ಕಲಾವಿದನ ಕೊಲೆ ಆದದ್ದೇಕೆ?

Arrest
Published on

2019ರ ಡಿಸೆಂಬರ್ 2ರ ಮುಂಜಾನೆ ಮುಂಬೈನ ಮಾಹಿಂನಲ್ಲಿ ದುಬಾರಿ ಬೆಲೆಯ ಬಿಳಿಯ ಬಣ್ಣದ ಸೂಟ್​ಕೇಸೊಂದು ಸಮುದ್ರದಿಂದ ತೇಲಿಕೊಂಡು ಬಂದು ತೀರದಲ್ಲಿ ಬಿದ್ದಿತು. ಹಾದಿಹೋಕನೊಬ್ಬ ಕುತೂಹಲಗೊಂಡು ಅದನ್ನೆತ್ತಿಕೊಳ್ಳಲು ಹೋದಾಗ ಅದರೊಳಗಿಂದ ಮಾನವನ ಕೈಯೊಂದು ಹೊರಬರುತ್ತಿರುವುದನ್ನು ಕಂಡು ಗಾಬರಿಯಾಗಿ ಪೊಲೀಸರಿಗೆ ಕರೆ ಮಾಡಿದ. ಪೊಲೀಸರು ಸೂಟ್​ಕೇಸನ್ನು ತೆರೆದಾಗ ಅದರೊಳಗೆ ದೇಹದಿಂದ ಕತ್ತರಿಸಲಾಗಿದ್ದ ಕೈ ಜತೆಗೆ ಒಂದು ಕಾಲು ಹಾಗೂ ಪುರುಷನ ಜನನೇಂದ್ರಿಯ ಇದ್ದವು. ಈ ಮೂರು ತುಂಡುಗಳನ್ನು ಬಿಳಿ ಬಣ್ಣದ ಶರ್ಟ್, ಕಂದು ಬಣ್ಣದ ಪ್ಯಾಂಟ್ ಮತ್ತು ಕೆಂಪು ಬಣ್ಣದ ಅರ್ಧ ತೋಳಿನ ಸ್ವೆಟರ್ ನಡುವೆ ಪ್ಯಾಕ್ ಮಾಡಲಾಗಿತ್ತು. ಶರ್ಟ್​ನ ಕಾಲರ್ ಮೇಲೆ ‘ಅಲೇಮೋ ಮೆನ್ಸ್ ವೇರ್’ ಎಂಬ ಹೆಸರಿನ ಲೇಬಲ್ ಇತ್ತು.

ಅಪರಿಚಿತ ವ್ಯಕ್ತಿಯನ್ನು ಯಾರೋ ಕೊಲೆಮಾಡಿ ದೇಹವನ್ನು ತುಂಡರಿಸಿ ಸಮುದ್ರಕ್ಕೆಸೆದಿರುವುದು ಮೇಲ್ನೋಟಕ್ಕೇ ಗೋಚರಿಸುತ್ತಿದ್ದುದರಿಂದ ಪೊಲೀಸರು ಕೊಲೆ ಮತ್ತು ಸಾಕ್ಷ್ಯನಾಶದ ಪ್ರಕರಣ ದಾಖಲಿಸಿ ಅಲೇಮೋ ಮೆನ್ಸ್ ವೇರ್ ಹೆಸರಿನ ರ್ದಜಿಯ ಅಂಗಡಿಗಾಗಿ ಮಹಾನಗರದಲ್ಲಿ ಹುಡುಕಲಾರಂಭಿಸಿದರು. ಕುರ್ಲಾದಲ್ಲಿ ಆ ಅಂಗಡಿ ಪತ್ತೆಯಾಯಿತು. ಅದರ ಮಾಲೀಕ ಅನ್ಸಾರಿಗೆ ಆ ಶರ್ಟನ್ನು ತೋರಿಸಿದಾಗ ಇದನ್ನು ನನ್ನ ಅಂಗಡಿಯಲ್ಲಿಯೇ ಹೊಲಿದಿರುವುದಾದರೂ ಯಾರು ಹೊಲಿಸಿದರೆಂದು ನೆನಪಾಗುತ್ತಿಲ್ಲ ಎಂದು ಹೇಳಿ ತನ್ನ ಗ್ರಾಹಕರ ಅಳತೆಯನ್ನು ಬರೆದಿಟ್ಟಿದ್ದ ರಿಜಿಸ್ಟರನ್ನು ಪೊಲೀಸರಿಗೆ ನೀಡಿದ. ಅದರಲ್ಲಿ ಒಬ್ಬ ವ್ಯಕ್ತಿಯ ಹೆಸರು ದೊರಕಿತು. ಅವನ ಮನೆಗೆ ಹೋಗಿ ಶರ್ಟನ್ನು ತೋರಿಸಿದಾಗ ಆತ ಆ ಶರ್ಟ್ ತನ್ನದಲ್ಲವೆಂದ. ಪೊಲೀಸರು ಮತ್ತೊಮ್ಮೆ ರ್ದಜಿಯ ರಿಜಿಸ್ಟರನ್ನು ಪರಿಶೀಲಿಸಿದರು. ಬೆನೆಟ್ ರೆಬೆಲ್ಲೋ ಎನ್ನುವವನು ಒಂದು ವರ್ಷದ ಹಿಂದೆ ಶರ್ಟ್ ಹೊಲಿಸಿದ್ದ ವಿವರ ದೊರೆಯಿತು. ಆದರೆ ಆತನ ವಿಳಾಸ ರಿಜಿಸ್ಟರ್​ನಲ್ಲಿ ನಮೂದಾಗಿರಲಿಲ್ಲ. ಅನ್ಸಾರಿಗೂ ಈ ಗ್ರಾಹಕ ಯಾರೆಂದು ನೆನಪಾಗಲಿಲ್ಲ.

ಪೊಲೀಸರು ಬೆನೆಟ್ ರೆಬೆಲ್ಲೋ ಎನ್ನುವ ಹೆಸರಿನ ಯಾರಾದರೂ ಫೇಸ್​ಬುಕ್, ಇನ್ಸಾ್ಟಗ್ರಾಂ ಅಥವಾ ಟ್ವಿಟ್ಟರ್​ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಸದಸ್ಯನಾಗಿರುವರೇ ಎಂದು ಹುಡುಕತೊಡಗಿದರು. ಮುಂಬೈನಲ್ಲಿಯೇ ಇದೇ ಹೆಸರಿನ ನೂರಾರು ಜನರು ಇಂತಹ ಜಾಲತಾಣಗಳ ಸದಸ್ಯರಾಗಿದ್ದರು. ಇವರೆಲ್ಲರ ಪ್ರೊಫೈಲ್ ಫೋಟೋಗಳನ್ನು ಪರಿಶೀಲಿಸಿದಾಗ ಫೇಸ್​ಬುಕ್​ನ ಸದಸ್ಯನಾಗಿದ್ದ ಬೆನೆಟ್ ರೆಬೆಲ್ಲೋ ಎನ್ನುವವನು ಅರ್ಧತೋಳಿನ ಕೆಂಪು ಸ್ವೆಟರ್ ಧರಿಸಿದ್ದ ಫೋಟೋ ಕಂಡಿತು. ಆ ಸ್ವೆಟರ್ ಸೂಟ್​ಕೇಸ್​ನಲ್ಲಿ ಸಿಕ್ಕಿದ್ದ ಸ್ವೆಟರನ್ನು ಹೋಲುತ್ತಿರುವುದನ್ನು ಕಂಡ ಪೊಲೀಸರು ಅವನ ಫೋಟೋವನ್ನು ಡೌನ್​ಲೋಡ್ ಮಾಡಿ ಅದನ್ನು ಟೇಲರ್ ಅನ್ಸಾರಿಗೆ ತೋರಿಸಿದಾಗ ಷರ್ಟನ್ನು ಹೊಲಿಸಿದ್ದ ವ್ಯಕ್ತಿ ಇವನೇ ಎಂದು ಆತ ಗುರುತಿಸಿದರೂ ರೆಬೆಲ್ಲೋನ ವಿಳಾಸ ಗೊತ್ತಿಲ್ಲವೆಂದ. ಪೊಲೀಸರು ಫೇಸ್​ಬುಕ್​ನಲ್ಲಿ ಹುಡುಕಾಡತೊಡಗಿದಾಗ ಅವನ ವಿಸಿಟಿಂಗ್ ಕಾರ್ಡ್​ನ

ಚಿತ್ರ ದೊರಕಿತು. ಅದರಲ್ಲಿದ್ದ ವಿಳಾಸವನ್ನು ಹುಡುಕಿಕೊಂಡು ರೆಬೆಲ್ಲೋನ ಮನೆಗೆ ಹೋದಾಗ, ಮನೆಗೆ ಬೀಗ ಹಾಕಿತ್ತು. ನೆರೆಹೊರೆಯವರು ಬೆನೆಟ್ ರೆಬೆಲ್ಲೋ ಎಂಬ ಸಂಗೀತಗಾರ ಆ ಫ್ಲಾಟಿನಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದನೆಂದು ತಿಳಿಸಿ ಅವನು ಸಾಕಷ್ಟು ಶ್ರೀಮಂತನಾಗಿದ್ದು ಮುಂಬೈನಲ್ಲಿ ಮತ್ತೊಂದು ಫ್ಲಾಟನ್ನು ಹೊಂದಿರುವುದಾಗಿಯೂ ಆತನ ಮನೆಯಲ್ಲಿ ಒಬ್ಬ ಯುವತಿ ಕೆಲಸ ಮಾಡುತ್ತಿದ್ದಳೆಂದೂ ತಿಳಿಸಿದರು.

ರೆಬೆಲ್ಲೋ ಮನೆಯಲ್ಲಿ ಯಾರು ಕೆಲಸಮಾಡುತ್ತಿದ್ದರೆಂದು ಅದೇ ಬಡಾವಣೆಯಲ್ಲಿನ ಮನೆಕೆಲಸದವರನ್ನು ವಿಚಾರಿಸಿದಾಗ ರಿಯಾ ಎನ್ನುವವಳ ಹೆಸರು ಸಿಕ್ಕಿತು. ಅವಳನ್ನು ಸಮೀಪದ ಕೊಳೆಗೇರಿಯಲ್ಲಿ ಪತ್ತೆಮಾಡಿದ ಪೊಲೀಸರು ಪ್ರಶ್ನಿಸಿದಾಗ ಆಕೆ ‘ರೆಬೆಲ್ಲೋ ನನ್ನಂತಹ ಬಡ ಬಾಲಕಿಯರನ್ನು ತನ್ನ ಮನೆಯಲ್ಲಿಯೇ 24 ಗಂಟೆಗಳ ಕಾಲಕ್ಕೆ ಕೆಲಸಕ್ಕಿಟ್ಟುಕೊಂಡು ವಿದ್ಯಾಭ್ಯಾಸಕ್ಕೆ ನೆರವಾಗುವುದಲ್ಲದೇ ಮುಂದೆ ದತ್ತು ತೆಗೆದುಕೊಂಡು ತಮ್ಮ ಆಸ್ತಿಯ ಪಾಲನ್ನೂ ಕೊಡುತ್ತಾರೆ ಎಂದು ತಿಳಿದಾಗ ನಾನು ಅವರ ಮನೆಯ ಕೆಲಸಕ್ಕೆ ಸೇರಿಕೊಂಡೆ. ಆದರೆ ನನಗೆ ಮದುವೆ ಗೊತ್ತಾದ ಕಾರಣ ಕೆಲಸ ಬಿಡಬೇಕಾಯಿತು. ಆಗ ನನಗೆ ಪರಿಚಯವಿದ್ದ ಆರಾಧ್ಯ ಪಾಟೀಲ್ ಎನ್ನುವವಳಿಗೆ ಹೇಳಿ ಆರು ತಿಂಗಳ ಹಿಂದೆ ಅವರ ಮನೆ ಕೆಲಸಕ್ಕೆ ಸೇರಿಸಿದೆ’ ಎಂದಳು.

ರಿಯಾಳಿಂದ ಆರಾಧ್ಯಳ ವಿವರ ಪಡೆದು ಪೊಲೀಸರು ಅವಳನ್ನು ಸಂರ್ಪಸಿದರು. ಹದಿನೆಂಟು ವರ್ಷ ವಯಸ್ಸಿನ ಆಕೆ ತಾನು ರೆಬೆಲ್ಲೋನ ಮನೆಯಲ್ಲಿ ನಾಲ್ಕು ತಿಂಗಳಿಂದ ಕೆಲಸ ಮಾಡುತ್ತಿದ್ದುದಾಗಿಯೂ ರೆಬೆಲ್ಲೋ ಕೆನಡಾಕ್ಕೆ ಪ್ರವಾಸಕ್ಕೆ ಹೋದ ಕಾರಣ ತನ್ನನ್ನು ತಾತ್ಕಾಲಿಕವಾಗಿ ಕೆಲಸದಿಂದ ಬಿಡಿಸಿರುವುದಾಗಿಯೂ ಹೇಳಿದಳು. ಮುಂಬೈ ಏರ್​ಪೋರ್ಟಿನಲ್ಲಿ ಪೊಲೀಸರು ವಿಚಾರಿಸಿದಾಗ ಆ ಹೆಸರಿನ ವ್ಯಕ್ತಿ ಕಳೆದ ಆರು ವಾರಗಳಲ್ಲಿ ವಿದೇಶಕ್ಕೆ ಪ್ರಯಾಣ ಮಾಡಿಲ್ಲ ಎಂದು ತಿಳಿಯಿತು. ಪೊಲೀಸರು ಮತ್ತೊಮ್ಮೆ ಆರಾಧ್ಯಳ ಮನೆಗೆ ಹೋದಾಗ ಆಕೆ ಗಾಬರಿಗೊಂಡು ಓಡತೊಡಗಿದಳು. ಅವಳನ್ನು ಬೆನ್ನಟ್ಟಿ ಹಿಡಿದು ಮಹಿಳಾ ಪೊಲೀಸರ ಮುಂದೆ ಪ್ರಶ್ನಿಸಿದಾಗ ಆಕೆ ಹೀಗೆಂದಳು:‘59 ವರ್ಷದ ರೆಬೆಲ್ಲೋ ವಿವಾಹ ವಿಚ್ಛೇದನ ಪಡೆದು ಒಬ್ಬಂಟಿಯಾಗಿ ಜೀವಿಸುತ್ತಿದ್ದು ತನ್ನ ಮನೆಯಲ್ಲಿ ಕೆಲಸ ಮಾಡಲು ಬಾಲಕಿಯರನ್ನು ಹುಡುಕುತ್ತಿದ್ದಾನೆ. ಅವನಲ್ಲಿ ಕೆಲಸಕ್ಕೆ ಸೇರಿಕೊಂಡವರನ್ನು ಆತ ದತ್ತು ಪಡೆದು ಅವರಿಗೆ ತನ್ನ ಆಸ್ತಿಯಲ್ಲಿ ಪಾಲು ಕೊಡುತ್ತಾನೆ ಎಂದು ರಿಯಾ ನನಗೆ ಹೇಳಿದಳು. ಅಂತೆಯೇ ನಾನು ಅವನನ್ನು ಸಂರ್ಪಸಿದಾಗ ನನ್ನನ್ನು ತನ್ನ ಮಗಳನ್ನಾಗಿ ದತ್ತು ತೆಗೆದುಕೊಳ್ಳಲು ಒಪ್ಪಿ ತನ್ನ ಆಸ್ತಿಯನ್ನು ನನ್ನ ಹೆಸರಿನಲ್ಲಿ ಬರೆಯುವುದಾಗಿ ಹೇಳಿದ. ದತ್ತು ಪಡೆಯಬೇಕಾದರೆ ಪೊಲೀಸ್ ಠಾಣೆಗೆ ಅರ್ಜಿ ನೀಡಿ ನನ್ನ ದಾಖಲೆಗಳನ್ನು ಸಲ್ಲಿಸಲು ಆತ ತಿಳಿಸಿದ ಮೇರೆಗೆ ನಾನು ಠಾಣೆಯಲ್ಲಿ ದಾಖಲೆಗಳನ್ನು ಸಲ್ಲಿಸಿ ಅವರಲ್ಲಿ ಕೆಲಸಕ್ಕೆ ಸೇರಿಕೊಂಡೆ. ಆತ ಕ್ಲಬ್​ಗಳಲ್ಲಿ ಹಾಡು ಹೇಳುತ್ತಿದ್ದು ಸಂಜೆ ಏಳು ಗಂಟೆಗೆ ಮನೆಯಿಂದ ಹೊರಟು ಮಧ್ಯರಾತ್ರಿಯ ನಂತರವೇ ವಾಪಸಾಗುತ್ತಿದ್ದ. ನಾನು ಅಡುಗೆ ಕೆಲಸ ಮಾಡಿಕೊಂಡು, ಮನೆಯನ್ನು ಒಪ್ಪ ಒರಣವಾಗಿ ಇಡುತ್ತಿದ್ದೆ.

ನಾನು ಕೆಲಸಕ್ಕೆ ಸೇರಿದ ಎರಡು ವಾರಗಳ ನಂತರ ಒಂದು ರಾತ್ರಿ ಆತ ನನ್ನನ್ನು ತನ್ನ ರೂಮಿನಲ್ಲಿಯೇ ಮಲಗಲು ಹೇಳಿ ನನ್ನನ್ನು ಲೈಂಗಿಕವಾಗಿ ಶೋಷಿಸಿದ. ಕಾಲಕ್ರಮೇಣ ಪ್ರತಿದಿನವೂ ಲೈಂಗಿಕ ಕಿರುಕುಳ ಕೊಡತೊಡಗಿದ. ಆಸ್ತಿಯನ್ನು ನನ್ನ ಹೆಸರಿಗೆ ಬರೆಯುತ್ತಾನೆ ಎನ್ನುವ ಆಸೆಯಿಂದ ಸುಮ್ಮನಿದ್ದೆ. ಒಂದು ದಿನ ನನ್ನ ಬಾಯ್ಫ್ರೆಂಡ್ ಸುರೇಶ್ ಬಂದ. ಆಗ ರೆಬೆಲ್ಲೋ ಅವನನ್ನು ಗದರಿಸಿ ಹೊರಗಟ್ಟಿ ‘ನಿನ್ನ ಸ್ನೇಹಿತರು ನನ್ನ ಮನೆಗೆ ಬರಬಾರದು’ ಎಂದು ಆದೇಶಿಸಿದ. ಆದರೂ ರೆಬೆಲ್ಲೋ ಮನೆಯಲ್ಲಿ ಇಲ್ಲದಿದ್ದಾಗ ಸುರೇಶ್ ಬರುತ್ತಿದ್ದ. ರೆಬೆಲ್ಲೋ ಕಿರುಕುಳದ ಬಗ್ಗೆ ಹೇಳಿದಾಗ ‘ನಾವು ರೆಬೆಲ್ಲೋನ ಕೊಲೆ ಮಾಡಿ ಆತನ ದೇಹವು ಕಾಣದಂತೆ ಮಾಡಿದರೆ ದತ್ತುಪುತ್ರಿಯಾದ ನಿನಗೆ ಅವನ ಆಸ್ತಿ ಬರುತ್ತದೆ. ಆನಂತರ ನಾವಿಬ್ಬರೂ ಮದುವೆಯಾಗಿ ಸುಖವಾಗಿ ಜೀವನ ಮಾಡಬಹುದು’ ಎಂದ. ನಾನೂ ಒಪ್ಪಿದೆ.

ನವೆಂಬರ್ 26ರ ರಾತ್ರಿ ಸುರೇಶ್ ಬಂದ. ನಾನು ಅವನನ್ನು ಗೆಸ್ಟ್ ರೂಮಿನಲ್ಲಿ ಅಡಗಿಸಿದೆ. ಮಧ್ಯರಾತ್ರಿಯ ನಂತರ ಚೆನ್ನಾಗಿ ಮದ್ಯಪಾನ ಮಾಡಿದ್ದ ರೆಬೆಲ್ಲೋ ಮನೆಗೆ ವಾಪಸಾಗಿ ತನ್ನ ಕೋಣೆಯಲ್ಲಿ ಮಲಗಿದ. ಅರ್ಧ ಗಂಟೆಯ ಬಳಿಕ ನಾವಿಬ್ಬರೂ ರೆಬೆಲ್ಲೋನ ಕೋಣೆಗೆ ಹೋದೆವು. ನಿದ್ರಿಸುತ್ತಿದ್ದ ರೆಬೆಲ್ಲೋನ ತಲೆಗೆ ಸುರೇಶ್ ಬಿದಿರಿನ ಕಟ್ಟಿಗೆಯಿಂದ ಜೋರಾಗಿ ಹೊಡೆದ. ಅವನ ಜ್ಞಾನ ತಪ್ಪಿದಾಗ ನಾವಿಬ್ಬರೂ ಅಡುಗೆ ಮನೆಯಲ್ಲಿದ್ದ ಚಾಕುಗಳಿಂದ ಅವನನ್ನು ಇರಿದು, ಆತ ಬೇಗ ಸಾಯಲೆಂದು ಅವನ ಮುಖಕ್ಕೆ ಜಿರಳೆ ಸಾಯಿಸುವ ಕ್ರಿಮಿನಾಶಕವನ್ನು ಸಿಂಪಡಿಸಿದೆವು.

ಮಾರನೆಯ ಬೆಳಿಗ್ಗೆ ರೆಬೆಲ್ಲೋನ ಸೆಲ್​ಫೋನನ್ನು ಸುರೇಶ್ ಅಂಗಡಿಯೊಂದರಲ್ಲಿ ಮಾರಿ ಅದರಿಂದ ಬಂದ ಹಣದಲ್ಲಿ ಕಟುಕರು ಮಾಂಸ ಕತ್ತರಿಸುವ 4 ಚಾಕುಗಳನ್ನೂ ಹಾಗೂ ರೂಂ ಫ್ರ್ರೆಷನರ್​ಗಳನ್ನೂ ತಂದ. ಮುಂದಿನ 3 ದಿನಗಳ ಕಾಲ ರೆಬೆಲ್ಲೋನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದೆವು. ಎಲುಬುಗಳನ್ನು ಕತ್ತರಿಸುವುದು ಕಷ್ಟವಾದಾಗ ಚಾಕುಗಳನ್ನು ಸ್ಟೌವ್ ಮೇಲಿಟ್ಟು ಬಿಸಿ ಮಾಡಿ ಆನಂತರ ಕತ್ತರಿಸುತ್ತಿದ್ದೆವು. ಕ್ರಮೇಣ ರೆಬೆಲ್ಲೋನ ರೂಮಿನಿಂದ ಕೆಟ್ಟ ವಾಸನೆ ಬರತೊಡಗಿತು. ಆಗ ರೂಂ ಫ್ರೆಷನರ್​ಗಳನ್ನು ಪದೇಪದೆ ಸಿಂಪಡಿಸಿದೆವು. ಮನೆಯನ್ನು ಸಾರಿಸಿ ರಕ್ತದ ಕಲೆಗಳನ್ನು ತೊಳೆದೆವು. ದೇಹವನ್ನು ತುಂಡುಗಳಾಗಿ ಮಾಡಿದ ನಂತರ ಅವನ್ನು ರೆಬೆಲ್ಲೋನ ಬಟ್ಟೆಗಳಲ್ಲೇ ಸುತ್ತಿ ಮೂರು ಸೂಟ್​ಕೇಸ್​ಗಳಲ್ಲಿ ತುಂಬಿದೆವು. ಮನೆಯ ಬಾಗಿಲಿಗೆ ಬೀಗ ಹಾಕಿ, ಸುರೇಶ್​ನ ಸ್ನೇಹಿತನ ಟ್ಯಾಕ್ಸಿಯಲ್ಲಿ ಸೂಟ್​ಕೇಸ್​ಗಳನ್ನು ತುಂಬಿಕೊಂಡು ಮೂರು ಬೇರೆ ಬೇರೆ ಜಾಗಗಳಲ್ಲಿ ಅವನ್ನು ಸಮುದ್ರದಲ್ಲಿ ಎಸೆದೆವು.’ ಶೋಷಣೆಯ ಪ್ರತಿಭಟನೆ, ಆಸ್ತಿಗಾಗಿ ಆಸೆ ಮತ್ತು ಪ್ರಿಯಕರನ ಸಾಮೀಪ್ಯ ಆರಾಧ್ಯಳನ್ನು ಇಂತಹ ಘೊರಕೃತ್ಯಕ್ಕೆ ಪ್ರಚೋದಿಸಿರಬೇಕೆಂದು ಭಾವಿಸಿದ ಪೊಲೀಸರು ಅವರನ್ನು ಬಂಧಿಸಿದರು. ಆತನಿಗೆ ಹದಿನಾರು ವರ್ಷ ವಯಸ್ಸಾಗಿದ್ದ ಕಾರಣ ಬಾಲಕರ ಗೃಹಕ್ಕೆ ಕಳುಹಿಸಲಾಯಿತು. ಆರಾಧ್ಯ ಕಾರಾಗೃಹದಲ್ಲಿದ್ದಾಳೆ. ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ

ಯಲ್ಲಿದೆ. ಮನಶ್ಶಾಸ್ತ್ರಜ್ಞ ಕಾರ್ಲ್ ಯುಂಗ್ ಹೇಳುವಂತೆ, ‘ಆರೋಗ್ಯವಂತ ಜನರು ಬೇರೊಬ್ಬರನ್ನು ಹಿಂಸಿಸುವುದಿಲ್ಲ, ಹಿಂಸೆಗೊಳಗಾದವರೇ ಹಿಂಸಾಕಾರರಾಗಿ ಬೆಳೆಯುತ್ತಾರೆ’.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net