

ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆಯು ದಕ್ಷಿಣದ ಕುಂಭಮೇಳ ಎಂದು ಪ್ರಸಿದ್ಧವಾಗಿದ್ದರೆ; ಅದೇ ನಾಡಿನನಲ್ಲಿರುವ ಉಟಕನೂರಿನ ಶ್ರೀ ಮರಿಬಸವಲಿಂಗ ತಾತನವರ ಜಾತ್ರಾ ಮಹೋತ್ಸವವು ಮಿನಿ ಕೊಪ್ಪಳದ ಜಾತ್ರೆ ಎಂದು ಪ್ರಸಿದ್ಧವಾಗಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿರುವ ಉಟಕನೂರು ಶ್ರೀ ಅಡವಿಸಿದ್ಧೇಶ್ವರ ಮಠದ ಪವಾಡಪುರುಷರಾಗಿದ್ದ ಶ್ರೀ ಮರಿಬಸವಲಿಂಗ ತಾತನವರು ರಾಯಚೂರು, ಕೊಪ್ಪಳ, ಸೇರಿದಂತೆ ಹೈದರಾಬಾದ್ ಕರ್ನಾಟಕ ಭಾಗದ ಆರಾಧ್ಯ ದೈವ. ಶ್ರೀ ಗುರು ಬಸವಲಿಂಗ ದೇಶಿಕೇಂದ್ರ ಸ್ವಾಮಿಗಳಿಂದ ಆರಂಭವಾದ ಉಟಕನೂರು ಮಠದ ಪರಂಪರೆಯಲ್ಲಿ ಬಂದ ಶ್ರೀ ಮರಿಬಸವಲಿಂಗ ತಾತನವರ ಕಾಲಘಟ್ಟ ಪ್ರಮುಖವಾಗಿದೆ. ಧರ್ಮಪ್ರಚಾರದಲ್ಲಿ ಸಾಮಾನ್ಯರು ಮಾಡಲಾಗದ ದೊಡ್ಡ ಸಾಧನೆಗೈದಿದ್ದ ಪೂಜ್ಯರು; ನೂರಾರು ಗ್ರಾಮಗಳಲ್ಲಿ ಬಸವೇಶ್ವರರ ಮೂರ್ತಿಗಳನ್ನು ಸ್ಥಾಪಿಸಿದ್ದರು. ಅಲ್ಲದೆ ಈ ಭಾಗದಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ಶಾಖಾಮಠಗಳನ್ನು ಸ್ಥಾಪನೆ ಮಾಡಿದ್ದರು. ಹೀಗೆ ಮರಿಬಸವಲಿಂಗ ಸ್ವಾಮಿಗಳು ಸ್ಥಾಪಿಸಿದ ಶಾಖಾಮಠಗಳಲ್ಲಿ ವರ್ಷಪೂರ್ತಿ ಜಾತ್ರೆ ನಡೆಯುತ್ತವೆ. ಅಂತಿಮವಾಗಿ ಶ್ರೀ ಮರಿಬಸವಲಿಂಗ ತಾತನವರ ಮೂಲಸ್ಥಾನವಾಗಿರುವ ಉಟಕನೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಜಾತ್ರೆ ಮತ್ತು ರಥೋತ್ಸವ ನಡೆಯುತ್ತದೆ. ಎಲ್ಲ ಭಾಗಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ತಾತನ ಜಾತ್ರೆಗೆ ಆಗಮಿಸುತ್ತಾರೆ. ಈ ಕಾರಣದಿಂದಲೇ ರಾಯಚೂರು ಜಿಲ್ಲೆಯಲ್ಲಿ ನಡೆಯುವ ಜಾತ್ರೆಗಳಲ್ಲೇ ಉಟಕನೂರು ತಾತನ ಜಾತ್ರೆ ಪ್ರಸಿದ್ಧವಾಗಿದೆ. ಶ್ರೀ ಮರಿಬಸವಲಿಂಗ ತಾತನವರು ಜನರನ್ನು ನಿರಂತರ ಜಾಗೃತಗೊಳಿಸಿ ಕಾಯಕದ ಮಹತ್ವವನ್ನು ತಿಳಿಸುತ್ತಿದ್ದರು. ಮಾತಿಗಿಂತ ಕೃತಿಗೆ ಹೆಚ್ಚಿನ ಒತ್ತು ನೀಡಿದ್ದರು. ಗ್ರಾಮೀಣಪ್ರದೇಶಗಳಲ್ಲಿ ನಿರಂತರ ಸಂಚರಿಸಿ ಧಾರ್ವಿುಕ ಬೋಧನೆಯ ಜತೆಗೆ ಸಾಮಾಜಿಕವಾಗಿ ಮನುಷ್ಯಜನ್ಮದ ಸಾರ್ಥಕತೆಗೆ ಮಾರ್ಗ ತೋರಿಸಿದ್ದರು. ಕಾಯಕದಿಂದಲೇ ಜೀವನ್ಮುಕ್ತಿ ಎಂಬ ಶರಣರ ಮಾತನ್ನು ಸಾರಿ ಹೇಳುತ್ತಿದ್ದ ಪೂಜ್ಯರು ಭಕ್ತರಿಗೆ ಸ್ವತಃ ಕೃಷಿ ಋಷಿಯಾಗಿ ಮಾರ್ಗದರ್ಶನ ಮಾಡಿದ್ದರು.
ಆಧ್ಯಾತ್ಮಿಕವಾಗಿಯು ಅಷ್ಟೇ ಶಕ್ತಿ ಸಂಪಾದಿಸಿಕೊಂಡಿದ್ದ ಪೂಜ್ಯರು ತಮ್ಮ ತಪಸ್ಸು ಮತ್ತು ಅನುಷ್ಠಾನದ ಮೂಲಕ ಹಲವು ಪವಾಡವನ್ನು ಮಾಡಿ ತೋರಿಸಿದ್ದರು. ಲಿಂಗಸುಗೂರು ತಾಲೂಕಿನ ಮುಸ್ಲಿ ಕಾರನಕುಂಟೆ ಎಂಬ ಗ್ರಾಮದಲ್ಲಿ ಬರಗಾಲ ತಲೆದೋರಿತ್ತು. ಆಗ ಮರಿಬಸವಲಿಂಗ ತಾತನವರು ಒಂದು ವಾರದಲ್ಲಿ ಮಳೆ ಬರಲಿದೆ ಎಂದು ಸಂಕಲ್ಪ ಮಾಡಿ ಅನುಷ್ಠಾನ ಕೈಗೊಂಡು ಒಂದು ವಾರ ನಿರಂತರ ಭಜನಾ ಸಪ್ತಾಹವನ್ನು ಮಾಡಿದರು. ಶ್ರೀಗಳ ಸಂಕಲ್ಪದಂತೆ ಒಂದು ವಾರದಲ್ಲಿ ಮಳೆ ಸುರಿದು ಅಲ್ಲಿನ ಬರಗಾಲ ನಿವಾರಣೆಯಾಯಿತು. ಅಂದಿನಿಂದ ಕಾರನಕುಂಟೆಯ ಭಕ್ತರು ಮರಿಬಸವಲಿಂಗ ತಾತನವರ ಜಾತ್ರೆ ನಡೆಸಿಕೊಂಡು ಬರುತ್ತಿದ್ದಾರೆ. ಆ ಕಾರಣದಿಂದಲೇ ಈ ಭಾಗದಲ್ಲಿರುವ ರೈತಸಮುದಾಯದವರು 15 ದಿನಕ್ಕಿಂತ ಹೆಚ್ಚು ಕಾಲ ನಡೆಯುವ ಉಟಕನೂರಿನ ಜಾತ್ರೆಗೆ ತಪ್ಪದೆ ಆಗಮಿಸುತ್ತಾರೆ.
ಹೈದರಾಬಾದ್ ಕರ್ನಾಟಕದ ಬೃಹತ್ ಉತ್ಸವ
ಮರಿಬಸವಲಿಂಗಸ್ವಾಮಿ ರಥೋತ್ಸವ: ಸದ್ಯದ ಪೀಠಾಧಿಪತಿಗಳಾದ ಶ್ರೀ ಮರಿಬಸವರಾಜ ದೇಶಿಕೇಂದ್ರ ಸ್ವಾಮಿಗಳು ಧಾರ್ವಿುಕದ ಜೊತೆಗೆ ಸಾಮಾಜಿಕವಾಗಿಯೂ ಶ್ರೀಮಠವನ್ನು ಬೆಳೆಸಿದ್ದಾರೆ. ಜಾತ್ರಾ ಮಹೋತ್ಸವದ ಅಂಗವಾಗಿ ಉಟಕನೂರು ಮಠದಲ್ಲಿ ಕಳೆದ ಹದಿನೈದು ದಿನಗಳಿಂದ ವಿವಿಧ ಧಾರ್ವಿುಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ಡಿ. 31ರಿಂದ ಆರಂಭವಾಗಿರುವ ಪುರಾಣಪ್ರವಚನವು ಜ. 16ರಂದು ಮಂಗಲಗೊಳ್ಳುತ್ತದೆ. 17ರಂದು ಶ್ರೀ ಮರಿಬಸವಲಿಂಗ ಶಿವಯೋಗಿಗಳ ಕರ್ತೃಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ ನಡೆಯಲಿದೆ. ನಂತರ ವಿವಿಧ ಮಂಗಲವಾದ್ಯಗಳೊಂದಿಗೆ ಮುತ್ತೈದೆಯರ ಕುಂಭೋತ್ಸವದ ಸಹಿತ ಉತ್ಸವಮೂರ್ತಿಯ ಪಲ್ಲಕ್ಕಿ ಉತ್ಸವ ಜರುಗಲಿದ್ದು, ಸಂಜೆ ಬೃಹತ್ ಹೂವಿನ ರಥೋತ್ಸವ ನಡೆಯಲಿದೆ.
ಪ್ರಶಾಂತ ರಿಪ್ಪನ್ಪೇಟೆ