ಚುನಾವಣೆ ಬಿಕ್ಕಟ್ಟು, ನಾಯಕರ ಇಕ್ಕಟ್ಟು!: ಅಮೆರಿಕ ಚುನಾವಣೆ ವಿಚಾರದಲ್ಲಿ ಬೆಂಕಿ ಬಸಣ್ಣ ಅನಿಸಿಕೆ

Joe biden trump
Published on
ಬೆಂಕಿ ಬಸಣ್ಣ

ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ವಿವಾದ, ವಿಳಂಬ ಮತ್ತು ಗೊಂದಲ ಪ್ರಪಂಚದ ವಿವಿಧ ದೇಶಗಳ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ‘ಅಸೋಸಿಯೇಟ್ ಪ್ರೆಸ್’ನವರು ಜೋ ಬೈಡೆನ್ 290 ಎಲೆಕ್ಟೊರಲ್ ವೋಟುಗಳನ್ನು ಪಡೆಯುವುದರ ಮೂಲಕ 217 ಎಲೆಕ್ಟೊರಲ್ ವೋಟು ಪಡೆದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಗೆದ್ದಿದ್ದಾರೆ ಎಂದು ಪ್ರಕಟಿಸಿದೆ. ಆದರೆ ಟ್ರಂಪ್ ಸೋಲನ್ನು ಒಪ್ಪಿಕೊಳ್ಳಲು ತಯಾರಿಲ್ಲ. ‘ಈ ಚುನಾವಣೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆ, ಅದರಲ್ಲೂ ಅಂಚೆ ಮತದಾನದಲ್ಲಿ ಭಾರಿ ಅಕ್ರಮ ನಡೆದಿದೆ’ ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಕೆಲವು ಸ್ವಿಂಗ್ ರಾಜ್ಯಗಳಲ್ಲಿ ಮತಗಳ ಮರುಎಣಿಕೆ ಪ್ರಾರಂಭವಾಗಿದೆ.

ಇಂಥ ಅನಿಶ್ಚಿತ ಪರಿಸ್ಥಿತಿಯಲ್ಲಿ ಜೋ ಬೈಡೆನ್​ರನ್ನು ಅಭಿನಂದಿಸಬೇಕೋ ಅಥವಾ ಬೇಡವೋ ಎಂಬ ಗೊಂದಲ ಜಗತ್ತಿನ ವಿವಿಧ ದೇಶಗಳ ನಾಯಕರನ್ನು ಕಾಡುತ್ತಿದೆ. ಒಂದು ವೇಳೆ ಬೈಡೆನ್​ರನ್ನು ಅಭಿನಂದಿಸಿದರೆ, ಟ್ರಂಪ್ ಕೆಂಗಣ್ಣಿಗೆ ಗುರಿ ಆಗಬೇಕಾಗುತ್ತದೆ ಎಂಬ ಭಯ. ಬೈಡೆನ್​ರನ್ನು ಅಭಿನಂದಿಸದಿದ್ದರೆ ಮುಂದೆ ಅವರು ಅಧ್ಯಕ್ಷರಾದಾಗ ತಮ್ಮ ಬಗ್ಗೆ ತಪು್ಪ ಅಭಿಪ್ರಾಯ ತಳೆಯಬಹುದೆಂಬ ಆತಂಕ. ರಷ್ಯಾ, ಚೀನಾ ಮತ್ತು ಬ್ರೆಜಿಲ್ ಈವರೆಗೆ ಬೈಡೆನ್​ರನ್ನು ಅಭಿನಂದಿಸಿಲ್ಲ.

ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚೀನಾದವರಂತೆ ಮೌನವಹಿಸುತ್ತಾರೆ ಅಥವಾ ಜೋ ಬೈಡೆನ್​ಗೆ ಕಾಟಾಚಾರಕ್ಕೆ ಅಭಿನಂದನೆ ಹೇಳಬಹುದು ಎಂದು ಬಹಳಷ್ಟು ಜನರು ಊಹಿಸಿದ್ದರು. ಆದರೆ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶದ ನಾಯಕರಾದ ನರೇಂದ್ರ ಮೋದಿ, ‘ಜೋ ಬೈಡೆನ್ ಗೆಲುವು ಒಂದು ಅದ್ಭುತ ಗೆಲುವು’ ಎಂದು ಹೇಳಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಮತ್ತು ಟ್ರಂಪ್ ಮಧ್ಯೆ ವೈಯಕ್ತಿಕ ಸ್ನೇಹ ಸಂಬಂಧವಿದೆ. 2016ರ ಅಮೆರಿಕ ಚುನಾವಣೆಯಲ್ಲಿ ರಷ್ಯಾ ಮಧ್ಯಪ್ರವೇಶಿಸಿ ಟ್ರಂಪ್ ಗೆಲುವಿಗೆ ಕಾರಣವಾಗಿದೆ ಎಂಬ ಸಂಗತಿ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಈ ಬಗ್ಗೆ ನ್ಯಾಯಾಧೀಶ ರಾಬರ್ಟ್ ಮುಲ್ಲರ್ ತಂಡದಿಂದ 2 ವರ್ಷ ತನಿಖೆ ನಡೆದರೂ ನಿಜವಾದ ಸತ್ಯ ಹೊರಗೆ ಬರಲೇ ಇಲ್ಲ. ರಷ್ಯಾ ಮಧ್ಯಪ್ರವೇಶದ ಬಗ್ಗೆ ಸಾಕ್ಷ್ಯಾಧಾರಗಳ ಕೊರತೆಯಿಂದ ಟ್ರಂಪ್ ನಿರಪರಾಧಿ ಎಂದು ಘೊಷಿಸಲಾಯಿತು.

ಮೆಕ್ಸಿಕೋ ಅಧ್ಯಕ್ಷ ಲೋಪೆಜ್ ಒಬ್ರಡಾರ್ ಮತ್ತು ಟ್ರಂಪ್ ನಡುವೆ ಹೊಂದಾಣಿಕೆ ಇದೆ. ಹೀಗಾಗಿ ಅಮೆರಿಕದ ಎಲ್ಲ ರಾಜ್ಯಗಳ ಸಂಪೂರ್ಣ ಮತಎಣಿಕೆ ಮುಗಿದು, ಫಲಿತಾಂಶ ಅಧಿಕೃತವಾಗಿ ಘೊಷಣೆ ಆಗುವವರೆಗೂ ತಾವು ಜೋ ಬೈಡೆನ್​ರನ್ನು ಹೊಸ ಅಧ್ಯಕ್ಷ ಎಂದು ಪರಿಗಣಿಸುವುದಿಲ್ಲ ಎಂದು ಒಬ್ರಡಾರ್ ಹೇಳಿದ್ದಾರೆ. ಜರ್ಮನಿ ಮತ್ತು ಕೆನಡಾದ ಅಧ್ಯಕ್ಷರು ಬೈಡೆನ್​ರಿಗೆ ಶುಭಾಶಯ ಕೋರಿದ್ದಾರೆ.

ಟ್ರಂಪ್ ಅಮೆರಿಕವನ್ನು ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಮತ್ತು ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರ ತಂದಿದ್ದಕ್ಕೆ ಯುರೋಪಿನ ಅನೇಕ ದೇಶಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಯುರೋಪಿನ ಬಹಳಷ್ಟು ದೇಶಗಳ ನಾಯಕರು ಟ್ರಂಪ್​ರ ‘ಅಮೆರಿಕವೇ ಮೊದಲು, ಬೇರೆ ದೇಶಗಳ ಉಸಾಬರಿ ನಮಗೇಕೆ?’ ಎಂಬ ಪಾಲಿಸಿಯಿಂದ ಅಸಮಾಧಾನಗೊಂಡಿದ್ದರು.

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಜೋ ಬೈಡೆನ್​ಗೆ ಶುಭಾಶಯ ತಿಳಿಸಿದ್ದು, ಟ್ರಂಪ್ ಅವಧಿ ಮುಗಿಯಿತೆಂದು ಒಳಗೊಳಗೆ ಖುಷಿ ಪಟ್ಟಿದ್ದಾರೆ. ಒಟ್ಟಾರೆ, ಟ್ರಂಪ್ ಚುನಾವಣಾ ಫಲಿತಾಂಶ ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಹೋಗಿರುವುದರಿಂದ, ಅಲ್ಲಿಯ ತೀರ್ಪು ಬರುವವರೆಗೂ ಜಾಗತಿಕ ನಾಯಕರು ಎಚ್ಚರಿಕೆ ಹೆಜ್ಜೆಯನ್ನು ಇರಿಸುವುದು ಅವಶ್ಯ ಮತ್ತು ಅನಿವಾರ್ಯ.

(ಲೇಖಕರು ಅಮೆರಿಕದ ನ್ಯೂಯಾರ್ಕ್​ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net