ಆ ಕ್ಷಣ ಅಂಕಣ: ಬಾಲ್ಯವಿವಾಹಕ್ಕೆ ಇಂಬು ಕೊಡದಿರಿ

Child Marriage
Published on

ಐವತ್ತು ವರ್ಷ ವಯಸ್ಸಿನ ನಾಗರಾಜ್ ಉತ್ತರ ಕರ್ನಾಟಕದ ಜಿಲ್ಲಾ ಕೇಂದ್ರದಲ್ಲಿದ್ದ ಖಾಸಗಿ ಕಂಪನಿಯೊಂದರ ಮ್ಯಾನೇಜರ್. ಆತನಿಗೆ ಲಲಿತಾ ಎನ್ನುವವಳ ಜತೆಗೆ ಲಗ್ನವಾಗಿತ್ತು. ಆತನ ಹುಟ್ಟೂರಿನ ನೆರೆಯ ಜಿಲ್ಲೆಯವಳಾಗಿದ್ದ ಲಲಿತಾ ಬಿ.ಕಾಂ ಪದವೀಧರೆಯಾಗಿದ್ದು ಕಾಲೇಜೊಂದರಲ್ಲಿ ಅಕೌಂಟೆಂಟ್ ಆಗಿದ್ದಳು. ಅವರ ಏಕಮಾತ್ರ ಪುತ್ರಿ 14 ವರ್ಷ ವಯಸ್ಸಿನ ಸುಮಾ 8ನೆಯ ತರಗತಿಯಲ್ಲಿ ಕಾನ್ವೆಂಟ್ ಶಾಲೆಯಲ್ಲಿ ಕಲಿಯುತ್ತಿದ್ದಳು. ಸಂಸಾರನೌಕೆ ಸುಖವಾಗಿಯೇ ಸಾಗಿತ್ತು. ಲಲಿತಾಗೆ 40 ವರ್ಷ ತುಂಬುವ ಸಮಯಕ್ಕೆ ಸ್ತನ ಕ್ಯಾನ್ಸರ್ ತಗುಲಿತು. ಆಗ ಆಕೆ ಕೆಲಸಕ್ಕೆ ರಾಜೀನಾಮೆ ನೀಡಿದಳು. ಸೂಕ್ತ ಚಿಕಿತ್ಸೆಯ ಪರಿಣಾಮವಾಗಿ ಆಕೆ ಬೇಗನೇ ಗುಣಮುಖಳಾದರೂ ಖಿನ್ನತೆಗೆ ಗುರಿಯಾದಳು.

ಕೆಲಕಾಲಾನಂತರ ಲಲಿತಾ ಮನೆಕೆಲಸದಲ್ಲಿ ಆಸಕ್ತಿ ಕಳೆದುಕೊಂಡು ಸದಾಕಾಲವೂ ಟಿ.ವಿ ನೋಡುತ್ತಾ, ಅಕ್ಕಪಕ್ಕದವರ ಜತೆಗೆ ಹರಟೆ ಹೊಡೆಯತ್ತಾ ಕಾಲ ತಳ್ಳುತ್ತಿದ್ದಳು. ಮನೆಯಲ್ಲಿ ಅಡುಗೆ ಮಾಡುವುದನ್ನು ನಿಲ್ಲಿಸಿದಳು. ಗಂಡನ ಜತೆಗೆ ಲೈಂಗಿಕ ಸಂಪರ್ಕವನ್ನೂ ಮಾಡುತ್ತಿರಲಿಲ್ಲ. ಪತ್ನಿ ನಡವಳಿಕೆ ಬಗ್ಗೆ ಆತಂಕಗೊಂಡ ಪತಿ ಕುಟುಂಬದ ಹಿರಿಯರನ್ನು ಸಂರ್ಪಸಿದ. ಎರಡೂ ಕುಟುಂಬದವರು ಕಲೆತು ಲಲಿತಾಳಿಗೆ ಬುದ್ಧಿ ಹೇಳಿದರು. ಪರಿಸ್ಥಿತಿ ಬದಲಾಗಲಿಲ್ಲ. ಆಪ್ತ ಸಮಾಲೋಚಕರ ಮೊರೆ ಹೋದರು. ಏನೂ ಪರಿಹಾರ ಕಾಣದಿದ್ದಾಗ ನಾಗರಾಜ್ ವಿವಾಹ ವಿಚ್ಛೇದನ ಅರ್ಜಿ ಸಲ್ಲಿಸಿದ. ಇದನ್ನು ತಿಳಿದಾಗ ಕೋಪಗೊಂಡ ಲಲಿತಾ ಗಂಡನ ಮನೆ ಬಿಟ್ಟು ತವರಿಗೆ ಹೊರಟು ಹೋದಳು. ತನ್ನ ಜತೆಗೆ ಮಗಳು ಸುಮಾಳನ್ನೂ ಕರೆದೊಯ್ದು ಅಲ್ಲಿಯ ಶಾಲೆಯೊಂದಕ್ಕೆ ಸೇರಿಸಿದಳು.

ಒಬ್ಬಳೇ ಮಗಳಾದ ಸುಮಾಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ನಾಗರಾಜ್​ಗೆ ಆಘಾತವಾದರೂ ಆತ ಏನೂ ಮಾಡುವ ಪರಿಸ್ಥಿತಿಯಲ್ಲಿರಲಿಲ್ಲ. ಸುಮಾಳೂ ತಾಯಿಗಿಂತ ತಂದೆಯನ್ನೇ ಹಚ್ಚಿಕೊಂಡಿದ್ದ ಕಾರಣ ಅವಳೂ ಖಿನ್ನಳಾಗಿದ್ದಳು. ನ್ಯಾಯಾಲಯದಲ್ಲಿ ಪ್ರಕರಣ ಬಂದಾಗ ಗಂಡ-ಹೆಂಡಿರು ಪರಸ್ಪರ ಒಪ್ಪಿಗೆಯಿಂದ ವಿವಾಹ ವಿಚ್ಛೇದನ ಪಡೆದರು. ಸುಮಾ ಲಲಿತಾಳ ಜೊತೆಗೇ ಇರಬೇಕು, ನಾಗರಾಜ ಲಲಿತಾಳಿಗೆ ಮಾಸಾಶನವೆಂದು 5000 ರೂ ಕೊಡಬೇಕು, ಆತ ತಿಂಗಳಿಗೊಮ್ಮೆ ಸುಮಾಳನ್ನು ಭೇಟಿ ಮಾಡಬಹುದು ಎಂದು ನ್ಯಾಯಾಲಯ ತೀರ್ಪು ನೀಡಿತು. ಇದರಂತೆ ಆತ ಪ್ರತಿ ತಿಂಗಳೂ ಒಂದು ಭಾನುವಾರ ಸುಮಾಳಿದ್ದ ಊರಿಗೆ ಹೋಗಿ ಅವಳನ್ನು ಮಾಲ್ ಒಂದರಲ್ಲಿ ಸಂಧಿಸಿ ಸಿನಿಮಾಗೆ ಕರೆದುಕೊಂಡು ಹೋಗಿ ಆನಂತರ ಅವಳಿಗಿಷ್ಟವಾದ ಊಟ ಉಪಾಹಾರಗಳನ್ನು ಕೊಡಿಸಿ ಸಂಜೆ ಅವಳನ್ನು ಲಲಿತಾಳ ಮನೆಗೆ ಬಿಟ್ಟು ಬರುತ್ತಿದ್ದ.

ಒಂದು ಭಾನುವಾರ ನಿಗದಿಯಂತೆ ಆತ ಅಲ್ಲಿಗೆ ಹೋದಾಗ ಮಗಳು ಬರದ್ದನ್ನು ಕಂಡು ಗಾಬರಿಗೊಂಡ. ಸುಮಾಳ ಮೊಬೈಲ್ ಫೋನಿಗೆ ಕರೆ ಮಾಡಿದಾಗ ಆ ನಂಬರ್ ಅಸ್ತಿತ್ವದಲ್ಲಿಲ್ಲ ಎಂಬ ಮಾಹಿತಿ ಬಂದಿದ್ದು ಅವನ ಗಾಬರಿಯನ್ನು ಇಮ್ಮಡಿಗೊಳಿಸಿತು. ಲಲಿತಾಗೆ ಕರೆ ಮಾಡಿದರೆ ಆಕೆ ತನಗೇನೂ ಗೊತ್ತಿಲ್ಲ ಎಂದು ಹಾರಿಕೆಯ ಉತ್ತರ ಕೊಟ್ಟಳು. ಆತ ನೇರವಾಗಿ ಲಲಿತಾಳ ಮನೆಗೇ ಹೋಗಿ ವಿಚಾರಿಸಿದಾಗ ಸುಮಾ ಶಾಲೆ ಏರ್ಪಡಿಸಿರುವ ಪ್ರವಾಸಕ್ಕೆ ಹೋಗಿದ್ದಾಳೆ ಎಂದಳು. ‘ಮೊದಲೇ ತಿಳಿಸಿದ್ದರೆ ನಾನು ಬರುತ್ತಿರಲಿಲ್ಲವಲ್ಲ’ ಎಂದಾಗ ‘ನೀನು ಬರುವ ದಿನಾಂಕ ನನಗೆ ಮರೆತು ಹೋಗಿತ್ತು’ ಎಂದಳು. ಲಲಿತಾ ಸುಳ್ಳು ಹೇಳುತ್ತಿದ್ದಾಳೆಂಬ ಅನುಮಾನ ಬಂದರೂ ಆತ ಏನೂ ಮಾಡುವಂತಿರಲಿಲ್ಲ.

ಮುಂದಿನ ತಿಂಗಳೂ ಸುಮಾ ಭೇಟಿಗೆ ಬರದೇ ಹೋದಾಗ ನಾಗರಾಜ ಲಲಿತಾಳ ಮನೆಗೆ ಹೋದ. ಮನೆಗೆ ಬೀಗ ಹಾಕಿತ್ತು. ಅಕ್ಕಪಕ್ಕದವರನ್ನು ವಿಚಾರಿಸಿದಾಗ ‘ಸುಮಾಳಿಗೆ ಕಳೆದ ವಾರವಷ್ಟೇ ಮದುವೆಯಾಯಿತು. ಲಲಿತಾಳ ಸಹೋದರನಿಗೇ ಕೊಟ್ಟು ಲಗ್ನವಾಯಿತು. ಮನೆ ತುಂಬಿಸಿಕೊಳ್ಳುವ ಶಾಸ್ತ್ರ ಮುಗಿದ ನಂತರ ಲಲಿತಾ ವಾಪಸಾಗುತ್ತಾರೆ’ ಎಂದು ಹೇಳಿ, ಲಗ್ನಪತ್ರಿಕೆಯನ್ನೂ ತೋರಿಸಿದರು. ಆ ಪತ್ರಿಕೆಯಲ್ಲಿ ಸುಮಾಳ ವಿವಾಹವು ಲಲಿತಾಳ ತಮ್ಮ ಅಶೋಕನ ಜತೆ ಬೇರೊಂದು ಊರಿನಲ್ಲಿ ಕಳೆದ ಶುಕ್ರವಾರ ನಡೆದಿರುವುದಾಗಿ ನಮೂದಾಗಿತ್ತು.

ಕೇವಲ 14 ವರ್ಷ ವಯಸ್ಸಿನ ಸುಮಾಳ ವಿವಾಹವನ್ನು ತರಾತುರಿಯಾಗಿ ಮಾಡಿದ್ದರ ಬಗ್ಗೆ ಆತಂಕಗೊಂಡ ನಾಗರಾಜ ವಕೀಲರನ್ನು ಸಂಧಿಸಿ ಪೊಲೀಸ್ ಠಾಣೆಗೆ ಹೋಗಿ ದೂರಿತ್ತ. ಲಗ್ನಪತ್ರಿಕೆ ಹಾಗೂ ಸುಮಾಳ ಜನನ ಪ್ರಮಾಣಪತ್ರವನ್ನೂ ಹಾಜರುಪಡಿಸಿದ. ಬಾಲ್ಯ ವಿವಾಹ ನಿಷೇಧ ಕಾನೂನಿನನ್ವಯ 18 ವರ್ಷಕ್ಕಿಂತ ಕಡಿಮೆಯಿರುವ ವಧುವನ್ನು ವಿವಾಹವಾಗುವುದು ಸಂಜ್ಞೇಯ ಹಾಗೂ ಜಾಮೀನುರಹಿತ ಅಪರಾಧವಾಗುವುದರಿಂದ ದೂರನ್ನು ದಾಖಲಿಸಿಕೊಂಡ ಪೊಲೀಸರು ಲಲಿತಾ ಮತ್ತು ಅಶೋಕನ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಅಶೋಕನ ಮನೆಗೆ ಪೊಲೀಸರು ಹೋದಾಗ, ‘ನಾನು ಸುಮಾಳನ್ನು ಸಾರ್ವಜನಿಕರ ಸಮ್ಮುಖದಲ್ಲಿಯೇ ವಿವಾಹವಾಗಿದ್ದೇನೆ. ನನ್ನ ವಯಸ್ಸು 30. ನಾನು ಯಾವ ತಪ್ಪನ್ನೂ ಮಾಡಿಲ್ಲ’ ಎಂದು ವಾದಿಸಿದ. ಅವನನ್ನು ಹಾಗೂ ಲಲಿತಾಳನ್ನು ಬಂಧಿಸಿದ ಪೊಲೀಸರು ಸುಮಾಳನ್ನು ಬಾಲಕಿಯರ ರಕ್ಷಣಾ ಗೃಹಕ್ಕೆ ಕಳಿಸುವ ಮುನ್ನ ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ವೈದ್ಯರು ಸುಮಾ 4 ತಿಂಗಳ ಗರ್ಭಿಣಿ ಎಂದು ಹೇಳಿದಾಗ ಪೊಲೀಸರಿಗೂ, ನಾಗರಾಜನಿಗೂ ಆಶ್ಚರ್ಯವಾಯಿತು.

ಇದು ಹೇಗಾಯಿತು ಎಂದು ತನಿಖೆ ಮಾಡಿದಾಗ ವಿವಾಹ ವಿಚ್ಛೇದನವಾದ ಬಳಿಕ ಲಲಿತಾ ಸಹೋದರ ಅಶೋಕನನ್ನು ತನ್ನ ಮನೆಗೇ ವಾಸಕ್ಕೆ ಕರೆಸಿಕೊಂಡು ನಿನ್ನನ್ನೇ ಅಳಿಯನನ್ನಾಗಿ ಮಾಡಿಕೊಳ್ಳುವೆ ಎಂದು ಹೇಳಿ, ಅಶೋಕ ಸುಮಾಳ ಜತೆಗೆ ಲೈಂಗಿಕ ಸಂಪರ್ಕ ಮಾಡಿದಾಗ ಪ್ರತಿಭಟಿಸಲಿಲ್ಲ ಎಂದು ತಿಳಿಯಿತು. ‘ಹೇಗಿದ್ದರೂ ಮುಂದೆ ಅವನೇ ನಿನ್ನ ಗಂಡನಾಗುವವನು, ಅವನು ನಿನಗೇನು ಮಾಡಿದರೂ ಸುಮ್ಮನಿರು’ ಎಂದು ಆಕೆ ಮಗಳಿಗೆ ಹೇಳಿ ಸುಮಾ ಗರ್ಭವತಿಯಾದಾಗ ಇಬ್ಬರ ಮದುವೆಯನ್ನೂ ಮಾಡಿಸಿದ್ದಳು. ‘ಅಶೋಕ ಲೈಂಗಿಕ ಸಂಬಂಧವಿಟ್ಟುಕೊಂಡಿರುವುದನ್ನು ನಿನ್ನ ತಂದೆಗೆ ಏನಾದರೂ ತಿಳಿಸಿದರೆ ನಿನ್ನನ್ನು ಕೊಲ್ಲುವೆ’ ಎಂದು ಮಗಳನ್ನು ಹೆದರಿಸಿದ್ದಳು.

15 ವರ್ಷದೊಳಗಿನ ಬಾಲಕಿಯ ಜತೆಗೆ ಆಕೆಯ ಪತಿಯಾದವನೂ ಲೈಂಗಿಕ ಕ್ರಿಯೆ ನಡೆಸುವುದು ಪೋಕ್ಸೋ ಕಾಯ್ದೆ ಹಾಗೂ ಭಾರತೀಯ ದಂಡಸಂಹಿತೆಯ ಅನ್ವಯ ಅಪರಾಧವಾಗುವುದರಿಂದ ಈ ಎರಡೂ ಕಾನೂನುಗಳ ಕಲಂಗಳನ್ನು ಸೇರಿಸಿ ಅಶೋಕನ ಮೇಲೆ ಆರೋಪಪಟ್ಟಿ ದಾಖಲಿಸಲಾಯಿತು. ಈ ಅಪರಾಧಗಳಿಗೆ ಕುಮ್ಮಕ್ಕು ಕೊಟ್ಟ ಆರೋಪದ ಮೇರೆಗೆ ಲಲಿತಾಳ ಮೇಲೆಯೂ ಆರೋಪಪಟ್ಟಿ ಸಲ್ಲಿಸಲಾಯಿತು. ಅಶೋಕನಿಗೆ ಏಳು ವರ್ಷ, ಲಲಿತಾಗೆ ಒಂದು ವರ್ಷದ ಕಾರಾಗೃಹದ ಶಿಕ್ಷೆಯಾಯಿತು. ಇದಲ್ಲದೆ ಸುಮಾ ಹಾಗೂ ಅಶೋಕನ ವಿವಾಹ ಕಾನೂನು ಬದ್ಧವಲ್ಲ ಎಂದು ನ್ಯಾಯಾಲಯ ರದ್ದುಗೊಳಿಸಿತು.

ಏತನ್ಮಧ್ಯೆ ನಾಗರಾಜ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ವಿವಾಹ ವಿಚ್ಛೇದನದ ಸಮಯದಲ್ಲಿ ಕೊಟ್ಟ ಆದೇಶದಂತೆ ಲಲಿತಾ ಮಗಳನ್ನು ಸೂಕ್ತವಾಗಿ ಪಾಲನೆ ಪೋಷಣೆ ಮಾಡದೆ ದೈಹಿಕ ಹಾಗೂ ಮಾನಸಿಕ ತೊಂದರೆ ನೀಡಿರುವ ಕಾರಣ ಸುಮಾಳನ್ನು ತನ್ನ ಸುಪರ್ದಿಗೆ ಕೊಡಬೇಕು ಎಂದು ಕೋರಿದ. ನ್ಯಾಯಾಲಯ ಒಪ್ಪಿತು. ಸುಮಾ ಮೋಸದಿಂದ ಗರ್ಭ ಧರಿಸಿದ್ದು, ಆಕೆಗೆ ಮಗುವಾದರೆ ಇಬ್ಬರಿಗೂ ಮಾನಸಿಕ ಹಾಗೂ ದೈಹಿಕ ತೊಂದರೆಯುಂಟಾಗುವುದರಿಂದ ಗರ್ಭಪಾತಕ್ಕೆ ಅನುಮತಿ ನೀಡಬೇಕೆಂದು ಆತ ಇನ್ನೊಂದು ಅರ್ಜಿ ಸಲ್ಲಿಸಿದ. ಸುಮಾ ಗರ್ಭ ಧರಿಸಿ 20 ವಾರಗಳು ಮುಗಿಯದಿದ್ದ ಕಾರಣ ಹಾಗೂ ಆಕೆ ಅತ್ಯಾಚಾರದ ಫಲವಾಗಿ ಗರ್ಭಧಾರಣೆ ಮಾಡಿದ್ದರಿಂದ ವೈದ್ಯಕೀಯ ಗರ್ಭಪಾತ ಕಾಯ್ದೆಯ ಅನ್ವಯ ವೈದ್ಯರು ಅಬಾರ್ಷನ್ ಮಾಡಿದರು.

ಕೆಲವು ಬಾಲಕಿಯರು ದೈಹಿಕವಾಗಿ 13-14 ವರ್ಷ ವಯಸ್ಸಿಗೇ ಗರ್ಭ ಧರಿಸಲು ಯೋಗ್ಯರಾದರೂ 18 ವರ್ಷ ವಯಸ್ಸಿನ ಒಳಗೆ ಗರ್ಭವತಿಯರಾದರೆ ಹುಟ್ಟುವ ಮಗುವನ್ನು ಪಾಲನೆ ಪೋಷಣೆ ಮಾಡಲು ಅವರು ಮಾನಸಿಕವಾಗಿ ಸದೃಢರಾಗಿರುವುದಿಲ್ಲ. ಹೀಗಾಗಿಯೇ ಪೋಕ್ಸೋ ಕಾಯ್ದೆಯ ಅನ್ವಯ 18 ವರ್ಷಕ್ಕಿಂತ ಕೆಳಗಿರುವ ಪತ್ನಿಯೊಡನೆಯ ಲೈಂಗಿಕ ಸಂಬಂಧವೂ ಅಪರಾಧವಾಗುತ್ತದೆ. ಈ ಅಪರಾಧಕ್ಕೆ ಕಡಿಮೆಯೆಂದರೆ 7 ವರ್ಷ ಹಾಗೂ ಗರಿಷ್ಠ ಜೀವಾವಧಿ ಜೈಲು ಶಿಕ್ಷೆಯಿದೆ. ಭಾರತೀಯ ದಂಡಸಂಹಿತೆಯನ್ವಯ 15 ವರ್ಷ ವಯಸ್ಸಿನ ಕೆಳಗಿರುವ ಪತ್ನಿಯ ಜತೆಗಿನ ಲೈಂಗಿಕ ಕ್ರಿಯೆ ರೇಪ್ ಎಂದೇ ಪರಿಗಣಿಸಲ್ಪಡುತ್ತದೆ. ಬಾಲ್ಯವಿವಾಹ ಮಾಡಿಕೊಳ್ಳುವವರಿಗೆ ಒಂದು ಲಕ್ಷ ರೂ ಜುಲ್ಮಾನೆ ಹಾಗೂ 2 ವರ್ಷ ಜೈಲು ಶಿಕ್ಷೆಯಿದೆ. ಇತ್ತೀಚೆಗೆ ವಿವಾಹ ವಿಚ್ಛೇದನಗಳ ಸಂಖ್ಯೆ ಹೆಚ್ಚುತ್ತಿದೆ. ನಮ್ಮ ಪೂರ್ವಿಕರು ‘ವಿವಾಹವೆಂಬ ಸಂಬಂಧ ಸಾಯುವವರೆಗೆ’ ಎನ್ನುತ್ತಿದ್ದರು. ಆದರೆ ಈಗಿನ ದಂಪತಿಗಳು ಮಕ್ಕಳಾದ ನಂತರವೂ ವಿಚ್ಛೇದನ ಮಾಡಿಕೊಳ್ಳುತ್ತಿರುವ ಕಾರಣದಿಂದಲೂ ಮರುವಿವಾಹದ ನಂತರ ಪೂರ್ವವಿವಾಹದ ಮಕ್ಕಳನ್ನು ನಿರ್ಲಕ್ಷ್ಯ ಮಾಡುತ್ತಿರುವುದರಿಂದಲೂ ಇಂತಹ ಮಕ್ಕಳ ಬೆಳವಣಿಗೆ ಕುಂಠಿತವಾಗಿ ಹಲವು ಬಾಲಕ ಬಾಲಕಿಯರು ಅನೈತಿಕ ಕೃತ್ಯಗಳತ್ತಲೂ ವಾಲುತ್ತಿದ್ದಾರೆ. ಸುಮಾಳಿಗೆ ಆದಂತಹ ದೈಹಿಕ ಹಾಗೂ ಮಾನಸಿಕ ಆಘಾತಗಳು ಇತರ ಮಕ್ಕಳಿಗೆ ಆಗದಿರಬೇಕಾದರೆ ಹಿರಿಯರು ತಮ್ಮದೇ ವರ್ತನೆಯನ್ನು ಸರಿಪಡಿಸಿಕೊಳ್ಳಬೇಕಾಗಿದೆ. ಮಕ್ಕಳನ್ನು ಹೆರುವುದು ಸುಲಭ. ಆದರೆ ಅವರ ಪಾಲನೆ-ಪೋಷಣೆ ಕಷ್ಟ ಎಂದು ಅರಿಯದ ತಂದೆತಾಯಿಯರಿಂದ ಸಮಾಜಕ್ಕೆ ಹಾನಿಯಾಗುತ್ತಿದೆ.

‘ಮಕ್ಕಳ ಅಭಿವೃದ್ಧಿಗೆ ಇರಬೇಕಾದ ಏಕೈಕ ಅಂಶವೆಂದರೆ ಮಾತಾಪಿತರ ಸಕಾರಾತ್ಮಕ ಸಹಯೋಗ’ ಎನ್ನುತ್ತಾಳೆ ಅಮೆರಿಕಾದ ಶಿಕ್ಷಣ ತಜ್ಞೆ ಜೇನ್ ಡೀ.ಹಲ್. ತಾವೇ ಜನ್ಮ ಕೊಟ್ಟ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸದ ಮಾತಾಪಿತರು ಅವರಿಗೆ ಘೊರ ಅನ್ಯಾಯ ಮಾಡಿದಂತಾಗುತ್ತದೆಯಲ್ಲವೇ?

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net