ಕೃಷಿ-ಜೀವನೋಪಾಯಕ್ಕೆ ನಗರೀಕರಣದ ಅಪಾಯ

Agriculture
Published on
ಭಾರತ ಕೃಷಿ ಪ್ರಧಾನ ದೇಶ. ಕೃಷಿ ಹಾಗೂ ಕೃಷಿ ಸಂಬಂಧಿತ ಕ್ಷೇತ್ರಗಳ ಅವಲಂಬಿತರ ಸಂಖ್ಯೆ ದೇಶದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚಿದೆ. ಆದರೆ, ಬದಲಾದ ಕಾಲಘಟ್ವದಲ್ಲಿ ನಗರೀಕರಣದ ಪ್ರಭಾವ ವ್ಯವಸಾಯ ಕ್ಷೇತ್ರದ ಮೇಲೆ ಸಾಕಷ್ಟು ಹೆಚ್ಚಿದೆ. ಇದರಿಂದ ನಗರದಂಚಿನಲ್ಲಿರುವ ರೈತರು ಕೃಷಿ ಬಿಟ್ಟು ಅನ್ಯ ಉದ್ಯೋಗದತ್ತ ಮುಖ ಮಾಡುವುದು ಅನಿವಾರ್ಯವಾಗಿದೆ. ಈ ಬದಲಾವಣೆಯಿಂದ ನಗರ ವಾಸಿಗಳಿಗೆ ಆಹಾರ ಭದ್ರತೆ, ಆಹಾರ ಪೂರೈಕೆ, ಪೌಷ್ಟಿಕಾಂಶದ ಕೊರತೆ ಕಾಡುತ್ತಿದೆ.

| ಆರ್.ತುಳಸಿಕುಮಾರ್ ಬೆಂಗಳೂರು

ಗ್ರಾಮೀಣ ಭಾಗದಲ್ಲಿ ಕೃಷಿ ಮೇಲಿನ ಅವಲಂಬನೆ ಕಡಿಮೆಯಾಗುತ್ತಿದೆ. ಕೃಷಿ ಲಾಭದಾಯಕ ಅಲ್ಲ ಎಂಬ ಕಾರಣಕ್ಕೆ ರೈತಾಪಿ ವರ್ಗದ ಯುವ ಪೀಳಿಗೆ ಕೈ ಕೆಸರು ಮಾಡಿಕೊಂಡು ಮೊಸರು ಸವಿಯುವ ಕಷ್ಟಕರ ಕೆಲಸದಿಂದ ವ್ಯವಸಾಯ ಮಾಡದೆ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಜತೆಗೆ ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚಳ, ಕುಲಕಸುಬು ಬಿಟ್ಟು ಅನ್ಯ ವೃತ್ತಿಯತ್ತ ದೃಷ್ಟಿ, ಭೂಮಿ ಹಿಡುವಳಿಯಲ್ಲಿ ಕಡಿತ, ವಲಸೆ ಹಾಗೂ ಇನ್ನಿತರ ಅಂಶಗಳು ವ್ಯವಸಾಯ ವಲಯಕ್ಕೆ ಅಪಾಯವನ್ನು ತಂದೊಡ್ಡಿವೆ.

ಈ ಪ್ರಮುಖ ವಿದ್ಯಮಾನಗಳು ಮಾನವನ ಆಹಾರ ಭದ್ರತೆ ಮೇಲೆಯೇ ನೇರ ಪರಿಣಾಮ ಬೀರುತ್ತಿದೆ. ಇಷ್ಟು ದಿನ ನಗರೀಕರಣದಿಂದ ಪಟ್ಟಣ, ಅರೆ ಪಟ್ಟಣ ಹಾಗೂ ನಗರಗಳಲ್ಲಿ ಉದ್ಯೋಗ ಸೃಷ್ಟಿ ಆಗುತ್ತಿದೆ ಎಂಬ ಕೂಗು ಕೇಳಿಬಂದಿತ್ತು. ಇದರಿಂದ ನಗರದಲ್ಲಿ ವಾಸ ಮಾಡುವ ಜನರಿಗೆ ಉದ್ಯೋಗ ದೊರೆತು ಆರ್ಥಿಕವಾಗಿ ಸಬಲರಾಗುತ್ತಾರೆಂಬ ಪ್ರತೀತಿ ಇತ್ತು. ಆದರೆ, ಕೃಷಿ ಮೂಲದಿಂದ ಅನ್ಯ ಉದ್ಯೋಗಕ್ಕೆ ಕಾಲಿಟ್ಟವರ ಜೀವನ ಅಷ್ಟು ಸುಭದ್ರವಾಗುತ್ತಿಲ್ಲ. ನಗರದಲ್ಲಿದ್ದಾಗ ಸಿಗುವ ಸೌಲಭ್ಯ ಸಿಗುತ್ತಿದ್ದರೂ, ವೈಯಕ್ತಿಕವಾಗಿ ಮೇಲೆ ಬರುವ ಹಾಗೂ ಕುಟುಂಬ ನಿರ್ವಹಣೆ ಹಿಂದಿನ ಸ್ಥಿತಿಯಲ್ಲೇ ಮುಂದುವರಿದಿದೆ. ಇದು ಕೃಷಿ ಬಿಟ್ಟು ನಗರ ಸೇರಿದವರ ನೈಜ ಸ್ಥಿತಿಗತಿ.

ಇನ್ನೊಂದೆಡೆ ನಗರ, ಪಟ್ಟಣ ಪ್ರದೇಶದಲ್ಲಿರುವ ಜನರಿಗೆ ಆಹಾರ ಹೊಂದಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಮನೆಮಂದಿಗೆಲ್ಲ ರುಚಿ, ಶುಚಿಯಾದ ಆಹಾರ ತಯಾರಿಸಲು ಕಚ್ಚಾ ಸಾಮಗ್ರಿಗಳ ಬೆಲೆಯೇರಿಕೆಯ ತಾಪ ತಡೆಯಲಾಗುತ್ತಿಲ್ಲ. ಪೌಷ್ಟಿಕಾಂಶಯುಕ್ತ ಆಹಾರ ಲಭ್ಯತೆ ಕೂಡ ಕ್ರಮೇಣ ಇಳಿಕೆಯಾಗುತ್ತಿದೆ.

ಕಲಬೆರಿಕೆ ಇಲ್ಲದ ತರಕಾರಿ, ಸೊಪು್ಪ, ಧಾನ್ಯಗಳನ್ನು ಹೊಂದಿಸುವುದು ಮತ್ತಷ್ಟು ತ್ರಾಸದಾಯಕವಾಗಿದೆ. ಇದು ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ತಂದೊಡಿದ್ದು, ರೋಗ ಬಾಧೆ ತಡೆಯಲು ದೊಡ್ಡ ಮೊತ್ತವನ್ನು ಖರ್ಚು ಮಾಡುವುದು ಅನಿವಾರ್ಯವಾಗಿದೆ. ಇಂತಹ ಕಣ್ಣಿಗೆ ಕಾಣದ ಅಂಶಗಳನ್ನು ಪಟ್ಟಿ ಮಾಡಿ ಕೃಷಿ ಹಾಗೂ ಪರಿಸರದ ಮೇಲಾಗುತ್ತಿರುವ ನಗರೀಕರಣದ ಪ್ರಭಾವ ಹಾಗೂ ಪಲ್ಲಟದ ಅಪಾಯಗಳನ್ನು ದಾಖಲಿಸುವ ಮತ್ತು ಇವುಗಳಿಗೆ ಪರಿಹಾರೋಪಯಾಗಳನ್ನು ಕಂಡುಕೊಳ್ಳಲು ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳ ಮೇಲೆ ಆಗುತ್ತಿರುವ ಪರಿಣಾಮದ ಬಗ್ಗೆ ಅಂಕಿ-ಅಂಶ ಸಹಿತ ಮಾಹಿತಿ ಕಲೆ ಹಾಕಿದೆ. ಇದನ್ನು ನುರಿತ ವಿಜ್ಞಾನಿಗಳು ಹಾಗೂ ಪರಿಣತರಿಂದ ವಿಶ್ಲೇಷಿಸಿ ಭವಿಷ್ಯದಲ್ಲಿ ಕೃಷಿ ಮೇಲೆ ನಗರೀಕರಣದ ಸವಾರಿ ಮಾಡದಂತೆ ಮಾಗೋಪಾಯ ಕಂಡುಕೊಳ್ಳುವತ್ತಲೂ ದೃಷ್ಟಿ ಹರಿಸಲಾಗಿದೆ.

ಕೃಷಿ ಮೇಲಾಗುತ್ತಿರುವ ನಗರೀಕರಣದ ಕುರಿತು ಅಧ್ಯಯನ ಪ್ರಗತಿಯಲ್ಲಿದ್ದು, ತಾತ್ಕಾಲಿಕ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಮುಂದಿನ ವರ್ಷ ಅಧ್ಯಯನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ವರದಿಯಲ್ಲಿ ಸಮಸ್ಯೆಗಳ ಜತೆಗೆ ಅವುಗಳಿಗೆ ಪರಿಹಾರ ಸೂತ್ರವನ್ನೂ ಶಿಫಾರಸು ಮಾಡಲಾಗುವುದು. | ಕೆ.ಬಿ.ಉಮೇಶ್ ಸಂಶೋಧನಾ ನಿರ್ದೇಶಕ, ಬೆಂಗಳೂರು ಕೃಷಿ ವಿವಿ ನಗರೀಕರಣ ಜಾಗತಿಕ ಸಮಸ್ಯೆಯಾಗಿ ಮಾರ್ಪಡುತ್ತಿದೆ. ಇದಕ್ಕೆ ಪರಿಹಾರೋಪಾಯ ಗಳನ್ನು ಬೇಕಾಬಿಟ್ಟಿಯಾಗಿ ತೆಗೆದುಕೊಳ್ಳದೆ ವೈಜ್ಞಾನಿಕವಾಗಿ ಅಧ್ಯಯನ ಮಾಡಿ ನೀತಿ ರೂಪಿಸುವ ಅಗತ್ಯ ಇದೆ. ಈ ಕೆಲಸವನ್ನು ಇಂಡೋ-ಜರ್ಮನ್ ಸಮನ್ವಯ ಸಮಿತಿ ಕೈಗೆತ್ತಿಕೊಂಡಿದ್ದು, ವಾಸ್ತವಿಕ ನೆಲಗಟ್ಟಿನಲ್ಲಿ ಪರಿಹಾರ ಸೂತ್ರ ಸಿದ್ಧಪಡಿಸಲಿದ್ದೇವೆ. | ಪ್ರೊ. ಸ್ಟೀಫನ್ ವಿ ಕ್ರಾಮನ್ ಗೊಟ್ಟಿನ್​ಜೆನ್ ವಿವಿ, ಜರ್ಮನಿ

ಅಧ್ಯಯನದ ಕೆಲ ಪ್ರಮುಖಾಂಶ

  • ಆಹಾರದ ಮೇಲಿನ ಮಾಸಿಕ ವೆಚ್ಚದಲ್ಲಿ ಗಣನೀಯ ಏರಿಕೆ. ಗ್ರಾಮೀಣರಿಗಿಂತ ನಗರವಾಸಿಗಳ ವೆಚ್ಚ ಹೆಚ್ಚಳ.
  • ಕೃಷಿಯೇತರ ಕ್ಷೇತ್ರದಲ್ಲಿ ಗ್ರಾಮೀಣ, ಅರೆ ಪಟ್ಟಣ, ನಗರಗಳಲ್ಲಿ ಕ್ರಮವಾಗಿ ಶೇ.40, ಶೇ.53 ಹಾಗೂ ಶೇ.63 ಉದ್ಯೋಗ ಸೃಷ್ಟಿ.
  • ಗ್ರಾಮೀಣ ಮಹಿಳೆಯರಲ್ಲಿ ಅಪೌಷ್ಟಿ್ಟತೆ, ಬೊಜ್ಜು, ಜೀವನಶೈಲಿ, ಆರೋಗ್ಯಕರವಲ್ಲದ ಆಹಾರ ಸೇವನೆ ಹೆಚ್ಚಳ.
  • ಗ್ರಾಮೀಣ ಪ್ರದೇಶದಲ್ಲಿ ಶೇ.14.2 ಪ್ರಮಾಣದಲ್ಲಿ ತೂಕ ಇಳಿಕೆ, ನಗರವಾಸಿಗಳಲ್ಲಿ ಶೇ.24.5 ತೂಕ ಹೆಚ್ಚಳ ಹಾಗೂ ಶೇ.30.5 ಬೊಜ್ಜು ಹೆಚ್ಚಳ.
  • ನಗರೀಕರಣದಿಂದ ಗ್ರಾಮೀಣ ಮಹಿಳೆಯರಲ್ಲಿ ಶೇ.33 ಹಾಗೂ ನಗರ ಮಹಿಳೆಯರಲ್ಲಿ ಶೇ.42 ಪ್ರಮಾಣದ ಬೊಜ್ಜು ಹೆಚ್ಚಳ.
  • ನಗರವಾಸಿಗಳಲ್ಲಿ ಪೌಷ್ಟಿಕಯುಕ್ತ ಆಹಾರ ಸೇವನೆ ಹೆಚ್ಚಳ, ಗ್ರಾಮೀಣ ಭಾಗದಲ್ಲಿ ತುಸು ಇಳಿಕೆ.

ಪರಿಸರ ಕಾಳಜಿಗೆ ಸಲಹೆ: ನಗರೀಕರಣದಿಂದ ಪರಿಸರದ ಮೇಲೆ ಭಾರಿ ಪರಿಣಾಮ ಬೀರಿದೆ. ಹಸಿರು ಪ್ರದೇಶದ ನಿರಂತರ ಇಳಿಕೆ ಜತೆಗೆ ಗಿಡ-ಮರಗಳು ಕಣ್ಮರೆಯಾಗುತ್ತಿದೆ. ಇದರಿಂದ ಉಸಿರಾಟದ ಸಮಸ್ಯೆ ಹೆಚ್ಚುತ್ತಿದೆ. ಉದ್ಯಾನಗಳಿಗಿಂತ ಕಿರು ಅರಣ್ಯ ಮಾದರಿಯ ಟ್ರೀ ಪಾರ್ಕ್ ನಿರ್ವಣಕ್ಕೆ ಒತ್ತು ನೀಡಬೇಕು. ಜೀವವಾಯು ನೀಡುವ ಮರಗಳನ್ನು ಗುರುತಿಸಿ ಅವುಗಳನ್ನೇ ಹೆಚ್ಚಾಗಿ ನೆಡುವಂತೆ ತಜ್ಞರು ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.

100 ವಿಜ್ಞಾನಿಗಳಿಂದ ಅಧ್ಯಯನ

ದೇಶದಲ್ಲೇ ಮೊದಲ ಬಾರಿಗೆ ವೈಜ್ಞಾನಿಕವಾಗಿ ನಗರೀಕರಣದಿಂದಾಗುತ್ತಿರುವ ಪರಿಣಾಮ ಹಾಗೂ ಕೃಷಿ ಮೇಲಾಗುತ್ತಿರುವ ಅಧ್ಯಯನಕ್ಕೆ ಚಾಲನೆ ದೊರೆತಿದೆ. ದೇಶದ ವಿವಿಧ ಕೃಷಿ ಹಾಗೂ ಕೃಷಿ ಸಂಬಂಧಿತ ವಿವಿಗಳಲ್ಲಿರುವ ಸುಮಾರು 100 ಮಂದಿ ಕೃಷಿ ವಿಜ್ಞಾನಿಗಳು, ಪರಿಣತರು, ಸಂಶೋಧನಾ ವಿದ್ಯಾರ್ಥಿಗಳ ತಂಡ ಅಧ್ಯಯನದಲ್ಲಿ ನಿರತವಾಗಿದೆ. ಮುಂದಿನ ವರ್ಷ ಪೂರ್ಣಗೊಳ್ಳುವ ಈ ಅಧ್ಯಯನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ನಗರೀಕರಣದ ಪರಿಣಾಮದ ಜತೆಗೆ ಪರಿಹಾರೋಪಾಯಗಳನ್ನು ಶಿಫಾರಸು ಮಾಡಲಾಗುತ್ತದೆ. ವಿಶೇಷವೆಂದರೆ ಈ ಕಾರ್ಯದಲ್ಲಿ ಜರ್ಮನ್ ವಿಶ್ವವಿದ್ಯಾಲಯದ ಹಿರಿಯ ತಜ್ಞರು, ವಿಜ್ಞಾನಿಗಳು ಕೈಜೋಡಿಸಿದ್ದಾರೆ. ಭಾರತದ ನಗರಗಳಲ್ಲಾಗುತ್ತಿರುವ ನಗರೀಕರಣಕ್ಕೂ ಹಾಗೂ ವಿದೇಶದ ನಗರಗಳಲ್ಲಾಗುತ್ತಿರುವ ನಗರೀಕರಣಕ್ಕೂ ತುಲನೆ ಮಾಡಿ ಪರಿಣಾಮಗಳ ಅಧ್ಯಯನ ಮಾಡಲಾಗುತ್ತದೆ.

ಇಂಡೋ - ಜರ್ಮನ್ ಜಂಟಿ ಸಹಯೋಗ: ನಗರೀಕರಣ ದಿಂದಾಗುತ್ತಿರುವ ಸಮಸ್ಯೆಗಳ ಕುರಿತು ನಡೆದಿರುವ ಅಧ್ಯಯನಕ್ಕೆ ಭಾರತದ ವಿಜ್ಞಾನಿಗಳ ಜತೆ ಜರ್ಮನ್ ವಿಜ್ಞಾನಿಗಳು ಹಾಗೂ ಪರಿಣತರು ಕೈಜೋಡಿಸಿದ್ದಾರೆ. ಅಧ್ಯಯನವನ್ನು ಭಾರತೀಯ ಕೃಷಿ ಅನುಸಂಧಾನ ಪರಿಷತ್ (ಐಸಿಎಆರ್) ಮಾರ್ಗದರ್ಶನದಲ್ಲಿ ಇಂಡೋ - ಜರ್ಮನ್ ಜಂಟಿ ಸಮನ್ವಯ ಸಮಿತಿ ಕೈಗೊಂಡಿದೆ. ಬೆಂಗಳೂರು ಕೃಷಿ ವಿವಿ ಜತೆಗೆ ದೇಶದ ವಿವಿಧ ಕೃಷಿ ಸಂಬಂಧಿತ ವಿವಿಗಳು, ಸಾಮಾಜಿಕ ಹಾಗೂ ಆರ್ಥಿಕ ಪರಿಣಾಮ ಸಂಸ್ಥೆ (ಐಎಸ್​ಇಸಿ), ಸ್ವಯಂಸೇವಾ ಸಂಸ್ಥೆಗಳು ಸಾಥ್ ನೀಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net