ಇಂದು ವೇಮನ ಜಯಂತಿ | ಸಂತೆಯೊಳಗಿದ್ದೇ ಸಂತನಾದ ವೇಮನ

Vemana Jayanthi 19 JAN 20
Published on

ಜನಸಾಮಾನ್ಯರ ಕವಿಯಾದ ಯೋಗಿ ವೇಮನರು ಜಾತೀಯತೆ, ಅಂಧ ಶ್ರದ್ಧೆ, ಮೇಲು-ಕೀಳುಗಳನ್ನು ತಮ್ಮ ಕಾವ್ಯದ ಮೂಲಕ ಧಿಕ್ಕರಿಸಿದವರು. ಜೀವನವೆಂಬ ಸಂತೆಯೊಳಗಿದ್ದುಕೊಂಡೇ ಸಂತನಾಗಿ ಬೆಳೆದ ಅವರು ಒಬ್ಬ ಅಪೂರ್ವ ಸಮಾಜ ಸುಧಾರಕ. ಜ. 19ರಂದು ಅವರ ಜಯಂತಿಯನ್ನು ನಾಡಿನಾದ್ಯಂತ ಆಚರಿಸಲಾಗುತ್ತಿದೆ.

ಒಂದು ದೇಶಕ್ಕಾಗಲಿ, ಒಂದು ಜನಾಂಗಕ್ಕಾಗಲಿ, ಅದರ ಸಾಹಿತ್ಯದಿಂದಲೇ ಬೆಲೆ ಇರುತ್ತದೆ. ದೊಡ್ಡ ಜೀವನವನ್ನು ಬದುಕದ ಜನರಿಂದ ಹೇಳಿಕೊಳ್ಳುವಂತಹ ಸಾಹಿತ್ಯ ಹುಟ್ಟುವುದಿಲ್ಲ. ಮಹಾಯೋಗಿ ವೇಮನರು ಸರಳತೆಯಿಂದ ಬದುಕಿ, ಸಂತ ಜೀವನಕ್ಕೆ ಮಾದರಿ ಎನಿಸಿದ್ದರು. ಆದುದರಿಂದಲೆ ವೇಮನರಿಂದ ಉತ್ಕೃಷ್ಟ ಸಾಹಿತ್ಯ ಸೃಷ್ಟಿಯಾಯಿತು. ವೇಮನರ ಸಾಹಿತ್ಯವು ಜನರ ಮನಸ್ಸಿಗೆ ಪರಿಪೋಷಣೆ ನೀಡುವುದಲ್ಲದೆ ಜೀವನದಲ್ಲಿ ಪ್ರತಿಕೂಲ ಪ್ರಸಂಗ ಬಂದಾಗ ಸಾಂತ್ವನ ಹೇಳುತ್ತದೆ. ಪ್ರಸನ್ನತೆಯನ್ನು ತಂದುಕೊಡುತ್ತದೆ.

ಆಂಧ್ರಪ್ರದೇಶದ ಗುಂಟೂರ ಜಿಲ್ಲೆಯ ಕೊಂಡವೀಡು ಗ್ರಾಮದಲ್ಲಿ ಕ್ರಿ.ಶ. 1412ರಲ್ಲಿ ಜನಿಸಿದ ವೇಮನರು ಆ ಪ್ರದೇಶವನ್ನು ಆಳಿದ ಕುಮಾರ ಗಿರಿರಡ್ಡಿ ಎಂಬ ದೊರೆಯ ಪುತ್ರ. ಅವರ ತಾಯಿಯ ಹೆಸರು ರಾಣಿ ಮಲ್ಲಮಾಂಬೆ. ರಾಜನ ಮಗನಾಗಿದ್ದರೂ ವೇಮನರು ತಮ್ಮ ಜೀವಿತ ಕಾಲದಲ್ಲಿ ಸುಖದ ಸುಪ್ಪತ್ತಿಗೆಯಲ್ಲಿರಲಿಲ್ಲ. ಬಟ್ಟೆಯಿಲ್ಲದೆ ಊರೂರು ತಿರುಗಿ ಭಿಕ್ಷಾನ್ನವನ್ನುಂಡು ಜನರ ನೋವು ನಲಿವುಗಳನ್ನು ಕಣ್ಣಾರೆ ಕಂಡು ಕಾವ್ಯ ರಚಿಸಿದ್ದಾರೆ. ಹೇಗೆ ಕನ್ನಡದಲ್ಲಿ ಸರ್ವಜ್ಞ ಕವಿ ಊರೂರು ಸುತ್ತಿ ಜನರ ಹತ್ತಿರ ಇದ್ದು ಆ ಅನುಭವದಿಂದ ತ್ರಿಪದಿಗಳನ್ನು ರಚಿಸಿದರೋ ಹಾಗೆ ತೆಲುಗಿನಲ್ಲಿ ಯೋಗಿ ವೇಮನರು ಲೋಕಸಂಚಾರಿಯಾಗಿ ಜನರ ಬದುಕನ್ನು ಕಂಡು ಕವಿತೆಗಳನ್ನು ರಚಿಸಿದರು. ಅದಕ್ಕಾಗಿಯೆ ಅವರ ಕಾವ್ಯದಲ್ಲಿ ಸತ್ವ ಇದೆ.

ವೇಮನರು ರಚಿಸಿದ 15 ಸಾವಿರ ಪದ್ಯಗಳನ್ನು ಕಡಪಾದ ವೇಮನ ವಿಶ್ವವಿದ್ಯಾಲಯ ಪ್ರಕಟಿಸಿದೆ. ವೇಮನರು ತಮ್ಮಹೆಸರನ್ನೇ (ಕೇಳು ವೇಮ) ವಚನಗಳ ಅಂಕಿತನಾಮ ಮಾಡಿಕೊಂಡಿರುವುದು ವಿಶೇಷ. ‘ನೀನು ಹೀಗೆ ಇರಬೇಕು’ ಎಂದು ತಮಗೆ ತಾವೇ ಹೇಳಿಕೊಳ್ಳುವ ಹಾಗೆ. ‘ಮನುಷ್ಯರೆಲ್ಲರೂ ಪರಿಪೂರ್ಣರಲ್ಲ, ಪ್ರತಿಯೊಬ್ಬರು ತಮ್ಮನ್ನು ತಾವು ತಿದ್ದಿಕೊಂಡು ನಡೆಯುವ ಅವಶ್ಯಕತೆ ಇದೆ’ ಎಂಬ ಸಂದೇಶ ಇದರಲ್ಲಿದೆ. ಅಭಿರಾಮನೆಂಬ ಅಕ್ಕಸಾಲಿಗನು ವೇಮನರ ಜ್ಞಾನವೃದ್ಧಿಗೆ ಕಾರಣನಾಗಿದ್ದರಿಂದ ಅವನ ಹೆಸರನ್ನು ಅಂಕಿತನಾಮದಲ್ಲಿ ಸೇರಿಸಿದರು ಎನ್ನಲಾಗುತ್ತದೆ.

ಬುದ್ದನ ಕರುಣೆ, ಅಂಬೇಡ್ಕರರ ಸಮಾನತೆ, ಕಬೀರರ ಧಾರ್ವಿುಕ ಸೌಹಾರ್ದ, ಬಸವಣ್ಣ-ಕುವೆಂಪು ಅವರ ವಿಶ್ವಮಾನವ ಸಂದೇಶ ಮುಂತಾಗಿ ಎಲ್ಲವೂ ವೇಮನರ ಕಾವ್ಯದಲ್ಲಿದ್ದರೂ ಅದಕ್ಕೆ ಸಿಗಬೇಕಾದ ಪ್ರಚಾರ ಸಿಗಲಿಲ್ಲ. ಆಂಧ್ರದಲ್ಲಿಯ ಸಾಹಿತ್ಯ ಮತ್ತು ರಾಜಕೀಯ ವಲಯ ತಾಳಿದ ತಾರತಮ್ಯ ಧೋರಣೆಯೇ ಇದಕ್ಕೆ ಕಾರಣ. ಕೆಲವು ಸಾಂಪ್ರದಾಯಸ್ಥರಿಗೆ ವೇಮನರ ಪದ್ಯಗಳು ಹಿಡಿಸದೇ ಇದ್ದುದರಿಂದ ಆಂಧ್ರದಲ್ಲಿ ವೇಮನ ಸಾಹಿತ್ಯವನ್ನು ವಿರೋಧಿಸುವ ಒಂದು ವರ್ಗವೇ ಹುಟ್ಟಿಕೊಂಡಿತು. ಇದರ ಪರಿಣಾಮ ಸುಮಾರು 300 ವರ್ಷ ವೇಮನರ ಕಾವ್ಯ ಜನಸಾಮಾನ್ಯರನ್ನು ತಲುಪದೆ ಹೋಯಿತು. ಇದು ವೇಮನರಿಗೆ ಮಾತ್ರ ಮಾಡಿದ ಅನ್ಯಾಯವಲ್ಲ, ಭಾರತೀಯ ಸಾಹಿತ್ಯಕ್ಕೆ ಮಾಡಿದ ಅನ್ಯಾಯ.

ಕನ್ನಡಕ್ಕೆ ಕಿಟೆಲ್ ಹೇಗೊ ಹಾಗೆ ತೆಲುಗಿನವರಿಗೆ ಸಿ.ಪಿ. ಬ್ರೌನ್. ಬ್ರಿಟಿಷ್ ಸರ್ಕಾರದ ಸೇವೆಯಲ್ಲಿದ್ದ ಬ್ರೌನ್ ಮಹಾಮೇಧಾವಿಯಾಗಿದ್ದರು. ವೇಮನರನ್ನು ಪ್ರಪ್ರಥಮವಾಗಿ ಜಗತ್ತಿಗೆ ಪರಿಚಯಿಸಿದ ಕೀರ್ತಿ ಬ್ರೌನರಿಗೆ ಸಲ್ಲುತ್ತದೆ. ಅವರ ಪರಿಶ್ರಮದಿಂದಲೇ ವೇಮನರ ಪದ್ಯಗಳು ಇಂಗ್ಲಿಷಿಗೆ ಅನುವಾದಗೊಂಡು ಭಾರತದಲ್ಲಷ್ಟೆ ಅಲ್ಲ ವಿಶ್ವದ ಅನೇಕ ದೇಶಗಳಲ್ಲಿ ಜನಪ್ರಿಯವಾದವು. ಇತರ ದೇಶಗಳ ಭಾಷೆಗಳಿಗೂ ಅನುವಾದಗೊಂಡವು. ಸ್ಥಳೀಯರ ಅಸೂಯೆಯ ಮಧ್ಯೆಯೂ ವೇಮನರು ವಿಶ್ವಕವಿಯಾಗಿದ್ದು ಹೀಗೆ. ಅನಂತಪುರ ಜಿಲ್ಲೆಯ ಕದಿರು ತಾಲೂಕಿನ ಕಟಾರುಪಲ್ಲಿಯಲ್ಲಿ ಕೊನೆಯ ದಿನಗಳನ್ನು ಕಳೆದ ವೇಮನರು ಕ್ರಿ.ಶ. 1480ರಲ್ಲಿ ಐಕ್ಯರಾದರು. ಅವರ ಸಮಾಧಿಯು ಈಗಲೂ ಅಲ್ಲಿದೆ. ಅದೊಂದು ಪುಣ್ಯ ಸ್ಥಳವಾಗಿ, ಶ್ರದ್ಧಾಕೇಂದ್ರವಾಗಿ ಮಾರ್ಪಟ್ಟಿದೆ. ಅಲ್ಲಿಗೆ ಈಗಲೂ ವೇಮನರ ಅಭಿಮಾನಿಗಳು, ಭಕ್ತರು ಭೇಟಿ ಕೊಡುತ್ತಾರೆ.

ಎಸ್.ಎಸ್. ಹಳ್ಳೂರ (ಲೇಖಕರು ಬಾಗಲಕೋಟೆಯ ಹಿರಿಯ ಸಾಹಿತಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net