ಇಂದು ಜನ್ಮದಿನ; ಪಕ್ಷದ ಎಲ್ಲೆ ಮೀರಿದ ಮುತ್ಸದ್ದಿ ವಾಜಪೇಯಿ...

asdasdasdfgsdfasdf
Published on
ನನ್ನ ತಂದೆ ಮಲ್ಲಯ್ಯ ಅವರು ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿದ್ದರು. ಪ್ರಜಾಪ್ರತಿನಿಧಿ ಸಭೆಯಲ್ಲಿನ ಅನೇಕ ಹಿರಿಯರ ಭಾಷಣಗಳು ನನ್ನ ಮೇಲೆ ಪ್ರಭಾವ ಬೀರಿದ್ದವು. ಅದರ ಪರಿಣಾಮ ನಾನು 1962ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಸದಸ್ಯನಾಗಿ ಆಯ್ಕೆಯಾಗಿದ್ದೆ. ಮೊದಲಿನಿಂದಲೂ ಸಂಸತ್ತಿನ ನಡವಳಿಗಳನ್ನು ಆಸಕ್ತಿಯಿಂದ ಗಮನಿಸುತ್ತಿದ್ದೆ. ಜಯಪ್ರಕಾಶ ನಾರಾಯಣ, ಆಚಾರ್ಯ ನರೇಂದ್ರ ದೇವ, ಅಶೋಕ್ ಮೆಹ್ತಾ, ಲೋಹಿಯಾ ಮೊದಲಾದವರ ಭಾಷಣಗಳನ್ನು ಕೇಳಿ ಪ್ರಭಾವಿತನಾಗಿದ್ದೆ. 1966ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ವಿರುದ್ಧ ಪ್ರಧಾನಿಗೆ ದೂರು ನೀಡಲು ಶಿವಪ್ಪ, ಮುಲ್ಕಾ ಗೋವಿಂದರೆಡ್ಡಿ ನೇತೃತ್ವದಲ್ಲಿ ನಾವು ಕೆಲವರು ದೆಹಲಿಗೆ ಹೋಗಿದ್ದೆವು. ಆ ಸಂದರ್ಭದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾಷಣ ಕೇಳುವ ನನ್ನ ಆಸೆಯನ್ನು ಮುಲ್ಕಾ ಗೋವಿಂದರೆಡ್ಡಿ ನೆರವೇರಿಸಿದರು. ವಾಜಪೇಯಿ ಮಾತನಾಡುವಾಗ ಅವರ ಹಾವಭಾವ, ಹಿಂದಿ ಭಾಷೆಯ ಮೇಲೆ ಹಿಡಿತ ಎಲ್ಲವೂ ನನ್ನ ಮೇಲೆ ಪರಿಣಾಮ ಬೀರಿದವು. ಹಿಂದಿಯಲ್ಲಿ ಇಷ್ಟು ಪರಿಣಾಮಕಾರಿಯಾಗಿ ಮಾತನಾಡುವ ಇನ್ನೊಬ್ಬರನ್ನು ನಾನು ಕಾಣಲಿಲ್ಲ. ನಂತರ ಅವರ ಬಗ್ಗೆ ನನಗಿದ್ದ ಗೌರವ ಇನ್ನಷ್ಟು ಹೆಚ್ಚಾಯಿತು. ಅಲ್ಲಿಂದ ಅವರೊಂದಿಗೆ ಒಡನಾಟವೂ ಬೆಳೆಯಿತು.

1968ರಲ್ಲಿ ನಾನು ಸಂಸತ್ ಸದಸ್ಯನಾದ ನಂತರ ವಾಜಪೇಯಿ ಅವರನ್ನು ಇನ್ನಷ್ಟು ಹತ್ತಿರದಿಂದ ನೋಡುವ ಅವಕಾಶವಾಯಿತು. ಅವರು ಸಂಸತ್​ನಲ್ಲಿ ವಿವಿಧ ವಿಷಯಗಳಲ್ಲಿ ಮಂಡಿಸುತ್ತಿದ್ದ ಭಾಷಣ ನನ್ನನ್ನು ಪ್ರಭಾವಿಸಿತು.

ಕುಟುಂಬದ ಸದಸ್ಯ: 1999ರಲ್ಲಿ ನಾನು ಮುಖ್ಯಮಂತ್ರಿಯಾಗಿ ಮಂತ್ರಿಮಂಡಲ ವಿಸ್ತರಣೆ ಬಗ್ಗೆ ಚರ್ಚೆ ಮಾಡಲು ದೆಹಲಿಗೆ ಹೋಗಿದ್ದೆ. ಮಾರನೇ ದಿನ ವಾಜಪೇಯಿ ಅವರ ಪ್ರಮಾಣವಚನ ಇತ್ತು, ನನಗೂ ಆಹ್ವಾನ ಇತ್ತು. ನನಗೆ ಜ್ವರ ಇದ್ದರೂ ಒಕ್ಕೂಟ ವ್ಯವಸ್ಥೆಯಲ್ಲಿ ಗೌರವ ಸೂಚಿಸಲು ಸಮಾರಂಭಕ್ಕೆ ಹೋದೆ. ನನಗೆ ಮೀಸಲಾದ ಆಸನದಲ್ಲಿ ಯಾರೋ ಕುಳಿತಿದ್ದರು. ನಾನು ಕುರ್ಚಿಗಾಗಿ ಹುಡುಕುತ್ತಿದ್ದಾಗ, ವಾಜಪೇಯಿ ಕುಟುಂಬಕ್ಕೆ ಮೀಸಲಾದ ಆಸನದಲ್ಲಿ ಅವಕಾಶ ಮಾಡಿಕೊಡಲಾಯಿತು. ಮಾರನೆಯ ದಿನ ಸೌಜನ್ಯದ ಭೇಟಿಗಾಗಿ ಹೋದಾಗ ವಾಜಪೇಯಿಯವರು ತಮ್ಮ ಸ್ವಭಾವದಂತೆ ಆತ್ಮೀಯವಾಗಿ ನಗುತ್ತ ಅನ್ಯೋನ್ಯವಾಗಿ ಮಾತನಾಡಿದರು. ‘ನಿನ್ನೆಯಿಂದ ನೀವು ನನ್ನ ಕುಟುಂಬದ ಸದಸ್ಯರು’ ಎಂದು ಪ್ರೀತಿ ತೋರಿದರು. ಮೊದಲಿಗೆ ನನಗೆ ಕಾರಣ ತಿಳಿಯಲಿಲ್ಲ. ಅವರ ಕುಟುಂಬಕ್ಕೆ ಮೀಸಲಾದ ಕುರ್ಚಿಯಲ್ಲಿ ಕೂತಿದ್ದರಿಂದ ಆ ರೀತಿ ಹೇಳಿದ್ದರು. ‘ನನ್ನ ಕುಟುಂಬಕ್ಕೆ ಸ್ವಾಗತ’ ಎಂದು ವಿಶ್ವಾಸ ಮೂಡಿಸಿದರು. ಅದು ಅವರ ಸೌಜನ್ಯದ ನಡವಳಿಕೆಗೆ ಸಾಕ್ಷಿ.

ಔಚಿತ್ಯಪೂರ್ಣ ಸಂಬಂಧ: ನನ್ನ ನಾಲ್ಕೂವರೆ ವರ್ಷಗಳ ಮುಖ್ಯಮಂತ್ರಿತ್ವದ ಅವಧಿಯಲ್ಲಿ ಪ್ರಧಾನಿ ವಾಜಪೇಯಿ ಅವರೊಂದಿಗೆ ಸಂಬಂಧ ಔಚಿತ್ಯಪೂರ್ಣವಾಗಿತ್ತು, ವಾಸ್ತವಿಕವಾಗಿತ್ತು. ಭಾರತೀಯ ಒಕ್ಕೂಟದ ವ್ಯವಸ್ಥೆ ಹೇಗೆ ನಡೆಯಬೇಕು ಎಂಬುದಕ್ಕೆ ಕೇಂದ್ರ ಹಾಗೂ ರಾಜ್ಯಗಳ ನಡುವಿನ ಸಂಬಂಧ ಜ್ವಲಂತ ಉದಾಹರಣೆ. ಸೈದ್ಧಾಂತಿಕ ಭಿನ್ನಾಭಿಪ್ರಾಯ ಇದ್ದರೂ, ಪ್ರಾಮಾಣಿಕ ಧ್ಯೇಯೋದ್ದೇಶದ ನಿಲುವುಗಳು ಭಿನ್ನವಾಗಿದ್ದರೂ ದೇಶದ ವಿಚಾರ ಬಂದಾಗ ಎರಡು ವಿಭಿನ್ನ ವ್ಯಕ್ತಿತ್ವದ ಜನನಾಯಕರು ಹೇಗೆ ಸಹಕರಿಸುತ್ತ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಲು ಸಾಧ್ಯ ಎಂಬುದಕ್ಕೆ ಆ ಅವಧಿ ಉತ್ತರ.

ನಮ್ಮ ರಾಜ್ಯದ ಕಾವೇರಿ ಜಲ ವಿವಾದ, ಗಡಿ ವಿವಾದ ಹೀಗೆ ಹಲವು ಸಂದರ್ಭದಲ್ಲಿ ವಾಜಪೇಯಿ ಪರಸ್ಪರ ಚರ್ಚೆಯ ಮೂಲಕ ಪರಿಹಾರ ಕಂಡುಹಿಡಿಯುತ್ತಿದ್ದರು. ಕಾವೇರಿಗೆ ಸಂಬಂಧಿಸಿದಂತೆ ನಾನು, ತಮಿಳುನಾಡಿನ ಸಿಎಂ ಜಯಲಲಿತಾ, ಕೇರಳ, ಪುದುಚೇರಿ ಮುಖ್ಯಮಂತ್ರಿಗಳ ಐದಾರು ಸಭೆಗಳನ್ನು ನಡೆಸಿದ್ದರು; ನಿಷ್ಪಕ್ಷಪಾತವಾಗಿ ಪರಿಹಾರ ನೀಡುತ್ತಿದ್ದುದು ಅವರ ವಿಶೇಷತೆ. ವಾಜಪೇಯಿಯವರು ಪಕ್ಷದ ಎಲ್ಲೆಯನ್ನು ಮೀರಿದ ಮುತ್ಸದ್ದಿಯಾಗಿದ್ದರು ಎಂಬುದು ಹಲವು ಸಂದರ್ಭದಲ್ಲಿ ಗಮನಿಸಿದ್ದೇನೆ. 21ನೇ ಶತಮಾನದ ಆರಂಭದ ದಿನಗಳಲ್ಲಿ ಎಲ್ಲ ಮುಖ್ಯಮಂತ್ರಿಗಳನ್ನು ಅವರು ಗೌರವಪೂರ್ವಕವಾಗಿ ನಡೆಸಿಕೊಂಡಿದ್ದರು.

ಮಾತಿನಂತೆ ನಡೆದ ನಾಯಕ: ಒಂದು ಘಟನೆಯನ್ನು ಇಲ್ಲಿ ನೆನಪಿಸಿಕೊಳ್ಳಲೇಬೇಕು. ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಬೇಕು ಎಂಬುದು ನನ್ನ ಕನಸಾಗಿತ್ತು. ನಾನು ಅಧಿಕಾರ ವಹಿಸಿಕೊಂಡಾಗ ಬೆಂಗಳೂರಿನಿಂದ ಫ್ರಾಂಕ್​ಫರ್ಟ್​ಗೆ ವಿಮಾನ ಆರಂಭವಾದ ದಿನ ಪುಳಕಿತನಾಗಿದ್ದೆ. ಅದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕನಸನ್ನು ಇಮ್ಮಡಿಗೊಳಿಸಿತ್ತು. 5 ಸಾವಿರ ಎಕರೆ ಜಾಗ ಗುರುತಿಸಿದೆವು. ಅದರ ಶಿಲಾನ್ಯಾಸಕ್ಕೆ ವಾಜಪೇಯಿಯವರನ್ನು ಕರೆದಿದ್ದೆವು. ಸ್ಥಳೀಯ ಬಿಜೆಪಿಗರು ಸಮಾರಂಭಕ್ಕೆ ಬಾರದಂತೆ ಅವರ ಮೇಲೆ ಒತ್ತಡ ತಂದಿದ್ದರು. ನಾನಿದ್ದ ಕಾಂಗ್ರೆಸ್​ನಲ್ಲಿಯೂ ಕೆಲವರು ಬಿಜೆಪಿಯ ಪ್ರಧಾನಿಯನ್ನು ಕರೆದಿದ್ದಾರೆಂದು ಸೋನಿಯಾ ಗಾಂಧಿಗೆ ದೂರು ಹೇಳಿದ್ದರು. ಪ್ರಧಾನಿ ಬರುವರೋ ಇಲ್ಲವೋ ಎಂಬ ಅನುಮಾನ ಆರಂಭವಾಯಿತು. ಆಗ ದೆಹಲಿಯಲ್ಲಿ ರಾಜ್ಯದ ಕೊಂಡಿಯಂತೆ ಕೆಲಸ ಮಾಡುತ್ತಿದ್ದ ಅನಂತಕುಮಾರ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದೆ. ಅವರು ಕೂಡಲೇ ಪ್ರಧಾನಿಯವರನ್ನು ಭೇಟಿ ಮಾಡಿದರು. ನಂತರ ನನಗೆ ಕರೆ ಮಾಡಿ, ‘ಈಗಾಗಲೇ ನಾನು ಒಪ್ಪಿದ್ದೇನೆ’ ಎಂಬ ಮಾತನ್ನು ಪ್ರಧಾನಿ ಹೇಳಿದರೆಂದು ಅನಂತಕುಮಾರ್ ದೃಢಪಡಿಸಿದರು. ಇತ್ತ, ಸೋನಿಯಾ ಅವರೂ ನನ್ನ ವಿರುದ್ಧದ ದೂರಿಗೆ ಸೊಪು್ಪ ಹಾಕಲಿಲ್ಲ. ವಾಜಪೇಯಿಯವರು ಪಕ್ಷವನ್ನು ಮೀರಿ ದೇಶದ ಅಭಿವೃದ್ಧಿಗೆ ದುಡಿಯುತ್ತಿದ್ದರು ಎಂಬುದಕ್ಕೆ ಈ ಘಟನೆ ಸಾಕ್ಷಿ.

ಬೆಂಗಳೂರಿನಲ್ಲಿ ಅದೇ ಸಂದರ್ಭದಲ್ಲಿ ತೂಗುಸೇತುವೆಯನ್ನು ಉದ್ಘಾಟಿಸಲಾಯಿತು. ಆ ಸಂದರ್ಭದಲ್ಲಿ ವಾಜಪೇಯಿ ಮಾಡಿದ ಭಾಷಣ ಈಗಲೂ ನನ್ನ ಸ್ಮೃತಿಪಟಲದಲ್ಲಿದೆ. ‘ವಿದೇಶಗಳ ಗಣ್ಯರು ಮೊದಲು ದೆಹಲಿಗೆ ಬಂದು ನಂತರ ರಾಜ್ಯಗಳ ರಾಜಧಾನಿಗಳಿಗೆ ಹೋಗುತ್ತಿದ್ದರು, ಆದರೆ ಕೃಷ್ಣ ಸಿಎಂ ಆದ ನಂತರ ಬೆಂಗಳೂರಿಗೆ ಬಂದು ಆ ನಂತರ ದೆಹಲಿಗೆ ಬರುತ್ತಿದ್ದಾರೆ’ ಎಂದು ಹೇಳಿದ್ದು ಅವರ ವಿಶಾಲ ಹೃದಯಕ್ಕೆ ಸಾಕ್ಷಿ. ಮುತ್ಸದ್ದಿ ನಾಯಕ ಹೇಗೆ ಪಕ್ಷವನ್ನು ಮೀರಿ ಉತ್ತಮ ಕೆಲಸವನ್ನು ಪ್ರಶಂಸಿಸುತ್ತಾನೆ ಎಂಬುದಕ್ಕೆ ವಾಜಪೇಯಿ ಉತ್ತಮ ನಿದರ್ಶನ.

ಬೆಂಗಳೂರಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಯಿಂದ ವಿದೇಶಿ ಹೂಡಿಕೆ ಹೆಚ್ಚಾಯಿತು. ವಾಜಪೇಯಿ ಸರ್ಕಾರದಲ್ಲಿದ್ದ ಸಚಿವ ಪ್ರಮೋದ ಮಹಾಜನ್ ಅವರು ಮಾಹಿತಿ ತಂತ್ರಜ್ಞಾನದ ಬೆಳವಣಿಗೆಗೆ ನೆರವಾದರು. ಬೆಂಗಳೂರು ಹಾಗೂ ಹೈದರಾಬಾದ್ ನಡುವೆ ಸಿಲಿಕಾನ್ ಸಿಟಿ ಯಾವುದಾಗಬೇಕು ಎಂಬ ಪೈಪೋಟಿ ಇತ್ತು. ಆಂಧ್ರಪ್ರದೇಶದ ಸರ್ಕಾರ ಏನೇ ವಿನಾಯ್ತಿಗಳನ್ನು ನೀಡಿದರೂ ಬೆಂಗಳೂರಿನ ಹವಾಮಾನವನ್ನು ನೀಡಲು ಸಾಧ್ಯವಿರಲಿಲ್ಲ. ಅದನ್ನು ನಾನು ಒಮ್ಮೆ ಚಂದ್ರಬಾಬು ನಾಯ್ಡು ಅವರಿಗೂ ಹೇಳಿದ್ದೆ. ರಾಜ್ಯ ಸರ್ಕಾರದ ಅನೇಕ ಕ್ರಮಗಳಿಗೆ ವಾಜಪೇಯಿಯವರು ಸಾಕಷ್ಟು ಸಹಕಾರ ನೀಡಿದರು. ಆದ್ದರಿಂದಲೇ ನಾವು ಇತರ ರಾಜ್ಯಗಳಿಗಿಂತ ಉತ್ತಮವಾಗಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ವಲಯದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಯಿತು.

ನೆಹರು ಕಾಲದಿಂದಲೂ ನಮ್ಮ ವಿದೇಶಾಂಗ ನೀತಿ ಬೆಳೆದು ಬಂದಿದೆ. ವಿದೇಶಾಂಗ ಸಚಿವರಾಗಿ ಬೇರೆ ಬೇರೆ ದೇಶಗಳ ಸಂಬಂಧ ವೃದ್ಧಿಯಾಗಲು ವಾಜಪೇಯಿಯವರು ನೀಡಿದ ಕೊಡುಗೆ ಅನನ್ಯ. ವಾಜಪೇಯಿಗೆ ಹಿಂದಿಯ ಹಾಗೆ ಇಂಗ್ಲಿಷ್ ಮೇಲೂ ಹಿಡಿತವಿತ್ತು. ಪಿ.ವಿ. ನರಸಿಂಹರಾವ್ ಪ್ರಧಾನಿಯಾಗಿದ್ದಾಗ ವಿದೇಶಕ್ಕೆ ನಿಯೋಗ ಕಳುಹಿಸುವಾಗ ವಿರೋಧ ಪಕ್ಷದ ನಾಯಕರಾಗಿದ್ದ ವಾಜಪೇಯಿಯವರನ್ನು ಕಳುಹಿಸುತ್ತಿದ್ದರು. ಒಮ್ಮೆ ಅವರ ತಂಡದಲ್ಲಿ ನಾನೂ ಹೋಗಿದ್ದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶವನ್ನು ಸಮರ್ಥವಾಗಿ ಪ್ರತಿನಿಧಿಸುತ್ತಿದ್ದರು.

ಸಾಹಿತಿ, ಸೂಕ್ಷ್ಮಮತಿ: ವಾಜಪೇಯಿ ಅವರನ್ನು ನಾನು ಕೇವಲ ರಾಜಕಾರಣಿಯಾಗಿ ನೋಡಿಲ್ಲ. ಅವರೊಬ್ಬ ಸಾಹಿತಿಯೂ ಹೌದು. ಕವನಗಳನ್ನು ಬರೆಯುತ್ತಿದ್ದರು. ಆದರೆ, ಅವರ ಈ ಮುಖ ಹೆಚ್ಚು ಪ್ರಚಾರಕ್ಕೆ ಬರಲಿಲ್ಲ. ಸಂಗೀತ ಹಾಗೂ ಕಲೆಯ ಬಗ್ಗೆ ಆಸಕ್ತಿ ಹೊಂದಿದ್ದರು. ಯಾವುದೇ ವಿಚಾರದಲ್ಲಿಯೂ ಮೂಲಕ್ಕೆ ಹೋಗಿ ಅಧ್ಯಯನ ಮಾಡುತ್ತಿದ್ದರು. ಅದೆಲ್ಲದಕ್ಕಿಂತ ಹೆಚ್ಚಾಗಿ ಅವರೊಬ್ಬ ಸೂಕ್ಷ್ಮಮತಿಯೂ ಹೌದು.

(ಲೇಖಕರು ಮಾಜಿ ಮುಖ್ಯಮಂತ್ರಿ, ಕೇಂದ್ರ ಮಾಜಿ ಸಚಿವರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net