

ಆದರ್ಶ ಗೋಖಲೆ
ಜನಸಾಮಾನ್ಯರ ವ್ಯವಹಾರ ಭಾಷೆಯಾಗಿದ್ದ ಸಂಸ್ಕೃತವನ್ನು ಭಾರತೀಯರ ಮನಮಸ್ತಿಷ್ಕಗಳಿಂದ ದೂರಗೊಳಿಸದ ಹೊರತು ದೇಶವನ್ನು ದುರ್ಬಲಗೊಳಿಸುವುದು ಸಾಧ್ಯವಿಲ್ಲ ಎಂಬುದನ್ನು ಅರಿತ ಬ್ರಿಟಿಷರು ಹೂಡಿದ ‘ಮೃತಭಾಷೆ ಸಂಸ್ಕೃತ’ದ ದಾಳಕ್ಕೆ ರಾಷ್ಟ್ರದ ಆಂತರ್ಯವು ಬಲಿಯಾಗುವ ಸನ್ನಿವೇಶ ಸೃಷ್ಟಿಯಾದಾಗ ಸಂಸ್ಕೃತದ ಅನನ್ಯತೆ, ಅತುಲ್ಯಪ್ರಭೆ, ನಭರ್ಸ³ ಚೇತನತ್ವವನ್ನು ವಿಶ್ವಕ್ಕೆ ಪರಿಚಯಿಸಿದ ಆಚಾರ್ಯಶ್ರೇಷ್ಠ ಪಾಂಡುರಂಗ ವಾಮನ ಕಾಣೆ ಹಿಂದುತ್ವಪುನರುದಯದ ಆದ್ಯ ಪ್ರವರ್ತಕರು. ಹಿಂದೂಧರ್ಮದ ಶ್ರೀಮಂತ ಪರಂಪರೆಯ ಮಹಾದರ್ಶನಗೈದ ಮಹಾಮಹೋಪಾಧ್ಯಾಯ ಕಾಣೆ ನಿರ್ಣಾಯಕ ಸ್ವಾತಂತ್ರ್ಯ ಸಂಗ್ರಾಮದ ತರುವಾಯ ನಡೆದ ಜ್ಞಾನಸತ್ರದ ಅಧ್ವರ್ಯುವೂ ಹೌದು. ಮಹಾರಾಷ್ಟ್ರದ ಚಿಪಳೂಣನ ಸಂಪ್ರದಾಯಸ್ಥ, ವೈದಿಕ, ಆಯುರ್ವಿದ್ಯಾ- ಜ್ಯೋತಿರ್ವಿದ್ಯಾಪಾರಂಗತ ಕುಟುಂಬದಲ್ಲಿ 1880 ಮೇ 7ರಂದು ಜನಿಸಿದ ಕಾಣೆ ಸಹಜವಾಗಿಯೇ ಹಂಸವಾಹಿನಿಯ ಅನುಗ್ರಹಕ್ಕೆ ಪಾತ್ರರಾದರು. ವೇದ, ಉಪನಿಷತ್ತು ಹಾಗೂ ಭಗವದ್ಗೀತೆಯನ್ನು ಪೂರ್ಣಾಧ್ಯಯನಗೈದು, ಕಾನೂನು ಶಿಕ್ಷಣವನ್ನು ಪೂರ್ಣಗೊಳಿಸಿ ಆಂಗ್ಲಭಾಷೆಯಲ್ಲೇ ವಾದವ್ಯವಹಾರಗಳನ್ನು ನಡೆಸುತ್ತಿದ್ದ ಮಹಾರಾಷ್ಟ್ರದ ಪ್ರಥಮ ವ್ಯಕ್ತಿ ವಾಮನ ಕಾಣೆ. ಅಂತಹ ಪ್ರತಿಭಾಸಂಪನ್ನ ಅಪ್ಪನೆಂದರೆ ಮಗ ಪಾಂಡುರಂಗನಿಗೆ ಅಚ್ಚುಮೆಚ್ಚು, ಹೆಮ್ಮೆ, ಭಯಮಿಶ್ರಿತ ಗೌರವ. ಏಕಪಾಠಿ ಮಗನ ಅಸಾಧಾರಣ ಪ್ರತಿಭೆಯನ್ನು ಕಂಡ ಹೆತ್ತವರು ಪ್ರಾಚೀನ ಪರಂಪರೆಯ ಘನಶಿಕ್ಷಣದ ಜೊತೆಗೆ ಆಧುನಿಕ ವಿದ್ಯಾವ್ಯವಸ್ಥೆಯನ್ನೂ ಸುತನಿಗೆ ಒದಗಿಸಿದರು. ಶಿಕ್ಷಕರಾಗಿ, ಸಂಸ್ಕೃತ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಲೇ ಕಾನೂನುಪದವಿಯನ್ನೂ ಪಡೆದ ಕಾಣೆ ವೃತ್ತಿಜೀವನದೊಂದಿಗೆ ಸಂಸ್ಕೃತ ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನೂ ರಚಿಸಿದರು. ವಿದ್ವಜ್ಜನರ ಸಹವಾಸ-ಸಹಕಾರ ಮತ್ತು ಸ್ವಪರಿಶ್ರಮದಿಂದ ಉನ್ನತಾದರ್ಶಗಳ ತಳಹದಿಯಲ್ಲಿ ಜೀವನಸೌಧವನ್ನು ನಿರ್ವಿುಸಿದ ಕಾಣೆಯವರ ಬದುಕಿನ ಮಹತ್ವದ ಘಟ್ಟವೇ ಧರ್ಮಶಾಸ್ತ್ರ ಇತಿಹಾಸದ ಸಂಶೋಧನೆ. ಬಾಲ್ಯದಿಂದಲೂ ಜತೆಯಾಗಿದ್ದ ಅನಾರೋಗ್ಯವನ್ನೂ ಲೆಕ್ಕಿಸದೆ ನಡೆಸಿದ 5 ದಶಕಗಳ ನಿರಂತರ ತರ್ಕ, ಅಧ್ಯಯನ, ವಿಮರ್ಶೆಗಳ ಫಲವಾಗಿ ಮೂಡಿಬಂದ ಗ್ರಂಥರಾಶಿಯು ಹಿಂದೂ ಸಮಾಜದ ವಿವಿಧ ಘಟ್ಟಗಳ, ಹಿಂದೂ ಸಂಸ್ಕೃತಿಯ ವೈಜ್ಞಾನಿಕ ಮನೋಧರ್ಮದ ಮುಖವಾಣಿಯಾಯಿತು.
ಸತ್ಯದ ಅನ್ವೇಷಣೆಯ ಸತ್ವವಿಲ್ಲದ ಭಾರತೀಯರು ಶುದ್ಧ ಮೂರ್ಖರೆಂಬ ಕರ್ಜನನ ಹೀಯಾಳಿಕೆಗೆ, ಸಂಸ್ಕೃತ ಸಾಹಿತ್ಯವನ್ನೆಲ್ಲ ಒಟ್ಟುಗೂಡಿಸಿ ತಕ್ಕಡಿಯಲ್ಲಿಟ್ಟರೆ ಅದು ಕೇವಲ ಒಂದು ಆಂಗ್ಲ ಕವನಕ್ಕೂ ಸಮನಾಗದೆಂಬ ಮೆಕಾಲೆಯ ದುರಹಂಕಾರಕ್ಕೆ ಸಮರ್ಥ ಉತ್ತರವಾಗಿ ಹೊರಹೊಮ್ಮಿದ ಹೊತ್ತಗೆಯು ಕಾಣೆಯವರನ್ನು ವಾಲ್ಮೀಕಿ-ವ್ಯಾಸತುಲ್ಯರನ್ನಾಗಿಸಿತು. ಮಹಾಕವಿ ಕಾಳಿದಾಸನ ‘ಸಂತಃ ಪರೀಕ್ಷ್ಯಾನ್ಯತರದ್ಭಜಂತೇ’ ಎಂಬ ಮಾತನ್ನು ಯಥಾವತ್ತಾಗಿ ಪಾಲಿಸಿ, ನಾಲ್ಕು ಸಹಸ್ರವರ್ಷಗಳ ಆರ್ಯಾವರ್ತದ ಧಾರ್ವಿುಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಉದ್ಯಾನಾವಯಾನ ಪರಿಷ್ಕಾರಗಳನ್ನು ಉತ್ಕೃಷ್ಟವಾಗಿ ನಿರೂಪಿಸಿದರು. ಧರ್ಮಸೂಕ್ಷ್ಮಗಳ ಪ್ರಶ್ನೆ ಬಂದಾಗ ಭಾರತೀಯರೂ, ಪಾಶ್ಚಿಮಾತ್ಯರೂ ಕಾಣೆಯವರ ಮತವನ್ನೇ ಅನುಸರಿಸುವುದು ವಿದ್ವನ್ಮಣಿಯ ಧ್ಯೇಯನಿಷ್ಠೆ, ಕರ್ತವ್ಯತತ್ಪರತೆ, ಕಾರ್ಯಶ್ರದ್ಧೆಗೆ ಸಾಕ್ಷಿ. ಆಡುಮುಟ್ಟದ ಸೊಪ್ಪಿಲ್ಲ ಎಂಬಂತೆ ಪಿ.ವಿ.ಕಾಣೆಯವರು ಬರೆಯದ ಕ್ಷೇತ್ರವಿಲ್ಲ. ಧರ್ಮ-ಸಾಹಿತ್ಯಗಳೊಂದಿಗೆ ಭಾರತದ ಭೌಗೋಳಿಕ ಅಧ್ಯಯನ, ವ್ಯಾಕರಣ, ಭಾಷಾಶಾಸ್ತ್ರ, ಅರ್ಥಶಾಸ್ತ್ರ, ಬರಹವಿಧಾನ, ಗಣಿತ, ನಾಟಕ, ಖಗೋಳಶಾಸ್ತ್ರ ಇತ್ಯಾದಿ ವಿಭಾಗಗಳಲ್ಲೂ ತಮ್ಮ ಪ್ರಕಾಂಡ ಪಾಂಡಿತ್ಯವನ್ನು ನಿರೂಪಿಸಿದ್ದಾರೆ. ಹರ್ಷಚರಿತ, ಉತ್ತರರಾಮಚರಿತ, ಅಲಂಕಾರಶಾಸ್ತ್ರ, ರಾಮಾಯಣ-ಮಹಾಭಾರತದ ಸಾಮಾಜಿಕ ಸ್ಥಿತಿಗತಿಗಳೇ ಮೊದಲಾಗಿ ಪ್ರಾಚೀನ ಚಿಂತನೆಗಳನ್ನೂ, ಕಾವ್ಯನಾಟಕಗಳ ಸಮದರ್ಶಿತ್ವವನ್ನೂ ಪ್ರತಿಪಾದಿಸಿದ ವೇದಾಂತಕೇಸರಿ ಕಾಣೆ ಉನ್ನತ ಯೋಚನೆ-ಸರಳ ಬದುಕಿಗೊಂದು ಉದಾಹರಣೆ. ಕಾಲ ಮುಂದೆ ಹೋದಂತೆ ಬದಲಾವಣೆಗಳಿಗೂ ಒಗ್ಗಿಕೊಂಡು ಬೆಳೆದರೆ ಮಾತ್ರ ಸವಾಲುಗಳಿಗೆ ಉತ್ತರಿಸಬಹುದೆಂಬ ನೀತಿಯನ್ನು ಪ್ರತಿಪಾದಿಸಿದ ಅವರು ಮಹಿಳಾಶಿಕ್ಷಣ, ಸಮಾನತೆ, ಮತಸಮನ್ವಯದ ಬಗೆಗಿದ್ದ ಕುಕಲ್ಪನೆಗಳನ್ನು ದೂರವಾಗಿಸುವ ಪ್ರಯತ್ನಗಳನ್ನೂ ನಡೆಸಿದರು.
ಪ್ರಾಚೀನಮೌಲ್ಯಗಳ ಶೋಧನೆಯೊಂದಿಗೆ ಅನುಷ್ಠಾನದ ಅಗತ್ಯವನ್ನೂ ಪ್ರತಿಪಾದಿಸಿ, ಅನ್ಯರ ಆಕ್ರಮಣದ ವಿರುದ್ಧ ಸೆಣಸಲು ಸ್ವೀಕರಿಸಿದ ನಿಲುವುಗಳು ಮೌಢ್ಯವಾಗಿ ಪರಿವರ್ತಿತವಾದುದರ ಬಗ್ಗೆ ಜನಸಾಮಾನ್ಯರ ಗಮನ ಸೆಳೆದರು. ಲೋಕಮಾನ್ಯ ತಿಲಕರ ಸುಧಾರಣಾ ಮೇಲ್ಪಂಕ್ತಿಯನ್ನು ವೇದೋಕ್ತ ನೀತಿಗಳ ಉದಾಹರಣೆಗಳೊಂದಿಗೆ ಉನ್ನತಸ್ತರಕ್ಕೇರಿಸಿದ ಕೀರ್ತಿಗೆ ಭಾಜನರಾದರು. ಜ್ಞಾನಿಗೆ ವಿದ್ವನ್ಮಾನ್ಯತೆಗಿಂತ ಮಿಗಿಲಾದ ಗೌರವ ಬೇರೆ ಬೇಕಿಲ್ಲ. ಆಡಂಬರ, ಗರ್ವದ ಜೀವನಕ್ಕೆ ವಿರುದ್ಧವಾಗಿಯೇ ಬದುಕು ಕಟ್ಟಿದ್ದ ಮಹಾವಿದ್ವಾಂಸ ಕಾಣೆ 1963ರಲ್ಲಿ ಅರ್ಹವಾಗಿಯೇ ‘ಭಾರತರತ್ನ’ ಪ್ರಶಸ್ತಿಯಿಂದ ಪುರಸ್ಕೃತರಾದರು. ಮುಂಬೈ ವಿಶ್ವವಿದ್ಯಾಲಯದ ಕುಲಪತಿಗಳಾಗಿ, ಕುರುಕ್ಷೇತ್ರ ವಿಶ್ವವಿದ್ಯಾಲಯದ ಸ್ಥಾಪಕ ಮಾರ್ಗದರ್ಶಕರಾಗಿ, ರಾಜ್ಯಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿ ನಡೆದಾಡುವ ವಿಶ್ವಕೋಶವೆಂದೇ ಪ್ರಸಿದ್ಧರಾದ ಪಿ.ವಿ.ಕಾಣೆ ಆಧುನಿಕ ಕಾಲದ ಋಷಿ. ಜನಭಾಷೆ ಸಂಸ್ಕೃತದ ಹಿರಿಮೆ ಗರಿಮೆಗಳನ್ನು, ವಿಶ್ವಕಲ್ಯಾಣದ ಕೀರ್ತಿಗಾಥೆಯನ್ನು ವಿದೇಶೀ ಆಳ್ವಿಕೆಯ ವಿರೋಧಿ ಕಾಲದಲ್ಲೇ ಎತ್ತಿಹಿಡಿದು ವಿಶ್ವಮಾನ್ಯರಾದ ಮಹಾಮಹಿಮನ ಜನ್ಮದಿನದಂದು, ಭಾರತೀಯ ಉದಾತ್ತ ಮೌಲ್ಯಗಳ ಬೆಳಕಿನಲ್ಲಿ ನವಭಾರತದ ನೀಲಿನಕಾಶೆಯನ್ನು ಸಿದ್ಧಪಡಿಸುವ ಸಂಕಲ್ಪ ನಮ್ಮೆಲ್ಲರದಾಗಲಿ.
(ಲೇಖಕರು ಉಪನ್ಯಾಸಕರು)