

ಬಣ್ಣಗಳ ಲೋಕಕ್ಕೆ ಮರುಳಾಗದವರೇ ಇಲ್ಲ. ಯಾವುದೋ ಒಂದು ವಯಸ್ಸಿನಲ್ಲಿ ಸೆಳೆಯುವ ಚಿತ್ರಕಲೆಯನ್ನು ಆಸಕ್ತಿಯಾಗಿ ಉಳಿಸಿಕೊಂಡು ಸಾಧನೆಯ ಹಾದಿಯಲ್ಲಿ ಸಾಗುವವರ ಸಂಖ್ಯೆ ಮಾತ್ರ ವಿರಳ. ಪಶುಪಾಲನಾ ಇಲಾಖೆಯಲ್ಲಿ ಹಿರಿಯ ಮುಖ್ಯ ಪಶು ವೈದ್ಯಾಧಿಕಾರಿಯಾಗಿರುವ ಅಶ್ವತ್ಥಕುಮಾರ್ ಬಾಲ್ಯದಲ್ಲಿ ಬೆಳೆದ ಆಸಕ್ತಿಯನ್ನು ಪ್ರವೃತ್ತಿಯಾಗಿಸಿಕೊಂಡು ತಂಜಾವುರ ಶೈಲಿಯ ಚಿತ್ರಗಳಲ್ಲಿ ಪರಿಣತಿ ಸಾಧಿಸಿದ್ದಾರೆ.
ಬಣ್ಣಗಳ ಅದ್ಭುತ ಸಂಯೋಜನೆ, ಬಂಗಾರದ ಹೊಳಪಿನ ಉಬ್ಬುಗಳು, ಆಭರಣಗಳ ಆಕರ್ಷಣೆ ನೋಡುಗರ ಮನ ಸೆಳೆಯುತ್ತವೆ. ಇದು ತಂಜಾವುರ ಶೈಲಿ ಚಿತ್ರಕಲೆಯ ವಿಶೇಷತೆ. ಶಾಸ್ತ್ರೀಯವಾಗಿ ಅಭ್ಯಾಸ ಮಾಡದೆ ಆಸಕ್ತಿಯನ್ನೇ ಗುರುವಾಗಿಸಿಕೊಂಡು ಚಿತ್ರಕಲೆಯಲ್ಲಿ ತೊಡಗಿಕೊಂಡಿದ್ದಾರೆ ಅಶ್ವತ್ಥಕುಮಾರ್. ದಾವಣಗೆರೆ ಜಿಲ್ಲೆ ಜಗಳೂರಿನವರಾದ ಅಶ್ವತ್ಥಕುಮಾರ್ ಅವರ ಕಲಾಸಕ್ತಿಗೆ ಪ್ರೋತ್ಸಾಹ ಸಿಕ್ಕಿದ್ದು ಬೆಂಗಳೂರು ಹಾಗೂ ಮೈಸೂರಿನಲ್ಲಿ. ಬೆಂಗಳೂರಿನಲ್ಲಿ ಬಿವಿಎಸ್ಸಿ ಓದುವಾಗ ರಜೆ ದಿನಗಳಲ್ಲಿ ಪೇಂಟಿಂಗ್ನಲ್ಲಿ ಹೆಚ್ಚು ತೊಡಗಿಕೊಳ್ಳುತ್ತಿದ್ದರು. ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಬಿ.ಕೆ.ಎಸ್.ವರ್ವ ಅವರ ಪ್ರೋತ್ಸಾಹದ ಮಾತುಗಳು ಆಸಕ್ತಿಗೆ ಉತ್ತೇಜನ ನೀಡಿದಂತಾಗಿತ್ತು.
ಪಶುಪಾಲನಾ ಇಲಾಖೆಯಲ್ಲಿ ಅಧಿಕಾರಿಯಾಗಿ ನೇಮಕವಾದ ಬಳಿಕವೂ ಅಶ್ವತ್ಥಕುಮಾರ್ ಅವರ ಕಲಾಸಕ್ತಿ ಕಡಿಮೆ ಆಗಲಿಲ್ಲ. 1997ರಲ್ಲಿ ಮೈಸೂರಿನಲ್ಲಿ ಕೆಲಸ ಮಾಡುವಾಗ ಅರಮನೆ ಕಲಾವಿದರಾದ ರಾಮನರಸಯ್ಯ ಜಗನ್ಮೋಹನ್ ಪ್ಯಾಲೇಸ್ನಲ್ಲಿ ಪ್ರತಿ ಗುರುವಾರ ಉಚಿತವಾಗಿ ಏರ್ಪಡಿಸುತ್ತಿದ್ದ ಚಿತ್ರಕಲಾ ತರಬೇತಿ ಶಿಬಿರಕ್ಕೆ ಹೋಗುತ್ತಿದ್ದರು. ಮೊದಲಿಗೆ ವಾಟರ್ ಹಾಗೂ ಆಯಿಲ್ ಕಲರ್ ಪೇಂಟಿಂಗ್ ಮಾಡುತ್ತಿದ್ದ ಅಶ್ವತ್ಥಕುಮಾರ್ ಅವರನ್ನು 2008ರಲ್ಲಿ ಸೆಳೆದಿದ್ದು ತಂಜಾವುರ ಶೈಲಿಯ ಚಿತ್ರಕಲೆ.
ಚೆನ್ನೈ ಮೂಲದ ನಿವೃತ್ತ ಇಂಜಿನಿಯರ್ ವಿ.ಕೆ.ಎಸ್.ಅಯ್ಯರ್ ಅವರ ಪರಿಚಯ ಇವರನ್ನು ತಂಜಾವುರ ಶೈಲಿಯತ್ತ ಸೆಳೆದಿತ್ತು. ಆನ್ಲೈನ್ನಲ್ಲಿ ಪರಿಚಯವಾದ ವಿ.ಕೆ.ಎಸ್.ಅಯ್ಯರ್ ತಂಜಾವುರ ಶೈಲಿ ಬಗ್ಗೆ ಮಾಹಿತಿ ನೀಡುವುದರ ಜತೆಗೆ ಮಾರ್ಗದರ್ಶನವನ್ನೂ ಮಾಡಿದ್ದಾರೆ. ಈ ಶೈಲಿಯ ಚಿತ್ರಕಲೆ ತುಂಬಾ ಹಣ ಹಾಗೂ ಸಮಯ ಬೇಡುತ್ತದೆ. ಒಂದು ಪೇಂಟಿಂಗ್ಗೆ ಕನಿಷ್ಠ 10 ಸಾವಿರ ರೂ. ವೆಚ್ಚವಾಗುತ್ತದೆ. ಚಿತ್ರ ಪೂರ್ಣಗೊಳ್ಳಲು 15ರಿಂದ 20 ದಿನಗಳಾಗುತ್ತವೆ.
ತಂಜಾವುರ ಶೈಲಿಯಲ್ಲಿ ಬಹುತೇಕ ದೇವರ ಚಿತ್ರಗಳನ್ನೇ ರಚಿಸಲಾಗುತ್ತದೆ. ಲಕ್ಷ್ಮಿ ಸೀರೆಗೆ ಕೆಂಪು, ಸರಸ್ವತಿ ಸೀರೆಗೆ ಬಿಳಿ ಹೀಗೆ ಚಿತ್ರಗಳಿಗೆ ಅನುಗುಣವಾಗಿ ನಿರ್ದಿಷ್ಟ ಬಣ್ಣಗಳನ್ನೇ ಬಳಸಲಾಗುತ್ತದೆ. ಪೇಂಟಿಂಗ್ಗೆ ಬೇಕಾದ ಚಿನ್ನದ ಫಾಯಿಲ್, ಬಣ್ಣದ ಹರಳು, ಫ್ರೇಮ್ ಇತ್ಯಾದಿ ಪರಿಕರಗಳನ್ನು ಅಶ್ವತ್ಥ್ಕುಮಾರ್ ಚೆನ್ನೈಯಿಂದ ತರಿಸಿಕೊಳ್ಳುತ್ತಾರೆ. ವಿಶ್ವರೂಪ ದರ್ಶನವನ್ನು ವೈಜ್ಞಾನಿಕವಾಗಿ ತಂಜಾವುರ ಶೈಲಿಯಲ್ಲಿ ಪೇಂಟಿಂಗ್ ಮಾಡಲು ಮುಂದಾಗಿದ್ದಾರೆ.
ತಂಜಾವುರ ಶೈಲಿಯ ಕಲೆ ಮೂಲತಃ ವಿಜಯನಗರಕ್ಕೆ ಸಂಬಂಧಿಸಿದ್ದಾಗಿದೆ. ವಿಜಯನಗರ ಸಾಮ್ರಾಜ್ಯ ಪತನದ ಬಳಿಕ ಇಲ್ಲಿನ ಕಲಾವಿದರು ತಮಿಳುನಾಡಿಗೆ ಸ್ಥಳಾಂತರವಾದರು. ಇದರಿಂದಾಗಿ ಇದು ತಂಜಾವುರ ಶೈಲಿ ಎಂದು ಗುರುತಿಸಿಕೊಂಡಿದೆ. ಈ ಶೈಲಿಯ ಚಿತ್ರಕಲೆ ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಮಾತ್ರ ಪ್ರಚಲಿತದಲ್ಲಿದೆ ಎನ್ನುತ್ತಾರೆ ಅಶ್ವತ್ಥಕುಮಾರ್.
| ಅಶೋಕ್ ನೀಮಕರ್, ಬಳ್ಳಾರಿ