

ಭಕ್ತರ ಕಷ್ಟಪರಿಹಾರಕನಾಗಿ, ಅವರ ಇಷ್ಟಾರ್ಥಗಳನ್ನು ನೆರವೇರಿಸುತ್ತ ಬಂದ ವೀರಭದ್ರನ ಜಯಂತಿಯನ್ನು ಪ್ರತಿ ವರ್ಷ ಭಾದ್ರಪದ ಮಾಸದ ಮೊದಲನೆಯ ಮಂಗಳವಾರ ಆಚರಿಸಲಾಗುತ್ತಿದೆ. ಅಂದು ನಾಡಿನಾದ್ಯಂತ ವೀರಭದ್ರನ ವಿಶೇಷ ಪೂಜೆ ಕಾರ್ಯಕ್ರಮಗಳು ನಡೆಯುತ್ತವೆ. ಎಲ್ಲರೂ ಆ ಶುಭ ದಿನದಂದು ವೀರಭದ್ರನ ಸ್ಮರಣೆ, ಆರಾಧನೆ ಮಾಡುತ್ತಾರೆ.
| ಡಾ. ಸಂಗಮೇಶ ಸವದತ್ತಿಮಠ
ಮೂಲತಃ ವೀರಭದ್ರನು ಶಿವಸಂಸ್ಕೃತಿಯ ಮೂಲಪುರುಷ. ಅಂತೆಯೇ ಶಿವನ ಪೂಜಕರೆಲ್ಲರಿಗೂ ಆರಾಧ್ಯ ದೈವ. ಸ್ಕಂದ ಪುರಾಣದಲ್ಲಿ ಜಡೆಯಲ್ಲಿ (ಶಿರದಲ್ಲಿ) ಲಿಂಗವನ್ನು ಧರಿಸಿದವ ವೀರಭದ್ರ ಎಂದು ಹೇಳಿದೆ. ಹರಪ್ಪ ಮೊಹೆಂಜೋದಾರೋದಲ್ಲಿ ಸಿಕ್ಕ ಶಿಲ್ಪದಲ್ಲಿ ಪಶುಪತಿಯ ಪ್ರತಿಮೆ ಇದ್ದು ಅದರ ತಲೆಯಲ್ಲಿ ಲಿಂಗವಿದೆ. ರಾಘವಾಂಕನು ವೀರಭದ್ರನನ್ನು ‘ನಿಡುಜಡೆ ಮುಡಿ ನಡುನೆತ್ತಿಯ ಲಿಂಗಂ’ ಎಂದು ವರ್ಣಿಸಿದ್ದಾನೆ. ಸ್ಕಂದ ಪುರಾಣದಲ್ಲಿ ‘ಲಿಂಗಾಂಕಿತ ಜಟಾಧರಂ’ ಎಂದು ವರ್ಣಿಸಿದೆ. ಪಶುಪತಿ ಎಂದರೆ ಶಿವ, ರುದ್ರ. ಶಿವನ ಮಾನಸಪುತ್ರ ರುದ್ರನ ಪುತ್ರನಾದ ವೀರಭದ್ರನೂ ಸಿಂಧೂ ಸಂಸ್ಕೃತಿಯ ದ್ರಾವಿಡಜನಾಂಗದ ಶ್ರೇಷ್ಠ ಪುರುಷ. ವೀರಭದ್ರನ ಪರಂಪರೆ ಸಂಪ್ರದಾಯಗಳು ಬಹು ಪ್ರಾಚೀನ ಕಾಲದಿಂದಲೇ ನಡೆದುಕೊಂಡು ಬಂದಿರುವುದು ಈ ದೇಶದಲ್ಲಿ ಅಷ್ಟೇ ಅಲ್ಲ ನೇಪಾಳ ಮುಂತಾದ ನೆರೆಯ ರಾಷ್ಟ್ರಗಳಲ್ಲಿಯೂ ಇದೆ. ವೀರಶೈವ ಪಂಚಪೀಠಗಳು ಪ್ರಾಚೀನ ವೀರಭದ್ರ ಸಂಸ್ಕೃತಿಯನ್ನು ಅಳವಡಿಸಿಕೊಂಡು ಇಂದಿಗೂ ಪಾಲಿಸಿಕೊಂಡು ಬಂದಿವೆ. ಬಾಳೆಹೊನ್ನೂರಿನ ರಂಭಾಪುರಿ ಪೀಠದ ಗೋತ್ರಪುರುಷ ವೀರಭದ್ರನಾಗಿದ್ದಾನೆ. ಕೇದಾರ ಪೀಠದ ಜಗದ್ಗುರುಗಳು ಪೀಠಾರೋಹಣ ಮಾಡುವಾಗ ವೀರಭದ್ರನ ಪೂಜೆ ಮಾಡಿಯೇ ಮುಂದಿನ ಕಾರ್ಯಕ್ರಮಗಳನ್ನು ನೆರವೇರಿಸುತ್ತಾರೆ. ವೀರಭದ್ರನನ್ನು ಮನೆ ದೇವರೆಂದು ಅಸಂಖ್ಯಾತ ಭಕ್ತರು ಪೂಜಿಸುತ್ತಾರೆ. ಆದ್ದರಿಂದ ಮನೆಮನೆಗಳಲ್ಲಿಯೂ ಕೂಡ ಯಾವುದೇ ಶುಭಕಾರ್ಯವಿದ್ದರೂ ವೀರಭದ್ರನ ಪೂಜೆ ಆಗಲೇ ಬೇಕು. ಮದುವೆ ಮುನ್ನಾದಿನ ಗುಗ್ಗಳ ಪೂಜೆಯನ್ನು ಅತ್ಯಂತ ಕಟ್ಟು ನಿಟ್ಟಾಗಿ ಸಾಂಪ್ರದಾಯಿಕವಾಗಿ ಇಂದಿಗೂ ತಪ್ಪದೇ ಆಚರಿಸುತ್ತಾರೆ. ಇವೆಲ್ಲವೂ ವೀರಭದ್ರನ ಸಂಸ್ಕೃತಿ ಆಚರಣೆಗಳು ಅನೂಚಾನವಾಗಿ ನಡೆದುಕೊಂಡು ಬಂದುದಕ್ಕೆ ಸಾಕ್ಷಿಯಾಗಿವೆ.
ವೀರಭದ್ರನ ಉಲ್ಲೇಖ ಕ್ರಿ.ಶ. ನಾಲ್ಕನೆಯ ಶತಮಾನದಷ್ಟು ಹಳೆಯ ಕಾಲದಲ್ಲಿ ಮುಳಬಾಗಿಲು ಮುಡಿಯನೂರು ತಾಮ್ರ ಶಾಸನದಲ್ಲಿ ಸಿಗುತ್ತದೆ. ವೀರಶೈವ ಗಣಂಗಳನ್ನು ಮಂಡ್ಯಜಿಲ್ಲೆ ಮರಡೀಪುರ (1280) ಶಾಸನ ಹೆಸರಿಸಿದ್ದು ಅದರಲ್ಲಿ ಪ್ರಾಚೀನ ಕಾಲದ ಗಣಂಗಳ ಸ್ಥಾನದಲ್ಲಿ ವೀರಭದ್ರನನ್ನು ಹೆಸರಿಸಿದ್ದು ವಿಶೇಷವಾಗಿದೆ.
ವೀರಭದ್ರನ ದಕ್ಷ ಸಂಹಾರ ಪ್ರಸಂಗ ವೀರಭದ್ರನ ಅನೇಕ ಗುಣಗಳನ್ನು ವ್ಯಕ್ತಪಡಿಸುತ್ತದೆ. ತಂದೆ ಮತ್ತು ಹಿರಿಯರ ಆಜ್ಞಾಪಾಲಕನಾಗಿ, ದುಷ್ಟರನ್ನು ತಕ್ಕ ರೀತಿಯಲ್ಲಿ ದಂಡಿಸಿದ ವೀರನಾಗಿ, ಯುದ್ಧವೀರನಾಗಿ ಜನಾಂಗ ಸಾಮರಸ್ಯಕ್ಕಾಗಿ ಶ್ರಮಿಸಿದ ತಂದೆ ರುದ್ರನ ಕಾರ್ಯವನ್ನು ವಿಫಲ ಮಾಡುತ್ತಿರುವ ಗರ್ವಿಷ್ಠರನ್ನು ಶಿಕ್ಷಿಸಿ ಪಾಠ ಕಲಿಸಿದವನಾಗಿ, ಯಜ್ಞಸಂಸ್ಕೃತಿಯ ವಿನಾಶಕನಾಗಿ, ದಕ್ಷನ ಪತ್ನಿಯ ಮೊರೆಗೆ ಕರುಣೆ ತೋರಿದ ಕರುಣಾಮೂರ್ತಿಯಾಗಿ, ಶೌರ್ಯ ಮತ್ತು ಶುಭಮಂಗಲಗಳ ಸಾಕಾರಮೂರ್ತಿಯಾಗಿ ಕಂಗೊಳಿಸಿದ್ದಾನೆ. ವೀರ ಮತ್ತು ಭದ್ರ ಎಂಬ ಹೆಸರಿನಲ್ಲಿಯೇ ಈ ಅರ್ಥವಂತಿಕೆ ಅಡಗಿರುವುದನ್ನು ಕಾಣಬಹುದು.
ಪ್ರಾಗೈತಿಹಾಸಿಕ ವೀರಭದ್ರನನ್ನು ಅವನ ವೈಶಿಷ್ಟ್ಯವನ್ನು ಕಣ್ಣ ಮುಂದೆ ಕಟ್ಟುವಂತೆ ಅಕ್ಷರಲೋಕ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಹಿಡಿದಿಟ್ಟಿದೆ. ವೇದ, ಆಗಮ, ಉಪನಿಷತ್ತುಗಳಲ್ಲಿ ಅಷ್ಟೇ ಅಲ್ಲ, ಅಖಂಡ ಭಾರತ ಮತ್ತು ಭಾರತದ ನೆರೆ ರಾಷ್ಟ್ರಗಳಲ್ಲಿ ದೊರೆತಿರುವ ಅತಿ ಪ್ರಾಚೀನ ಶಿಲ್ಪ ಶಾಸನ ಚಿತ್ರ ಕಾವ್ಯ, ಪುರಾಣ, ನಾಟಕ, ಸಾಹಿತ್ಯ, ಜಾನಪದ, ವಡಬು, ವೀರಗಾಸೆ, ವಚನ, ಕಾಲಜ್ಞಾನ, ತಾರಾವಳಿ, ಮುಂತಾದ ಲೆಕ್ಕವಿಲ್ಲದಷ್ಟು ಸಾಹಿತ್ಯ, ಅಗಣಿತ ದೇವಾಲಯಗಳು, ದೇವಾಲಯಗಳಲ್ಲಿರುವ ಮೂರ್ತಿಗಳು ವೀರಭದ್ರನ ಮಹತ್ವವನ್ನು ಸಾರುತ್ತಿವೆ. ಬಸವಾದಿ ಶಿವಶರಣರ ವಚನಗಳಲ್ಲಿಯೂ ವೀರಭದ್ರನ ವರ್ಣನೆಗಳಿವೆ. ಇವೆಲ್ಲವೂ ನಮ್ಮ ದೇಶದ ಸಾಂಸ್ಕೃತಿಕ ಇತಿಹಾಸದ ಸಂಕೇತಗಳೂ ಆಗಿವೆ. ಇದರಿಂದ ವೀರಭದ್ರನು ಬರೀ ಮೂರ್ತಿಯೆಂದು ಸ್ಥಾವರವೆಂದು ಪೂಜೆಗೊಳ್ಳುವುದಿಲ್ಲ ಜನಮನದ ನಿತ್ಯಬದುಕಿನ ಶಕ್ತಿದೇವನಾಗಿ ಜಂಗಮಸ್ವರೂಪನಾಗಿದ್ದಾನೆ. ಹೀಗೆ ವೀರಭದ್ರನ ಚರಿತ್ರೆ ಮಹತ್ವ ಬಹು ಪ್ರಾಚೀನ ಕಾಲದಿಂದಲೇ ಸಾಗಿ ಬಂದಿದೆ. ಭಕ್ತರ ಹೃದಯದ ಕಣ್ಮಣಿಯಾಗಿ ಅವರ ಕಷ್ಟಪರಿಹಾರಕನಾಗಿ ಇಷ್ಟಾರ್ಥಗಳನ್ನು ನೆರವೇರಿಸುತ್ತ ಬಂದ ವೀರಭದ್ರನ ಜಯಂತಿಯನ್ನು ಪ್ರತಿ ವರ್ಷ ಭಾದ್ರಪದ ಮಾಸದ ಮೊದಲನೆಯ ಮಂಗಳವಾರ ಆಚರಿಸಲಾಗುತ್ತಿದೆ. ಅಂದು ವೀರಭದ್ರನ ವಿಶೇಷ ಪೂಜೆ ಕಾರ್ಯಕ್ರಮಗಳು ನಡೆಯುತ್ತವೆ. ಎಲ್ಲರೂ ಆ ಶುಭ ದಿನದಂದು ವೀರಭದ್ರನ ಸ್ಮರಣೆ ಆರಾಧನೆ ಮಾಡಿ ಪುನೀತರಾಗುತ್ತಾರೆ.
(ಲೇಖಕರು ವಿಶ್ರಾಂತ ಪ್ರಾಧ್ಯಾಪಕರು, ಸಂಶೋಧಕರು)