ಗೂಢಚಾರಿಕೆಯ ಉಸ್ತಾದ್ ಮೊಸಾದ್!

Column F
Published on
1972ರ ಮ್ಯೂನಿಕ್ ಒಲಿಂಪಿಕ್ಸ್ ಸಂದರ್ಭದಲ್ಲಿ ಪ್ಯಾಲೆಸ್ತೈನ್​ನ ‘ಬ್ಲ್ಯಾಕ್​ ಸೆಪ್ಟೆಂಬರ್’ ಸಂಘಟನೆಯ ಉಗ್ರರು ಇಸ್ರೇಲ್ ಕ್ರೀಡಾಪಟುಗಳನ್ನು ಹತ್ಯೆ ಮಾಡಿದರು. ಇದಕ್ಕೆ ಪ್ರತೀಕಾರವಾಗಿ ‘ಆಪರೇಷನ್ ರಾತ್ ಆಫ್ ಗಾಡ್’ (ಭಗವಂತನ ಪ್ರತೀಕಾರ) ಕಾರ್ಯಾಚರಣೆ ನಡೆಸಿದ ಮೊಸಾದ್, ಮ್ಯೂನಿಕ್ ಹತ್ಯಾಕಾಂಡಕ್ಕೆ ಕಾರಣರಾದ ಎಲ್ಲ ಮಾಸ್ಟರ್​ಮೈಂಡ್​ಗಳನ್ನು ಬೇರೆ ಬೇರೆ ದೇಶಗಳಲ್ಲಿ ಹುಡುಕಿ ಕೊಂದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜಕೀಯದ ಜತೆ ಕೃಷಿಸಂಬಂಧಿ ವಿಚಾರಗಳನ್ನೂ ಆಗೀಗ ಮುನ್ನೆಲೆಗೆ ತರುತ್ತಿರುತ್ತಾರೆ. ಸದ್ಯ ಬಿಡದಿ ಸನಿಹದ ಕೇತಗಾನಹಳ್ಳಿಯ ತಮ್ಮ ತೋಟದ ಮನೆಯಲ್ಲಿ ವಾಸ್ತವ್ಯ ಹೂಡಿರುವ ಅವರು, ಕೃಷಿಯಲ್ಲೂ ತೊಡಗಿಸಿಕೊಂಡಿರುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ಇಸ್ರೇಲ್ ಕೃಷಿಯ ಪ್ರಯೋಗವನ್ನೂ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಇದು ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆಂಬುದನ್ನು ಕಾದುನೋಡಬೇಕಷ್ಟೆ. ಕುಮಾರಸ್ವಾಮಿ ಮಾತ್ರ ಎಂದಲ್ಲ, ಅನೇಕ ಸಂದರ್ಭಗಳಲ್ಲಿ ನಮ್ಮಲ್ಲಿ ಇಸ್ರೇಲ್ ಕೃಷಿ ವಿಷಯ ಪ್ರಸ್ತಾಪ ಆಗುತ್ತಿರುತ್ತದೆ. ನಮ್ಮಲ್ಲಿನ ರೈತರನ್ನು ಅಲ್ಲಿಗೆ ಅಧ್ಯಯನಕ್ಕಾಗಿ ಕರೆದೊಯ್ಯಲಾಗುತ್ತದೆ. ಕೇವಲ ಒಂದು ಕೋಟಿಯಷ್ಟು ಜನಸಂಖ್ಯೆ ಹೊಂದಿರುವ, 20-22 ಸಾವಿರ ಚದರ ಕಿಲೋಮೀಟರ್ ವಿಸ್ತೀರ್ಣ ಉಳ್ಳ ಇಸ್ರೇಲ್, ಕೃಷಿ ವಿಷಯದಲ್ಲಿ ಇಷ್ಟೆಲ್ಲ ಗಮನಸೆಳೆಯುವುದಾದರೂ ಏಕೆ? ಕಾರಣ ಸರಳ. ‘ಅನಿವಾರ್ಯತೆಯು ಅನ್ವೇಷಣೆಗಳ ತಾಯಿ’ ಎಂಬ ಮಾತಿದೆ. ಜನರಿಗೆ ತಮಗೆ ಯಾವುದು ಕೊರತೆ ಅನಿಸುತ್ತದೆಯೋ ಅದನ್ನು ಪರಿಹರಿಸಿಕೊಳ್ಳಲು ಹೊಸ ಹೊಸ ಆವಿಷ್ಕಾರಗಳತ್ತ ಚಿತ್ತ ನೆಡುತ್ತಾರೆ. ಇಸ್ರೇಲ್​ಗೆ ಆದದ್ದೂ ಹೀಗೇ. ಮರಳುಗಾಡು ಪ್ರದೇಶವಾದ ಅಲ್ಲಿ ಜಲಪ್ರದೇಶದ ಪ್ರಮಾಣ ಕೇವಲ ಶೇ.2.7ರಷ್ಟು ಇದೆ. ಇದಲ್ಲದೆ, ಜೋರ್ಡಾನ್ ನದಿಯೊಂದೇ ನೀರಿನ ಆಸರೆ. ಈ ನದಿ ಇಸ್ರೇಲ್, ಲೆಬನಾನ್ ಮತ್ತು ಸಿರಿಯಾ ಗಡಿಭಾಗದಲ್ಲಿ ಉಗಮಿಸುತ್ತದೆ. ಈ ಮೂರು ದೇಶಗಳಲ್ಲದೆ ಜೋರ್ಡಾನ್ ಕೂಡ ಈ ನದಿಯನ್ನು ಅವಲಂಬಿಸಿರುವುದರಿಂದ ಈ ನಾಲ್ಕು ದೇಶಗಳ ನಡುವೆ ಜಲಜಗಳ ಇದ್ದಿದ್ದೇ. ಆದ್ದರಿಂದ, ಕಡಿಮೆ ನೀರಿನಲ್ಲಿ ಕೃಷಿ ಮಾಡುವ ಅನಿವಾರ್ಯತೆ ಇಸ್ರೇಲಿಗಿದೆ. ಹೀಗಾಗಿಯೇ ಕೃಷಿಯಲ್ಲಿ ಸಂಶೋಧನೆಗಳು ನಡೆದು, ಹೊಸಹೊಸ ವಿಧಾನಗಳು ಪ್ರಚಲಿತಕ್ಕೆ ಬಂದಿದ್ದು. ಅಧಿಕ ಬೆಳೆ ನೀಡುವ ತಳಿಗಳನ್ನು ಕೂಡ ಅಲ್ಲಿ ಸಂಶೋಧಿಸಲಾಯಿತು. ಉದಾಹರಣೆಗೆ- ಟೊಮೆಟೊ ಗಿಡದಲ್ಲಿ ಎಲೆಗಳಿಗಿಂತ ಹೆಚ್ಚು ಒತ್ತಾಗಿ ಕಾಯಿಗಳು ಬಿಡುವಂಥ ತಳಿಗಳೂ ಇವೆ. ಹಾಗಂತ ಭಾರತವೇನು ಕೃಷಿಯಲ್ಲಿ ಹಿಂದಿಲ್ಲ. ಇಲ್ಲಿಯೂ ಅಭಿವೃದ್ಧಿಯಾಗಿದೆ; ಪ್ರಗತಿಪರ, ಅನ್ವೇಷಕ ಮನೋಭಾವದ ರೈತರು ನಮ್ಮಲ್ಲೂ ಬೇಕಷ್ಟು ಇದ್ದಾರೆ. ಆದರೆ ಇಸ್ರೇಲಿನಂತೆ ನಮ್ಮಲ್ಲಿ ಸಹ ಒಣಭೂಮಿ ಸಾಕಷ್ಟು ಪ್ರಮಾಣದಲ್ಲಿ ಇರುವುದರಿಂದಾಗಿ, ಕಡಿಮೆ ನೀರು ಬಳಸಿ ಕೃಷಿ ಮಾಡುವುದು ಲಾಭದಾಯಕವಾಗುತ್ತದೆ. ಅದೂ ಅಲ್ಲದೆ, ಕಡಿಮೆ ಜಾಗದಲ್ಲಿ ಹೆಚ್ಚು ಬೆಳೆ ತೆಗೆಯುವ ಪದ್ಧತಿ ರೂಢಿಸಿಕೊಂಡರೆ, ದೊಡ್ಡ ಜನಸಂಖ್ಯೆಗೆ ಆಹಾರ ನೀಡಲು ಸಹ ಅನುಕೂಲವಾಗುತ್ತದೆ.

ಇಲ್ಲಿ ಇನ್ನೂ ಒಂದು ಆಯಾಮವಿದೆ. ಈಗಿನ ಕಾಲದಲ್ಲಿ ಕೃಷಿಯನ್ನು ಆರ್ಥಿಕ ದೃಷ್ಟಿಕೋನದಿಂದ ನೋಡುವುದು ಅನಿವಾರ್ಯ ಎಂಬ ಸನ್ನಿವೇಶ ಸೃಷ್ಟಿಯಾಗಿದೆ. ನಮಗೆ ಕೃಷಿ ಎಂಬುದು ಜೀವನೋಪಾಯದ ಜತೆಗೆ (ಹೀಗಾಗೇ ‘ಭೂಮಿತಾಯಿ ನಂಬಿದವರ ಕೈಬಿಡಲ್ಲ’ ಎಂಬ ವಾಡಿಕೆಯ ಮಾತು ಇರುವುದು) ಅದೊಂದು ಸಂಸ್ಕೃತಿ ಮತ್ತು ಭಾವನೆ ಕೂಡ. ಇದೇನೇ ಇರಲಿ, ಮತ್ತೊಂದು ಕಾರಣಕ್ಕೆ ಸಹ ಇಸ್ರೇಲ್ ಜಗತ್ತಿನ ಗಮನವನ್ನು ಸೆಳೆಯುತ್ತದೆ. ಅದು-ದೇಶರಕ್ಷಣೆಯ ವಿಷಯ. ‘ಅನಿವಾರ್ಯತೆಯು ಸಂಶೋಧನೆಗಳ ತಾಯಿ’ ಎಂಬ ಮಾತು ಈ ವಿಷಯಕ್ಕೂ ಅನ್ವಯಿಸುತ್ತದೆ. ದೇಶರಕ್ಷಣೆ ವಿಷಯದಲ್ಲಿ ಮೈಯೆಲ್ಲ ಕಣ್ಣಾಗಿರಬೇಕಾದುದು ಮತ್ತು ಯಾವುದೇ ಸನ್ನಿವೇಶ ಎದುರಿಸಲು ಸದಾ ಸನ್ನದ್ಧವಾಗಿರಬೇಕಾದುದು ಇಸ್ರೇಲಿಗೆ ಅನಿವಾರ್ಯ ಅಗತ್ಯ. ಸುತ್ತೆಲ್ಲ ವೈರಿದೇಶಗಳೇ ತುಂಬಿಕೊಂಡರೆ ಎಷ್ಟು ಎಚ್ಚರದಿಂದ ಇದ್ದರೂ ಕಡಿಮೆಯೇ. ಈ ಅನಿವಾರ್ಯತೆಯೇ ಇಸ್ರೇಲಿನ ರಕ್ಷಣಾ ಬಲವನ್ನು ಮತ್ತು ಕಾದುವಬಲವನ್ನು ಹೆಚ್ಚಿಸಲು ಕಾರಣವಾಗಿರಬೇಕು. ಇಸ್ರೇಲ್ ಭೂಪಟ ಚೂಪು ಅಲಗಿನ ಕತ್ತಿಯಂತೆ ಭಾಸವಾಗುತ್ತದೆ. ಒಂದರ್ಥದಲ್ಲಿ ಅದು ಚೂಪು ಅಲಗಿನ ಕತ್ತಿಯ ಮೇಲೇ ಕುಳಿತಿದೆ. ಆ ದೇಶದ ದಕ್ಷಿಣದಲ್ಲಿ ಈಜಿಪ್ಟ್ ಹಾಗೂ ಸೌದಿ ಅರೇಬಿಯಾ ಇವೆ. ಪೂರ್ವದಲ್ಲಿ ಜೋರ್ಡಾನ್, ಈಶಾನ್ಯದಲ್ಲಿ ಸಿರಿಯಾ ಮತ್ತು ಉತ್ತರದಲ್ಲಿ ಲೆಬನಾನ್ ಇವೆ. ಹೀಗೆ ಅರಬ್ ದೇಶಗಳಿಂದ ಸುತ್ತುವರಿದಿರುವ ಇಸ್ರೇಲಿಗೆ ರಕ್ಷಣಾ ಬೆದರಿಕೆ ಸದಾ ಇದ್ದುದೇ. ಅದು ಎಷ್ಟರಮಟ್ಟಿಗೆಂದರೆ, ಇಸ್ರೇಲ್ ಜನನವಾದ 1948ರ ಮೇ 15ರ ಮರುದಿನವೇ ನೆರೆಹೊರೆಯ ಜೋರ್ಡಾನ್, ಸಿರಿಯಾ, ಲೆಬನಾನ್ ಮತ್ತು ಈಜಿಪ್ಟ್​ನಿಂದ ದಾಳಿಗೊಳಗಾಯಿತು. ಇಸ್ರೇಲನ್ನು ಆರಂಭದಲ್ಲೇ ಮಣಿಸಿ ಆ ದೇಶವನ್ನು ಭೂಪಟದಿಂದ ಇಲ್ಲವಾಗಿಸಬೇಕೆಂಬುದು ಅವುಗಳ ಇರಾದೆಯಾಗಿತ್ತು. ಆದರೆ ಅವು ಇಸ್ರೇಲ್ ಬಲವನ್ನು ತಪ್ಪಾಗಿ ಅಂದಾಜಿಸಿದ್ದವು. ಸಮರದಲ್ಲಿ ಅವು ಪರಾಜಯ ಕಾಣಬೇಕಾಯಿತು.

ಇಸ್ರೇಲ್ ವಿರುದ್ಧ ಅರಬ್ ದೇಶಗಳಿಗೆ ಯಾಕೆ ದ್ವೇಷ ಎಂಬುದಕ್ಕೆ ಐತಿಹಾಸಿಕ ಕಾರಣಗಳಿವೆ. ಇದು ಸುದೀರ್ಘ ಇತಿಹಾಸ. ಯಹೂದಿಗಳ ಪ್ರಾಚೀನ ನಾಡಾದ ಇಸ್ರೇಲನ್ನು ಅರಬ್ಬರು ವಶಕ್ಕೆ ಪಡೆದಿದ್ದರು. ಅಲ್ಲಿ ಇಸ್ಲಾಮ್ ಮೇಲುಗೈ ಸಾಧಿಸಿತ್ತು. ಆದರೆ ಸ್ವದೇಶದ ಕನಸು ಕಂಡ ಯಹೂದಿಗಳು ತಾಯ್ನಾಡಿನತ್ತ ಬರಲಾರಂಭಿಸಿದಾಗ, ಪ್ಯಾಲೆಸೆôನ್ ಎಂದು ಕರೆಸಿಕೊಳ್ಳುತ್ತಿದ್ದ ಅಲ್ಲಿನ ಅರಬರಿಗೂ, ಯಹೂದಿಗಳಿಗೂ ಘರ್ಷಣೆ ಶುರುವಾಯಿತು. ಕೊನೆಗೂ 1948ರಲ್ಲಿ ಇಸ್ರೇಲ್ ಸ್ವತಂತ್ರ ದೇಶವಾಗಿ ಅಸ್ತಿತ್ವಕ್ಕೆ ಬಂತು. ಆದರೆ ಅರಬ್ ದೇಶಗಳ ಕೋಪ ಮುಂದುವರಿಯಿತು. ಈ ನಡುವೆ, 1964ರಲ್ಲಿ ಪ್ಯಾಲೆಸೆôನ್ ವಿಮೋಚನಾ ರಂಗ (ಪಿಎಲ್​ಓ) ರಚನೆಯಾಯಿತು; ಘರ್ಷಣೆ ಮತ್ತಷ್ಟು ತೀವ್ರ ಸ್ವರೂಪ ಪಡೆಯಿತು. ಕೊನೆಗೂ, 1993ರಲ್ಲಿ ಇಸ್ರೇಲ್ ಮತ್ತು ಪ್ಯಾಲೆಸೆôನಿಯರ ನಡುವೆ ನಡೆದ ಒಪ್ಪಂದದಂತೆ, ಪ್ಯಾಲೆಸೆôನ್ ಉಗಮವಾಯಿತು. ಹೀಗಿದ್ದರೂ, ಪರಿಸ್ಥಿತಿ ತಣ್ಣಗಾಗಲಿಲ್ಲ. ಯಹೂದಿಗಳು ವಶಪಡಿಸಿಕೊಂಡಿರುವ ತಮ್ಮ ಪ್ರದೇಶವನ್ನು ಮರಳಿ ಪಡೆಯಬೇಕೆಂದು ಪ್ಯಾಲೆಸೆôನ್ ಸಂಘಟನೆಗಳು ಯತ್ನ ಮುಂದುವರಿಸಿಯೇ ಇವೆ. ಅಂದಹಾಗೆ, ಇಸ್ರೇಲಿನ ಜೆರುಸಲೇಮ್ ನಗರವು ಯಹೂದಿಗಳು, ಕ್ರಿಶ್ಚಿಯನ್ನರು ಮತ್ತು ಮತ್ತು ಮುಸ್ಲಿಮರು ಈ ಮೂರೂ ಜನಾಂಗಗಳಿಗೆ ಪವಿತ್ರವಾದುದು. ಈ ಮೂರು ಧರ್ಮಗಳ ಇತಿಹಾಸದ ಪ್ರಮುಖ ಘಟನಾವಳಿಗಳು ಇಲ್ಲಿನ ನೆಲದೊಂದಿಗೆ ಹೆಣೆದುಕೊಂಡಿವೆ.

ಇಸ್ರೇಲ್​ನಲ್ಲಿ 18 ವರ್ಷ ಆದ ಎಲ್ಲ ನಾಗರಿಕರು ಕಡ್ಡಾಯವಾಗಿ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂಬ ನಿಯಮ ಇದೆ. ಇದು ಅಲ್ಲಿನ ಜನರಲ್ಲಿ ದೇಶಪ್ರೇಮ, ಶಿಸ್ತು, ದೇಶದ ಬಗೆಗೆ ಬದ್ಧತೆಯ ಗುಣಗಳನ್ನು ಬೆಳೆಸುವ ಜತೆಗೆ, ದೇಶಕ್ಕೆ ಇರುವ ಅಪಾಯಗಳ ಬಗೆಗೆ ಜನರು ಹೆಚ್ಚು ಜಾಗರೂಕರಾಗಿರುವಂತೆ ಮಾಡಿದೆ. ಈ ಅಂಶವು ಸಹ ಇಸ್ರೇಲಿನ ರಕ್ಷಣಾ ವಿಷಯದಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಅಂತಾರಾಷ್ಟ್ರೀಯ ವಿಶ್ಲೇಷಕರು ಹೇಳುತ್ತಾರೆ. ಮತ್ತೊಂದು ಮುಖ್ಯ ಕಾರಣ ಅಲ್ಲಿನ ಬಾಹ್ಯ ಗೂಢಚರ ದಳ ಮೊಸಾದ್. 1949ರ ಡಿಸೆಂಬರ್ 13ರಂದು ಅಸ್ತಿತ್ವಕ್ಕೆ ಬಂದ ಈ ದಳ ಜಾಗತಿಕವಾಗಿ ಹೆಸರುವಾಸಿ. ವಿಶ್ವದ ಯಾವ ಮೂಲೆಗಾದರೂ ಹೋಗಿ, ಎದುರಾಳಿಯ ಹೆಡೆಮುರಿ ಕಟ್ಟುವುದು ಅಥವಾ ಫಿನಿಷ್ ಮಾಡುವುದು ಮೊಸಾದ್​ಗೆ ಸಲೀಸು. ಈ ಮೊಸಾದ್​ನ ರೋಚಕ ಕಾರ್ಯಾಚರಣೆಗಳನ್ನು ಕಟ್ಟಿಕೊಡುವ ‘ಪ್ರತೀಕಾರ’ ಎಂಬ ಕೃತಿ ಕನ್ನಡದಲ್ಲಿ ಈಗ ಪ್ರಕಟವಾಗಿದೆ. ಇದರ ಲೇಖಕರು ಮಾಜಿ ಪೊಲೀಸ್ ಅಧಿಕಾರಿ, ವಿಜಯವಾಣಿ ಅಂಕಣಕಾರ ಡಾ.ಡಿ.ವಿ.ಗುರುಪ್ರಸಾದ್. ಐಪಿಎಸ್ ಅಧಿಕಾರಿಯಾಗಿದ್ದ ಅವರಿಗೆ ಗೂಢಚಾರನಾಗಬೇಕೆಂಬ ಆಸೆ ಚಿಕ್ಕಂದಿನಿಂದಲೂ ಇತ್ತಂತೆ. ಭಾರತದ ಬಾಹ್ಯ ಗುಪ್ತಚರ ದಳ ‘ರಾ’ ಸೇರಬೇಕೆಂದು ಅರ್ಜಿ ಹಾಕಿದ್ದರಂತೆ. ಕಾರಣಾಂತರದಿಂದ ಕೈಗೂಡಲಿಲ್ಲ. ಆದರೆ ರಾಜ್ಯ ಗುಪ್ತಚರ ದಳದಲ್ಲಿ ಕಾರ್ಯನಿರ್ವಹಿಸುವ ಅವಕಾಶ ಸಿಕ್ಕಿತ್ತು. ನಂತರದಲ್ಲಿ ಒಮ್ಮೆ, ಇಸ್ರೇಲ್​ನ ಮೊಸಾದ್​ನ ಕಾರ್ಯಾಗಾರವೊಂದರಲ್ಲಿ ಭಾಗವಹಿಸಿ, ಆ ಸಂಸ್ಥೆಯನ್ನು ಹತ್ತಿರದಿಂದ ಗಮನಿಸುವ ವಿರಳ ಅವಕಾಶ ದೊರಕಿತು. ಈ ಹಿನ್ನೆಲೆಯಲ್ಲಿ ಮೊಸಾದ್ ಕುರಿತು ವ್ಯಾಪಕ ಮಾಹಿತಿ ಕಲೆಹಾಕಿ, ಅಲ್ಲಿನ ಅಧಿಕಾರಿಗಳೊಂದಿಗೆ ಖುದ್ದಾಗಿ ಮಾತಾಡಿ ಒಳಹೊರಗನ್ನು ಅರಿತಿದ್ದರಿಂದ, ಈ ಕೃತಿಗೆ ಒಂದುರೀತಿಯ ಅಧಿಕೃತತೆ ಪ್ರಾಪ್ತವಾಗಿದೆ. ಒಂದೊಮ್ಮೆ ಮೊಸಾದ್ ಅಧಿಕಾರಿಗಳೇ ಬರೆದಿದ್ದರೂ ಇಷ್ಟು ಮಾಹಿತಿ ಕೊಡಲು ಸಾಧ್ಯವಾಗುತ್ತಿತ್ತೋ ಇಲ್ಲವೋ! ಮೊಸಾದ್ ಸಾಹಸದ, ಕಾರ್ಯಾಚರಣೆಗಳ ದಿನಾಂಕ, ಸಮಯದಿಂದ ಹಿಡಿದು ಪ್ರತಿ ಮಾಹಿತಿಯನ್ನೂ ಲೈವ್ ರಿಪೋರ್ಟ್ ರೀತಿಯಲ್ಲಿ ನೀಡಿರುವುದರಿಂದ, ಓದುಗರಿಗೆ ಡಿಟೆಕ್ಟಿವ್ ಪ್ರಪಂಚದ ರೋಚಕ ಅನುಭವ ನೀಡುವಂತಿದೆ. ಇದನ್ನು ಓದಿದಾಗ ಮೊಸಾದ್ ಗೂಢಚಾರಿಕೆಯ ಉಸ್ತಾದ್ ಎನಿಸದೆ ಇರದು!

ಮೊಸಾದ್​ನ ಉನ್ನತ ಸ್ಥಾನದಲ್ಲಿದ್ದ ಹಲವರು ನಂತರದಲ್ಲಿ ಇಸ್ರೇಲ್ ಚುಕ್ಕಾಣಿ ಹಿಡಿದಿದ್ದು ವಿಶೇಷ. ಬೆಂಜಮಿನ್ ನೆತನ್ಯಾಹು, ಶಿಮೊನ್ ಪೆರೇಸ್ ಮುಂತಾದವರು ಇದಕ್ಕೆ ಉದಾಹರಣೆ. 1972ರ ಮ್ಯೂನಿಕ್ ಒಲಿಂಪಿಕ್ಸ್ ಸಂದರ್ಭದಲ್ಲಿ ಪ್ಯಾಲೆಸೆôನಿನ ‘ಬ್ಲಾ್ಯಕ್ ಸೆಪ್ಟೆಂಬರ್’ ಸಂಘಟನೆಯ ಉಗ್ರರು ಇಸ್ರೇಲ್ ಕ್ರೀಡಾಪಟುಗಳನ್ನು ಹತ್ಯೆ ಮಾಡಿದರು. ಇದಕ್ಕೆ ಪ್ರತೀಕಾರವಾಗಿ ‘ಆಪರೇಷನ್ ರಾತ್ ಆಫ್ ಗಾಡ್’ (ಭಗವಂತನ ಪ್ರತೀಕಾರ) ಕಾರ್ಯಾಚರಣೆ ನಡೆಸಿದ ಮೊಸಾದ್, ಮ್ಯೂನಿಕ್ ಹತ್ಯಾಕಾಂಡಕ್ಕೆ ಕಾರಣರಾದ ಎಲ್ಲ ಮಾಸ್ಟರ್​ವೆುೖಂಡ್​ಗಳನ್ನು ಬೇರೆ ಬೇರೆ ದೇಶಗಳಲ್ಲಿ ಹುಡುಕಿ ಹುಡುಕಿ ಕೊಂದಿದ್ದು ಮತ್ತೊಂದು ರೋಚಕ ಕಥನ. ಇಂಥ ಅನೇಕ ಘಟನೆಗಳನ್ನು ಈ ಕೃತಿಯಲ್ಲಿ ನೀಡಲಾಗಿದೆ. ಮೊಸಾದ್ ಯಶೋಗಾಥೆ ಜತೆಗೆ ಅದು ವೈಫಲ್ಯ ಕಂಡ ಕೆಲ ನಿದರ್ಶನಗಳನ್ನೂ ಲೇಖಕರು ನೀಡುವ ಮೂಲಕ, ಕೃತಿ ಒಮ್ಮುಖವಾಗದಂತೆ ಎಚ್ಚರವಹಿಸಿದ್ದಾರೆ.

1999ರ ಡಿಸೆಂಬರ್ 24ರಂದು, ನೇಪಾಳದಿಂದ ದೆಹಲಿಗೆ ಹೊರಟಿದ್ದ ಇಂಡಿಯನ್ ಏರ್​ಲೈನ್ಸ್ ವಿಮಾನವನ್ನು ಭಯೋತ್ಪಾದಕರು ಅಪಹರಿಸಿ, ಅಫ್ಘಾನಿಸ್ತಾನದ ಕಂದಹಾರಕ್ಕೆ ಕೊಂಡೊಯ್ದಿದ್ದರು. ಅಲ್ಲಿ ಆಗ ತಾಲಿಬಾನ್ ಆಡಳಿತವಿತ್ತು. ಆ ವಿಮಾನದಲ್ಲಿ 176 ಮಂದಿ ಪ್ರಯಾಣಿಕರಿದ್ದರು. ಅಪಹೃತರನ್ನು ಸುರಕ್ಷಿತವಾಗಿ ಬಿಡಬೇಕಾದಲ್ಲಿ, ಭಾರತದ ಜೈಲುಗಳಲ್ಲಿದ್ದ ಕೆಲ ಭಯೋತ್ಪಾದಕರನ್ನು ಬಿಡುಗಡೆ ಮಾಡಬೇಕು ಹಾಗೂ ಹಣ ನೀಡಬೇಕೆಂದು ಷರತ್ತು ಹಾಕಿದ್ದರು. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಭಾರತ ಸರ್ಕಾರ ಭಾರಿ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡಿತು. ಈ ನಡುವೆ, ಅಪಹೃತ ವಿಮಾನದಲ್ಲಿದ್ದವರ ಕೆಲ ಬಂಧುಗಳು ದೆಹಲಿಯಲ್ಲಿ ಪ್ರತಿಭಟನೆ ನಡೆಸಿ, ಪ್ರಯಾಣಿಕರ ಬಿಡುಗಡೆಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಕೊನೆಗೆ ದಾರಿಕಾಣದಾದ ಸರ್ಕಾರ ಉಗ್ರರ ಬೇಡಿಕೆ ಈಡೇರಿಸಲು ಒಪ್ಪಿತು. ಅಂದಿನ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಅವರೇ ಖುದ್ದಾಗಿ ವಿಮಾನದಲ್ಲಿ ಹಣವನ್ನೊಯ್ದು ನೀಡಿ, ಪ್ರಯಾಣಿಕರನ್ನು ಬಿಡಿಸಿಕೊಂಡು ಬಂದರು.

ಇಸ್ರೇಲ್​ನ ಟೆಲ್ ಅವೀವ್​ನಿಂದ ಫ್ರಾನ್ಸಿಗೆ ಹೊರಟಿದ್ದ ಏರ್ ಫ್ರಾನ್ಸ್ ವಿಮಾನವನ್ನು 1976ರ ಜೂನ್ 27ರಂದು ಪಾಪ್ಯುಲರ್ ಫ್ರಂಟ್ ಫಾರ್ ಲಿಬರೇಷನ್ ಆಫ್ ಪ್ಯಾಲೆಸೆôನ್ ಸಂಘಟನೆಯ ಉಗ್ರರು ಅಪಹರಿಸಿ, ಉಗಾಂಡಾದ ಎಂಟೆಬೆಗೆ ಒಯ್ದರು. ಇಸ್ರೇಲ್​ನ ಜೈಲುಗಳಲ್ಲಿರುವ 40 ಮಂದಿ ಪ್ಯಾಲೆಸೆôನ್ ಕೈದಿಗಳನ್ನು ಮತ್ತು ಯುರೋಪ್ ದೇಶಗಳಲ್ಲಿರುವ 13 ಕೈದಿಗಳನ್ನು ಬಿಡುಗಡೆ ಮಾಡಬೇಕೆಂಬ ಬೇಡಿಕೆ ಮುಂದಿಟ್ಟರು. ಆದರೆ ಇಸ್ರೇಲ್ ಸರ್ಕಾರ ಬಿಲ್​ಕುಲ್ ಒಪ್ಪಲಿಲ್ಲ. ಮುಂದೆ ನಡೆದದ್ದು ನಂಬಲಸಾಧ್ಯ ವಿದ್ಯಮಾನ. ಇಸ್ರೇಲಿನ ಐದು ವಿಮಾನಗಳು ಕಮಾಂಡೊಗಳನ್ನು ಕರೆದುಕೊಂಡು 3500 ಕಿಮೀ ಕ್ರಮಿಸಿ, ಎಂಟೆಬೆ ವಿಮಾನನಿಲ್ದಾಣದಲ್ಲಿ ಇಳಿದವು. ಕಮಾಂಡೊಗಳು ಮಿಂಚಿನ ಕಾರ್ಯಾಚರಣೆ ನಡೆಸಿ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿದರು. ಆದರೆ ಈ ನಡುವಿನ ನಾಲ್ಕೈದು ದಿನಗಳ ಅವಧಿಯಲ್ಲಿ ಇಸ್ರೇಲಿಯರು ತಮ್ಮವರನ್ನು ಹೇಗಾದರೂ ಮಾಡಿ ಬಿಡುಗಡೆ ಮಾಡಿ ಕರೆತನ್ನಿ ಎಂದು ಸರ್ಕಾರದ ಮೇಲೆ ಒತ್ತಡ ತರಲಿಲ್ಲ. ‘ಶತಮಾನಗಳ ನಂತರ ದಕ್ಕಿದ ತಮ್ಮ ನೆಲವನ್ನು ಉಳಿಸಿಕೊಳ್ಳಬೇಕಾದರೆ, ಒಂದು ಸ್ವತಂತ್ರ ದೇಶವಾಗಿ, ವಿಶ್ವಸಮುದಾಯದಲ್ಲಿ ತಲೆಯೆತ್ತಿ ನಿಲ್ಲಬೇಕಾದರೆ, ಪ್ರತಿಕ್ಷಣವೂ ಎಚ್ಚರಿಕೆಯಿಂದಿರಬೇಕು. ಪ್ರತಿ ಏಟಿಗೂ ಸೂಕ್ತ ಪ್ರತಿ ಏಟು ನೀಡಿ ವೈರಿಯನ್ನು ನಿರ್ವೀರ್ಯಗೊಳಿಸಬೇಕು ಎಂದು ಇಸ್ರೇಲ್ ಸರ್ಕಾರ ಮತ್ತು ರಕ್ಷಣಾ-ಬೇಹುಗಾರಿಕಾ ಪಡೆಗಳೂ, ವೈಯಕ್ತಿಕ ಆಸೆಆಕಾಂಕ್ಷೆಗಳನ್ನು ಬದಿಗೊತ್ತಿ ರಾಷ್ಟ್ರಹಿತದತ್ತ ಪೂರ್ಣ ಗಮನ ನೀಡಬೇಕೆಂದೂ ಇಸ್ರೇಲಿಯರೂ ದೃಢವಾಗಿ ನಂಬಿದ್ದಾರೆ’ ಎಂದು ಈ ಮನಸ್ಥಿತಿಗೆ ಕಾರಣ ಹುಡುಕಲೆತ್ನಿಸುತ್ತಾರೆ, ಅಂತಾರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಕ ಪ್ರೇಮಶೇಖರ. (ಕೃತಿ: ಪ್ರತೀಕಾರ, ಪ್ರಕಾಶಕರು: ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು, ಪುಟಗಳು: 248, ಬೆಲೆ: 220 ರೂ.)

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net