ವೇದ ದರ್ಶನ 101: ಯಜ್ಞದ ಪೂರ್ಣಾರ್ಥ ಆತ್ಮಸಮರ್ಪಣಾ ಭಾವ

YAJNA 15 FEB 20
Published on
ತಂದೆ ವಾಜಶ್ರವಸ ಯಾಗದ ದಕ್ಷಿಣೆಯಾಗಿ ಕೊಟ್ಟದ್ದನ್ನೆಲ್ಲ ಕಣ್ಣಾರೆ ಕಂಡ ನಚಿಕೇತನಿಗೆ, ತನ್ನ ಹೃದಯವನ್ನು ಹೊಕ್ಕಿದ್ದ ‘‘ಶ್ರದ್ಧಾದೇವಿ’’ ಹೇಳಿದಳು; ‘‘ಅನಂದಾ ನಾಮ ತೇ ಲೋಕಾಃ ತಾನ್ ಸಗಚ್ಛತಿ ತಾ ದದತ್’’ ‘‘ಇವುಗಳನ್ನು ದಾನವಾಗಿ ಕೊಟ್ಟವನು, ಎಲ್ಲಿ ಆನಂದ ಲೇಶವೂ ಇಲ್ಲವೋ, ಅಂಥಾ ಲೋಕಕ್ಕೆ (ನರಕಕ್ಕೆ) ಹೋಗುವುದು ಖಂಡಿತ.’’ ಹೀಗೆ ನಿಶ್ಚಯಿಸಿದ ಅವನು ಮನಸ್ಸಿನಲ್ಲೇ ಅಂದುಕೊಂಡಿರಬೇಕು: ‘‘ಯಜ್ಞ ಮಾಡಿಯೂ ನನ್ನ ತಂದೆ ನರಕಕ್ಕೆ ಹೋಗುವಂತಾಯಿತಲ್ಲ! ಈಗ ಏನನ್ನು ಮಾಡಿದರೆ ಈ ಯಜ್ಞ ಸಫಲವಾದೀತು? ಒಂದಾದರೂ ಸಾರ್ಥಕವಾದ ದಾನವನ್ನು ನನ್ನ ತಂದೆ ಮಾಡಿದರೆ, ಕೃತಾರ್ಥನಾಗಲಾರನೇ? ಅಯ್ಯೋ! ಇನ್ನೂ ಮಗುವಾಗಿ, ದ್ರವ್ಯಾರ್ಜನೆ ಮಾಡಲು ಶಕ್ತಿ ಇಲ್ಲದ ನಾನು, ನನ್ನ ತಂದೆಗೆ, ಸಾರ್ಥಕ ದಾನ ಮಾಡಲು ಏನನ್ನು ತಂದುಕೊಡಲಿ? ನನ್ನ ವಶದಲ್ಲಿ ಕೊಡಲು ಏನು ತಾನೇ ಇದೆ?’’ ಹೀಗೆ ಮನಮುಟ್ಟಿ, ಶ್ರೇಯೋಬುದ್ಧಿಯಿಂದ, ಪದೇಪದೆ, ತನ್ನೊಳಗೇ ತಾನೇ ಕೇಳಿಕೊಂಡ ಅವನಿಗೆ ‘‘ಶ್ರದ್ಧೆ’’ಯ ಪ್ರೇರಣೆಯಿಂದುಂಟಾದ ಭಾವ: ‘‘ನನ್ನ ತಂದೆ ನನ್ನನ್ನೇ ಏಕೆ ಯಾರಿಗಾದರೂ ದಾನ ಮಾಡಬಾರದು?’’ ಶ್ರದ್ಧೆಯ ಅಂತರಾಳದಿಂದ ಬಂದ ಈ ಸದ್ಭಾವ, ನಚಿಕೇತನಿಗೆ ಗೊತ್ತಿಲ್ಲದಂತೆಯೇ ಯಜ್ಞದ ಪರಿಪೂರ್ಣಾರ್ಥವಾದ ‘‘ಆತ್ಮಸಮರ್ಪಣಾ ಭಾವ’’ ಆಗಿದ್ದಿತು. ಹಾಗೆ ನೋಡಿದರೆ, ವಿಶ್ವಜಿದ್ಯಾಗದೀಕ್ಷಿತನಾದ ವಾಜಶ್ರವಸ್ಸೇ ‘‘ಆತ್ಮಸಮರ್ಪಣೆ’’ಗೆ ಸಿದ್ಧನಾಗಿ ಇರಬೇಕಿತ್ತು. ‘‘ತಾನು’’, ‘‘ತನ್ನದು’’ ಎಂಬ ಸಕಲ ವಸ್ತುಗಳ ಅರ್ಪಣೆಯಾದ ಹೊರತು, ಅವನು ಮಾಡುವುದೆಲ್ಲ ಯಾಗವಿಡಂಬನೆ ಮಾತ್ರ ಆಗುತ್ತಿತ್ತು. ಅವನ ಪೂರ್ವಾರ್ಜಿತ ಪುಣ್ಯವು ಅವನ ಪುತ್ರನಲ್ಲಿ ಈ ರೀತಿ ಪ್ರೇರೇಪಿಸಿದುದರಲ್ಲಿ ‘‘ದೇವತೆ’’ಗಳ ಪರೋಕ್ಷ ಕೈವಾಡವಿತ್ತೆಂದು ಕಾಣುತ್ತದೆ.

ಮುಂದೆ ನೇರವಾಗಿ ತಂದೆಯೆಡೆಗೆ ಹೋಗಿ ನಚಿಕೇತನು ಕೇಳಿಯೇ ಬಿಡುತ್ತಾನೆ: ‘‘ತಂದೆಯೇ, ನನ್ನನ್ನು ಯಾರಿಗೆ ದಾನವಾಗಿ ಕೊಡುವೆ?’’ ಮಗುವಿನ ಮಾತನ್ನು ತಂದೆ ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ. ಯಾಗವಾದರೋ ಮುಗಿಯುತ್ತ ಬಂದಿತ್ತು. ದಾನ ಸ್ವೀಕಾರ ಮಾಡಿದವರು ಒಬ್ಬೊಬ್ಬರಾಗಿ ಹೊರಡುತ್ತಿದ್ದರು. ‘‘ಇನ್ನೇನು ಎಲ್ಲ ಆಯಿತು, ನಿರರ್ಥಕವಾಗಿ’’ ಎಂದು ಮನನೊಂದ ನಚಿಕೇತನು, ತಂದೆಯನ್ನು ಒತ್ತಾಯಪೂರ್ವಕವಾಗಿ ಇನ್ನೊಂದೆರಡಾವರ್ತಿ ಇದೇ ಪ್ರಶ್ನೆಯನ್ನು ಕೇಳಿದನು ಎಂದು ಉಪನಿಷತ್ತು ವರ್ಣಿಸುತ್ತದೆ. ಈಗ ವಾಜಶ್ರವಸ್ಸಿಗೆ ತಡೆಯಲಾರದ ಸಿಟ್ಟು ಬಂದಿತು. ಇದರ ಭಾವವೇನು? ಸರ್ವಸ್ವದಾನವೆಂದರೆ ‘‘ಮಗನನ್ನೂ ದಾನ ಮಾಡುವುದು’’ ಎಂಬುದು, ಅವನ ದೃಷ್ಟಿಯಲ್ಲಿ ತಲೆಹರಟೆಯ ವಿಚಾರ. ಇದನ್ನು ಹೇಳುವ ಮಗು ಅವಿವೇಕಿ, ಮೂರ್ಖ, ಅಧಿಕಪ್ರಸಂಗಿ. ಇನ್ನು ‘‘ಆತ್ಮಾರ್ಪಣೆ’’ಯಂತೂ ಇದಕ್ಕೂ ಮೀರಿದ ವಿಪರೀತಾರ್ಥ. ಹಾಗಿದ್ದರೆ ‘‘ಯಜ್ಞ’’ಕ್ಕೆ ಏನರ್ಥ? ‘‘ಏನಾದರೂ ಆಗಲಿ, ವಿಚಾರ ಮಾಡತಕ್ಕದ್ದಲ್ಲ, ಹೇಗೋ ಮಾಡಬೇಕು, ಮಾಡಿದರಾಯಿತು.’’ ಇದು ಶ್ರದ್ಧಾವಿರಹಿತ ವಿಚಾರಧಾರೆ. ಈ ಅವಿವೇಕದಲ್ಲಿ, ಯಜ್ಞಭೂಮಿಯಲ್ಲಿ ಆಡಬಾರದ ಮಾತುಗಳ ಪರಿಜ್ಞಾನ ಹೋಯಿತು. ಕೋಪದ ಭರದಲ್ಲಿ ‘‘ನಿನ್ನನ್ನು (ಕೊಡುವುದೇ ಆದರೆ) ಮೃತ್ಯುವಿಗೆ ಕೊಡುತ್ತೇನೆ’’ ಎಂದುಬಿಟ್ಟ.

‘‘ಓಂ ತತ್ಸದಿತಿ ನಿರ್ದೇಶಃ’’ ಎಂದು ಗೀತೆಯಲ್ಲಿ ಉಕ್ತವಾಗಿರುವಂತೆ ‘‘ಓಂ’’ಕಾರಪೂರ್ವಕವಾಗಿ ಮಾಡಿದರೆ ಸರಿಯಾದ ದಾನವಾಗುತ್ತಿತ್ತು. ಫಲಾಭಿಸಂಧಿಯಿಲ್ಲದೆ, ಮೋಕ್ಷಾರ್ಥಿಯಾದವನು, ವೇದಾಧ್ಯಯನ, ಯಜ್ಞ, ತಪಸ್ಸು, ದಾನ ಇತ್ಯಾದಿಗಳನ್ನೂ, ಬ್ರಹ್ಮವಾಚಕವಾದ ‘‘ತತ್’’ ಶಬ್ದ ನಿರ್ದೇಶನಪೂರ್ವಕವಾಗಿ ಆಚರಿಸುವುದು ಶಿಷ್ಟ ಸಂಪ್ರದಾಯ ಎಂದು ಗೀತಾಚಾರ್ಯನು ಹೇಳಿರುತ್ತಾನೆ (ಗೀತಾ 17-25). ಅಶ್ರದ್ಧೆಯಿಂದ ಹೋಮ ಮಾಡಲ್ಪಟ್ಟದ್ದೂ, ದಾನಮಾಡಲ್ಪಟ್ಟದ್ದೂ, ಕೃತವಾದುದೂ ‘‘ಅಸತ್’’ ಎನಿಸಿ, ಸಾಂಸಾರಿಕ ಸುಖವನ್ನಾಗಲೀ, ಮೋಕ್ಷಸಾಧನೆಯನ್ನಾಗಲೀ ಮಾಡಲಾರದು ಎಂದು ಭಗವಂತನೇ ಹೇಳಿದ್ದಾನೆ. (ಗೀತಾ 18-28) ವಾಜಶ್ರವಸನು ಈ ಶಿಷ್ಟ ಸಂಪ್ರದಾಯವನ್ನು ಅತಿಕ್ರಮಿಸಿದನು.

(ಲೇಖಕರು- ಬಹುಶ್ರುತ ವಿದ್ವಾಂಸರು, ಪ್ರವಚನಕಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net