ಜೀವನದ ಮೌಲ್ಯ ಅರಿಯೋಣ, ಜೀವನಕ್ಕೆ ಬೆಲೆ ಕಟ್ಟಲಾಗದು...

WhatsApp Image 2021-11-13 at 11.47.09 PM
Published on
|ವಿದ್ಯಾ ಅಮ್ಮಣ್ಣಾಯ ಕಾಪು

ಜೀವನದಲ್ಲಿ ಬೇಸರ ಹೊಂದಿದ್ದ ವ್ಯಕ್ತಿಯೊಬ್ಬ ಸಂತನೆಡೆಗೆ ಹೋಗಿ, ‘ಗುರುಗಳೇ, ಜೀವನಕ್ಕೆ ಬೆಲೆ ಏನು ತಿಳಿಸಿಕೊಡಿ, ಎಲ್ಲವೂ ಶೂನ್ಯ. ಸಾಯುವುದೊಂದೇ ಪರಿಹಾರ ಅನಿಸುತ್ತಿದೆ’ ಎಂದನಂತೆ. ಶಾಂತವಾಗಿ ಕೇಳಿದ ಗುರುಗಳು ಕಲ್ಲೊಂದನ್ನು ಆತನ ಕೈಯಲ್ಲಿಟ್ಟು, ‘ಮೊದಲು, ಈ ಕಲ್ಲಿನ ಬೆಲೆ ಏನೆಂದು ತಿಳಿದುಕೊಂಡು ಬಾ, ಆದರೆ ಕಲ್ಲನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಕೂಡದು. ನಂತರ ನಿನ್ನ ಪ್ರಶ್ನೆಗೆ ಉತ್ತರಿಸುತ್ತೇನೆ’ ಎಂದರು. ಕಲ್ಲನ್ನು ಹಿಡಿದುಕೊಂಡು ಹೊರಟ ಆತ ಸಾಗುತ್ತ ಸಾಗುತ್ತ ಹಣ್ಣಿನ ವ್ಯಾಪಾರಿ ಬಳಿ ಬಂದ. ತನ್ನಲ್ಲಿರುವ ಕಲ್ಲನ್ನು ತೋರಿಸುತ್ತ ಅದರ ಬೆಲೆ ಕೇಳಿದ. ವ್ಯಾಪಾರಿ ಆ ಕಲ್ಲಿಗೆ ಹನ್ನೆರಡು ಕಿತ್ತಳೆ ಕೊಡಬಲ್ಲೆ ಎಂದ. ಮುಂದೆ ತರಕಾರಿ ಅಂಗಡಿಯವನು ಆ ಕಲ್ಲಿಗೆ 5 ಕೆಜಿ ಆಲು ಬರಬಹುದು ಎಂದ. ಬಂಗಾರದ ಅಂಗಡಿಯಲ್ಲಿ ವಿಚಾರಿಸಿದಾಗ ‘ಬೆಲೆಬಾಳುವ ಹಾರವನ್ನು ಇದಕ್ಕೆ ಪ್ರತಿಯಾಗಿ ನೀಡುತ್ತೇನೆ’ ಎಂದ. ಹರಳುಕಲ್ಲುಗಳ ದೊಡ್ಡಅಂಗಡಿಯಲ್ಲಿ ಕೇಳಿದಾಗ, ‘ನನ್ನ ಅಂಗಡಿಯನ್ನೇ ನೀಡಿದರೂ ಇದರ ಬೆಲೆಗೆ ಸಮಾನವಾಗದು. ಈ ಅಮೂಲ್ಯವಾದ ಕಲ್ಲು ಎಲ್ಲಿ ಸಿಕ್ಕಿತು ಕೊಟ್ಟು ಬಿಡು’ ಎಂದ. ಆದರೆ ಸಂತನ ಮಾತು ನೆನಪಾಗಿ ಕಲ್ಲನ್ನು ಮಾರಾಟ ಮಾಡದೆ ಹಿಂದಿರುಗಿ ಬಂದ. ಎಲ್ಲವನ್ನೂ ಗುರುಗಳಲ್ಲಿ ವಿವರಿಸಿ ಹೇಳಿದ. ‘ಈಗ ಹೇಳಿ ಬದುಕಿನ ಬೆಲೆ ಏನು?’ ಅಂತ ದೈನ್ಯನಾಗಿ ಕೇಳಿದ.

ಆ ಸಂತರು ಮುಗುಳ್ನಗುತ್ತ, ‘ಜೀವನಕ್ಕೆ ಬೆಲೆ ಕಟ್ಟಲಾಗದು. ಅವರವರ ದೃಷ್ಟಿಕೋನ, ತಿಳಿವಳಿಕೆಗಳಿಗೆ ತೋಚಿದಂತೆ ಬೆಲೆ ಕಟ್ಟಬಹುದೇ ಹೊರತು ಅದಕ್ಕೆ ನಿರ್ದಿಷ್ಟ ಬೆಲೆ ಕಟ್ಟಲಾಗದು. ಜೀವನ ಅಷ್ಟೊಂದು ಅಮೂಲ್ಯ. ನಮ್ಮ ನಮ್ಮ ಅನುಭವಕ್ಕೆ ಏನು ಸಿಗುತ್ತದೋ ಅಷ್ಟೇ ಜೀವನ ಅಂದುಕೊಳ್ಳುತ್ತೇವೆ. ಆದರೆ ಜೀವನಕ್ಕೆ ಬೆಲೆ ತುಂಬಬೇಕಾದವರು ನಾವೇ. ಅದು ಹುಡುಕಾಡಿದರೆ ಸಿಗಲಾರದು ಎಂದರು.

ಜೀವನ ಸಾಗರದ ಹಾಗೆ. ಸಾಗರದಲ್ಲೇನಿದೆ? ಬರೀ ಅಲೆಗಳು ಮತ್ತು ಉಪು್ಪನೀರು ಅಂತ ಅಂದುಕೊಂಡರೆ ಬೇರೇನೂ ಕಾಣದು. ಅಲ್ಲಿರುವ ಅಲೆಗಳು, ದಡದಲ್ಲಿ ಬಿದ್ದಿರುವ ಚಿಪು್ಪಗಳು, ಆಳದಲ್ಲಿರುವ ಮುತ್ತುರತ್ನಗಳು, ತೇಲುತ್ತಿರುವ ಹಡಗುಗಳು, ಸಾವಿರಾರು ಜಲಜೀವಿಗಳು ಇವೆಲ್ಲವೂ ಸಾಗರದಲ್ಲಿ ಅಡಗಿರುವ ಸಂಪತ್ತು. ನಾವು ಯಾವುದನ್ನು ನಮಗೆ ಅಂತ ಆಯ್ದುಕೊಳ್ಳುತ್ತೇವೆಯೋ ಅದೇ ಬದುಕು. ಹಾಗಂತ ಬದುಕು ಇಷ್ಟೇ ಅನ್ನುವ ತೀರ್ವನಕ್ಕೆ ಬರಲಾಗದು’ ಎಂದರು.

ಎಷ್ಟೋ ಬಾರಿ ನಾವು ನಿರಾಶರಾದಾಗ ಜೀವನಕ್ಕೇನು ಬೆಲೆ ಅಂತ ಗೊಣಗುತ್ತೇವೆ. ಸೋತಾಗ ಹತಾಶರಾಗುತ್ತೇವೆ. ಆದರೆ ಈ ಬದುಕು ಅತ್ಯಮೂಲ್ಯ. ಸೋತಾಗಲೂ ಹತಾಶರಾಗದೆ ಸೋಲನ್ನು ಎದುರಿಸಿದಾಗ ಗೆಲುವಿನ ದಾರಿಯೊಂದು ಕಾಣಿಸಬಹುದು. ಸೋಲು ಅಂತಿಮ ನಿಲ್ದಾಣವಲ್ಲ. ಬದುಕಿನ ಮೌಲ್ಯ ನಮ್ಮ ಕೈಯಲ್ಲಿಯೇ ಇದೆ. ಸಂತ ನೀಡಿದ ಕಲ್ಲಿನ ಹಾಗೆ. ತರಕಾರಿಯವನಿಗೆ ಮಾರಾಟ ಮಾಡಿದರೆ ತರಕಾರಿಯ ಬೆಲೆ, ಅಮೂಲ್ಯವಾದ ವಜ್ರಕ್ಕೆ ಹೋಲಿಸಿದರೆ ಬೆಲೆ ಕಟ್ಟಲಾಗದಷ್ಟು ಅಮೂಲ್ಯ. ಕೈಯಲ್ಲಿರುವ ಕಲ್ಲನ್ನು ಯಾವುದಕ್ಕೆ ಪರಿವರ್ತಿಸಬೇಕೆಂದು ನಿರ್ಧರಿಸಬೇಕಾದವರು ನಾವೇ.

(ಲೇಖಕರು ಪ್ರಾಧ್ಯಾಪಕರು, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net