ಸಹಿಸುತ್ತಿರಲಿಲ್ಲ. ಅವರೊಂದಿಗೆ ಸಂವೇದನಾಶೀಲರಾಗಿ ವ್ಯವಹರಿಸಿ ಆ ಮಕ್ಕಳನ್ನು ಮರಳಿ ಪಡೆಯಲಾಯಿತು.
ಪೊಲೀಸರು ಆಶಾ ಮತ್ತು ಅವಳ ಗಂಡನಿಂದ ವಶಪಡಿಸಿಕೊಂಡಿದ್ದ ಎರಡು ಮಕ್ಕಳು ಸೇರಿ ಒಟ್ಟಾರೆ ಒಂಬತ್ತು ಹೆಣ್ಣುಮಕ್ಕಳು ಮತ್ತು ಏಳು ಗಂಡುಮಕ್ಕಳನ್ನು ವಶಪಡಿಸಿಕೊಂಡು ಅವರೆಲ್ಲರನ್ನೂ ಬೇರೆ ಬೇರೆ ಮಕ್ಕಳ ಪಾಲನಾ ಗೃಹಗಳಲ್ಲಿ ದಾಖಲಿಸಿದರು. ಕೆಲಕಾಲಾನಂತರ ಹೈಕೋರ್ಟ್ ಆ ಮಕ್ಕಳನ್ನು ಅವುಗಳನ್ನು ಪೋಷಿಸುತ್ತಿದ್ದವರಿಗೇ ಹಿಂದಿರುಗಿಸಲು ಆದೇಶಿಸಿತು. ಡಿ.ಎನ್.ಎ ತಂತ್ರಜ್ಞಾನ ಬಳಸಿ ಮಕ್ಕಳ ನೈಸರ್ಗಿಕ ಮಾತೆಯರಾಗಿದ್ದ ನಾಲ್ವರನ್ನು ಪತ್ತೆಮಾಡಲಾಯಿತು. ಆಶ್ಚರ್ಯವೆಂದರೆ ಅವರಲ್ಲೊಬ್ಬಳು ಭಿಕ್ಷುಕಿಯ ಮಗುವನ್ನು ಅಪಹರಿಸಿದ್ದ ಆರೋಪಿಯ ಸಹಚರ ರವಿ ಜತೆ ಸಂಬಂಧ ಹೊಂದಿದ್ದು, ಅವನಿಂದಲೇ ಗರ್ಭಿಣಿಯಾಗಿದ್ದಳು. ಅಮೆರಿಕಕ್ಕೆ ಹೋಗಿದ್ದ ಮಗುವನ್ನು ವಾಪಸ್ ಕರೆತರಲಾಗಲಿಲ್ಲ. ರಾಜುವಿನ ಅಪಹರಣ ಮತ್ತು ಮಕ್ಕಳ ಮಾರಾಟ ಜಾಲದ ಎರಡೂ ಪ್ರಕರಣಗಳು ನ್ಯಾಯಾಲಯದಲ್ಲಿ ಇನ್ನೂ ಇತ್ಯರ್ಥವಾಗಿಲ್ಲ.
‘ಮಾನವ ಜೀವವು ಭಗವಂತನ ಉಡುಗೊರೆ. ಅದನ್ನು ತಿರಸ್ಕರಿಸಬಾರದು, ಮಾರಬಾರದು ಮತ್ತು ಅಪಮೌಲ್ಯ ಮಾಡಬಾರದು’ ಎಂದ ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಬುಷ್ರ ಮಾತುಗಳನ್ನು ಅನುಸರಿಸದಿದ್ದಲ್ಲಿ ಇಂತಹ ಪ್ರಕರಣಗಳು ಆಗುತ್ತಲೇ ಇರುತ್ತವೆ.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)