ಅಪಪ್ರಚಾರವನ್ನೂ ಸೋಲಿಸಿದ ಲಸಿಕೆ!; ನಡ್ಡಾ ಅಭಿಮತ

Vaccine
Published on
ಕರೊನಾ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ ಭಾರತ 2021ರ ಜನವರಿ 16ರಂದು ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನ ಆರಂಭಿಸಿತು ಮತ್ತು ಕೇವಲ 9 ತಿಂಗಳಲ್ಲಿ 100 ಕೋಟಿ ಡೋಸ್​ಗಳನ್ನು ನೀಡುವಲ್ಲಿ ಯಶಸ್ವಿಯಾಗಿದ್ದೇವೆ. ದೇಶದ 18 ವರ್ಷ ಮೇಲ್ಪಟ್ಟ 74% ಕ್ಕಿಂತ ಹೆಚ್ಚು ಮಂದಿ ಒಂದನೇ ಲಸಿಕೆ ಪಡೆದುಕೊಂಡಿದ್ದಾರೆ.

ಅಮೆರಿಕ ಲಸಿಕಾಭಿಯಾನ ಶುರು ಮಾಡಿದ ಒಂದು ತಿಂಗಳ ನಂತರ ನಾವು ಲಸಿಕೆ ಕಾರ್ಯಕ್ಕೆ ಚಾಲನೆ ನೀಡಿದರೂ, ಅಮೆರಿಕಕ್ಕೆ ಈವರೆಗೆ 40.7 ಕೋಟಿ ಲಸಿಕೆ ಡೋಸ್​ಗಳನ್ನು ನೀಡಲಷ್ಟೇ ಸಾಧ್ಯವಾಗಿದೆ. ಅಂದರೆ, ಅಮೆರಿಕಕ್ಕಿಂತ ಎರಡು ಪಟ್ಟು ಲಸಿಕೆ ಪ್ರಮಾಣವನ್ನು ನಾವು ನೀಡಿದ್ದೇವೆ. ವಿಶ್ವಾದ್ಯಂತ 7 ಶತಕೋಟಿ ಡೋಸ್​ಗಳನ್ನು ಕೊಡಲಾಗಿದ್ದರೆ, ಅದರಲ್ಲಿ 100 ಕೋಟಿ ಡೋಸ್ ಭಾರತದಲ್ಲೇ ನೀಡಲಾಗಿದೆ. ಅಂದರೆ 14% ಲಸಿಕೆ ಡೋಸ್​ಗಳನ್ನು ಭಾರತದಲ್ಲೇ ನೀಡಲಾಗಿದೆ ಎಂದಾಯಿತು.

ವಿಶ್ವ ಜಿಡಿಪಿಯಲ್ಲಿ ನಮ್ಮ ಪಾಲು 3.5% ಮಾತ್ರ. ತಲಾ ಜಿಡಿಪಿ ಆಧಾರದಲ್ಲಿ ಹೋಲಿಸಬಹುದಾದ ಎಲ್ಲ ರಾಷ್ಟ್ರಗಳಿಗಿಂತ ಭಾರತವು (ಲಸಿಕಾಭಿಯಾನದಲ್ಲಿ) ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ದೇಶದಲ್ಲಿ ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ ಮತ್ತು ‘ಸ್ವದೇಶಿ ವ್ಯಾಕ್ಸಿನ್’ ಕೋವ್ಯಾಕ್ಸಿನ್ ನಡುವೆ ಭಾರತವು ವಿಶ್ವದ ಮೊದಲ ಈಘಅ ಲಸಿಕೆಯಾದ ಘಢಇಟಡಈ-ಆನ್ನು ಅಭಿವೃದ್ಧಿಪಡಿಸಿದೆ. ಅಸಾಧಾರಣ ಸವಾಲುಗಳನ್ನು ಮೀರಿ ಭಾರತ ಲಸಿಕೆಯನ್ನು ತಯಾರಿಸಿದೆ.

ಲಸಿಕೆಯಲ್ಲಿ ವಿಐಪಿ ಸಂಸ್ಕೃತಿಯಿರಬಾರದು ಮತ್ತು ಶ್ರೀಮಂತರು, ಪ್ರಭಾವಶಾಲಿಗಳು ಸರತಿ ಸಾಲುಗಳನ್ನು ದಾಟಿ ಲಸಿಕೆ ಹಾಕಿಸಿಕೊಳ್ಳದಂತೆ ಎಚ್ಚರಿಕೆ ವಹಿಸಲು ಪ್ರಧಾನಿಯವರೇ ಮುಂದಾಗಿದ್ದರು. ಇದರಿಂದಾಗಿ ಅತ್ಯಂತ ನ್ಯಾಯಯುತವಾದ ಅಭಿಯಾನವಾಗಿ ಮಾರ್ಪಾಡಾಗುವುದಕ್ಕೂ ಕಾರಣವಾದರು.

ಭಾರತ ಕರೊನಾವಿರೋಧಿ ಹೋರಾಟಕ್ಕೆ ಆದ್ಯತೆ ನೀಡಿದರೂ ವಿಪಕ್ಷಗಳಲ್ಲಿರುವ ಕೆಲ ಮಂದಿ ಮೋದಿವಿರೋಧಕ್ಕೆ ಆದ್ಯತೆ ನೀಡಿದರು/ನೀಡುತ್ತಿದ್ದಾರೆ. ಲಸಿಕೆಗಳಿಗೆ ‘ಬಿಜೆಪಿ ಲಸಿಕೆ’ ಎಂದು ಹಣೆಪಟ್ಟಿ ಕಟ್ಟಿ ಲಸಿಕೆ ಅಭಿಯಾನಕ್ಕೆ ಕೆಟ್ಟ ಹೆಸರು ತರಲು ಯತ್ನಿಸಿದರು. ಲಸಿಕೆಗಳನ್ನು ಖರೀದಿಸುವ ಕೆಲವು ರಾಜ್ಯ ಸರ್ಕಾರಗಳ ಅವಕಾಶವಾದಿ ರಾಜಕಾರಣದಿಂದಾಗಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕಾರ್ಯಗಳೂ ನಡೆದವು. ಕರೊನಾ ವಿಷಯದಲ್ಲಿ ಪಕ್ಷ ಮತ್ತು ಪಾರಿವಾರಿಕ ಹಿತಾಸಕ್ತಿ ಸಾಧಿಸುವ ಇಂಥದ್ದೊಂದು ಹೀನನಡೆ ಬೇಕಿರಲಿಲ್ಲ.

ಉತ್ತರ ಪ್ರದೇಶದ ಉದಾಹರಣೆಯನ್ನು ತೆಗೆದುಕೊಳ್ಳಿ. ಸುಮಾರು 24 ಕೋಟಿ ಜನಸಂಖ್ಯೆ ಹೊಂದಿರುವ ರಾಜ್ಯದಲ್ಲಿ ಈಗ ಕರೊನಾ ದೈನಿಕ ಕೇಸುಗಳು 50ಕ್ಕಿಂತ ಕಡಿಮೆಯಿದೆ. ಇಲ್ಲಿ ಕೋವಿಡ್​ನಿಂದ ಸಾವನ್ನಪ್ಪಿದವರ ಸಂಖ್ಯೆ ಸುಮಾರು 23,000. ಭಾರತದ ಜನಸಂಖ್ಯೆಯ 17-18% ಜನರು ಇಲ್ಲಿದ್ದು ಕೋವಿಡ್ ಸಾವು-ನೋವುಗಳಲ್ಲಿ 5%ರಷ್ಟು ಪ್ರಮಾಣ ಉ.ಪ್ರ.ದಲ್ಲಿ ದಾಖಲಾಗಿದೆ. ಉ.ಪ್ರ.ದಲ್ಲಿ 11.7 ಕೋಟಿಗೂ ಹೆಚ್ಚು ಲಸಿಕೆ ಡೋಸ್​ಗಳನ್ನು ನೀಡಲಾಗಿದ್ದು, ಅತಿ ಹೆಚ್ಚು ಲಸಿಕೆ ಮತ್ತು ಗರಿಷ್ಠ ಸಂಖ್ಯೆಯ ಪರೀಕ್ಷೆಗಳನ್ನು ನಡೆಸಿರುವ ರಾಜ್ಯ ಎಂದು ಗುರುತಿಸಿಕೊಂಡಿದೆ.

ಮತ್ತೊಂದೆಡೆ, ಕರೊನಾ ಹೋರಾಟದಲ್ಲಿ ನಮ್ಮದು ಇತರರಿಗೆ ಮಾದರಿ ಎಂದು ಕೊಂಡಾಡಿಕೊಳ್ಳುತ್ತಿದ್ದ ಮತ್ತು ದೇಶದ ಜನಸಂಖ್ಯೆಯಲ್ಲಿ 11-12%ರಷ್ಟು ಪ್ರಮಾಣ ಇರುವ ಕೆಲ ರಾಜ್ಯಗಳು 50% -60%ರಷ್ಟು ಕೋವಿಡ್ ಪ್ರಕರಣಗಳು ಮತ್ತು ಸಾವು-ನೋವಿಗೆ ಸಾಕ್ಷಿಯಾಗುತ್ತಿವೆ. 3.5 ಕೋಟಿ ಜನಸಂಖ್ಯೆ ಹೊಂದಿರುವ ಕೇರಳದಲ್ಲಿ 25,500ಕ್ಕೂ ಹೆಚ್ಚು ಮಂದಿ ಕರೊನಾಕ್ಕೆ ಬಲಿಯಾಗಿದ್ದಾರೆ. ಹೀಗಿದ್ದರೂ, ಕೇಂದ್ರ ಮತ್ತು ಬಿಜೆಪಿ ಆಡಳಿತವಿರುವ ರಾಜ್ಯಗಳ ಬಗ್ಗೆ ಸುಳ್ಳು ನಿರೂಪಣೆಗಳನ್ನು ತೇಲಿಬಿಡುತ್ತಿರುವ ಕೆಲವರು ಕೇರಳದಂತಹ ಬಿಜೆಪಿಯೇತರ ರಾಜ್ಯಗಳ ದುಸ್ಥಿತಿ ಬಗ್ಗೆ ಜಾಣ ಮೌನವಹಿಸಿದ್ದಾರೆ.

ದುರದೃಷ್ಟವಶಾತ್, ರಾಜಕೀಯ ಸಿನಿಕತೆ, ಅನುಕೂಲಸಿಂಧು ಬೂಟಾಟಿಕೆ ಮತ್ತು ಬೌದ್ಧಿಕ ಅಪ್ರಾಮಾಣಿಕತೆಯ ಸಾಂಕ್ರಾಮಿಕ ರೋಗಕ್ಕೆ ಲಸಿಕೆಗಳಿಲ್ಲ! ನಾವು ಇಂದು ಸಾಧಿಸಿದ್ದು ಒಂದು ಪಕ್ಷ ಅಥವಾ ಒಂದು ಸರ್ಕಾರದ ಮೈಲಿಗಲ್ಲಲ್ಲ. ಇದು ದೇಶದ ಸಾಧನೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತವು ಹೊಸ ಎತ್ತರಕ್ಕೆ ಏರುತ್ತಿರುವುದನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ ಎಂಬ ಏಕೈಕ ಕಾರಣಕ್ಕಾಗಿ ನಮ್ಮ ವಿಜ್ಞಾನಿಗಳು, ಆರೋಗ್ಯ ಕಾರ್ಯಕರ್ತರು, ಜನರನ್ನು ದುರ್ಬಲಗೊಳಿಸಲು ಕೆಲವರು ಯತ್ನಿಸುತ್ತಿರುವುದು ವಿಪರ್ಯಾಸವೇ ಸರಿ. ಅಂತಿಮವಾಗಿ, ಈ ಸುಳ್ಳು ಮತ್ತು ಅಪಪ್ರಚಾರದ ಸಾಂಕ್ರಾಮಿಕವು ಸತ್ಯ ಮತ್ತು ವಾಸ್ತವಾಂಶವೆಂಬ ಲಸಿಕೆಯಿಂದಲೇ ಸೋಲಿಸಲ್ಪಡುತ್ತದೆ.

ಕರೊನಾ ವಿರುದ್ಧದ ಅತ್ಯಂತ ಪರಿಣಾಮಕಾರಿ ಸಾಧನ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಈ ಹೋರಾಟದಲ್ಲಿ ನಾವು ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ದೂರವಿರಬಾರದು. ಸಬ್ ಕಾ ಸಾಥ್​ನಿಂದ ರಾಷ್ಟ್ರೀಯ ಹಿತಾಸಕ್ತಿ ಕಾಪಾಡಲು ಸಾಧ್ಯ. ಆದ್ದರಿಂದ ಒಗ್ಗಟ್ಟಾಗಿರೋಣ ಮತ್ತು ಪ್ರಧಾನಿ ಮೋದಿ ನೇತೃತ್ವದಲ್ಲಿ ವಿದೇಶಿ ಸಾಂಕ್ರಾಮಿಕವನ್ನು ಸೋಲಿಸಲು ಒಟ್ಟಾಗಿ ಶ್ರಮಿಸೋಣ.

ಸವಾಲುಗಳನ್ನು ಮೀರಿ ನಿಂತ ಸಂತೃಪ್ತಿ

ಅಸಾಧಾರಣ ಸವಾಲುಗಳನ್ನು ಮೀರಿ ಭಾರತ ಲಸಿಕೆ ತಯಾರಿಸಿದ್ದನ್ನು ಅಲಕ್ಷಿಸು ವಂತೆಯೇ ಇಲ್ಲ. 100 ಕೋಟಿ ಲಸಿಕೆ ಪ್ರಮಾಣಗಳ ಸಾಗಾಣಿಕೆ ಪ್ರಕ್ರಿಯೆಯಲ್ಲಿ ಒಳಗೊಂಡಿರುವ ಟ್ರಕ್ ಮತ್ತು ವಿಮಾನಗಳ ಸಂಖ್ಯೆಯನ್ನು ಕಲ್ಪಿಸಿಕೊಳ್ಳಿ. 100 ಕೋಟಿ ಲಸಿಕೆ ಡೋಸ್​ಗಳನ್ನು ಸಂಗ್ರಹಿಸಲು ಅಗತ್ಯವಿರುವ ಶೀತಲೀಕರಣ ಘಟಕಗಳ ಸಂಖ್ಯೆಯನ್ನು ಕಲ್ಪಿಸಿಕೊಳ್ಳಿ. ಈ ಪ್ರಕ್ರಿಯೆಗಾಗಿ ದೂರದೂರುಗಳಿಗೆ ಸಾಗಿಸುವ ಸಿರಿಂಜ್ ಮತ್ತು ಸೂಜಿಗಳ ಸಂಖ್ಯೆಯನ್ನು ಕಲ್ಪಿಸಿಕೊಳ್ಳಿ. ಮೇಲಾಗಿ, ಭಾರತವು ಸಮಾನ ಲಸಿಕೆಯನ್ನು ಖಚಿತಪಡಿಸಲು ವಿಶ್ವದ ಅತ್ಯುತ್ತಮ ತಾಂತ್ರಿಕ ಉಪಕರಣವನ್ನೂ ಅಭಿವೃದ್ಧಿಪಡಿಸಿದೆ. ಭೌಗೋಳಿಕತೆ, ಆರ್ಥಿಕ ಸ್ಥಿತಿ, ಜಾತಿ, ಮತಗಳ ಹೊರತಾಗಿಯೂ, ಪ್ರತಿಯೊಬ್ಬ ಭಾರತೀಯನೂ ಲಸಿಕೆ ಮೇಲೆ ಸಮಾನ ಹಕ್ಕನ್ನು ಹೊಂದಿದ್ದಾನೆ. ಕೋವಿನ್ ಆಪ್ ಮತ್ತು ವೆಬ್ ಮೂಲಕ ನಿಶ್ಚಿಂತೆಯಿಂದ ಯಾವುದೇ ಸ್ಥಳದಲ್ಲೂ ಒಂದನೇ ಮತ್ತು ಎರಡನೇ ಲಸಿಕೆ ಪಡೆಯಬಹುದೆಂಬುದನ್ನೂ ಖಚಿತಪಡಿಸಲಾಯಿತು.

(ಲೇಖಕರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net