ಶ್ರದ್ಧೆಯಿಂದಲೇ ವಿಜಯ

Shiva
Published on

| ಚಿದಂಬರ ಮುನವಳ್ಳಿ

ಶಿವ&ಪಾರ್ವತಿ ಕಾಶಿ ಗಂಗಾತೀರದಲ್ಲಿ ಒಂದು ಸಾಯಂ ಕಾಲ ಸಾಮಾನ್ಯ ದಂಪತಿಯ ವೇಷದಲ್ಲಿ ಸಂಚರಿಸುತ್ತಿದ್ದರು. ಸಾವಿರಾರು ಜನರು ಗಂಗೆಯಲ್ಲಿ ಮಿಂದು ಸಾಯಂ ಸಂಧ್ಯಾ, ಜಪ, ತಪ ಅನುಷ್ಠಾನ ಮಾಡುತ್ತಿದ್ದರು. ಕೆಲವರು ವಿಶ್ವೇಶ್ವರನ ದರ್ಶನಕ್ಕೆ ಹೋಗುತ್ತಿದ್ದರು. ಇದನ್ನು ನೋಡಿದ ಪಾರ್ವತಿ, "ಹೇ ಜಗತ್ಪತಿಯೇ ನಿಮ್ಮ ಮೇಲೆ ಇಷ್ಟೊಂದು ಶ್ರದ್ಧಾ, ಭಕ್ತಿ ಇಟ್ಟಿರುವ ಇವರು ಎಂಥಾ ಪುಣ್ಯವಂತರು...' ಎಂದಳು. ಆಗ ಶಿವನು ಎಲ್ಲ ಕಡೆಗೆ ದೃಷ್ಟಿ ಹಾಯಿಸಿ, "ಎಲ್ಲೋ ಒಬ್ಬಿಬ್ಬರನ್ನು ಬಿಟ್ಟು ನೀನು ತಿಳಿದಹಾಗೆ ಇವರೆಲ್ಲರೂ ಪುಣ್ಯವಂತರೇನಲ್ಲ' ಎಂದ. ಮಾತೃಹೃದಯದ ಪಾರ್ವತಿ ಇದನ್ನೊಪ್ಪಲಿಲ್ಲ. ಇಬ್ಬರಲ್ಲಿಯೂ ವಿವಾದ ಶುರುವಾಯಿತು.

ಶಿವ ಹೇಳಿದ, "ಸರಿ, ಹಾಗಾದರೆ ಇದರ ಸತ್ಯಾಸತ್ಯತೆ ಪರೀಸಲು ಒಂದು ನಾಟಕವಾಡೋಣ. ನಾಳೆ ಬೆಳಗ್ಗೆ ಈ ನದಿದಂಡೆ ಮೇಲೆ ಗುಂಡಿ ತೋಡಿ ಅದರಲ್ಲಿ ದರಿದ್ರ ವೃದ್ಧನ ರೂಪದಲ್ಲಿ ಕುಳಿತುಕೊಳ್ಳುವೆ. ನೀನು ಈ ನಿನ್ನ ಸುಂದರ ರೂಪದಲ್ಲಿಯೇ ಆ ಗುಂಡಿಯ ಪಕ್ಕದಲ್ಲಿ ಕುಳಿತು, "ನನ್ನ ಪತಿಯನ್ನು ಮೇಲೆತ್ತಿ' ಎಂದು ಪ್ರಲಾಪ ಮಾಡಬೇಕು'. ಮರುದಿನ ನಾಟಕ ಆರಂಭವಾಯಿತು. ಪಾರ್ವತಿ ಜನರಿಗೆ ಗೋಗರೆಯುತ್ತ, "ನನ್ನ ಪತಿ ಈ ತೆಗ್ಗಿನಲ್ಲಿ ಬಿದ್ದಿದ್ದಾನೆ. ಯಾರಾದರೂ ಸಹಾಯ ಮಾಡಿ' ಎಂದು ಹಾಹಾಕಾರ ಮಾಡಲಾರಂಭಿಸಿದಳು. ಕೆಲವರು ಇದನ್ನು ನೋಡಿಯೂ ನೋಡದ ಹಾಗೆ, ದೇವರ ದರ್ಶನಕ್ಕೆ ತಡವಾಗುವುದೆಂದು ಗುಡಿಯ ಕಡೆಗೆ ಧಾವಿಸಿದರು. ಇನ್ನು ಕೆಲವರು, "ಎಲ್ಲಿಂದ ಬಂದಿರುವಿರಿ? ನಿಮ್ಮ ಜೊತೆಗೆ ಬೇರೆ ಯಾರಿಲ್ಲವೇ? ಇಂಥ ವೃದ್ಧನನ್ನು ಯಾಕೆ ಮದುವೆಯಾದೆ?' ಮುಂತಾದ ಪ್ರಶ್ನೆಗಳನ್ನೇ ಕೇಳಲು ಆರಂಭಿಸಿದರು. ಅಷ್ಟರಲ್ಲಿ ಕೆಲವೊಬ್ಬರು ಮುಂದೆ ಬಂದು ಕೈ ಚಾಚಿ ಅವನನ್ನು ಮೇಲೆತ್ತಬೇಕು ಎನ್ನುವಾಗ ಆ ವೃದ್ಧನು ಏರುದನಿಯಲ್ಲಿ, "ನಿಲ್ಲಿ, ನನ್ನ ಕೈ ಹಿಡಿಯಬೇಕಾದರೆ ನೀವು ಯಾವ ಪಾಪವನ್ನು ಮಾಡಿರಬಾರದು. ಇಲ್ಲ ವಾದರೆ ಮುಟ್ಟಿದ ತಣ ಸುಟ್ಟು ಭಸ್ಮವಾಗುತ್ತೀರಾ' ಎಂದ. ಅವರೂ ಹೆದರಿ ಉಸಾಬರಿ ಬೇಡವೆಂದು ಅಲ್ಲಿಯೇ ಬಿಟ್ಟು ಹೋದರು. ಸ್ವಲ್ಪ ಸಮಯದ ನಂತರ ಯುವಕನೊಬ್ಬ ಸ್ನಾನ ಮಾಡಿ ಬರುವಾಗ ಇದನ್ನು ನೋಡಿ ಅವನನ್ನು ಮೇಲೆತ್ತಲು ಹೋದ. ಒಳಗಿಂದ ಧ್ವನಿ ಬಂತು& "ಪಾಪ ಮಾಡಿದ್ದರೆ ನನ್ನನ್ನು ಮುಟ್ಟಿದ ಕೂಡಲೇ ಸುಟ್ಟು ಹೋಗುತ್ತೀಯಾ'. ಆಗ ನಸುನಗುತ್ತ ಆ ಯುವಕ, "ಾನವೃದ್ಧರೇ ನಾನು ಎಷ್ಟೋ ಪಾಪಗಳನ್ನು ಮಾಡಿದ್ದೇನೆ. ಆದರೆ ಈಗ ತಾನೇ ಗಂಗೆಯಲ್ಲಿ ಸ್ನಾನ ಮಾಡಿದ್ದರಿಂದ ಅವೆಲ್ಲ ತೊಳೆದು ಹೋಗಿವೆ. ನಿಶ್ಚಿತವಾಗಿಯೂ ನಾನು ಈಗ ಸಂಪೂರ್ಣ ನಿಷ್ಪಾಪಿ. ಕೊಡಿ ಕೈ' ಎಂದು ಜೋರಾಗಿ ಮೇಲೆಳೆದ. ಸಾಾತ್​ ಪಾರ್ವತೀ ಪರಮೇಶ್ವರರು ಕಣ್ಣು ಮುಂದೆ. ಧನ್ಯತೆಯಿಂದ ಸಾಷ್ಟಾಂಗವೆರಗಿದ. ನಾವು ಮಾಡುವ ಪ್ರತಿಯೊಂದು ಕಾರ್ಯದಲ್ಲಿಯೂ ಶ್ರದ್ಧೆಯಿರಬೇಕು.

ಅದು ಯಶಸ್ಸನ್ನು ಕೊಡುತ್ತದೆ. "ಮಾಡಿ ಮಾಡಿ ಕೆಟ್ಟರೋ ಮನವಿಲ್ಲದೆ' ಎಂಬ ಶರಣರ ವಚನದಂತೆ ಎಲ್ಲರೂ ಮಾಡುತ್ತಾರೆಂದು ಯಂತ್ರದಂತೆ ಮಾಡುವ ಕೆಲಸ ಅಥವಾ ಧಾರ್ಮಿಕ ಕ್ರಿಯೆ ಫಲ ನೀಡಲಾರದು. ಹಾಗಾಗಿ, ಶ್ರದ್ಧೆಯಿಂದ ನಡೆದು ಜಯಗಳಿಸೋಣ.

(ಲೇಖಕರು ನಿವೃತ್ತ ಬ್ಯಾಂಕ್​ ಅಧಿಕಾರಿ)

(ಪ್ರತಿಕ್ರಿಯಿಸಿ: manollasavv@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net