ಶ್ರೇಷ್ಠತೆಯ ಕಿರೀಟ ತೊಟ್ಟ ಮೇಲೆ

ವಿಜಯವಾಣಿ (5)
Published on
|ಡಾ. ಗಣಪತಿ ಆರ್.ಭಟ್

ಉತ್ತಮ ಮಳೆ-ಬೆಳೆಗಳಿಂದ ಸುಭಿಕ್ಷವೆನಿಸಿದ ರಾಜ್ಯವದು. ಎಲ್ಲೆಲ್ಲೂ ವಸಂತದ ಆಗಮನವು ಕಳೆಗಟ್ಟಿದಂತಿತ್ತು. ರಥವನ್ನೇರಿದ ರಾಜನು ವಸಂತೋತ್ಸವವನ್ನು ಆಚರಿಸಲೆಂದು ತನ್ನ ಮಂತ್ರಿ, ಸೈನಿಕರನ್ನೊಳಗೊಂಡ ಬಳಗದೊಂದಿಗೆ ರಾಜಧಾನಿಯ ಹೊರವಲಯದ ವಿಶಾಲವಾದ ಮಾವಿನ ತೋಟಕ್ಕೆ ತೆರಳಿದನು.

ರಾಜ ಬರುವನೆಂದು ಪ್ರಜೆಗಳಲ್ಲಿಯೂ ಉತ್ಸವದ ಉತ್ಸಾಹವು ಹೆಚ್ಚೇ ಇತ್ತು. ವಿಶಾಲವಾದ ಮಾವಿನ ತೋಪನ್ನು ತಲುಪುತ್ತಿದ್ದಂತೆ ರಥದೊಳಗೆ ಕುಳಿತಿದ್ದ ರಾಜನು ಹರ್ಷದಿಂದ ಪುಳಕಿತನಾಗಿ ಎದ್ದು ನಿಂತು ಪ್ರಜೆಗಳತ್ತ ಕೈ ಬೀಸಿದನು. ಪ್ರಜೆಗಳೂ ಹಷೋದ್ಗಾರ ಮಾಡುತ್ತ ಅವನತ್ತ ಕೈ ಬೀಸಿದರು. ಅದನ್ನು ಕಂಡ ಮಂತ್ರಿಗಣವೂ ರಾಜನನ್ನೇ ಅನುಕರಿಸುತ್ತ ಕೈ ಬೀಸತೊಡಗಿತು. ರಾಜನಲ್ಲಿ ಹುಮ್ಮಸ್ಸು ಹೆಚ್ಚಾಗಿ ಇನ್ನೂ ಜೋರಾಗಿ ತನ್ನೆರಡು ಕೈಗಳನ್ನು ಬೀಸತೋಡಗಿದನು.

ಆಮ್ರವಕ್ಷಗಳಲ್ಲಿ ಬಿಟ್ಟಿದ್ದ ಹೂಗೊಂಚಲುಗಳು ಆತನ ಕೈಗಳಿಗೆ ತಾಕಿದವು. ಹುಮ್ಮಸ್ಸಿನ ಭರದಲ್ಲಿ ರಾಜನು ಹೂಗೊಂಚಲುಗಳನ್ನು ಕಿತ್ತು ಪ್ರಜೆಗಳತ್ತ ಎಸೆಯತೊಡಗಿದನು. ಇದನ್ನು ನೋಡುತ್ತಲೇ ಆತನ ಮಂತ್ರಿಗಣವೂ ರಾಜನನ್ನೇ ಅನುಸರಿಸುತ್ತ ಮಾವಿನ ಹೂಗಳನ್ನು ಕಿತ್ತು ಪ್ರಜೆಗಳತ್ತ ಚೆಲ್ಲಲಾರಂಭಿಸಿತು.

ಮರುಕ್ಷಣವೇ ಸೈನಿಕರೂ ತಾವೇನೂ ಕಮಿಯಲ್ಲವೆಂಬಂತೆ ಕುದುರೆಯ ಮೇಲೆ ಕುಳಿತುಕೊಂಡೇ ಮಾವಿನ ಹೂವು, ಟೊಂಗೆ, ಹೀಗೆ ಒಂದೊಂದಾಗಿ ಕಿತ್ತು ಎಸೆಯಲಾರಂಭಿಸಿದರು. ಹಸಿರಿನಿಂದ ನಳನಳಿಸುತ್ತಲಿದ್ದ ಇಡೀ ಮಾವಿನ ತೋಟ ಬಟಾಬಯಲಾಗತೊಡಗಿತು. ಪ್ರಜೆಗಳ ಗುಂಪಿನಲ್ಲಿದ್ದ ಹಿರಿಯರು ಥಟ್ಟನೆ ಎಚ್ಚೆತ್ತು ಈ ಹುಚ್ಚಾಟವನ್ನು ನಿಲ್ಲಿಸುವಂತೆ ರಾಜನತ್ತ ಕೈ ಬೀಸಿ ಸನ್ನೆ ಮಾಡಿದರು.

ಮೈ ಮರೆತಿದ್ದ ರಾಜನು ಕೂಡಲೇ ಎಚ್ಚೆತ್ತು ಗಂಭೀರನಾದ. ಅವನನ್ನು ಗಮನಿಸುತ್ತ, ಮಂತ್ರಿಗಣ ಮತ್ತು ಸೈನಿಕರು, ಶಾಂತರಾದರು. ಇಡೀ ಮಾವಿನ ತೋಟ ಸೊಪ್ಪು ಸೊದೆಗಳಿಂದಲೇ ತುಂಬಿ ಹೋಯಿತು. ವಸಂತೋತ್ಸವದ ಉತ್ಸಾಹವೂ ಕಳೆಗುಂದಿತು. ಉತ್ಸಾಹದ ಭರದಲ್ಲಿ ಪ್ರಜ್ಞೆಯನ್ನೇ ಕಳೆದುಕೊಂಡಿದ್ದರಿಂದ ವಸಂತೋತ್ಸವವನ್ನು ಆಚರಿಸಿ ನಿಸರ್ಗದ ಮಹತ್ವವನ್ನು ಸಾರಬೇಕಿದ್ದ ರಾಜನು ಪ್ರಜೆಗಳೆದುರು ತಲೆ ತಗ್ಗಿಸುವಂತಾಯಿತು.

ಮನ್ನಣೆಯನ್ನು ಗಳಿಸಿಕೊಂಡವರಲ್ಲನೇಕರು ತಾವು ತುಳಿದಿದ್ದೇ ಹಾದಿಯೆನ್ನುತ್ತ ಸಾಗುತ್ತಾರೆ. ಅವರನ್ನೇ ಶ್ರೇಷ್ಠರೆಂದು ನಂಬಿದವರು ಅವರಂತೆ ನಡೆಯಲು ಹೋಗಿ ಅಧೋಗತಿಯನ್ನು ಹೊಂದುತ್ತಾರೆ. ಶ್ರೇಷ್ಠತೆಯೆಂಬ ಕಿರೀಟವನ್ನು ತೊಟ್ಟವರು ಎಚ್ಚರಿಕೆಯಿಂದ ನಡೆಯಬೇಕು. ನಡತೆಯು ಸದಾ ಅನುಕರಣಯೋಗ್ಯವಾಗಿರಬೇಕು.

ಹಾಗಲ್ಲದಿದ್ದಲ್ಲಿ ವ್ಯಕ್ತಿತ್ವಕ್ಕೆ ಚ್ಯುತಿ ಬರುವುದಲ್ಲದೆ ಸಮಾಜದ ಅಧಃಪತನಕ್ಕೂ ಅಂಥವರು ಕಾರಣರಾಗಿಬಿಡಬಹುದು. ಕರ್ತವ್ಯ ನಿರ್ವಹಣೆಯಲ್ಲಿ ಇರಬೇಕಾದ ಬದ್ಧತೆಯನ್ನು ವಿವರಿಸುತ್ತ, ಭಗವದ್ಗೀತೆಯ ಕರ್ಮಯೋಗದಲ್ಲಿ ಕೃಷ್ಣನು- ‘ಶ್ರೇಷ್ಠರು ಮಾಡುವುದನ್ನೇ ಇತರ ಜನರೂ ಅನುಸರಿಸುತ್ತಾರೆ’ ಎನ್ನುತ್ತಾನೆ. ‘ಸರ್ವಸ್ವಾಮಿಯಾದ ನಾನು ಯಾವ ಕರ್ಮವನ್ನೂ ಆಚರಿಸಬೇಕಿಲ್ಲ. ಆದರೆ ನನ್ನನ್ನೇ ಸ್ವಾಮಿಯೆಂದು ಒಪ್ಪಿದ ಜನರು ತಮ್ಮ ಸ್ವಾಮಿಯೇ ಆಲಸ್ಯದಿಂದ ಕುಳಿತಾಗ ತಾವು ಮಾಡಬೇಕಾದುದಾದರೂ ಏನೆಂದು ನನ್ನದೇ ದಾರಿಯನ್ನು ಹಿಡಿದು ಹಾಳಾಗುತ್ತಾರಲ್ಲ.

ಹಾಗಾಗಿ ನಾನು ಕರ್ತವ್ಯವನ್ನು ನಿರ್ವಹಿಸುತ್ತೇನೆ’ ಎನ್ನುತ್ತಾನೆ. ಆ ಮೂಲಕ ಕೃಷ್ಣನು ಸಮಾಜದ ಮೇಲ್ಪಂಕ್ತಿಯಲ್ಲಿರುವ ಜನರ ಹೊಣೆಗಾರಿಕೆಯನ್ನು ಎಚ್ಚರಿಸುತ್ತಾನೆ. ಶ್ರೇಷ್ಠವ್ಯಕ್ತಿಗಳ ನಡತೆ ಹೇಗಿರಬೇಕೆಂಬುದಕ್ಕೆ ತಾನೇ ಸ್ವತಃ ಮಾದರಿಯಾಗುತ್ತಾನೆ ಕೂಡ. ಅರ್ಹತೆಗನುಸಾರವಾಗಿ ದೊರೆತ ಹಿರಿತನವೆಂಬ ಪಟ್ಟವನ್ನು ಪ್ರಜ್ಞಪೂರ್ವಕವಾಗಿ ನಿರ್ವಹಿಸುವುದು ಬಹಳವೇ ಮುಖ್ಯ. ಜವಾಬ್ದಾರಿಯುತ ಸ್ಥಾನದಲ್ಲಿದ್ದಾಗ ಕರ್ತವ್ಯ ಪಥದಿಂದ ಭ್ರಷ್ಟರಾಗದೆ ಎಚ್ಚರಿಕೆಯಿಂದ ಹೆಜ್ಜೆಯಿಡುವುದನ್ನು ಮರೆಯಬಾರದು. (ಲೇಖಕರು ಸಂಸ್ಕೃತ ಪ್ರಾಧ್ಯಾಪಕರು, ಪ್ರತಿಕ್ರಿಯಿಸಿ: manollasavv@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net